ಕಲ್ಲು ಮೂಳೆಗೆ ಮಣ್ಣ ತೊಗಲು
ಗೋಡೆ ಮೇಲೆ ಕುಂತ ಪಾತ್ರೆ
ಹಗುರ ದಪ್ಪ ಉದ್ದ ವಿರಳ
ಒರಟು ಡೊಂಕು ಕಣ್ಣ ತಂಪು
ಅರ್ಧ ಸೀಳಿದ ನಗ್ನ ಸೌದೆ..
ಗೆದ್ದಲಿಡಿವ ಮುನ್ನ ಸೇರಿಕೊಂಡ
ನೀರನೊಸರದ ತೆಂಗು
ತೂತು ಕೊರೆದ ಮಧ್ಯ ಕೋಟೆ..
ತಿಕ್ಕಿಕೊಂಡ ಬಣ್ಣಗಳ ಕಾವಿಗೆ
ಸುಟ್ಟಿಕೊಂಡವು ತಮ್ಮ ಕೂದಲು..
ಮಧ್ಯ ಮಧ್ಯ ಉಸಿರು ಅವಳದು…
ತಳವ ಸೋಕಿ ಗಾಳಿ ಜೀಕಿ
ಅಲ್ಲೇ ನಿಂತುಕೊಂತು ಧೂಮ
ಮೊದಲ ಬಾರಿಗೆ
ಗೆಜ್ಜೆ ತೊಟ್ಟ ಹುಡುಗಿಯಂತೆ..
ಹಂಗುಗಳ ಎಂಜಲು ತಿಕ್ಕಿದ
ಪುಟದಿ ಹೊಸ ಪೀಠಿಕೆ..
ಒಮ್ಮೊಮ್ಮೆ ಅಲ್ಲೇ ಎದ್ದು ಕೂರುವಾಸೆ
ಎಲ್ಲ ಅಕ್ಷರಕೆ…
ಅಕ್ಕಿ ಬೆಂದ ಬೆಂಕಿಯಲ್ಲೇ
ಕದ್ದು ಸುಟ್ಟನಂತೆ, ಓ ಅವನು..
ಗೋಗರೆದು ಕೊಂಡ ನಾಲ್ಕು ಮೀನು
ಬೆಂದು ತಿಂದ ಮೇಲೆ
ಶವಕೆ ಮುಕ್ತಿ..
ಸಾಕ್ಷಿಗಂತೆ ಎದೆಯ ಮುಳ್ಳು
ಸರಸದಲ್ಲಿ ಹರಡಿಕೊಂಡ
ಒಂದೇ ಬಣ್ಣದ ಪುಡಿ
ಒಟ್ಟು ಸ್ರವಿಸಿ ಉಳಿದ ಹೆಪ್ಪು ಮೇಣ
ಇಂಗಿಕೊಂಡ ಗಂಧ..
ಕಕ್ಕಬೇಕೇ ಸಹ್ಯ ಅಸಹ್ಯಗಳ
ಉದುರಿಬಿದ್ದ ಒಂಟಿ ರೆಕ್ಕೆ ಮೇಲೆ!..
ಮುಖಾಮುಖಿಯಾಗುತ್ತೇವೆ ನಾಳೆ
ಹಳಸಲು ತಿಂದ ಆ
ತಗಡು ಪಾತ್ರೆ ದಂಟುಕೋಲಿನವನು
ಮತ್ತು ಹೊಟ್ಟೆಯುಬ್ಬಿದ ನಾನು..
ಯಾರ ನಗುವಿನಲ್ಲಿ ಅನ್ನದಗಳು
ಕಂತ ಹಸಿವ
ನೀಳ ನೆರಳ ಬಿಟ್ಟಿಹುದೋ
ಯಾರ ಕಣ್ಣ ರೆಪ್ಪೆಗೆಷ್ಟು ತೂಕವೋ..
ಮತ್ತೆ ಅವಳು ಒಲೆಯ ಇದಿರು…
Facebook ಕಾಮೆಂಟ್ಸ್