ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೫
ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |
ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ೦೪೫ ||
ಬೆಂಕಿಯುಂಡೆಯೆಂದರೆ ಕಿಡಿಗಾರುವ ಸೂರ್ಯ; ಬೆಣ್ಣೆಯುಂಡೆಯೆಂದರೆ ಹುಣ್ಣಿಮೆ ಸುಧೆ ಚೆಲ್ಲುತ್ತ ಬೆಣ್ಣೆಮುದ್ದೆಯ ಹಾಗೆ ಕಾಣಿಸಿಕೊಳ್ಳುವ ಚಂದ್ರಮ. ಇವೆರಡರ ಈ ವಿರೋಧಾಭಾಸದ ಅಸ್ತಿತ್ವದಲ್ಲು ಸಮಾನವಾದ ಅಂಶವೆಂದರೆ ಎರಡು ಬೆಳಕು ಕೊಡುತ್ತವೆ – ಕೊಡುವ ಸಾಂದ್ರತೆ, ಪ್ರಖರತೆಗಳಲ್ಲಿ ವ್ಯತ್ಯಾಸವಿದ್ದರೂ ಸಹ.
ಇವೆರಡರ ಬೆಳಕು ಇದ್ದರೂ ಸಹ ಕೇವಲ ಮಣ್ಣಿನೊಂದು ಉಂಡೆಯನ್ನು ಮೆತ್ತಿಕೊಂಡರೂ (ಅಡ್ಡ ಹಿಡಿದರು) ಸಾಕು, ಆ ಬೆಳಕೆಲ್ಲ ಮರೆಯಾಗಿ ಮಂಕು ಅಥವ ಮಬ್ಬು ಕವಿದುಬಿಡುತ್ತದೆ ಕಣ್ಣುಗಳಿಗೆ. ಇದನ್ನೆ ಮತ್ತೊಂದು ಆಧ್ಯಾತ್ಮಿಕ ಕೋನದಲ್ಲಿ ನೋಡಿದರೆ ಬೆಳಕು ಜ್ಞಾನದ ಪ್ರತೀಕವಾಗಿರುವುದರಿಂದ ಅದನ್ನು ನೀಡುವ ಸೂರ್ಯನಾಗಲಿ, ಚಂದ್ರನಾಗಲಿ ಜ್ಞಾನಕಾರಕರಾಗುತ್ತಾರೆ, ದಾರಿ ದೀಪವಾಗುತ್ತಾರೆ. ಆದರೆ ಆ ಜ್ಞಾನವೆನ್ನುವ ಬೆಳಕು ತಂತಾನೆ ಬಂದು ಒಳ ನುಸುಳಿಬಿಡುವುದಿಲ್ಲ. ಅದನ್ನು ನೋಡಿ, ಸೋಸಿ, ಆಸ್ವಾದಿಸಿ ಒಳಬಿಟ್ಟುಕೊಳ್ಳುವ ಕಣ್ಣುಗಳು ಇರಬೇಕು. ಆದರೆ ಈ ಮಾಯೆ, ಅಜ್ಞಾನವೆಂಬ ಮಣ್ಣುಂಡೆಯ ಸುಳಿಗೆ ಸಿಕ್ಕಿ ಅದರಿಂದ ಕಣ್ಣನ್ನು ಮುಚ್ಚಿಬಿಟ್ಟರೆ ಅಷ್ಟೊಂದು ಪ್ರಖರ ಸೂರ್ಯಚಂದ್ರರ ಬೆಳಕೂ ಒಳನುಗ್ಗದ ಹಾಗೆ ಅದು ಅಡ್ಡಗೋಡೆ ಹಾಕಿ, ಬರಿಯ ಕತ್ತಲ ಜಗವನ್ನು ಮಾತ್ರ ಉಳಿಸಿಬಿಡುತ್ತದೆ – ಆ ಕಂಗಳ ಪಾಲಿಗೆ.
