X

ನಾಯಕನ ಕೆಲಸ ಮುಗಿದಿದೆ ನಮ್ಮ ಕೆಲಸ ಬೆಟ್ಟದಷ್ಟಿದೆ

       ಅದು ಎರಡನೇ ವಿಶ್ವಯುದ್ಧದ ಸಮಯ. ಜಗತ್ತನ್ನೇ ಆಳುವ ಕನಸು ಕಾಣುತಿದ್ದ ಜಪಾನ್’ನ ಮೇಲೆ ಅಮೇರಿಕ ಅಣುಬಾಂಬ್ ಪ್ರಯೋಗಿಸಿ ಬಿಡುತ್ತದೆ. ಜೀವ ಕುಲವನ್ನೇ ಸರ್ವನಾಶ ಮಾಡುವ ಅಣುಬಾಂಬ್ ಜಪಾನ್’ನ ನಾಗಸಾಕಿ ಮತ್ತು ಹಿರೋಶಿಮಾ ನಗರಗಳನ್ನು ಸ್ಮಶಾನ ಮಾಡುವ ಜೊತೆಗೆ, ಜಗತ್ತಿನ ನಾಯಕನಾಗಲು ಹೊರಟಿದ್ದ ಜಪಾನ್’ನ ನಾಗಾಲೋಟಕ್ಕೆ ಬ್ರೇಕ್ ಹಾಕಿ ಬಿಡುತ್ತದೆ. ತಜ್ಞರು ಜಪಾನ್ ಈ ಆಘಾತದಿಂದ ಚೇತರಿಸಿಕೊಳ್ಳಲು ಒಂದು ಶತಮಾನವೇ ಬೇಕೆಂದು ಅಂದಾಜಿಸುತ್ತಾರೆ. ಇಡೀ ಜಗತ್ತು ಜಪಾನ್ ಇನ್ನು ನೆನಪು ಮಾತ್ರ ಎಂದುಕೊಳ್ಳುತ್ತದೆ. ಆದರೆ ಇಡೀ ದೇಶವೇ ಮುರಿದು ಬಿದಿದ್ದರೂ ಜಪಾನ್’ನ ಅಂದಿನ ಅಧ್ಯಕ್ಷ ಶುನ್ರೂಕು ಹಾಠಾ ಅವರು ಮಾತ್ರ ಮತ್ತೆ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಯೋಚಿಸಲಾರಂಭಿಸುತ್ತಾರೆ. ಜಗತ್ತಿನ ಮುಂದೆ ಮತ್ತೆ ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ನಿಲ್ಲುವ ಅವರ ಕನಸನ್ನು ಜಪಾನಿ ಜನರ ಮುಂದಿಟ್ಟು ದಿನಕ್ಕೆ ಹತ್ತು ಗಂಟೆಯ ಬದಲು ಹದಿನಾಲ್ಕು ಗಂಟೆ ಕೆಲಸ ಮಾಡಲು ಕರೆ ಕೊಡುತ್ತಾರೆ. ದೇಶ ಕಟ್ಟುವ ಕೆಲಸದಲ್ಲಿ ಅಳಿಲು ಸೇವೆ ಮಾಡುವ ಅವಕಾಶವನ್ನು ಜಪಾನಿಗರು ಮರು ಮಾತಿಲ್ಲದೆ ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾರೆ. ಫಲಿತಾಂಶ ನಮ್ಮ ಮುಂದೆಯೇ ಇದೆ. ಜಪಾನ್ ಚೇತರಿಸಿಕೊಳ್ಳಲು ಒಂದು ಶತಮಾನ ಬೇಕೆಂದಿದ್ದ ಜಗತ್ತಿನ ಮುಂದೆ ಕೆಲವೇ ವರ್ಷಗಳಲ್ಲಿ  ತಂತ್ರಜ್ಞಾನದಲ್ಲಿ ವಿಶ್ವದ ದೊಡ್ಡಣ್ಣನಾಗಿ ಬೆಳೆದು ನಿಂತು ಬಿಡುತ್ತದೆ ಜಪಾನ್. ಜಪಾನ್’ನ ಈ ಅದ್ಭುತ ಯಶಸ್ಸಿಗೆ ಕಾರಣವಾಗಿದ್ದು ಅಂದು ಶುನ್ರೂಕು ಹಾಠಾ ತೆಗೆದುಕೊಂಡ ಒಂದು ಅದ್ಭುತ ನಿರ್ಣಯ ಮತ್ತು ಜಪಾನಿಗರು ತಮ್ಮ ನಾಯಕನ ಮೇಲೆ ವಿಶ್ವಾಸವಿಟ್ಟು ಹಗಲಿರುಳು ಸುರಿಸಿದ ಬೆವರು. ಒಂದು ವೇಳೆ ಅಂದು ಜಪಾನಿಗರು ನಾಯಕನ ಮಾತನ್ನು ವಿನಾಕಾರಣ ವಿರೋಧಿಸಿದ್ದರೆ, ಕೆಲಸಕ್ಕೆ ಬಾರದ ಮುಷ್ಕರಗಳನ್ನು ಮಾಡಿದ್ದರೆ, ಜಪಾನಿ ಮಾಧ್ಯಮಗಳು ಯುದ್ಧದಲ್ಲಾದ ಮುಖಭಂಗವನ್ನೇ ಮತ್ತೆ ಮತ್ತೆ ಭಿತ್ತರಿಸುತ್ತಾ ಕುಳಿತಿದ್ದರೆ, ಬುದ್ಧಿಜೀವಿಗಳು ತಮ್ಮ ಸ್ವಾರ್ಥ ಸಾಧಿಸಲು ಹೊರಟ್ಟಿದ್ದರೆ , ಕ್ಲಿಷ್ಟ ಸಮಯದಲ್ಲೂ ರಾಜಕಾರಣಿಗಳು ರಾಜಕೀಯ ಮಾಡುತ್ತಾ ಕುಳಿತಿದ್ದರೆ ಬಹುಶಃ ಜಪಾನ್ ಇತಿಹಾಸದಿಂದ ಮರೆಯಾಗಿ ದಶಕಗಳೇ ಕಳೆದು ಹೋಗಿರುತಿತ್ತು. ಜಪಾನ್’ನ ಇಂದಿನ ಸಾಧನೆಯ ಶ್ರೇಯಸ್ಸು ತಲುಪಬೇಕಾಗಿರುವುದು ಜಪಾನಿ ಪ್ರಜೆಗಳಿಗೆ.

