X

ಆ ಹೆಂಗಸು…

      ಮೊನ್ನೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿದ್ದೆ. ಯಾವುದೋ ಕಾಲ ಆಗಿತ್ತು ಹೋಗಿ. ವಿದ್ಯಾಭ್ಯಾಸದ ಕಾಲದಲ್ಲಿ ಎರಡು ವರ್ಷ ಅಲ್ಲೇ ಕಳೆದ ಹಲವು ಸುಂದರ ನೆನಪುಗಳು ಜೊತೆಗಿವೆ. ಈಗ ಹೋಗಬೇಕಾಗಿರುವುದು ಆಗಾಗ ಪಾಪಗಳನ್ನು ಡಿಸ್ಚಾರ್ಜ್ ಮಾಡಿ ಕೊಂಚವಾದರೂ ಪುಣ್ಯವನ್ನು ಚಾರ್ಜ್ ಮಾಡಿಕೊಳ್ಳಲೋಸುಗವಾಗಿ. ಅವ್ಯಾಹತವಾಗಿ, ಪಾಪದ ಕೊಡ ತುಂಬುತ್ತಿದ್ದರೂ, ದೇವಸ್ಥಾನಕ್ಕೆ ಹೋಗಲು ಆಲಸ್ಯ ಬಂದು ಬಿಟ್ಟಿತ್ತು. ನಂಬಿಕೆ ವಿಶ್ವಾಸಗಳಿಗೆ ಪೆಟ್ಟು ಬಿದ್ದಿತ್ತು ಅಂತಲ್ಲಾ, ಏನೋ ಸೋಮಾರಿತನ, ಅವ್ಯಕ್ತ ಹಿಂಜರಿಕೆಗಳಿಂದ ದೇವರಿಂದ ದೂರವಾಗಿ ಕಾಲ ಬಹಳ ಆಗಿತ್ತು. ನನ್ನ ಮನೆಯಿಂದ ಕುಕ್ಕೆಗೆ ಇರುವುದು ಕೇವಲ ಮೂವತ್ತು ಕಿಲೋಮೀಟರ್, ಅಬ್ಬಬ್ಬಾ ಅಂದರೆ ಒಂದು ಗಂಟೆ ಬೇಕಾಗಬಹುದು ಪ್ರಯಾಣಕ್ಕೆ. ಆದರೂ ಮುಹೂರ್ತ ಕೂಡಿ ಬಂದಿರಲಿಲ್ಲ. ನಿನ್ನೆ ಎಲ್ಲದಕ್ಕೂ ಅಂತ್ಯ ಹಾಡಿ ಅಮ್ಮನೊಂದಿಗೆ ಹೋಗಿಯೇ ಬಿಟ್ಟೆ. ಆದಿತ್ಯವಾರ, ಜತೆಯಲ್ಲಿ ಕ್ರಿಸ್ ಮಸ್ ರಜೆ ಬೇರೆ. ಜನಜಂಗುಳಿ ಭಾರೀ ಇದ್ದೀತು ಅನ್ನುವ ಬಲವಾದ ಶಂಕೆ ಇದ್ದರೂ ಮನಸ್ಸನ್ನು ನಿಯಂತ್ರಿಸಲು ನೆಪಗಳಿಗೆ ಎಡೆ ಮಾಡಿಕೊಡಲಿಲ್ಲ. ನೆಪಗಳನ್ನು ಮುಂದಿರಿಸಿದರೆ ಅಂದುಕೊಂಡದ್ದೆಲ್ಲವೂ ಬಾಕಿ. ಮನುಷ್ಯ ಯಾವಾಗಲೂ ಹೀಗೆಯೇ. ಕೆಲಸ ಮಾಡಲು ಕಾರಣ ಹುಡುಕುವ ಬದಲು ಮಾಡದಿರಲು ನೆಪ ಹುಡುಕುತ್ತಾನೆ. ಪ್ರಾಥಮಿಕ ಶಾಲೆಯಿಂದಲೇ ರಜಾ ಅರ್ಜಿಗಳಲ್ಲಿ ಇವೇ ನೆಪಗಳನ್ನು ಬರೆದು ಬರೆದೂ ರೂಢಿಯಾದ್ದರ ಫಲವಿರಬಹುದೇನೋ.

