ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೩೯
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸೆದೇತಕವನೀಯನೆಮಗೊಂದು ನಿಜ ಕುರುಹ |
ನಿಶೆಯೊಳುಡುಕರದವೋಲು ? – ಮಂಕುತಿಮ್ಮ || ೩೯ ||
ಎಂತಹ ಸೊಗಸಾದ ಚಮತ್ಕಾರಿಕ ಪದ ಪ್ರಯೋಗವಿದು, ನೋಡಿ ! ಪುಸಿಯ ಪುಸಿಗೈದು – ಅರ್ಥಾತ್ ಸುಳ್ಳನ್ನೆ ಸುಳ್ಳು ಮಾಡಿ. ಸುಳ್ಳು ಸುಳ್ಳಾಗುವುದು ಎಂದರೆ ನಿಜದ ಅಥವ ಸತ್ಯದ ಅನಾವರಣವಾಗುವುದು ಎಂದು ತಾನೆ ಅರ್ಥ ? ಸುಳ್ಳೆ ಸುಳ್ಳಾಗಿ ಹೋದರೆ ಅದು ನಿಜವನ್ನು ಮಾತ್ರ ಉಳಿಸಿಕೊಂಡ ಹಾಗೆ.
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಹಿಂದಿನ ಪದ್ಯಗಳಲ್ಲೊಮ್ಮೆ ಈ ಪರಬ್ರಹ್ಮದ ಅಸ್ತಿತ್ವ ಮಿಥ್ಯೆಯ ಹಿಂದೆ ಅಡಗಿದೆಯೆಂಬ ಪ್ರಸ್ತಾಪವಾಗಿತ್ತು. ಆ ಮಿಥ್ಯೆಯನ್ನೆ ಸುಳ್ಳು ಮಾಡಿಬಿಟ್ಟರೆ ಅಥವಾ ಹಾಗೆ ಮಾಡಲು ಸಾಧ್ಯವಾಗುವುದಾದರೆ, ಆಗ ಅದರ ಹಿಂದೆಯಿರುವ ಪರಬ್ರಹ್ಮದ ನಿಜಸ್ವರೂಪ ಬಯಲಾಗಲೆ ಬೇಕಲ್ಲವೆ?
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಂದು ವೇಳೆ ಆ ಅಸಾಧ್ಯದ ಕಾರ್ಯವನ್ನು ಯಾರೊ ಸಾಧ್ಯವಾಗಿಸ ಹೊರಟರೆಂದೆ ಇಟ್ಟುಕೊಂಡರು , ಪರಬ್ರಹ್ಮನೇನು ಕಾಣಿಸಿಬಿಡುವನೇನು? ಹಾಗೆ ಸುಳ್ಳಿನ ಆವರಣ ತೆಗೆದು ಸತ್ಯದ ಅನಾವರಣ ಮಾಡಿದರೂ, ಯಾರೂ ತನ್ನನ್ನು ಕಾಣಲಾಗದಂತೆ ಮುಸುಕು ಹಾಕಿಕೊಂಡಿರುವನಂತಲ್ಲಾ ಆ ಪರಬ್ರಹ್ಮ? ಅಂದರೆ ಆ ಸುಳ್ಳನ್ನು ಸುಳ್ಳು ಮಾಡಿದರು ಅವನನ್ನು ಕಾಣಲು ಸಾಧ್ಯವಿಲ್ಲ ಎಂದಾಯ್ತಲ್ಲವೆ?