 

   ಇಂತಹುದೇ ಒಂದು ಸಂಧರ್ಭ ಇಂದು ನಮ್ಮ ಮುಂದೆಯೂ ಬಂದು ನಿಂತಿದೆ. ಅಂದಿನ ಜಪಾನ್’ನ ಅಧ್ಯಕ್ಷರಂತೆ ಇಂದಿನ ಭಾರತದ ಪ್ರಧಾನಿಗಳು ಕೂಡ ದೇಶ ಕಟ್ಟುವ ಮಹತ್ಕಾರ್ಯಕ್ಕೆ ದೇಶವಾಸಿಗಳ ಸಹಾಯ ಕೇಳಿದ್ದಾರೆ. ಕಾಳ ಧನಿಕರಿಗೆ ,ಕಪ್ಪು ಹಣದಿಂದ ಕೊಬ್ಬಿ ಮೆರೆಯುತ್ತಿದ್ದ ದೇಶ ವಿಧ್ವಂಸಕ ಶಕ್ತಿಗಳಿಗೆ ಮತ್ತು ನಕಲಿ ನೋಟುಗಳನ್ನು ಬಳಸಿ ದೇಶದ ಅರ್ಥವ್ಯವಸ್ಥೆಯ ಬುಡವನ್ನಲುಗಾಡಿಸುತಿದ್ದ ಭಯೋತ್ಪಾದಕರ ಮೇಲೆ ಕಳೆದ ನವೆಂಬರ್ ಎಂಟರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವ ಮೂಲಕ ಏಕಾಂಗಿಯಾಗಿ ಬಹು ದೊಡ್ಡ ಸಮರವನ್ನೇ ಸಾರಿದ್ದಾರೆ ದೇಶದ ಪ್ರಧಾನಿ. ಕಾಲಾನುಕಾಲದಿಂದ ಯಾವುದ್ಯಾವುದೋ ತಿಜೋರಿಗಳಲ್ಲಿ ಗೋಡೋನುಗಳಲ್ಲಿ ಅಡಗಿದ್ದ , ಅದೆಷ್ಟೋ ವರ್ಷಗಳಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಚಲಾವಣೆಯಾಗದಿದ್ದ ನೋಟುಗಳೆಲ್ಲ ಮೋದಿಯೆಂಬ ಕಿಂದರಜೋಗಿ ಊದಿದ ಪುಂಗಿಗೆ ಬಿಲದೊಳಗಿನ ಇಲಿಗಳಂತೆ ಹೊರಬಂದು ಕಪ್ಪಿನಿಂದ ಬಿಳಿಯಾಗಲು ಹಾತೊರೆಯಲಾರಂಭಿಸಿವೆ. ಏನು ಮಾಡಿದರೂ ಬಿಳಿಯಾಗಲಾರದ ನೋಟುಗಳು ಮೋರಿ ಚರಂಡಿಯನ್ನು ಸೇರಲಾರಂಭಿಸಿವೆ.

 

