ಪಾರಿ ಅಳುತ್ತ ತವರು ಮನೆಗೆ ಹೋದ ಸುದ್ದಿ ಅದಾಗಲೇ ಊರ ತುಂಬ ಹೆಂಗಳೆಯರ ಬಾಯಿಂದ ಢಂಗುರ ಹೊಡೆದು ಮಲ್ಲಪ್ಪಗೌಡರ ಕಿವಿಗೂ ತಲುಪಿತ್ತು.ದುರುಗಪ್ಪ ತಮ್ಮ ಮನೆಗೆ ಬರುವುದು ಅವರಿಗೆ ಖಾತರಿಯಾಗಿತ್ತು.ಏದುಸಿರು ಬಿಡುತ್ತ ಬಂದ ದುರಗಪ್ಪನಿಗೆ ಗೌಡರು ಏನೂ ವಿಷಯವೇ ಗೊತ್ತಿಲ್ಲವೆನ್ನುವಂತೆ ” ಏನ್ಲೆ ದುರುಗ್ಯಾ..ಈ ಕಡೆ ಬಂದಿ..! ಕೂತ್ಕಾ..ಹಂಗ್ಯಾಕ ಉಸ್ರು ಬಿಡಾಕತ್ತಿ? “ಅನ್ನುತ್ತ ಮನೆ ಆಳು ನಿಂಗನ ಕಡೆ ತಿರುಗಿ ” ಲೇ ನಿಂಗಾ..ಕಟ್ಟಿ ಮ್ಯಾಲಿರೋ ಪ್ಲಾಸ್ಟಿಕ್ ಚೊಂಬಿನ್ಯಾಗ ನೀರು ತಂದ್ ಕೊಡು ಅವಗ ಮದ್ಲ..ಒಂಚೂರು ಸುಧಾರ್ಸ್ಕೊಳ್ಳಿ” ಅಂದರು.ದುರುಗಪ್ಪ ನೀರು ಬೇಡವೆಂದು ನಿಂಗನ ಕಡೆ ಕೈ ಸನ್ನೆ ಮಾಡಿ ಗೌಡರತ್ತ ತಿರುಗಿ ” ಗೌಡ್ರ..ನೀವ ಸ್ವಾಮೇರಿಗೆ ಹೇಳಿ ನನ್ ಮಗ್ಳ ಬಾಳೆ ಸುದ್ ಮಾಡಬೇಕ್ರಿ..ಆಕಿ ಅವ್ರ ಕಾಟ ತಡಿಲಾರ್ದ ಮನಿಗೆ ಬಂದು ಕುಂತಾಳ..ಇರಾಕಿ ಒಬ್ಬಾಕಿನ ಮಗ್ಳು..ಇಂಥಾ ಕೆಟ್ ವ್ಯಾಳೆದಾಗ ನೀವ ನಮ್ ಕೈ ಹಿಡಿಬೇಕ್ರಿ ಯಪ್ಪಾ..”ಎಂದು ಹೇಳುವುದರೊಳಗೆ ಗಟ್ಟಿ ಎದೆಯ ದುರುಗಪ್ಪನ ಕಣ್ಣಂಚು ಒದ್ದೆಯಾಗಿತ್ತು.ಗೌಡರು ದುರುಗಪ್ಪನನ್ನು ಸಮಾಧಾನ ಪಡಿಸುವಂತೆ “ನಿನ್ ಮಗ್ಳಿಗೆ ಆ ಮಾದೇವಸ್ವಾಮಿ ಕೂಡ ಓಡಿ ಹೋಗ್ಬೇಕಾದ್ರ ಬುದ್ದಿ ಮಣ್ ತಿಂತಿತ್ತಂತೇನು? ಆ ಹುಡ್ಗ ಪೋಲಿ ನನ್ಮಗ ಅಂತ ತಿಳಿದ್ ಮ್ಯಾಲೂ ಓಡಿ ಹ್ವಾದ್ಲು..ಆಕಿ ಮಾಡಿದ್ ಕರ್ಮಕ್ಕ ನೀ ಹಿಂಗ್ ಅವ್ರಿವ್ರ ಕಾಲು ಹಿಡಿಬೇಕ..