X

ಡಿಯರ್ ಮಾಹಿ, ವೀ ವಿಲ್ ಮಿಸ್ ಯು….!

ಏಕದಿನ ವಿಶ್ವಕಪ್ 2007.

ಟೀಮ್ ಇಂಡಿಯ 1992 ರ ನಂತರ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ವಿಶ್ವಕಪ್ ಸರಣಿಯೊಂದರಿಂದ ಹೊರ ಬಿದ್ದಿತ್ತು. ಆಟಗಾರರ ವಿರುದ್ದ ದೇಶದಾದ್ಯಂತ ಅಸಮದಾನದ ಕಾವು ಸಹಜವವಾಗಿಯೇ ವ್ಯಕ್ತವಾಗಿತ್ತು. ಅದಾಗಲೇ ತಂಡದ ಕೋಚ್ ಗ್ರೆಗ್ ಚಾಪೆಲ್ ವಿರುದ್ದ ತಂಡದಲ್ಲಿ ಅಸಮದಾನದ ದ್ವನಿ ಭುಗಿಲೆದ್ದಿತ್ತು. ಅಷ್ಟರಲ್ಲಾಗಲೇ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಚುಟುಕು ಓವರ್ಗಳ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಶುರುವಾಗುವುದರಲ್ಲಿತ್ತು. ಈ ವಿನೂತನ ಸರಣಿಗೆ ಭಾರತ ಅರ್ಹತೆಯನ್ನೂ ಪಡೆದಿತ್ತು. ತಂಡದ ಹಿರಿಯ ಆಟಗಾರರೂ ಅಂದು ಈ ಚುಟುಕು ಓವರ್ಗಳ ಪಂದ್ಯದಿಂದ ತಮ್ಮನ್ನು ಹೊರಗುಳಿಸಿಕೊಂಡರು. ಯುವ ಆಟಗಾರರ ಹೊಸದೊಂದು ತಂಡವನ್ನು ಕಟ್ಟಬೇಕಾಗಿತ್ತು. ವಿಭಿನ್ನ ಮಾದರಿಯ ಈ ಸರಣಿ ಎಲ್ಲರಲ್ಲೂ ಕೂತುಹಲವನ್ನು ಕೆರಳಿಸಿದರೆ, ಆಟಗಾರರಿಗೆ ತಮ್ಮ ಏಕದಿನ ವಿಶ್ವಕಪ್ ನ ಸೋಲಿನ ಕರಿ ಛಾಯೆ ಇನ್ನೂ ದಟ್ಟವಾಗಬಹುದೆಂಬ ಭಯವನ್ನು ಮನೆ ಮಾಡಿತ್ತು. ತಂಡದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, ವಿಮರ್ಶಕರ ಕುಹಕ ನುಡಿಗಳಿಗೆ, ಮಾಧ್ಯಮಗಳ ಬೇಜಾವಾಬ್ದಾರಿ ಹೇಳಿಕೆಗಳಿಗೆ  ಅಲ್ಲದೆ  ಹಿಂದಿನ ಸರಣಿಗಳ ಸೋಲಿನ ಮುಖಭಂಗಗಳಿಗೂ ದಿಟ್ಟ ಉತ್ತರವನ್ನು ಕೊಡಬೇಕಿತ್ತು. ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವ ಕಪ್ ಗೆ ಭಾರತ ತಂಡದ ಒಬ್ಬ ಸಮರ್ಥ ನಾಯಕನ ಅರಸುವಿಕೆ ಶುರುವಾಗಿತ್ತು.

 

ಇಂದು ಧೋನಿ, ಅವನ ಆರಂಭಿಕ ಜೀವನ, ದಾಂಪತ್ಯ ಜೀವನ, ಅಂಕಿ ಅಂಶಗಳು ಎಲ್ಲವನ್ನು ಬಿಟ್ಟು ಕೇವಲ ಅವನ ನಾಯಕತ್ವದ ಬಗ್ಗೆ ಮಾತನಾಡೋಣ. ಅಷ್ಟಾಗ್ಯೂ ಅವನ ಜೀವನದ ಬಗ್ಗೆ ತಿಳಿಯಬೇಕೆನಿಸಿದರೆ ಒಮ್ಮೆ ಆತನ ಜೀವನ ಚರಿತೆ ಆಧಾರಿತ ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರವನ್ನು ನೋಡಿದರಾಯಿತು.

