ಈ ಮನಸ್ಸು ಅನ್ನುವುದು ಎಷ್ಟು ವಿಚಿತ್ರವಾದದ್ದೋ ಅಷ್ಟೇ ವಿಶೇಷವಾದದ್ದು ಕೂಡ ಹೌದು. ’ನೀವೇನು ಯೋಚಿಸುತ್ತೀರೋ ಅದೇ ಆಗುವಿರಿ’ ಎನ್ನುವಂತಹ ಮಾತುಗಳು, ನೆಪೊಲಿಯನ್ ಹಿಲ್’ನ “ನಮ್ಮ ಮನಸ್ಸು ಏನೇನೆಲ್ಲಾ ಗ್ರಹಿಸಬಲ್ಲದೋ, ನಂಬಬಲ್ಲದೋ ಅದನ್ನೆಲ್ಲ ಸಾಧಿಸಬಹುದು” ಎಂಬ ಮಾತುಗಳು ಅಚ್ಚರಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಎಲ್ಲಿ ಸಾಧ್ಯ ಎಂಬಂತಹ ಯೋಚನೆಗಳು ಕೂಡ ಬರುವುದು. ಆದರೆ ಇಂತಹ ಮಾತುಗಳಿಗೆ ಪುಷ್ಟಿ ಕೊಡುವಂತಹ ಸಾವಿರಾರು ಘಟನೆಗಳು ನಡೆದಿದ್ದಂತು ನಿಜ. ಮನಸ್ಸು ನಮ್ಮ ದೇಹದ ಮೇಲೆ ಯಾವ್ಯಾವ ರೀತಿಯಲ್ಲಿ ಪರಿಣಾಮ ಬೀರಬಲ್ಲದು ಎನ್ನುವುದರ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ಮಾರಕ ಖಾಯಿಲೆಗಳಿಗೆ ಗುರಿಯಾದವರು ಇನ್ನು ಬದುಕುಳಿಯಲು ಸಾಧ್ಯವೇ ಇಲ್ಲ ಎನ್ನುವಂಥವರು ಕೂಡ ವೈದ್ಯಕೀಯ ಜಗತ್ತೇ ಅಚ್ಚರಿಪಡುವ ರೀತಿಯಲ್ಲಿ ಗುಣಮುಖರಾಗಿದ್ದಿದೆ. ಅಂತಹದೇ ಕೆಲ ಘಟನೆಗಳನ್ನ ಹೇಳಹೊರಟಿದ್ದೇನೆ.
೧೯೫೦ರಲ್ಲಿ ಕ್ರೆಬಿಯೋಜೆನ್ ಎಂಬ ಔಷಧಿಯೊಂದರ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಇಡೀ ಜಗತ್ತೇ ಕ್ಯಾನ್ಸರ್’ಗಾಗಿ ಕಂಡುಹಿಡಿಯುತ್ತಿದ್ದ ಈ ಔಷಧಿಯ ಬಗ್ಗೆ ಬಹಳ ಕೌತುಕದಿಂದ ಕಾಯುತ್ತಿತ್ತು. ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಅಮೇರಿಕನ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್’ನ ತಂಡಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದವು. ಆ ತಂಡದಲ್ಲಿದ್ದವರಲ್ಲಿ ಬ್ರುನೋ ಕ್ಲಾಪ್’ಫರ್ ಎಂಬ ವೈದ್ಯರು ಕೂಡ ಒಬ್ಬರಾಗಿದ್ದರು. ಅದೇ ಸಮಯದಲ್ಲಿ ಅವರು ಮಿ.