ಇರ್ಲೆಳು..ಸಂಜಿಮುಂದ ಐದ್ ಗಂಟೆ ಮ್ಯಾಲ ಊರ ಪಂಚ್ರನ್ನ ಬರಾಕ ಹೇಳ್ತನಿ.ಬ್ಯಾರೇ ಮಂದಿ ಬ್ಯಾಡ..ನಿನ್ ಮಗಳ್ನ ಕರ್ಕಂಡು ಬಾ..ಈಗ ನಾ ಸ್ವಲ್ಪ ತ್ವಾಟದ್ ಕಡಿ ಹೋಗ್ಬೇಕು..ನೀ ಹೋಗು..ನಾ ಎಲ್ಲಾ ಸರಿ ಮಾಡ್ತನಿ” ಅನ್ನುತ್ತ ತೋಟದ ಕಡೆ ಹೊರಡಲುನುವಾದರು.ದುರುಗಪ್ಪ ಕೈ ಜೋಡಿಸಿ ” ನಿಮ್ಮನ್ನ ನಂಬೇನ್ರಿ ಗೌಡ್ರ..ಸಂಜಿಮುಂದ ಐದ್ ಗಂಟೆಕ ಪಾರಿನ ಕರ್ಕಂಡ್ ಬರ್ತನ್ರಿ”ಎನ್ನುತ್ತ ದುಗುಡದಿಂದ ಮುಂದೆನಾಗುವುದೋ ಎಂದು ಯೋಚಿಸುತ್ತ ನಡೆದ.ಸಂಜೆಯಾಗುವುದನ್ನು ಭಯದಿಂದಲೇ ಎದುರು ನೋಡುತ್ತಿದ್ದ ಪಾರಿಗೆ ಹಳೆಯ ಗಡಿಯಾರದ ಮುಳ್ಳುಗಳು ಐದು ಗಂಟೆಗೆ ಸಮೀಪಿಸುತ್ತಿದ್ದಂತೆ ಹೃದಯ ಜೋರಾಗಿಯೇ ಬಡಿದುಕೊಳ್ಳತೊಡಗಿತು.
ದುರುಗಪ್ಪ ಸಮಯವಾಯಿತೆಂದು ಪಾರಿಗೆ ಅವಸರಿಸಿದ.ಪಾರಿ ಪೆಚ್ಚು ಮೋರೆ ಹಾಕಿಕೊಂಡು ಹೊರಡಲನುವಾದಳು.ಮಲ್ಲವ್ವನಿಗೆ ಬರುವುದು ಬೇಡವೆಂದು ದುರುಗಪ್ಪ ಮೊದಲೇ ತಿಳಿಸಿದ್ದರಿಂದ ಅವಳು ಮೌನವಾಗಿ ಹೊರಟು ನಿಂತ ತಂದೆ-ಮಗಳತ್ತ ನೋಡುತ್ತಿದ್ದಳು.ಅವರಿಬ್ಬರೂ ಹೊರಟ ಮೇಲೆ ಅವರ ದೈವ ಮಾತಂಗೆಮ್ಮನ ಕಟ್ಟೆಯ ಹತ್ತಿರ ಬಂದು ಕಣ್ತುಂಬಿಕೊಂಡು “ಯವ್ವಾ..ಮಾತಂಗೆವ್ವ..ನನ್ ಮಗಳ್ ಬಾಳೆ ನೆಟ್ಟಗ ಮಾಡವ್ವಾ..ಈ ಹುಣ್ಣಿವಿಗೆ ಕೋಳಿ ಬ್ಯಾಟಿ ಕೊಡ್ತನಿ”ಎಂದು ಹರಕೆ ಕಟ್ಟಿಕೊಂಡು ದೀಪ ಹಚ್ಚಿ ಎರಡು ಊದುಬತ್ತಿ ಬೆಳಗಿ ನಿಟ್ಟುಸಿರು ಬಿಟ್ಟು ಮನೆಯೊಳಗೆ ನಡೆದಳು.
