X

ಸಮ್ಮೇಳನದ ಮಾನದಂಡಗಳು ಯಾವುವು..?

ಇನ್ನೊಂದು ಸುತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆ ಮುಗಿದಿದೆ. ಸಾಲು ಸಾಲು ಊಟದ ಸರದಿ ಮತ್ತು ಪುಸ್ತಕ ಪ್ರಕಾಶಕರ ಅಂಗಡಿಗಳು ತಂತಮ್ಮ ಟೆಂಟೆತ್ತಿಕೊಂಡು ಹೊರಡುವ ಈ ಅವಧಿಯಲ್ಲಿ ಇಷ್ಟೆಲ್ಲಾ ಮಾಡಿ ಕನ್ನಡ ಭಾಷೆ ಅಥವಾ ದುಂದು ವೆಚ್ಚದ ಈ ನುಡಿ ಹಬ್ಬದಿಂದ ಆಗಿರುವ ಅಥವಾ ಆಗುತ್ತಿರುವ ಲಾಭ ಎನ್ನುವ ತೀರ ವ್ಯವಹಾರಿಕ ಮಾತು ಒತ್ತಟ್ಟಿಗಿರಲಿ, ಒತ್ತಾಸೆ ಅಥವಾ ಪ್ರಯೋಜನ ಎಂಬಿತ್ಯಾದಿಯಾಗಿ ಹುಡುಕಿದರೂ ಯಾವ ಉತ್ಪನ್ನವೂ ಕಾಣಿಸುತ್ತಿಲ್ಲ. ಅಷ್ಟಕ್ಕೂ ಇಂತಹ ನುಡಿ ಹಬ್ಬ ಅಥವಾ ಜಾತ್ರೆ ಎನ್ನುವ ಸಾಹಿತ್ಯ ಸಮ್ಮೇಳನ ಆಡುಂಬೋಲಗಳು ಕೇವಲ ಭಾಷಾ ಸಾಹಿತ್ಯದ ಮತ್ತು ಸಾಹಿತ್ಯಿಕ ಅಭಿಲಾಷೆಯ ಹೊರತಾಗಿ ಒಂದು ನಾಡು ನುಡಿಯನ್ನು ಕಟ್ಟುವ ಧನಾತ್ಮಕ, ಕ್ರಿಯಾತ್ಕಕ ನೆಲೆಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಆಗಿದ್ದೇನು ನೋಡಿ..?

ಒಬ್ಬೇ ಒಬ್ಬೆ ನೇರವಾಗಿ ನಿಂತು ಇಲ್ಲಿವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಇಂಥಿತಹ ಐತಿಹಾಸಿಕ ಪ್ರಯೋಜನಗಳು ನಮ್ಮ ಕನ್ನಡಕ್ಕೆ ಅಥವಾ ರಾಜ್ಯಕ್ಕೆ ಆಗಿದೆ ಎಂದು ಬೆರಳು ಮಾಡಿ ತೊರಿಸಲಿ ನೋಡೋಣ. ಉಹೂಂ.. ಯಾರೊಬ್ಬ ಕನ್ನಡ ಕಟ್ಟಾಳು ಕೂಡಾ ಅತ್ತ ಹೆಬ್ಬೆರಳು ಎತ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಕಾರಣ ಉಳಿದದ್ದೇನೆ ಇರಲಿ. ಸಾಹಿತ್ಯ ಸಮ್ಮೇಳನ ಎನ್ನುವುದು ಅವರವರ ಹಿಂಬಾಲಕರಿಗೆ ಮತ್ತು ಹೌದಪ್ಪಗಳಿಗೆ ವೇದಿಕೆ ಒದಗಿಸುವ, ತನ್ಮೂಲಕ ಸಾಹಿತ್ಯದ ವಲಯದಲ್ಲಿ ಒಂದು ಹೆಗ್ಗುರುತು ಮಾಡಿಕೊಂಡು ಏಣಿಯಾಗಿಸಿಕೊಳ್ಳುವ ಜಾತ್ರೆಯಾಗುತ್ತಿದೆಯೇ ವಿನ: ಖಂಡಿತಕ್ಕೂ ಇವತ್ತು ಬರಹ ಅಥವಾ ಸಾಹಿತ್ಯಿಕವಾಗಿ ಜೀವಂತವಾಗಿರುವ ಯಾವೊಬ್ಬನನ್ನೂ ಅದು ತಾನಾಗೇ ಹತ್ತಿರ ಬಿಟ್ಟುಕೊಂಡಿದ್ದು ಕಡಿಮೆಯೇ.

ಇವತ್ತಿಗೂ ವೇದಿಕೆಯ ಮೇಲೆ ರಾರಾಜಿಸಿದವರಲ್ಲಿ ಹೆಚ್ಚಿನವರು ಹಿಂಬಾಗಿಲಲ್ಲಿ ನುಸುಳಿದವರೇ ಎನ್ನುವುದು ಖೇದ ಮತ್ತು ಕನ್ನಡದ ಮಟ್ಟಿಗೆ ದುರಂತ. ಸಮ್ಮೇಳನಗಳಲ್ಲಿ ಪ್ರತಿ ಜಿಲ್ಲಾವಾರು ಪ್ರಾತಿನಿಧ್ಯ ಇಂತಿಷ್ಠೆ ಅಭ್ಯರ್ಥಿಗಳಿಗೆ ಅವಕಾಶ ಎಂದಿದ್ದಾಗಲೂ ಪ್ರತಿ ಜಿಲ್ಲೆಯಿಂದಲೂ ವೇದಿಕೆ ಏರಲು ಕೇಂದ್ರ ಕಚೇರಿಯ ಸಂಪರ್ಕವನ್ನು ಖಾಸಗಿ ಶಿಫಾರಸ್ಸುಗಳನ್ನು ಬಳಸಿಕೊಂಡಿದ್ದು ಗುಟ್ಟಾಗಿಯೇನೂ ಉಳಿದಿಲ್ಲ. ಹಾಗೆ ಕವಿತೆ ಓದಿದ, ಭಾಷಣ ಬಿಗಿದ ಮಹನೀಯರಲ್ಲಿ ಲಿಂಗಾತೀತವಾಗಿ ಹಿಂಬಾಗಿಲ ಪ್ರವೇಶಕ್ಕೆ ಗುದಮುರಿಗೆ ಹಾಕಿದ್ದು ಅಸಹನೀಯ ಮತ್ತು ಅಸಹ್ಯಕರ.

ಅಸಲಿಗೆ ನಿಮಗೆ ಆಯಾ ಜಿಲ್ಲಾವಾರು ಅಥವಾ ತಾಲೂಕಾವಾರು ಪ್ರಾತಿನಿಧ್ಯ ಬೇಕೆಂದರೂ ಕೂಡಾ ಅಲ್ಲಿನ ಜಿಲ್ಲಾ ಅಥವಾ ತಾಲೂಕಾ ಸಾಹಿತ್ಯ ಪರಿಷತ್ತುಗಳ ಪದಾಧಿಕಾರಿಗಳ ಜತೆ ಹಲ್ಕಿರಿಯುವ, ಹೌದಪ್ಪ ಎನ್ನುವ ಸಂಪರ್ಕ ಉಳಿಸಿಕೊಳ್ಳುವ ಅನಿವಾರ್ಯತೆಯ ರೋಗವನ್ನು ಅತ್ಯಂತ ವ್ಯವಸ್ಥಿತವಾಗಿ ಸೃಷ್ಟಿಸಿದ್ದೇ ಇಂತಹ ಜಾತ್ರೆಗಳು. (ಎಷ್ಟೊ ಜಿಲ್ಲೆಗಳ ಅಧ್ಯಕ್ಷರುಗಳು ಈ ಮುಲಾಜನ್ನು ತೆಗೆದು ಹಾಕಿ ವಯಸ್ಸು ಮತ್ತು ಪ್ರತಿಭೆಯಧಾರಿತ ನಾಮಾಕಿಂತ ಮಾಡಿದ್ದೂ ಇದ್ದು ಅಷ್ಟರ ಮಟ್ಟಿಗೆ ಅವರೆಲ್ಲಾ ಅಭಿನಂದನಾರ್ಹರೆ) ಕಾರಣ ಆ ಹಂತದಲ್ಲೇ ಕ.ಸಾ.ಪ. ಜತೆ ನಿಮ್ಮ ಬಾಂಧವ್ಯ ಇರದಿದ್ದರೆ, ರಾಜ್ಯ ಸಾಹಿತ್ಯ ಸಮ್ಮೇಳನಕ್ಕೆ ನಿಮ್ಮನ್ನು ಕಳುಹಿಸುವವರಾದರೂ ಯಾರು..? ಹಾಗಂತ ನಾನು ಎಲ್ಲರೂ ಪ್ರತಿಭೆ ಇಲ್ಲದೆ ವೇದಿಕೆ ಅಲಂಕರಿಸುತ್ತಿದ್ದಾರೆ ಎನ್ನುತ್ತಿಲ್ಲ. ಆ ಬೆಟಾಲಿಯನ್ನೇ ಬೇರೆ. ಅವರ ಹೆಸರು ಸಹಜವಾಗಿ ತೇಲಿ ಬೀಡುತ್ತಾರೆ. ಅದನ್ನು ಉಳಿದವರೂ ಓಕೆ ಎಂದು ಬಿಡುತ್ತಾರೆ. ಕಾರಣ ಇಲ್ಲಿ ಓ.ಕೆ. ಅಂದರೆ ಮುಂದೆ ತನ್ನ ಪ್ರಪೋಸಲ್ಲು ಓ.ಕೆ. ಆಗುತ್ತದೆ ಎನ್ನುವ ದೂರದೃಷ್ಟಿ ಕೆಲಸ ಮಾಡುತ್ತದೆ.

