ಸೆಲ್ಫೀ ಕ್ಲಿಕ್, ಅಪಾಯದ ಲುಕ್

ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ ಅದ್ಭುತ ಲುಕ್….!

ಲೋ ತೆಗಿಯೋ ಫೊಟೋ, ನಾನಿಲ್ಲಿ ನಿಂತ್ಕೋತೀನಿ ಎಂದ ಶ್ರೀನಿವಾಸ (ಹೆಸರು ಬದಲಿಸಿದೆ). ಸುಮೇಧನೂ ಅಲ್ಲೇ ಪಕ್ಕದಲ್ಲಿ ಬಂದು ನಿಂತ, ಬಾಕಿ ಉಳಿದವನು ರಮೇಶ. ಅವನ ಕೈಗೆ ಫೊಟೋ ತೆಗೆಯೋ ಜವಾಬ್ದಾರಿ. ಯಾಕೋ ನನ್ನನ್ನು ಬಿಟ್ಟು ತೆಗೆಯೋದು, ನಾನೂ ಬರ್ತೇನೆ. ಸೆಲ್ಫೀ ತೆಗೆಯೋಣ ಬನ್ನೀ.  ಏನು ಮಜಾ ಇರುತ್ತೆ ಗೊತ್ತಾ ಎಂದ ರಮೇಶ ತಾನೂ ಬಂಡೆಕಲ್ಲಿನತ್ತ ಜಿಗಿದ. ಮೂವರೂ ಹಿಂದೆ ತಿರುಗಿ ಒಮ್ಮೆ ನೋಡಿದರು. ನಯನಮನೋಹರ ದೃಶ್ಯಕ್ಕಿಂತ ರುದ್ರ ರಮಣೀಯ ದೃಶ್ಯ ಎಂದರೇ ಸೂಕ್ತ. ಒಂದು ಹೆಜ್ಜೆ ಹಿಂದಿಟ್ಟರೆ ನೇರ ಗುಂಡಿಗೇ ಬೀಳಬೇಕು. ಅಂಥ ಸನ್ನಿವೇಶ. ರೈಲಿನ ಸಿಳ್ಳೆ ಕೇಳಿಸಿತು. ಇನ್ನೇನು ಮೊಬೈಲ್ ಈ ಮೂವರ ಚಿತ್ರ ಸೆರೆ ಹಿಡಿದು ಬ್ಯಾಕ್ ಗ್ರೌಂಡ್’ನಲ್ಲಿ ರೈಲು ಕಾಣಿಸಬೇಕು. ಹಾಗೆ ತೆಗೆಯೋಣ ಎಂದ ರಮೇಶ ಕ್ಲಿಕ್ ಮಾಡುವಾಗ….

ಬಂಡೆಕಲ್ಲಿನಲ್ಲಿದ್ದ ಪಾಚಿಯ ಮೇಲೆ ಕಾಲಿಟ್ಟ ಶ್ರೀನಿವಾಸ. ಅಷ್ಟೇ. ಬಿದ್ದೇ ಬಿಟ್ಟ. ಅವನು ಹೆಗಲಿಗೆ ಕೈಯಿಟ್ಟ ಸುಮೇಧನೂ ಜೊತೆಗೆ ಬಿದ್ದ. ಉಳಿದಾತ ರಮೇಶ, ಅವನ ಕೈಯಲ್ಲಿದ್ದ ಮೊಬೈಲ್’ನಲ್ಲಿ ಇಬ್ಬರು ಸ್ನೇಹಿತರ ಸಾವಿನ ದೃಶ್ಯ ಸೆರೆಯಾಗಿತ್ತು!.

ಈ ಕಥೆಯಂಥ ವಾಸ್ತವ ವಿಚಾರವನ್ನು ನೀವು ಪತ್ರಿಕೆಗಳಲ್ಲಿ ಓದಿರ್ತೀರಿ. ಛೇ ಸ್ವಲ್ಪವೂ ಜಾಗ್ರತೆ ಇಲ್ಲದ ಹುಡುಗರು. ಹೀಗೂ ಮಾಡುವುದುಂಟೇ, ಸ್ವಲ್ಪವೂ ಕಾಮನ್ ಸೆನ್ಸ್ ಇರೋದು ಬೇಡ್ವೇ ಅವರಿಗೆ ಎಂದು ಗೊಣಗುತ್ತೀರಿ ಎಂಬುದೂ ಗೊತ್ತು. ಆದರೆ ನಾಳೆ ನಾವೇ ಅಂಥ ಜಾಗಕ್ಕೆ ಹೋದಾಗ, ಇಲ್ಲೊಂದು ಫೊಟೋ ತೆಗೆದರೆ ಹೇಗೆ ಎಂಬ ಮನಸ್ಸಾಗುತ್ತದೆ. ಕ್ಯಾಮರಾದಲ್ಲಿ ಫೊಟೋ ತೆಗೆಯುವ ವರ್ಗಕ್ಕಿಂತ ಜಾಸ್ತಿ ಮೊಬೈಲಿನಲ್ಲಿ ಚಿತ್ರ ಸೆರೆ ಹಿಡಿಯುವ ವರ್ಗವೇ ಅಧಿಕ. ಹೀಗಾಗಿ ಮೊಬೈಲ್’ನ ಸೆಲ್ಫೀ ಎಂಬುದೀಗ ಎಲ್ಲರಿಗೂ ಆಪ್ತವಾಗಿದೆ.

