X

ಡಿಸೆಂಬರ್ ೩೧ರ ಅತಿರೇಕಗಳು ಆಧುನಿಕತೆಯೇ?

ಯುಗಾದಿ ಮತ್ತು ಜನವರಿ ೧ ಎರಡರಲ್ಲಿ ಯಾವುದನ್ನು ಹೊಸ ವರ್ಷವೆಂದು ಆಚರಿಸಬೇಕು ಎಂಬುದರ ಬಗ್ಗೆ ಹಲವು ತಾರ್ಕಿಕ ಚರ್ಚೆಗಳು ನಡೆದರೂ ಡಿಸೆಂಬರ್ ೩೧ ರ ಅಬ್ಬರದಲ್ಲಿ ಯುಗಾದಿ ಗೌಣವಾಗುತ್ತಲೇ ಬಂದಿದೆ. ಇದನ್ನು ಅಂಕಿಅಂಶಗಳ ಆಧಾರದ ಮೇಲೆ ವಿವರಿಸಲು ಹೊರಟಿರುವೆ. ಎರಡರ ಮಧ್ಯೆ ನಿಮ್ಮ ಆಯ್ಕೆ ನಿಮಗೆ ಬಿಟ್ಟಿದ್ದು.

ಕ್ರಿ.ಪೂ ೪೫ ರಲ್ಲಿ ಜನವರಿ ೧ನ್ನು ಜೆನಸ್ ಎಂಬ ರೋಮನ್ ದೇವನ ಕಾರಣಕ್ಕೆ ಮೊದಲ ಬಾರಿಗೆ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಜೆನಸ್ ಈಗಿನ ಜನವರಿಯಾಗಿದ್ದು. ಅದಕ್ಕೂ ಮುಂಚೆ ಮಾರ್ಚ ತಿಂಗಳಲ್ಲಿ ಹೊಸ ವರ್ಷ ಶುರುವಾಗುತ್ತಿತ್ತು. ನಮ್ಮ ಯುಗಾದಿ ಕೂಡಾ ಮಾರ್ಚನಲ್ಲೆ ಎಂಬುದು ಗಮನಾರ್ಹ ವಿಷಯ. ರೋಮನ್ ರಾಜನಾದ ಜ್ಯುಲಿಯಸ್ ಸೀಸರ್ ಕ್ಯಾಲೆಂಡರ್ ನಿರ್ಮಾಣದ ಕಾರ್ಯವನ್ನು ಖಗೋಳ ಶಾಸ್ತ್ರಜ್ಞ ಸೊಸಿಜೆನಸ್’ಗೆ ಒಪ್ಪಿಸಿದ. ಕ್ರಿ.ಪೂ ೭ ನೇ ಶತಮಾನದಿಂದ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಿದ್ದ ಅವರು ಪ್ರತಿ ವರ್ಷ ದಿನಾಂಕಗಳ ಅದಲು ಬದಲನ್ನು ಸಮತೋಲನಗೊಳಿಸಲು ಕ್ಯಾಲೆಂಡರ್ ತಿದ್ದುಪಡಿಗೆ ಕೈ ಹಾಕಿದರು. ೩೬೫.೨೫ ದಿನ ಒಂದು ವರ್ಷಕ್ಕೆ ಸಮವೆಂದರಿತು ಮೇಲಿನ ೦.೨೫ ದಿನವನ್ನು ಸರಿದೂಗಿಸಲು ಫೆಬ್ರವರಿ ತಿಂಗಳಿಗೆ ನಾಲ್ಕು ವರ್ಷಕ್ಕೊಮ್ಮೆ ಒಂದು ಹೆಚ್ಚುವರಿ ದಿನವನ್ನು ಅಳವಡಿಸಲಾಯಿತು. ಕ್ರಿ.