 

      ಅಂದುಕೊಂಡಿದ್ದಂತೆ ದೇವಾಲಯದಲ್ಲಿ ಭಾರೀ ಜನಸ್ತೋಮವಿತ್ತು. ನನ್ನ ಸ್ಕೂಟರ್ ಜಪ್ಪಯ್ಯ ಅಂದರೂ ಎಲ್ಲಿ ನಿಲ್ಲಲೂ ಕೇಳುತ್ತಿರಲಿಲ್ಲ. ಅಂತೂ ಸಮಾಧಾನಪಡಿಸಿ ಒಂದಿನಿತು ಜಾಗ ಮಾಡಿಕೊಟ್ಟು ಕೊಂಚ ಅಡ್ಜಸ್ಟ್ ಮಾಡಿಕೋ ಮಹರಾಯ ಎನ್ನುತ್ತಾ ಒಂದು ಸಂದಿಯೊಳಗೆ ತೂರಿಸಿದೆ. ರಥಬೀದಿಯೋ ಸಾಸಿವೆ ಕಾಳಿನಷ್ಟೂ ಎಡೆಯಿಲ್ಲದೇ ಪ್ರವಾಹದಂತೆ ತುಂಬಿ ಹರಿಯುತ್ತಿತ್ತು. ಕ್ಯೂ ನಿಲ್ಲವುದು ಇವತ್ತಿಗಂತೂ ಗ್ಯಾರಂಟಿ ಎಂದಂದುಕೊಳ್ಳುತ್ತಾ ಶೌಚಾಲಯದ ಕೆಲಸವೆಲ್ಲಾ ಮುಗಿಸಿ ದೇವಾಲಯದ ಮುಂಭಾಗಕ್ಕೆ ಬಂದೆ. ಎರಡು ರೂಪಾಯಿ ರಶೀದಿ ಪಡೆದು ಚಪ್ಪಲನ್ನು ಠೇವಣಿ ಇಟ್ಟದ್ದೂ ಆಯಿತು. ಅಮ್ಮನನ್ನು ಅಲ್ಲಿಯೇ ನಿಲ್ಲಿಸಿ ಹೊರಭಾಗದಲ್ಲಿರುವ ಸೇವಾಕೌಂಟರಿನತ್ತ ಸೇವೆಗಳ ರಶೀದಿಗಾಗಿ ನಡೆದೆ. ಹೆಚ್ಚೆಂದರೆ ನೂರು ಅಡಿ ವಿಸ್ತೀರ್ಣದ ಚೌಕಿಯಲ್ಲಿ ಮೂರು ಪ್ರತ್ಯೇಕ ಕೌಂಟರ್ಗಳು. ಜನರೋ ಕೆಲವು ಸಾವಿರದಷ್ಟು. ಒಂದೊಂದು ಕೌಂಟರಿನ ಮುಂದೆ, ಮೂರು-ನಾಲಕ್ಕು ಸಾಲು ಹೂಡಿ ಜನ ನಿಂತಿದ್ದರು. ಕೌಂಟರ್ ಇದ್ದದ್ದು ಮೂರಾದರೆ ಸಾಲುಗಳು ಎಂಟಿದ್ದವು. ಯಾವ ಸಾಲುಗಳು ಎಲ್ಲಿ ಸಾಗುತ್ತವೆಯೋ ಆ ಸುಬ್ರಹ್ಮಣ್ಯನೇ ಬಲ್ಲ. ಅಂತೂ ಧೈರ್ಯ ಮಾಡಿ ಒಂದರಲ್ಲಿ ನಿಂತೆ. ಪುಣ್ಯಕ್ಕೆ ಅದು ಚಲಿಸತೊಡಗಿದಾಗ ಚೂರು ಸಮಾಧಾನ ಆಗಿತ್ತು. ಒಂದೆರಡು ಸಿಬ್ಬಂದಿಗಳು ಅಲ್ಲಿ ನಿಂತು ಬೊಬ್ಬಿರಿಯುತ್ತಿದ್ದರಾದರೂ ಜನ ಅವರನ್ನು ಕೇಳುವಂತಿರಲಿಲ್ಲ. ಅವರ ಆರ್ಭಟ ಗಾಳಿಯಲ್ಲಿ ಗುಂಡಿನಂತೆ ಅವಿರತವಾಗಿ ಸಾಗಿತ್ತು. ಜನ ತಮ್ಮ ಪಾಡಿಗೆ ತಾವು ಮನ ಬಂದಂತೆ ಸಾಲಗಳನ್ನು ರಚಿಸಿಕೊಂಡು ಯಾರ್ಯಾರಿಗೋ ಹಿಡಿಶಾಪ ಹಾಕುತ್ತಾ, ಕೈಯಲ್ಲಿ ಹಿಡಿದ ನೋಟುಗಳನ್ನೇ ಬೀಸಣಿಕೆ ಮಾಡಿಕೊಂಡಿದ್ದರು.