ಹೌದು. ಇಂದು ಮೊಬೈಲ್ ಎಲ್ಲರಿಗೂ ಬೇಕು. ನೀವು ಈ ಲೇಖನವನ್ನು ಮೊಬೈಲ್’ನಲ್ಲಿ ಓದುತ್ತಿರಲೂಬಹುದು. ಬದಲಾವಣೆ ಜಗದ ನಿಯಮ. ಮೊಬೈಲ್ ನಮ್ಮ ಕೈಗೆ ಬಂದಾಗ ಇದು ಲ್ಯಾಂಡ್ ಫೋನ್’ಗಿಂತ ಅನುಕೂಲ ಎಂಬುದು ಮನದಟ್ಟಾಯಿತು. ಆಫರ್’ಗಳ ಸುರಿಮಳೆಯೇ ಖರೀದಿದಾರರಿಗೆ ದೊರಕಿತು. ಪೇಜರ್ ಇತ್ಯಾದಿಗಳ  ಯುಗ ಅಂತ್ಯಗೊಂಡಿತು. ಯಾವಾಗ ಮೊಬೈಲ್ ಕೇವಲ ದೂರವಾಣಿ ಕರೆ ಸ್ವೀಕರಿಸಲು, ಮಾಡಲಷ್ಟೇ ಸೀಮಿತವಾಗಲಿಲ್ಲವೋ ಆಗಲೇ ಗುಣಮಟ್ಟ ಉತ್ತಮವಿರುವ ಕ್ಯಾಮರಾ ಮೊಬೈಲ್’ನಲ್ಲಿ ಕಡ್ಡಾಯ ಎಂಬಂತಾಯಿತು. ಅದರ ಪ್ರತಿಫಲವೇ ಸೆಲ್ಫೀ ಮೇನಿಯಾ.

ಮೊಬೈಲಿನಲ್ಲಿ ಚಿತ್ರ ತೆಗೆಯುವುದು ಸುಲಭ. ಯಾರ್ಯಾರದ್ದೋ ತೆಗೀತೇವೆ, ನಮ್ದು ತೆಗೀಲಿಕ್ಕೆ ಆಗಲ್ವಾ ಎಂಬ ಪ್ರಶ್ನೆಗಳೇ ಸೆಲ್ಫೀ ಚಟುವಟಿಕೆ ಬಿರುಸಾಗಲು ಕಾರಣ. ಒಂದೆರಡು ಬಾರಿಯಾದರೆ ಒಕೆ. ಆದರೆ ಪ್ರತಿದಿನವೂ ಸೆಲ್ಫೀ ತೆಗೆಯುವ ಹುಚ್ಚರಿದ್ದಾರೆ. ಎಲ್ಲಿ ಹೋಗುತ್ತಾರೋ ಅಲ್ಲಿ ತಮ್ಮ ಫೊಟೋ ತೆಗೆಸಿಕೊಳ್ಳವ ಹೋರಾಟಗಾರರೂ ಸೆಲ್ಫೀ ತೆಗೆಯುವ ಯತ್ನ ಮಾಡಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಮೊಬೈಲ್‌ ಫೋನ್‌ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶವನ್ನು “ನೋ ಸೆಲ್ಫಿ ಝೋನ್” ಎಂದು ಘೋಷಿಸಿತ್ತು

ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್‌ ವಲಯ. ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ. ಈ ಹಿಂದೆ ರಾಜ್ಯದ ಅನೇಕ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್‌ ತಾಣಗಳು ಹೀಗೆ ಪ್ರವಾಸಿಗರು ತೆರಳುವ ಕೇಂದ್ರಗಳಲ್ಲಿ ಅದರಲ್ಲೂ ನೈಸರ್ಗಿಕ ತಾಣದ ಪ್ರದೇಶಗಳಲ್ಲಿ ಸೆಲ್ಫಿಯಿಂದಾಗಿ ಅಪಾಯ ಸಂಭವಿಸದಂತೆ ‘ನೋ ಸೆಲ್ಫಿ ಝೋನ್‌’ ಫಲಕಗಳನ್ನು ಇಲಾಖೆ ಅಳವಡಿಸುತ್ತಿದೆ.

ಸಮುದ್ರ ತೀರ ಪ್ರದೇಶಗಳಿಗೆ ಪ್ರತಿವರ್ಷ ಅಕ್ಟೋಬರ್‌ನಿಂದ ಮಾರ್ಚ್’ವರೆಗೆ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ತೆರಳುವುದರಿಂದ ಈ ವೇಳೆ ಸಮುದ್ರ ತೀರದ ಆಯ್ದ ಪ್ರದೇಶಗಳಲ್ಲಿ ಸೆಲ್ಫಿ ನಿರ್ಬಂಧದ ಜತೆಗೆ ತಿಳಿವಳಿಕೆ ಫಲಕಗಳನ್ನೂ ಅಳವಡಿಸಲು ಇಲಾಖೆ ಮುಂದಾಗಿದೆ.

Facebook ಕಾಮೆಂಟ್ಸ್

AddThis Website Tools
Harish mambady: ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.
Related Post
whatsapp
line