“ನಿನಗೆ ಏನು ಅನಿಸುತ್ತೆ… ನಿನ್ನ ಬದುಕಲ್ಲಿ ಇದೆಲ್ಲ ಯಾಕೆ ಆಯ್ತು?” ಅಂತ ಕೇಳಿದಳು. “ಗೊತ್ತಿಲ್ಲ.. ಅದನ್ನ ತಿಳಿದುಕೊಳ್ಳುವ ಹಂಬಲವೂ ಇಲ್ಲ. ಆದರೆ ಒಂದಂತೂ ನಿಜ. ಅದೆಲ್ಲ ಅಗಿಲ್ಲದಿದ್ದಿದ್ದರೆ ನನ್ನ ಬದುಕು ಇಂದು ಹೀಗೆ ಇರ್ತಾ ಇರ್ಲಿಲ್ಲ. ನಾನು ಕೂಡ ಹೀಗೆ ಇರ್ತಿರ್ಲಿಲ್ಲ..” ಎಂದೆ. ಅವಳು ಮುಗಳ್ನಕ್ಕಳು. ನಿಜ.. ಕ್ಯಾನ್ಸರ್ ಆಗಿಲ್ಲದಿದ್ದಿದ್ದರೆ ನಾನು ಹೀಗೆ ಇರುತ್ತಲೇ ಇರಲಿಲ್ಲ. ಇದು ಕೇವಲ ನಾನು ಹೇಳುತ್ತಿರುವುದಲ್ಲ, ನನ್ನಂತ ಎಷ್ಟೋ ಸರ್ವೈವರ್’ಗಳು ಇದನ್ನೇ ಹೇಳುತ್ತಾರೆ. ಕ್ಯಾನ್ಸರ್ ಏಷ್ಟೇ ನಿಷ್ಠುರವಾಗಿರಲಿ, ನಮ್ಮ ಬದಕು ಬದಲಿಸಿದ್ದಂತು ನಿಜ!
“ಕ್ಯಾನ್ಸರ್ ನನ್ನ ಬದುಕಿನ ಐ ಓಪನರ್ ಆಗಿತ್ತು” ಎಂದಿದ್ದಾಳೆ ಒಬ್ಬ ಸರ್ವೈವರ್. ಹೌದು.. ಕ್ಯಾನ್ಸರ್ ನಮ್ಮ ಕಣ್ತೆರೆಸಿದ್ದು ಅಕ್ಷರಶಃ ನಿಜ. ಕ್ಯಾನ್ಸರ್‍ಗೂ ಮೊದಲು ಬದುಕನ್ನ ಈ ರೀತಿಯಾಗಿ ನೋಡಿಯೇ ಇರಲಿಲ್ಲ. ಬದುಕನ್ನ ನೋಡುವ ರೀತಿ ಬದಲಾಗಿದ್ದೇ ಅಲ್ಲಿಂದ. ನಾವು ಕ್ಯಾನ್ಸರ್ ಆಸ್ಪತ್ರೆಗಳಲ್ಲಿದ್ದಾಗ, ಅಕ್ಕ ಪಕ್ಕದ ಬೆಡ್’ನಲ್ಲಿ ಇರುವವರ ಬಳಿ ಮೊದಲು ಕೇಳುತ್ತಿದ್ದ ಪ್ರಶ್ನೆ “ನಿಮಗೆ ಏನಾಗಿದೆ?” ಅಥವಾ “ನಿಮಗೆ ಯಾವುದು ಆಗಿರುವುದು?” ಎಂದು. ಅದರ ನಂತರ ಹೆಸರು, ಊರು, ರಾಜ್ಯ, ಧರ್ಮಗಳು ಬರುತ್ತಿದ್ದವು. ಇವೆಲ್ಲವನ್ನು ಮೀರಿದ ಒಂದು ಜಾಗ ಇದೆ ಎಂದು ತಿಳಿದದ್ದೇ ಅಲ್ಲಿ. ಇವೆಲ್ಲವನ್ನೂ ಮೀರಿ ಕೂಡ ಬದುಕುಬಹುದು ಎಂದು ತಿಳಿದದ್ದು ಅಲ್ಲಿಯೇ. ಯಾಕೆಂದರೆ ಅವೆಲ್ಲವನ್ನೂ ಮೀರಿದಂತದ್ದು ನಮ್ಮ ಬಳಿ ಇತ್ತು, ಕ್ಯಾನ್ಸರ್! ಬದುಕನ್ನ ಆ ರೀತಿ ಎಂದೂ ನೋಡಿರಲೇ ಇಲ್ಲ.
ಆಸ್ಪತ್ರೆಗಳಲ್ಲಿರುವಾಗ ಪ್ರತಿದಿನ ನಮ್ಮ ಅಕ್ಕ ಪಕ್ಕ ಕ್ಯಾನ್ಸರ್ ರೋಗಿಗಳನ್ನೇ ನೋಡುತ್ತಾ, ಅದರ ಬಗ್ಗೆಯೇ ಮಾತನಾಡುತ್ತಾ, ನೋವಿನಲ್ಲಿ ನರಳುತ್ತಿರುವವರನ್ನ ನೋಡುತ್ತಿದ್ದರೂ ಒಂದು ನೆಮ್ಮದಿ ಇರುತ್ತಿತ್ತು. ಅಲ್ಲಿ ಯಾರೂ ನಮ್ಮನ್ನ ಅಸಂಬದ್ಧ ಪ್ರಶ್ನೆಗಳನ್ನ ಕೇಳುವವರಿರಲಿಲ್ಲ ಎಂದು, ಅಲ್ಲಿ ಅದೆಷ್ಟೋ ನೋವು, ಭಯ, ಅನಿಶ್ಚಿತತೆ ಇದ್ದರೂ ಕೂಡ ಅವುಗಳ ಮಧ್ಯೆಯೇ ನೆಮ್ಮದಿ ಕೊಡುವಂತಹ ಸಣ್ಣದೇನೋ ಒಂದನ್ನ ಹುಡುಕುತ್ತಿದ್ದೆವಲ್ಲ, ಆ ಕಲೆ ಮೊದಲು ತಿಳಿದೇ ಇರಲಿಲ್ಲ. ಎಷ್ಟೆಲ್ಲಾ ನಲಿವುಗಳ ಮಧ್ಯೆಯೂ ಸಣ್ಣದೇನೋ ಸಮಸ್ಯೆ ಹುಡುಕಿ ಕೊರಗುತ್ತಿದ್ದೆವು. ಆದರೆ ಅದೆಲ್ಲ ಬದಲಾಯಿತು. ಆ ಸಂದರ್ಭದಲ್ಲೇ ಅರ್ಥವಾಗಿದ್ದು, ನೋವಿನಲ್ಲಿರುವವರನ್ನ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಎಷ್ಟು ಹಿಂಸಿಸುತ್ತಿರುತ್ತೇವೆ ಎಂದು. ಅದಕ್ಕೂ ಮೊದಲು ನಮ್ಮ ಆ ವರ್ತನೆಗಳು ಅರ್ಥವೇ ಆಗಿರಲಿಲ್ಲ. ಕ್ಯಾನ್ಸರ್ ಅದನ್ನೂ ಬದಲಾಯಿಸಿತ್ತು!
’ದಾನ’ ಎನ್ನುವುದು ನಮ್ಮ ಪಾಲಿಗೆ ತುಂಬಾ ಸಾಮಾನ್ಯ ಪದವಾಗಿತ್ತು, ಕ್ಯಾನ್ಸರ್’ನ ನಂತರವೇ ಅದರ ಆಳದ ಅರಿವಾಗಿದ್ದು, ದಾನಿಗಳ ಕುರಿತು ವಿಶೇಷ ಗೌರವ ಮೂಡಿದ್ದು. ಕೆಲವರು ರೋಗಿಗಳಿಗೆ ರಕ್ತ ದಾನ ಮಾಡಿದರೆ, ಕೆಲವರು ಹೃದಯವನ್ನು! ಸ್ಟೆಫ್ಯಾನಿ ಜಿಮ್ಮರ್‍ಮನ್ ಸಣ್ಣಕ್ಕಿದ್ದಾಗಲೇ ಕ್ಯಾನ್ಸರ್‍ಗೆ ಒಳಗಾಗಿ ಗುಣಮುಖಳಾದವಳು. ಆದರೆ ಆಕೆ ೩೦ನೇ ವಯಸ್ಸಿಗೆ ಕಾಲಿಟ್ಟಾಗ ಚಿಕ್ಕಂದಿನಲ್ಲಿ ತೆಗೆದುಕೊಂಡಿದ್ದ ರೇಡಿಯೇಷನ್’ನ ಪರಿಣಾಮವಾಗಿ ಹೃದಯದ ತೊಂದರೆಯುಂಟಾಗಿ ’ಹಾರ್ಟ್ ಟ್ರಾನ್ಸ್’ಪ್ಲಾಂಟ್’ ಮಾಡಬೇಕಾಯಿತು. ತನಗೆ ಹೃದಯವನ್ನು ದಾನ ಮಾಡಿದಾಕೆಯನ್ನು ನೆನೆದುಕೊಳ್ಳುತ್ತಾ, “ಆಕೆಯ ಹೃದಯ ಇಂದು ನನ್ನ ಎದೆ ಗೂಡಲ್ಲಿದೆ. ಆಕೆ ಈಗಿಲ್ಲ. ಆಕೆಯ ತಂದೆ ತಾಯಿಗೆ ಮಗಳನ್ನ ಕಳೆದುಕೊಂಡ ನೋವಿದ್ದರೂ ಕೂಡ ಮಗಳ ಹೃದಯ ಇನ್ನೂ ಜೀವಂತವಾಗಿದೆ ಎಂಬ ಸಮಾಧಾನವೊಂದಿದೆ. ಅದಕ್ಕೆ ಈ ಹೃದಯವನ್ನು ಇನ್ನೂ ಹೆಚ್ಚಿನ ಕಾಳಜಿಯೊಂದಿಗೆ ನೋಡಿಕೊಳ್ಳುತ್ತಿದ್ದೇನೆ” ಎಂದಿದ್ದಾಳೆ. ಮೊದಲಾಗಿದ್ದರೆ ’ಹಾರ್ಟ್ ಟ್ರಾನ್ಸ್’ಪ್ಲಾಂಟ್’ ಎನ್ನುವುದು ಕೇವಲ ಒಂದು ವೈದ್ಯಕೀಯ ವಿಧಾನ ಅನಿಸುತ್ತಿತ್ತೇನೋ.. ಈಗ ಬದುಕಿನ ಇಂತಹ ವೈಚಿತ್ರ್ಯವನ್ನು ಇನ್ನೂ ಹೆಚ್ಚು ಅಚ್ಚರಿಯಿಂದ ನೋಡುತ್ತೇವೆ ಹಾಗೂ ಶ್ಲಾಘಿಸುತ್ತೇವೆ.
ಹಿಂದೆಲ್ಲಾ ಗಾಯವಾಗಿದ್ದರೆ, ಯಾವಾಗ ಅದು ವಾಸಿಯಾಗುವುದೋ, ಯಾವಾಗ ಗಾಯ ಮಾಸುವುದೋ ಎಂದು ನೋಡುತ್ತಿದ್ದೆವು. ಆದರೀಗ ಕ್ಯಾನ್ಸರ್ ಮಾಡಿದ ಗಾಯ ಮಾಸಲಾಗದಂತಹ ಕಲೆಯನ್ನು ಉಳಿಸಿಬಿಟ್ಟಿದೆ. ಆದರೂ ನಮಗದರ ಬಗ್ಗೆ ಚಿಂತೆ ಇಲ್ಲ ಬದಲಾಗಿ ಹೆಮ್ಮೆ ಇದೆ! ಬ್ರೆಸ್ಟ್ ಕ್ಯಾನ್ಸರ್’ನ ನಂತರ ಮ್ಯಾಸ್ಟೆಕ್ಟಮಿ ಸರ್ಜರಿಗೆ ಒಳಗಾಗುವ ಹೆಣ್ಣು ಮಕ್ಕಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಆ ಸರ್ಜರಿಯ ನಂತರ ತಮ್ಮನ್ನ, ತಮ್ಮ ದೇಹವನ್ನು ಆ ರೀತಿ ಒಪ್ಪಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ನಮ್ಮತನವನ್ನೇ ಕಳೆದುಕೊಳ್ಳುವಂತಹ ಭಾವ ಅದು ಹೆಣ್ಣು ಮಕ್ಕಳ ಪಾಲಿಗೆ. ಆದರೆ ಕ್ಯಾನ್ಸರ್ ಎಲ್ಲವನ್ನೂ ಕಲಿಸಿ ಬಿಡುತ್ತದೆ. ಕೆಲ ದಿನಗಳವರೆಗೆ ಮಾತ್ರ ಆ ರೀತಿಯ ತೊಳಲಾಟ..! ನಂತರ ಧೈರ್ಯವಾಗಿ ಅದನ್ನ ಒಪ್ಪಿಕೊಳ್ಳುತ್ತಾರೆ. ಉಳಿದವರಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ.
