X

ಹಾಡುವ ಹಾಲಕ್ಕಿ: ಸುಕ್ರಜ್ಜಿ

ನಮ್ಮ ದೇಶದಲ್ಲಿ ಪುರಾಣ, ಕಾವ್ಯಗಳೆಲ್ಲ ಜನಪದ ಕಥನಗಳಾದಾಗ ಪಡೆಯುವ ರೂಪಾಂತರಗಳು ವಿಚಿತ್ರವಾಗಿರುತ್ತವೆ. ರಾಮಾಯಣದ ಮಾಯಾಜಿಂಕೆಯ ಪ್ರಸಂಗ ನಮ್ಮೂರ ಜನಪದ ಕತೆಯಲ್ಲಿ ಅಂಥದೊಂದು ವಿಶಿಷ್ಟ ರೂಪ ಪಡೆದಿತ್ತು. ಮಾರೀಚ ತನ್ನ ವೇಷ ಮರೆಸಿ ಚಿನ್ನದ ಜಿಂಕೆಯ ರೂಪ ತಾಳಿ ಸೀತೆಯ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಆ ಮಾಯಾಜಿಂಕೆಯನ್ನು ತಂದು ಕೊಡುವಂತೆ ಆಕೆ ಶ್ರೀರಾಮನನ್ನು ಒತ್ತಾಯಪಡಿಸುತ್ತಾಳೆ. ಅಂಥದೊಂದು ಜಿಂಕೆ ಇರಲು ಸಾಧ್ಯವೇ ಇಲ್ಲ; ಇದ್ದರೂ ಅದು ಮಾಯಾವಿದ್ಯೆಯಾಗಿರಬಹುದು; ವಶೀಕರಣ ಮಾಡಲು ಯಾರೋ ಬೀಸಿದ ಜಾಲವಾಗಿರಬಹುದು; ಹಾಗಾಗಿ ಅದರ ಬೆಂಬತ್ತುವುದು ವಿಹಿತವಲ್ಲ ಎಂದು ರಾಮ ಬಗೆಬಗೆಯಾಗಿ ಬೇಡಿಕೊಂಡರೂ ಸೀತೆ ಒಪ್ಪುವುದಿಲ್ಲ. ಕೊಟ್ಟ ಕೊನೆಯ ಪಟ್ಟೆನ್ನುವಂತೆ ಆಕೆ ರಾಮನಿಗೆ, “ತ್ರೇತಾಯುಗದಿಂದ ಇಲ್ಲೀವರೆಗೆ ಇಷ್ಟೆಲ್ಲಾ ರಾಮಾಯಣ ಆಗಿ ಹೋಗಿದೆ. ಯಾವ ರಾಮಾಯಣದಲ್ಲಾದರೂ ಮಾಯಾಜಿಂಕೆಯನ್ನು ಕೊಲ್ಲಲು ಬೆಂಬತ್ತದ ರಾಮನನ್ನು ನೋಡಿದ್ದೀಯಾ?” ಎಂದು ಕೇಳುತ್ತಾಳೆ. ಆಗ, ಗತ್ಯಂತರವಿಲ್ಲದೆ ರಾಮ ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ!

ಅಂಥದ್ದೇ ಒಂದು ಕತೆ ಉತ್ತರ ಕನ್ನಡದಲ್ಲಿ ಪ್ರಚಲಿತವಿದೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಮೂರುಲೋಕದ ದೊರೆಯಾದ ಶಿವ ಗದ್ದೆ ಕೆಲಸ ಮಾಡುತ್ತಿದ್ದನಂತೆ! ಅವನಿಗೆ ಮಧ್ಯಾಹ್ನದ ಊಟಕ್ಕಾಗಿ ಅನ್ನವನ್ನೂ ಕಾಸಿದ ಬಿಸಿ ಹಾಲನ್ನೂ ಬುತ್ತಿಯಲ್ಲಿ ಕಟ್ಟಿಕೊಂಡು ಬರುತ್ತಿದ್ದಳಂತೆ ಪಾರ್ವತೀ ದೇವಿ. ಆದರೆ ದುರ್ದೈವ, ಪಾರ್ವತಿ ದಾರಿಯಲ್ಲಿ ಯಾವುದೋ ಬೇರು ಎಡವಿ ಮುಗ್ಗರಿಸಿದಳು. ಕೈಯಲ್ಲಿದ್ದ ಬುತ್ತಿ ನೆಲಕ್ಕುರುಳಿ ಅದರಲ್ಲಿದ್ದ ಹಾಲು-ಅನ್ನ ಮಣ್ಣಲ್ಲಿ ಚೆಲ್ಲಿ ಹೋಯಿತು. ಗಂಡ ಕೋಪಾವಿಷ್ಟನಾಗುತ್ತಾನೆಂದು ಬಗೆದು ಆಕೆ ಅಲ್ಲೇ ಕೂತು ಅಳಹತ್ತಿದಳಂತೆ. ನಂತರ ಸಾವರಿಸಿಕೊಂಡು ಆ ಹಾಲು-ಅನ್ನ ಮೆತ್ತಿದ ಮಣ್ಣಲ್ಲಿ ಒಂದು ಗಂಡು, ಒಂದು ಹೆಣ್ಣು ಗೊಂಬೆಗಳನ್ನು ಮಾಡಿ ನಿಲ್ಲಿಸಿ ಮನೆಗೆ ಮರಳಿದಳಂತೆ. ಊಟದ ಬುತ್ತಿ ತರಬೇಕಿದ್ದವಳು ಇನ್ನೂ ಯಾಕೆ ಬರಲಿಲ್ಲ ಎಂದು ಹುಡುಕುತ್ತ ಬಂದ ಶಿವನಿಗೆ ದಾರಿಯಲ್ಲಿ ಕಂಡದ್ದು ಈ ಗಂಡು-ಹೆಣ್ಣು ಗೊಂಬೆಗಳು. ಅವನ್ನು ಮುಟ್ಟಿದ್ದೇ ತಡ, ಅವಕ್ಕೆ ಶಿವಸ್ಪರ್ಶದಿಂದ ಜೀವ ಬಂದು ಬಿಟ್ಟಿತು! ಮಾತು ಬಂದ ಗೊಂಬೆಗಳು ನಡೆದದ್ದೆಲ್ಲವನ್ನೂ ಹಾಡಿನ ರೂಪದಲ್ಲಿ ತಮ್ಮ ತಂದೆಯಾದ ಶಿವನಿಗೆ ಹೇಳಿದವಂತೆ. ಶಿವ, ಅವರಿಬ್ಬರನ್ನೂ ಹರಸಿ, ಇನ್ನು ಮುಂದೆ ತನ್ನ ಜೊತೆ ಹೊಲದಲ್ಲಿ ಭತ್ತ ಬೆಳೆಯುವ ಕೆಲಸಕ್ಕೆ ತೊಡಗಿಕೊಳ್ಳಬೇಕೆಂದು ಅವರನ್ನು ನಿಯುಕ್ತಿಗೊಳಿಸಿಕೊಂಡನಂತೆ. ಹೀಗೆ ದೇವರ ಮಕ್ಕಳಾಗಿ ಹುಟ್ಟಿದವರೇ ಹಾಲಕ್ಕಿ ಜನಾಂಗ ಎಂಬುದು ಕತೆ.