ರೈಟ್ ಎಂಬ ರೋಗಿಗೆ ಚಿಕಿತ್ಸೆ ಮಾಡುತ್ತಿದ್ದರು. ರೈಟ್ ಲಿಂಫ್ ನೋಡ್ಸ್’ಗೆ ಸಂಬಂಧಪಟ್ಟ ಕ್ಯಾನ್ಸರ್’ನಿಂದ ಬಳಲುತ್ತಿದ್ದರು. ಅವರಿಗಿನ್ನು ಹೆಚ್ಚು ಸಮಯವೂ ಉಳಿದಿರಲಿಲ್ಲ. ಕುತ್ತಿಗೆ, ಕಂಕುಳ, ಎದೆ, ಹೊಟ್ಟೆಯಲ್ಲೆಲ್ಲಾ ಕಿತ್ತಳೆ ಹಣ್ಣಿನ ಗಾತ್ರದ ಟ್ಯೂಮರ್’ಗಳು ಉಂಟಾಗಿತ್ತು. ಕಿಡ್ನಿಯ ಸಮಸ್ಯೆಯೂ ಇತ್ತು. ಕ್ರೆಬಿಯೋಜೆನ್ ಬಗ್ಗೆ ತಿಳಿಯಲ್ಪಟ್ಟ ರೈಟ್ ಡಾಕ್ಟರ್ ಬ್ರುನೋ ಅವರ ಬಳಿ ತನಗೆ ಆ ಔಷಧಿಯನ್ನ ಕೊಡಬೇಕೆಂದು ಬೇಡಿಕೆಯಿಟ್ಟರು. ಕ್ರೆಬಿಯೋಜೆನ್ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿತ್ತಷ್ಟೆ, ಹಾಗಾಗಿ ಅದು ಪೂರ್ಣಗೊಳ್ಳದೇ ಕೊಡುವುದು ಸರಿಯಲ್ಲವೆಂದರೂ ಮಿ.ರೈಟ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೂ ಅವರ ಹಠಕ್ಕೆ ಮಣಿದು ಡಾಕ್ಟರ್ ಬ್ರುನೋ ಕ್ರೆಬಿಯೋಜೆನ್’ನ ಒಂದು ಡೋಸ್ ಕೊಟ್ಟುಬಿಟ್ಟರು. ಇದರಿಂದ ಎಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವುದೋ ಎಂದು ಚಿಂತಿತರಾಗಿದ್ದರು ಬ್ರುನೋ!
ಹಾಸಿಗೆ ಹಿಡಿದಿದ್ದ ಮಿ.ರೈಟ್ ಕೆಲವೇ ದಿನಗಳಲ್ಲಿ ಎದ್ದು ಓಡಾಡಲಾರಂಭಿಸಿದ್ದರು. ಕೀಮೋ ಹಾಗೂ ರೇಡಿಯೇಷನ್’ನಿಂದ ಕೂಡ ಯಾವುದು ಸಾಧ್ಯವಾಗಿರಲಿಲ್ಲವೋ ಅದು ಈಗ ಸಾಧ್ಯವಾಗಿತ್ತು. ಆಕ್ಸಿಜನ್ ಮಾಸ್ಕ್ ಇಲ್ಲದೇ ಇರಲಾಗದಂತಹ ಪರಿಸ್ಥಿತಿಯಲ್ಲಿದ್ದ ಮಿ.ರೈಟ್ ಕ್ರೆಬಿಯೊಜೆನ್ ನೀಡಿದ ಸ್ವಲ್ಪ ದಿನಗಳಲ್ಲೇ ನಂತರ ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖರಾಗಿ ಹೊರಬಂದಿದ್ದರು.
ಇದಾಗಿ ಎರಡು ತಿಂಗಳುಗಳ ಬಳಿಕ ದಿನಪತ್ರಿಕೆಗಳಲ್ಲಿ ಕ್ರೆಬಿಯೋಜೆನ್ ಅಷ್ಟೊಂದು ಉತ್ತಮ ಫಲಿತಾಂಶವನ್ನು ನೀಡುತ್ತಿಲ್ಲ ಎಂಬಂತಹ ವರದಿಗಳು ಬರಲಾರಂಭಿಸಿತು. ಇದನ್ನ ನೋಡಿದ ಮಿ.ರೈಟ್ ಬಹಳ ನಿರಾಶೆಗೊಂಡರು. ಎರಡು ತಿಂಗಳುಗಳವರೆಗೆ ಆರೋಗ್ಯಪೂರ್ಣ ಬದುಕು ನಡೆಸಿದವರಿಗೆ ಈಗ ಮತ್ತೆ ಕ್ಯಾನ್ಸರ್ ಉಂಟಾಗಿ ಆಸ್ಪತ್ರೆ ಸೇರಿದ್ದರು.