 

ಧೋನಿಯ ಹೆಸರನ್ನು ನಾಯಕನ ಸ್ಥಾನಕ್ಕೆ ಸೂಚಿಸಿದ ಶ್ರೇಯ ಸಚಿನ್ ಹಾಗು ದ್ರಾವಿಡ್’ರಿಗೆ ಸೇರಬೇಕು. ನಾಯಕರಾಗಿ ನಾಯಕನನ್ನು ತಂಡದ ಒಬ್ಬ ಸಾಮಾನ್ಯ ಆಟಗಾರನಲ್ಲಿ ಕಾಣುವುದೂ ಅಷ್ಟು ಸುಲಭದ ಕೆಲಸವಲ್ಲ. ಅಂತೂ ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವಕಪ್ನ ನಾಯಕನಾಗಿ ಧೋನಿ ಕಣಕ್ಕಿಳಿಯುತ್ತಾನೆ.ಕೇವಲ ಹೊಡಿ-ಬಡಿ ಆಟಕ್ಕೆ ಹೆಸರಾಗಿದ್ದ ಧೋನಿ ನಾಯಕನಾಗಿ ತಂಡವನ್ನು ಹೇಗೆ ಮುನ್ನೆಡೆಸಬಹುದೆಂದು ದೇಶವೇ ಕಾತುರದಿಂದ ಕಾಯತೊಡಗಿತ್ತು. ಸ್ಕೋರ್ಟ್ಲ್ಯಾಂಡ್ ವಿರುದ್ದದ ಮೊದಲ ಪಂದ್ಯ ರದ್ದಾದ ಬಳಿಕ ಭಾರತದ ನಂತರದ ಎದುರಾಳಿ ಪಾಕಿಸ್ತಾನ! ವಿಶ್ವಕಪ್ ಸರಣಿಯಲ್ಲಿ ಪ್ರತಿ ಬಾರಿಯೂ ಪಾಕಿಸ್ಥಾನವನ್ನು ಭಾರತ ಸೋಲಿಸಿ ಬಗ್ಗು ಬಡಿಯುವುದೇ ಸರಣಿಯ ಒಂದು ಅದ್ಬುತ ಹೈಲೈಟ್. ಹಾಗಾಗಿ ಭಾರತ ದಶಕಗಳಿಂದ ಉಳಿಸಿಕೊಂಡು ಬಂದ ಈ ಅಮೋಘ ದಾಖಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮತ್ತೊಮ್ಮೆ ಎದುರಾಗಿತ್ತು. ಧೋನಿಯ ನಾಯಕತ್ವದ ಪರೀಕ್ಷೆಗೆ ವೇದಿಕೆ ಸಜ್ಜಾಗಿತ್ತು. ಅಂದು ಮೊದಲು ಬ್ಯಾಟ್ ಬೀಸಿ 141 ರನ್ ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿದ ಭಾರತ ಪಾಕಿಸ್ತಾನದ ವಿರುದ್ಧ ಸೋಲುವುದು ಖಚಿತವೆಂಬ ಮಾತುಗಳು ಹರಡತೊಡಗಿತು. ಅದಾಗಲೇ ಧೋನಿಯ ವಿರುದ್ಧ ಸಾಲು ಸಾಲು ತೆಗಳಿಕೆಯ ಪದಗಳನ್ನು ಬರೆದು ಕಿಚಾಹಿಸುವ ವರದಿಗಳೂ ದೃಶ್ಯ ಮಾಧ್ಯಮಗಳಲ್ಲಿ ಸಿದ್ಧವಾಗತೊಡಗಿದವು. ಆದರೆ ನಂತರದ ಇಪ್ಪತ್ತು ಓವರ್ಗಳ ಬಳಿಕ ಇವರೆಲ್ಲರ ಲೆಕ್ಕಚಾರ ತಲೆಕೆಳಗಾದವು. ಧೋನಿಯ ನಾಯಕತ್ವದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಾ ವಟಗುಡುತ್ತಿದ್ದ ಅದೆಷ್ಟೋ ಬಾಯಿಗಳು ತೆಪ್ಪಗಾಗತೊಡಗಿದವು. 141 ರನ್ ಗಳನ್ನು ಕಷ್ಟಪಟ್ಟು ತಲುಪಿದ ಪಾಕಿಸ್ತಾನ ಪಂದ್ಯವನ್ನು ಟೈ ಮಾಡಿಕೊಂಡಿತು. ನಂತರ ಬಾಲ್ ಔಟ್ ನ ಮುಖೇನ ಗೆಲುವನ್ನು ನಿರ್ಧರಿಸಬೇಕಾಯಿತು. ಗೆಲ್ಲಲೇಬೇಕಾದ ಆ ಮಹತ್ವದ ಘಳಿಗೆಯಲ್ಲೂ ಉತ್ತಪ್ಪನಂತ ಬ್ಯಾಟ್ಸಮನ್ ಒಬ್ಬನಿಗೆ  ಬೌಲ್ ಮಾಡಲು ಹೇಳಿದಾಗಲೇ ಧೋನಿಯ ವಿಭಿನ್ನ ಬಗೆಯ ಆಲೋಚನೆ ಕ್ರೀಡಾಲೋಕಕ್ಕೆ ಪರಿಚವಾಯಿತು. ಅಂತೂ ಭಾರತ ಎಂದಿನಂತೆ ಪಾಕಿಸ್ಥಾನವನ್ನು ಸೋಲಿಸಿ ಮಕಾಡೆ ಕೆಡವಿತು. ಅಲ್ಲದೆ ಸರಣಿಯುದ್ದಕ್ಕೂ ಭಾರತ ಕೇವಲ ಒಂದು ಪಂದ್ಯವನ್ನು ಸೋತದ್ದು ಬಿಟ್ಟರೆ ಉಳಿದಂತೆ ಅಷ್ಟೂ ಪಂದ್ಯಗಳನ್ನು ಗೆದ್ದು ಬೀಗಿತು. ಧೋನಿಗೆ ಈ ಸರಣಿ ಪಾಕಿಸ್ತಾನದ ವಿರುದ್ಧ ಗೆಲುವಿನಲ್ಲಿ ಶುರುವಾಗಿ ಪಾಕಿಸ್ತಾನದ ವಿರುದ್ಧವೇ ಗೆಲುವಿನಲ್ಲಿ ಕೊನೆಗೊಂಡಿತು. ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಭಾರತದ ಮುಡಿಗೇರಿತು. ಹೀಗೆ ಧೋನಿಯೆಂಬ ನಾಯಕನ ಹೆಸರು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿತ್ತು.