ಹಾಲಕ್ಕಿ ಒಕ್ಕಲಿಗರು ಎಂದು ಕರೆಸಿಕೊಳ್ಳುವ ಈ ಜನ ಸಮುದಾಯ, ತಮ್ಮ ಹುಟ್ಟಿನ ಕತೆಗೆ ತಕ್ಕಂತೆ ಮಣ್ಣಿನ ಮಕ್ಕಳು. ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡದಲ್ಲಿ ಅತ್ಯುತ್ತಮ ಜಾತಿಯ ಭತ್ತವನ್ನು ಬೆಳೆದು ಕೊಡುತ್ತಿದ್ದರೆಂಬ ಗರಿಮೆ ಇವರಿಗಿದೆ. ಆದರೆ ಕಾಲಕ್ರಮೇಣ ಅದೇನು ಸ್ಥಿತ್ಯಂತರಗಳಾದವೋ ಏನು ಕತೆಯೋ, ಹಾಲಕ್ಕಿ ಜನ ತಮ್ಮ ಭೂಮಿ ಕಳೆದುಕೊಂಡರು. ಅರಣ್ಯವಾಸಿಗಳಾದರು. ಅರಣ್ಯದ ಉತ್ಪನ್ನಗಳನ್ನು ಊರಿಗೆ ತಂದು ಮಾರಿ ಪುಡಿಗಾಸು ಸಂಪಾದಿಸಬೇಕಾದ ಅನಿವಾರ್ಯತೆಗೆ ಬಿದ್ದರು. ಯಾರದೋ ಕೈಯಲ್ಲಿರುವ ಭೂಮಿಯಲ್ಲಿ ಇವರು ಕೂಲಿ-ನಾಲಿ ಮಾಡಿಕೊಂಡು ಬದುಕಬೇಕಾದ ಸ್ಥಿತಿ ಬಂತು. ಅಷ್ಟೆಲ್ಲ ಆದರೂ ಹಾಲಕ್ಕಿಗಳು ತಮ್ಮ ಜೀವದ ಸಂಪತ್ತಾದ ಜನಪದವನ್ನು ಮಾತ್ರ ಬಿಡಲಿಲ್ಲ. ಜನಪದದ ವಿಷಯದಲ್ಲಿ ಇವರೆಷ್ಟು ಶ್ರೀಮಂತರೆಂದರೆ ಒಂದೊಂದು ಉಸಿರಿಗೂ ಒಂದೊಂದು ಪದ್ಯ ಕಟ್ಟುವ ಆಶುಕವಿತ್ವ, ಯಾರದೋ ಬಾಯಲ್ಲಿ ಕೇಳಿದ್ದನ್ನು ಮನಸ್ಸಿಗಿಳಿಸಿಕೊಂಡು ಮರುನಿರೂಪಿಸುವ ಏಕಾಧ್ಯಾಯಿ ಪ್ರತಿಭೆ ಇವರಲ್ಲಿ ಢಾಳಾಗಿತ್ತು. ಹಾಗಾಗಿ ಮಗು ಹುಟ್ಟಿದ್ದಕ್ಕೆ, ಮೀಸೆ ಮೂಡಿದ್ದಕ್ಕೆ, ಮೊಲೆ ಬೆಳೆದದ್ದಕ್ಕೆ, ಮದುವೆಯಾಗಿದ್ದಕ್ಕೆ, ಅಳೀಮಯ್ಯ ಅತ್ತೆ ಮನೆಗೆ ಬಂದದ್ದಕ್ಕೆ, ಗಬ್ಬ ನಿಂತಿದ್ದಕ್ಕೆ, ಬಾಣಂತನಕ್ಕೆ, ತೊಟ್ಟಿಲು ತೂಗುವುದಕ್ಕೆ, ಚಟ್ಟ ಕಟ್ಟುವುದಕ್ಕೆ ಎನ್ನುತ್ತ ಒಂದೊಂದು ಸಂದರ್ಭಕ್ಕೂ ಒಂದೊಂದು ಹಾಡಿನ ತೋರಣ ಕಟ್ಟುತ್ತ ಹೋದರು. ಗದ್ದೆಗಿಳಿದು ನೇಜಿ ನೆಡುವುದಕ್ಕೆ ಒಂದು ಹಾಡು; ಕೊಯ್ಲು ಮಾಡುವುದಕ್ಕಿನ್ನೊಂದು. ಯುಗಾದಿ ಹಬ್ಬಕ್ಕೆ ಹಾಲನ್ನ ಪಾಯಸ ಬೇಯಿಸುವುದಕ್ಕೆ ಒಂದು ಹಾಡು; ತುಳಸೀ ಹಬ್ಬಕ್ಕಿನ್ನೊಂದು. ಹೀಗೆ ಸಂದರ್ಭ ಯಾವುದೇ ಇರಲಿ ಅದಕ್ಕೊಂದು ಹಾಡಿನ ಅಲಂಕಾರ ಆಗಲೇಬೇಕು ಎಂಬ ಹಠಕ್ಕೆ ಬಿದ್ದವರಂತೆ ಕಬ್ಬದ ಗಬ್ಬ ಹೊತ್ತ ಹಾಲಕ್ಕಿ ಹೆಂಗಸರನ್ನು ಬಡವರೆನ್ನುವುದಾದರೂ ಹೇಗೆ?