ಈ ಬಾರಿ ಡಾಕ್ಟರ್ ಬ್ರುನೋ ಒಂದು ರೀತಿಯ ಪರೀಕ್ಷೆ ನಡೆಸಬಯಸಿದರು. ಮಿ.ರೈಟ್’ಗೆ ಕ್ರೆಬಿಯೋಜೆನ್’ನ ಇನ್ನೊಂದು ಫಾರ್ಮುಲಾ ತನ್ನ ಬಳಿ ಇದ್ದು ಇದು ಮೊದಲಿನದಕ್ಕಿಂತ ಉತ್ತಮ ಗುಣಮಟ್ಟ, ಹೆಚ್ಚು ಡೋಸ್ ಹಾಗೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿ ಅದನ್ನೇ ರೈಟ್’ಗೆ ಕೊಡುತ್ತಿರುವುದಾಗಿ ತಿಳಿಸಿದರು. ಇದರಿಂದ ಸಂತಸಗೊಂಡ ರೈಟ್ ಅದಕ್ಕೆ ಒಪ್ಪಿಕೊಂಡರು. ಆದರೆ ಬ್ರುನೋ ಕೊಟ್ಟಿದ್ದು ಮಾತ್ರ ’ಡಿಸ್ಟಿಲ್ಡ್ ವಾಟರ್’!! ಪರಿಣಾಮ ಅದ್ಭುತವಾಗಿತ್ತು!! ಮಿ.ರೈಟ್ ಸಂಪೂರ್ಣವಾಗಿ ಗುಣಮುಖರಾದರು. (ಇದಕ್ಕೆ ಪ್ಲೆಸಿಬೊ ಎಪೆಕ್ಟ್ ಅಂತ ಕರೆಯುತ್ತಾರೆ.)
ಇದಾಗಿ ಕೆಲ ತಿಂಗಳುಗಳ ನಂತರ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧಿಕೃತವಾಗಿ ಕ್ರೆಬಿಯೋಜೆನ್ ಕ್ಯಾನ್ಸರ್’ನ್ನು ಗುಣಪಡಿಸುವುದಿಲ್ಲ ಎಂದು ತಿಳಿಸಿಬಿಟ್ಟರು. ಎಲ್ಲಾ ಪತ್ರಿಕೆಗಳಲ್ಲೂ ಈ ಅಧಿಕೃತ ಘೋಷಣೆ ಪ್ರಕಟವಾಯಿತು. ಇದನ್ನು ನೋಡಿದ ಮಿ.ರೈಟ್’ಗೆ ಅಘಾತವಾಗಿತ್ತು. ಕ್ಯಾನ್ಸರ್ ಪುನಃ ಉಂಟಾಗಿ ಮೃತಪಟ್ಟರು!! ನಮ್ಮ ಮನಸ್ಸು ದೇಹದ ಮೇಲೆ ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಆ ನೈಜ ಘಟನೆ ಒಂದು ದೊಡ್ಡ ನಿದರ್ಶನವಾಗುತ್ತದೆ..!!
ಇಂತಹ ಸಂದರ್ಭಗಳಲ್ಲಿ, ಅಂದರೆ ಖಾಯಿಲೆಗಳಿಂದ ಬಳಲುತ್ತಿರುವಾಗ ನಮ್ಮ ಯೋಚನೆಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ನಾವು ಎಷ್ಟರ ಮಟ್ಟಿಗೆ ರಿಲ್ಯಾಕ್ಸ್ ಆಗಿರುತ್ತೇವೋ ಅಷ್ಟು ನಮ್ಮ ದೇಹಕ್ಕೆ ಒಳ್ಳೆಯದು ಅನ್ನುತ್ತಾರೆ. ಆದರೆ ಇಂತಹ ಮಾರಕ ಖಾಯಿಲೆಗಳಿರುವಾಗ ರಿಲ್ಯಾಕ್ಸ್ ಆಗಿರುವುದು ಸುಲಭವೇನಲ್ಲ. ಹಾಗಂತ ಅಸಾಧ್ಯವೂ ಅಲ್ಲ.! ಔಷಧಿಯೇ ಇಲ್ಲದೇ ತಮ್ಮನ್ನ ತಾವು ಗುಣಪಡಿಸಿಕೊಂಡವರು ಕೂಡ ಹಲವರು ಇದ್ದಾರೆ. ಕ್ಯಾಥಿ ಗಾಡ್ಮನ್ ಆ ಸಾಲಿಗೆ ಸೇರುತ್ತಾಳೆ.