ಒಸೆದೇತಕವನೀಯನೆಮಗೊಂದು ನಿಜ ಕುರುಹ |
ಎಷ್ಟೆಲ್ಲ ತಪ, ಯೋಗ, ಹಠಸಾಧನೆಯೆಲ್ಲಾ ಮಾಡಿ ಸುಳ್ಳಿನ ಪರದೆ ಹರಿದರು, ಅದರಿಂದ ಅವನತ್ತ ಒಂದು ಹೆಜ್ಜೆ ಹತ್ತಿರಕ್ಕೆ ಹೋದಂತಾಯಿತೆ ಹೊರತು, ಅವನಿನ್ನು ಕೈಗೆ ಸಿಗಲಿಲ್ಲ. ಅಲ್ಲಿಯೂ ಕಾಣಿಸದೆ, ಸಿಗದೆ ಆಟವಾಡಿಸುತ್ತಾನವನು. ಯಾಕಿಂತಹ ಹಠವವನಿಗೆ ? ತನ್ನತ್ತ ಬರ ಮಾಡಿಕೊಳ್ಳಲು ಅವನೇಕೆ ಅಷ್ಟೊಂದು ಪರೀಕ್ಷೆ, ಯತ್ನ, ಸಾಧನೆಯಾದಿಯಾಗಿ ನೂರೆಂಟು ಯಾತನೆಯನ್ನನುಭವಿಸುವಂತೆ ಮಾಡಬೇಕು? ಸುಲಭದಲ್ಲಿ ಕೈಗೆಟುಕಬಹುದಾದ ಒಂದು ನೈಜ ಕುರುಹನ್ನಾದರೂ ಒದಗಿಸಿ ಅವನನ್ನು ಕಾಣುವ ಕೆಲಸವನ್ನು ಸುಲಭವಾಗಿಸಬಾರದೇ ?
ನಿಶೆಯೊಳುಡುಕರದವೋಲು ? – ಮಂಕುತಿಮ್ಮ ||
ಚಂದ್ರನ ಬೆಳಕಿಲ್ಲದ ಗಾಢಾಂಧಕಾರದ ನೆರಳಲ್ಲಿ ನಡೆಯುವಾಗ ನಿಚ್ಛಳ ಬೆಳಕಿರದಿದ್ದರೂ ಕೇವಲ ನಕ್ಷತ್ರವೊಂದರ ಕ್ಷೀಣ ಬೆಳಕಿದ್ದರು (ಉಡುಕರ = ನಕ್ಷತ್ರ) ಸಾಕು – ಅದರ ಅರೆಮಂಕು ಮಾರ್ಗದರ್ಶನದಲ್ಲಿ ಕನಿಷ್ಟ ಗುರಿಯೊಂದರತ್ತ ಹೆಜ್ಜೆಯನ್ನಾದರೂ ಇಡಬಹುದು, ತಡಕಾಡಿಕೊಂಡೆ. ಈ ಪರಬ್ರಹ್ಮನು ಕೂಡ ಸೂರ್ಯಚಂದ್ರರ ಪ್ರಖರ, ನಿಚ್ಛಳ ಬೆಳಕಿರದಿದ್ದರೆ ಬೇಡ, ಕನಿಷ್ಠ ಈ ತಾರೆಗಳ ರೀತಿಯ ಕ್ಷೀಣ ಬೆಳಕನ್ನಾದರು, ಯಾವುದೊ ನೇರಾನೇರ ಹೊಸೆದ ಕುರುಹೊಂದರ ರೂಪದಲ್ಲಿ ನಮಗೆ ಕೊಡಬಾರದೆ? ತನ್ನದೆ ಸೃಷ್ಟಿಯ ಕುಡಿಗಳಿಗೆ ಅಷ್ಟೂ ಮಾಡಲಾರನೆ ? ಎಂದು ಕೇಳುತ್ತಾನೆ ಮಂಕುತಿಮ್ಮ.
