ಜೀವನದಲ್ಲಿ ಸಾಯುವುದರೊಳಗೆ ಒಮ್ಮೆಯಾದರೂ ಶ್ರೀ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬುದು ಹಿಂದೂಗಳ ಬಯಕೆ, ಇಂತಹ ಬಯಕೆ ನನ್ನಲ್ಲಿಯೂ ಇತ್ತು. ಆದರೇ ಇಷ್ಟು ಸಣ್ಣ ವಯಸ್ಸಿಗೇ ಆ ಭಾಗ್ಯ ದೊರಕುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಾವನ ಮಗ ಉತ್ತರಖಾಂಡದಲ್ಲಿಯೇ ವ್ಯಾಸಾಂಗ ಮಾಡುತ್ತಿರುವುದರಿಂದ ಅವನ ಸಹಾಯದಿಂದ ಕಾಶೀ, ಹರಿದ್ವಾರ, ಋಷಿಕೇಷ, ಡೆಹ್ರಾಡೂನ್, ಮಥುರಾ, ಆಗ್ರಾ, ಡೆಲ್ಲಿಯವರೆಗೂ ನೋಡಲು ಸರಿಯಾಗಿ ಯೋಜನೆ ಸಿದ್ಧವಾಗಿತ್ತು. ಕಾಶಿಗೆ ರೈಲಿನಲ್ಲಿ ಸೀಟು ಕಾಯ್ದಿರಿಸುವುದೇ ಮೊದಲ ಸವಾಲಾಗಿತ್ತು ಏಕೆಂದರೇ ಕರ್ನಾಟಕದಿಂದ ಅಲ್ಲಿಗೆ ವಾರಕ್ಕೆರೆಡು ಬಾರಿ ಮಾತ್ರ ರೈಲುಂಟು. ಅದೂ ಇತ್ತೀಚಿಗೆ ಸದಾನಂದ ಗೌಡರು ರೈಲ್ವೇ ಮಂತ್ರಿಯಾದಾಗ ಪರಿಚಯಿಸಿದ್ದು. ಎರಡು ತಿಂಗಳ ಮುಂಚೆಯೇ ಚಿತ್ರದುರ್ಗದಿಂದ ಟಿಕೆಟ್‍ಗಳು ಖಾಲಿಯಾಗಿದ್ದವು, ಆದ್ದರಿಂದ ಬೆಂಗಳೂರಿನ ಕೆಂಗೇರಿಯಿಂದ ಬುಕ್ ಮಾಡಿದೆವು !
ಈ ಮೇಲಿನ ಸ್ಥಳಗಳಿಗೆ ಯಾರಾದರೂ ಪ್ರವಾಸ ತೆರಳಬೇಕಾದರೆ ಅಕ್ಟೋಬರ್ ತಿಂಗಳಲ್ಲಿ ತೆರಳಬಹುದು, ಅಷ್ಟೇನೂ ಚಳಿಯೂ ಇಲ್ಲದ, ಬಿಸಿಲೂ ಇಲ್ಲದ ವಾತವರಣ ಅಕ್ಟೋಬರ್‍ನಲ್ಲಿ ಕಂಡು ಬರುತ್ತದೆ. ಅಕ್ಟೋಬರ್ ಬಿಟ್ಟರೆ ಮಾರ್ಚ್’ನಿಂದ ಮೇವರೆಗು ಹೋಗಬಹುದು ಆದರೇ ಹೆಚ್ಚು ಬಿಸಿಲಿರುತ್ತದೆ. ದಸರಾ ಹಬ್ಬ ಮುಗಿಸಿಕೊಂಡು ಅದೇ ದಿನ ಸಂಜೆ 4 ಘಂಟೆಗೆ ಚಿತ್ರದುರ್ಗದಿಂದ ರೈಲಿನಲ್ಲಿ ನಮ್ಮ ಒಂದೇ ಕುಟುಂಬದ ಸುಮಾರು 12 ಜನರ ತಂಡ ಹೊರಟೆವು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಎಂಬ ಮಾತಿಗೆ ಉದಾಹರಣೆ ಈ ರೈಲು ಕರ್ನಾಟಕದಲ್ಲೇ ಮೈಸೂರಿನಿಂದ ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ ಸುತ್ತಾಡಿ ನಂತರ ಆಂಧ್ರದ ಗುಂತಕಲ್‍ಗೆ ಹೋಗಿ ಮತ್ತೆ ಕರ್ನಾಟಕದ ರಾಯಚೂರು, ಕಲಬುರಗಿಗೆ ಬರುತ್ತದೆ ! ಅಲ್ಲಿಂದ ಮಹಾರಾಷ್ಟ್ರದಲ್ಲಿ ಹೀಗೇ ಸುತ್ತೀ ಸುತ್ತೀ ಎರಡು ದಿನಗಳ(ಮೈಸೂರಿನಿಂದ 52 ಗಂಟೆ, ಚಿತ್ರದುರ್ಗದಿಂದ 44 ಗಂಟೆ) ಸುಧೀರ್ಘ ಪ್ರಯಾಣದ ನಂತರ ವಾರಣಾಸಿ ತಲುಪುತ್ತದೆ. ಬೆಂಗಳೂರಿನಿಂದ ಸುಮಾರು 1900 ಕಿಮೀ ದೂರದಲ್ಲಿದೆ. ಕಾಶೀ ಆದರೇ ಈ ರೈಲಿನಲ್ಲಿ ಅದು 2800 ಕಿಮೀ ಆಗುತ್ತದೆ. ದೂರದ ಪ್ರಯಾಣದ ಈ ರೈಲಿನಲ್ಲಿ “ಪ್ಯಾಂಟ್ರೀ ಕಾರ್” ಇಲ್ಲದಿರುವುದು ