X
    Categories: ಕಥೆ

ಪಾರಿ ಭಾಗ-೧೦

  ಪಾರಿ ಏನೂ ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಳು.ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದವು.ಪಕ್ಕದಲ್ಲಿ ಮಹೇಶ ಮೌನವಾಗಿ ನಿಂತುಕೊಂಡಿದ್ದ.ತನಗೊಂದು ದಾರಿ ತೋರಿಸಿದ ಅವಳ ಪ್ರೀತಿಯ “ಯಲ್ಲಪ್ಪಣ್ಣ”ಇಂದು ಜೀವನ್ಮರಣದ ಹೋರಾಟ ನಡೆಸುತ್ತಾ ಆಸ್ಪತ್ರೆಯಲ್ಲಿದ್ದ. ಯಲ್ಲಪ್ಪ ಓಡಿಸಿಕೊಂಡು ಬರುತ್ತಿದ್ದ ಬೈಕಿಗೆ ಲಾರಿಯೊಂದು ಜೋರಾಗಿ ಬಂದು ಗುದ್ದಿತ್ತು..ಯಲ್ಲಪ್ಪ ಉಳಿಯುವ ಭರವಸೆ ಇರಲಿಲ್ಲ.ಕೊನೆಯದಾಗಿ ಮಾತಾಡಬೇಕೆಂದು ಪಾರಿಯನ್ನು ಕರೆದ.” ಪಾರೀ..ನೀ ಇಲ್ಲೆ ನಿಲ್ಬ್ಯಾಡ..ಊರಾಗ ನೀ ಸತ್ತಿ ಅಂತ ತಿಳದಾರ..ನಾ ಉಳಿಯಾಂಗಿಲ್ಲ ಗೊತ್ತದ..ಮಹೇಶಾ..ನೀ ಅಪ್ಪಗ ಫೋನ್ ಮಾಡು..ಪಾರೀ ನೀ ಹೋಗು..ಅವ್ರು ಬಂದಾಗ ನೀ ಇದ್ರ ಸುಮ್ನ ತೊಂದ್ರಿ..”ಎಂದು ಬಡಬಡಿಸುತ್ತಲೇ ಇದ್ದ ಯಲ್ಲಪ್ಪನ ಮಾತುಗಳು ಮೌನವಾದವು.ಯಲ್ಲಪ್ಪನ ಉಸಿರು ನಿಂತಿತ್ತು.ಪಾರಿ ಹಣೆ ಚಚ್ಚಿಕೊಂಡು ಅತ್ತಳು..”ಅದೇನಾರ ಆಗ್ಲಿ..ನಾ ಯಲ್ಲಪ್ಪಣ್ಣನ್ ಬಿಟ್ ಹೋಗಂಗಿಲ್ಲ..”ಎಂದು ಪಟ್ಟು ಹಿಡಿದು ಕುಳಿತ ಪಾರಿಯನ್ನು ಮನವೊಲಿಸಿ ಕಳಿಸುವುದರೊಳಗೆ ಸಾಕು ಸಾಕಾಗಿ ಹೋಯಿತು ಮಹೇಶನಿಗೆ‌.

 ಮಹೇಶನಿಂದ ವಿಷಯ ತಿಳಿದ ಯಲ್ಲಪ್ಪನ ತಂದೆ-ತಾಯಿ ಅಳುತ್ತಲೇ ಆಸ್ಪತ್ರೆಗೆ ಬಂದಿದ್ದರು‌.ಯಲ್ಲಪ್ಪನ ಶವ ಊರಿಗೆ ಬಂದಾಗ ಸುಬ್ಬಣ್ಣನವರು ವಿಷಯ ತಿಳಿದು ಹೌಹಾರಿದರು‌‌..ಆ ದೊಡ್ಡ ಬೆಂಗಳೂರಿನಲ್ಲಿ ಇನ್ನು ಪಾರಿಗಾಸರೆ ಯಾರು..? ಎಂದು ಚಿಂತಿತರಾದರಾದರೂ ಪಾರಿ ಬೆಂಗಳೂರಿಗೆ ಹೊಂದಿಕೊಂಡಿದ್ದಾಳೆಂದು ಯಲ್ಲಪ್ಪ ಒಮ್ಮೆ ಹೇಳಿದ್ದು ನೆನಪಾಯಿತು.ಯಲ್ಲಪ್ಪನ ಅಂತ್ಯಕ್ರಿಯೆಗಳು ಮುಗಿದಿದ್ದವು.ಮತ್ತೆ ಪಾರಿ ಮಹಾನಗರದಲ್ಲಿ ಒಂಟಿಯಾಗಿದ್ದಳು…ಎಲ್ಲಕ್ಕಿಂತ ಯಲ್ಲಪ್ಪ ಸಾಯುವಾಗ “ಊರಾಗ ನೀ ಸತ್ತಿ ಅಂತ ತಿಳದಾರ” ಎಂದು ಹೇಳಿದ್ದು ಅರಗಿಸಿಕೊಳ್ಳಲಾರದ ನೋವಾಗಿತ್ತು.ಬದುಕಿದ್ದೂ ತಾನು ಸತ್ತು ಹೋದೇನೇ…! ಒಂಥರ ಹಾಗೆಯೇ ಬದುಕಿರುವುದು ಅಲ್ಲವಾ.! ಎಂದು ನಿಟ್ಟುಸಿರು ಬಿಟ್ಟಳು ಪಾರಿ..

 ಮಹೇಶನಿಗೆ ಪಾರಿಯ ಪರಿಸ್ಥಿತಿ ಅರ್ಥವಾಗಿತ್ತು.ಆದರೂ ಬಾಯ್ಬಿಟ್ಟು ಕೇಳಲು ಹಿಂಜರಿಯುತ್ತಿದ್ದ.ಕಷ್ಟಗಳು ಬಂದಷ್ಟು ಮನುಷ್ಯ ಗಟ್ಟಿಯಾಗುತ್ತಾನಂತೆ.ಪಾರಿ ಗಟ್ಟಿಗಿತ್ತಿಯಾಗಿದ್ದಳು.ಕೆಲವೊಮ್ಮೆ ಒಂಟಿ ಬದುಕು ಬೇಸರವೆನಿಸತೊಡಗಿದ್ದರೂ ಹೊರಗೆ ತೋರ್ಪಡಿಸಿಕೊಳ್ಳುತ್ತಿರಲಿಲ್ಲ.ಒಂದೊಂದು ಬಾರಿ ಸುಬ್ಬಣ್ಣನವರಿಗೆ ಕರೆ ಮಾಡಬೇಕೆನಿಸಿದರೂ ಬೇಡವೆಂದು ಸುಮ್ಮನಾಗುತ್ತಿದ್ದಳು..ಕಾಲಚಕ್ರ ಉರುಳುತ್ತಿತ್ತು.ಪಾರಿಯ ಮೇಲಿನ ಮಹೇಶನ ಅತೀ ಕಾಳಜಿ ಸಹೋದ್ಯೋಗಿಗಳಲ್ಲಿ ಮತ್ಸರ ಹುಟ್ಟಿಸಿತ್ತು.ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕನಿಗೆ ಮಹೇಶ,ಪಾರಿ ಅಸಭ್ಯವಾಗಿ ವರ್ತಿಸುತ್ತಾರೆಂದು ಫಿರ್ಯಾದಿ ಹೋಗಿತ್ತು. ಮಾಲೀಕನಿಗೆ ಮಹೇಶನ ಮೇಲೆ ನಂಬಿಕೆಯಿತ್ತಾದರೂ ಮಹೇಶ ಮತ್ತು ಪಾರಿಯನ್ನು ಕರಿಸಿ ಈ ಬಗ್ಗೆ ವಿಚಾರಿಸಿದಾಗ ಪಾರಿ ಕುಸಿದು ಹೋಗಿದ್ದಳು.ಮಹೇಶನಿಗೆ ಸಿಟ್ಟು ನೆತ್ತಿಗೇರಿತ್ತು.”ಸರ್..ನೀವು ಹೀಗೆ ಮಾತಾಡೋದು ಸರಿಯಲ್ಲ.ಒಂದೇ ಒಂದು ದಿನ ನಾವು ಅಸಭ್ಯವಾಗಿ ನಡ್ಕೊಂಡಿಲ್ಲ.ಯಾರೋ ನಿಮಗೆ ಬೇಕಂತಲೇ ನಮ್ಮ ಮೇಲೆ ಹಾಗೆ ಚಾಡಿ ಹೇಳಿದಾರೆ‌..ಅದು ಬಿಡಿ ಸರ್..ನಿಮಗ್ಯಾಕೆ ಅನುಮಾನ..? ನಾವಿಬ್ರೂ ಮುಂದಿನ ತಿಂಗ್ಳು ಮದ್ವೆ ಆಗ್ತಿದೀವಿ..ಬಾ ಪಾರು..’ ಎಂದು ಮಾಲೀಕನ ಮಾತಿಗೂ ಕಾಯದೇ ಹೊರಬಂದ..ಪಾರಿಗೆ ದಿಗಿಲಾಗಿತ್ತು..”ನಾವಿಬ್ರೂ ಮುಂದಿನ ತಿಂಗ್ಳು ಮದ್ವೆ ಆಗ್ತಿದೀವಿ” ಅಂದ ಮಹೇಶನ ಮಾತುಗಳಿಗೆ ಪಾರಿ ಕೆಂಡಾಮಂಡಲಳಾಗಿ ಚೀರಾಡಿದ್ದಳು.ಮಹೇಶ ಆವೇಶದಲ್ಲಿ ಆ ಮಾತು ಹೇಳಿದ್ದನಾದರೂ ಅವನಲ್ಲಿ ಪಾರಿಯನ್ನು ಮದುವೆಯಾಗುವ ಇಚ್ಛೆ ತುಂಬಾ ದಿನದಿಂದ ಇತ್ತು.ಮಹೇಶ ಸಮಾಧಾನದಿಂದಲೇ..” ನೋಡು ಪಾರು..ಒಂಟಿ ಹೆಣ್ಣು ಬದುಕೋದು ಕಷ್ಟ..ನಂಗಂತೂ ಹಿಂದಿಲ್ಲ-ಮುಂದಿಲ್ಲ..ಯಲ್ಲಪ್ಪ ಬದುಕಿದ್ದಾಗ್ಲೇ ನಾ ನಿನ್ ಮದುವೆ ಆಗೋ ಬಗ್ಗೆ ಕೇಳೋಣ ಅನ್ಕೊಂಡೆ..ಅಷ್ಟೊತ್ತಿಗೆ ಅನಾಹುತ ಆಗೋಯ್ತು..ಅದ್ಕೆ ಸುಮ್ನಿದ್ದೆ.ಇವತ್ತು ಆ ಓನರ್ ಅನ್ನೋದು ಕೇಳಿ ನಂಗೆ ತಡ್ಕೊಳೋಕಾಗ್ಲಿಲ್ಲ..ನಾ ನಿನ್ನ ಮದುವೆ ಆದ್ರೆ ವಿರೋಧ ಮಾಡೋರು ಯಾರೂ ಇಲ್ಲ.‌ನೀ ಹೀಗೆ ಎಷ್ಟು ದಿನಾಂತ ಬದುಕೋಕೆ ಆಗತ್ತೆ ಹೇಳು..? ನನ್ ಮಾತು ಕೇಳು..ಹಳೇದು ಮರ್ತು ಬಿಡು..ವಿಚಾರ ಮಾಡು”ಎಂದು ನಡೆದು ಹೋದ ಮಹೇಶನನ್ನು ಅವನು ಕಣ್ಮರೆಯಾಗುವವರೆಗೂ ನೋಡುತ್ತಲೇ ಇದ್ದಳು ಪಾರಿ..

 ಮಹೇಶನ ಒತ್ತಾಯ ಮತ್ತು ಕಾಳಜಿಗೆ ಪಾರು ಸೋತು ಹೋಗಿದ್ದಳು. ಹಠ ಬಿಟ್ಟು ಮದುವೆಗೆ ಒಪ್ಪಿಕೊಂಡಿದ್ದಳು. ರಿಜಿಸ್ಟರ್ ಆಫಿಸ್ ಒಂದರಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲಿ ಪಾರಿ-ಮಹೇಶ ದಂಪತಿಗಳಾಗಿದ್ದರು‌‌..ಪಾರಿ ಸಂಪೂರ್ಣ ಮಹೇಶನ ಮುದ್ದಿನ ಮಡದಿ ಪಾರುವಾಗಿ ಬದಲಾಗಿದ್ದಳು.ಮಹೇಶನ ಪ್ರೀತಿ ಅವಳ ಹಳೆಯ ಕರಾಳ ನೆನಪುಗಳನ್ನು ಮರೆಸಿಬಿಟ್ಟಿತ್ತು.ಮುಂದೆ ಒಂದು ವರ್ಷದ ನಂತರ ಹೆಣ್ಣು ಮಗುವಿನ ತಾಯಿಯಾಗಿದ್ದಳು ಪಾರಿ..ಪುಟ್ಟ ಮಗು ಚಂದನಾ ಅಳಿದುಳಿದ ಎಲ್ಲ ನೋವುಗಳನ್ನೂ ಮರೆಸಿಬಿಟ್ಟಿದ್ದಳು..ಬರೀ ನೋವುಗಳನ್ನೇ ಕಂಡ ಪಾರಿಗೆ ನೆಮ್ಮದಿಯ ಬದುಕು ಸಿಕ್ಕಿತ್ತು.