ಪೂ ೪೬ ರಿಂದ ೪೫ಕ್ಕೆ ಬಂದು ಜನವರಿ ೧ ರಂದೇ ಹೊಸ ವರ್ಷಾಚರಣೆಗೆ ೬೭ ದಿನಗಳನ್ನು ಹೆಚ್ಚುವರಿಯಾಗಿ ಸೇರಿಸಲಾಯಿತು. ಈ ಮಹತ್ಕಾರ್ಯದ ನೆನಪಿಗೆ ತನ್ನ ಹೆಸರನ್ನು ಒಂದು ತಿಂಗಳಿಗೆ ಇಟ್ಟ ಕ್ವಿಂಟಿಲಿಸ್ ಹೋಗಿ ಜುಲೈ ಆಯ್ತು. ಮುಂದೆ ಅವನ ನಂತರದ ರಾಜ ಅಗಸ್ಟಸ್’ನಿಂದ ಸೆಕ್ಸಟಿಲಿಸ್ ಹೋಗಿ ಆಗಷ್ಟ ಆಯಿತು. ೧೫ ನೇ ಶತಮಾನದಲ್ಲಿ ರೋಮನ್ ಚರ್ಚಿನ ಪೋಪ್ ಗ್ರೆಗೋರಿ xiiiಗೆ ಹಳೆಯ ಕ್ಯಾಲೆಂಡರ್ನಲ್ಲಿ ಒಂದು ಲೋಪ ಸಿಕ್ಕಿತು ವರ್ಷವೆಂದರೆ ೩೬೫.೨೫ ಅಲ್ಲ. ಅದು ೩೬೫.೨೪೨೧೯೯ ಅದರಿಂದ ಪ್ರತಿ ವರ್ಷ ೧೧ ನಿಮಿಷಗಳು ಹೆಚ್ಚುವರಿಯಾಗಿ ಸೇರಲ್ಪಡುತ್ತವೆ ಎಂಬುದನ್ನು ಅರಿತ. ಕ್ರಿ.ಶ ೧೦೦೦ ದ ಹೊತ್ತಿಗೆ ೭ ದಿನ ಮತ್ತು ೧೫ ನೇ ಶತಮಾನದ ಮಧ್ಯದ ಕಾಲಕ್ಕೆ ೧೦ ದಿನಗಳ ಹೆಚ್ಚುವರಿಯಾಗಿ ಸೇರಲ್ಪಟ್ಟಿವೆ.ಇದಕ್ಕೆ ಮತ್ತೊಮ್ಮೆ ಕತ್ತರಿ ಪ್ರಯೋಗದ ಅವಶ್ಯಕತೆ ಇದೆ ಎಂದರಿತು ತನ್ನ ಹತ್ತಿರದ ಖಗೋಳ ತಜ್ಞ ಕ್ರಿಸ್ಟೋಪರ್ ಕ್ಲೆವಿಯಸ್’ಗೆ ಈ ಕುರಿತು ಹೇಳಿದ. ಅದೇ ಗ್ರೆಗೋರಿಯನ್ ಕ್ಯಾಲೆಂಡರ್. ಈ ಹಿಂದಿನ ಕ್ಯಾಲೆಂಡರಿನ ೧೦ ದಿನಗಳನ್ನು ತೆಗೆದುಹಾಕಲಾಯಿತು.ನೋಡಿ ದಿನಗಳು ನಮಗೆ ಹೊಂದಲಿಲ್ಲವೆಂದರೆ ನಾವೇ ಸೃಷ್ಟಿಸೋದು ಜಾಸ್ತಿಯಾದರೆ ಅಳಿಸಿಹಾಕೋದು. ಮೊದಲಿನ ಫೆಬ್ರುವರಿಗೆ ಮತ್ತಷ್ಟು ಹೊಸತನ ಸಿಕ್ಕಿತು.೧೦೦ ರಿಂದ ಭಾಗವಾಗುವ ವರ್ಷದಲ್ಲಿ ಹೆಚ್ಚುವರಿ ದಿನವಿಲ್ಲ ಅದೇ ವರ್ಷ ೪೦೦ರಿಂದ ಭಾಗವಾದರೆ ಹೆಚ್ಚುವರಿ ದಿನವಿರುತ್ತೆ.