ಕಾಣದ ಊರಲ್ಲಿ ,ಕಾಣದ ಜನರ ಮಧ್ಯೆ ಯಾರಿಗೂ ಕಾಣದಂತೆ ಎಲ್ಲ ವೀಕ್ಷಿಸುವನು ,ಎಲ್ಲರ ಜೀವನ ಎಂಬ ಗೊಂಬೆಯ ಸೂತ್ರಧಾರ ಒಬ್ಬನಿದ್ದಾನೆ ಎಂದು ಬಹುತೇಕ ಜನ ನಂಬುತ್ತಾರೆ .ಆ ಕಾಣದ ಶಕ್ತಿಗೆ ಮನಸ್ಸು ಎಂಬುದು ಇರಬಹುದೇ ?,ಹಾಗು ಒಂದು ವೇಳೆ ಮನಸ್ಸು ಅಂತ ಇದ್ದರೆ ,ತಾನೇ ಸೃಷ್ಟಿ ಮಾಡಿದ ಈ ಭೂಮಿಯ ಮಾನವ ಎಂಬ ಪ್ರಾಣಿಯ ಕುರಿತಾಗಿ ಯೋಚಿಸುತ್ತ ಇರಬಹುದೇ? , ಎಂದು ಯೋಚಿಸುತ್ತ ಕುಳಿತಿದ್ದಾಗ ಒಬ್ಬ ಕುಡುಕ ಏನೋ ಹಲುಬುತ್ತಾ, ಯಾರಿಗೋ ಬಯ್ಯುತ್ತ ಹೋಗುವುದನ್ನ ಕಂಡೆ. ಕುಡಿದರೆ ಕೆಲವರು ಮನಸ್ಸೆಂಬ ಪ್ರಪಂಚದ ಗುಟ್ಟನ್ನೆ ಆಚೆ ಪ್ರಪಂಚಕ್ಕೆ ತಿಳಿಸುತ್ತಾರೆ ಎಂದು ಕೇಳಿದ್ದೆ ,ಆ ಕಾಣದ ಶಕ್ತಿಯ ಮನವೆಂಬ ಪ್ರಪಂಚದ ರಹಸ್ಯ ಬಯಲಿಗೆಳೆಯಲು ಈ ಮಧ್ಯವೆಂಬ ದ್ರವ್ಯದಿಂದ ಸಾಧ್ಯವಿರಬಹುದೇ ಎಂಬ ಯೋಚನೆ ತಲೆಯಲ್ಲಿ ನರ್ತಿಸಹತ್ತಿತು .
ನನ್ನದೇ ಕಲ್ಪನಾ ಲೋಕದಲ್ಲಿ “ದೇವರಿಗೆ ಹೆಂಡ ಕುಡಿಸಿದಾಗ!!” ಅವನ ಮಾತುಗಳು ಏನಿರಬಹುದೆಂಬ ಕಲ್ಪನಾ ಲೋಕ ನನ್ನ ಮುಂದೆ ಬಂದಿದ್ದು ಹೀಗೆ :
” ಇದು ಏನು ಹೊಸತರಹದ ದ್ರವ್ಯ? ಹಸಿರು ಪಾಚಿಯಲ್ಲಿ ಕಾಲುಗಳು ಬೇಡವೆಂದರೂ ಜಾರಿದಂತೆ ,ಮನದಲ್ಲಿನ ಮಾತುಗಳು ಬೇಡವೆಂದರೂ ಜಾರಿ ಹೊರ ಬರುತ್ತಿವೆಯಲ್ಲ ?,ಈ ದ್ರವ್ಯವು ನಾ ಸೃಷ್ಟಿಸಿದ ಮಾನವನ ಸ್ರಷ್ಠಿಯೇ ?,ಎಲ್ಲರ ಹಣೆಬರಹವನ್ನು ಬ್ರಹ್ಮ ಬರೆಯುತ್ತಾನೆ ಎಂದು ಹೇಳುತ್ತಾರೆ ,ಏನಾದರು ತಪ್ಪಾದರೆ ದೇವರೇ ನೀನೆಷ್ಟು ಕ್ರೂರಿ ಎಂದು ಜರಿಯುತ್ತಾರೆ ,ಎಷ್ಟು ನೋವುಗಳನ್ನು ನೀಡಿದ್ದಿಯ ಎಂದು ನಿದ್ದೆ ಮಾಡದೆ ಬಯ್ಯುತ್ತಾರೆ .