ಅಲ್ಲಿಗೆ ಮೊದಲ ಸುತ್ತಿನ ವೇದಿಕೆ ಆಕ್ರಮಿಸುವವರ ಆಯ್ಕೆ ನಡೆದು ಬಿಡುತ್ತದೆ. ನಂತರದಲ್ಲಿ ತಮಗೆ ಬೇಕಾದವರ, ಶಿಫಾರಸ್ಸುಗಳ ಎಲ್ಲ ಹೆಸರನ್ನೂ ಸೇರಿಸಿ ಅಂತಿಮವಾಗಿ ಹಲವು ವೇದಿಕೆಗಳಿಗೆ ತಂಡಗಳು ಆಯ್ಕೆಯಾಗುತ್ತವೆ. ಅದರಲ್ಲೂ ಎಲ್ಲರಿಗೂ ಅವಕಾಶ ಕಲ್ಪಿಸಲೆಂದೇ ಹಲವು ವೇದಿಕೆಗಳ ರಚನೆಯಾಗುತ್ತದೆ. ದುರದೃಷ್ಟ ಎಂದರೆ ವೇದಿಕೆಯ ಮೇಲಿದ್ದಷ್ಟೇ ಜನ ಕೆಲವೊಮ್ಮೆ ಕೆಳಗೂ ಇರುತ್ತಾರೆ. ಅದರಲ್ಲೂ ಎಲ್ಲರಿಗೂ ಪ್ರಧಾನ ವೇದಿಕೆಯೇ ಬೇಕೆನ್ನುವ ಹುಕಿಗಳ ಮಧ್ಯೆ ಆಯ್ಕೆಯ ಸಂಖ್ಯೆ ಅರ್ಧ ಶತಕ ದಾಟುವುದೂ ಇದೆ. ಅಲ್ಲಿಗೆ ವೇದಿಕೆ ಎನ್ನುವುದು ದೊಡ್ಡ ಸಭೆಯ ಆಕಾರಕ್ಕೆ ಬಂದು ನಿಲ್ಲುತ್ತದೆ. ಈ ತುದಿಗೆ ಆ ತುದಿಯಲ್ಲೇನು ನಡೆಯುತ್ತಿದೆ ಎನ್ನುವುದೂ ಗೊತ್ತಾಗುತ್ತಿರುವುದಿಲ್ಲ. ಪ್ರತಿಯೊಬ್ಬರು ತಮ್ಮ ಹೆಸರು ಮತ್ತು ಸರದಿಗಾಗಿ ಕಾಯುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಅಲ್ಲಿಗೆ ಆ ವೇದಿಕೆಯಿಂದ ಅದಿನ್ನೆಂಥಾ ದಿವ್ಯ ಪರಿಹಾರ ಅಥವಾ ನಾಡು ನುಡಿಗೆ ಅನುಕೂಲವಾಗುವಂತಹ ಸಂದೇಶ ಅಥವಾ ಘೋಷಣೆ ಈಚೆಗೆ ಬಂದೀತು. ಕೊನೆಯಲ್ಲಿ ಇದೆಲ್ಲಾ ನಡೆಯುವುದೂ, ಜಾತ್ರೆ ಮುಗಿಯುವುದು ಎಲ್ಲಾ ಆದ ಮೇಲೆ ಅದರಲ್ಲಿದ್ದ ಯಾರೊಬ್ಬರನ್ನಾದರೂ ಮಾತಾಡಿಸಿ ನೋಡಿ. ಸ್ವಂತದ ವಿಷಯ ಬಿಟ್ಟು ಪಕ್ಕದವರು ಯಾರು ಏನು ಮಾತಾಡಿದರೂ ಎನ್ನುವುದೂ ಅವರಿಗರಿವಿರುವುದಿಲ್ಲ. ಅಲ್ಲಿಗೆ ವಿಷಯ, ವೇದಿಕೆ, ಪ್ರಸ್ತುತತೆ ಇವೆಲ್ಲದಕ್ಕೆ ಆಯ್ಕೆ ಮಾನದಂಡ ಇಲ್ಲದ್ದು ಜಾಹೀರಾಗುವಾಗ ನಾವು ಏನನ್ನಾದರೂ ಹೇಗೆ ನೀರಿಕ್ಷಿಸಲು ಸಾಧ್ಯ..?

