ಹೂಬನದಲಿ ನಲಿಯಲಾಗದೆ ಮನಬಂದಲ್ಲಿ ನಿಲ್ಲಲಾರದೆ
ಹಕ್ಕಿಗಳಂತೆ ಹಾರಲಾರದೆ ಎಲ್ಲರಿಂದ ತಾತ್ಸಾರಕ್ಕೊಳಗಾದೆ ನಾನು
ಹೀಗೇಕೆ ನನ್ನನ್ನು ಸೃಷ್ಠಿಸಿದೆ ನೀನು?
ಹರಿವ ನೀರಲ್ಲಿ ಬಣ್ಣದ ಮೀನುಗಳು ನೀಲಿಯಾಗಸದಲಿ ಬಿಳಿಯಾದ ಮೋಡಗಳು
ಬೆಳಕ ಹೊನಲಲ್ಲಿ ನಗುವ ಹೂವುಗಳು ಎಲ್ಲವೂ ಸುಂದರ ಎಲ್ಲವು ವರ್ಣಮಯ
ನಾನೇಕೆ ಹೀಗೆ? ಮೈಯೇಕೆ ಬರಿದೆ ಮುಳ್ಳುಗಳ ಹೊದಿಕೆ?
ಕನ್ನಡಿಯ ಬಿಂಬವೋ . ನನಗೇ ಬೇಸರದ ಪ್ರತಿಬಿಂಬವೋ ..?
ಸೃಷ್ಠಿಕರ್ತ ನೀನಂತೆ ಎಲ್ಲರಿಗೂ ಬಯಸುವೆ ಹಿತವಂತೆ ..
ನಂಗೇನೋ ನಂಬಿಕೆಯಿಲ್ಲಾ ನನ್ನ ಒಳಿತನ್ನು ನೋಡುವ ದಿನವಿಲ್ಲಾ ,
ನಾಳೆಯೇ ನನ್ನ ಕೊನೆ ದಿನ ಬದಲಿಸಲಾರೆ ನೀ ನನ್ನ ಬದುಕನ್ನ
ಕಣ್ಣು ಮುಚ್ಚಿದರೂ ಬಾರದ ನಿದ್ದೆ ಸಮಯ ಸರಿಯುತ್ತಿದೆ .. !
ಪ್ರಕೃತಿ ಬದಲಾಗುತ್ತಿದೆ… ಇದೇನಿದು …?
ಒಂದೊಂದಾಗಿ ಮೈಯ ಮುಳ್ಳುಗಳು ಬೀಳುತ್ತಿದೆ …
ನೋವು ಮರೆಯಾಗುತ್ತಿದೆ …
ಬಾನಂಚಿನ ಸೂರ್ಯ ನನ್ನತ್ತಲೇ ನೋಡಿ ನಗುತ್ತಿದ್ದಾನೆ
ಹೂರಾಶಿಯೂ ಸ್ನೇಹದ ನಗೆ ಬೀರುತ್ತಿದೆ
ನನ್ನ ನೋವುಗಳ ಸ್ನೇಹಿತ ಕನ್ನಡಿ
ಇಂದೇಕೋ ಮಾತನಾಡಿಸೆನ್ನತ್ತಿದ್ದಾನೆ
ದೇಹ ಹಗುರಾಗುತ್ತಿದೆ ಹಾರಬೇಕೆನಿಸುತ್ತಿದೆ ಮುಳ್ಳುಗಳು ಮರೆಯಾಗಿವೆ
ಕನ್ನಡಿಯಲ್ಲಿ ಕಾಣುತ್ತಿರುವುದು ನಾನೇ?
ಸುಂದರ ಬಣ್ಣಗಳ ರೆಕ್ಕೆಗಳು ನನ್ನವೇ?
ಮುಳ್ಳುಗಳ ರಾಶಿಯಂತಿದ್ದ ನಾನು ಇಂದೇನಾದೆ ?
ಸುಂದರ ಬದುಕನ್ನು ಕಾಣುವ ಚಿಟ್ಟೆಯಾದೆ
ಭೂಮಿಯ ಎಲ್ಲಾ ಜೀವಿಗಳಿಗೂ ಒಳಿತನ್ನು ಕೊಟ್ಟ
ದೇವರೇ ನೀ ನನ್ನ ತಂದೆಯಾದೆ …!
-ಮಯೂರ ಲಕ್ಷ್ಮಿ
mayuralakshmi88@gmail.com
Facebook ಕಾಮೆಂಟ್ಸ್