X
    Categories: ಕಥೆ

ಅವನಂಥ ಕಥೆಗಾರ ಯಾರಿಲ್ಲ

“ನಿನ್ನ ಕಥೆಗಳೆಲ್ಲ ಬರಿಯ ಕಲ್ಪನೆ . ಕಥೆಗೆ ಚಿತ್ರ ವಿಚಿತ್ರ ತಿರುವುಗಳನ್ನು ಕೊಟ್ಟು ಜನರನ್ನು ರಂಜಿಸಿ ವಂಚಿಸುವ ಜಾಣ್ಮೆ ನಿನ್ನದು” ಗೆಳೆಯ ವಾಸು ಛೇಡಿಸಿದ . ನಾನು ನಗುತ್ತ ಹೇಳಿದೆ “ಕಥೆಗಳಿಗೆ ಸ್ಫೂರ್ತಿ ಎಲ್ಲೋ ನಡೆದ ಘಟನೆಗಳು, ಕೇಳಿದ್ದು ಅತಿರಂಜನೆ ಕಲ್ಪನೆ ಎಲ್ಲ ಬೇಕು. ಆದರೆ ಈ ಸಾರಿ ನಾನು ನನ್ನ ಸುತ್ತ ನಡೆಯುವ ಘಟನೆಗಳನ್ನೇ ಕಥೆ ಬರೆಯುತ್ತೇನೆ. ನೀನೇ ಮೊದಲ ಓದುಗ. ದೀಪಾವಳಿ ಸಂಚಿಕೆಗೆ ಕೇಳುತ್ತಿದ್ದಾರೆ ಆಯ್ತಾ ” . ವಾಸು ಒಪ್ಪಿಕೊಂಡು ನೋಡೋಣ ಎಂದ.

ವಾಸು ನನ್ನ ಚಿಕ್ಕ ವಯಸ್ಸಿನಿಂದ ಗೆಳೆಯ. ಅವನ ಮದುವೆಗೆ ಹೆಣ್ಣು ಹುಡುಕಿದ್ದು ನಾನೇ. ಸವಿತಾ ನನ್ನನ್ನು “ಅಣ್ಣ ಅಣ್ಣ ” ಎಂದು ಕೂಗುತ್ತಿದ್ದಳು. ನಂತರ ನನಗೆ ಆ ಮನೆ ತಂಗಿಯ ಮನೆ ಆಗಿಹೋಯಿತು. ಸುಧಾಕರ ಹೆಂಡತಿಯನ್ನು ರೇಗಿಸುತ್ತಿದ್ದ. ಅವರ ಮಗಳು ಮಧು ಹುಟ್ಟಿದ ಮೇಲೆ ನನ್ನ ನಂಟು ಇನ್ನೂ ಹೆಚ್ಚಾಯಿತು. ಎಲ್ಲದಕ್ಕೂ ಮಾವನನ್ನು ಕೇಳು ಎಂದು ಸವಿತಾ ಹೇಳುತ್ತಿದ್ದಳು. ನಾನು “ಕಥೆಗಾರ” ಎಂಬ ಪಟ್ಟಿ ಕಟ್ಟಿಕೊಂಡು ಒಂಟಿಯಾಗಿ ಇದ್ದೆ . “ನಿನ್ನಂತ ಬುದ್ದು ಜೀವಿಗಳಿಗೆ ಯಾರು ಹೆಣ್ಣು ಕೊಡುತ್ತಾರೆ“ ವಾಸು ನಗೆಯಾಡುತ್ತಿದ್ದ. ಮಧು ತುಂಬಾ ಬುದ್ದಿವಂತೆ. ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ್ದಳು. ವಾಸು ಸವಿತಾರಿಗೆ ಅವಳಿಗೊಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡುವ ಯೋಚನೆಯಲ್ಲಿದ್ದರು. ವಾಸು ಜೊತೆಯಲ್ಲಿ ಕೆಲಸ ಮಾಡುವ ಮಾಧವರಾಯರ ಮಗ ಚಂದ್ರನ ಜೊತೆಗೆ ಪ್ರಸ್ತಾಪವಿತ್ತು . ಆ ವಿಷಯ ನನ್ನ ಹತ್ತಿರವೂ ವಾಸು ಹೇಳಿದ್ದ. ನನಗೆ ವಾಹ್ ಎಂತಹ ಸುಂದರ ಜೋಡಿ “ಮಧು-ಚಂದ್ರ ” ದೇವರು ಮಾಡಿಸಿದ ಜೋಡಿ ಎನಿಸಿತ್ತು.

ನನ್ನ ಹೊಸ ಕಥೆ “ಮಧು-ಚಂದ್ರ ” ಬರೆಯಲು ಪ್ರಾರಂಭಿಸಿದೆ.

ಚಂದ್ರಶೇಖರ್ “ಚಂದ್ರ” ಆರಡಿ ಎತ್ತರದ ಸುಂದರಾಂಗ. ಅಮೇರಿಕಾದಲ್ಲಿ ಮಾಸ್ಟರ್ಸ್ ಮಾಡಿ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿದ್ದ. ಅವನ ತಂದೆ ತಾಯಿ ವಾಸುಗೆ ತೀರಾ ಆಪ್ತರು. ಮಧು ಓದು ಮುಗಿಸಿದ ತಕ್ಷಣ ಮದುವೆಯ ಪ್ರಸ್ತಾಪ ಬಂದಿತ್ತು. ಮದುವೆಯ ನಿಶ್ಹಿತಾರ್ಥ ಅತ್ಯಂತ ಸಂಭ್ರಮದಿಂದ ನಡೆಯಿತು. ಎಲ್ಲರ ಮೆಚ್ಚುಗೆಯ ನೋಟ ಹೊಸ ಜೋಡಿಯತ್ತಲೇ ಇತ್ತು. ಮದುವೆಯ ದಿನಾಂಕ ನವೆಂಬರ್’ನಲ್ಲಿ ನಿರ್ಧಾರವಾಗಿತ್ತು. ಅಂದು ನಾನು ವಾಸು ಮನೆಗೆ ಬಂದಾಗ “ಅಂಕಲ್ ಚಂದ್ರು ಬಂದ್ದಿದ್ದಾನೆ ” ಹೇಳಿ ನಾಚಿಗೆಯಿಂದ ಟೆರೇಸ್’ಗೆ ಹೋದಳು. ನಾನು ಅವಳನ್ನು ಹಿಂಬಾಲಿಸಿದೆ. ಚಂದ್ರ ಮತ್ತು ಮಧು ಅಲ್ಲಿಯೇ ಕುಳಿತು ಮಾತಾಡುತ್ತಿದ್ದರು. ಚಂದ್ರ ಅವಳಿಗೆ ಏನೋ ಹೇಳುತ್ತಿದ್ದ ಮಧು ಕೆಂಪಾಗಿದ್ದಳು. “ಅಣ್ಣ ಕಾಫಿ ” ಸವಿತಾ ಕೂಗಿಗೆ ಕೆಳಗಿಳಿದು ಬಂದೆ. ತುಂಬಾ ಸೊಗಸಾದ ಜೋಡಿ ನನ್ನ ಮಾತಿಗೆ ಸವಿತಾ ಖುಷಿಯಾದಳು.

