X

ಇತಿಹಾಸದೊಂದು ಸಣ್ಣ ತುಣುಕು: ಕರ್ನಲ್ ಹಿಲ್

ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ ನಿಮಗೊಂದು ತಿರುವು ಸಿಗುತ್ತದೆ. ಅಲ್ಲಿ ಬಲಭಾಗದಲ್ಲಿ ಒಂದು ಸಣ್ಣ ದಿಬ್ಬವಿದೆ. ಹಿಂದೆ ಐದಾರು ಎಕರೆ ಹರಡಿಕೊಂಡಿದ್ದ ಆ ಜಾಗ ಈಗ ಹಲವು ಅಗೆತ-ಬಗೆತಗಳಿಗೆ ಪಕ್ಕಾಗಿ ಒಂದೂವರೆ ಎಕರೆಗೆ ಇಳಿದಿದೆ. ಆ ದಿಬ್ಬದ ಬಹುಭಾಗವನ್ನು ಜೆಸಿಬಿಯ ಲೋಹದ ಹಲ್ಲುಗಳು, ರಸ್ತೆ ಅಗಲಿಸಲೆಂದು, ಕೆರೆದು ಪುಡಿಗುಟ್ಟಿವೆ. ಹಾಗೆ ಕಾಮಗಾರಿ ನಡೆಯುತ್ತಿದ್ದಾಗಲೇ ಅಲ್ಲಿಂದ ಒಂದು ಬಂಡೆ ಕೆಳಗೆ ಉರುಳಿ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಕೆಎಸ್‍ಆರ್‍ಟಿಸಿ ಬಸ್ಸಿನ ಮೇಲೆ ಬಿದ್ದದ್ದೂ ಉಂಟು. ಆ ದುರಂತದಲ್ಲಿ ಪುಣ್ಯವಶಾತ್ ಯಾರೂ ಸಾಯುವ ಪ್ರಸಂಗ ಬರಲಿಲ್ಲ! ದಿಬ್ಬದ ತುದಿಯಲ್ಲಿ ಒಂದು ಸ್ಮಾರಕ ತಲೆ ಎತ್ತಿ ನಿಂತಿದೆ. ಸುಮಾರು ಮೂವತ್ತು ಮೀಟರ್ ಎತ್ತರವಿರುವ ಈ ಸ್ಮಾರಕವನ್ನು ಸ್ಥಳೀಯರು ಕರ್ನಲ್ ಹಿಲ್ ಎಂದು ಕರೆಯುತ್ತಾರೆ. ಈ ಸ್ಮಾರಕದ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರು ಹಿಲ್ ಅನ್ನು ಗುಡ್ಡವೆಂದು ಕನ್ನಡೀಕರಿಸಿ, ಕರ್ನಲ್ ಗುಡ್ಡ ಎಂಬ ನಾಮಕರಣ ಕೂಡ ಮಾಡಿದ್ದಾರೆ. ಯಾರು ಈ ಕರ್ನಲ್? ಅವನಿಗೇಕೆ ಇಲ್ಲಿ ಸ್ಮಾರಕ ನಿರ್ಮಿಸಲಾಯಿತು? ಹುಡುಕುತ್ತ, ಕೆದಕುತ್ತ ಹೋದರೆ ಇತಿಹಾಸ ನಮ್ಮನ್ನು ಇನ್ನೂರು ವರ್ಷಗಳಾಚೆಗೆ ಸೆಳೆದುಕೊಂಡು ಹೋದೀತು.

ಕರ್ನಲ್ ಹಿಲ್ ಎಂದು ಕರೆಯಲ್ಪಡುವ ಈ ಸ್ಮಾರಕವನ್ನು ಕಟ್ಟಿದ್ದು 1845ರಲ್ಲಿ. ಇದು ಬ್ರಿಟಿಷ್ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಕೆಲಸ ಮಾಡುತ್ತಿದ್ದ ಕ್ಲೆಮೆಂಟ್ ಡೆಲ್ವಿಸ್ ಹಿಲ್‍ನ ಸ್ಮರಣಾರ್ಥ ಕಟ್ಟಿರುವ ಸ್ತಂಭ. ಕ್ಲೆಮೆಂಟ್ ಇಂಗ್ಲೆಂಡಿನ ಶ್ರೋಪ್‍ಷೈರ್ ಎಂಬ ಪ್ರಾಂತ್ಯದ ಪ್ರೀಸ್ ಎಂಬ ಊರಲ್ಲಿ 1781ರ ಡಿಸೆಂಬರ್ 6ರಂದು ಹುಟ್ಟಿದ ಎಂದು ಹೇಳುತ್ತಾರೆ. ಆದರೆ, ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಅಧಿಕಾರಿಗಳ ಅಧಿಕೃತ ದಾಖಲೆಯನ್ನು ಕಾಪಿಡುವ ಉದ್ದೇಶದಿಂದ ಹೊರ ತರಲಾಗುತ್ತಿದ್ದ ಜಂಟ್ಲ್‍ಮೆನ್ಸ್ ಮ್ಯಾಗಝಿನ್‍ನ 177ನೇ ಸಂಪುಟದಲ್ಲಿ, ಆತ ಹುಟ್ಟಿದ್ದು 1782ರ ಎಪ್ರೀಲ್ 16 ಎಂದು ಬರೆಯಲಾಗಿದೆ. ಈ ಎರಡರಲ್ಲಿ ಯಾವುದು ಸರಿಯಾದ ಜನ್ಮದಾಖಲೆ ಎಂಬುದನ್ನು ತಿಳಿಸಿ ಹೇಳುವವರು ಈಗ ಯಾರಿದ್ದಾರು! ಏನೇ ಇರಲಿ, ಕ್ಲೆಮೆಂಟ್ ಹುಟ್ಟಿದ್ದು ಒಂದು ದೊಡ್ಡ ಭೂಮಾಲಿಕರ ಕುಟುಂಬದಲ್ಲಿ. ಅವನ ಅಜ್ಜ ಸರ್ ರೋಲಂಡ್ ಹಿಲ್, ಇಂಗ್ಲೆಂಡಿನ ಹಾಕ್‍ಸ್ಟೋನ್ ಎಂಬ ಊರಿನ ಬ್ಯಾರನೆಟ್ ಆಗಿದ್ದವನು. ಆ ಕಾಲದಲ್ಲಿ ಬ್ಯಾರನೆಟ್ ಎಂದರೆ ಬ್ರಿಟನ್ನಿನ ವರ್ಗಶ್ರೇಣಿಯಲ್ಲಿ ನೈಟ್ ಎಂಬ ಪದವಿಗಿಂತ ಮೇಲ್ಮಟ್ಟದಲ್ಲಿದ್ದ ಒಂದು ಗೌರವ, ಹುದ್ದೆ. ಇದನ್ನು ಭಾರತದ ಆ ಕಾಲದ ಭೂಮಾಲಿಕರು ಮತ್ತು ಸಾಹುಕಾರರಿಗೆ ಸಮಾನವಾಗಿದ್ದ ಸ್ಥಾನ ಎಂದು ಹೇಳಬಹುದು. ಬ್ಯಾರನೆಟ್ ಆದವರು ತಮ್ಮ ಹೆಸರಿನ ಪ್ರಾರಂಭದಲ್ಲಿ ಸರ್ ಎಂಬ ಉಪಾಧಿಯನ್ನು ಸೇರಿಸಿಕೊಳ್ಳಬಹುದಾಗಿತ್ತು. ರೋಲಂಡ್ ಹಿಲ್ ಅವರ ಮಗ ಜಾನ್ ಹಿಲ್ ಕೂಡ (ಶ್ರೂಸ್‍ಬರಿ ಎಂಬ ಪ್ರಾಂತ್ಯದ) ಬ್ಯಾರನೆಟ್ ಆಗಿದ್ದುದರಿಂದ ಅವರೂ ತಮ್ಮ ಹೆಸರಲ್ಲಿ ಸರ್ ಉಪಾಧಿಯನ್ನು ಸಿಕ್ಕಿಸಿಕೊಂಡಿದ್ದರು. ಸರ್ ಜಾನ್ ಹಿಲ್ ಅವರ ಮೊದಲ ಮಗ ಲಾರ್ಡ್ ಹಿಲ್, ಬ್ರಿಟಿಷ್ ಸೇನೆಯಲ್ಲಿ ಜನರಲ್ ಹುದ್ದೆಗೇರಿದ್ದ ಸೇನಾನಿ. ಅವರ ತಮ್ಮ ಹಾಗೂ ಜಾನ್ ಹಿಲ್‍ರ ಆರನೇ ಮಗನೇ ಕ್ಲೆಮೆಂಟ್ ಹಿಲ್.