ಅಂತಹ ಪರಿಸರದಲ್ಲಿ ಹುಟ್ಟಿದಾಕೆ ಸುಕ್ರಿ. ಅಂಕೋಲಾ ತಾಲೂಕಿನ ಶಿರಗುಳಿಯ ದೇವಮ್ಮ ಮತ್ತು ಸುಬ್ಬಯ್ಯನ ಇಬ್ಬರು ಹೆಣ್ಣು, ನಾಲ್ವರು ಗಂಡುಮಕ್ಕಳ ಪೈಕಿ ಈಕೆ ನಾಲ್ಕನೆಯವಳು. ಹುಟ್ಟಿದ ಮಕ್ಕಳು ನಾಲ್ಕು ದಿನ ಬದುಕುವುದೇ ದೊಡ್ಡದೆಂಬಂಥ ಅಂದಿನ ಸನ್ನಿವೇಶದಲ್ಲಿ ಹುಟ್ಟಿದ ದಿನಾಂಕ ಬರೆದಿಡುವುದಾದರೂ ಯಾರಿಗೆ ಗೊತ್ತಿತ್ತು? ಹಾಗಾಗಿ ಸುಕ್ರಿಗೆ ಹುಟ್ಟಿದ ದಿನದ ಹಂಗಿಲ್ಲ. ಮುಖದಲ್ಲಿರುವ ನೆರಿಗೆಗಳನ್ನೂ ಆಕೆಯ ಅನುಭವದ ಮಾತಿನ ತೂಕವನ್ನೂ ಅಳೆದು ನೋಡಿದರೆ ಬಹುಶಃ ಈಗ 80ರ ಹತ್ತಿರ ಬಂದಿರಬೇಕು ವಯಸ್ಸು. ಸುಕ್ರಿಯ ತವರು ಮನೆಯಲ್ಲಿ ಹಾಡುವ ಬಾಯಿಗಳಿಗೆ ಬರವಿರಲಿಲ್ಲ. ತಾಯಿ, ಅಜ್ಜಿ, ಅಕ್ಕ ಎಲ್ಲರೂ ಹಾಡುಗಾರರೇ! ಹಾಡಿಗೆ ಇಂಥದ್ದೇ ವಿಷಯ, ಕತೆ ಎಂಬುದೇನೂ ಇರಲಿಲ್ಲ. ದೇವರ ನಾಮದಿಂದ ಹಿಡಿದು ಮನೆಯಲ್ಲಿ ಬೆಕ್ಕು ಮರಿ ಈಯಿತು ಎಂಬಲ್ಲಿಯವರೆಗೆ ಎಲ್ಲವೂ ಹಾಡುಗಳಿಗೆ ವಸ್ತುಗಳೇ! ಅದು ಸುಕ್ರಿಯ ಅದೃಷ್ಟವೆಂದೇನಲ್ಲ, ಹಾಲಕ್ಕಿ ಸಮುದಾಯ ಇದ್ದದ್ದೇ ಹಾಗೆ. ಅವರ ಪ್ರೀತಿ, ಜಗಳ, ಕೋಪ, ಅನುಕಂಪ ಎಲ್ಲವೂ ಹಾಡುಗಳಲ್ಲಿ ವ್ಯಕ್ತವಾಗುತ್ತಿದ್ದವು. ಗದ್ದೆಯಲ್ಲಿ ದಿನವಿಡೀ ದುಡಿವಾಗ ಇಲ್ಲವೇ ಕಾಡಿನಲ್ಲಿ ಸೌದೆ ತರಲೆಂದು ಗಂಟೆಗಟ್ಟಲೆ ಅಲೆವಾಗ ಅವರಿಗೆ ಜೊತೆಯಾಗುತ್ತಿದ್ದ ಸಂಗಾತಿಗಳು ಹಾಡುಗಳೇ. ಸುಕ್ರಿಯ ತಂದೆ ಸುಬ್ಬ ಚೆನ್ನಾಗಿ ಗುಮಟೆ ವಾದ್ಯ ನುಡಿಸುತ್ತಿದ್ದ. ಸುಗ್ಗಿಯ ಕುಣಿತಕ್ಕೆ ಹೆಜ್ಜೆ ಹಾಕುತ್ತಿದ್ದ. ಹಾಡಿಯ ಸುತ್ತಮುತ್ತ ಇಂತಹ ಹಾಡುಗಾರರು, ಕುಣಿವ ಸಹಜ ಕಲಾವಿದರು ತುಂಬಿದ್ದುದರಿಂದ ಸುಕ್ರಿಗೆ ಅಕ್ಷರ ಕಲಿಯದ್ದು ಕೊರತೆ ಎಂದೆನಿಸಲೇ ಇಲ್ಲ.

