X

ಜೀವನದಲ್ಲಿ ಪರೀಕ್ಷೆಯೇ ಹೊರತು, ಪರೀಕ್ಷೆಗಳೇ ಜೀವನವಲ್ಲ…

 ಅನೂಪ್ ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಚುರುಕಾಗಿದ್ದ, ಸಾಮಾನ್ಯವಾಗಿ ಶಾಲೆಯ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆತನ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು. ಆದರೆ ಆತ ಓದಿನ ವಿಷಯದಲ್ಲಿ ಮಾತ್ರ ಹಿಂದೆ ಉಳಿದಿದ್ದ. ಪರೀಕ್ಷೆಗಳಲ್ಲಿ ಅಂತೂ-ಇಂತೂ ಪಾಸಾಗುತ್ತಿದ್ದನಷ್ಟೆ. ಮನೆಯಲ್ಲಿ ಅವನ ಬೇರಾವ ಚಟುವಟಿಕೆಗಳಿಗೂ ಪ್ರೋತ್ಸಾಹವಿರಲಿಲ್ಲ. ಅವನು ಓದಿ ಇಂಜಿನಿಯರ್ ಆಗಬೇಕೆಂಬುದೇ ಅವನ ತಂದೆ-ತಾಯಿಯ ಆಸೆ. ಆದರೆ ಆತನ ಆಸಕ್ತಿಯೇ ಬೇರೆ. ಅವನು ಅತಿ ಕಡಿಮೆ ಅಂಕ ಗಳಿಸಿ ಪಾಸ್ ಆಗುತ್ತಿದ್ದರಿಂದ ಅವನ ಮೇಲೆ ಪಾಲಕರ ಅಸಮಧಾನ ಸ್ವಲ್ಪ ಹೆಚ್ಚಾಗೇ ಇತ್ತು. ಈ ಸಾರಿ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪಾಸ್ ಆಗದೇ ಹೋದರೆ ಮನೆ ಸೇರಿಸುವುದಿಲ್ಲ ಎಂದು ಬೇರೆ ಹೇಳಿಬಿಟ್ಟಿದ್ದರು. ಸಹಜವಾಗಿ ಅನೂಪ್ ಒತ್ತಡದಲ್ಲೇ ಪರೀಕ್ಷೆ ಬರೆದು ಬಂದ. ಅವನ ತಲೆಯಲ್ಲಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕು ಎನ್ನುವುದಕ್ಕಿಂತ, ಹೆಚ್ಚಿನ ಅಂಕ ಗಳಿಸದೇ ಹೋದರೆ ತನ್ನನ್ನು ಮನೆ ಸೇರಿಸುವುದಿಲ್ಲ, ಏನು ಮಾಡುವುದು ಎಂಬ ಭಯವೇ ಹೆಚ್ಚಿತ್ತು. ಇದರಿಂದ ಇಷ್ಟು ದಿನ ಪರೀಕ್ಷೆಗಳಲ್ಲಿ ಕನಿಷ್ಠ ಪಾಸ್ ಆಗುತ್ತಿದ್ದವನು, ಈಗ ಒಂದೆರಡು ವಿಷಯಗಳಲ್ಲಿ ಫೇಲ್ ಆಗಿಬಿಟ್ಟ. ಕೊನೆಗೆ ಮನೆಗೆ ಹೋದರೆ ಮನೆಯಿಂದ ಹೊರಹಾಕುತ್ತರೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡ.


