X

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ -ಭಾಗ-2- ಫ್ಲೇಮಿಂಗೋ (ರಾಜಹಂಸ)

ಪಕ್ಷಿಲೋಕದ ವಿಸ್ಮಯಗಳಲ್ಲೊಂದಾದ ಬಣ್ಣ ಬಣ್ಣದ ಬಳುಕುವ ಕತ್ತಿನ, ಸೌಂದರ್ಯ ದೇವತೆಯ ಸಂತಾನವೇನೋ ಎಂದೆನಿಸುವ ಪ್ರಕಾಶಮಾನವಾದ ಗುಲಾಬಿಗರಿಗಳಿಂದ ಸಮ್ಮೋಹಿತಗಳಿಸುವ ವಿಶಿಷ್ಟ ಪಕ್ಷಿಯೇ ಫ್ಲೇಮಿಂಗೋ. ಬಾನಾಡಿಗಳ ಲೋಕದ ಹಂಸಗಳ ರಾಜನೆಂದು ಗುರುತಿಸಲ್ಪಡುವ ಈ ಹಕ್ಕಿಗೆ ಕನ್ನಡದಲ್ಲಿ ರಾಜಹಂಸವೆಂದೂ, ಹಿಂದಿಯಲ್ಲಿ ಬೋಗ್ ಹಂಸ ಅಥವಾ ಚರಾಜ್ ಬಗ್ಗೋ ಹಾಗೂ ಮರಾಠಿಯಲ್ಲಿ ರೋಹಿತ್ ಅಥವಾ ಅಗ್ನಿಪಂಖ ಎಂದು ಕರೆಯುತ್ತಾರೆ.

ಫೋನಿಕಾಪ್ಟೇರುಸ್ ಪ್ರಭೇದಕ್ಕೆ ಸೇರಿದ ಫ್ಲೇಮಿಂಗೋಗೆ ಆ ಹೆಸರು ಬಂದದ್ದು ಫ್ಲೇಮ್-ಕಲರ್ಡ್ (ಜ್ವಾಲೆಯ ಬಣ್ಣದ) ಎಂಬರ್ಥ ಕೊಡುವ ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಪದದ ಮೂಲದಿಂದ ಮತ್ತು  ಫೋನಿಕಾಪ್ಟೇರುಸ್ ಅಂದರೆ  ರಕ್ತ ಕೆ೦ಪು ಗರಿಯುಕ್ತ ಎಂಬರ್ಥದ  ಗ್ರೀಕ್ ಪದದ ಮೂಲದಿಂದ.  ಜೀವನದಲ್ಲಿ ನೈಜವಾಗಿ ಫ್ಲೇಮಿಂಗೋ ನೋಡದವರನ್ನೂ ಆಕರ್ಷಿಸುವ  ಉದ್ದನೆಯ ಗಣೆ ತರಹದ ಕಾಲುಗಳು, ಹಿಮ್ಮುಖವಾಗಿ ಬಾಗಿದ ಮಂಡಿಗಳು, ಎಸ್-ಆಕಾರದ ಕುತ್ತಿಗೆ, ಝಗಝಗ ಹೊಳೆಯುವ ಗುಲಾಬಿ ಗರಿಗಳಿ೦ದ ಕಂಗೊಳಿಸುವ ರಾಜಹಂಸ ಪಕ್ಷಿಲೋಕದ ಅಪ್ಸರೆ ಎಂದರೂ ಉತ್ಪ್ರೇಕ್ಷೆ ಏನಲ್ಲ! ಫ್ಲೇಮಿಂಗೋಗಳ ಎರಡು ಪ್ರಮುಖ ಪ್ರಾಕಾರಗಳು ಗ್ರೇಟರ್ ಫ್ಲೇಮಿಂಗೋ ಹಾಗೂ ಲೆಸ್ಸರ್  ಫ್ಲೇಮಿಂಗೋ.