 

ಹನ್ನೊಂದು ಜನರ ಈ ಆಟದಲ್ಲಿ ಸೋತರೂ ಅಥವಾ ಗೆದ್ದರೂ ಜನರ ಗುರಿಯಾಗುವುದು ಹೆಚ್ಚಾಗಿ ನಾಯಕನೊಬ್ಬನೇ. ಗೆದ್ದರೆ ಹೊಗಳಿ ಸೋತರೆ ಹೀನಾಯವಾಗಿ ತೆಗಳುವ ಕೋಟ್ಯಾನುಕೋಟಿ ಜನಗಳ ಮದ್ಯೆ ನಾಯಕನಾದವನು ತಂಡವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಗೆದ್ದಾಗ ಹಿರಿ ಹಿರಿ ಹಿಗ್ಗದೇ, ಸೋತಾಗ ಸಿಡುಕಿ ನಂತರ ಕುಗ್ಗದೆ ಜಾಣ್ಮೆಯಿಂದ ಹೆಜ್ಜೆಗಳನ್ನು ಇಡಬೇಕು. ಧೋನಿ ಈ ಎಲ್ಲ ಮಾತುಗಳಿಗೆ ಅನ್ವರ್ಥ ರೂಪವೆನ್ನಬಹುದು. ಅದು 2011 ರ ಏಕದಿನ ವಿಶ್ವಕಪ್ ಗೆದ್ದ ಘಳಿಗೆಯಾಗಲಿ ಅಥವಾ ಹೊರದೇಶಗಳಲ್ಲಿ ಟೆಸ್ಟ್ ಪಂದ್ಯಗಳ ಸರಣಿ ಸೋಲಾಗಲಿ, ಈತನ ತಾಳ್ಮೆಯ ಲಹರಿ ಸೋಲು-ಗೆಲುವಲ್ಲೂ ತಂಬೂರಿಯ ಸ್ವರದಂತೆ ಒಂದೇ ಸಮನಾಗಿರುತ್ತದೆ. ಸಿಟ್ಟು ಹೆಚ್ಚಿದಷ್ಟೂ ನಿರ್ಧಾರಗಳು ಹುಳುಕಾಗುತ್ತವೆ ಎಂಬುದನ್ನು ಕರಗತಮಾಡಿಕೊಂಡಿದ್ದ ಧೋನಿ ಆಡುವಾಗ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಅದೆಷ್ಟೋ ಆಟಗಾರರಂತೆ ಸಿಡುಕುವುದಾಗಲಿ, ಇತರ ಆಟಗಾರರನ್ನು ಕಿಚಾಯಿಸುವುದಾಗಲಿ, ಕಿಚಾಯಿಸಿ ಜಗಳ ಕಾಯುವುದಾಗಲಿ ಮಾಡಿರುವ ಉದಾಹರಣೆಗಳಿಲ್ಲ. ಅಲ್ಲದೆ ಈತನ ‘ಥಿಂಕ್ ಔಟ್ ಆಫ್ ದಿ ಬಾಕ್ಸ್’ ಯೋಚನೆಗಳಿಗೆ ಹಾಗು ಅದನ್ನು ಕಾರ್ಯಗತ ಮಾಡುವ ಯೋಜನೆಗಳಿಗೆ ಯಾರೊಬ್ಬರ ಹೋಲಿಕೆಯೇ ಸಾಧ್ಯವಲ್ಲ ಎನ್ನಬಹುದು. ಅದು 2007 