ಪ್ರತಿದಿನವನು ಒಂದು ಉಡುಗೊರೆಯಂತೆ ನಾನು ನೀಡುತ್ತೇನೆ. ಎಲ್ಲ ನೋವುಗಳಿಗೆ ಅಂತ್ಯದಂತೆ ,ಎಲ್ಲ ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಎಷ್ಟೋ ಸಮಯವನ್ನು ಅವರ ಮುಂದೆ ತಂದು ಇಡುತ್ತೇನೆ. ಆದರೆ ಆ ಮಂದ ಬುದ್ದಿಯ ಮಾನವ ತಾನೇ ಮೇಲೆಂಬ ಅಹಂಕಾರದಿಂದಲೋ,ಸೊಕ್ಕಿನಿಂದಲೋ ಎಲ್ಲ ಕಳೆದು ಕತ್ತಲೆಯೆಡೆಗೆ ಹೋಗುವ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ .ಅದೇನೋ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ ಅನ್ನುತ್ತಾರಲ್ಲ ಹಾಗೆಯೇ ನಾನು ಪ್ರತಿ ಜೀವಿಯ ಜೀವನದ ಮಹತ್ತರ ತಿರುವಿನಲ್ಲೂ ಕೆಲವು ಆಯ್ಕೆಗಳನ್ನು ಕೊಡುತ್ತೇನೆ .ಯೋಚಿಸಿ ,ತನ್ನ ಎಲ್ಲ ಅನುಭವಗಳ ಮೇರೆಗೆ ,ಎಲ್ಲ ಆಯ್ಕೆಗಳನ್ನು ನೋಡಿ ಯಾವುದು ಸರಿ ಎಂದು ಆರಿಸಿಕೊಳ್ಳುವುದು ಮನುಷ್ಯ ಎಂಬ ಪ್ರಾಣಿಗೆ ಬಿಟ್ಟಿದ್ದು ,ತಪ್ಪು ಆಯ್ಕೆಗಳನ್ನು ಆರಿಸಿಕೊಂಡು ಜಾರಿದರೆ ನಾ ಏನು ಮಾಡಲಿ ?,ಜೀವನ ಎಂಬ ಪರೀಕ್ಷೆಯಲ್ಲಿ ಸೋಲಿನ ಮುಖ ನೋಡಬೇಕಷ್ಟೆ .
ಜೀವನ ಎಂಬ ಆಟದಲ್ಲಿ ನಾ ಆಯ್ಕೆ ನೀಡುತ್ತೇನೆ ಅಷ್ಟೇ ,ಅವರವರು ಆರಿಸಿಕೊಂಡ ಆಯ್ಕೆಯ ಮೇರೆಗೆ ಅವರವರ ಹಣೆಬರಹ ನಿರ್ಧಾರವಾಗಿರುತ್ತದೆ ವಿನಃ ನಾ ಎಂದೂ ಹಣೆಬರಹ ಮೊದಲೇ ಬರೆದಿರುವದಿಲ್ಲ .
ಇವೆಲ್ಲ ನನಗೆ ಬಯ್ಯುವವವರ ಗುಂಪಾಯಿತು. ಆದರೆ ನಾ ಸೃಷ್ಟಿಸಿದ ಮಗು ಕಲಿಯುಗದ ಕೇನಂಳಿಗೆ ಈ ಮಟ್ಟಿಗೆ ಬಲಿಯಾಗುತ್ತದೆ ,ಮಾನವ ಪಾಪದ ದಾರಿಯ ಆಯ್ಕೆ ಮಾಡಿ ಕಲಿಯ ಮನೆಯೆಡೆಗೆ ಪಯಣಿಸುತ್ತಾನೆ ಎಂದು ನಾನೇ ಅರಿತಿರಲಿಲ್ಲ .ಒಂದು ತಂದೆ-ತಾಯಾಗಿಯೇ ತನ್ನ ಎರಡು ಮಕ್ಕಳಲ್ಲಿ ಒಬ್ಬ ದಾರಿ ತಪ್ಪಿದರೂ ಸಹಿಸಲು ಸಾಧ್ಯವಿಲ್ಲ ಅಂತಹದರಲ್ಲಿ ನಾನು ಸೃಷ್ಟಿಸಿದ ಅರ್ಧಕ್ಕೂ ಹೆಚ್ಚು ಮಾನವ ಜೀವಿಗಳು ಕ್ರೂರತೆ ,ಮೋಸ,ವಂಚನೆ,ಈರ್ಷೆ ,ಕೋಪ ಇಂತಹದರಲ್ಲೇ ಮುಳುಗಿ ತೇಲುತ್ತಿದ್ದಾರೆ .ನಾ ಈಗ ಯಾರಲ್ಲಿ ಕೋಪ ಹೇಳಲಿ ?