ಬದುಕಿನ ಸಣ್ಣ ಸಣ್ಣ ಘಳಿಗೆಗಳು ತುಂಬಾ ಮಹತ್ವದ್ದಾಗಿ ಬಿಡುತ್ತದೆ. ಕ್ಯಾನ್ಸರ್’ಗೂ ಮೊದಲು ಬದುಕನ್ನ ಅಷ್ಟು ಹತ್ತಿರದಿಂದ ಗಮನಿಸಿಯೇ ಇರಲಿಲ್ಲವೇನೋ ಎಂದೆನಿಸಿ ಬಿಡುತ್ತದೆ. ಮೊದಲೆಲ್ಲಾ ಇಂತಹ ಸಣ್ಣ ಘಳಿಗೆಗಳು ಸಾಕಷ್ಟು ಬಂದು ಹೋಗಿರಬೇಕು ಆದರೆ ನಾವೆಲ್ಲಿ ಕಳೆದು ಹೋಗಿದ್ದೆವೋ ಗೊತ್ತಿಲ್ಲ. ಬದುಕಿದ್ದೇವೆಂಬ ಅನುಭವವಾಗುವುದು ಕೂಡ ಆಗಲೇ ತಾನೇ! ಆ ಸಣ್ಣ ಸಣ್ಣ ಘಳಿಗೆಗಳಲ್ಲಿಯೇ ಬದುಕನ್ನ ಹೆಚ್ಚು ಅಸ್ವಾದಿಸಬಹುದು ಎಂದು ಮೊದಲು ಗೊತ್ತೇ ಇರಲಿಲ್ಲ.
ಅನವಶ್ಯಕ ವಿಷಯಗಳಿಗೆ ಚಿಂತಿಸುವುದಿಲ್ಲ ಈಗ. ಯಾಕೆಂದರೆ ಈಗಿದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ ಎನ್ನುವುದರ ಅರಿವಾಗಿದೆ. ಬದುಕು ಯಾವಾಗ ಬೇಕಾದರೂ ಕೊನೆಯಾಗಬಹುದು ಎಂದು ತಿಳಿದ ನಂತರ ಇರುವಷ್ಟು ಕ್ಷಣವನ್ನು ಹಿತವಾದುದಕ್ಕೆ ಖರ್ಚು ಮಾಡಬೇಕಲ್ಲ. ಬದುಕಲ್ಲಿ ’ಮೌಲ್ಯಯುತ’ ಎನ್ನುವುದರ ವ್ಯಾಖ್ಯಾನ ಬದಲಾಗಿ ಬಿಟ್ಟಿದೆ. ಬದುಕಿನ ಕೆಲ ಕ್ಷಣಗಳು ಎಷ್ಟು ಹತ್ತಿರವಾಗಿ ಬಿಟ್ಟಿರುತ್ತವೆಂದರೆ ನಮ್ಮ ಕೊನೆಯ ಘಳಿಗೆಯವರೆಗೆ ಅದನ್ನ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುವ ಹಾಗೆ. ಕ್ಯಾನ್ಸರ್’ನ ಮೊದಲಾಗಿದ್ದರೆ ಆ ಕ್ಷಣಗಳು ಅಮೂಲ್ಯ ಅಂತ ಅನಿಸುತ್ತಲೇ ಇರಲಿಲ್ಲವೇನೋ! ನೀವು ಬೇಕಾದರೆ ’ನಾನಿವತ್ತು ತುಂಬಾ ಖುಷಿಯಾಗಿದ್ದೇನೆ’ಅಂತ ಹೇಳಿ ನೋಡಿ. ಜನ ’ಯಾಕೆ?” ಅಂತ ಕೇಳ್ತಾರೆ. ನಿಜವಾಗಿಯೂ ಸಂತೋಷವಾಗಿರುವುದಕ್ಕೆ ಕಾರಣಗಳು ಬೇಕಾ? ಕ್ಯಾನ್ಸರ್’ನ ನಂತರ ಸಂತಸವಾಗಿರಲು ನಾವು ಕಾರಣ ಹುಡುಕುವುದಿಲ್ಲ. ಬದುಕು ಸಿಕ್ಕಿದೆ ಅದಕ್ಕಿಂತ ಇನ್ನೇನು ಬೇಕು! ಇನ್ನೊಬ್ಬರಲ್ಲಿನ ಕೊರತೆಗಳನ್ನ ನೋಡುವುದಿಲ್ಲ ಬದಲಾಗಿ ತಮ್ಮ ನ್ಯೂನತೆಗಳನ್ನ ಮೀರಿ ನಿಂತ ಅವರ ಧೈರ್ಯವನ್ನು ನೋಡುತ್ತೇವೆ.