ಒಮ್ಮೆ ಸ್ಥೂಲವಾಗಿ ನಿರುಕಿಸಿ ನೋಡಿ. ಹೆಚ್ಚಿನ ಚರ್ಚೆ ಅಥವಾ ವಿಷಯ ಮಂಡನೆಯಾಗುವ ಗೋಷ್ಠಿಗಳಾದರೂ ಹೇಗಿರುತ್ತವೆ ಎಂದು. ” ರಾಜ್ಯ ಭಾಷೆಯಲ್ಲಿ ಸಮಕಾಲೀನ ತಲ್ಲಣಗಳು..” ಇದರಲ್ಲಿ ಅದ್ಯಾವ ಚರ್ಚೆ ನಾಡು ನುಡಿಗೆ ಉಪಯೋಗವಾಗುತ್ತದೆಯೋ ನನಗಂತೂ ಅರ್ಥವಾಗಿಲ್ಲ. “ಸಮಾಜಭಿವೃದ್ಧಿಯಲ್ಲಿ ಪ್ರಸ್ತುತ ಕನ್ನಡದ ಪಾತ್ರ” ಇಂತಹದನ್ನು ಅದ್ಯಾವ ಮಹಾಶಯ ಆಯ್ಕೆ ಮಾಡುತ್ತಾನೋ ಮತ್ತು ಹಾಗೆ ಇಂತಿಥ ಚರ್ಚೆಯಾಗಬೇಕು, ಇಂತಿಂಥ  ಸಂಪನ್ಮೂಲ(?)ವ್ಯಕ್ತಿಗಳು ಪಾಲ್ಗೊಳ್ಳಬೇಕು ಎಂದು ಆಯ್ಕೆ ಮಾಡಲು ಕೂರುವವರ ಯೋಗ್ಯತೆಯ ಮಾನದಂಡಗಳೇನು..? ಹಾಗೆ ಆಯ್ಕೆದಾರರು ಇವರನ್ನೆಲ್ಲಾ ಅರಿತಿದ್ದು ಆಯ್ಕೆ ಮಾಡುವುದಾದರೆ, ಮಂಡನೆ ಮಾಡುವವರಿಗಿಂತ ಅವರು ಮೇಲ್ಮಟ್ಟದ ಪ್ರಭೃತಿಗಳಾಗಿರಬೇಕು. ಹಾಗಾದಲ್ಲಿ ಇವರಿಗ್ಯಾಕೆ ಮಂಡನೆಯ ಅವಕಾಶ ಕೊಡುತ್ತೀರಿ..? ಹೋಗಲಿ ಹೊಸಬರು ಮತ್ತು ಪ್ರತಿಯೊಬ್ಬರಿಗೂ ಅವಕಾಶ ಎನ್ನುವುದೇ ಆದರೆ ಆರೂ ಚಿಲ್ರೆ ಕೋಟಿ ಜನರಲ್ಲಿ ಇವತ್ತು ಮೊಬೈಲ್ ಹೊಂದಿದ ಪ್ರತಿಯೊಬ್ಬನೂ ಗೀಚಬಲ್ಲ ಸಾಮರ್ಥ್ಯ ಹೊಂದಿದ್ದರಿಂದ ಎಲ್ಲರನ್ನೂ ಹೇಗೆ ತಲುಪಲಾಗುತ್ತದೆ..? ಇದರ ಬದಲಾಗಿ ಸರಿ ಸುಮಾರು ಹತ್ತಾರು ಕೋಟಿ ಖರ್ಚಿನ ಒಂದು ಸಮ್ಮೇಳನದ ಬದಲಿಗೆ ಆಯಾ ಜಿಲ್ಲಾವಾರು ಪ್ರಾತಿನಿಧ್ಯ ಜತೆಗೆ ಅಲ್ಲಲ್ಲೇ ಸಮ್ಮೇಳನ ಮಾಡಿಕೊಳ್ಳುವುದರಿಂದ, ಸ್ಥಳೀಯ ಪ್ರತಿಭೆ ಮತ್ತು ಜನತೆ ಇಬ್ಬರೂ ಹೆಚ್ಚಿನ ಮಟ್ಟದಲ್ಲಿ ಪಾಲ್ಗೊಳ್ಳಲಾದರೂ ಅನುಕೂಲವಾಗುತ್ತದೆ. ಪ್ರತಿ ಮೂಲೆಯಿಂದ ಯಾರೂ ಯಾವತ್ತೂ ಹೀಗೆ ಸಮ್ಮೇಳನಗಳಿಗೆ ತಲುಪಲಾರರಲ್ಲ.