ಪೆಚ್ಚು ಮುಖ ಹೊತ್ತ ದುರುಗಪ್ಪ ಮತ್ತು ಮಗಳು ತಲೆ ಕೆಳಗೆ ಹಾಕಿ ನಡೆಯುತ್ತಿದ್ದದನ್ನು ಕಂಡು ಊರ ಅರಳಿ ಕಟ್ಟೆಯ ಮೇಲೆ ಕುಳಿತಿದ್ದ ಒಬ್ಬ ಪೋಲಿ ಹುಡುಗ ” ಸ್ವಾಮಿ ಮಜಾ ಮಾಡ್ದ ಒಂದ್ ವರ್ಷ..ಈಕೀ ಈಗ ಬ್ಯಾಸರ ಬಂದಿರ್ಬೇಕ..ಅದಕ ಈಗ ಬಿಟ್ಟಾ..ಅಷ್ಟ..” ಅನ್ನುವುದರೊಳಗೆ ಮದ್ಯವಯಸ್ಕನೊಬ್ಬ “ಇಂತ ಹೆಂಗಸ್ರು ಅದೆಂಗ ಮಕ ಎತ್ತತಾವೋ ಏನೋ..ಸುಮ್ಮನ ಕೆರಿನೋ ಬಾವಿನೋ ಹಾರದು ಬಿಟ್ ಮತ್ತ ಬಾಳೆ ಬೇಕಂತ ಇಕಿಗೆ..ಅವ್ರು ಬಾಳೆ ಕೊಟ್ಟಂಗ..ಈಕಿ ತಗೊಂಡಂಗ..” ಅಂತ ಅವನ ಮಾತಿಗೆ ಧ್ವನಿಗೂಡಿಸಿದನು.ದುಃಖ ಉಮ್ಮಳಿಸಿ ಬಂದಿತು ಪಾರಿಗೆ.ಅಪ್ಪನ ಮುಖ ನೋಡಿದಾಗ ದುರುಗಪ್ಪನ ಕಣ್ಣುಗಳಲ್ಲಿ ತೆಳುನೀರಿನ ಪದರ ಕಂಡು ಪಾರಿ ಭೂಮಿಗಿಳಿದುಹೋದಳು..
ಮಲ್ಲಪ್ಪಗೌಡರು ಮೊದಲೇ ನಿಂಗನ ಮೂಲಕ ಹೇಳಿ ಕಳಿಸಿದ್ದರಿಂದ ಪಂಚರೆಲ್ಲ ಶಾಂತಸ್ವಾಮಿಯವರ ಮನೆಯಲ್ಲಿ ಸೇರಿದ್ದರು.ಗುಸು ಗುಸು ಮಾತುಗಳು ಅದಾಗಲೇ ಶುರುವಾಗಿದ್ದವು.ಹೇಳಿ ಕೇಳಿ ಸಣ್ಣ ಹಳ್ಳಿ.ವಿಷಯ ತಿಳಿದು ಶಾಂತಸ್ವಾಮಿಯವರ ಮನೆಯ ಮುಂದೆ ಹದಿನೈದು-ಇಪ್ಪತ್ತು ಜನರು ಜಮಾಯಿಸಿದ್ದರು.