ಉದಾಹರಣೆಗೆ ೧೯೦೦ ಇಸ್ವಿ ೧೦೦ ರಿಂದ ಭಾಗವಾಗಿ ೪೦೦ರಿಂದ ಆಗೊಲ್ಲ ಅದಕ್ಕೆ ಈ ವರ್ಷಗಳಲ್ಲಿ ಫೆಬ್ರುವರಿಲಿ ೨೮ ದಿನ. ೨೦೦೦ ಇಸ್ವಿ ೧೦೦ ಮತ್ತು ೪೦೦ರಿಂದಲೂ ಭಾಗವಾಗುವುದರಿಂದ ಫೆಬ್ರುವರಿಲಿ ೨೯ ದಿನ. ಇಷ್ಟೆಲ್ಲ ತಿದ್ದುಪಡಿ ನಂತರವೂ ಸ್ವಲ್ಪ ನಗಣ್ಯ ಸೆಕೆಂಡುಗಳ ಲೋಪವಿದೆ. ಜನವರಿ ೧ ಕ್ಕೆ ಹೊಸ ವರ್ಷ ಶುರು ಮಾಡಬೇಕು ಮತ್ತು ಒಂದು ವರ್ಷದ ಕಾಲಮಾನವನ್ನು ಹೊಂದಿಸಬೇಕೆಂಬ ತಿಣುಕಾಟವಿದೆಯೇ ಹೊರತು ಪ್ರಕೃತಿಯಲ್ಲಿನ ಯಾವುದೇ ಗುರುತರ ಬದಲಾವಣೆಗಳನ್ನು ಪರಿಗಣಿಸಿಲ್ಲ ವೈಜ್ಞಾನಿಕ ಹಿನ್ನೆಲೆಗಳೂ ಇಲ್ಲ.

ಭಾರತದ ಪಂಚಾಂಗದ ಪ್ರಕಾರ ಸೌರಮಾನ ಮತ್ತು ಚಾಂದ್ರಮಾನ ಎಂಬ ಕ್ರಮವಾಗಿ ಭೂಮಿ ಸೂರ್ಯನ ಸುತ್ತ ಮತ್ತು ಚಂದ್ರ ಭೂಮಿಯ ಸುತ್ತ ತಿರುಗುವ ಆಧಾರದಿಂದ ರಚನೆಗೊಂಡ ಕ್ಯಾಲೆಂಡರ್ ಇದೆ. ಸೌರಮಾನದ ತಿಂಗಳು ಸಂಕ್ರಮಣದಿಂದ ಸಂಕ್ರಮಣದವರೆಗೆ ಮತ್ತು ಒಂದು ದಿನಕ್ಕೆ ೨೪ ಘಂಟೆ. ಚಾಂದ್ರಮಾನದ ತಿಂಗಳು ಅಮವಾಸ್ಯೆಯಿಂದ ಅಮವಾಸ್ಯೆಗೆ ಒಂದು ದಿನದಲ್ಲಿನ ಘಂಟೆಗಳು ೨೦ ರಿಂದ ೨೮ ರವರೆಗೆ ಬದಲಾಗುತ್ತದೆ. ಯಾಕೆಂದರೆ ಚಂದ್ರನಿಗೆ ಒಂದು ಸುತ್ತು ಹಾಕುವ ಅವಧಿ ಭೂಮಿಯೂ ತನ್ನನ್ನೂ ತಾನು ಸುತ್ತು ಹಾಕುವುದು ಮತ್ತು ಸೂರ್ಯನನ್ನು ಸುತ್ತುವುದನ್ನು ಅವಲಂಬಿಸಿರುತ್ತದೆ. ದಿನವನ್ನು ಚಾಂದ್ರಮಾನದಲ್ಲಿ “ತಿಥಿ” ಎನ್ನುತ್ತಾರೆ.ತಿಥಿ ಜಗತ್ತಿನಾದ್ಯಂತ ಒಂದೇ ಸಮಯಕ್ಕೆ ಶುರುವಾಗಿ ಅಂತ್ಯವಾಗುತ್ತದೆ. ಆದರೆ ನಮ್ಮ ಗಡಿಯಾರದ ದಿನ ಪೂರ್ವ ದೇಶಗಳಲ್ಲಿ ಶುರುವಾಗಿ ಪಶ್ಚಿಮ ದೇಶಕ್ಕೆ ಅಂತ್ಯವಾಗುವುದರಿಂದ ಬೇರೆ ಬೇರೆ ದೇಶಗಳಲ್ಲಿ ಅದರ ಸಮಯ ಬೇರೆಯಾಗುತ್ತದೆ. ಸಂಕ್ರಮಣದ ಲೆಕ್ಕದಲ್ಲಿ ಮೊದಲು ಮೇಷ ಸಂಕ್ರಮಣ (vernal equinox) ಬರುತ್ತದೆ. ಇದೇ ಸಮಯ ವಸಂತ ಋತು ಶುರುವಾಗುತ್ತದೆ. ಯುಗಾದಿ ಎಂದರೆ ಚಾಂದ್ರಮಾನದ ಹೊಸ ವರ್ಷ.