ರ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ನ ಕೊನೆಯ ಓವರ್ ನ  ಮಹತ್ವವನ್ನು ಅರಿತು  ಜೋಗಿಂದರ್ ಶರ್ಮ ನಂತ ಅನನುಭವಿ ಬೌಲರ್ ಗೆ ಬೌಲ್ ಮಾಡಲು  ಬಿಟ್ಟ ನಿರ್ಧಾರವಾಗಿರಬಹುದು, 2011 ವಿಶ್ವ ಕಪ್ನ ಫೈನಲ್ ನಲ್ಲಿ  ದಿಢೀರ್ ಕುಸಿತವನ್ನು ಕಂಡು ಆತಂಕದ ಸ್ಥಿತಿಯಲ್ಲಿದ್ದ ತಂಡವನ್ನು ಸಂಭಾಳಿಸಲು ಆಡುವ ಕ್ರಮಾಂಕವನ್ನೇ ಬದಲಿಸಿ ತಾನೇ ಮೊದಲು ಬಂದು ಆಡಿ ಗೆಲ್ಲಿಸಿದ ಘಳಿಗೆಯಾಗಿರಬಹುದು, ಅಥವಾ ರಾಹುಲ್ ದ್ರಾವಿಡ್ ರ ನಿವೃತ್ತಿಯ ನಂತರ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾದ್ಯವಲ್ಲವೆಂದು ಹೇಳುತ್ತಿರುವಾಗ ಚೇತೇಶ್ವರ್ ಪೂಜಾರನನ್ನು ಆ ಸ್ಥಾನಕ್ಕೆ ತಂದು ಹುರಿದುಂಬಿಸಿದ ಪರಿಯಾಗಲಿ, ಅಶ್ವಿನ್ , ಜಡೇಜಾರಂತ ಆಟಗಾರರನ್ನು ಇಂದು ಕ್ರಿಕೆಟ್ ದಂತಕಥೆಗಳನ್ನಾಗಿ ಮಾಡಿದ ಬಗೆಯಾಗಲಿ, ಇನ್ನು ಹಲವು ಮಜಲುಗಳಲ್ಲಿ  ಧೋನಿ ಮಹತ್ತರವಾದ ಕಾರ್ಯಗಳನ್ನು ಮಾಡಿ ದೇಶ ಕಂಡ ಅತಿ ಯಶಸ್ವೀ ನಾಯಕನಾಗಿದ್ದಾನೆ. ಅದಕ್ಕೆ ಅವನ ರಾಶಿ ರಾಶಿ ಅಂಕಿ-ಅಂಶಗಳೇ ಸಾಕ್ಷಿ. ಹೀಗೆ ಒಬ್ಬ ಮಿಂಚಿನ ವೇಗದ ವಿಕೆಟ್ ಕೀಪರ್ ಆಗಿ, ಸುಮಾರು ಹತ್ತು ವರ್ಷಗಳ ಕಾಲ ವಿಶ್ವದ ಟಾಪ್ ಟೆನ್ ಅಗ್ರಮಾನ್ಯ ಬ್ಯಾಟ್ಸಮನ್ ಗಳಲ್ಲಿ ಒಬ್ಬನಾಗಿ, ವಿಶ್ವದ ದಿ ಗ್ರೇಟ್ ನಾಯಕರಲೊಬ್ಬರಾಗಿ, ಧೋನಿ ಇಂದು ಎಲ್ಲರ ಮನ ಗೆದ್ದಿದ್ದಾನೆ.