ಇಲ್ಲೇನಿದೆ…? ಊಟ ವಸತಿಯ ಬಗ್ಗೆಯೇ ಸದಕಾಲ ಚಿಂತಿಸುತ್ತಾ, ನಮ್ಮ ನಮ್ಮ ಕಾರ್ಯಕ್ರಮ ಆಗುತ್ತಿದ್ದಂತೆ ನೂರಾರು ಅಂಗಡಿ ಸಾಲಿನ ಮಧ್ಯೆ ಕಳೆದು ಹೋಗುವುದಾದರೆ ಅದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಯಾಕೆ ಬೇಕು..? ನಮ್ಮೂರುಗಳಲ್ಲೇ ಜಾತ್ರೆಗಳಿಲ್ಲವಾ..? ಒಂದಿಷ್ಟು ಕೂಲಿಕಾರರಿಗೆ, ಅಡಿಗೆಯವರಿಗೆ ಸೇರಿದಂತೆ ಇತರೆ ವರ್ಗದವರಿಗೆ ಒಂದು ವಾರ ಕಾಲ ಕಾಸು, ಕೆಲಸ ದಕ್ಕಬಹುದೇನೋ ಆದರೆ ಅದಕ್ಕಿಂತಲೂ ಹೆಚ್ಚಿಗೆ ಎಲ್ಲೆಲ್ಲಿ ಹೇಗೆ ಸೋರಿರುತ್ತದೋ ಕನ್ನಡ ತಾಯಿಯೇ ಹೇಳಬೇಕು. ಇಷ್ಟೆಲ್ಲಾ ಮಾಡಿ ಯಾವ ರೀತಿಯಲ್ಲೂ ಬಡ ರೈತನಿಗೂ, ಮಹಿಳೆಯರ ಅಗತ್ಯತೆಗೂ, ಅವರ ಸಬಲೀಕರಣದಂತಹ ಅವಶ್ಯತೆಗೂ ಆಗದ ಕಂಕಣ ಬದ್ಧತೆ ವೇದಿಕೆ ಮತ್ತು ಭಾಷಣಕ್ಕೆ ಸೀಮಿತವಾಗುವುದಾದರೆ ಅದರ ಅವಶ್ಯಕತೆಯಾದರೂ ಇದೆಯಾ..? ಕನ್ನಡ ಭಾಷೆ, ನುಡಿಗಾಗಿ ಸಮ್ಮೇಳನಗಳು ಬೇಕು ಎನ್ನುವವರಿದ್ದಾರೆ. ಹಾಗೆ ವಾದಿಸುವವರು ನೆನಪಿರಲಿ ನೀವೆಲ್ಲಾ ನಿರಂತರವಾಗಿ ಕನ್ನಡವನ್ನೇ ಮಾತಾಡುವ ಅಭ್ಯಾಸ ಜಾರಿ ಇಟ್ಟರೆ ಬೇರೇನೂ ಬೇಕೆ ಆಗಿಲ್ಲ. ಸುಲಭವಾಗಿ ಒಂದು ಭಾಷೆ ತನ್ನ ಸುತ್ತಲೂ ತನ್ನದೇ ಸಂಬಂಧಿತ ಸಂಸ್ಕೃತಿಯನ್ನು ಬೆಳೆಸುತ್ತದಯೇ ವಿನ: ಸಮ್ಮೇಳನಗಳಲ್ಲ. ಹಾಗಿದ್ದರೆ ನಾವಾಗಿ ಭಾಷೆಯ ಬದುಕಿಗೆ, ಅದರ ಜೀವಂತಿಕೆಗೆ, ಭಾಷೆಯ ಬೆರಗಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಿದೆಯೇ ವಿನ: ವೇದಿಕೆಯ ಒಣ ಚರ್ಚೆ, ಅರ್ಥವಾಗದ ಭಾಷಣ, ಕತ್ತಿಗೆ ಪೆನ್ನಿಟ್ಟು ಕೊಯ್ಯುವ ಕವಿತೆಯ ಮೂಲಕವಲ್ಲ. ಈ ರೀತಿಯಲ್ಲಿ ಚಿಂತಿಸಬಾರದೇಕೆ..?

ಯಾವ ಪ್ರಶ್ನೆಗೂ ಯಾರ ಬಳಿಯಲ್ಲೂ ಉತ್ತರವಿಲ್ಲ. ಅಕಸ್ಮಾತ ಇದೆಲ್ಲಾ ಅಗದೇ ಇದ್ದಿದ್ದರೆ, ಒಬ್ಬರಾದರೂ ನ್ಯಾಯೋಚಿತವಾಗಿ ನಿಂತು ಉತ್ತರಿಸುವ ನಿಜಾಯಿತಿ ಉಳಿಸಿಕೊಂಡಿದ್ದರೆ ಇವತ್ಯಾಕೆ ನಮಗೆ ” ಆಶ್ರಯಕ್ಕೆ ಮನೆ ಇರಲು, ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸರ್ವಜ್ಞ ” ಎನ್ನುವ ಯಾರದೋ ಲೇವಡಿಯ, ಕುಚೋದ್ಯದ ಅನುಕರಣೆಯ ರಚಿತ ವಚನ ಸರ್ವಜ್ಞನ ಹೆಸರಲ್ಲಿ ನೋಡುವ ಕರ್ಮ ಬರುತ್ತಿತ್ತು.