ಅನನ್ಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ. ಯಾವಾಗಲೂ ಕ್ಲಾಸ್ ಗೆ ಮೊದಲಿಗಳಾಗಿರುತ್ತಿದ್ದಳು. ಮೊದಲ ಸ್ಥಾನ ಎಲ್ಲಿ ತಪ್ಪಿ ಹೋಗುವುದೋ ಎಂದು ಹಗಲು ರಾತ್ರಿ ಊಟ-ನಿದ್ದೆ ಬಿಟ್ಟು ಓದುತ್ತಿದ್ದಳು. ಅವಳಿಗೆ ಯಾವಾಗಲೂ ತಾನೇ ಮೊದಲಿಗಳಾಗಿರಬೇಕೆಂಬ ಅತಿಯಾದ ಬಯಕೆ. ಬೇರೆ ಯಾರಾದರೂ ಅವಳ ಸಹಪಾಠಿಗಳು ಒಂದು ಅಂಕ ಅವಳಿಗಿಂತ ಹೆಚ್ಚಿಗೆ ಗಳಿಸಿದರೆ, ಅವಳು ಕುಗ್ಗಿ ಹೋಗುತ್ತಿದ್ದಳು. ಮತ್ತೆ ಅವರಿಗಿಂತ ಹೆಚ್ಚು ಅಂಕ ತೆಗೆದಾಗಲೇ ಅವಳಿಗೆ ಸಮಾಧಾನ, ಅಲ್ಲಿಯವರೆಗೂ ಅವಳು ಊಟ ತಿಂಡಿ ಇದಾವುದನ್ನೂ ಲೆಕ್ಕಿಸದೇ ಓದುತ್ತಿದ್ದಳು. ದ್ವಿತೀಯ ಪಿಯುಸಿ ರಿಸಲ್ಟ್ ಬಂದಾಗ, ತಾನೆ ಮೊದಲಿಗಳಾಗಿರುತ್ತೇನೆಂಬ ಅತಿಯಾದ ಆತ್ಮವಿಶವಾಸ ಹೊಂದಿದ್ದ ಆಕೆಗೆ, ಕೇವಲ ಒಂದು ಅಂಕ ಕಡಿಮೆಯಾಗಿ ಎರಡನೇ ಸ್ಥಾನ ಸಿಕ್ಕಿದ್ದು, ದೊಡ್ಡ ಅವಮಾನ ಎಂದು ತಿಳಿದು ಆತ್ಮಹತ್ಯೆಗೆ ಶರಣಾದಳು.


 ಮೇಲಿನ ಎರಡು ಕಥೆಗಳು ಸಾಂಧರ್ಬಿಕವಷ್ಟೆ. ಈಗ ಮಾರ್ಚ ತಿಂಗಳು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕಾಲ. ದ್ವಿತೀಯ ಪಿಯುಸಿ ಪರೀಕ್ಷೆ ಆಗಲೇ ಪ್ರಾರಂಭವಾಗಿ ಬಿಟ್ಟಿದೆ. ಇನ್ನೇನು ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಪಾಲಕರೂ ವಿದ್ಯಾರ್ಥಿಗಳಷ್ಟೇ ಒತ್ತಡದಲ್ಲಿರುತ್ತಾರೆ ಈ ಪರೀಕ್ಷಾ ಸಮಯದಲ್ಲಿ. ಪರೀಕ್ಷೆಯೇ ಜೀವನ, ಅದರಲ್ಲಿ ಫೇಲ್ ಆದರೆ ಜೀವನವೇ ಮುಗಿಯಿತು ಎಂದು ವಿದ್ಯಾರ್ಥಿಗಳಷ್ಟೇ ಅಲ್ಲ, ಪಾಲಕರೂ ಹಾಗಂದುಕೊಂಡೇ, ತಮ್ಮ ಮಕ್ಕಳ ಮೇಲೆ ಇನ್ನಷ್ಟು ಒತ್ತಡ ಹಾಕುತ್ತಿದ್ದಾರೆ. ಕೆಲವರ ಮನೆಯಲ್ಲಿ ಪಾಲಕರ ಒತ್ತಡ ಅಷ್ಟಿಲ್ಲದಿದ್ದರೂ ವಿದ್ಯಾರ್ಥಿಗಳು ತಮಗೇ ತಾವೇ ಅತಿಯಾದ ಒತ್ತಡ ತಂದುಕೊಳ್ಳುತ್ತಾರೆ. ಇದೆಲ್ಲದರ ಪರಿಣಾಮ ಮೇಲಿನ ಕಥೆಯಂತೆ ಕೊನೆಗೆ ಆತ್ಮಹತ್ಯೆಯಲ್ಲಿ ಅಂತಿಮವಾಗುವುದು. ಮೇಲಿನ ಕಥೆ ಸಾಂದರ್ಬಿಕವಾದರೂ, ಪ್ರತೀ ವರ್ಷ ಇಂತಹ ಸುದ್ದಿಗಳನ್ನು ಪೇಪರ್ ಗಳಲ್ಲಿ, ನ್ಯೂಸ್ ಚಾನೆಲ್ ಗಳಲ್ಲಿ ನೋಡುತ್ತಲೇ ಇರುತ್ತೇವೆ. ಈ ಸಾರಿ ರಿಸಲ್ಟ್ ಬರುತ್ತಿದ್ದಂತೆ, ಮತ್ತೆ ವಿದ್ಯಾರ್ಥಿಗಳ ಸಾವಿನ ಸುದ್ದಿ ಬರದಿದ್ದರೆ ಸಾಕು ಎಂದೆನಿಸಿ ಬಿಡುವಷ್ಟರ ಮಟ್ಟಿಗೆ ಈ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದೆಂತಹ ಹುಚ್ಚು ಇಂದಿನ ವಿದ್ಯಾರ್ಥಿಗಳಲ್ಲಿ? ಪರೀಕ್ಷೆಯಲ್ಲಿ ಫೇಲ್ ಆದ ಮಾತ್ರಕ್ಕೆ ಜೀವನವೇ ಮುಗಿದು ಹೋದಂತೆಯೇ ಹಾಗಾದರೆ? ಪರೀಕ್ಷೆ ಎಂಬುದು ಜೀವನದಲ್ಲಿ ಬರುವ ಒಂದು ಅತಿ ಚಿಕ್ಕ ಭಾಗವಷ್ಟೆ. ನಮ್ಮ ಕೈ ಬೆರಳುಗಳಲ್ಲಿರುವ ಯಾವುದೋ ಒಂದು ಬೆರಳಿನ ಉಗುರು ಕಿತ್ತು ಹೋದರೆ, ಸ್ವಲ್ಪ ನೋವಾಗುತ್ತದೆ, ಸ್ವಲ್ಪ ದಿನದಲ್ಲಿ ಆ ನೋವು ಮಾಯವಾಗುತ್ತದೆ. ಅಯ್ಯೋ ಉಗುರು ಕಿತ್ತು ಹೋಯಿತೆಂದು ಯಾರಾದರೂ ಜೀವ ಕಳೆದುಕೊಳ್ಳುತ್ತಾರಾ? ಈ ಪರೀಕ್ಷೆಯೂ ಅಷ್ಟೆ, ನಮ್ಮ ದೊಡ್ಡ ದೇಹದ ಅತೀ ಚಿಕ್ಕ ಭಾಗವಾದ ಉಗುರಿನಂತೆ. ಅದರಿಂದ ಜೀವನವೇ ಮುಕ್ತಾಯವಾಗುವುದಿಲ್ಲ. ಉಗುರು ಕಿತ್ತ ಜಾಗದಲ್ಲಿ ಮತ್ತೆ ಹೊಸ ಉಗುರು ಬೆಳೆಯುವಂತೆ, ಪರಿಕ್ಷೆಯಲ್ಲಿ ಫೇಲ್ ಆದರೆ, ಜೀವನದ ಮತ್ಯಾವುದೋ ವಿಭಾಗದಲ್ಲಿ ಮತ್ತೊಂದು ಹೊಸ ಜೀವನ ಪ್ರಾರಂಭಿಸ ಬಹುದು. ಜೀವನದಲ್ಲಿ ಎಲ್ಲರಿಗೂ ಹೊಸ-ಹೊಸ ಅವಕಾಶಗಳು ಸಿಗುತ್ತಲೇ ಇರುತ್ತವೆ, ಯಾರು ಸರಿಯಾಗಿ ಕಣ್ಣು ಬಿಟ್ಟು ನೋಡುತ್ತಾರೋ ಅವರಿಗೆ ಅದು ಕಾಣುತ್ತದೆ. ಕಣ್ಣು ಬಿಡಲೇ ತಯಾರಿಲ್ಲದೇ ಕುಳಿತ ವ್ಯಕ್ತಿಗಳು ಹೇಡಿತನದ ಆತ್ಮಹತ್ಯೆಗೆ ಶರಣಾಗುತ್ತಾರೆ.