ಹೆಸರೇ ಹೇಳುವಂತೆ ಯುಗದ ಆರಂಭ. ಬ್ರಹ್ಮ ಸೃಷ್ಟಿಯ ಕೈಂಕರ್ಯವನ್ನು ಶುರುಗೊಳಿಸಿದ ಎಂದು ಪುರಾಣ ಹೇಳುತ್ತದೆ. ಅದಕ್ಕೆ ಪುಷ್ಟಿಯೆಂಬಂತೆ ನಿಸರ್ಗದಲ್ಲಿ ಗಿಡಮರಗಳಲ್ಲಿ ಹೊಸ ಚಿಗುರು ಬಿಡಲು ಶುರುಮಾಡುತ್ತವೆ. ಅಂದರೆ ನಮ್ಮ ಪುರಾಣಗಳು ಕಟ್ಟುಕತೆಗಳಲ್ಲ ಪ್ರಕೃತಿಯ ಪ್ರತಿಬಿಂಬಗಳು ಎಂಬುದು ಸೂರ್ಯಸತ್ಯ.ಋತುಗಳಿಗೆ ಮತ್ತು ಮಾಸಗಳಿಗೆ ಇಟ್ಟ ಹೆಸರುಗಳನ್ನು ಗಮನಿಸಿ. ಅವು ರಾಜರುಗಳ ಹೆಸರಲ್ಲ. ಅಲ್ಲಿ ಪ್ರಾಕೃತಿಕ ಬದಲಾವಣೆಯ ಸಂಕೇತವಿದೆ. ಉದಾಹರಣೆಗೆ ಗ್ರೀಷ್ಮ ಎಂದರೆ ಬೇಸಿಗೆ,ವೈಶಾಖದ ತದ್ಭವ ಕೂಡಾ ಬೇಸಿಗೆ. ಒಮ್ಮೊಮ್ಮೆ ಚಾಂದ್ರಮಾನ ಮತ್ತು ಸೌರಮಾನ ವರ್ಷಾರಂಭದ ಮಧ್ಯೆ ಒಂದು ವಾರದಿಂದ ಮೂರು ವಾರದವರೆಗೆ ವ್ಯತ್ಯಾಸ ಬರುತ್ತದೆ. ನಾವು ಹೊಸದಾಗಿ ದಿನಗಳನ್ನು ಜೋಡಿಸುವುದಾಗಲಿ ತೆಗೆದು ಹಾಕುವುದಾಗಲೀ ಮಾಡಿಲ್ಲ. ಪ್ರತಿವರ್ಷ ಜನವರಿ ೧ ರಂದೆ ವರ್ಷ ಶುರುವಾದಂತೆ ನಮ್ಮಲ್ಲಿ ಯುಗಾದಿ ನಿಗದಿತ ದಿನದಂದೆ ಬರೋಲ್ಲ. ಸೃಷ್ಟಿಯ ಕೈಯಲ್ಲಿ ನಾವೇ ಹೊರತು ನಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿ ಅಲ್ಲ. ನಮ್ಮ ಕ್ಯಾಲೆಂಡರ್ ಕೃಷಿ ಸಂಬಂಧಿ ಕೆಲಸಕ್ಕೆ ಒಂದು ಅಚ್ಚುಕಟ್ಟಾದ ವೇಳಾಪಟ್ಟಿ ಎಂದರೂ ತಪ್ಪಾಗಲಿಕ್ಕಿಲ್ಲ.ಕಾಂಬೋಡಿಯಾ ದೇಶದಲ್ಲಿ ಅಗ್ರಿಕ್ಯಾಲೆಂಡರ್ ಒಂದನ್ನು ಸೃಷ್ಟಿಸಿ ಮೇಷ ಸಂಕ್ರಮಣದ ದಿನ (ಎಪ್ರಿಲ್ ಮಧ್ಯ ಭಾಗ) ಹೊಸ ವರ್ಷ ಆಚರಿಸೋದು ವಾಡಿಕೆ.