ಈ ಕಣ್ಣೆ ಒಂದು ರೀತಿಯ ಅರಿವಿನ ದೀಪವಾದರು, ಆ ಹೊರಗಿನ ಬೆಳಕಿಲ್ಲದೆ ಅದು ಅಸಹಾಯಕವಾಗಿಬಿಡುತ್ತದೆ. ಹೊರಗಷ್ಟೆಲ್ಲ ಸೂರ್ಯ ಚಂದ್ರರ ಬೆಳಕು (ಜ್ಞಾನ) ಅಷ್ಟೊಂದು ರಾಶಿ ವಿಶಾಲ ಸಾಗರದಂತೆ ಹರಡಿಕೊಂಡಿದ್ದರು, ಅದನ್ನು ಸುಲಭದಲ್ಲಿ ಒಳಬಿಡದ ಸಾಮಾನ್ಯ ಮಣ್ಣುಂಡೆಯಂತಹ ಅಜ್ಞಾನವೆ ಅವೆರಡಕ್ಕಿಂತಲು ಹೆಚ್ಚು ಪ್ರಬಲ ಎನ್ನುವುದಾದರೆ – ಆ ಬೆಳಕಿನ ಸ್ವರೂಪವಿದ್ದು ಪ್ರಯೋಜನವಾದರೂ ಏನು? ಅದು ಬರಿಯ ಭ್ರಮೆಯ, ಕಲ್ಪನೆಯ, ಕೆಲಸಕ್ಕೆ ಬಾರದ ದೀಪವಿದ್ದ ಹಾಗೆಯೆ ಲೆಕ್ಕವಲ್ಲವೆ ? ಅದರ ಬದಲು ಶಂಕೆಗಾಸ್ಪದವೆ ಇರದ ಹಾಗೆ ಬರಿಯ ಕತ್ತಲೆಯೆ (ಅಜ್ಞಾನವೆ) ಜಗವನ್ನು ತುಂಬಿಕೊಂಡುಬಿಟ್ಟರೆ ತಂಟೆಯೆ ಇರುವುದಿಲ್ಲವಲ್ಲಾ ? ಹೇಗೂ ಮಣ್ಣುಂಡೆಯಡಿಯ ಕಣ್ಣಿಗೆ ಏನೂ ಕಾಣದು. ಕತ್ತಲೆಯಲ್ಲೂ ಏನೂ ಕಾಣದು. ಆಗ ಅಜ್ಞಾನ, ಮಾಯೆಯಡಿ ಸಿಕ್ಕಿಕೊಂಡಿದ್ದರು ಏನೂ ಅನಿಸದು – ಎಲ್ಲು ಬೆಳಕು ಕಾಣಿಸದೆ ಇರುವುದರಿಂದ, ಮತ್ತದರ ಅಸ್ತಿತ್ವದ ಅರಿವೇ ಆಗದಿರುವುದರಿಂದ.
ಕೈಗೆ ಸಿಗದೆ, ಬರಿಯ ಮಾಯಜಿಂಕೆಯಂತೆ ಭ್ರಮೆಯನ್ಹುಟ್ಟಿಸುವ ದೀವಿಗೆ ಕಾಣುತ್ತಿದ್ದರೆ ತಾನೇ ಇಲ್ಲ ಸಲ್ಲದ ತಂಟೆ ? ಎನ್ನುತ್ತಿದ್ದಾನೆ ಮಂಕುತಿಮ್ಮ – ಇಗ್ನೊರೆನ್ಸ್ ಇಸ್ ಬ್ಲಿಸ್ ಅನ್ನುವ ಹಾಗೆ. ಎಷ್ಟೇ ಅಗಾಧ ಸ್ತರದ, ಮೇರು ಸ್ವರೂಪದ ಸತ್ಯ-ಜ್ಞಾನವೆ ಸುತ್ತೆಲ್ಲಾ ಚೆಲ್ಲಾಡಿಕೊಂಡಿದ್ದರೆ ತಾನೇ ಏನು? ಕೇವಲ ಐಹಿಕ, ಪ್ರಾಪಂಚಿಕ ಬಂಧಗಳು ಅವನ್ನೆಲ್ಲವನ್ನು ಮರೆ ಮಾಡಿ, ಅಂಧಕಾರದಲ್ಲಿರಿಸಿ ತೊಳಲಾಡಿಸುವುವು ಎಂಬುದಿಲ್ಲಿನ ಅಂತರ್ಗತ ಭಾವ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್