ಗ್ರೇಟರ್ ಫ್ಲೇಮಿಂಗೋಗಳು  ಗಾತ್ರದಲ್ಲಿ ಲೆಸ್ಸರ್  ಫ್ಲೇಮಿಂಗೋಗಳಿಗಿಂತ ದೊಡ್ಡದಾಗಿದ್ದು, ಕಾಲು ಮತ್ತು ಕುತ್ತಿಗೆ ಕೂಡ ತುಲನಾತ್ಮಕವಾಗಿ ಉದ್ದವಾಗಿರುತ್ತವೆ. ಇವು  150 ಸೆ೦ಟಿ ಮೀಟರ್ ಎತ್ತರ ಹಾಗೂ 5 ಕೆಜಿ ತೂಕದ್ದಾಗಿದೆ ಮತ್ತು  ಲೆಸ್ಸರ್  ಫ್ಲೇಮಿಂಗೋ 100 ಸೆ೦ಟಿ ಮೀಟರ್ ಎತ್ತರ ಹಾಗೂ 3 ಕೆಜಿ ತೂಕದ್ದಾಗಿದೆ.  ಇವುಗಳು ಆಫ್ರಿಕಾದ ಕೆಲ ಭಾಗಗಳಲ್ಲಿ ,ದಕ್ಷಿಣ ಏಶಿಯಾ ಹಾಗೂ ದಕ್ಷಿಣ ಯುರೋಪನಲ್ಲಿ ಪ್ರಮುಖವಾಗಿ ಕಂಡು ಬರುತ್ತವೆ. ಭಾರತದಲ್ಲಿ  ಗುಜರಾತನ ರಣ್ ಆಫ್ ಕಚ್ ಇವುಗಳ ವಾಸಸ್ಥಾನ ಮತ್ತು ಸ೦ತಾನೋತ್ಪತಿಯ ತಾಣವಾಗಿದೆ. ಚಳಿಗಾಲದಲ್ಲಿ ಬಯಲು ಪ್ರದೇಶಳಿಗೆ ಫ್ಲೇಮಿಂಗೋಗಳು ವಲಸೆ ಹೋಗುತ್ತವೆ. ರಾಜಹಂಸಗಳು  ಆಹಾರ ಶೋಧಿಸಲು  ಆಳವಿಲ್ಲದ ನೀರಿನಲ್ಲಿ ತಲೆ ಮುಳುಗಿಸಿ ಕೊಕ್ಕನ್ನು ಮೇಲ್ಮುಖವಾಗಿಸಿ  ಮಣ್ಣು ಮಿಶ್ರಿತ ನೀರಿನೊಂದಿಗೆ ಆಹಾರವಾದ  ಸೂಕ್ಷ್ಮ ಜೀವಿಗಳನ್ನು(ಹುಳುಗಳು) ಮೇಲೆತ್ತುತ್ತವೆ. ದೇವರ ಸೃಷ್ಟಿಯ ಅದ್ಭುತವೆಂದರೆ ರಾಜಹಂಸಗಳ ಗುಲಾಬಿ ಬಣ್ಣದ ಕಪ್ಪು ತುದಿಯ ಕೊಕ್ಕಿನ ವಿನ್ಯಾಸ ಮಣ್ಣು ಮಿಶ್ರಿತ ನೀರನ್ನು ಹೊರ ಹಾಕಿ ಆಹಾರವನ್ನು ಶುದ್ಧೀಕರಿಸಿ ಸೇವಿಸಲು ಸಹಕರಿಸುತ್ತದೆ. ಪರಭಕ್ಷಕ ಪ್ರಾಣಿಗಳಿಗೆಟುಕದಿರುವ ದೂರವಾದ  ಆಳವಿಲ್ಲದ  ಕಪ್ಪು ಸರೋವರಗಳು, ಉಪ್ಪು ನೀರಿನ ಸರೋವರ, ಕೆಸರಿನಿಂದ ಕೂಡಿದ ನದಿಗಳು ರಾಜಹಂಸಗಳ ವಾಸಸ್ಥಾನ.

ನೂರಾರು ಸಂಖ್ಯೆಯಲ್ಲಿ ಒಟ್ಟಿಗೆ ಹಾರಾಡುವಾಗ ದೇದೀಪ್ಯಮಾನವಾಗಿ ಕಾಣುವ ರಾಜಹಂಸಗಳ ಮನಮೋಹಕ  ದೃಶ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.  ದೇವಲೋಕದಿಂದ ಧರೆಗಿಳಿದು ಬಂದ ರೆಕ್ಕೆಯ  ಪರಿಗಳು ಆಕಾಶದಲ್ಲಿ ಹಾರಾಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ!  

ಹಿಂಡುಗಳಲ್ಲಿ ಹಾರುವ ರಾಜಹಂಸಗಳು ಗಂಡು ಹೆಣ್ಣಿನ ಮಿಲನ ಕ್ರಿಯೆಯನ್ನು ಒಟ್ಟಾಗಿ ಪ್ರದರ್ಶಿಸುತ್ತವೆ. ಗಂಡು ಮತ್ತು ಹೆಣ್ಣು ಫ್ಲೇಮಿಂಗೋಗಳು ಜೊತೆಯಾಗಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಒಟ್ಟಾಗಿ ಮೊಟ್ಟೆಯ ಮೇಲೆ ಕುಳಿತು ಒಂದು ತಿಂಗಳ ಕಾಲ ಕಾವು ಕೊಡುತ್ತವೆ. ಕೆಲ ರಾಜಹಂಸ ಜೋಡಿಗಳು ಬೇರೆ ಜೋಡಿಗಳು ಕಟ್ಟಿದ ಗೂಡುಗಳನ್ನು ಕದಿಯಲು ಪ್ರಯತ್ನಿಸುತ್ತವೆ. ನವಜಾತ ಫ್ಲೇಮಿಂಗೋ ಮರಿಗೆ ತಂದೆ ತಾಯಿ ಒಟ್ಟಾಗಿ ತಮ್ಮ ಗಂಟಲಿನಿಂದ ಉತ್ಪತ್ತಿಯಾದ ವಿಶೇಷ ದ್ರವವನ್ನು (ಕ್ರಾಪ್ ಮಿಲ್ಕ್ಲು) ಕುಡಿಸಿ ಪೋಷಿಸುತ್ತವೆ. ಮರಿಗಳು ಬೆಳೆದಂತೆ ಫ್ಲೇಮಿಂಗೋಗಳ ನೈಸರ್ಗಿಕ ಆಹಾರವನ್ನು ತಿನ್ನಿಸಲು ಪ್ರಾರಂಭಿಸುತ್ತವೆ. ರಾಜಹಂಸದ ಪುಟ್ಟ ಮರಿಗಳ ಬಿಳಿ ಹಾಗೂ ಬೂದು  ಬಣ್ಣದ ಗರಿಗಳು, ಮರಿಗಳು ಬೆಳೆದು ಪ್ರೌಢಾವಸ್ಥೆಗೆ ಬಂದಂತೆ  ಗುಲಾಬಿ ಬಣ್ಣಕ್ಕೆ ತಿರುಗುತ್ತವೆ, ಹುಟ್ಟಿದಾಗ ನೇರವಿದ್ದ ಕೊಕ್ಕು ಬೆಳವಣಿಗೆಯೊಂದಿಗೆ ವಕ್ರವಾಗುತ್ತದೆ. ಫ್ಲೇಮಿಂಗೋಗಳ ಮೊಟ್ಟೆ  ಮತ್ತು ಮರಿಗಳು ಕೆಲವೊಮ್ಮೆ ಇತರೆ  ಪರಭಕ್ಷಕ ಬಲಿಷ್ಠ ಪಕ್ಷಿಗಳ ಆಹಾರವಾಗುತ್ತವೆ.

ಫ್ಲೇಮಿಂಗೊಗಳು ಸಂಖ್ಯೆ ಸ್ಥಿರವಾಗಿರುವಾದರಿಂದ  ಅಪಾಯದ ಅಂಚಿನಲ್ಲಿರುವ ಪ್ರಭೇದವಲ್ಲದಿದ್ದರೂ,ಇವುಗಳ ಉಳಿವು ಮತ್ತು ಸಂತನಾಭಿವೃದ್ಧಿ ವಲಸೆ ಪ್ರದೇಶಗಳ ಸಂರಕ್ಷಣೆಯ ಮೇಲೆ ಅವಲಂಬಿತವಾಗಿದೆ. ಗುಜರಾತನ ರಣ್ ಆಫ್ ಕಚ್-ನ ಫ್ಲೇಮಿಂಗೋ ಸಿಟಿಯಲ್ಲಿ ಇವುಗಳನ್ನು  ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನೋಡಬಹುದು. ದಂತಕಥೆಯೊಂದರ ಪ್ರಕಾರ ಸಾವಿರ ವರುಷಗಳ ಹಿಂದೆ ಕಚ್-ನ್ನು ಆಳಿದ ಲಾಖೋ ಫುಲಾನಿ ಮಹಾರಾಜನಿಗೆ ಖಗ ಸಂಕುಲದ ಬಗ್ಗೆ ಆಪಾರ ಗೌರವ-ಪ್ರೀತಿ ಇತ್ತಂತೆ. ಆತ ರಾಜಹಂಸಗಳ ಬೇಟೆಯನ್ನು ನಿಷೇದಿಸಿ ಶತ ಶತಮಾನಗಳವರೆಗೂ ರಣ್ ಆಫ್ ಕಚ್-ನ್ನು ವಲಸೆ ಹಕ್ಕಿಗಳ ಸ್ವರ್ಗವಾಗಿಸಿದ ಕೀರ್ತಿಗೆ ಪಾತ್ರನಾದನ೦ತೆ. ಫ್ಲೇಮಿಂಗೋ ಗುಜರಾತದ ರಾಜ್ಯ ಪಕ್ಷಿಯೂ ಹೌದು.