ಹಾಗೆ ನೋಡಿದರೆ ಶಾಲಾ ಪರೀಕ್ಷೆಗಳಲ್ಲಿ ಫೇಲಾದ ಅದೆಷ್ಟೋ ಜನರೇ ಇಂದು ಜೀವನದ ಪರೀಕ್ಷೆಯಲ್ಲಿ ಯಶಸ್ವಿಯಾಗಿ, ಜನನಾಯಕರಾಗಿ, ಎಲ್ಲರಿಗೂ ಮಾದರಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ತಾನು ಹತ್ತನೇ ತರಗತಿಯಲ್ಲಿ ಫೇಲ್ ಆದೆನೆಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇಂದು ವಿಶ್ವ ವಿಖ್ಯಾತ ಕ್ರಿಕೆಟ್ ಪಟು, ದಾಖಲೆಗಳ ಸರದಾರ ಈ ಸಚಿನ್ ತೆಂಡೂಲ್ಕರ್‍ರನ್ನು ನಾವು ನೋಡುತ್ತಲೇ ಇರಲಿಲ್ಲ. ಬಿಲ್ ಗೇಟ್ಸ ಇಂಜಿನಿಯರಿಂಗ್ ನಲ್ಲಿ ಅನುತ್ತೀರ್ಣನಾದೆನೆಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇಂದು ಜಗತ್ತಿನ ನಂಬರ್ ಒನ್ ಶ್ರೀಮಂತ ನಮ್ಮ ಕಣ್ಮುಂದೆ ಇರುತ್ತಿರಲಿಲ್ಲ. ಇದು ಕೇವಲ ಒಂದೆರಡು ಉದಾಹರಣೆಗಳಷ್ಟೆ, ಇಂತಹ ಸಾವಿರಾರು ಉದಾಹರಣೆಗಳು ಇಂದು ನಮಗೆ ಸಿಗುತ್ತವೆ. ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಲ್ಲಿ ಪಾಸಾದವರಿಗಿಂತ, ಫೇಲ್ ಆದವರೇ ಇಂದು ಅತಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅಂದ ಮೇಲೆ ಶಾಲಾ ಪರೀಕ್ಷೆ ಮಾತ್ರ ನಮ್ಮ ಜೀವನ ರೂಪಿಸುತ್ತವೆ ಎಂಬುದಂತೂ ಸುಳ್ಳು. ಪರೀಕ್ಷೆಯ ಹೊರತಾಗಿಯೂ ಜೀವನ ತುಂಬಾ ದೊಡ್ಡದಿದೆ. ಇದನ್ನು ಪಾಲಕರು ತಮ್ಮ ಮಕ್ಕಳಿಗೆ ತಿಳಿಸಬೇಕು. ಇದರ ಬದಲು ತಾವೂ ಒತ್ತಡ ತಂದುಕೊಂಡು ಮಕ್ಕಳ ಮೇಲೂ ಒತ್ತಡ ತರುವುದಲ್ಲ. ನಿಜವಾಗಿ ನೋಡಿದರೆ ಇಂದು ಮಕ್ಕಳಿಗಿಂತ ಮೊದಲು ಪಾಲಕರಿಗೆ ತಿಳಿ ಹೇಳಬೇಕಾಗಿದೆ. ಯಾಕೆಂದರೆ ಪರೀಕ್ಷೆಗಳು ಸನಿಹವಾದಂತೆ ಪಾಲಕರೇ ಮಕ್ಕಳಿಗಿಂತ ಹೆಚ್ಚಿನ ಒತ್ತಡದಲ್ಲಿರುತ್ತಾರೆ. ಅಂದ ಮೇಲೆ ಮಕ್ಕಳ ಸ್ಥಿತಿ ಏನಾಗಬೇಡ?