ಗ್ರೆಗೋರಿಯನ್ ಕ್ಯಾಲೆಂಡರ್ ಅಷ್ಟು ಸುಲಭಕ್ಕೆ ಯಾವ ದೇಶದವರೂ ಒಪ್ಪಿಕೊಳ್ಳಲಿಲ್ಲ. ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟರಿಗಿರುವ ಭಿನ್ನಾಭಿಪ್ರಾಯಗಳೂ ಇದಕ್ಕೆ ಕಾರಣ. ೧೭೫೨ರಲ್ಲಿ ಇಂಗ್ಲೆಂಡ್ ಮತ್ತು ಅಮೇರಿಕಾದವರು, ೧೯೧೭ ರಲ್ಲಿ ಟರ್ಕಿ ಇದನ್ನು ಒಪ್ಪಿಕೊಂಡಿತು. ಜಗತ್ತಲ್ಲಿ ಎಲ್ಲಿಯೂ ಸುಲಭಕ್ಕೆ ಒಪ್ಪಿಕೊಳ್ಳದ್ದನ್ನು ನಾವು ಅರಗಿಸಿಕೊಂಡಿದ್ದೇವೆ. ಜನವರಿ ೧ ರ ಬೆಳಿಗ್ಗೆ ಎದ್ದು Happy new year ಎಂದು ಕೈ ಕುಲುಕೋದು ಕಷ್ಟದ ಕೆಲಸವಲ್ಲ. ಭಾರತೀಯ ಸಂಪ್ರದಾಯಗಳು ಕಂದಾಚಾರಗಳಂತೆ ಬಿಂಬಿಸಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಆಧುನಿಕತೆಯನ್ನು ಲೇಪಿಸಿ ನಮ್ಮವರನ್ನು ಸೆಳೆದುಕೊಳ್ಳುತ್ತಿರುವುದು ದುರಂತ. ಡಿಸೆಂಬರ್ ೩೧ ರ ರಾತ್ರಿಯಲ್ಲಿ ಕುಡಿದು ಕುಪ್ಪಳಿಸಿ ೫,೪,೩,೨,೧ ಎಂದು ಕ್ಷಣಗಣನೆ ಮಾಡುತ್ತಾ ಅತಿರೇಕಗಳ ಮಧ್ಯೆ ರಾತ್ರಿ ಕಳೆದು ಒಂದನೇ ತಾರೀಖು ಫುಟ್’ಪಾತ್’ನಲ್ಲಿ ಎದ್ದೇಳುವುದು ಆಧುನಿಕತೆ, ವೈಚಾರಿಕವಾದ ಎಂದು ನಿಮಗನಿಸಿದರೆ, ಯುಗಾದಿಯ ದಿನ ಸೂರ್ಯೋದಯದ ಹೊತ್ತಿಗೆ ಅಭ್ಯಂಗ ಮಾಡಿ ದೇವರ ಗುಡಿಯಲ್ಲಿ ಘಂಟಾನಾದ ಮಂತ್ರ ಪಠಣದೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳುವುದು ನಮಗೆ ಸಂಸ್ಕಾರ ಎನಿಸುತ್ತದೆ.
ಮತ್ತೊಮ್ಮೆ ಆಯ್ಕೆ ನಿಮ್ಮದೇ ಆಧುನಿಕತೆಯ ಗಮ್ಯದೆಡೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೊರಟಿರುವ ಯುವಕರಿಗೆ ಮುಂದೊಮ್ಮೆ ತೆಗೆದುಕೊಳ್ಳುವಲ್ಲಿ ತಿರುವು ತೆಗೆದುಕೊಳ್ಳದೇ ವ್ಯರ್ಥವಾಗಿ ತಪ್ಪು ದಾರಿಯಲ್ಲಿ ಬಂದದ್ದಕ್ಕೆ ಪಶ್ಚಾತ್ತಾಪ ಪಡಬೇಕಾದೀತು ಜೋಕೆ.

Facebook ಕಾಮೆಂಟ್ಸ್

Rahul Hajare: ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.
Related Post