ದೊಡ್ಡ ಸಾಹುಕಾರರ ಕುಟುಂಬದಲ್ಲಿ ಹುಟ್ಟಿ ಬಂದದ್ದರಿಂದ ಕ್ಲೆಮೆಂಟ್‍ನ ಬಾಲ್ಯದ ಬದುಕು ಆರಾಮದಾಯಕವಾಗಿತ್ತು ಎನ್ನಬಹುದೇನೋ. ಆತ ಪ್ರಾಥಮಿಕ-ಪ್ರೌಢ ವಿದ್ಯಾಭ್ಯಾಸ ಮುಗಿಸಿಕೊಂಡು ತನ್ನ 23ನೇ ವಯಸ್ಸಿನಲ್ಲಿ ಬ್ರಿಟನ್ ರಾಜವಂಶದ ರಾಯಲ್ ಹಾರ್ಸ್ ಗಾಡ್ರ್ಸ್ ಎಂಬ ಅಶ್ವದಳವನ್ನು ಸೇರಿಕೊಂಡ. ಕ್ಲೆಮೆಂಟ್ ಸಾಹಸಿ, ಕೆಚ್ಚೆದೆಯ ವೀರ, ಧೈರ್ಯಶಾಲಿ. ಅಶ್ವದಳವನ್ನು ಸೇರಿದ ಒಂದು ವರ್ಷದಲ್ಲೇ (1806ರಲ್ಲಿ) ಅವನಿಗೆ ಲೆಫ್ಟಿನೆಂಟ್ ಪದವಿ ಸಿಕ್ಕಿತು. ಅದಾಗಿ ಎರಡು ವರ್ಷದಲ್ಲಿ ಆತನನ್ನು ಅಶ್ವದಳದ ಅಧಿಕಾರಿಯಾಗಿ ಪೋರ್ಚುಗಲ್ ದೇಶಕ್ಕೆ ಕಳಿಸಲಾಯಿತು. ದಕ್ಷಿಣ ಫ್ರಾನ್ಸ್’ನಲ್ಲಿ ಆಗಷ್ಟೇ ಪೆನಿನ್‍ಸುಲಾರ್ ಯುದ್ಧ ಪ್ರಾರಂಭವಾಗಿತ್ತು. ಒಂದೆಡೆ ಫ್ರೆಂಚ್ ಸರ್ವಾಧಿಕಾರಿ ನೆಪೋಲಿಯನ್ ಬೋನಪಾರ್ಟೆ; ಇನ್ನೊಂದೆಡೆ ಸ್ಪೇನ್, ಇಂಗ್ಲೆಂಡ್ ಮತ್ತು ಪೋರ್ಚುಗಲ್ ದೇಶಗಳ ಮಿತ್ರಕೂಟ – ಇವೆರಡೂ ಬಣಗಳು ಯುರೋಪಿನ ಪ್ರಭುತ್ವಕ್ಕಾಗಿ ಯುದ್ಧ ಪ್ರಾರಂಭಿಸಿದ್ದವು. 1808ರ ಮೇ 2ನೇ ತಾರೀಖು ಪ್ರಾರಂಭವಾದ ಈ ಕದನ ಬಿಟ್ಟೂ ಬಿಡದೆ ಆರು ವರ್ಷಗಳ ಕಾಲ ನಡೆದು 1814ರ ಎಪ್ರೀಲ್ 17ರಂದು ಮಿತ್ರಕೂಟದ ವಿಜಯದೊಂದಿಗೆ ಮುಕ್ತಾಯವಾಯಿತು. ಈ ಆರು ವರ್ಷಗಳ ಅವಧಿಯಲ್ಲಿ ಕ್ಲೆಮೆಂಟ್ ಅಶ್ವದಳದ ವೀರಯೋಧನಾಗಿ ಕೆಲಸ ಮಾಡಿದ. 1811ರ ಎಪ್ರೀಲ್‍ನಲ್ಲಿ ಅವನನ್ನು ಕ್ಯಾಪ್ಟನ್ ಆಗಿಯೂ ಅದೇ ವರ್ಷದ ಡಿಸೆಂಬರ್‍ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿಯೂ ಬಡ್ತಿ ಕೊಟ್ಟು ಗೌರವಿಸಲಾಯಿತು.