  

ಹಾಗಾಗಿ ಎಲ್ಲ ವಿದ್ಯಾರ್ಥಿಗಳಿಗೊಂದು ಕಿವಿ ಮಾತು, ಪರೀಕ್ಷೆಗಳನ್ನು ಯಾವುದೇ ಒತ್ತಡವಿಲ್ಲದೇ ಎದುರಿಸಿ, ಹೆಚ್ಚಿನ ಅಂಕ ಬಂದರೆ ಖುಷಿ. ಒಂದು ವೇಳೆ ಕಡಿಮೆ ಅಂಕ ಬಂತೆಂದೋ, ಫೇಲ್ ಆದೆನೆಂದೋ ಆತುರದ ನಿರ್ಧಾರ ತೆಗೆದುಕೊಂಡು, ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಗೆ ಇಳಿಯಬೇಡಿ. ಪರೀಕ್ಷೆಯಲ್ಲಿ ಫೇಲ್ ಆದರೆ ಅದು ಮತ್ತೊಂದು ಹೊಸ ಜೀವನದ ಪ್ರಾರಂಭ ಎಂದುಕೊಂಡು, ನಿಮ್ಮ ಪ್ರತಿಭೆ ಯಾವುದರಲ್ಲಿದೆಯೋ ಅದರಲ್ಲಿ ತೊಡಗಿಸಿಕೊಳ್ಳಿ. ಯಾವುದಕ್ಕೂ ಹೆದರಬೇಡಿ, ಆಗ ನೀವೊಬ್ಬ ಯಶಸ್ವೀ ವ್ಯಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ. ಪಾಲಕರೂ ಅಷ್ಟೆ ಮಕ್ಕಳ ಆಸಕ್ತಿ ಏನೆಂದು ತಿಳಿದುಕೊಂಡು, ಅದರಲ್ಲೇ ಮುಂದುವರೆಯಲು ಪ್ರೋತ್ಸಾಹ ನೀಡಿ. ಪಾಲಕರಷ್ಟೇ ಜವಾಬ್ಧಾರಿ ಶಾಲಾ ಶಿಕ್ಷಕ/ಶಿಕ್ಷಕಿಯರಿಗೂ ಇದೆ. ಶಾಲೆಗೆ ಹೆಸರು ಬರಬೇಕು, ಫಲಿತಾಂಶ ನೂರಕ್ಕೆ-ನೂರು ಆಗಬೇಕೆಂದು, ಇಲ್ಲ-ಸಲ್ಲದ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹೇರಿ ಅವರ ಆತ್ಮ ವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಬೇಡಿ. ಒಟ್ಟಿನಲ್ಲಿ ಪರೀಕ್ಷೆಯೆಂಬುದು ಪೆಡಂಭೂತವಲ್ಲ, ಅದಕ್ಕೆ ಯಾರೂ ಹೆದರಬೇಕಾಗಿಲ್ಲ, ಶಾಲಾ ಪರೀಕ್ಷೆಗಳು ನಮ್ಮ ಜೀವನ ರೂಪಿಸುವುದಿಲ್ಲ, ನಮ್ಮ ಮನಸ್ಥೈರ್ಯ, ಆತ್ಮವಿಶ್ವಾಸ ಹಾಗೂ ಏನೇ ಬಂದರೂ ಅದನ್ನು ಎದುರಿಸಿ ಮುನ್ನಡೆಯುವುದು ಇವುಗಳೇ ನಮ್ಮ ಜೀವನವನ್ನು ರೂಪಿಸಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು. ಹಾಗಾಗಿ ಯಾವತ್ತೂ ನೆನಪಿಡಿ ಪರೀಕ್ಷೆಗಳಾಚೆಗೂ ಜೀವನ ತುಂಬಾ ವಿಸ್ತಾರವಾಗಿದೆ, ಕಣ್ಣು ತೆರೆದು ನೋಡಿ..

Facebook ಕಾಮೆಂಟ್ಸ್

Manu Vaidya: Hails from Sirsi and presently working at Snehakunja Trust, Ksarakod, Honnavar. Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.
Related Post