   ಪ್ರಧಾನಿಯವರು ನವಂಬರ್  ಎಂಟರಂದು ಘೋಷಿಸಿದ ನಿರ್ಧಾರದ ಹಿಂದೆ ಬಹು ದಿನಗಳ ಕಾರ್ಯಸೂಚಿ ಅಡಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಲ್ಲರಿಗೂ ಬ್ಯಾಂಕ್ ಖಾತೆಯನ್ನು ತೆರೆಯಲು ವಿನಂತಿಸಿಕೊಂಡರು, ಆದಾಯ ತೆರಿಗೆ ಕಟ್ಟದೆ ದೇಶವನ್ನು ವಂಚಿಸುತಿದ್ದವರಿಗೆ ಬಾಕಿ ತೆರಿಗೆಯನ್ನು ಮತ್ತು ತಮ್ಮ ಸರಿಯಾದ ಆಸ್ತಿ ವಿವರಗಳನ್ನು ಘೋಷಿಕೊಳ್ಳಲು ಗಡವು ನೀಡಿದರು. ಕಾಳ ಧನಿಕರಿಗೆ ತಮ್ಮ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡಿದರು. ದೇಶವಾಸಿಗಳೇನೋ ಪ್ರಧಾನಿಯವರ ಜನ್ ಧನ್ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆ ತೆಗೆದು ತಮ್ಮ ಕರ್ತವ್ಯವನ್ನು ಪಾಲಿಸಿ ಪ್ರಧಾನಿಯವರ ವಿನಂತಿಗೆ ಸ್ಪಂದಿಸಿದರು .ಆದರೆ ಕಪ್ಪು ಹಣದಿಂದ ಕೊಭ್ಭಿ ಮೆರೆಯುತಿದ್ದ ಕಾಳ ಧನಿಕರು ಆಸ್ತಿ ವಿವರವನ್ನು ಘೋಷಿಸಲೇ ಇಲ್ಲ, ಕಪ್ಪು ಹಣವನ್ನು ಸರಿಯಾದ ತೆರಿಗೆ ಕಟ್ಟಿ ಬಿಳಿ ಹಣ ಮಾಡಿಕೊಳ್ಳಲು ಇಲ್ಲ. ಇದೆಲ್ಲದಕ್ಕಿಂತ ದೇಶದಲ್ಲಿ ಅಸಲಿ ನೋಟುಗಳಿಗಿಂತ ಹೆಚ್ಚಾಗಿ ಹರಿದಾಡುತಿದ್ದ ನಕಲಿ ನೋಟುಗಳ ಹಾವಳಿ ಮತ್ತು ಈ ನಕಲಿ ನೋಟುಗಳಿಂದ ಬೆಳೆಯುತಿದ್ದ ಭಯೋತ್ಪಾದಕ ಸಂಘಟನೆಗಳನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ ಪ್ರಧಾನಿಯವರಿಗೆ. ಮತ್ತೊಂದೆಡೆ ತನ್ನ ದೇಶದ ಕರೆನ್ಸಿಗಿಂತ ಭಾರತದ ಕರೆನ್ಸಿಯನ್ನು ಹೆಚ್ಚಾಗಿ ಮುದ್ರಿಸಿ ಭಯೋತ್ಪಾದಕರನ್ನು ಬೆಳಸುತ್ತಿರುವ ಪಾಕಿಸ್ಥಾನದ ಉಪಟಳ ಗಡಿಯಲ್ಲಿ ಹೆಚ್ಚಾಗುತ್ತಲೇ ಇರುತ್ತದೆ. ಯಾವಾಗ ಕಾಳ ಧನಿಕರು ಪ್ರಧಾನಿಯವರ ಮಾತಿಗೆ ಖ್ಯಾರೆ ಎನ್ನಲಿಲ್ಲವೋ ಆಗಲೇ ಪ್ರಧಾನಿಯವರ ತಲೆಯಲ್ಲಿ ಮಿಂಚಿದ್ದು ಅಂದೆಂದೋ ಅನಿಲ್ ಬೋಕಿ ಎಂಬ ಅರ್ಥಶಾಸ್ತ್ರಜ್ಞ ಹೇಳಿದ್ದ ಹೆಚ್ಚು ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವ ಉಪಾಯ. ಆದರೆ ಈ ಯೋಜನೆಯನ್ನು ಜಾರಿಗೆ ತರುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ, ಯಾಕೆಂದರೆ ಈ ಬ್ಯಾನ್’ನಿಂದ ಕಪ್ಪು ಧನಿಕರ ಜೊತೆ ಜನಸಾಮಾನ್ಯರಿಗೂ ತೊಂದರೆಯಾಗುವ ಅಪಾಯವೂ ಇತ್ತು. ಕ್ಯಾಬಿನೇಟ್’ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ತಮ್ಮ ಪಕ್ಷದಲ್ಲೇ ಅನೇಕ ಕಾಳ ಧನಿಕರಿರುವ ವಿಷಯ ಮೋದಿಯವರಿಗೇನು ತಿಳಿಯದ ವಿಷಯವಾಗಿರಲಿಲ್ಲ. ಜೊತೆಗೆ ನೋಟು ಬ್ಯಾನ್ ಮಾಡುವ ಸುದ್ಧಿ ಒಂದು ದಿನ ಮುಂಚಿತವಾಗಿ ಸೋರಿಕೆಯಾದರೂ ಕಪ್ಪು ಹಣವೆಲ್ಲಾ , ವೃತ್ತಿ ನಿಷ್ಠೆಯಿಲ್ಲದ ಬ್ಯಾಂಕ್’ಗಳ ಸಹಾಯದಿಂದ 500 ,1000 ಮುಖಬೆಲೆಯ ನೋಟುಗಳಿಂದ ಬೇರೆ ಮುಖಬೆಲೆಯ ನೋಟುಗಳಾಗಿ ಮತ್ತೆ ಬಿಲ ಸೇರುವ ಅಪಾಯವೂ ಇತ್ತು. ಇದೆಲ್ಲವನ್ನೂ ಗಮದಲ್ಲಿಟ್ಟುಕೊಂಡೇ ಪ್ರಧಾನಿಯವರೂ ಆರ್ ಬಿ ಐ ಮತ್ತು ತಮ್ಮ ಕೆಲವು ನಂಬಿಕಸ್ತ ಮಂತ್ರಿಗಳೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿ ನವಂಬರ್ ಎಂಟರಂದು ಬ್ಯಾಂಕ್’ಗಳು ಬಾಗಿಲು ಮುಚ್ಚುವವರೆಗೂ ಕಾದು ಕೂರುತ್ತಾರೆ.  ಸರಿಯಾಗಿ ರಾತ್ರಿ 7.30ಕ್ಕೆ ಕ್ಯಾಬಿನೇಟ್ ಸಭೆ ಕರೆದು ತಮ್ಮ ನಿರ್ಧಾರ ಪ್ರಕಟಿಸುತ್ತಾರೆ. ಬಹುತೇಕರು ಒಲ್ಲದ ಮನಸ್ಸಿಂದಲೇ ಒಪ್ಪಿಗೆ ಸೂಚಿಸುತ್ತಾರೆ. ಸರಿಯಾಗಿ ರಾತ್ರಿ 8ಗಂಟೆಗೆ ದೇಶದ ಜನತೆಯ ಮುಂದೆ ಬಂದು ನಿಂತ ಪ್ರಧಾನಿ ಮೋದಿಯವರು ಅಂದು ಮಧ್ಯ ರಾತ್ರಿಯಿಂದಲೇ 500 ಮತ್ತು 1000 ಮುಖಬೆಲೆಯ ನೋಟುಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ ಆದರೆ ನಿಮ್ಮಲ್ಲಿ ಇರುವ ನೋಟುಗಳನ್ನು ಬ್ಯಾಂಕ್’ನಲ್ಲಿ ನವೆಂಬರ್ 24ರವರೆಗೂ ಬದಲಾಯಿಸಿಕೊಳ್ಳಬಹುದು ಮತ್ತು ಡಿಸೆಂಬರ್ ಕೊನೆಯವರೆಗೂ ಖಾತೆಗೆ ಜಮಾ ಮಾಡುವ ಅವಕಾಶವಿರುತ್ತದೆ?, 2017ರ ನಂತರ ಈ ನೋಟುಗಳು ಕೇವಲ ಕಾಗದ ತುಂಡುಗಳಾಗಿ ಉಳಿದು ಬಿಡುತ್ತವೆ ಎಂದು ಬಿಡುತ್ತಾರೆ.  ಕಪ್ಪು ಹಣದ ಹಾಸಿಗೆಯಲ್ಲಿ ಸ್ವೇಚ್ಛೆಯಾಗಿ ಉರುಳಾಡುತಿದ್ದ ಧನಿಕರೆಲ್ಲ ಬೆಚ್ಚಿ ಬೀಳುತ್ತಾರೆ, ಯಾವ ಹಣದಿಂದ ಕಾಳ ಸಂತೆಯ ಸಾಮ್ರಾಜ್ಯವನ್ನೇ ಕಟ್ಟಿದ್ದರೋ ಆ ಹಣಕ್ಕೆ  ತೆರಿಗೆಯ ಜೊತೆಗೆ ದಂಡವನ್ನು ಕಟ್ಟಿ ಬಿಳಿಹಣವಾಗಿ ಪರಿವರ್ತಿಸಿಕೊಳ್ಳದಿದ್ದರೇ ಹಣವೆಲ್ಲ ಹೆಣಸುಡಲು ಯೋಗ್ಯವಾಗಿ ಉಳಿಯುವುದಿಲ್ಲವೆಂಬ ಸತ್ಯ ಕಿವಿಗೆ ರಾಚುತಿದ್ದಂತೆ ನಡುಗಿ ಹೋಗುತ್ತದೆ ಕತ್ತಲ ಸಾಮ್ರಾಜ್ಯ. ಅಂದು ನಿಜವಾಗಿ ಸಂಭ್ರಮಿಸಿದ್ದು ಅಂದು ಗೆಲುವಾಗಿದ್ದು ಮಾತ್ರ ಸಾಮಾನ್ಯ ಪ್ರಜೆಗೆ ಮತ್ತು ನ್ಯಾಯವಾಗಿ ದುಡಿದು , ಸರ್ಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಸಿ ಶ್ರೀಮಂತರಿಗೆ. ಅಲ್ಲಿಂದ ಪ್ರಾರಂಭವಾಗುತ್ತದೆ ನೋಡಿ ರಾಜಕೀಯದಾಟ.