ವಾಸು ಮನೆಯಲ್ಲಿ ಮದುವೆಯ ಸಂಭ್ರಮ ಪ್ರಾರಂಭವಾಗಿತ್ತು. ಜವಳಿ ಒಡವೆ ಖರೀದಿ ಜೋರಾಗಿಯೆ ನಡೆದಿತ್ತು. ಸಂಪಾದಕರು ನನ್ನ ಕಥೆಗೆ ಆತುರಪಡಿಸುತ್ತಿದ್ದರು. ಕಥೆಯನ್ನು ಆತುರ ಆತುರವಾಗಿ ಮುಗಿಸಿ ವಾಸು ಕೈಯಲ್ಲಿ ಕೊಟ್ಟೆ. ಕಥೆ ಓದಿ ವಾಸು ಸಂತೃಪ್ತಿಯಿಂದ ನಕ್ಕ. ಕಥೆಯನ್ನು ಸಂಪಾದಕರಿಗೆ ಕಳಿಸಿ ಕೊಟ್ಟೆ. ಮದುವೆಯ ಎರಡು ದಿನದ ಮುಂಚೆ ಒಂದು ಆಘಾತಕರ ಘಟನೆ ನಡೆಯಿತು. ವಾಸು ಕೂಗಾಡುತ್ತಿದ್ದ “ಇಂತ ಹೆಣ್ಣು ಮಕ್ಕಳು ಹುಟ್ಟಿದಾಗಲೇ ಸಾಯಿಸಿದ್ರೆ ಚನ್ನಾಗಿತ್ತು ನನ್ನ ಮಾನ ಮರ್ಯಾದೆ ಕಳೆದ್ಲು” ನಾನು ಏನು ಅಂತ ವಿಚಾರಿಸಿದೆ. ವಾಸು “ಅದ್ಯಾವನೋ ಆಟೋ ಡ್ರೈವರ್ ಸ್ನೇಹ ಅಂತೆ, ದರಿದ್ರದವಳು, ನೆನ್ನೆ ರಾತ್ರಿ ಚಂದ್ರ ಅವಳು ಪಾರ್ಕ್ನಲ್ಲಿ ಮಾತಾಡ್ತಾ ಇದ್ರು. ಮೂರು ಜನ ಹುಡುಗರು ಚಂದ್ರು ತಲೆ ಮೇಲೆ ಬಲವಾಗಿ ಹೊಡೆದ್ದಿದಾರೆ. ಐ ಸಿ ಯು’ನಲ್ಲಿ ಸಾವು ಬದುಕಿನ ನಡುವೆ ಒದ್ದಾಡ್ತಾ ಇದಾನೆ” ನನಗೆ ಶಾಕ್ ಆಯಿತು “ಇದು ಪೊಲೀಸ್ ಕೇಸ್ ಆಗಿದೆ. ಆಟೋ ಹುಡುಗರು ಮಧು ಹೆಸರು ಹೇಳ್ತಾ ಇದಾರೆ. ಮಧು ರಾತ್ರಿಯಿಂದ ಆಸ್ಪತ್ರೆಯಲ್ಲಿ ಇದ್ದಾಳೆ “ ಸವಿತಾ ಹೇಳುತ್ತಿದ್ದಳು.

ನಾನು ಆಸ್ಪತ್ರೆಗೆ ಧಾವಿಸಿದೆ. ವಾಸು ಸವಿತಾ ನನ್ನ ಹಿಂದೆಯೇ ಬಂದರು. ಮಧು ಅಲ್ಲಿ ಒಂದು ಮೂಲೆಯಲ್ಲಿ ತೂಕಡಿಸುತ್ತ ಕುಳಿತಿದ್ದಳು. ವಾಸು ಸವಿತಾ ಅವಳತ್ತ ನೋಡದೆ ರಿಸೆಪ್ಶನ್’ಗೆ ನಡೆದರು. ಅಲ್ಲಿ ರಿಸೆಪ್ಶನ್’ನಲ್ಲಿ ಚಂದ್ರನ ತಂದೆ ತಾಯಿ ಕುಳಿತ್ತಿದ್ದರು ನಾನು ಮಧು ಪಕ್ಕದಲ್ಲಿ ಕುಳಿತು ವಿಚಾರಿಸಿದೆ . “ನನಗೊಂದೂ ಗೊತ್ತಿಲ್ಲ ಅಂಕಲ್, ಆ ಆಟೋ ಹುಡುಗರು ನಮ್ಮ ಏರಿಯಾದವರೇ. ನಾನು ಕಾಲೇಜು ಹೋಗುವಾಗ ಸುಮಾರು ಸಲ ಡ್ರಾಪ್ ತೆಗೆದು ಕೊಂಡಿದ್ದೇನೆ. ನಿಮಗೆ ಗೊತ್ತಲ್ಲ ನನಗೆ ಚಂದ್ರ ಅಂದ್ರೆ ಇಷ್ಟ. ಏನೇನೋ ಕನಸು ಕಂಡಿದ್ದೆ,ಏನೇನೋ ಆಗ್ತಾ ಇದೆ. ಚಂದ್ರ ಬದುಕಿ ಬಂದ್ರೆ ಸಾಕು “ಎಂದಳು . “ಆ ಆಟೋ ಹುಡುಗರು ನಿನ್ನ ಹೆಸರು ಹೇಳ್ತ ಇದಾರೆ” ನನ್ನ ಮಾತಿಗೆ ಕಣ್ಣಲ್ಲಿ ನೀರು ತುಂಬಿಕೊಂಡಳು “ನಾನು ಈ ಮಣ್ಣಲ್ಲಿ ಹುಟ್ಟಿದ ಹೆಣ್ಣು ಅಂಕಲ್” ಅಳಲು ಪ್ರಾರಂಭಿಸಿದಳು.