 

      ಸಾಲಿನಲ್ಲಿ ನಿಲ್ಲಲು ಅಧೀರರಾದವರು, ಆಲಸಿಗರು, ತುರ್ತಿನವರು ಕೊಂಚ ಬುದ್ಧಿ ಪ್ರಯೋಗಿಸುತ್ತಿದ್ದುದು ಗಮನಕ್ಕೆ ಆಗಾಗ ಬರುತ್ತಿತ್ತು. ಸಿನೆಮಾ ಥೇಟರಿನಂತೆ, ಸಾಲಿನ ಮುಂದಿರುವವರಲ್ಲಿ ದುಡ್ಡು ಕೊಟ್ಟು ರಶೀದಿ ಪಡೆದುಕೊಳ್ಳುವಂತೆ ಹಲವರು ಪೀಡಿಸುತ್ತಿದ್ದರು. ಕೆಲವರು ಸಫಲರಾದರೆ, ಮಿಕ್ಕ ಕೆಲವರು ಸಾಲಿನಿಂದ ಸಾಲಿಗೆ ಹಾರಿ ಪ್ರಯತ್ನ ನಡೆಸುತ್ತಲೇ ಇದ್ದರು. ಇಂತಹುದೇ ಒಂದು ಪ್ರಯತ್ನ ಸಾಗುತ್ತಿರುವಾಗಲೇ ಸರತಿಯ ಹಿಂದಿರುವವರು ದೊಂಬಿ ಎಬ್ಬಿಸಿ, ಜಟಾಪಟಿಯೂ ನಡೆದು ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವೂ ಆಗಿತ್ತು. ದೇವಾಲಯದ ಶಾಂತಿಯನ್ನು ಕಾಪಾಡಿ ಅನ್ನುವ ಫಲಕ, ಜಟಾಪಟಿಗೆ ಕಿತ್ತು ನೆಲ ಸೇರಿತು. ಸಾಲಲ್ಲಿ ನಿಂತಿದ್ದ ನನಗೆ ಇವೆಲವೂ ಪುಕ್ಕಟೆ ಮನರಂಜನೆಯಾಗಿ, ಕಾಲಹರಣ ಮಾಡುತ್ತಿದ್ದೆ. ದೇವರ ದರ್ಶನಕ್ಕೆಂದು ಬಂದವರ ದಾಂಧಲೆಗಳು ಒಂಥರಾ ವಿಡಂಬನೆಯಾಗಿ ತೋರುತ್ತಿದ್ದರೂ ನಾನೂ ಸೇರಿದಂತೆ ಎಲ್ಲರೂ ರಸಾಸ್ವಾದನೆಯಲ್ಲೇ ನಿರತರಾಗಿದ್ದರು. ಇದರ ನಡುವೆ, ಯಾವನಿಗೋ, ತಾನು ನಿಂತ ಕ್ಯೂ ಮುಂದೆ ಚಲಿಸುತ್ತಿಲ್ಲ ಅನ್ನುವ ಆತಂಕವಾದರೆ, ಮತ್ತೊಬ್ಬನಿಗೆ ಪಕ್ಕದ ಕ್ಯೂ ಬೇಗ ಚಲಿಸುತ್ತಿದೆ ಅನ್ನುವ ಅನುಮಾನ; ತಾನೂ ಅಲ್ಲೇ ನಿಲ್ಲದ್ದಕ್ಕೆ ಪಶ್ಚಾತ್ತಾಪ, ಕೆಲವರಿಗೆ ತಾವು ಹರಕೆ ಹೊತ್ತಿರುವ ಸೇವೆಯು ಮೇಲೆ ನೇತು ಹಾಕಿದ ಸೇವಾ ಫಲಕದಲ್ಲಿಲ್ಲ ಅನ್ನುವ ಚಿಂತೆಯಾದರೆ, ಹಲವರು ನಿಂತು ನಿಂತು ಮಂಡಿ ನೋವು ಶುರುವಾಗಿ ಅಲ್ಲೇ ಅಂಡು ಊರುವ ಪ್ರಯತ್ನ ನಡೆಸಿದ್ದರು. ಒಟ್ಟಿನಲ್ಲಿ ಅವ್ಯವಸ್ಥೆ, ಅಸ್ಥಿರತೆಯ ಸಂತೆಯಲ್ಲಿ ಬೆಂದು ಬಾಡಿರುವ ಮುಖಗಳೇ ಕಾಣಿಸುತ್ತಿದ್ದವು.