 

  ನವಂಬರ್ ಎಂಟರಂದು ಈ ನಿರ್ಧಾರ ಪ್ರಧಾನಿಯವರ ಬಾಯಿಯಿಂದ ಹೊರಬಿದ್ದ ಕೂಡಲೇ ಸ್ವತಃ ಬಿಜೆಪಿಯಲ್ಲಿ ಮೋದಿಯವರ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ , ದೇಶವನ್ನು ವರ್ಷಾನುಗಟ್ಟಲೇ ಲೂಟಿ ಹೊಡೆದಿದ್ದ ಪಕ್ಷಗಳು ಮತ್ತು ಅದರ ನಾಯಕರುಗಳು ಇದು ಅನ್ಯಾಯ , ಜನಸಾಮಾನ್ಯರ ವಿರೋಧಿ ಪ್ರಧಾನಿ ಎಂದು ತಮ್ಮ ನೋವು ಮುಚ್ಚಿಕೊಳ್ಳಲು ಊಳಿಡಲು ಪ್ರಾರಂಭಿಸುತ್ತಾರೆ. ಕೆಲವು ಬಿಜೆಪಿ ನಾಯಕರುಗಳೇ ತಮ್ಮ ಕಪ್ಪು ಹಣ ಬಿಳಿ ಮಾಡಲಾಗದೇ ಪರದಾಡುತ್ತಾರೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ  ಜನಸಾಮಾನ್ಯನ ಪಕ್ಷದ ನಾಯಕನಂತೂ ಪಂಜಾಬ್ ಚುನಾವಣೆಗಾಗಿ ಕೂಡಿಟ್ಟಿದ್ದ ಕಪ್ಪು ಹಣವೆಲ್ಲಾ ಕಾಗದವಾದ ಆಘಾತವನ್ನು ತಡೆದುಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸುತ್ತಾನೆ. ಭಾರತವನ್ನೇ ಬಂದ್ ಮಾಡುತ್ತೇವೆ ಎಂದು ಭ್ರಷ್ಟಾಚಾರಿಗಳೆಲ್ಲ ಬೀದಿಗಿಳಿಯುತ್ತಾರೆ. ಕರುನಾಡ ಮುಖ್ಯಮಂತ್ರಿ ನೋಟ್ ಬ್ಯಾನ್ ಮಾಡುವ ಒಂದು ವಾರ ಮೊದಲಾದರು ಹೇಳಬೇಕಿತ್ತು ಎಂದು ಪರೋಕ್ಷವಾಗಿ ತಮ್ಮ ಕಪ್ಪುಹಣ ಕಾಗದವಾದ ನೋವನ್ನು ತೋಡಿಕೊಳ್ಳುತ್ತಾರೆ. ನೈತಿಕತೆಯಿಲ್ಲದ ಮಾಧ್ಯಮಗಳು ತಮ್ಮ ಕಪ್ಪು ಹಣಕ್ಕೂ ಸಂಚಕಾರ ಬಂದೊದಗಿದನ್ನು ಅರಗಿಸಿಕೊಳ್ಳಲಾರದೆ ಸುಳ್ಳು ಸುಳ್ಳೇ ಸುದ್ಧಿಗಳನ್ನು ಭಿತ್ತರಿಸಲಾರಂಭಿಸುತ್ತವೆ. ಹೃದಯಾಘಾತದಿಂದ ಸತ್ತವರನ್ನು ಸಹ ನೋಟ್ ಬ್ಯಾನ್’ನಿಂದ ಸತ್ತರೆಂಬ ಸುದ್ಧಿ ಹಬ್ಬಿಸಲಾರಂಭಿಸುತ್ತವೆ. ಜನರಲ್ಲಿ ಇಲ್ಲದ ಆತಂಕವನ್ನು ತುಂಬಲಾರಂಭಿಸುತ್ತವೆ. ನ್ಯಾಯವಾಗಿ ದುಡಿದ ದುಡ್ಡನ್ನು ಬದಲಾಯಿಸಿಕೊಳ್ಳಲು ಎರಡು ತಿಂಗಳ ಕಾಲಾವಕಾಶವಿದ್ದರೂ ಮಾಧ್ಯಮಗಳು ಮರುದಿನದಿಂದಲೇ ನೋಟುಗಳು ಮೌಲ್ಯ ಕಳೆದುಕೊಳ್ಳತ್ತವೇನೋ ಎಂಬಂತೆ ಬಿಂಬಿಸಲಾರಂಭಿಸುತ್ತವೆ. ಪ್ರಜ್ಞಾವಂತ ನಾಗರೀಕರು ಮಾಧ್ಯಮಗಳ ಸೋಗಲಾಡಿತನಕ್ಕೆ ಬಲಿಯಾಗದೇ ಪ್ರಧಾನಿಯವರ ಪರ ನಿಂತು ಬಿಡುತ್ತಾರೆ ಆದರೆ ಅಮಾಯಕ ಜನ ಮಾತ್ರ ಮಾಧ್ಯಮದವರ ಸಂಚಿಗೆ ಬಲಿಯಾಗಿ ತಾವು ಬೆವರು ಸುರಿಸಿ ದುಡಿದು ಗಳಿಸಿದ ಹಣ ಎಲ್ಲಿ ಮೌಲ್ಯ ಕಳೆದುಕೊಳ್ಳುವುದೋ ಎಂದು ಹೆದರಿ ಹತ್ತಿರದ ಎ ಟಿ ಎಮ್ , ಬ್ಯಾಂಕುಗಳ ಮುಂದೆ ಸಾಗರೋಪಾದಿಯಲ್ಲಿ ಜಮಾಯಿಸಿಬಿಡುತ್ತಾರೆ. ಇದನ್ನೇ ಕಾದಿದ್ದ ಹೊಣೆಗೇಡಿ ಮಾಧ್ಯಮಗಳು ಮೈಕ್ ಹಿಡಿದು,  ಸಾಲಿನಲ್ಲಿ ನಿಂತಿದ್ದ ಜನರ ಬಾಯಿಂದ ಮೋದಿಯ ವಿರುದ್ಧ ಮಾತನಾಡಿಸುವ ನೀಚ ಕೆಲಸಕ್ಕೆ ಕೈ ಹಾಕುತ್ತವೆ. ಆದರೆ ಇಲ್ಲಿ ಜನಸಾಮಾನ್ಯ ಮೋದಿಯವರ ಕೈ ಹಿಡಿಯುತ್ತಾನೆ, ಜನರು ಉದ್ದುದ್ದ ಸಾಲುಗಳಲ್ಲಿ ನಿಲ್ಲಲು ಕಷ್ಟವೆನ್ನುತ್ತಾರೆಯೇ ಹೊರತು ಮೋದಿಯವರ ಯೋಜನೆಯನ್ನು ಎಲ್ಲೂ ವಿರೋಧಿಸುವುದಿಲ್ಲ . ಬದಲಿಗೆ , ಯೋಜನೆಯಿಂದ ದೇಶದ ಅರ್ಥ ವ್ಯವಸ್ಥೆಗಾಗುವ ಲಾಭಗಳ ಪಾಠವನ್ನು ತಿರುಗಿ ಮಾಧ್ಯಮಗಳಿಗೆ ಮಾಡಲಾರಂಭಿಸುತ್ತಾರೆ. ಕೃತಕ ಪರಿಸ್ಥಿತಿಯನ್ನು ನಿರ್ಮಿಸಿ ಅಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು  ಹೋಗಿದ್ದ ಮಾಧ್ಯಮಗಳಿಗೆ, ರಮ್ಯಾ, ರಾಹುಲ್, ಕೇಜ್ರಿವಾಲರಂತಹ ನೀತಿಗೆಟ್ಟ ರಾಜಕಾರಣಿಗಳಿಗೆ ಜನ ಛೀಮಾರಿ ಹಾಕಿ ಕಳುಹಿಸುತ್ತಾರೆ. ಅಲ್ಲಿಗೆ ತಮ್ಮ(ಕಾಳ ಧನಿಕರ) ಸಂಕಟವನ್ನು ಸಾಮಾನ್ಯ ಜನರ ಸಂಕಟವೆಂಬಂತೆ ಬಿಂಬಿಸಲು ಹೊರಟಿದ್ದವರ ಆಟ ಪ್ರಾರಂಭವಾಗುವ ಮೊದಲೇ ಕೊನೆಯಾಗುತ್ತದೆ. ಇಡೀ ದೇಶಕ್ಕೆ ನೋಟ್ ಬ್ಯಾನ್ ನ ಬಿಸಿ ತಟ್ಟಿದರು , ಬಿಜೆಪಿಯನ್ನು ಸೇರಿದಂತೆ ಬಹುತೇಕ ರಾಜಕಾರಣಿಗಳು ಮೋದಿಯ ನಡೆಯನ್ನು ವಿರೋಧಿಸಿದರೂ, ಬ್ಯಾಂಕ್’ಗಳ ಮುಂದೆ ಸಾಗರೋಪಾದಿಯಲ್ಲಿ ಸಾಲು ನಿಂತಿದ್ದರೂ ಸಾಮಾನ್ಯ ಜನ ಮಾತ್ರ ಮೋದಿಯವರ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ.