ಅಲ್ಲಿಗೆ ಇದ್ದ ಬದ್ದವರೆಲ್ಲಾ ಅಪ್ರಯೋಜಕರೇ ಎಂದು ನಾನು ಹೇಳುತ್ತಿಲ್ಲವಾದರೂ ಹೆಚ್ಚಿನವರಿಗೆ ಕನಿಷ್ಟ ಯಾವ ಪದ ಬಳಕೆ ಬೇಕು, ಯಾವುದು ಸಲ್ಲದು ಎಂಬಿತ್ಯಾದಿಗಳ ಕನಿಷ್ಟ ಮಾಹಿತಿ ಕನ್ನಡ ಭಾಷಾ ಜ್ಞಾನವೂ ಇಲ್ಲವೆಂದಾಯಿತಲ್ಲ. ಕನ್ನಡ ಹಬ್ಬ ಮಾಡುತ್ತೇನೆಂದು ಹೊರಟು ನಿಂತ ಜವಾಬ್ದಾರಿಯುತ ಜನರಿಗೆ ಶಬ್ದ ಬಳಕೆಯ ಅದರ ಅರ್ಥದ ಮಿನಿಮಂ ಮಾಹಿತ್ಯೂ ಇರಲಿಲ್ಲವೆಂದರೆ ಅದಿನ್ನೆಂಥಾ ಸಮ್ಮೇಳನವಿದ್ದೀತು. ಕೊನೆಯಲ್ಲಿ ಯಾರೋ ಕಿಡಿಗೇಡಿಗಳು ಎಂದು ಬಿಟ್ಟರೆ ಆದೀತಾ..? ಭಾಷೆಗೊಂದು ಮರ್ಯಾದೆ ಬೇಡವೆ..?  ಅಂಥವರೆಲ್ಲಾ ಸೇರಿಕೊಂಡು ನಿರ್ವಹಿಸುವ ಕನ್ನಡ ನುಡಿ ಹಬ್ಬದ ತೇರು ಎನ್ನುವ ನಮ್ಮ ಅಕ್ಷರ ಜಾತ್ರೆ ಅದಿನ್ಯಾವ ಮಟ್ಟದಲ್ಲಿ ಸಕ್ಸೆಸ್ ಎಂದು ಕಿರುಚಿಕೊಳ್ಳೊಣ. ತೀರ ಕನ್ನಡಕ್ಕೊಬ್ಬನೇ ಇರುವ ಸರ್ವಜ್ಞನ ವಚನಗಳನ್ನೇ ಈ ಮಟ್ಟಕ್ಕೆ ಹೀನಾಯವಾಗಿ ತಿರುಚಲು ಬಳಸಿಕೊಳ್ಳುವ ಮೂಲಕ ಅಪ್ರಭುದ್ಧತೆಯನ್ನು ಪ್ರದರ್ಶಿಸುವವರ ಕೈಯ್ಯಲ್ಲಿ ಸಾಹಿತ್ಯ ಸಮ್ಮೇಳನ ದೊರಕಿದಲ್ಲಿ ಏನಾಗಬೇಡ..? ಇಂಥದ್ದೆಲ್ಲಾ ಬೇಜವಾಬ್ದಾರಿಯ ವರ್ತನೆ ಮೂಲಕ ಯಾವ ಕನ್ನಡ ಉದ್ಧಾರವಾದೀತು..? ಅಷ್ಟಕ್ಕೂ ನಾನು ಕವಿ ನಾನು ಲೇಖಕ ಎಂದು ಸ್ವತ: ಪರಿಚಯಿಸಿಕೊಳ್ಳುವ ದರ್ದಿಗೆ ಬೀಳಬೇಕಾದ ಅನಿವಾರ್ಯತೆ ಅಲ್ಲೆಲ್ಲ ಸೃಷ್ಠಿಯಾಗಿದ್ದು ಗೊತ್ತಿಲ್ಲದ್ದೇನಲ್ಲ. ಹಿಂದೊಮ್ಮೆ ಸಮ್ಮೇಳನಾಧ್ಯಕ್ಷರನ್ನೇ ಯಾರೂ ಗಮನಿಸದೆ ಬಿಟ್ಟು ಹೋದದ್ದು, ಅವರಾಗಿ ಕರೆ ಮಾಡಿ ನಾನಿಲ್ಲಿದ್ದೀನಪ್ಪಾ ಎಂದಿದ್ದನ್ನು ಮೊನ್ನೆ ಮೊನ್ನೆ ಮಾಜಿ ಅಧ್ಯಕ್ಷರೊಬ್ಬರು ಪತ್ರಿಕೆಗಳ ಮೂಲಕ ಜಾಹೀರು ಮಾಡಿದ್ದು ಇದಕ್ಕೆಲ್ಲಾ ಸಾಕ್ಷಿ.

ಇಂಥಾ ವೇದಿಕೆಯಲ್ಲಿ ಪ್ರದರ್ಶಿಸುವ ವಾಗ್ಝರಿಯ ಒಂದು ತುಣುಕು ಇಲ್ಲಿದೆ.

“…ಇವತ್ತಿನ ಸಾಮಾಜಿಕ ತಲ್ಲಣ ಮತ್ತು ಸಮೂಹ ವೇದನೆಯ ದ್ಯೋತಕವಾಗಿ, ಪ್ರತಿ ಹಂತದಲ್ಲೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಅವಲೋಕಿಸುವಾಗ ತೀವ್ರ ಅಸಮಾಧಾನದ ನಡುವೆಯೂ ಗೋಚರಿಸುವ ಕೆಂಪು ಬಣ್ಣದ ಹೆಜ್ಜೆಗಳು ದಮನಿತ ಮತ್ತು ಶೋಷಿತರ ಪರವಾಗಿ ಅಷ್ಟೆ ಅಲ್ಲದೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಬದ್ಧತೆಯನ್ನು ಅನುಸಂಧಾನವಾಗಿಸಿಕೊಂಡು ಹೋಗುವಾಗ, ತಳಸ್ಪರ್ಶಿ ಸಂವೇದನೆಗಳೂ, ಮಧ್ಯಮ ಮಾರ್ಗಗಳೂ ಆಪ್ತ ಸಂವೇದನೆಯಲ್ಲಿ ತೊಡಗಿ ಅಭೂತಪೂರ್ವ ಯಶಸ್ಸಿನತ್ತ ಹೆಜ್ಜೆ ಹಾಕುವ ಸಮಕಾಲೀನ ತವಕ ಹಾಗು ಐತಿಹಾಸಿಕ ಪ್ರಜ್ಞೆಯನ್ನು ಮರೆಯದೆ ಸಮಾಜದಲ್ಲಿ ತಳವರ್ಗದ ಅಭಿವೃದ್ಧಿಗಾಗಿ ದನಿಯನ್ನು ಮೊಳಗಿಸುತ್ತಲೇ, ಸೂಕ್ತ ರೀತಿಯಲ್ಲಿ ಕನ್ನಡದ ಸಾಮಾಜಿಕ ಮತ್ತು ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳವು, ಭಾಷಾ ಸಮೃದ್ಧತೆಯ ಜತೆಗೆ ಬದುಕಿನ ಸಮಾನತೆಗಳ ಮಧ್ಯದ ಅವಿನಾಭಾವ ಸಂಬಂಧಕ್ಕೆ ನಾವು ಸಾಕ್ಷಿ ಪ್ರಜ್ಞೆಗಳಾಗುವ ಮೂಲಕ ನಮ್ಮ ತಾಯಿ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾ, ಕನ್ನಡದ ಹಿರಿಮೆಯನ್ನೂ ಸಮಾಜ ಮುಖಿಯಾಗಿ ಬೆಳೆಸುವತ್ತಾ ನಮ್ಮ ಗಮನವನ್ನು ಸೂಕ್ತ ರೀತಿಯಲ್ಲಿ ಕೇಂದ್ರೀಕರಿಸಬೇಕಿದೆ. ..”