 

ಒಮ್ಮೆ ನಾಯಕನಾದರೆ ಅದು ಪಂದ್ಯದ ಮಟ್ಟಿಗೆ ಮಾತ್ರ ಸೀಮಿತವಾಗುವುದಿಲ್ಲ. ಅದು ನೆರಳಿನಂತೆ ಅವನು ಹೋದಲೆಲ್ಲಾ ಹಿಂಬಾಲಿಸುತ್ತಲೇ ಇರುತ್ತದೆ. ಆದ ಕಾರಣ ಅವನ ಪ್ರತಿಯೊಂದು ನಡೆಯಲ್ಲೂ, ಮಾತಿನಲ್ಲೂ ಅವನ ನಾಯಕತ್ವದ ಗುಣಗಳನ್ನೇ ಜನ ನೋಡಲು ಆಶಿಸುತ್ತಾರೆ. ಈ ವಿಚಾರಕ್ಕೆ ಬಂದರೆ ಧೋನಿಯದು ಒಂದು ಮಟ್ಟಿಗೆ ಪ್ರಬುದ್ಧ ನಡತೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ನ ಗೌರವ ಹುದ್ದೆಯನ್ನು ಹೊಂದಿರುವ ಧೋನಿ ತನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಸಮಯವನ್ನು ಸೈನಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ. ನಿವೃತ್ತಿಯ ನಂತರ ದೇಶಕ್ಕೆ ಏನಾದರು ಮಾಡಬೇಕೆಂಬ ಈ ನಾಯಕನ ಕಾಳಜಿ ಇಂದಿನ ಹಲವು ಯುವಕರಿಗೆ ಸ್ಪೂರ್ತಿಧಾಯಕ. ಅಲ್ಲದೆ ಮಾತಿನಲ್ಲೂ ಸಹ ಎಲ್ಲಿಯೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಒಳಗಾಗಿರುವುದು ಅತಿ ವಿರಳ. 2015 ರ ಕ್ರಿಕೆಟ್ ವರ್ಲ್ಡ್ ಕಪ್ ಆಡುವಾಗ ಜನಿಸಿದ ತನ್ನ ಮಗಳ ಕುರಿತು ‘ನಿಮ್ಮ ಮಗಳು ಜನಿಸಿದ ಖುಷಿಯಲ್ಲಿ ನಿಮಗೆ ಆಡಲು ಅಡಚಣೆಯಾಗುತ್ತಿಲ್ಲವೇ?’ ಎಂದು ಯಾರೋ ಕೇಳಿದ ಪ್ರೆಶ್ನೆಗೆ, ‘ನಾನಿಲ್ಲಿ ದೇಶದ ಕೆಲಸದಲ್ಲಿದ್ದೀನಿ, ಮೊದಲು ದೇಶ ನಂತರ ಉಳಿದದ್ದು’ ಎಂಬ ನಾಯಕನ ಮಾತಿನಲ್ಲೇ ಧೋನಿಗೆ ದೇಶದ ಬಗ್ಗೆ ಅದೆಷ್ಟು ಕಾಳಜಿ ಇದೆಯಂದು ತಿಳಿಯುತ್ತದೆ.