 

      ಬಹುತೇಕ ದೆಶವಾಸಿಗಳು, ಪ್ರಜ್ಞಾವಂತರು ಕಪ್ಪು ಹಣದ ವಿರುದ್ಧದ ಸಮರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರೂ ,ಮಾಧ್ಯಮಗಳ ಮತ್ತು ಕೆಲವು ರಾಜಕಾರಣಿಗಳ ಕುತಂತ್ರದಿಂದಾಗಿ ಬ್ಯಾಂಕ್’ಗಳ ಮುಂದೆ ಸಾಲುಗಟ್ಟಿ ನಿಂತಾಗ ಎಲ್ಲೋ ಒಂದೊಂದು ಅಪಸ್ವರ ಕೇಳಿ ಬರುತ್ತಿದೆ. ಆದರೆ ಜನ ಸಾಮಾನ್ಯರಾದ ನಾವೆಲ್ಲ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ , ದೇಶ ಬದಲಾಗುತ್ತಿರುವ ಈ ಸಂಧರ್ಭದಲ್ಲಿ ಕೆಲದಿನಗಳ ಕಾಲ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಮಟ್ಟಿನ ಏರು ಪೇರಾಗುವುದು ಸಹಜ ಹಾಗೂ ಈ ಪರಿಸ್ಥಿತಿ ತಾತ್ಕಾಲಿಕ ಕೂಡ. ಈಗಾಗಲೇ ಜನಜೀವನ ಸಹಜ ಸ್ಥಿತಿಗೆ ಮರಳುತಿದೆ. ಬ್ಯಾಂಕ್, ಎಟಿಎಮ್ ಗಳ ಬಳಿ ದೊಡ್ಡ ಸಾಲುಗಳೇನು ಕಂಡು ಬರುತಿಲ್ಲ. ಸಣ್ಣಪುಟ್ಟ ಅಡಚಣೆಗಳನ್ನು ನಾವು ನಮ್ಮ ಮುಂದಿನ ಭವ್ಯ ಭಾರತಕ್ಕಾಗಿ ಸಹಿಸಿಕೊಳ್ಳೋಣ. ಅಷ್ಟಕ್ಕೂ ಉಚಿತವಾಗಿ ವಿತರಿಸುವ ಜಿಯೋ ಸಿಮ್ ಗಾಗಿ ದಿನಗಟ್ಟಲೇ ಕಾದು ನಿಲ್ಲುವ , ಕಾಣದ ದೇವರಿಗಾಗಿ ತಿರುಪತಿಯಲ್ಲಿ ಹನ್ನೆರಡು ಗಂಟೆ ಸಾಲಿನಲ್ಲಿ ನಿಲ್ಲುವ , ಮೆಚ್ಚಿನ ನಟನ ಚಿತ್ರಕ್ಕಾಗಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು  ಚಿತ್ರಮಂದಿರದ ಮುಂದೆ ಜಮಾಯಿಸುವ, ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಕೊಡುವ ಬಟ್ಟಲು ಬಿರಿಯಾನಿಗೆ, ತೊಟ್ಟು ಸರಾಯಿಗೆ ದೊಡ್ಡ ಸಾಲಲ್ಲಿ ಕಾಯುವ ನಾವುಗಳು, ದೇಶದ ಉಜ್ವಲ ಭವಿಷ್ಯಕ್ಕಾಗಿ , ನಾಡಿನ ನಾಳಿನ ಒಳಿತಿಗಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆ ಬ್ಯಾಂಕ್ ಮತ್ತು ಎಟಿಮ್ ಗಳ ಮುಂದೆ ನಿಲ್ಲಲ್ಲೂ ಕಷ್ಟವೇನಿಲ್ಲ ಅಲ್ಲವೇ. ಅಷ್ಟಕ್ಕೂ ಈ ಯೋಜನೆ ಯಶಸ್ವಿಯಾದಲ್ಲಿ ಯೋಜನೆಯ ನೇರ ಫಲಾನುಭವಿಗಳು ನಾವೇ ಅಲ್ಲವೇ. ಮುಂದಿನ ದಿನಗಳಲ್ಲಿ ಮನೆ ಸಾಲ, ವಾಹನ ಸಾಲಗಳ ಮೇಲಿನ ಬಡ್ಡಿ ಕಡಿತದ ಜೊತೆಗೆ, ಆದಾಯ ತೆರಿಗೆಯಲ್ಲಿಯೂ ವಿನಾಯಿತಿ ದೊರೆಯುವ ಸಂಭವವಿದೆ. ದೇಶದ ಆರ್ಥಿಕ ಸ್ಥಿತಿಯ ಜೊತೆಗೆ ನಮ್ಮ ಜೀವನ ಮಟ್ಟವೂ ಸುಧಾರಿಸುತ್ತದೆ. ಭಾರತ ವಿಶ್ವಗುರುವಾಗಲೂ ಇನ್ನೊಂದು ಮೆಟ್ಟಿಲು ಹತ್ತುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ದೇಶದೆಲ್ಲೆಡೆ ಮತ್ತು ಗಡಿಯಲ್ಲಿ ನಮ್ಮವರ ಮಾರಣ ಹೋಮವನ್ನೇ ನಡಿಸುತ್ತಿರುವ ಭಯೋತ್ಪಾದಕರ ಸದ್ದಡಗುತ್ತದೆ. ಇದಕ್ಕಿಂತ ಇನ್ನೇನೂ ಬೇಕು ಒಬ್ಬ ಪ್ರಜ್ಞಾವಂತ ಪ್ರಜೆಗೆ ?

 

     ದೇಶದ ನಾಯಕನಾಗಿ ಮೋದಿ ನಾವೆಲ್ಲರೂ ಬಯಸುತಿದ್ದ ಕಪ್ಪು ಹಣದ ವಿರುದ್ಧದ ಹೋರಾಟವನ್ನು ಪ್ರಾರಂಭಿಸಿದ್ದಾರೆ. ಆರಿಸಿ ಕಳಿಸಿದಕ್ಕೆ ಹೆಮ್ಮೆಪಡುವಂತಹ ಕೆಲಸ ಅವರು ಮಾಡುತಿದ್ದಾರೆ, ಬಾಕಿಯಿರುವುದು ನಮ್ಮ ಕೆಲಸವಷ್ಟೇ. ದೇಶಕ್ಕಾಗಿ ಅಳಿಲು ಸೇವೆ ಮಾಡುವ ಸುವರ್ಣಾವಕಾಶ ನಮ್ಮ ಮುಂದಿದೆ. ಗಡಿಯಲ್ಲಿ ದೇಶಕ್ಕಾಗಿ ಬದುಕುವ ಯೋಧರು , ದೇಶದೊಳಗಿನ ಪ್ರಜೆಗಳ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಸದಾವಕಾಶವಿದು. ನಮ್ಮ ಕರ್ತವ್ಯಗಳನ್ನು ನಾವು ಪಾಲಿಸಬೇಕಷ್ಟೆ. ನಿಮ್ಮ ಸುತ್ತ ಮುತ್ತಲಿರುವ ಅದೆಷ್ಟೋ ಜನರಿಗೆ ಈ ನೋಟ್ ಬ್ಯಾನ್ ಹಿಂದಿರುವ ಮಹತ್ತರ ಉದ್ದೇಶವನ್ನು ತಿಳಿ ಹೇಳಿ.. ನೋಟ್ ಬ್ಯಾನ್ ಬಗ್ಗೆ ಸುಳ್ಳು ವದಂತಿಯನ್ನು ಹಬ್ಬಿಸುತ್ತಿರುವವರನ್ನು ಸಾಧ್ಯವಾದಲ್ಲಿ ತಡೆಯಿರಿ. ವದಂತಿಗಳಿಗೆ ಕಿವಿಗೊಡದಂತೆ ಜನತೆಯನ್ನು ವಿನಂತಿಸಿಕೊಳ್ಳಿ. ನಿಮ್ಮ ಬಳಿ ಕಪ್ಪು ಹಣವಿದ್ದರೆ ದಯವಿಟ್ಟು ಸರಿಯಾದ ತೆರಿಗೆ ಕಟ್ಟಿ ಬಿಳಿಹಣವಾಗಿ ಪರಿವರ್ತಿಸಿಕೊಂಡು ನೆಮ್ಮದಿಯಾಗಿರಿ.  ಕಳ್ಳ ಕಾಕರು ನಿಮ್ಮಲ್ಲಿ ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಲು ಕೇಳಿಕೊಂಡರೆ ನೇರವಾಗಿ ನಿರಾಕರಿಸಿ. ಅಂತಹವರನ್ನು ನ್ಯಾಯವ್ಯವಸ್ಥೆಯ ಗಮನಕ್ಕೆ ತನ್ನಿ. ಬ್ಯಾಂಕ್ ಗಳು ಅಡ್ಡದಾರಿಯಲ್ಲಿ ಕಾಳ ಧನಿಕರಿಗೆ ಸಹಕರಿಸುತಿದ್ದರೆ ಪೋಲಿಸರ ಗಮನಕ್ಕೆ ತನ್ನಿ. ಇದೆಲ್ಲ ಹೊಸ ಜವಬ್ದಾರಿಗಳಲ್ಲ, ಇವೆಲ್ಲ ಈ ದೇಶವಾಸಿಗಳಾಗಿ ನಮ್ಮ ಆದ್ಯ ಕರ್ತವ್ಯಗಳು. ದೇಶಭಕ್ತಿಯ ರಾಷ್ಟ್ರಪ್ರೇಮದ ವಿಷಯಕ್ಕೆ ಬಂದರೆ ನಾವು ಬೇರಾವುದೇ ದೇಶದ ಪ್ರಜೆಗಳಿಗಿಂತ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸೋಣ.