 

      ಒಂದರ್ಧ ಗಂಟೆ ಕಳೆದಿರಬಹುದು ಅಥವಾ ಮುಕ್ಕಾಲು ಗಂಟೆ. ನನ್ನ ಮುಂದೆ ಇನ್ನೂ ಜನ ಸುಮಾರಿದ್ದರು. ಹಸಿರು ಸೀರೆ ಉಟ್ಟ ಮಧ್ಯ ವಯಸ್ಕ ಹೆಂಗಸೊಬ್ಬಳು ನಾನಿದ್ದ ಸರತಿಯ ಹೊರಗಿನಿಂದ ಬಂದು ಪಕ್ಕ ನಿಂತಳು ಎಡದಿಂದ. ನಾನು ಅಷ್ಟೇನು ಗಮನ ಕೊಡಲಿಲ್ಲ. ಆದರೆ, ಯಾವಾಗ ಭುಜಕ್ಕೆ ಭುಜ ತಾಗಿಸಿ ನನ್ನನ್ನು ಜರಗಿಸಿವ ಯತ್ನ ಆಕೆಯಿಂದ ಶುರುವಾಯಿತೋ ಕಸಿವಿಸಿಯಾಗತೊಡಗಿತು. ಆಕೆಯ ಹುನ್ನಾರ ಅರ್ಥವಾಗದೇನು ಇರಲಿಲ್ಲ. ಆದರೂ ಗಟ್ಟಿಯಾಗಿ ನಿಂತೆ. ಭುಜವನ್ನೊತ್ತುತ್ತಾ ಎದುರಿಗೆ ಎತ್ತರಿಸಿ ನೋಡುತ್ತಿದ್ದಳು. ಎರಡು ನಿಮಿಷ ಅವಳ ಒತ್ತಾಟ ಸಾಗಿತ್ತು. ಕೊನೆಗೂ ನಾನು ಕಿರಿಕಿರಿಯಾಗಿ ಕೊಂಚ ಬಲಕ್ಕೆ ವಾಲಿ ಹಿಂದೆ ಸರಿದೆ. ಥಟ್ಟನೇ ಸಿಕ್ಕಿದ ಎರಡಂಗುಲ ಜಾಗದಲ್ಲಿ ತನ್ನ ಅರೆ ಧಡೂತಿ ದೇಹವನ್ನು ಸೇರಿಸಿಯೇ ಬಿಟ್ಟಳು ಆ ಮಹಾನುಭಾವೆ. ಇದೊಳ್ಳೆ ಫಜೀತಿಯಾಯ್ತಲ್ಲ….! ಏನಾದ್ರೂ ಹೇಳೋಣ ಅಂದ್ರೆ ಹೆಂಗಸು, ಏನಂತ ಹೇಳೋದು? ಕೊಂಚವಾದರೂ ಬುದ್ಧಿ ಬೇಡವೇ? ಮಾಡಿದ ಪಾಪವೆಲ್ಲಾ ತೊಡೆದು ಹೋಗಲಿ ಅಂತ ಬರುವ ಕ್ಷೇತ್ರದಲ್ಲಿ ಹೀಗಾ ಮಾಡೋದು? ದೇವರನ್ನು ತಾವು ಮಾತ್ರ ನೋಡಿದರೆ ಸಾಕೇ? ಅಲ್ಲಿರುವವರೆಲ್ಲಾ ತಮ್ಮಂತೆಯೇ ಬಂದಿರುವವರು ಅನ್ನುವ ಕಿಂಚಿತ್ತು ಪ್ರಜ್ಞೆಯಾದರೂ ಈ ಹೆಂಗಸಿಗೆ ಬೇಡವೇ? ಅಂತೆಲ್ಲಾ ನನಗೆ ನಾನೇ ಹೇಳಿಕೊಂಡೆನಾದರೂ, ಆಕೆಗೆ ಹೇಳುವ ಮನಸ್ಸು ಧೈರ್ಯ ಎರಡೂ ಬರಲಿಲ್ಲ. ನನ್ನ ಹಿಂದಿದ್ದವನನ್ನು ನೋಡಿದೆ ಅವನಾದರೂ ಹೇಳಲಿ ಎಂಬಂತೆ. ಅವನೋ ಈ ಲೋಕದಲ್ಲೇ ಇದ್ದವನಂತೆ ಕಾಣಲಿಲ್ಲ. ಪಕ್ಕದ ಸರತಿಯಲ್ಲಿದ್ದವನೊಬ್ಬ ನನ್ನನ್ನು ನೋಡಿ ಹಲ್ಲುಕಿರಿದ ಸಹಾನುಭೂತಿ ತೋರಿದವನಂತೆ. ಹೋಗಲಿ ಅಂತ ನನ್ನ ಅಸಮಾಧಾನವನ್ನೆಲ್ಲಾ ತಣ್ಣಗಾಗಿಸಿದೆ. ಹೇಗೂ ಮುಂದೆ ಐವತ್ತು ಜನ ಇದಾರೆ, ಈಕೆ ಐವತ್ತೊಂದನೇಯವಳು, ದೊಡ್ಡ ವ್ಯತ್ಯಾಸ ಏನಾದೀತು? ಮತ್ತೆರಡು ನಿಮಿಷ ನನಗೆ ಹೆಚ್ಚಾದೀತೇ? ಅಂತ ನಾನೇ ಹೇಳಿಕೊಂಡೆ. ಬೇರೆ ದಾರಿಯೂ ತೋರಲಿಲ್ಲ ಅನ್ನಿ…!! ನನ್ನ ವಿಧಿಯನ್ನು ಹಳಿಯುತ್ತಾ ಮತ್ತೆ ಗೋಡೆಗಳಲ್ಲಿ ನೇತು ಹಾಕಿದ್ದ ಫಲಕಗಳನ್ನು ಓದುವತ್ತ ಗಮನ ಹರಿಸಿದೆ.