’ದ ಸೀಕ್ರೇಟ್’ ಎನ್ನುವ ಡಾಕ್ಯುಮೆಂಟರಿಯನ್ನು ನೀವು ನೋಡಿದ್ದರೆ ಅದರಲ್ಲಿ ಕ್ಯಾಥಿ ಗಾಡ್ಮನ್ ಎಂಬಾಕೆಯನ್ನು ನೀವು ನೋಡಿರುತ್ತೀರಿ. ಆಕೆಗೆ ಬ್ರೆಸ್ಟ್ ಕ್ಯಾನ್ಸರ್ ಉಂಟಾಗಿತ್ತು. ಇಂತಹ ಸಂದರ್ಭಗಳಲ್ಲಿ ನಮ್ಮ ಯೋಚನೆಗಳು ಹಾಗೂ ನಂಬಿಕೆಗಳು ಬಹಳ ಮುಖ್ಯ ಎನ್ನುವುದು ತಿಳಿದಿತ್ತು ಆಕೆಗೆ. ಹಾಗಾಗಿಯೇ ಪ್ರತಿದಿನ ಆಕೆ “ಥ್ಯಾಂಕ್ಸ್ ಯು ಫಾರ್ ಮೈ ಹೀಲಿಂಗ್” ಎಂದು ಹೇಳಿಕೊಳ್ಳುತ್ತಿದ್ದಳು. ಹೆಚ್ಚು ಹೆಚ್ಚು ರಿಲ್ಯಾಕ್ಸ್ ಆಗಿರಲು ನಗಿಸುವಂತಹ ಸಿನೆಮಾಗಳನ್ನು ತನ್ನ ಗಂಡನೊಂದಿಗೆ ಕುಳಿತು ನೋಡುತ್ತಿದ್ದಳು. ಮನಸಾರೆ ನಗುತ್ತಿದ್ದಳು. ತಾನು ಅದಾಗಲೇ ಗುಣಮುಖಳಾಗಿದ್ದೇನೆ ಎಂದು ಮನಸ್ಸಿನಲ್ಲಿ ಭಾವಿಸತೊಡಗಿದ್ದಳು. ಕೀಮೋ ಹಾಗೂ ರೇಡಿಯೇಷನ್ ಇಲ್ಲದೆಯೇ ಕೇವಲ ಮೂರು ತಿಂಗಳಲ್ಲಿ ಆಕೆ ಸಂಪೂರ್ಣವಾಗಿ ಗುಣಮುಖಳಾಗಿದ್ದಳು!
ಇದೇ ಸಾಲಿಗೆ ಸೇರುವವಳು ಡೋಡಿ ಆಸ್ಟೀನ್! ಈಕೆಗೆ ಕೂಡ ಕ್ಯಾನ್ಸರ್ ಉಂಟಾಗಿತ್ತು. ಆ ಸಮಯದಲ್ಲಿ ಆಕೆಗೆ ಉಂಟಾಗಿದ್ದ ಕ್ಯಾನ್ಸರ್’ಗೆ ಸರಿಯಾದ ಚಿಕಿತ್ಸೆ ಕೂಡ ಇರಲಿಲ್ಲ. ಆದರೆ ಆಕೆಗೆ ಅಕೆಯ ಮನಸ್ಸೇ ಮದ್ದಾಗಿತ್ತು! ತನಗೆ ಕ್ಯಾನ್ಸರ್ ಉಂಟಾಗುವುದಕ್ಕೂ ಮೊದಲಿನ ಫೋಟೊಗಳನ್ನ ಕಟ್ಟು ಹಾಕಿಸಿ ಮನೆಯಲ್ಲೆಲ್ಲಾ ಹಾಕಿಸಿದ್ದಳು. ಫೋಟೋದಲ್ಲಿ ಸೆರೆಯಾಗಿದ್ದ ಆಕೆಯ ಬದುಕಿನ ನಲಿವಿನ ಕ್ಷಣಗಳು ಕಣ್ಣಾಡಿಸಿದಲ್ಲೆಲ್ಲಾ ಕಾಣುವಂತೆ ಫೋಟೋಗಳನ್ನ ಸೇರಿಸಿದ್ದಳು. ಪ್ರತಿದಿನ ಅವುಗಳನ್ನ ನೋಡುತ್ತಾ ತನ್ನನ್ನ ತಾನು ಹುರಿದುಂಬಿಸಿಕೊಳ್ಳುತ್ತಿದ್ದಳು. ಭರವಸೆ ತುಂಬಿಕೊಳ್ಳುತ್ತಿದ್ದಳು. ಅವುಗಳನ್ನ ನೋಡಿದಾಗಲೆಲ್ಲಾ ತಾನು ಕ್ಯಾನ್ಸರಿನಿಂದ ಗುಣಮುಖಳಾಗಿ ಮತ್ತೆ ಬದುಕಿನಲ್ಲಿ ಅಂತಹ ನಲಿವಿನ ಕ್ಷಣಗಳನ್ನ ಪಡೆಯಬಹುದು ಎಂದುಕೊಳ್ಳುತ್ತಿದ್ದಳು. ಕೊನೆಗೂ ಆಕೆ ಕ್ಯಾನ್ಸರ್’ನಿಂದ ಗುಣಮುಖಳಾಗಿ ತನ್ನ ಬದುಕನ್ನ ಮೊದಲಿನ ಹಾಗೆ ಸಂತಸಭರಿತವಾಗಿಸಿಕೊಂಡಳು.!