 

       ಪ್ರಧಾನಿಯವರ ಈ ಯೋಜನೆಯಿಂದ ಈಗಾಗಲೇ ಕೋಟಿ ಕೋಟಿ ಕಪ್ಪು ಹಣ ಬ್ಯಾಂಕ್ ಗಳಿಗೆ ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಕ್ಷಕೋಟಿ ಹಣ ಹರಿದು ಬರುವ ಸೂಚನೆಯಿದೆ. ಭವಿಷ್ಯದ ಭವ್ಯ ಭಾರತದ ಕನಸು ಈಗಾಗಲೇ ನನಸಾಗುವ ಹಾದಿಯಲ್ಲಿದೆ.  ದೇಶಕ್ಕಾಗಿನ ಈ ಯೋಜನೆಯನ್ನು ಮೋದಿಯವರು ನಮಗಾಗಿ ತಮ್ಮ ಪಕ್ಷದವರನ್ನು ಸಹ ಎದುರು ಹಾಕಿಕೊಂಡು, ದುಷ್ಟಶಕ್ತಿಗಳಿಂದ ತನ್ನ ಪ್ರಾಣಕ್ಕೆ ಸಂಚಕಾರ ಬರಬಹುದೆಂಬ ಕಲ್ಪನೆಯಿದ್ದರೂ ಕಾಳ ಧನಿಕರ ವಿರುದ್ಧ ತೊಡೆತಟ್ಟಿದ್ದಾರೆ. ನೆನಪಿರಲಿ ಇಂದು ದೇಶದ ಉಜ್ವಲ ಭವಿಷ್ಯಕ್ಕಾಗಿ , ನೆಮ್ಮದಿಯ ನಾಳೆಗಳಿಗಾಗಿ, ಸಧೃಡ ಅರ್ಥವ್ಯವಸ್ಥೆಗಾಗಿ , ಪ್ರಧಾನಿಯವರ ಕಪ್ಪು ಹಣದ ವಿರುದ್ಧದ ಸಮರಕ್ಕೆ ಕೈ ಜೋಡಿಸದಿದ್ದಲ್ಲಿ,ಇನ್ನು ಒಂದು ಶತಮಾನ ಕಳೆದರೂ ನಮ್ಮ ಅರ್ಥವ್ಯವಸ್ಥೆ ಸಬಲವಾಗುವುದಿಲ್ಲ.  ಇಂದು ಮೋದಿಗೆ ನಾವೆಲ್ಲರೂ ಸೇರಿ ಈ ಸಮರದಲ್ಲಿ ಜಯ ತಂದುಕೊಡದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಖಂಡಿತ ನಮ್ಮನ್ನು ಕ್ಷಮಿಸುವುದಿಲ್ಲ. ಅದಕ್ಕಾಗಿ ಪಕ್ಷ ಭೇಧ ಮರೆತು ಮೋದಿಯವರ ಬೆನ್ನಿಗೆ ನಿಂತು ನಮ್ಮ ಕರ್ತವ್ಯನಿಷ್ಠೆಯನ್ನು ಮೆರೆಯೋಣ. ಸದೃಢ ಭಾರತವನ್ನು ಮತ್ತು ಭಾರತದ ಅರ್ಥವ್ಯವಸ್ಥೆಯನ್ನು ಕಟ್ಟಲು ಅಳಿಲು ಸೇವೆಯನ್ನು ಸಲ್ಲಿಸೋಣ.

 

ಅರ್ಜುನ್ ದೇವಾಲದಕೆರೆ

arjun25tcs@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post