1814ರಲ್ಲಿ ಪೆನಿನ್‍ಸುಲಾರ್ ಯುದ್ಧವೇನೋ ಮುಗಿಯಿತು, ಆದರೆ ಅದರ ಮರುವರ್ಷವೇ ನೆಪೋಲಿಯನ್ ಮತ್ತೆ ತೊಡೆತಟ್ಟಿ ಸವಾಲೊಡ್ಡುತ್ತ ನಿಂತಿದ್ದ! ಯುರೋಪಿನಲ್ಲಿ ಪ್ರಾಬಲ್ಯ ಮೆರೆಯಲು ಫ್ರೆಂಚರೂ ಬ್ರಿಟಿಷರೂ ಹಲವು ದಶಕಗಳಿಂದ ನಡೆಸಿದ್ದ ಗುದ್ದಾಟಕ್ಕೆ ಅಂತಿಮ ತೆರೆ ಬೀಳುವ ಕಾಲ ಕೊನೆಗೂ ಸನ್ನಿಹಿತವಾಯಿತು. 1815ರ ಜೂನ್ 18, ಭಾನುವಾರ, ಬ್ರಿಟಿಷ್ ಮತ್ತು ಫ್ರೆಂಚ್ ಸೇನೆಗಳು ಈಗಿನ ಬೆಲ್ಜಿಯಂನಲ್ಲಿರುವ ವಾಟರ್‍ಲೂ ಎಂಬ ಜಾಗದಲ್ಲಿ ಎದುರೆದುರಾದವು. ಆ ಒಂದು ದಿನದ ನಿರ್ಣಾಯಕ ಕಾಳಗದಲ್ಲಿ ಕ್ಲೆಮೆಂಟ್, ಬ್ರಿಟಿಷ್ ಸೇನೆಯ ಅಶ್ವದಳದ ಪ್ರಮುಖನಾಗಿ ಹೋರಾಡಿದ. ಕಾಳಗದಲ್ಲಿ ಅವನಿಗೆ ತೊಡೆಯ ಭಾಗಕ್ಕೆ ಗಂಭೀರವಾದ ಗಾಯವೂ ಆಯಿತು. ಆದರೂ ಎದೆಗುಂದದೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಕ್ಲೆಮೆಂಟ್, ಬ್ರಿಟಿಷ್ ಸೇನೆ ವಿಜಯಿಯಾಗಲು ಕಾರಣರಾದ ನೂರಾರು ಕೆಚ್ಚೆದೆಯ ಯೋಧರ ಪೈಕಿ ಪ್ರಮುಖನಾಗಿದ್ದ. ಆಗಿನ್ನೂ ಆತನಿಗೆ 33ರ ಹರೆಯವಷ್ಟೇ. ಅಲ್ಲಿಂದ ಮುಂದಕ್ಕೆ ಕ್ಲೆಮೆಂಟ್ ಬ್ರಿಟನ್ನಿನ ಅಶ್ವದಳದಲ್ಲಿ ಹಲವು ವರ್ಷ ನಿಷ್ಠೆಯಿಂದ ದುಡಿದ. ಹಲವು ಯೋಧರನ್ನು ತಯಾರು ಮಾಡಿದ. 1827ರಲ್ಲಿ ಅವನಿಗೆ ಕರ್ನಲ್ ಆಗಿ ಬಡ್ತಿ ಕೊಡಲಾಯಿತು. ಅದಾಗಿ ಹತ್ತು ವರ್ಷಗಳಲ್ಲಿ ಆತ ಮೇಜರ್ ಜನರಲ್ ಆದ. 1841ರ ನವೆಂಬರ್ 24ರಂದು ಆತ ಭಾರತಕ್ಕೆ ಬಂದಿಳಿದು ಬ್ರಿಟಿಷರ ಮದ್ರಾಸ್ ಸರಕಾರದ ಮೈಸೂರು ಪ್ರಾಂತ್ಯದ ಮುಖ್ಯ ಸೈನ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ.