 

      ಒಂದು ಹತ್ತು ನಿಮಿಷ ಹಾಗೆಯೇ ಕಳೆಯಿತು. ಸಾಲಿನಲ್ಲಿ ಅಂತಾ ಮುಂದುವರೆಯಲಾಗಲಿಲ್ಲ. ಅಲ್ಲೇ ನಿಂತಿದ್ದೆ, ಕಣ್ಣುಗಳು ಏನೇನೋ ತಡಕಾಡುತ್ತಿದ್ದವು. ಮತ್ತೆರಡು ಹೆಂಗಸರು ಅದರಲ್ಲೊಬ್ಬಳು ಯುವತಿ ಅನ್ನಬಹುದು, ಮತ್ತೆ ನಾನಿದ್ದಲ್ಲಿಗೇ ಬಂದು ಸುಮ್ಮನೆ ಎತ್ತಲೋ ನೋಡುತಿರುವಂತೆ ಹುಸಿ ಗಂಭೀರತೆ ತೋರತೊಡಗಿದರು. ಆದರೆ, ಆ ನೋಟದ ಒಳಸಂಚನ್ನು ಅರಿಯಲು ನನಗೆ ಸಮಯವೇನೂ ಬೇಕಾಗಿರಲಿಲ್ಲ. ಸಾಲದ್ದಕ್ಕೆ ಈ ಬಾರಿ ನಾನು ಚೂರು ಹೆಚ್ಚು ಸಾವಧಾನವಾಗಿದ್ದೆ. ಪರಿಸ್ಥಿತಿ ಕೈಮೀರಲು ಬಿಡಬಾರದು ಅಂತ ನಿರ್ಧರಿಸಿಕೊಂಡು ಬಿಟ್ಟಿದ್ದೆ. ಸರತಿಯ ಸಾಲಿನಲ್ಲಿ ನಿಂತಿದ್ದಾಗ ಯಾರೋ ಅಡ್ಡದಾರಿ ಹಿಡಿದು ಒಳ ಸೇರಿದಾಗ ಬರುವ ಕೋಪವು, ಪ್ರಾಯಶಃ ಸ್ವಂತ ದುಡ್ಡು ಕಳವು ಹೋದಾಗಲೂ ಬರಲಾರದು. ಆ ಹೆಂಗಸರ ನಾಟಕ, ಸಾಲನ್ನು ಸೇರುವತ್ತ ಮುಂದುವರಿಯುತ್ತಲೇ ಇತ್ತು. ನನ್ನ ಕೋಪವೂ ನಖಶಿಖಾಂತ ನೆತ್ತಿ ಏರತೊಡಗಿತ್ತು. ನಾಲಗೆಗೆ ತುರಿಕೆ ಹೆಚ್ಚಾಗಿ ಹೊರಳಲು ಕಾಯುತ್ತಲಿತ್ತು. ಅಷ್ಟರಲ್ಲಿ ಆ ಹೆಂಗಸು ಅದೇ, ಭುಜ ಒರೆಸುವ ಯತ್ನ ಮಾಡಿಯೇ ಬಿಟ್ಟಳು. ಜೊತೆಯಲ್ಲಿದ್ದ ಆ ಸುಂದರ ಯುವತಿಯಿಂದ ಇದು ನಡೆದಿದ್ದರೆ ಬಹುಶಃ ನಾನು ಇನ್ನೂ ನಾಲಕ್ಕು ನಿಮಿಷ ಹೆಚ್ಚಿಗೆ ಕಾಯಲು ಸಂತುಷ್ಟನಾಗುತ್ತಿದ್ದೆನೋ ಏನೋ, ಯಾರಿಗೆ ಗೊತ್ತು? ಆದರೆ ಈ ಬಾರಿ ಹುಳಿವಾಸನೆ ಬೀರುತ್ತಿದ್ದ ಆ ಹೆಂಗಸು ಮೈಯುಜ್ಜಿದಾಗ ತಿಂದದ್ದೆಲ್ಲಾ ನೆತ್ತಿಗೇರಿ ಬಾಯಿ ತೆರೆದೇ ಬಿಟ್ಟೆ. ಸಾಮಾನ್ಯವಾಗಿ, ಕೋಪವೇರಿದಾಗ ಪ್ರಜ್ಞೆ ಕಳೆದುಕೊಳ್ಳುವ ನಾನು, ಬಹುಶಃ ದೇವಾಲಯವಾದ್ದರಿಂದಲೋ ಎನೋ, ಅಥವಾ ಅದಕ್ಕಿಂತ ಹೆಚ್ಚಾಗಿ ಹೆಂಗಸರಾದ್ದರಿಂದ ನನ್ನ ಕೋಪದಲ್ಲೂ ಸಂಯಮವಿತ್ತು. ಆಗ ತೋರಿದ ಸಂಯಮದಿಂದಾಗಿಯೇ ನಾನೀಗ ಇದನ್ನು ಬರೆಯಲು ಸಾಧ್ಯವಾಗಿದ್ದು. ನನ್ನ ವಾಕ್ಸಂಪತ್ತನ್ನೆಲ್ಲಾ ಚೆನ್ನಾಗಿ ಜರಡಿಯಲ್ಲಿ ಸೋಸಿ ವಾದಕ್ಕಿಳಿದೆ. ಮೊದಲಿಗೆ ಕೊಂಚ ಆವೇಶ ತುಂಬಿದ ಕಟು ಮಾತುಗಳಲ್ಲೇ ನಾಲಕ್ಕು ನಿಮಿಷದ ಅಪ್ರಸ್ತುತವಾದ ಪ್ರಸಕ್ತ ಭಾಷಣವನ್ನು ನೀಟಾಗಿ ಭಯಂಕರ ಆತ್ಮ ವಿಶ್ವಾಸದಿಂದಲೇ ಬಿಗಿದೆ. ಅದೇ ನಾಲಕ್ಕು ನಿಮಿಷವನ್ನು ಹೆಚ್ಚಿಗೆ ಕಾದಿದ್ದರೆ, ಈ ಆವಾಂತರದ ರಗಳೆಯನ್ನು ತಪ್ಪಿಸುವ ಅವಕಾಶವೂ ನನ್ನ ಮುಂದೆ ಇತ್ತು ಅನ್ನುವುದು ಅಲ್ಲಿ ಮರೆತೇ ಹೋಗಿತ್ತು. ಮಾನವನ ಗುಣವೇ ಇದು, ನಷ್ಟವೇನೂ ಇಲ್ಲದಿದ್ದರೂ ಸುಮ್ಮನೇ ಮೂಲೆಯಲ್ಲಿದ್ದದ್ದನ್ನೆಲ್ಲಾ ಎಳೆದು ತಲೆ ಮೇಲೆ ಹಾಕಿಕೊಳ್ಳುತ್ತಾನೆ. ನನ್ನ ಹಿಂದಿನವರಿಗೆ ಸಮಸ್ಯೆಯಾಗದ್ದು ನನಗೆ ಬಹುದೊಡ್ಡ ಗಂಡಾಂತರವಾಗಿ ತೋರಿತ್ತು. ನನ್ನ ಭಾಷಣ ನಿರರ್ಗಳವಾಗಿ ಸಾಗಿತ್ತು. ಆ ಹೆಂಗಸಿಗೆ ಮಾತಿನ ಅವಕಾಶವನ್ನೇ ನಾನು ಕೊಟ್ಟಿರಲಿಲ್ಲ. ಆದರೆ ಯಾವಾಗ ನನ್ನ ಮಾತುಗಳಲ್ಲಿ ಅದಾಗಲೇ ಸಾಲಿಗೆ ಸೇರಿದ್ದ ಹಸಿರು ಸೀರೆಯ ಹೆಂಗಸಿನ ಪ್ರಸ್ತಾಪ ಬಂತೋ, ನನ್ನ ಭಾಷಣದ ನಡುವೆ ಕೊಮಾಗಳು ಬರಬೇಕಾಯಿತು. ಧುತ್ತನೆ ಆ ಹೆಂಗಸು ನನ್ನತ್ತ ತಿರುಗಿ, ನನ್ನ ಭಾಷಣವನ್ನು ವಾದವನ್ನಾಗಿಸಿದಳು. ಆಕೆಯ ಪ್ರಹಾರ ಹೆಚ್ಚಾಗುತ್ತಿದ್ದಂತೆ ನನ್ನ ಕೊಮಾಗಳು ಫುಲ್ ಸ್ಟಾಪ್ ಆದುವು. ಪುಂಖಾನುಪುಂಖವಾಗಿ ಅತ್ತಕಡೆಯಿಂದ ವಾದದ ಸರಣಿ ಬೆಳೆಯತೊಡಗಿತು. ಹೆಣ್ಣಿನೊಂದಿಗಿನ ವಾದಗಳ ಕುರಿತಾಗಿ ಕೇವಲ ಬೀಚಿಯ ಪುಸ್ತಕಗಳಲ್ಲಿ ಮಾತ್ರ ಓದಿದ್ದೆನೇ ಹೊರತು ಸ್ವಾನುಭವ ಇರಲಿಲ್ಲ. ಮದುವೆಯಾಗದ ಸುಬ್ರಹ್ಮಣ್ಯನ ಬಗ್ಗೆ ಗೌರವಾದರಗಳು ಮತ್ತಷ್ಟು ಹೆಚ್ಚಿಗೆ ಆದವು ಆ ಕೆಲವು ಕ್ಷಣಗಳಲ್ಲಿ.

 

      ನನ್ನ ಕಣ್ಣೆದುರೇ ನನ್ನನ್ನು ಒರಗಿಸಿ, ಜರಗಿಸಿ ಸರತಿಯನ್ನು ತನ್ನಪ್ಪನ ಆಸ್ತಿ ಎಂಬಂತೆ ಸೇರಿಕೊಂಡಿದ್ದ ಆ ಭೂಪ ಹೆಂಗಸು, ತಾನು ಮೊದಲಿನಿಂದಲೂ ಅಲ್ಲೇ ಇದ್ದವಳು, ತಾನು ನಿಂತು ಗಂಟೆ ಎರಡಾಯಿತು ಅಂತೆಲ್ಲಾ ಸುರುಳಿ ಸುತ್ತುತ್ತಿದ್ದಳು. ಸುಳ್ಳನ್ನು ಮುಖಕ್ಕೆ ಹೊಡದಂತೆ ಹೇಳಿದಾಗ ದಿಕ್ಕೇ ತೋಚದಂತಾಗಿ ಬೆಪ್ಪನಂತೆ ಆಕೆಯ ಮುಖ ನೋಡುವುದು ಬಿಟ್ಟು ನನಗೇನೂ ಉಳಿದಿರಲಿಲ್ಲ. ನನ್ನ ಫಜೀತಿಯನ್ನು ಕಣ್ಮನ ತುಂಬಿಕೊಳ್ಳಲು ಅಲ್ಲಿದ್ದವರೆಲ್ಲಾ ಇಣುಕತೊಡಗಿದರು. ಇತ್ತಕಡೆಯ ಸಾಲಿನವರು ತಮ್ಮ ಎಡಗಾಲನ್ನೂ, ಅತ್ತಕಡೆಯ ಸಾಲಿನವರು ತಮ್ಮ ಬಲಗಾಲನ್ನೂ ಸರತಿಯಲ್ಲಿಟ್ಟು ಮಿಕ್ಕ ತಲೆಯನ್ನೂ ಸೇರಿದ ಪೂರ್ತಿ ದೇಹವನ್ನು ನಮ್ಮತ್ತ ಬಾಗಿಸಿ ಏನೋ ಭಾರತ-ಪಾಕಿಸ್ತಾನ ನಡುವಣ ಐತಿಹಾಸಿಕ ಒಪ್ಪಂದ ನಡೆಯುತ್ತಿದೆ ಎಂಬಂತೆ ಆಲಿಸುತ್ತಿದ್ದರು. ಕೆಲವರು, ಅವರವರ ಅಭಿಪ್ರಾಯವನ್ನು ಮಿಕ್ಕವರೊಂದಿಗೆ ಹಂಚಿಕೊಳ್ಳುತ್ತಾ ಘಟನೆಯನ್ನು ಉಳಿದವರು ಕಂಡಂತೆ ಎಂಬ ರೀತಿಯಲ್ಲಿ ವಿಮರ್ಶಿಸುತ್ತಿದ್ದರು. ಸುತ್ತ ತಿರುಗಿದರೂ ಯಾವೊಬ್ಬ ಪುಣ್ಯಾತ್ಮನೂ ಈ ಪಾಪಾತ್ಮನಾದ ನನ್ನ ಸಹಾಯಕ್ಕೆ ಬರುವಂತೆ ಕಾಣಲಿಲ್ಲ. ನನ್ನ ಮೂರ್ಖತನವನ್ನು ನಾನೇ ಹಳಿದುಕೊಂಡೆ. ಎಂತೆಂಥಾ ದಾರ್ಶನಿಕರು, ತತ್ವ ಮೀಮಾಂಸ ವಿದ್ವಾನರು ಹೇಳಿಲ್ಲಾ, ಹೆಣ್ಣಿನೊಂದಿಗೆ ವಾದ ಬೆಳೆಸುವುದು ಮೌಢ್ಯದ ಪರಮಾವಧಿ ಎಂದು.  ಗಾಳಿಯೊಂದಿಗೆ ಗುದ್ದಿಯಾದರೂ ಗೆಲ್ಲಬಹುದು, ಹೆಣ್ಣಿನೊಂದಿಗೆ ವಾದಿಸಿ ಗೆಲ್ಲುವುದು ಮುಷ್ಕಿಲ್ ಅಲ್ಲಾ ನಾಮುಮ್ಕಿನ್…!! ಎಲ್ಲಾ ಗೊತ್ತಿದ್ದೂ ಈ ಬಾವಿಗೆ ಧುಮುಕಿದೆನಲ್ಲಾ..! ಹೇಗೆ ಮೇಲೆ ಬರಲಿ..?