ಸಾಮಾನ್ಯವಾಗಿ ಚಳಿಗಾಲದಲ್ಲಿ  ವಲಸೆ ಬರುವ ರಾಜಹಂಸಗಳನ್ನು  ಕರ್ನಾಟಕದ ಅಲಮಟ್ಟಿ ಜಲಾಯಶಯದ ಹಿನ್ನೀರಿನಲ್ಲಿ (ಬಾಗಲಕೋಟೆಯ ಸುತ್ತ ಮುತ್ತ),ತುಂಗಾ ಭದ್ರಾ ಜಲಾಶಯದ ಕೆಲ ಪ್ರದೇಶಗಳಲ್ಲಿ ಅಕ್ಟೋಬರ್ ಮಧ್ಯ ಭಾಗದಿಂದ   ಫೆಬ್ರುವರಿಯ ಕೊನೆಯ ಭಾಗದವರೆಗೂ ಕಾಣಬಹುದು. ಫ್ಲೇಮಿಂಗೋಗಳ ಬಗ್ಗೆ ಬರೆಯಲು ಪ್ರೇರಣೆಯೇ ಆಲಮಟ್ಟಿ ಜಲಾಶಯದ ಹಿನ್ನೀರಿನ ತಾಣಕ್ಕೆ  ನಾನಿತ್ತ ಭೇಟಿ. ಸಾವಿರ ಸಾವಿರ ಸಂಖ್ಯೆಯಲ್ಲಿದ್ದ ಕಲರವಯುಕ್ತ ರಾಜಹಂಸಗಳ ಆ ಸುಂದರ ನೋಟ ಕನಸೊಂದು ನನಸಾಗಿ  ನನ್ನನ್ನು ಬೇರೆ ಲೋಕಕ್ಕೆ ಕೊ೦ಡೊಯ್ದಿತ್ತು.

ಅಷ್ಟೊಂದು ಬಣ್ಣದ ಹಕ್ಕಿಗಳ, ಗುಲಾಬಿ ತೋಟದಂತೆ ಗೋಚರಿಸುತ್ತಿದ್ದ  ವಿಹಂಗಮ ನೋಟಕ್ಕೆ ಬೆರಗಾದ ನನ್ನ  ೧೦ ವರುಷದ ಮಗ “ವ್ಹಾ …ವ್ಹಾ…ಅಪ್ಪಾ ಆಲ್ಲಿ ನೋಡು!!!!” ಎಂದು ಉದ್ಗಾರ ತೆಗೆದಿದ್ದ. ನಿಜಕ್ಕೂ ಪಕ್ಷಿ ಲೋಕವೇ ಒಂದು ವಿಸ್ಮಯಜಗತ್ತು ಅದರಲ್ಲೂ ಬಣ್ಣ ಬಣ್ಣದ ಬಾನಾಡಿಗಳನ್ನು ಸಾವಿರ ಸಂಖ್ಯೆಯಲ್ಲಿ ನೋಡುವುದೆಂದರೆ ……….ಅನುಭವಿಸಬೇಕು ಮನಕ್ಕೆ ಮುದ ನೀಡುವ ಆ ಸವಿಯನ್ನು……

 

Facebook ಕಾಮೆಂಟ್ಸ್

Srinivas N Panchmukhi: ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.
Related Post