ಸತ್ಯ ಶೋಧನೆಯಲ್ಲಿ ಹೊರಟಾಗ ಪರಂಪರಾಗತವಾಗಿ ಬಂದ ಅದೆಷ್ಟೋ ನಂಬಿಕೆಗಳು ಹುಸಿಯಾಗಿ ಕಾಣುತ್ತವೆ, ಹೊಸ ಜ್ಞಾನದ ದೀವಟಿಕೆಯಡಿಯಲ್ಲಿ. ಅಲ್ಲಿಯವರೆಗೂ ಅದು ಹುಸಿಯಾಗಿದ್ದರು, ಅಜ್ಞಾನದ ದೆಸೆಯಿಂದ ನೈಜವೆಂದೇ ನಂಬಿಕೊಂಡು ಬಂದಿರುತ್ತೇವೆ. ಹೊಸ ಜ್ಞಾನವೊಂದು ಅಜ್ಞಾನದ ತೆರೆ ಸರಿಸಿದಾಗ ಆ ಹುಸಿ , ನಿಜವಾಗಿಯೂ ಹುಸಿಯಾಗಿ ದಿಟದ ಅನಾವರಣವಾಗುತ್ತದೆ. ಆದರೆ ಅದೇನು ಅಂತಿಮ ಸತ್ಯವಲ್ಲ – ಆ ಹಾದಿಯಲ್ಲಿಟ್ಟಿರುವ ಒಂದು ಕಿರುಹೆಜ್ಜೆ ಅಥವಾ ಒಂದು ಕಿರು ಮೈಲಿಗಲ್ಲು. ಹೀಗಾಗಿ ಒಂದು ಸತ್ಯದ ಶೋಧ ನೂರೆಂಟು ಹೊಸ ಪ್ರಶ್ನೆ, ಸಂಶಯಗಳನ್ನು ತೆರೆದಿಡುತ್ತದೆ – ಮಿಕ್ಕುಳಿದ ಅಜ್ಞಾನದ ಹೊರೆಯನ್ನು ಮುಂದಿರಿಸುತ್ತ. ಹೀಗೆ ಸತ್ಯ ಶೋಧನೆ ಹಂತಹಂತವಾಗಿ ಸಾಗುತ್ತಲೆ ಇರುತ್ತದೆ – ಅದರ ಅಂತಿಮದ ಹುಡುಕಾಟದಲ್ಲಿ. ಎಂದಿನಂತೆ ಆ ಹುಡುಕಾಟ ಕಾಡಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಒಬ್ಬಂಟಿ ಅಲೆದಾಡಲು ಬಿಟ್ಟುಬಿಟ್ಟ ಕಥೆಯೆ. ಬ್ರಹ್ಮವೆಂಬುವುದು ಅಂತಿಮಸತ್ಯವೆಂದು ನಂಬಿ ಶೋಧನೆಗೆ ಹೊರಟ ಸಾಧಕನ ಪಾಡು ಇದಕ್ಕಿಂತ ವಿಭಿನ್ನವಾಗೇನು ಇರಲಿಕ್ಕಿಲ್ಲ. ಇಂತಿರುವಾಗ ಸಾಮಾನ್ಯರ ನಿಲುಕಿಗೆ ಆ ಸತ್ಯ ಎಟುಕುವುದಾದರೂ ಎಂತು? ಸುಲಭದಲ್ಲಿ ಸಿಗದಿದ್ದರೂ ಬೇಡ – ಕನಿಷ್ಠ ಯಾವುದಾದರೊಂದು ಸುಳಿವು ನೀಡುತ್ತಾ ಆ ದಾರಿಯೆಡೆಗೆ ಒಯ್ಯಬಾರದೇ? ತೀರಾ ಸ್ಪಷ್ಟ ಸುಳಿವು ನೀಡದಿದ್ದರೂ ಸರಿ ಕನಿಷ್ಠ ನಕ್ಷತ್ರದ ಬೆಳಕಿನಂತಹ ಅಸ್ಪಷ್ಟ, ಕ್ಷೀಣ ಬೆಳಕಿನ ಸಹಾಯವನ್ನಾದರೂ ಒದಗಿಸಬಾರದಾ ? ಹೇಗಾದರೂ ಎಡವಿಕೊಂಡೋ, ತೊಡರಿಕೊಂಡೋ ಗುರಿಯತ್ತ ನಡೆಯುವ ಆಸೆಗೆ ಆಸರೆಯಾಗಬಾರದಾ ? ಎಂದು ಪ್ರಶ್ನಿಸುವ ಮಂಕುತಿಮ್ಮ ಮತ್ತೆ ತನ್ನ ಬ್ರಹ್ಮದ ಕುರಿತಾದ ಜಿಜ್ಞಾಸೆ ಬಗೆಬಗೆಯಾಗಿ ಕಾಡಿದ ಬಗೆಯ ದರ್ಶನ ಮಾಡಿಸುತ್ತಾನೆ, ಅದರ ಕಿಡಿಯನ್ನು ನಮ್ಮ ಅಂತರಂಗಕ್ಕೂ ತಗುಲಿಸಿ ಅದೇ ಸತ್ಯದ ಕುರಿತಾದ ಕುತೂಹಲ ಕೆರಳಿಸುತ್ತಾ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್