 

      ನನಗೋ ಶುರು ಮಾಡಿಯಾಗಿದೆ. ಆಕೆ ನಿಲ್ಲಿಸುವಂತೆಯೂ ಕಾಣುತ್ತಿಲ್ಲ, ಹೀಗೆಯೇ ಮುಂದುವರೆದರೆ ನನಗೆ ಅಧೋಗತಿ. ಸಾಲದ್ದಕ್ಕೆ ನಾನು ಹಿಂದೆ ಎರಡು ವರ್ಷ ಇದ್ದ ಊರು ಬೇರೆ. ಯಾರೋ ಪರಿಚಯದವರು ಈ ಗುದ್ದಾಟವನ್ನು ಕಂಡರೆ ನನ್ನ ಮರ್ಯಾದೆಗೇನಾಗಬೇಡ. ಸುಬ್ರಹ್ಮಣ್ಯಾ ಏನು ಮಾಡಲಿ.? ನನ್ನ ಬಾಣದ ಬತ್ತಳಿಕೆಯನ್ನು ತಡಕಾಡಿದೆ. ಕೊನೆಗೊಂದು ಹೊರತೆಗೆದೆ. ಮುಖದಲ್ಲಿ ಸಣ್ಣ ನಗೆಯೊಂದನ್ನು ತಂದುಕೊಂಡೆ. ಪ್ರೀತಿಯಿಂದ ಕರೆದೆ “ಅಮ್ಮಾ… ಅಮ್ಮಾ’” ಅವಳು ಮಾತು ನಿಲ್ಲಿಸಿದಳು. ವರಸೆ ಕೊಂಚ ಬದಲಿಸಿದೆ. “ಅಮ್ಮಾ….ಎಷ್ಟೊಂದು ಒಳ್ಳೆಯವರಂತೆ ಕಾಣ್ತಾ ಇದೀರಾ. ನೀವೂ ಹೀಗಾ ಮಾಡೋದು? ನಿಮ್ಮ ಮಗನಿಗೂ ಈ ತರಾ ಬೈತೀರೇನು? ಎಲ್ಲಾ ಒಳ್ಳೆಯವರೂ ಕೆಟ್ಟತನವನ್ನು ತೋರ್ಸಿದ್ರೆ ಆ ದೇವ್ರಿಗೂ ಏನೂ ಮಾಡೋಕಾಗಲ್ಲಮ್ಮಾ” ನನ್ನ ಬಾಣ ಪುಣ್ಯಕ್ಕೆ ತಾಗಿತ್ತು. ವಾದಕ್ಕೆ ಬ್ರೇಕ್ ಬಿತ್ತು. ಬದುಕಿದೆಯಾ ಬಡಜೀವವೇ ಅಂದುಕೊಂಡೆ. ಅವಳ ಮುಖದಲ್ಲಿ ಕಿರುನಗೆಯೊಂದು ಮೂಡಿತ್ತು. ಅಷ್ಟೊಂದು ಕೆಟ್ಟವಳಲ್ಲ ಆಕೆ ಅನಿಸಿತು.

 

ಚಿತ್ರಕೃಪೆ: ಇಂಟರ್’ನೆಟ್

 

-ವಿಘ್ನೇಶ್ ಹೆಚ್

vigneshbht@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post