ಆಗಿನ ಕಾಲದಲ್ಲಿ ಹೊನ್ನಾವರವಿನ್ನೂ ಸ್ವತಂತ್ರ ರಾಜರ ಕೈಯಲ್ಲೇ ಇತ್ತು. ಹೊನ್ನಾವರ, ಭಟ್ಕಳಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರೆ ಪಶ್ಚಿಮ ಕರಾವಳಿಯ ಉದ್ದಕ್ಕೂ ತಮ್ಮ ಪ್ರಾಬಲ್ಯ ಸ್ಥಾಪಿಸಬಹುದು ಎಂಬುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಅಲ್ಲದೆ ಗೋವೆಯನ್ನು ಆಳುತ್ತಿದ್ದ ಪೋರ್ಚುಗೀಸರನ್ನು ಬಲಹೀನರನ್ನಾಗಿಸಬೇಕಾದರೆ ಹೊನ್ನಾವರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದು ಬ್ರಿಟಿಷರಿಗೆ ಅಗತ್ಯವಾಗಿತ್ತು. ಅದಕ್ಕಾಗಿ ಈಸ್ಟ್ ಇಂಡಿಯಾ ಸೇನೆ 1845ರ ಜನವರಿಯಲ್ಲಿ ಹೊನ್ನಾವರ ರಾಜ್ಯದ ಮೇಲೆ ಏರಿ ಹೋಯಿತು. ಆದರೆ ಅಲ್ಲಿನ ಸ್ಥಳೀಯ ರಾಜರ ಪ್ರತಿರೋಧವನ್ನು ತಡೆಯಲು ಅದಕ್ಕೆ ಆಗಲಿಲ್ಲ. ಎರಡು ಬಣಗಳ ನಡುವೆ ನಡೆದ ಕಾಳಗದಲ್ಲಿ ಕೊನೆಗೆ ಬ್ರಿಟಿಷರ ಹಲವು ಯೋಧರು ಜೀವ ತೆರಬೇಕಾಯಿತು. ಸೇನೆಯ ಮುಂದಾಳುತ್ವ ವಹಿಸಿದ್ದ 62 ವರ್ಷದ ಕ್ಲೆಮೆಂಟ್ ಹಿಲ್, ಈ ಯುದ್ಧದಲ್ಲಿ ಭಾರತೀಯ ಸೈನಿಕರ ಕೈಯಲ್ಲಿ ಹತನಾಗಬೇಕಾಯಿತು. ಪರಂಗಿಗಳ ಪಾಲಿಗೆ ದುರಂತವೆನ್ನಬಹುದಾದ ಆ ಘಟನೆ ನಡೆದದ್ದು ಜನವರಿ 20ರಂದು. ವಾಟರ್‍ಲೂ, ಪೆನಿನ್‍ಸುಲಾರ್ ಕಾಳಗಗಳಲ್ಲಿ ಭಾಗವಹಿಸಿದ್ದ ಮತ್ತು ಮೇಜರ್ ಜನರಲ್ ಹುದ್ದೆಗೇರಿದ್ದ ಒಬ್ಬ ಹಿರಿಯ ಪರಂಗಿ ಅಧಿಕಾರಿ ಭಾರತದ ಒಂದು ಸಣ್ಣ ಸಂಸ್ಥಾನದಲ್ಲಿ ನಡೆದ ಕಾಳಗದಲ್ಲಿ ತೀರಿಕೊಂಡನೆಂಬುದು ನಿಜಕ್ಕೂ ಅಚ್ಚರಿಯ ವಿಷಯ. ಇದು ಹೇಗಾಯಿತು, ಆ ಕಾಲದಲ್ಲಿ ಸೆಣಸಿದ್ದ ಭಾರತೀಯ ರಾಜ್ಯ ಯಾವುದು, ಯಾರು ಕ್ಲೆಮೆಂಟ್‍ನನ್ನು ಕೊಂದರು, ಆ ಯುದ್ಧದ ನಂತರ ಏನೆಲ್ಲ ಬದಲಾವಣೆಗಳಾದವು ಎಂಬುದು ಮಾತ್ರ ಕಾಲಗರ್ಭದಲ್ಲಿ ಹೂತು ಹೋಗಿರುವ ಸಂಗತಿ. ಆತನನ್ನು ಕೊಂದದ್ದು ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಚೆನ್ನಭೈರಾದೇವಿ ಎಂಬ ಒಂದು ಐತಿಹ್ಯವೇನೋ ಇದೆ. ಆದರೆ ಹದಿನಾರನೇ ಶತಮಾನದಲ್ಲಿದ್ದ ಆ ರಾಣಿ, ಮೂರು ಶತಮಾನಗಳಷ್ಟು ಮುಂದೆ ಬಂದು ಕ್ಲೆಮೆಂಟ್‍ನ ತಲೆಯುರುಳಿಸುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾಗುತ್ತದೆ.