ಹಾಡು-ಕುಣಿತ ಎಷ್ಟಿದ್ದರೇನು, ಉದರಾಗ್ನಿ ಭಗ್ಗೆಂದು ಕುಣಿದಾಗ ಅನ್ನಾಹುತಿ ಕೊಡಲೇಬೇಕಲ್ಲ? ಕಲೆಯ ವಿಷಯದಲ್ಲಿ ಶ್ರೀಮಂತವಾಗಿದ್ದ ಸುಬ್ಬಯ್ಯನ ಸಂಸಾರ ಅರ್ಥದ ವಿಷಯದಲ್ಲಿ ಮಾತ್ರ ನತದೃಷ್ಟವಾಗಿತ್ತು. ಪುಟಾಣಿ ಹುಡುಗಿಯಾಗಿದ್ದಾಗ ಸುಕ್ರಿಗೆ ಯಾವ ದಿನವೂ ಹೊಟ್ಟೆ ತುಂಬಿತೆಂದು ಖುಷಿಯಾಗಿ ಮಲಗಿದ್ದು ನೆನಪಿಲ್ಲ. ಮಧ್ಯಾಹ್ನ ಗಂಜಿ ಉಂಡರೆ ರಾತ್ರಿಗೆ ಖಾಲಿ ಮಡಕೆ. ರಾತ್ರಿ ಉಳಿಸಿಟ್ಟರೆ ದಿನವೆಲ್ಲ ಹೊಟ್ಟೆಯ ತಾಳ. ಹೆಸರು ಕ್ಷೀರಸಾಗರ ಭಟ್ಟ, ಮನೆಯಲ್ಲಿ ಮೊಸರಿಗೆ ತತ್ವಾರ ಎನ್ನುವ ಹಾಗೆ, ಹಾಲಕ್ಕಿ ಸಮುದಾಯದ ಸುಕ್ರಿ ತನ್ನ ಬಾಲ್ಯ ಕಾಲದಲ್ಲಿ ಹಾಲನ್ನೂ ಅನ್ನವನ್ನೂ ಯಥೇಚ್ಛವಾಗಿ ಬಳಸುವ ಭಾಗ್ಯವನ್ನು ಪಡೆಯಲೇ ಇಲ್ಲ. ಹಾಲಕ್ಕಿಯವರಲ್ಲಿ ಯಾರಾದರೂ ತೀರಿಕೊಂಡರೆ ಆ ಮನೆಯಲ್ಲಿ ಅವತ್ತು ಮಾಡಿದ್ದ ಅನ್ನ-ಸಾರೆಲ್ಲವನ್ನೂ ಚೆಲ್ಲಿ ಬಿಡಬೇಕೆಂಬ ನಿಯಮವಿತ್ತಂತೆ. ಸುಕ್ರಿಯ ತಾಯಿ ಅಂತಹ ಮನೆಗಳಿಗೆ ಹೋಗಿ “ದಯವಿಟ್ಟು ಆ ಅನ್ನ ಮಣ್ಣುಪಾಲಾಗಿಸಬೇಡಿ. ನಮಗೆ ಕೊಟ್ಟರೆ ಹಸಿದ ಮಕ್ಕಳ ಹೊಟ್ಟೆ ತಣಿಸಿದ ಪುಣ್ಯವಾದರೂ ಬರುತ್ತದೆ” ಎಂದು ಬೇಡಿ ತರುತ್ತಿದ್ದರಂತೆ. ಸುಕ್ರಿಯ ಬಡತನದ ತೀವ್ರತೆ ಹೇಗಿತ್ತೆಂಬುದಕ್ಕೆ ಇದೊಂದು ನಿದರ್ಶನವೇ ಸಾಕು.

ಅಂಥ ಹುಡುಗಿ ಹನ್ನೆರಡು ತುಂಬುವಷ್ಟರಲ್ಲಿ ಹಸೆಮಣೆ ಏರಿತು. ಗಂಡ ನಲವತ್ತೈದು ಮುಟ್ಟುತ್ತಿದ್ದ ಬೊಮ್ಮಗೌಡ. ತಾಳಿ ಕಟ್ಟಿಸಿಕೊಂಡು ಗಂಡನ ಮನೆಗೆ ಹೋದ ಹುಡುಗಿಗೆ ಅಲ್ಲಿನದೆಲ್ಲವೂ ಹೊಸ ಅನುಭವಗಳೇ. ತಾಯಿ ಮನೆಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಾಯ್ತುಂಬ ಹಾಡು ಹಾಡುತ್ತ ಓಡಾಡುತ್ತಿದ್ದ ಸುಕ್ರಿಗೆ ಗಂಡನ ಮನೆಯಲ್ಲಿ ಅಂಥ ಸ್ವತಂತ್ರ ವಾತಾವರಣವಿರಲಿಲ್ಲ. ಹಾಡು ಹಾಡ್ಕೊಂಡು ಕುಣೀತಿರೋದು ಬಜಾರಿಗಳ ಲಕ್ಷಣ; ತೆಪ್ಪಗೆ ಮನೆವಾಳ್ತೆ ನೋಡಿಕೊಂಡಿರು ಎಂಬ ಕಟ್ಟಪ್ಪಣೆ ಅತ್ತೆಯಿಂದ ಬಂತು. ಬಾಯಿಗೆ ಬೀಗ ಹಾಕಿಕೊಂಡು ಸುಕ್ರಿ ಮನೆಯಲ್ಲಿ ಮುಸುರೆ ತಿಕ್ಕುವುದು, ಅಂಗಳ ಸಾರಿಸುವುದು, ಕಾಡಿಗೆ ಹೋಗಿ ಸೌದೆ ತರುವುದು, ಹಿತ್ತಿಲ ಹುಲ್ಲು ಕಿತ್ತು ತಂದು ಹಸು-ಎಮ್ಮೆಗಳಿಗಿಡುವುದು, ಮನೆಯಲ್ಲಿದ್ದ ಮಕ್ಕಳಿಗೆ ಮೀಯಿಸಿ ತಲೆ ಬಾಚಿ ಬಟ್ಟೆಯುಡಿಸುವುದು, ಹಿರಿಯರ ಕೈಕಾಲಿಗೆ ತ್ಯಾಂಪಣ್ಣನ ಎಣ್ಣೆ ಹಚ್ಚುವುದು ಎಂಬಂಥ ನೂರೆಂಟು ಕೆಲಸಗಳನ್ನು ಮಾಡಿಕೊಂಡಿದ್ದಳು. ಪ್ರೌಢಳಾಗುವುದೆಂದರೆ ಏನೆಂದು ತಿಳಿಯದ ವಯಸ್ಸಲ್ಲಿ ಹುಡುಗಿಗೆ ಗಬ್ಬ ನಿಂತಿತು; ಮಗುವೂ ಆಯಿತು. ಆದರೆ ಮಗು ಹೆಚ್ಚು ದಿನ ಉಳಿಯಲಿಲ್ಲ. ಹಲ್ಲು ಮೂಡದ ಹಸುಗೂಸು ಒಂದು ದಿನ ಜಡ್ಡೋ ಜ್ವರವೋ ಹತ್ತಿ ಕಣ್ಮುಚ್ಚಿತು. ಅದಾಗಿ ಒಂದೆರಡು ವರ್ಷಗಳಲ್ಲಿ ಸುಕ್ರಿಗೆ ಮತ್ತೊಂದು ಮಗುವಾಯಿತು. ಇದೂ ಅಷ್ಟೇ; ಕೆಲವು ವರ್ಷಗಳಲ್ಲೇ ಕೈ ತಪ್ಪಿ ಹೋಗಿ ಸುಕ್ರಿಯನ್ನು ಅಪಾರ ದುಃಖದಲ್ಲಿ ನೂಕಿತು. ಹುಟ್ಟಿದ ಎರಡು ಮಕ್ಕಳೂ ಕೆಲವೇ ವರ್ಷಗಳ ಅಂತರದಲ್ಲಿ ತೀರಿಕೊಂಡ ಮೇಲೆ; ಇನ್ನೇನು ದುಃಖದಿಂದ ಸುಧಾರಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒಂದು ದಿನ ಬೊಮ್ಮಗೌಡನೂ ಕಣ್ಣು ಮುಚ್ಚಿದ. ಸುಕ್ರಿ ಅನುಭವಿಸಿದ ಸಂಕಟ ಎಷ್ಟೋ ದೇವರೇ ಬಲ್ಲ. ಹೋಗಮ್ಮ, ತವರು ಮನೆ ಸೇರಿಕೊಂಡು ಆರಾಮಾಗಿರು; ಇಲ್ಲೇಕೆ ದುಃಖದಲ್ಲಿ ಬೇಯುತ್ತೀಯಾ ಎಂದರು ಕೆಲವರು. ಬಂದ ಗಳಿಗೆಯೇ ಸರಿಯಿಲ್ಲ; ಮೂರು ಜೀವಗಳನ್ನು ಮುಕ್ಕಿ ತಿಂದು ಬಿಟ್ಟೆಯಲ್ಲೇ; ಹೋಗೇ ತವರಿಗೆ ಎಂದು ಬಯ್ದು ಶಾಪ ಹಾಕಿದರು ಕೆಲವರು. ಬಾರಮ್ಮ, ನಮ್ಮ ಜೊತೆ ಇದ್ದು ಬಿಡು ಎಂದು ಬೇಡಿಕೊಂಡರು ಅಣ್ಣಂದಿರೂ. ಸುಕ್ರಿ ಮಾತ್ರ ಅದ್ಯಾವ ಮಾತುಗಳಿಗೂ ಬಗ್ಗಲಿಲ್ಲ, ಜಗ್ಗಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ; ಮದುವೆಯಾಗಿ ಬಂದ ಮೇಲೆ ಗಂಡನ ಮನೆಯೇ ನನ್ನ ಮನೆ; ಮತ್ತೆ ಮರಳಿ ಹೋಗಲಾರೆ ಎಂದು ಸುಕ್ರಿ ಗಟ್ಟಿ ನಿರ್ಧಾರ ಮಾಡಿ ನಿಂತೇ ಬಿಟ್ಟಳು. ಹಾಲಕ್ಕಿ ಸಮುದಾಯದಲ್ಲಿ ವಿಧವೆ, ವಿಧುರರಿಗೆ ಮರುಮದುವೆಯ ಅವಕಾಶವಿದ್ದರೂ ಆಕೆ ಮತ್ತೊಂದು ಮದುವೆಯಾಗುವ ಇಚ್ಛೆ ತೋರಲಿಲ್ಲ.

ವರ್ಷಗಳು ಸರಿದಂತೆ ಸುಕ್ರಿಯ ವ್ಯಕ್ತಿತ್ವ ಗಟ್ಟಿಯಾಗುತ್ತಾ ಹೋಯಿತು. ಗಂಡನ ಮನೆಯಲ್ಲಿ ಸುಕ್ರಿ ಎಂದೂ ಬಿಟ್ಟಿ ಕೂಳು ಉಂಡವಳಲ್ಲ. ಕೂಲಿನಾಲಿ ಮಾಡಿ ಮನೆಯ ಮೂರು ಮತ್ತೊಂದು ಮಂದಿಯನ್ನು ಪೊರೆದವಳು. ಮಳೆಗಾಲದಲ್ಲಿ ಗದ್ದೆಯ ಕೆಲಸ, ಉಳಿದ ಸಮಯದಲ್ಲಿ ಕಾಡಿನ ಉತ್ಪನ್ನಗಳನ್ನು ತಂದು ಮಾರುವುದು – ಹೀಗೆ ಒಂದಿಲ್ಲೊಂದು ದಾರಿ ಕಂಡುಕೊಂಡು ತನ್ನ, ತನ್ನವರ ಹೊಟ್ಟೆಗೆ ಹಿಟ್ಟು ಹಾಕಲು ದಾರಿ ಮಾಡಿಕೊಂಡಳು. ಆಗ ಆಕೆಗೆ ತನ್ನ ಗಂಡನ ಮನೆಯ ಪರಿಸರದಲ್ಲಿ ಹಾಲಕ್ಕಿ ಸಮುದಾಯದ ಹೆಂಗಸರು ತಾರ್ಲೆ ಕುಣಿತ ಅಷ್ಟಾಗಿ ಆಡುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂತು. ಉತ್ತರ ಕನ್ನಡದ ಹಲವಾರು ಕಡೆಗಳಲ್ಲಿ, ಹೆಚ್ಚಾಗಿ ಕಾರವಾರ, ಅಂಕೋಲ, ಗೋಕರ್ಣ, ಹೊನ್ನಾವರ, ಕುಮಟಾ ಕಡೆಗಳಲ್ಲಿ ಹಾಲಕ್ಕಿ ಹೆಂಗಸರು ಮಳೆ ಬರಲಿ ಎಂದು ಹಾರೈಸುತ್ತ ತಾರ್ಲೆ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಹಾಡಿಯ ಹುಡುಗಿಯರು, ಹೆಂಗಸರು ಸೇರಿಕೊಂಡು ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ವೃತ್ತಾಕಾರವಾಗಿ ಸುತ್ತು ಬರುತ್ತ ಸಾಮೂಹಿಕವಾಗಿ ಹಾಡು-ನೃತ್ಯಗಳಲ್ಲಿ ಭಾಗವಹಿಸುವುದು ತಾರ್ಲೆ ಕುಣಿತದ ಕ್ರಮ. ಹಾಲಕ್ಕಿ ಹೆಂಗಸರಿಗೆ ಬಣ್ಣ  ಬಣ್ಣದ ಸೀರೆಗಳು. ಕುಪ್ಪಸವಿಲ್ಲದ ಎದೆಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಆ ಸೆರಗಿಲ್ಲದ ಸೀರೆಗಳನ್ನುಡುವುದೇ ಒಂದು ವಿಚಿತ್ರ ಕಸರತ್ತು. ಕೊರಳು ಇನ್ನೇನು ಮಣಿಸರಗಳ ಭಾರಕ್ಕೆ ಮಣಿದು ಬಗ್ಗಿಯೇ ಹೋದೀತೇನೋ ಎಂಬಷ್ಟು ಸರಾಲಂಕಾರ ಎದೆಯ ಮೇಲೆ. ಕೈಗಳಿಗೆ (ಕಾಲಿಗೂ) ಮೂರೋ ನಾಲ್ಕೋ ಕಡಗ, ಕಿವಿಗೆ ಕಡಕು, ಮೂಗಲ್ಲಿ ನತ್ತು, ಹಣೆಗೆ ಕೆಂಪು ತಿಲಕ. ಇವಿಷ್ಟನ್ನು ತೊಟ್ಟ ಮಹಿಳಾಮಣಿಗಳು ವೃತ್ತಾಕಾರದಲ್ಲಿ ಜೀಕುತ್ತಾ ಹಾಡಿನ ಒಂದೊಂದು ಸಾಲಿಗೆ ತಕ್ಕಂತೆ ಮುಂದಕ್ಕೂ ಹಿಂದಕ್ಕೂ ನೆಗೆಯುತ್ತ ವರುಣರಾಯನನ್ನು ಬಾರಯ್ಯ ಬಾರೆಂದು ಕರೆಯುವ ಸೊಬಗೇ ಸೊಬಗು. ಆದರೆ ಇಂಥದೊಂದು ಸಾಂಸ್ಕತಿಕ ಶ್ರೀಮಂತಿಕೆಯನ್ನು ಮರೆತು ಬಿಟ್ಟಿರುವಂತೆ ತನ್ನ ಊರಿನ ಜನ ಬದುಕುತ್ತಿದ್ದಾರೆಂದು ಸುಕ್ರಿಗೆ ಅನ್ನಿಸತೊಡಗಿತು. ಒಂದು ಶುಭಸಂಜೆ ದಿಟ್ಟ ನಿರ್ಧಾರ ಮಾಡಿ ಅಲ್ಲಿನ ಏಳೆಂಟು ಹೆಂಗಸರನ್ನು ಒಟ್ಟು ಸೇರಿಸಿಯೇ ಬಿಟ್ಟಳು ಗಟ್ಟಿಗಿತ್ತಿ!

ಅಲ್ಲಿಂದ ಸುಕ್ರಿಯ ಬದುಕಿನ ಎರಡನೇ ಅಧ್ಯಾಯ ತೆರೆದುಕೊಂಡಿತು. ಆಕೆ ತನ್ನ ಅಕ್ಕಪಕ್ಕದ ಹಾಡಿಯ ಜನರನ್ನು ಸೇರಿಸಿ ಅವರನ್ನು ಹಾಲಕ್ಕಿ ಹಾಡು-ಕುಣಿತಗಳಲ್ಲಿ ತೊಡಗಿಸಿದಳು. ಬಾಲ್ಯದಲ್ಲಿ ಕಲಿತಿದ್ದ ಹಾಡುಗಳನ್ನು ತಪ್ಪಿಲ್ಲದೆ ಮರುನಿರೂಪಿಸುವ ಅದ್ಭುತ ಸ್ಮರಣಶಕ್ತಿ ಇದ್ದ ಹುಡುಗಿ ಈಗ ಅಲ್ಲಿದ್ದವರಿಗೆ ಅವರ ಗತೇತಿಹಾಸವನ್ನು ಮತ್ತೆ ನೆನಪಿಸಿಕೊಡತೊಡಗಿದಳು. ಗದ್ದೆ ಕೆಲಸ ಮಾಡುವಾಗ ಹಾಡುವ ಹಾಡಿಂದ ಹಿಡಿದು ಮದುವೆ, ಚೊಳಂಗಿ, ಬಸುರಿ, ಬಾಣಂತಿ ಹಾಡುಗಳನ್ನೆಲ್ಲ ಕಲಿಸಿದಳು. ಅದೆಷ್ಟನ್ನು ಅವಳು ಸ್ವತಃ ನೆನಪಿಟ್ಟುಕೊಂಡಿದ್ದಳೋ ಅದೆಷ್ಟನ್ನು ಆಶುವಾಗಿ ಸೃಷ್ಟಿಸಿ ಹಾಡುತ್ತಿದ್ದಳೋ! ಅಂತೂ ನೋಡನೋಡುತ್ತಿದ್ದಂತೆ ಸುಕ್ರಿ ಬೆಲೆಕೇರಿಯ ಜೀವಂತ ಕವನ ಸಂಕಲನವಾದಳು. ಅವಳ ಹಾಡುಗಳಲ್ಲಿ ಹಾಲಕ್ಕಿ ಸಂಪ್ರದಾಯಗಳ ವಿವರಗಳು, ಕಾಡಿನ ಗಿಡಮರಗಳ ಪರಿಚಯ, ಹಬ್ಬ ಹರಿದಿನಗಳ ಕತೆ, ರಾಮಾಯಣ ಮಹಾಭಾರತಗಳ ಕತೆ-ಉಪಕತೆಗಳು, ಹಾಲಕ್ಕಿ ಗಂಡಸರ ಕಾಡಿನ ಬೇಟೆಯ ವಿವರಗಳು ಎಲ್ಲವೂ ಬರತೊಡಗಿದವು. ಬೇಂದ್ರೆ ತನ್ನ ಕಾವ್ಯೋದ್ಯೋಗವನ್ನು “ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ” ಅಂದಿದ್ದಾರಲ್ಲ; ಹಾಗೆ ಹಾಲಕ್ಕಿ ಸುಕ್ರಿ ದಿನಂಪ್ರತಿ ಎಡೆಬಿಡದೆ ಹಾಡು ಕಟ್ಟುತ್ತ ಹೊಸದೊಂದು ಜನಪದವನ್ನೂ ಇತಿಹಾಸವನ್ನೂ ತನಗರಿವಿಲ್ಲದಂತೆಯೇ ಕಟ್ಟತೊಡಗಿದ್ದಳು.