 ಮಹೇಶ ತನ್ನದೇ ಗಾರ್ಮೆಂಟ್ಸ್ ಪ್ರಾರಂಭ ಮಾಡಿದ್ದ.ಪುಟ್ಟ ಮನೆ,ಓಡಾಡಲು ಕಾರು ಎಲ್ಲಾ ಅನುಕೂಲತೆ ಈಗ ಪಾರಿಗಿತ್ತು.”ಪಾರು..ಇದೆಲ್ಲಾ ನಿನ್ ಕಾಲ್ಗುಣ ಕಣೇ..ಈಗ ಚಂದು ಪುಟ್ಟಿ ಹುಟ್ಟಿದ್ ಮೇಲೆ ಡಬ್ಬಲ್ ಆಗ್ಬಿಟ್ಟಿದೆ ಅದೃಷ್ಟ…! “ಎಂದು ಮಹೇಶ ಹೇಳುವಾಗಲೆಲ್ಲ ಪಾರಿಯ ಮುಖದಲ್ಲಿ ಅಂತಹ ಗಂಡನನ್ನು ಪಡೆದ ಧನ್ಯತೆ ಎದ್ದು ಕಾಣುತ್ತಿತ್ತು..

 ಚಂದನಾ “ಅಮ್ಮಾ…” ಅಂದಾಗ ನೆನಪಿನ ಲೋಕದಿಂದ ಪಾರಿ ವಾಪಸ್ಸು ಬಂದಿದ್ದಳು.ನಿದ್ದೆಗಣ್ಣಲ್ಲಿ ಚಂದನಾ ಬಡಬಡಿಸಿದ್ದಳು..ಇಷ್ಟೊತ್ತು ನೆನಪಿನಲ್ಲಿ ಕಳೆದು ಹೋಗಿದ್ದ ಪಾರಿ ಗಡಿಯಾರ ನೋಡಿದಾಗ ಬೆಳಗಿನ ಮೂರು ಗಂಟೆ…!!! ಅಬ್ಬಬ್ಬಾ…!!! ಆ ನೆನಪುಗಳೇ..ಬೇಡವೇ ಬೇಡ ಇನ್ನು..ದೇವರು ಚಿನ್ನದಂತಾ ಗಂಡ..ಮುದ್ದಿನ ಮಗಳು ,ಇಷ್ಟು ನೆಮ್ಮದಿ ಕೊಟ್ಟಿದ್ದಾನೆ ಸಾಕು..ಇನ್ನು ಆ ನೆನಪುಗಳಿಗೆ ಹೋಗುವುದೇ ಬೇಡ ಎಂದು ಕಣ್ಮುಚ್ಚಿ ಮಗಳನ್ನು ತಬ್ಬಿ ಮಲಗಿದಳು..ಕಾಲ ಚಕ್ರ ಸಾಗುತ್ತಲೇ ಇದೆ..

ಹಿಂದೆ ಹಿರಿಯರು “ನಾವು ಮಾಡಿದ ಪಾಪ ಕರ್ಮದ ಫಲ ನರಕಕ್ಕೆ ಹೋಗಿ ಅನುಭವಿಸುತ್ತೇವೆ” ಎಂದು ಹೇಳುತ್ತಿದ್ದರು.ಆದರೆ ಈಗ ಹಾಗಿಲ್ಲ.ನಾವು ಮಾಡಿದ ಪಾಪ ಕರ್ಮದ ಫಲ ಇಲ್ಲಿಯೇ ಅನುಭವಿಸಿ ಹೋಗಬೇಕು..ಮಹದೇವಸ್ವಾಮಿ ಅಂತದ್ದೊಂದು ಶಿಕ್ಷೆ ಅನುಭವಿಸುತ್ತಿದ್ದಾನೆ.ಆ ದಿನ ರಾತ್ರಿ ಪಾರಿ ಮನೆ ಬಿಟ್ಟು ಹೋಗುವಾಗ ಒಳಗೊಳಗೆ ನಕ್ಕ ಸಾವಿತ್ರಮ್ಮ ಪಶ್ಚಾತ್ತಾಪ ಪಡುತ್ತಿದ್ದಾರೆ.ಶಾಂತಸ್ವಾಮಿಯವರಿಗಂತೂ ಬರೀ ಅನಾರೋಗ್ಯ ಕಾಡತೊಡಗಿ ಹಾಸಿಗೆ ಹಿಡಿದಿದ್ದಾರೆ..ಕಾಲಚಕ್ರದಲ್ಲಿ ಇಂದು ಮೇಲಿದ್ದವರು ನಾಳೆ ಕೆಳಗೆ ಬರಲೇ ಬೇಕು.ಮಹದೇವಸ್ವಾಮಿ ಈಗ ಕೆಳಗೆ ಬಂದಿದ್ದಾನೆ…!

ಮುಂದುವರಿಯುವುದು..

 

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post