ಕ್ಲೆಮೆಂಟ್‍ನನ್ನು ಕಳೆದುಕೊಂಡ ಬ್ರಿಟಿಷ್ ಸೇನೆ ತತ್ತರಿಸಿತು. ಗಲಿಬಿಲಿಗೊಂಡಿತು. ಬಹುಶಃ ಯುದ್ಧ ಅಲ್ಲಿಗೇ ನಿಂತು ಹೋಯಿತೆಂದು ಕಾಣುತ್ತದೆ. ತೀರಿಕೊಂಡ ಎರಡು ದಿನಗಳ ನಂತರ ಕ್ಲೆಮೆಂಟ್‍ನನ್ನು ಹೊನ್ನಾವರದಲ್ಲೇ ಮಣ್ಣು ಮಾಡಲಾಯಿತು. ಆತನ ನೆನಪಿಗಾಗಿ ಆ ಪ್ರದೇಶದ ಒಂದು ದಿಣ್ಣೆಯ ಮೇಲೆ ನೆನಪಿನ ಸ್ತಂಭವನ್ನು ಕಟ್ಟಲಾಯಿತು. “ಕ್ಲೆಮೆಂಟ್ ಸಾಹೇಬರು ನಮ್ಮ ಪ್ರೀತಿಪಾತ್ರರು. ಅವರು ಅದೆಷ್ಟು ವೀರರಾಗಿದ್ದರೋ ಅಷ್ಟೇ ವಿಶಾಲಹೃದಯಿಗಳೂ ಆಗಿದ್ದರು. ತನ್ನ ಸೈನಿಕದಳದ ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. 14ನೇ ಮದ್ರಾಸ್ ನೇಟಿವ್ ಇನ್‍ಫೆಂಟ್ರಿ ದಳದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಕ್ಲೆಮೆಂಟ್ ಹಿಲ್ ಅವರು ಗೇರುಸೊಪ್ಪೆ ಬಳಿಯಲ್ಲಿ ನಡೆದ ಯುದ್ಧದಲ್ಲಿ ಹತರಾದರು” ಎಂದು ಕ್ಲೆಮೆಂಟ್‍ನ ಹುಟ್ಟೂರು ಪ್ರೀಸ್‍ನ ಸಂತ ಚಾಡ್‍ನ ಚರ್ಚ್‍ನಲ್ಲಿ ಒಂದು ಶಿಲಾಫಲಕವನ್ನು ಬರೆಸಿಡಲಾಗಿದೆ. ಅಂಥವೇ ಸಾಲುಗಳನ್ನು ಹೊನ್ನಾವರದಲ್ಲಿರುವ ಆತನ ನೆನಪಿನ ಸ್ತಂಭದಲ್ಲೂ ಕೆತ್ತಲಾಗಿದೆ. ಕ್ಲೆಮೆಂಟ್ ಜೊತೆ ಒಂದು ನಾಯಿಯಿತ್ತು. ಅದು ತನ್ನ ಯಜಮಾನನನ್ನು ಎಷ್ಟು ಪ್ರೀತಿಸುತ್ತಿತ್ತೆಂದರೆ ಆತನ ಮರಣಾನಂತರ ಎಲ್ಲೂ ಹೋಗದೆ ಸಮಾಧಿ ಪಕ್ಕವೇ ಆಮರಣಾಂತ ಉಪವಾಸ ಕೂತು ತೀರಿಕೊಂಡಿತು. ನಂತರ ಅದರ ಕಳೇಬರವನ್ನು ಕೂಡ ಕ್ಲೆಮೆಂಟ್ ಗೋರಿಯ ಪಕ್ಕದಲ್ಲೇ ಹೂಳಲಾಯಿತು ಎಂಬ ಕತೆ ಇದೆ. ಅದು ಸುಳ್ಳೋ ನಿಜವೋ ಎಂದು ಪರೀಕ್ಷಿಸಲು ಅನುಕೂಲವಾಗುವ ದಾಖಲೆಗಳೊಂದೂ ಈಗಿಲ್ಲ.

