ಹೆತ್ತವ್ವ ಹೆಚ್ಚು ನೆನಪಾಗಳು
ಅಪ್ಪ ಮರವೆಯೆಂಬಲ್ಲಿ ಲುಪ್ತ
ಅಕ್ಕ ಅಣ್ಣ ತಮ್ಮ ತಂಗಿಯರೆಲ್ಲ
ಚಿತ್ತದಲ್ಲಿ ನಿರ್ಭಾವ ಸಂಗಿಗಳು
ಹಿತ ಶತ್ರುಗಳು ಬಾಂಧವರಂತೆಯೇ ಸ್ನೇಹಿತರು!
ಹಸುರಿನೆಲೆಗಳ ತರಿದು
ಹಣ್ಣ ಮರಗಳ ಕಡಿದು
ಅಗಿದುಗಿದು ಫಸಲಿಗೆ ಮುನ್ನ
ಜೀರ್ಣೋಭವವಾಗಿಸಿ
ಪಂಚ ಭೂತಗಳಲ್ಲೂ
ವಾಕರಿಸಿ ಕೇಳಿಸಿದ್ದೇನೆ
ನನ್ನ ತೆವಲಿನ ಕೇಳಿ, ನರ್ತನದ ನುಲಿ
ಪುಟ್ಟ ಕುಕ್ಕುಟದೊಂದಿಗೆ ಆಟ
ಮರಿ ಕುರಿಯೊಟ್ಟಿಗೆ ಮುದ್ದಾಟ
ಆಡಿನೊಂದಿಗೆ ಆಮೋದ
ಈಜುವ ಮೀನಿಗೆ ಆಸೆ…
ಬಲಿತ ಅವೆಲ್ಲವುಗಳ ಬಲಿಕೊಟ್ಟು
ನಾಲಿಗೆ ಚಪಲಕ್ಕೆ ಹೊಟ್ಟೆ ತಣಿವಿಗೆ
ಕಂಠ ಜಠರ ಕೈಕಾಲು ಸೀಳಿ ಬೆಂಕಿಗಿಟ್ಟು
ತಾಟಿನಿಂದ ಚಪ್ಪರಿಸಿ ತೇಗಿದ್ದೂ
ನಾನೆ ದೀರ್ಘ- ಕಾಲದವರೆಗೂ
ಉದಹರಿಸಲು, ಬೆದರಿಸಲು ಹೆಕ್ಕಿ ಕುಕ್ಕಿದ್ದೇನೆ
ಬಡತನವೆಂಬ ಅಳಲು; ಧರ್ಮವೆಂಬ ಬಿಳಲು
ನನ್ನಿಚ್ಛೆಯ ಆಹಾರದ ಹಕ್ಕು ಯಾರಿಲ್ಲ ಕೀಳಲು!
ಇನ್ನೂ ಸುತ್ತಲೂ ಉಳಿದಿದ್ದಾವೆ
ಹಸಿರು ಚಾಚಿದ, ನಾಲಗೆಗೆ ಮುಟ್ಟಿಸದ
ಗಿಡ ಮರ ಬಳ್ಳಿ ಹೂ ಹಣ್ಣು ಕಾಯಿ
ಗಿರಕಿಯ ಸತಿ ಸುತ ಸ್ನೇಹಿ ಕೃತಜ್ಞ ನಾಯಿ
ಕಾಣದ ಕೋಗಿಲೆ, ಹಾರುವ ರಣ ಹದ್ದು!
ದಯವೇ ಇರುವ ಧರ್ಮಗಳ ಪ್ರವಚನಕ್ಕೆ
ಸಜ್ಜಾದ ನಾಲಿಗೆ; ಖೊಳ್ಳನೆ ನಗುವ ಬುದ್ಧಿ
ನಾಚಿಕೆಗೇಡರಿಯದ ಮನಸ್ಸು ನನ್ನ ಧನಸ್ಸು!
ಕಟ್ಟಿ ಬೆಳೆಸಿದ ಕಾಯ ದೃಢತೆ
ಕಳೆದುಹೋಗುವ ಭಯ ಕಾಡುವಾಗಲೆ
ಹೆಕ್ಕಬೇಕು ಸೇವಾ ವೈದ್ಯರ
ಎದೆಗೆ ಅಮ್ಲಜನಕದ ಕೊರತೆ ನೀಗಿ
ಧಮನಿಗಳಲ್ಲಿ ರಕ್ತ ಓತಪ್ರೋತ ತುಂಬಿ
ಹರಿಸುವವರ ಸೆಳೆದು ನಾನುಳಿಯಬೇಕು
ನಿಮ್ಮ ಕರುಳ ಹಿಂಡುವಂಥ
ನನ್ನಕೂಗು ಕೇಳಿ ಅಜ್ಞರೆ!
ಕರುಣೆ ಹರಿಸಿ ಉಳಿಸಿ ಈ ಕೃತಘ್ನನ ನಾಲಿಗೆ
ಜಠರಕ್ಕಂಟಿದ ಮಾಳಿಗೆ
ಸುರಿಯಿರಿ ಆಜ್ಯ ದುರಾಸೆಗಂಟಿದ ಬಾಳಿಗೆ
– ಅನಂತ ರಮೇಶ್
anantharamesha@gmail.com
Facebook ಕಾಮೆಂಟ್ಸ್