ಸುಕ್ರಿ ಈಗ ಸುಕ್ರಜ್ಜಿಯಾಗಿದ್ದಾಳೆ. ಅಂಕೋಲದ ಬಡಗೇರಿ ಗ್ರಾಮದ ಅಕ್ಕಪಕ್ಕದ ನಾಲ್ಕಾರು ಹಳ್ಳಿಗಳಿಗೆ ಸುಕ್ರಜ್ಜಿ ದಂತಕತೆ. ಕಾಡಿನ ಹಾರುಓತಿಯಂತೆ ಪ್ರಪಂಚದ ಕಣ್ಣಿಗೆ ಬೀಳದೆ ಅಳಿದು ಹೋಗಬಹುದಾಗಿದ್ದ ಹಾಲಕ್ಕಿ ಸಮುದಾಯಕ್ಕೆ ಬಾಯಿ ಕೊಟ್ಟು ಹಾಡಿಸಿ, ತನ್ನ ಕತೆಯನ್ನು ತಾನೇ ಹೇಳಿಕೊಂಡು ಬದುಕುಳಿಯುವಂತೆ ಮಾಡಿರುವ ಕೀರ್ತಿ ಈ ಸುಕ್ರಜ್ಜಿಗೆ ಸಲ್ಲಬೇಕು. ಸುಕ್ರಜ್ಜಿ ಹಾಲಕ್ಕಿ ಸಮುದಾಯದ ರಾಯಭಾರಿ ಎಂದು ಪತ್ರಿಕೆಗಳು ಬರೆದಿವೆ. ತನ್ನ ಇದ್ದೊಬ್ಬ ದತ್ತುಮಗ ಕಂಟ್ರಿ ಸಾರಾಯಿಯ ಸಹವಾಸಕ್ಕೆ ಬಿದ್ದು ಜೀವ ಕಳೆದುಕೊಂಡು ಹೆಂಡತಿ ಮಕ್ಕಳನ್ನು ಬೀದಿಪಾಲಾಗಿಸಿದ ಮೇಲೆ ಸುಕ್ರಜ್ಜಿ ಕುಡಿತದ ವಿರುದ್ಧ ತನ್ನ ಹಾಡುಗಳ ಮೂಲಕವೇ ಯುದ್ಧ ಸಾರಿದ್ದಾಳೆ. ಅದನ್ನು ಸಹಿಸದ ಸಾರಾಯಿ ಕಂತ್ರಾಟುಗಳು ಆಕೆಯ ಮೇಲೆ ಹಲ್ಲೆಗೂ ಯತ್ನಿಸಿದ್ದುಂಟು. ಸುಕ್ರಜ್ಜಿಯ ಬಾಯಿ ಮುಚ್ಚಿಸಲು ಮಾತ್ರ ಅವರಿಗೆ ಸಾಧ್ಯವಾಗಲಿಲ್ಲ.

