ಹುಟ್ಟಿದಾಗ ಹಚ್ಚಿಟ್ಟ ದೀಪದ ಬೆಳಕು
ಹೆಚ್ಚಾಗಿ ಸುತ್ತುತಿದೆ ಕಟ್ಟಿಗೆಯ ಕಟ್ಟೆಯನು
ಪಂಚಕರ್ಮಗಳ ಪಂಚೆಯನು ಬಿಚ್ಚಿ
ನಟ್ಟ ನಡುವೆ ಬಚ್ಚಿಟ್ಟ ಬೆತ್ತಲೆ ದೇಹವನು..
ಸುತ್ತ ಒಂದಿಷ್ಟು ಮಂದಿ
ಮಾತುಗಳನು ಕೊಂದು ನಿಂತು
ಕಣ್ಣೀರಿಗೆ ಹರಿವ ದಾರಿಯ ತೋರಿ
ಕೈಗಳಿಗೆ ತಡೆಯುವ ಕೆಲಸ ಕೊಟ್ಟು
ಹೆಗಲ ಮೇಲೊಂದು ಹೊಸದು ಮಡಿಕೆ
ಸುತ್ತಿಗೊಂದು ಬಾರಿ ಕತ್ತಿಯಿಂದ ಕುಟ್ಟುತ್ತಾ
ಹರಿದಿದೆ ಯಾರ ಹೆಸರೂ ಇರದ ನೀರು
ಬಿದ್ದ ಜಾಗದಲಿ ಹೊಸ ಚಿಗುರಿಗೆ ಕಾಯುತ್ತಾ
ದೀಪವೋ.. ದೊಂದಿಯೋ..
ಬೇಯುವ ದೇಹವ ದಹಿಸಲು ಅದೆಷ್ಟು ಮಂದಿಯೋ
ಕಿಡಿಯೊಂದು ಕೆರಳಿತು ಸಿಕ್ಕಿ ತಂಗಾಳಿಯ ಉಸಿರು
ಎದ್ದಿತು ಸುತ್ತಲೂ ಹತ್ತಲೆಯ ಬೆಂಕಿ ಪೈರು
ಕೊನೆಯದೊಂದು ಆಕ್ರಂದನ ಕಾದು ನಿಂತವರಲ್ಲಿ
ಮತ್ತೆ ನಿತ್ಯದ ದಾರಿಗೆ ಹೋಗುವ ತವಕದಲ್ಲಿ
ಇಲ್ಲಿ ದೇಹವಿಲ್ಲ.. ಉಸಿರಿನ ದಾಹವಿಲ್ಲ..
ಉಳಿದಿಹುದು ಬದುಕು ಬೂದಿಯಲಿ ಸೇರಿದ ಕಥೆ
ಅಳಿದಿಹುದು ಬೆಂಕಿ ಬಿಗಿದಪ್ಪಿ ಬೆಳಗಿದ ಚಿತೆ
ಚಿತ್ರ: ಇಂಟರ್’ನೆಟ್
-ಅವಿನಾಶ್ ಶೆಟ್ಟಿಗಾರ್
Facebook ಕಾಮೆಂಟ್ಸ್