-ಅಂದು-
ಜನುಮದ ಪ್ರೀತಿಯನ್ನೆಲ್ಲ
ಅಮೃತವನ್ನಾಗಿಸುತ್ತಿದ್ದಳು
ಮಮತೆಯನ್ನೆಲ್ಲ ಎದೆಯಲ್ಲಿ
ಹಾಲಾಗಿ ಬಚ್ಚಿಡುತ್ತಿದ್ದಳು||
ಎದೆಯಲ್ಲುಕ್ಕುವ ಹಾಲ
ಮನತಣಿಯೇ ಕುಡಿಸುತ್ತಿದ್ದಳು
ಬೆಚ್ಚಗಿನ ಅಪ್ಪುಗೆಯಿತ್ತು
ಮನಸಾರೆ ಮುದ್ದುಗರೆಯುತ್ತಿದ್ದಳು||
ನಕ್ಷತ್ರ ತಾರೆಗಳ ಬಳಿ ಕರೆದು
ಹೊಟ್ಟೆತುಂಬಿ ಉಣಿಸುತ್ತಿದ್ದಳು
ಚಂದಮಾಮ ಕಥೆ ಹೇಳಿ
ಚೆಂದನಿದ್ದೆ ಬರಸುತ್ತಿದ್ದಳು||
ನನ್ನ ಹೆತ್ತ ಮರುಕ್ಷಣದಿಂದ
ನೋವನುಣ್ಣುತಿದ್ದಳಾಕೆ
ಹೆರಿಗೆ ನೋವ ಸಹಿಸದೇ
ತೆರಿಗೆ ಕಟ್ಟುತ್ತಿದ್ದಳಾಕೆ||
ಸುಂಕದವ ಕರೆದವನೆಂದು
ಅಲ್ಲಿಗೇ ತೆರಳಿದಳಾಕೆ
ಮತ್ತೆ ಬರುವೆನೆಂದು ಮುತ್ತಿಟ್ಟು
ಶಿಲೆಯಾಗಿ ಚಿರನಿದ್ರೆಗೆ ಜಾರಿದಳಾಕೆ||
-ಇಂದು-
ಪ್ರೀತಿ ಸುರಿದು ನನ್ನನ್ನೆತ್ತಿ
ಮುದ್ದು ಮಾಡೋ ಕೈಗಳಿಲ್ಲ
ಅಮಲು ಬರಿಸೋ ಅಮೃತದ
ಎದೆಹಾಲು ಉಣಲಿಲ್ಲ||
ಶಿಲೆಯಾದವಳು ಎದ್ದು ಬಂದಾಳು
ಎದುರುನೋಡುತ್ತಿರುವೆ ನಾನು
ಸುಂಕಕೊಟ್ಟು ಮರಳಿ ಬಂದಾಳು
ಕಾಯುತ್ತಿರುವೆ ನಾನು||
-ಶುಭಶ್ರೀ ಭಟ್ಟ
shubha.bhat2@gmail.com
Facebook ಕಾಮೆಂಟ್ಸ್