ಇಂತಹ ಭಾಷಣ ಅಥವಾ ಶಬ್ದಾಡಂಬರದಿಂದ ಅದ್ಯಾರಿಗೆ ಯಾವ ಉಪಯೋಗಗಳಾಗುತ್ತವೇ ನನಗೆ ಗೊತ್ತಿಲ್ಲ. ನನಗಂತೂ ನಯ್ಯಾ ಪೈಸೆ ಅರ್ಥವಾಗುವುದಿಲ್ಲ. ಆದರೆ ಇದೆಲ್ಲಾ ಸಮ್ಮೇಳನಕ್ಕೆ ಬೇಕು. ಕಾರಣ ಅದು ಬುದ್ಧಿ ಜೀವಿಗಳ ವಲಯ ಅಲ್ಲೆಲ್ಲಾ ಸುಲಭಕ್ಕೆ ಅರ್ಥವಾಗುವ ಮಾತನಾಡಿದರೆ ನಮಗೂ ನಿಮಗೂ ಫರಕ್ಕು ಏನಿದೆ..? ಎನ್ನುತ್ತದೆ ಆ ವಲಯ ಅದಕ್ಕೆ ಈ ಭಾಷಣ ಬೇಕು. ಏನು ಮಾಡೊಣ ಅರ್ಥೈಸುವಿಕೆಗಾಗಿ ಯಾವ ಅವಧಾನಿಗಳನ್ನು ಹುಡುಕಿಕೊಂಡು ಹೋಗೋಣ..?

ಇನ್ನು ಮೊನ್ನೆ ಅರ್ಧ ಶತಕ ದಾಟಿದ್ದ ವಾಚಕರ ಗುಂಪಿನ ಕವಿ ಗೋಷ್ಟಿಯ ಉತ್ಪನ್ನ ಏನು.. ? ಹೋಗಲಿ ವೇದಿಕೆಯಿಂದ ಇಳಿದ ಮೇಲೆ ಪಕ್ಕದವರು ಓದಿದ ಕವನ ಯಾವುದಮ್ಮಾ..? ಉಹೂ.. ಒಂದಾದರೂ ಉತ್ತರ ಸಿಕ್ಕಿದರೆ ಕೇಳಿ. ಇದಕ್ಕೆ ಅಯ್ಕೆ ಪ್ರಕ್ರಿಯೆ ಕೂಡಾ ಒಂದು ಪ್ರಹಸನವೇ. ಇನ್ನು ತಮ್ಮ ಹೆಸರು ತಿರಸ್ಕೃತವಾಗದಿರಲಿ ಎಂಬ ಕಾರಣಕ್ಕೆ ನಿರಂತರ ಫೋನು ಸಂಪರ್ಕ ಮತ್ತು ಆಯಾ ವಿಭಾಗದವರೊಡನೆ ನಿಕಟವಾಗಿರುವವರು ಗುಟ್ಟಾಗಿ ಹೇಳಿಕೊಳ್ಳುವದಾದರೂ ಏನು..? “..ಅಯ್ಯೋ ಯಾರಿಗಾದರೂ ನಿಷ್ಠುರವಾಗಿ ಇದ್ದರೆ ನನಗೆ ನಾಳೆ ವೇದಿಕೆ ಯಾರು ಕೊಡುತ್ತಾರೆ..? ಅದಕ್ಕೆ ನಾನು ಎರಡೂ ಕಡೆ. ನಿರ್ದಿಷ್ಟ ಅಭಿಪ್ರಾಯ ನಾನು ಕೊಡಲ್ಲ. ನನಗೆ ಎಲ್ಲರೂ ಬೇಕು..” ಆಯಿತಲ್ಲ ಇನ್ನೇನು ಬೇಕು. ಮೂರು ಕೊಟ್ಟರೆ ಅತ್ತ, ಆರು ಕೊಟ್ಟರೆ ಇತ್ತ, ಇವರಿಂದ ಅದಿನ್ನೆಂಥಾ ಸಾಹಿತ್ಯ ಸೇವೆ ಅಪೇಕ್ಷಿಸುತ್ತಿರಿ ನೀವು..? ಜತೆಗೆ ಹಾಗೆ ಕವನ ವಾಚಿಸಲು ಹತ್ತಿ ಕೂರುವವರಲ್ಲಿ, ಎಷ್ಟು ಜನ ಸಾಹಿತ್ಯಿಕವಾಗಿ ಜೀವಂತ ಇದ್ದವರು.? ಎಷ್ಟು ಜನರ ಇವರ ಕವಿತೆ, ಬರಹಗಳು ನಿರಂತರ ಪ್ರಕಟಣಾ ಮಾಧ್ಯಮದಲ್ಲಿವೆ..? ಫಲಿತಾಂಶ ಶೋಚನೀಯ. ಅದರಲ್ಲೂ ಫೇಸ್‍ಬುಕ್ ಎನ್ನುವ ಸ್ವತಂತ್ರ ಮಾಧ್ಯಮ ಬಂದ ಮೇಲೆ ಪ್ರತಿ ಗೋಡೆಯ ಮೇಲೂ ಕವಿಗಳೇ ಮೈದಳೆಯುತ್ತಿದ್ದಾರೆ. ಒಂದು ಸಾಲು ಬರಿ, ಮೂರು ತುಂಡು ಮಾಡು, ಒಂದರ ಕೆಳಗೊಂದು ಜೋಡಿಸು – ಇದು ಈಗಿನ ಕವಿತೆ ಬರೆಯುವ ಶೈಲಿ ಅಥವಾ ಪದ್ಧತಿಯ ಇಕ್ವೇಶನ್ನು. ಇದೇ ಸಾಲನ್ನು ಬರೆದರೂ ಅದೂ ಒಂದು ಕವನವೇ ಎಂದ ನಿಪುಣರೂ ಇವತ್ತು ನನ್ನ ಎದುರಿಗಿದ್ದಾರೆ.