ತಂಡಕ್ಕೆ ವಿಕೆಟ್ ಕೀಪರ್ ನ ಅವಶ್ಯಕತೆಯಿದ್ದಾಗ, ಅಗ್ರಮಾನ್ಯ ಬ್ಯಾಟ್ಸಮನ್ ಗಳೆಲ್ಲ ಉದುರಿ ತಂಡಕ್ಕೆ ಇನ್ನಿಂಗ್ಸ್ ಕಟ್ಟುವ ಅವಶ್ಯಕತೆಯಿದ್ದಾಗ, ಗೆಲ್ಲಲು 6 ಎಸೆತಕ್ಕೆ 23 ರನ್ನುಗಳು ಬೇಕಾದಾಗ ಅಥವಾ ಕಳೆಗುಂದಿದ ತಂಡಕ್ಕೆ ಒಬ್ಬ ಸ್ಪೂರ್ತಿಧಾಯಕ ನಾಯಕನ ಅವಶ್ಯಕತೆಯಿದ್ದಾಗ ಧೋನಿಯ ಹೆಸರೇ ಇಲ್ಲಿಯವರೆಗೂ ಕೇಳಿಬರುತ್ತಿತ್ತು..

 

ಇಂದು ಧೋನಿ ತನ್ನ ನಾಯಕನ ಸ್ಥಾನದಿಂದ ಕೆಳಗಿಳಿದ್ದಿದ್ದಾನೆ. ಮುಂದಿನ ಏಕದಿನ ವಿಶ್ವಕಪ್ಗೆ ಇನ್ನು ಕೇವಲ ಐವತ್ತರಿಂದ ಅರವತ್ತು ಏಕದಿನ ಪಂದ್ಯಗಳಿರುವಾಗ ನಾಳಿನ ದಿನಗಳ ಕಾಳಜಿಯನ್ನು ಹೊತ್ತು ಸೂಕ್ತ ಸಮಯದಲ್ಲಿ ಮುಂಬರುವ ಪೀಳಿಗೆಗೆ ನಾಯಕತ್ವದ ಸ್ಥಾನವನ್ನು ತೆರವು ಮಾಡಿರುವುದು  ನಾಯಕನ ಮತ್ತೊಂದು ಲಕ್ಷಣ. ತನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಧೋನಿ ಕಳೆದ ಒಂಬತ್ತು ವರ್ಷಗಳಲ್ಲಿ ತಂಡದ ನಾಯಕನಾಗಿ ದೇಶದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿದ್ದಾನೆ. ನಾಯಕನೆಂಬ ಪದಕ್ಕೆ ಒಂದು ಹೊಸ ರೂಪವನ್ನೇ ಕೊಟ್ಟಿದ್ದಾನೆ. ಇಂತಹ ಸಾರಥಿ ಮತ್ತಷ್ಟು ಪಂದ್ಯಗಳಲ್ಲಿ ಆಡಲಿ ಹಾಗು ತನ್ನ ಹೆಲಿಕ್ಯಾಪ್ಟಾರ್ ಹೊಡೆತದಿಂದ ಮಗದಷ್ಟು ಪಂದ್ಯಗಳನ್ನು ಗೆಲ್ಲಿಸಲಿ ಎಂಬುದೇ ಈತನ ಎಲ್ಲಾ ಅಭಿಮಾನಿಗಳ ಆಶಯ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post