X

‘ಸಂಸ್ಕೃತ’ ಎಂದೊಡೆ ನಿಮಗೆ ಥಟ್ಟನೆ ನೆನಪಾಗುವುದೇನು!?

ಈ ಪ್ರಶ್ನೆಯ ಪ್ರಸ್ತುತತೆ ಕುರಿತು ಮಾತನಾಡುವ ಮುನ್ನ ಇತ್ತೀಚೆಗೆ ನಡೆದ ಕೆಲವೊಂದು ವಿದ್ಯಮಾನವನ್ನು ನಿಮ್ಮ ಮುಂದಿಡುತ್ತೇನೆ.

ಮಾಗಡಿಯ ಗೌರವಾನ್ವಿತ(?) ಶಾಸಕ ಬಾಲಕೃಷ್ಣ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಬೆಂಬಲಿಗರೊಡನೆ ಪೊಲೀಸ್ ಠಾಣೆಗೆ ನುಗ್ಗಿ, ಸಿಪಿಐನೊಂದಿಗೆ ವಾಗ್ವಾದ ನಡೆಸಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡುವಂತಹ ‘ಮಾದರಿ’ ಕೆಲಸವೊಂದನ್ನು  ಮಾಡಿದ ವಿಚಾರ ಗೊತ್ತಿರುವಂತದ್ದೆ. ಹೀಗೆ ಜನಪ್ರತಿನಿಧಿಯೊಬ್ಬ ಕರ್ತವ್ಯನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳನ್ನು ಬಳಸಿದುದರ ಕುರಿತು ರಾಜ್ಯದ ನಂ.1 ನ್ಯೂಸ್ ಚಾನೆಲ್ ಮಾಡಿದ ವಿಶೇಷ ಕಾರ್ಯಕ್ರಮಕ್ಕೆ ನೀಡಲಾದ ಶೀರ್ಷಿಕೆ ಏನು ಗೊತ್ತೆ?, ‘ಬಾಲಕೃಷ್ಣನ ಸಂಸ್ಕೃತ’!.

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಇತ್ತೀಚೆಗೆ ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಬಹಳ ಪೈಪೋಟಿಯ ಪಂದ್ಯವೊಂದರಲ್ಲಿ ಕರ್ನಾಟಕ ತಂಡವು ಸೋಲುವ ಸ್ಥಿತಿಯಲ್ಲಿದ್ದಾಗ, ತಂಡದ ತರಬೇತುದಾರ ಆಟಗಾರರಾಗಿ ಮನಬಂದಂತೆ ಬೈಯುತ್ತಿರುವುದನ್ನು ಕಂಡ ಗೆಳೆಯ, “ಅವ್ರ ಬಾಯಲ್ಲಿ ಈಗ ಬರಿ ‘ಸಂಸ್ಕೃತಾ’ನೆ ಬರ್ತಾ ಇರುತ್ತೆ” ಎಂದುಬಿಟ್ಟ!

ಈಗ ಹೇಳಿ, ‘ಸಂಸ್ಕೃತ’ ಎಂದೊಡೆ ನಿಮಗೆ ಥಟ್ಟನೆ ನೆನಪಾಗುವುದೇನು?. ಆರ್ಯಭಟ, ವರಾಹಮಹಿರ, ವೇದವ್ಯಾಸ ಮುಂತಾದ ದಿಗ್ಗಜರುಗಳ ಪಾಂಡಿತ್ಯಕ್ಕೆ ಸಾಕ್ಷಿಯಾದ,  ಸಕಲ ಭಾಷೆಗಳಿಗೂ ಮಾತೃಸ್ಥಾನದಲ್ಲಿರುವ, ಭಾರತದ ಸಂಸ್ಕೃತಿಯ ಆಧಾರಸ್ಥಂಭವಾಗಿರುವ ‘ಸಂಸ್ಕೃತ’ವೊ? ಅಥವಾ ನಾನು ಮೇಲೆ ನೀಡಿದ  ಸನ್ನಿವೇಶಗಳಲ್ಲಿ ಪ್ರಸ್ತಾಪಿಸಲ್ಪಟ್ಟ ‘ಸಂಸ್ಕೃತ’ವೊ?. ಉತ್ತರ ಎರಡನೆಯದೆಂದಾದಲ್ಲಿ ಈ ಕುರಿತು ಗಂಭೀರವಾಗಿ ಆಲೋಚಿಸಬೇಕಾದಂತಹ ಅವಶ್ಯಕತೆಯಿದೆ. ಏಕೆಂದರೆ ಈ ರೀತಿಯಾಗಿ ಸಂಸ್ಕೃತವನ್ನು ಕೆಟ್ಟ ರೀತಿಯಲ್ಲಿ ಕಾಣುವಂತಹ, ಗೇಲಿ ಮಾಡುವಂತಹ ಪ್ರವೃತ್ತಿಯು ಹೆಚ್ಚು ಕಂಡು ಬರುತ್ತಿರುವುದು ನಮ್ಮ ಯುವಪೀಳಿಗೆಯಲ್ಲಿಯೆ!. ‘ನಮ್ಮ ಭಾಷೆ’ಎಂಬುದನ್ನು ಮರೆತು, ಗೊತ್ತಿದ್ದೊ, ಗೊತ್ತಿಲ್ಲದೆಯೊ ತಮಾಷೆಯ ನೆಪದಲ್ಲಿ ಈ ರೀತಿಯಾಗಿ ಕೆಟ್ಟ ಪದಗಳನ್ನು ಬಳಸಿ ಮಾತನಾಡುವುದನ್ನು ‘ಸಂಸ್ಕೃತ’ಕ್ಕೆ ಸಮೀಕರಿಸುತ್ತೀವೆಂದಾದಲ್ಲಿ ನಮ್ಮ ಅಭಿಮಾನ ಎಷ್ಟು ಕೆಳಮಟ್ಟಕ್ಕಿಳಿದಿರ ಬೇಡ?. ಈಗೇನೊ ಈ ವಿಷಯವನ್ನು ಲಘುವಾಗಿ ಪರಿಗಣಿಸಬಹುದು. ಆದರೆ ನಮ್ಮ  ಮುಂದಿನ ಪೀಳಿಗೆಗೂ ಇದೆ ಪಿಡುಗು ವರ್ಗಾಯಿಸಲ್ಪಟ್ಟರೆ ನಮ್ಮ ಮೂಲಭಾಷೆಯ ಸ್ಥಿತಿ ಏನಾಗಬೇಡ?. ಯಾವ ಮಕ್ಕಳು, “ಈಗಿನ ವಿಜ್ಞಾನವನ್ನು ಸಾವಿರಾರು ವರ್ಷಗಳ ಹಿಂದೆಯೆ ನಮ್ಮ ಸಂಸ್ಕೃತ ಭಾಷೆಯಲ್ಲಿ ಹೇಳಲಾಗಿತ್ತು” ಎಂಬುದಾಗಿ ಹೆಮ್ಮೆ ಪಡಬೇಕಿತ್ತೋ ಅದೆ ಮಕ್ಕಳು ‘ಕೆಟ್ಟ ಪದಗಳನ್ನು ಬಳಸುವುದೆ ಸಂಸ್ಕೃತ’ ಎಂದು ಕಲಿತುಬಿಟ್ಟರೆ ಅದಕ್ಕೆ ಹೊಣೆ ಯಾರು?. ಸಂಸ್ಕೃತ ಕೇವಲ ಭಾಷೆ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ. ನಮ್ಮ ಸಂಸ್ಕೃತಿಯನ್ನೆ ಅಪಹಾಸ್ಯ ಮಾಡುವಂತಹ ಹೀನಾಯ ಸ್ಥಿಯನ್ನು ನಾವು ತಲುಪಿಬಿಟ್ಟರೆ?.

ಸಂಸ್ಕೃತವನ್ನು ಭಾರತದಿಂದ ದೂರ ಮಾಡಲೇಬೇಕೆಂದು , ಅದರ ಮೇಲೆ ವ್ಯವಸ್ಥಿತ ಪಿತೂರಿ ಮೊದಲಿನಿಂದಲು ನಡೆಯುತ್ತಾ ಬಂದಿದೆ. ಇದರ ಮೊದಲ ಪ್ರಯೋಗವೆಂಬಂತೆ ಎಲ್ಲ ವರ್ಗದ ಜನರು ಸಂಸ್ಕೃತ ಸಾಹಿತ್ಯವನ್ನು ಬೆಳೆಸಿದ್ದರು, ಅದನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ, ಉಳಿದವರಿಗೆ ಅದು ‘ಕಬ್ಬಿಣದ ಕಡಲೆ’ಎಂಬುದಾಗಿ ಬಿಂಬಿಸಿ ಜನಸಾಮಾನ್ಯರಿಂದ ದೂರ ಮಾಡಲಾಯಿತು. ಹೀಗೆ ಜನಸಾಮಾನ್ಯನ ಬಳಕೆಯಿಂದ ದೂರಮಾಡಿ, ‘ಸಂಸ್ಕೃತ ನಮ್ಮಭಾಷೆ’ ಎಂಬುದನ್ನು ಮರೆಯಾಗಿಸಿ ‘ಸಂಸ್ಕೃತ ಸತ್ತಭಾಷೆ’ ಎಂದು ಷರಾ ಬರೆದು, ಒಂದು ಭಾಷೆಯನ್ನು ಸಂಪೂರ್ಣವಾಗಿ ಜೀವಂತ ಸಮಾಧಿ ಮಾಡುವ ಕಾರ್ಯವು ನಡೆಯಿತು. ಈಗ ಇನ್ನು ಕೆಳಮಟ್ಟಕ್ಕಿಳಿದು ಸಂಸ್ಕೃತವೆಂದರೆ ಕೆಟ್ಟದ್ದು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ಪ್ರಯತ್ನ ಗೊತ್ತಿದ್ದೊ ಗೊತ್ತಿಲ್ಲದೆಯೊ ಅಂತು ಸದ್ದಿಲ್ಲದೆ ನಡೆಯುತ್ತಿದೆ!. ಕೇವಲ ಕೆಲವು ಯುವಕರಿಗೆ ಮಾತ್ರ ಸೀಮಿತವಾಗಿದ್ದ ಈ ಕೆಟ್ಟ ಚಾಳಿ, ಇಂದು ಅಭಿಪ್ರಾಯ ರೂಪಿಸುವ ಮಾಧ್ಯಮಕ್ಕೂ ಕಾಲಿಟ್ಟಿದೆ ಎಂದಾದಲ್ಲಿ, ಈ ಕುರಿತು ಯಾರು ಪ್ರಶ್ನಿಸುತ್ತಿಲ್ಲವೆಂದಾದಲ್ಲಿ, ನಾವು ಯಾವ ದಿಕ್ಕಿನತ್ತ ಸಾಗುತ್ತಿದ್ದೇವೆ?.

ಆದರೆ ನಾವೆಲ್ಲರು ಗಮನಿಸಬೇಕಾದ ಅಂಶವೊಂದಿದೆ., ‘ನಾವು’ ಅಂದರೆ ‘ಭಾರತೀಯ’ರು ಮಾತ್ರ ಸಂಸ್ಕೃತದ ಕುರಿತು ಇಂಥಹ ಅಸಡ್ಡೆ ಮನೋಭಾವವನ್ನು ತೋರುತ್ತಿದ್ದೇವೆಯೆ ಹೊರತು, ದೇಶದ ಗಡಿಯಿಂದಾಚೆ ಪರಿಸ್ಥಿತಿ ಹೀಗಿಲ್ಲ. ಇಂದು ಸಂಸ್ಕೃತವನ್ನು ಇಡಿ ವಿಶ್ವವೆ ಅಪ್ಪಿಕೊಳ್ಳುತ್ತಿದೆ. ನಮ್ಮ ಪಕ್ಕದ ಚೀನಾದಲ್ಲಿ, ತಾಳೆಗರಿಗಳಲ್ಲಿರುವ ವಿಷಯಗಳನ್ನು ಸಂಶೋಧಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ವಿಶೇಷವಾಗಿ ಕಲಿಸಲಾಗುತ್ತಿದೆ. ಥೈಲ್ಯಾಂಡ್‍ನ ಅತ್ಯಂತ ಹಳೆಯ ವಿಶ್ವವಿದ್ಯಾಲಯ ‘‘Silpakorn University’’ಯಲ್ಲಿ ಸುಮಾರು 45 ವರ್ಷಗಳ ಹಿಂದೆಯೆ ಸಂಸ್ಕೃತವನ್ನು ಅಧ್ಯಯನ ವಿಷಯವಾಗಿ ಸೇರಿಸಲಾಗಿದ್ದು, ಈ ಕುರಿತು ಮಹತ್ತರವಾದ ಸಂಶೋಧನಾ ಕಾರ್ಯಗಳು ಅಲ್ಲಿ ನಡೆಯುತ್ತಿದೆ.

ನಮಗಿಂತ ಬುದ್ಧಿವಂತರು ಜಗತ್ತಲ್ಲಿಲ್ಲವೆಂದು ಬೀಗುತ್ತಿದ್ದ ಜರ್ಮನಿಗರೆ ಸಂಸ್ಕೃತದ ಕಲಿಕೆಗೆ ಮುಗಿಬೀಳುತ್ತಿದ್ದು, ಇಂದು ಜರ್ಮನಿಯ 14 ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಇಲ್ಲಿನ ‘University of Heidelberg’ಒಂದರಲ್ಲಿಯೆ ಇದುವರೆಗೆ 34 ದೇಶಗಳ 254 ವಿದ್ಯಾಥಿಗಳು ಸಂಸ್ಕೃತವನ್ನು ಕಲಿತಿದ್ದು, ಬೇಡಿಕೆಗನುಗುಣವಾಗಿ ಸಂಸ್ಕೃತ ಶಿಕ್ಷಕರ ಕೊರತೆ ಇರುವುದರಿಂದ ಬಹುಪಾಲು ವಿದ್ಯಾರ್ಥಿಗಳನ್ನು ಕೈಬಿಡಲಾಗಿದೆಯೆಂತೆ!. ಈ ಕುರಿತಾದ ವಿಶೇಷ ವರದಿಗೆ ಜಾಲತಾಣವೊಂದು ನೀಡಿದ ಶೀರ್ಷಿಕೆ ಏನು ಗೊತ್ತೇನು, ‘Sanskrit fever grips Germany: 14 universities teaching India’s ancient language struggle to meet demand as students clamour for course’. ಇನ್ನು ಅಚ್ಚರಿಯ ಸಂಗತಿಯೆಂದರೆ ಐರ್ಲೆಂಡ್ ದೇಶದ ಡಬ್ಲಿನ್‍ನಲ್ಲಿರುವ ‘John Scottus School’ನಲ್ಲಿ ಪ್ರಾಥಮಿಕ ತರಗತಿಗಳಲ್ಲಿ ಸಂಸ್ಕೃತವನ್ನು ‘ಕಡ್ಡಾಯವಾಗಿ’ ಕಲಿಸಲಾಗುತ್ತಿದ್ದು, ಉನ್ನತ ತರಗತಿಗಳಲ್ಲಿ ಇದನ್ನು ಐಚ್ಛಿಕ ವಿಷಯವಾಗಿ ಸೇರಿಸಲಾಗಿದೆ. 2015ರಲ್ಲಿ ನಮ್ಮ ಪ್ರಧಾನಿ ಐರ್ಲೆಂಡ್ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ , ಸಂಸ್ಕೃತ ಶ್ಲೋಕಗಳನ್ನು, ವೇದಗಳನ್ನು  ಹೇಳಿ ಭಾರತೀಯರೆ ನಿಬ್ಬರಗಾಗುವಂತೆ ಮಾಡಿದ್ದು ಈ ಶಾಲೆಯ ವಿದ್ಯಾರ್ಥಿಗಳೆ!.

ಹೌದು, ಇಂದು ಜಗತ್ತೆ ಸಂಸ್ಕೃತವನ್ನು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿದೆ. ಆದರೆ ನಾವು?. ತಾಳೆಗರಿಗೆ ಸೀಮಿತವಾಗಿದ್ದ ಸಂಸ್ಕೃತವನ್ನು ಇಂದು ‘ವಿಕಿಪೀಡಿಯಾಗೆ’ತರುವುದು ಸೇರಿದಂತೆ ಸಂಸ್ಕೃತಕ್ಕೆ ಸಂಬಂಧಪಟ್ಟ ವಿಶೇಷ ಕಾರ್ಯಗಳನ್ನು ‘ಸಂಸ್ಕೃತ ಭಾರತಿ’ ಹಮ್ಮಿಕೊಳ್ಳುತ್ತಿದೆ. ಅಂಚೆ ಮೂಲಕವೆ ಸಂಸ್ಕೃತವನ್ನು ಕಲಿಯುವ ವ್ಯವಸ್ಥೆ, ದೇಶದ ನಾನಾ ಭಾಗಗಳಲ್ಲಿ ‘ಸಂಸ್ಕೃತ ಸಂಭಾಷಣಾ ಶಿಬಿರ’ಗಳ ಆಯೋಜನೆ ಹೀಗೆ ಜನಸಾಮಾನ್ಯನಿಗೂ ಸಂಸ್ಕೃತವನ್ನು ತಲುಪಿಸುವ ಮೂಲಕ ಮತ್ತೆ ‘ಸಂಸ್ಕೃತದ ವೈಭವವನ್ನು’ ಭಾರತದಲ್ಲಿ ಸ್ಥಾಪಿಸಬೇಕೆಂದು ‘ಸಂಸ್ಕೃತ ಭಾರತಿ’ಯ ಅಡಿಯಲ್ಲಿ ಸಾವಿರಾರು ಮಂದಿ ಶ್ರಮಿಸುತ್ತಿದ್ದಾರೆ. ಈ ಕಾರ್ಯದಲ್ಲಿ ನಾವು ಪಾಲುದಾರರಾಗಬೇಕು ತಾನೆ?. ಬೇಡಪ್ಪ, ಕನಿಷ್ಠಪಕ್ಷ ಇದು ‘ನಮ್ಮ ಭಾಷೆ’ ಎಂಬ ಅಭಿಮಾನವನ್ನಾದರೂ ಬೆಳೆಸಿಕೊಳ್ಳಬೇಕಲ್ಲವೆ?. ನಾವೆ ನಮ್ಮ ಭಾಷೆಯನ್ನು ಗೇಲಿ ಮಾಡುತ್ತೀವಲ್ಲ!. ಆದರೆ ನೆನಪಿಡಿ, ನಾವು ಇದೆ ರೀತಿ ಸಂಸ್ಕೃತವನ್ನು ಅಪಹಾಸ್ಯ ಮಾಡುತ್ತಲೆ ಮುಂದುವರೆಯುತ್ತೀವೆಂದಾದಲ್ಲಿ ಇಡಿ ಜಗತ್ತೆ ನಮ್ಮನ್ನ ಕಂಡು ಅಪಹಾಸ್ಯ ಮಾಡುವ ಕಾಲ ದೂರವಿಲ್ಲ( ಈಗಲೆ ಆ ಕಾಲದಲ್ಲಿ ನಾವಿದ್ದೇವೆ ಎಂದರು ತಪ್ಪಾಗಲಿಕ್ಕಿಲ್ಲ). ಇದಕ್ಕೆ ಸಂಬಂಧಪಟ್ಟ ಹಾಗೆ ಜರ್ಮನಿಯ ‘University of Heidelberg’ ನ ಪ್ರೊಫೆಸರ್  Dr. Axel Michaels ರ ಮಾತಿನ ಎರಡು ತುಣುಕುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಎಷ್ಟಾದರು ನಮ್ಮವರಿಗಿಂತ ಹೊರಗಿನವರ ಮಾತೆ ಭಾರತೀಯರಿಗೆ ಹೆಚ್ಚು ಆಪ್ತವಾಗುವುದುದಲ್ಲವೆ?.

“…..too better understand the genesis of oriental philosophy, history, languages, sciences and culture, it’s essential to read the original Sanskrit texts as these are some of the eraliest thoughts and discoveries”

“Linking Sanskrit with religion and a certain political ideology was ‘stupid’ and ‘detrimental to the cause of it’s rich heritage. Instead of indulging in a political and religious debate, Indians should try to preserve their heritage”.

Facebook ಕಾಮೆಂಟ್ಸ್

Chaithanya Kudinalli: ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.
Related Post