ಪಂಚಾಯಿತಿ ಫ್ರಾರಂಭವಾದಾಗ ಪಾರಿಯೊಮ್ಮೆ ಮಹದೇವಸ್ವಾಮಿಯತ್ತ ದೃಷ್ಟಿ ಹೊರಳಿಸಿದಳು.ಅವನು ಬೇರೆ ಕಡೆ ದೃಷ್ಟಿ ಹೊರಳಿಸಿದ.ಮಲ್ಲಪ್ಪಗೌಡರೇ ಮಾತಿಗೆ ಶುರುವಿಟ್ಟುಕೊಂಡರು..” ಏನವ್ವಾ ಪಾರೀ..ಹಿಂಗ ಏಕಾಏಕಿ ಮನಿ ಬಿಟ್ ತವರ್ ಮನಿಗೆ ಹೋದ್ರ ಹೆಂಗವ್ವಾ?..ಏನ ಕಷ್ಟ ಆತು ನಿನಗ..? ದೊಡ್ಡ ಮನಿ ಸೊಸಿ ನೀನು ಹಿಂಗ ಮಾಡಿದ್ರ ಹೆಂಗವ್ವಾ..? ಸಂಸಾರ ಅಂದ ಮ್ಯಾಲ ನೂರ ಜಗಳ ಬರ್ತಾವ,ಹೊಕ್ಕಾವ..ನೀ ಸಂಭಾಳಿಸ್ಕೊಂಡ ಹೋಗಬೇಕವ್ವಾ..”ಅನ್ನುತ್ತಾ ಚಹ ತಂದಿಕ್ಕಿದ ಮಹದೇವಸ್ವಾಮಿಗೆ ಕಣ್ಣಲ್ಲೆ ಅದೇನೋ ಸನ್ನೆ ಮಾಡಿದರು.ಪಾರ್ವತಿ ಅಳುತ್ತ ” ಗೌಡ್ರ..ನಾ ಒಂದ್ ಹೊಳ್ಳಿ ಮಾತಾಡಿಲ್ರಿ ಅತ್ತಿಯವರ್ರಿಗೆ,ಮಾವಾರಿಗೆ,ಮತ್ತ ಇವರಿಗೆ..ಅತ್ತಿಯವ್ರು ನಂಗ ಅಡಿಗಿ ಮನಿಗೆ ಬರಾಕ ಬಿಡಂಗಿಲ್ಲ..ಇವ್ರು ನೋಡಿದ್ರ ಮಕ ನೋಡಿ ಒಂದ್ ಮಾತಾಡಂಗಿಲ್ಲ..ಹೊರಗಿನ ಕೋಣ್ಯಾಗ ಹಿಂಗ ಎಷ್ಟ ದಿವ್ಸ್ ಅಂತ ಇರ್ಲಿ..ನಾ ಒಬ್ಬಾಕಿನ ತಪ್ ಮಾಡೇನೇನ್ರಿ..? ನೀವ ನ್ಯಾಯ ಹೇಳ್ರಿ…”ಅಂದಳು ಅಳುತ್ತ.ಸಾವಿತ್ರಮ್ಮ ನಾಜೂಕಾಗಿ ಮಾತನಾಡುತ್ತ ” ಗೌಡ್ರ..ಹೊಸ್ತಾಗಿ ಮದುವಿ ಆದಾಕಿ ಅಂತ ಮನಿ ಕೆಲ್ಸ ಮಾಡಾಕ ಕೊಟ್ಟಿಲ್ರಿ..ನನ್ ಮಗ ಒಂದ್ ದಿನ ಅಕಿ ಮ್ಯಾಲ ಕೈ ಮಾಡಿಲ್ರಿ..ಅಂತಾದ್ರಾಗ ಈಕಿ ಹಿಂಗ ನಮ್ ಮ್ಯಾಲ ನ್ಯಾಯ ಪಂಚಾಯ್ತಿ ಮಾಡ್ಸಾಕ ಬಂದಾಳ..ಆಕಿಗೆ ದೊಡ್ಡವ್ರ ಮನ್ಯಾಗ ಹೆಂಗ ಭಾಳೆ ಮಾಡ್ಬಂಕಂತ ಗೊತ್ತಲ್ರಿ..ತಿಪ್ಯಾಗ ಬೆಳ್ದಾಕಿನ ತಂದು ಈ ನನ್ ಮಗ ಉಪ್ಪರಿಗಿಯಾಗ ತಂದು ಕುಂದುರ್ಸಿದ..