ನಮ್ಮ ಊಹೆಗೂ ಮೀರಿದಷ್ಟು ಪಾಠಗಳನ್ನ, ಅನುಭವಗಳನ್ನ ಕ್ಯಾನ್ಸರ್ ಕೊಟ್ಟಿದೆ. ಹಾಗಂತ ನಾವುಗಳು ಬದುಕಿನ ಬಗ್ಗೆ ಬಹಳ ಸೀರಿಯಸ್ಸಾಗಿ ಯಾವಾಗಲೂ ಯೋಚಿಸುತ್ತಿರುತ್ತೇವೆ ಅಂತೇನಲ್ಲ. ಅಲ್ಪ ಸ್ವಲ್ಪ ಕ್ರೇಜಿನೆಸ್ ಕೂಡ ಬಂದು ಸೇರಿಕೊಂಡಿರುತ್ತದೆ. ಅದೊಂಥರ ಅವಶ್ಯಕವೂ ಹೌದು ಬಿಡಿ! ಬದುಕಿನಲ್ಲಿ ಸ್ವಲ್ಪವಾದರೂ ಕ್ರೇಜಿನೆಸ್ ಇಲ್ಲದಿದ್ದರೆ ನೀರಸವಾಗಿ ಬಿಡುತ್ತದೆ. ನನ್ನ ಗೆಳತಿ ಹೇಳುತ್ತಿರುತ್ತಾಳೆ, “ಕ್ಯಾನ್ಸರ್’ಗೂ ಮೊದಲು ನಿನ್ನ ಎರಡೂ ಸ್ಕ್ರ್ಯೂ ಸರಿ ಇತ್ತು. ಈಗ ಒಂದು ಎಲ್ಲೋ ಉದುರಿ ಹೋದ ಹಾಗಿದೆ” ಅಂತ.
ಮೊನ್ನೆ ಸದ್ಗುರು ಅವರ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು ನೋವಿನ ಬಗ್ಗೆ ಹೇಳುತ್ತಾ, ’ನೋವಿನಲ್ಲಿಯೇ ವ್ಯಕ್ತಿ ಮನುಷ್ಯನಾಗುವುದು, ನೋವಿನಲ್ಲಿಯೇ ಆತ ಪ್ರಬುದ್ಧನಾಗುವುದು’ ಎಂದಿದ್ದರು. ಸಂತಸದಲ್ಲಿಯೂ ಆಗಬೇಕು ಆದರೇನು ನಾವಲ್ಲಿಯೇ ಅರಾಮಾಗಿ ಇದ್ದು ಬಿಡುತ್ತೇವೆ, ಉತ್ತಮರಾಗುವ ಪ್ರಯತ್ನವನ್ನೇ ಪಡುವುದಿಲ್ಲ. ನೋವಿನಲ್ಲಿ ನಾವು ಪ್ರಯತ್ನ ಮಾಡುವಷ್ಟು ಸಂತಸದಲ್ಲಿ ಮಾಡುವುದಿಲ್ಲ. ನೋವಿನಲ್ಲಿ ಅಂತಹ ಅದ್ಯಾವ ಶಕ್ತಿ ಇದೆಯೋ ಏನೋ.! ಕ್ಯಾನ್ಸರ್ ನಮ್ಮನ್ನ ಎಷ್ಟು ಪ್ರಬುದ್ಧರನ್ನಾಗಿ ಮಾಡಿದೆಯೋ ಗೊತ್ತಿಲ್ಲ ಆದರೆ ಬದುಕುವುದನ್ನಂತೂ ಕಲಿಸಿಕೊಟ್ಟಿದೆ. ನಮ್ಮನ್ನ ನಾವು ಕಳೆದುಕೊಂಡು ಹೊಸದಾದ ’ನಾನು’ ಎನ್ನುವುದನ್ನ ಪರಿಚಯಿಸಿಕೊಟ್ಟಿದೆ. ಕ್ಯಾನ್ಸರ್ ಎಷ್ಟೇ ಕಠೋರ, ನಿಷ್ಠುರವಾಗಿದ್ದರೂ, ಎಷ್ಟೇ ನೋವುಗಳನ್ನು ಕೊಟ್ಟರೂ ನಾವು ಊಹಿಸದಿದ್ದ ಬದಲಾವಣೆಯನ್ನು ನಮ್ಮಲ್ಲಿ ತಂದಿದೆ. ಅದಿಲ್ಲದಿದ್ದಿದ್ದರೆ ನಾವಿಂದು ಹೀಗೆ ಇರುತ್ತಲೇ ಇರಲಿಲ್ಲ. ನಮ್ಮ ಕಣ್ತೆರೆಸಿದ್ದಕ್ಕಾಗಿ ಕ್ಯಾನ್ಸರ್’ಗೊಂದು ಕೃತಜ್ಞತೆಯನ್ನ ಅರ್ಪಿಸಲೇಬೇಕು!
Facebook ಕಾಮೆಂಟ್ಸ್