ಕ್ಯಾನ್ಸರ್ ಬಂದರೆ ಚಿಕಿತ್ಸೆಯನ್ನೇ ತೆಗೆದುಕೊಳ್ಳಬೇಕಾಗಿಲ್ಲ ಅಂತ ನಾನು ಹೇಳುತ್ತಿಲ್ಲ. ಯಾಕೆಂದರೆ ನಮ್ಮಲ್ಲಿ ಹೆಚ್ಚಿನವರು ಎಲ್ಲದನ್ನೂ ತಾರ್ಕಿಕವಾಗಿಯೇ ನೋಡುವವರು. ಕಣ್ಣು ಮುಚ್ಚಿ ನಂಬಿ ಕೂರುವ ಜಾಯಮಾನದವರಲ್ಲ. ಎಷ್ಟೇ ನಂಬುತ್ತೇವೆ ಎಂದರೂ ಮಧ್ಯೆ ಒಂದು ಚಿಕ್ಕ ಅನುಮಾನ ನುಸುಳಿ ಬಂದು ’ಇದೆಲ್ಲ ಹೇಗೆ ಸಾಧ್ಯ? ಅವರ್ಯಾರಿಗೋ ಆಯಿತೆಂದರೆ ನಮಗೂ ಆಗುತ್ತದೆಯೇ?’ ಅಂತ ಅನ್ನಿಸಲು ಶುರುವಾಗುತ್ತದೆ. ಮನಸ್ಸು ದೃಢವಾಗುವ ಬದಲು ಅನುಮಾನಗಳೇ ದೃಢವಾಗುತ್ತವೆ. ಚಿಕಿತ್ಸೆ ಬೇಕೇ ಬೇಕು. ಆದರೆ ಚಿಕಿತ್ಸೆಯೂ ಕೂಡ ಫಲಕಾರಿಯಾಗುವುದು ಮನಸ್ಸುಗಟ್ಟಿಯಾಗಿದ್ದಾಗ. ನಾವು ಗುಣಮುಖರಾಗುವುದೇ ಇಲ್ಲ ಎಂದು ನಾವೇ ನಿರ್ಧರಿಸಿಬಿಟ್ಟರೆ ಎಂತಹ ಚಿಕಿತ್ಸೆಯಾದರೂ ವಿಫಲವಾಗುತ್ತದೆ.. ಇಂತಹ ಸಂದರ್ಭಗಳಲ್ಲೇ ಅಲ್ಲವೇ ನಾವು ನಿಜವಾಗಿಯೂ ನಮ್ಮ ಸಾಮರ್ಥ್ಯವನ್ನು ಬಳಸಬೇಕಾಗಿರುವುದು.?! ಇಂತಹ ಸಂದರ್ಭಗಳಲ್ಲಿ ನಮ್ಮ ಋಣಾತ್ಮಕ ಯೋಚನೆಗಳು ನಮ್ಮ ದೇಹದ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆಯೇ ಹೊರತು ಬಲ ಪಡಿಸುವುದಿಲ್ಲ. ನಾವು ಎಷ್ಟು ಧನಾತ್ಮಕವಾಗಿರುತ್ತೇವೆಯೋ, ಎಷ್ಟು ರಿಲ್ಯಾಕ್ಸ್ ಆಗಿರುತ್ತೇವೆಯೋ ಅಷ್ಟು ಒಳ್ಳೆಯದು ದೇಹಕ್ಕೆ. ಹಾಗಾಗಿ ಪಾಸಿಟಿವ್ ಆಗಿರಿ, ನಿಮ್ಮೊಳಗೆ ತುಂಬಾ ಶಕ್ತಿಯುತವಾದ ಮದ್ದು ಇದೆ ಎನ್ನುವುದನ್ನ ನಂಬಿ.!
Facebook ಕಾಮೆಂಟ್ಸ್