ಭಾರತೀಯರಿಗೆ ಇತಿಹಾಸಪ್ರಜ್ಞೆ ಇಲ್ಲ ಎಂಬ ಸಾಮಾನ್ಯ ದೂರುಂಟು ನೋಡಿ! ಇತಿಹಾಸದ ಸ್ಮಾರಕಗಳ ಬಗ್ಗೆ ನಮ್ಮವರ ದಿವ್ಯ ಉಪೇಕ್ಷೆ ಜಗದ್ವಿಖ್ಯಾತ. ನಮ್ಮ ದೇಶದ ನಾನಾ ಭಾಗಗಳಲ್ಲಿ ಇತಿಹಾಸದ ತುಣುಕುಗಳು ಮಳೆ ಬಿಸಿಲು ಗಾಳಿ ದೂಳಿಗೆ ಪಕ್ಕಾಗಿ ಅನಾಥವಾಗಿ ನಿಂತಿವೆ. ಅವನ್ನು ಸಂರಕ್ಷಿಸಬೇಕು, ಮುಂದಿನ ಪೀಳಿಗೆಗೆ ದಾಟಿಸಬೇಕು ಎಂಬ ಪ್ರಜ್ಞೆ ನಮ್ಮಲ್ಲಿ ನಾಸ್ತಿ. ಭಾರತೀಯರ ಶೌರ್ಯ-ಸಾಹಸಗಳ ಪ್ರತೀಕವಾಗಬೇಕಿದ್ದ ಕ್ಲೆಮೆಂಟ್ ಹಿಲ್ ಸ್ತಂಭದ ವಿಚಾರದಲ್ಲೂ ನಮ್ಮವರು ದಿವ್ಯ ಅನಾಸಕ್ತರು. ಭಾರತೀಯ ಪುರಾತತ್ತ್ವ ಇಲಾಖೆ ಕ್ಲೆಮೆಂಟ್‍ನ ಸಮಾಧಿಯನ್ನು ಒಂದು ಟವರ್ ಎಂದು ಗುರುತು ಹಾಕಿಕೊಂಡಿದೆ. ಟವರ್ ಮತ್ತು ಐತಿಹಾಸಿಕ ಮಹತ್ವವಿರುವ ಸ್ಮಾರಕ – ಇವುಗಳಿಗಿರುವ ವ್ಯತ್ಯಾಸವೇನೆಂದರೆ, ಯಾವುದಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿ ಬಂದಾಗ, ಟವರ್‍ಗಳನ್ನು ಎರಡನೆ ಯೋಚನೆಯಿಲ್ಲದೆ ಹೊಡೆದುರುಳಿಸಲು ಪುರಾತತ್ತ್ವ ಇಲಾಖೆ ಅನುಮತಿ ಕೊಡುತ್ತದೆ! ಈಗ ಕ್ಲೆಮೆಂಟ್ ಹಿಲ್ ಸ್ತಂಭದ ತೀರಾ ಹತ್ತಿರದಲ್ಲಿಯೇ ಖಾಸಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೆಸಿಬಿ ಯಂತ್ರಗಳು ದಿಣ್ಣೆಯನ್ನು ಕೊರೆಕೊರೆದು ಹಾಕಿವೆ. ಅವುಗಳ ಉದ್ದೇಶ ಸ್ಪಷ್ಟ, ನಾವು ಸ್ಮಾರಕವನ್ನು ಮುಟ್ಟುವುದಿಲ್ಲ, ಆದರೆ ಅದರ ಬುಡದ ಮಣ್ಣನ್ನೆಲ್ಲ ಕೊರೆದು ತೆಗೆಯುತ್ತೇವೆ. ಮುಂಗಾರು ಮಳೆಗೆ ಮಣ್ಣು ಕುಸಿದು ಸ್ತಂಭ ಉರುಳಿಬಿದ್ದರೆ ನಮ್ಮ ಕನಸು ಈಡೇರಿದಂತೆ! ಸ್ತಂಭದ ಚೂರುಗಳನ್ನು ಎತ್ತಿ ಬದಿಗೆ ಹಾಕಿ ನಮ್ಮ ಅಗಲೀಕರಣದ ಕೆಲಸವನ್ನು ಮುಂದುವರಿಸುತ್ತೇವೆ.

ಮರವಿದ್ದರೆ ರಸ್ತೆಯನ್ನೇ ಪಕ್ಕಕ್ಕೆ ತಿರುಗಿಸುವ ವಿದೇಶೀಯರಿಗೂ ರಸ್ತೆಗಾಗಿ ಚಾರಿತ್ರಿಕ ಸ್ಮಾರಕಗಳನ್ನು ಹೊಡೆದುರುಳಿಸುವ ನಮ್ಮ ಧೂರ್ತ ವ್ಯವಸ್ಥೆಗೂ ಅದೆಂಥ ಅಗಾಧ ವ್ಯತ್ಯಾಸ!

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post