ಕಲಿಯು ತಾಂಡವ ನೃತ್ಯವಾಡುತ್ತಿದ್ದಾನೆ ,ವಿಜ್ಞಾನ ಬೆಳೆಯಲಿ ನನ್ನ ಭೂಲೋಕದ ಮಕ್ಕಳಿಗೆ ಎಲ್ಲ ಸರಾಗವಾಗಿ ಸಿಗಲಿ ಎಂದು ನನ್ನ ಉದ್ದೇಶವಾಗಿತ್ತು ಆದರೆ ವಿಜ್ಞಾನವನ್ನು ಕೆಲವು ಅಜ್ಞಾನಿಗಳು ಜ್ಞಾನವಿಲ್ಲದಂತೆ ಎಷ್ಟೋ ಜ್ಞಾನಿಗಳ ಅಂತ್ಯಕ್ಕೆ ,ಜ್ಞಾನದ ತಡೆಗೆ ಉಪಯೋಗಿಸುತ್ತಿದ್ದಾರೆ .
ಹೆಣ್ಣುಯೆಂದರೆ ದೈವ ಶಕ್ತ್ತಿ ,ಪುರುಷ ಎಂಬ ಜೀವಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯಲೆಂದು ,ಒಂದು ಜೀವಕ್ಕೆ ಜನ್ಮನೀಡುವ ನನ್ನ ಧೂತಳಾಗಿ ಭೂಮಿಗೆ ಕಳಿಸಿದೆ ,ಆದರೆ ಅದರ ಫಲವೇನು ?,ಆ ಶಕ್ತಿಗೆ ಈಗ ಗೌರವವಿಲ್ಲ.ಕೊಲೆ ,ಸುಲಿಗೆ ,ಕಿರುಚಾಟ ,ನರಳಾಟ ಇದರ ಮುಂದೆ ನಗು,ಸಂತೋಷ ,ಕೂಡಿ ಬಾಳುವ ಜೀವನ ಇವೆಲ್ಲವು ಎಲ್ಲೋ ಭೂಮಿಯ ಒಳಗಡೆ ಅವಿತಿರುವಂತಿದೆ .
ನಾನು ಸೃಷ್ಟಿಸಿದ ಜೀವಿಗಳೇ ಇವು ? , ಇವರಿಗೆ ಆಯ್ಕೆಗಳನ್ನು ಕೊಡದೆ ನಾನೇ ಒಂದೇ ಬರಿ ಹಣೆಬರಹ ಎಂದು ಬರೆಯಬೇಕಿತ್ತೆ ಎಂಬ ಪ್ರಶ್ನೆ ಸದಾ ನನ್ನ ಕಾಡುತ್ತದೆ. ನಾನೇ ಸೃಷ್ಟಿಸಿದ ಮಾನವ ಜೀವಿಗಳಿಂದ ನೋವೇ ಸಿಕ್ಕಿದೆ ವಿನಃ ನಲಿವು ಕಡಿಮೆ .ಈ ದ್ರವ್ಯ ಮನಸ್ಸಿನ ನೋವನ್ನು ಹೊರತಂದು ಒಳಗಿನ ಭಾರವ ಇಂದು ಇಳಿಸಿತು “.
ಅಷ್ಟರಲ್ಲೇ ” ಮಧ್ಯರಾತ್ರಿಯಲ್ಲಿ ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ದೈಹಿಹ ಕಿರುಕುಳ ” ಎಂದು ದೂರದರ್ಶನ ಕೂಗುತ್ತಿತ್ತು ,ನನ್ನ ಭಾವನ ಲೋಕಕ್ಕೆ ಅಂತ್ಯ ಸಿಕ್ಕಿತ್ತು .
–ದಿವ್ಯ ಕೃಷ್ಣ ಭಾವಿ (ಧಾರೇಶ್ವರ)
Facebook ಕಾಮೆಂಟ್ಸ್