1980ರ ದಶಕದಲ್ಲಿ ಜನಪದ ತಜ್ಞರಾದ ಕರೀಂ ಖಾನ್ ಮತ್ತು ಎಚ್.ಎಲ್. ನಾಗೇಗೌಡರ ಕಣ್ಣಿಗೆ ಬಿದ್ದ ಮೇಲೆ ಸುಕ್ರಜ್ಜಿಯ ದೆಸೆ ಖುಲಾಯಿಸಿತು. ಆಕೆಯ ಹಾಡುಗಳ ವಿಡಿಯೋ, ಆಡಿಯೋ ದಾಖಲೀಕರಣ ನಡೆಯಿತು. ಎಷ್ಟು ಹಾಡು ಹಾಡಬಲ್ಲೆಯಮ್ಮ ಎಂದಿದ್ದಕ್ಕೆ ಸುಕ್ರಜ್ಜಿ, ನೀವು ನಿಲ್ಲಿಸೋವರೆಗೂ ಹಾಡತಾ ಹೋಗತೇನೆ ಎಂದು ಉತ್ತರಿಸಿದ್ದಳಂತೆ. ಅನಕ್ಷರಸ್ಥಳಾದ ಸುಕ್ರಜ್ಜಿ ಹಾಡುಗಳನ್ನು ಎಂದೂ ಬರೆದಿಟ್ಟುಕೊಂಡವಳಲ್ಲ; ಓದಿ ಉರು ಹಚ್ಚಿದವಳಲ್ಲ; ರೆಕಾರ್ಡ್ ಮಾಡಿಸಿಕೊಂಡು ಕೇಳಿ ಕಲಿತವಳೂ ಅಲ್ಲ. ತನ್ನ ಸೀಮಿತ ಪ್ರಪಂಚದಲ್ಲಿ ಕೇಳಿ ಕಲಿತ ಹಾಡುಗಳನ್ನು ನೆನಪಿಟ್ಟು ಹಾಡುವ ಕಂಪ್ಯೂಟರ್ ಸ್ಮರಣೆ ಅವಳದ್ದು! ಸುಕ್ರಜ್ಜಿಯ ಹಾಡು ಆಕಾಶವಾಣಿಯಲ್ಲಿ ಬಂದಿದೆ; ಟಿವಿಯಲ್ಲಿ ಆಕೆಯ ಮುಖ ಕಾಣಿಸಿಕೊಂಡಿದೆ. 1989ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಆಕೆಗೆ ಸಂದಿದೆ. 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ ಜಾನಪದಶ್ರೀ ಪ್ರಶಸ್ತಿ, 2007ರಲ್ಲಿ ಹಂಪಿ ವಿವಿ ಕೊಡಮಾಡುವ ಪ್ರತಿಷ್ಠಿತ “ನಾಡೋಜ” ಗೌರವ ಆಕೆಯನ್ನು ಹುಡುಕಿಬಂದಿವೆ. ಆಕೆಯ ಮನೆಯಲ್ಲಿ ಗೋಣಿಗಳಲ್ಲಿ ತುಂಬಿಸಿಡಬಹುದಾದಷ್ಟು ಸ್ಮರಣಿಕೆಗಳು, ಹಾರ-ತುರಾಯಿಗಳು, ಪ್ರಶಸ್ತಿ ಫಲಕಗಳು ಕಿಕ್ಕಿರಿದಿವೆ. ನಾಲ್ಕೈದು ಬಾರಿ ಸುಕ್ರಜ್ಜಿ ದೆಹಲಿಗೂ ಹೋಗಿದ್ದಾಳೆ. ಹಾಡಿದ್ದಾಳೆ. ರಾಜಕೀಯ ಧುರೀಣರು ಹತ್ತಿರ ಬಂದಾಗ, “ನಮ್ಮ ಹಾಲಕ್ಕಿ ಸಮುದಾಯವನ್ನೂ ಪರಿಶಿಷ್ಟ ಪಂಗಡ ಅಂತ ಗುರುತಸರೀ. ಉತ್ತರ ಕನ್ನಡ ಜಿಲ್ಲೆಯೊಳಗೇ ಒಂದೂವರೆ ಲಕ್ಷ ಜನ ಇದ್ದೇವಿ. ನಮಗೂ ಒಂದಷ್ಟು ಸವಲತ್ತು-ಸೌಲಭ್ಯ-ಸೌಕರ್ಯ ಮಾಡಿಸಿ ಕೊಡರೀ” ಎಂದು ಕಿವಿಮಾತು ಹೇಳಿದ್ದಾಳೆ. ಎಂದಿನಂತೆ ರಾಜಕಾರಣಿಗಳು ಕೇಳಬೇಕಾದ್ದಷ್ಟನ್ನು ಮಾತ್ರ ಕೇಳಿಸಿಕೊಂಡು ತಲೆಯಾಡಿಸಿ ತಲೆಕೊಡವಿ ಹೋಗಿಬಿಟ್ಟಿದ್ದಾರೆ.

ಸುಕ್ರಜ್ಜಿಗೆ ಈಗ 80 ವರ್ಷ. ಸ್ವಾರಸ್ಯವೆಂದರೆ ಉಳಿದವರೆಲ್ಲ ಆ ವಯಸ್ಸಿಗೆ ಹಾಸಿಗೆ ಹಿಡಿದು ರಾಮಾಕೃಷ್ಣಾ ಎಂದರೆ ಸುಕ್ರಜ್ಜಿ ಮಾತ್ರ ಗಟ್ಟಿಮುಟ್ಟಾಗಿದ್ದಾಳೆ. ಈಗಲೂ ಹಾಡು ಎಂದರೆ ಒಂದೆರಡೆಣಿಸದೆ ಹಾಡಲು ಶುರು ಮಾಡಿಯೇ ಬಿಡುವ ಉತ್ಸಾಹದ ಚಿಲುಮೆ ಅವಳು. ಅವಳ ಕೈ ಕೆಳಗೆ ನುರಿತ ಹೆಂಗಸರೂ ಈಗ ಹಾಲಕ್ಕಿಗಳ ಹಲವಾರು ಹಾಡುಗಳನ್ನು ಸ್ವತಃ ಕಲಿತು, ಸಾಲೆಗೆ ಹೋಗುವ ತಮ್ಮ ಮಕ್ಕಳಿಗೂ ಕಲಿಸಿ ಪರಂಪರೆಯನ್ನು ಮುಂದುವರಿಸಲು ಆಸಕ್ತಿ ತೋರುತ್ತಿದ್ದಾರೆ. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಅಂದಿದ್ದಾನಂತೆ ಶ್ರೀಕೃಷ್ಣ, ಭಗವದ್ಗೀತೆಯಲ್ಲಿ. ಒಂದು ಧರ್ಮ, ಒಂದು ಜಾತಿ, ಒಂದು ಸಮುದಾಯ ಹಾಗೆ ತನ್ನತನ ಮರೆತು ಇನ್ನೇನು ಇತಿಹಾಸ ಸೇರಿಬಿಡಬೇಕೆಂದು ಸೋಮಾರಿತನದಿಂದ ಮಲಗಿದಾಗೆಲ್ಲ ಅದನ್ನು ಬಡಿದೆಬ್ಬಿಸಿ ಚೈತನ್ಯ ತುಂಬಿಸಿ ಬೆಳೆಸಿ, ಮುಂದುವರೆಸುವ ಹೊಣೆಗಾರಿಕೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸುಕ್ರಜ್ಜಿಯಂಥವರೆಲ್ಲ ಅಂಥ ಸಂಸ್ಕತಿ ಸಂಸ್ಥಾಪಕರೇ ಅಲ್ಲವೆ?

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post