ಇದರಿಂದ ಅದಿನ್ಯಾವ ಸಮಾಜೋದ್ಧಾರ, ಸಾಮಾಜಿಕ ಸಂವೇದನೆ ಇತ್ಯಾದಿ ದೊಡ್ಡ ಶಬ್ದಗಳ ಸಂಕಲನಕ್ಕೆ ಉಪಯೋಗವಾಗುತ್ತದೆ ಆದೀತು ನನಗೆ ಗೊತ್ತಿಲ್ಲ. ಆದರೆ ನಾನು ಇಂತಿಂಥಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿತೆ ವಾಚಿಸಿದ್ದೆ ಎಂದು ಬಯೋಡಾಟಾದಲ್ಲಿ ಬರೆದುಕೊಳ್ಳಲು ಮತ್ತು ಅದ್ರಿಂದ ಇನ್ನೊಂದು ಸಮ್ಮೇಳನಕ್ಕೆ ಹಾರಲು ಮೆಟ್ಟಿಲು ಭಾಗ್ಯ ಲಭ್ಯವಾಗೋದಂತೂ ಹೌದು. ಇದೆಲ್ಲಾ ಆಗದಿದ್ದರೆ ಅದ್ಯಾವ ಕನ್ನಡ ನಾಡು ಹಸಿದು ಕೂರುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ಇಂತಾ ಗೋಷ್ಠಿ ಮತ್ತು ಅದರ ಉತ್ಪನ್ನ ಯಾವ ರೀತಿಯಲ್ಲಿ ಯಾರಿಗೆ ಪ್ರಯೋಜನವಾಗುತ್ತಿದೆ ಅದೂ ನನಗೆ ಗೊತ್ತಿಲ್ಲ. ಆದರೆ ಸಾರಾಸಗಾಟಾಗಿ ನನ್ನ ನಿಮ್ಮೆಲ್ಲ ತೆರಿಗೆ ದುಡ್ಡು ಇಂತಾ ಅಪ್ರಯೋಜಕ ಕಾರ್ಯಕ್ಕೆ ಖರ್ಚಾಗುತ್ತಿರುವುದಂತೂ ಹೌದು.

ಮೊನ್ನೆ ವಾಚಿಸಿದ ಕವನ ನೋಡಿ. ಯಾವ ಕೋನದಿಂದ ಏನಾದರೂ ಅರಪಾವು ಉಪಯೋಗವಾಗುವಂತಹ ಅಥವಾ ವಿದ್ವತ್ ಪೂರ್ಣ ಕವಿಗಳಿದ್ದುವಾ..? ಹಾಗೆ ಹೌದಾದರೆ ಅದರಿಂದ ಆಗಿರುವುದಾದರೂ ಏನು..? ಯಾರಿಗೆ ಯಾವ ಉಪಯೋಗವಾಯಿತು..?  ಹೀಗೆ ಪ್ರಶ್ನೆಗಳು ಗೋಷ್ಠಿಗಳಿಗೂ ಚರ್ಚಾ ವೇದಿಕೆಗೂ ಅನ್ವಯವಾಗುತ್ತದೆ. ಆದರೆ ಉತ್ತರಿಸಬೇಕಾದ ಮಹಾನುಭಾವರು ಆಗಲೇ ಸಮ್ಮೇಳನದ ನಾಸ್ಜಾಲಿಯಾಗಳಲ್ಲಿ ಮುಳುಗಿದ್ದಾರೆ.

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post