ಮನಿ ಮಾನ ಮರ್ಯಾದಿ ಮೂರ್ಕಾಸಿಗೆ ಹರಾಜ ಆತು..ಅದ್ ಹೋಗ್ಲಿರಿ ಗೌಡ್ರ..ಮಗನ ಜೋಡಿನೂ ನೆಟ್ಟಗ ಇಲ್ರಿ..ಶಿವ ನನ್ ಮ್ಯಾಲ ಕರ್ಕೊಳವಲ್ರಿ..ಇನ್ನೂ ಈ ಕಣ್ ಅದೇನೆನೋ ಕರ್ಮ ನೋಡ್ಬೆಕ್ರಿ..” ಅನ್ನುತ್ತ ನಾಟಕೀಯವಾಗಿ ಸೆರಗಿನ ತುದಿಯಿಂದ ಕಣ್ಣು ಒರೆಸಿಕೊಂಡರು.ಪಂಚರಾದ ಸುಬ್ಬಣ್ಣನವರು” ಅದ ರಾಗ,ಅದ ಹಾಡು..ಈಗ ಮುಗ್ದಿರೋ ಕಥಿನ ಎಷ್ಟಂತ ಕೇಳೋನು..? ನಮಗೇನ್ ಬ್ಯಾರೆ ಕೆಲ್ಸ ಇಲ್ಲಂತ ತಿಳಿದೀರೇನು? ಅನ್ನುತ್ತ ಮಲ್ಲಪ್ಪ ಗೌಡರತ್ತ ತಿರುಗಿ ” ಏನ ನ್ಯಾಯ ಹೇಳಬೇಕಂತಿರಿ ಇದಕ..? ಮಾತಾಡ್ರಿ..” ಅಂದರು.ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು.
ಮಲ್ಲಪ್ಪಗೌಡರು ” ಎಷ್ಟಂತ ಇದ್ನ ನ್ಯಾಯಾ ಬಗಿ ಹರಿಸೋದು? ಪಾರೀ..ನೋಡವ್ವಾ..ಈಗರ ಲಗ್ನ ಆಗಿ ಒಂದೊರ್ಷ..ನೀ ಹಿಂಗ ಮಾಡುದು ನಿಂಗ ಚಂದ ಕಾಣ್ತದನೂ..? ಒಂದು ಕೂಸ ಆಗುವರ್ಗೂ ಇಂತಾವು ಸಮಸ್ಯೆ ಇರ್ತಾವ..ಎಲ್ಲಾ ಸಂಭಾಳ್ಸೋದು ಹೆಂಗ್ಸಿನ್ ಕೈಯಾಗಿರ್ತತಿ.ಸ್ವಾಮೇರು ದೊಡ್ ಮನ್ಷ್ಯಾ..ಹಿಂಗ ಊರಾಗಿನ ಜನ ಆಡ್ಕೊಂಡ್ ನಗು ಹಂಗ ಮಾಡಬ್ಯಾಡ..ಹೊಂದ್ಕೊಂಡ್ ಹೋಗವ್ವಾ..”ಎಂದು ಅವಳಿಗೆ ನಾಲ್ಕು ಸಮಾಧಾನದ ಮಾತುಗಳನ್ನು ಹೇಳಿ ಸಾವಿತ್ರಮ್ಮನವರ ಕಡೆ ತಿರುಗಿ “ಅಕ್ಕವ್ರ..ಪಾರಿ ಸಣ್ಣಾಕಿ..ನೀವೂ ಸ್ವಲ್ಪ ದಿವ್ಸ ತಡ್ಕೊಳ್ರಿ..ಆಕಿ ಹೊಂದ್ಕೊಳೋವರ್ಗೂ..” ಎಂದು ಅವರಿಗೆರಡು ತಿಳುವಳಿಕೆ ಮಾತುಗಳನ್ನು ಹೇಳಿ ಪಾರಿಗೆ ಹೆಚ್ಚು ಮಾತಾಡಲು ಅವಕಾಶ ಕೊಡದೇ ಪಂಚಾಯ್ತಿ ಮುಗಿಸಿ ಮೇಲೆದ್ದರು..