“ಚಂದ್ರ ಇನ್ನಿಲ್ಲ ” ಸುದ್ದಿ ತಿಳಿಯುತ್ತಿದಂತೆ ಎಲ್ಲರ ಮುಖದಲ್ಲಿ ನೋವು ವಿಷಾದ. ಪೊಲೀಸ್ ಇನ್ಸ್ಪೆಕ್ಟರ್ ಸೂರ್ಯ ಅಲ್ಲಿಯೇ ಇದ್ದರು. ಚಂದ್ರನ ತಂದೆ ಹತ್ರ ಮಾಡಾಡುತ್ತಿದ್ದರು. ಯಾರ ಮೇಲೆ ಕಂಪ್ಲೇಂಟ್ ಬುಕ್ ಮಾಡಬೇಕು ಇನ್ಸ್ಪೆಕ್ಟರ್ ಜೊತೆ ಚಂದ್ರನ ತಂದೆ ಪಕ್ಕಕ್ಕೆ ನಡೆದರು.

ಮರುದಿನ ಸಂಜೆ ಪೊಲೀಸ್ ಸ್ಟೇಷನ್ಗೆ ವಾಸು ಜೊತೆ ಹೋಗಿದ್ದೆ. ಚಂದ್ರನ ತಂದೆ ಕೊಟ್ಟ ಕಂಪ್ಲೇಂಟ್ ನಮಗೆ ತೋರಿಸಿದರು . ಅದರಲ್ಲಿ “ಮಧು ಒಳ್ಳೆಯ ಹುಡುಗಿ ಆಟೋ ಹುಡುಗರೇ ಕಾರಣ “ಎಂದು ಬರೆದು ಕೊಡಲಾಗಿತ್ತು. ಮನೆಗೆ ಬಂದಾಗ ಕತ್ತಲಾಗುತ್ತಿತ್ತು. ಮಧು ಟೆರೇಸ್ ಮೇಲೆ ಸುಮ್ಮನೆ ಕುಳಿತಿದ್ದಳು. ನನ್ನನ್ನು ನೋಡಿ “ಅಂಕಲ್ ಚಂದ್ರ ಇನ್ನಿಲ್ಲ” ಮುಖ ಮುಚ್ಚಿಕೊಂಡಳು. ನಾನು ಮೋಡ ತುಂಬಿದ ಆಕಾಶ ನೋಡಿದೆ . ” ಓ ದೇವರೇ, ನಿನ್ನಂತ ಕಥೆಗಾರ ಯಾರಿಲ್ಲ” ನನ್ನ ಧ್ವನಿ ನನಗೇ ಕೇಳಿಸದಷ್ಟು ಕ್ಷೀಣವಾಗಿತ್ತು

-ಹೆಚ್.ಎಸ್. ಅರುಣ್ ಕುಮಾರ್

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post