ಮಲ್ಲಪ್ಪಗೌಡರಿಗೆ ಮತ್ತು ಊರಿನ ಪಂಚರಿಗೆ ತಾವು ಹೇಳಿಕೊಟ್ಟ ಉಪಾಯ ಫಲಿಸಿದ ಬಗ್ಗೆ ಸಮಾಧಾನವಾಗಿತ್ತು.ಅವಳಿಗೆ ಹೊಡೆಯದೇ ಮಾನಸಿಕವಾಗಿ ನೋವು ಕೊಟ್ಟು ಅವಳಾಗಿಯೇ ಮನೆ ಬಿಟ್ಟು ಹೋಗುವಂತೆ ಮಾಡಬೇಕೆಂದು ಸಾವಿತ್ರಮ್ಮ ಮತ್ತು ಶಾಂತಸ್ವಾಮಿಯವರಿಗೆ ಪಂಚರು ಉಪಾಯ ಹೇಳಿಕೊಟ್ಟಿದ್ದರು.ಈಗ ಪಾರಿಯನ್ನು ಮತ್ತೆ ಮನೆ ಸೇರಿಸಿದ್ದು ಊರವರ ದೃಷ್ಟಿಯಲ್ಲಿ ಪಾರಿಗೆ ಅನ್ಯಾಯ ಆಗುತ್ತಿಲ್ಲವೆಂದು ತೋರಿಸುವುದಕ್ಕಾಗಿ ಆಡಿದ ನಾಟಕದ ಮುಂದಿನ ಹಂತವಾಗಿತ್ತಷ್ಟೇ..ಪಾರಿಯ ಬದುಕು ಬಿರುಗಾಳಿಗೆ ತರಗೆಲೆಯಂತಾಗಿತ್ತು.ದುರುಗಪ್ಪ ಮಗಳಿಗೆ ಒಂದು ಮಗುವಾಗುವವರೆಗೂ ತಾಳ್ಮೆಯಿಂದ ಇರಲು ತಿಳಿಸಿ ಮನೆಯ ದಾರಿ ಹಿಡಿದಿದ್ದ.”ಕೂಸು..! ಹ್ಹ..ಎಲ್ಲಿಯ ಕೂಸು..?” ಪೇಲವ ನಗೆ ನಕ್ಕಳು ಪಾರಿ.ತನ್ನ ಗಂಡ ಕರೆದರೂ ಕೋಣೆಗೆ ಬರುವುದಿಲ್ಲವೆಂದು ತಂದೆಯ ಮುಂದೆ ಹೇಗೆ ಹೇಳಿಯಾಳು..? ದೇವರ ಮೇಲೆ ಭಾರ ಹಾಕಿ ಮನೆಯೊಳಗೆ ನಡೆದಳು.ಸಾವಿತ್ರಮ್ಮ ಇನ್ನೇನು ಎಲ್ಲಾ ಒಳ್ಳೆಯದಾಗುವ ಸೂಚನೆ ಕಂಡಂತೆ ನಿರಾಳರಾದಂತೆ ಕಂಡರು.
ಮೋಸವರಿಯದ ಮಲ್ಲವ್ವ,ದುರುಗಪ್ಪನಿಗೆ ಮಗಳು ಮತ್ತೆ ಗಂಡನ ಮನೆ ಸೇರಿದ್ದು ತಲೆಯ ಮೇಲಿನ ದೊಡ್ಡ ಭಾರ ಇಳಿದಂತಾಗಿತ್ತು…
ಮುಂದುವರಿಯುವುದು..
Facebook ಕಾಮೆಂಟ್ಸ್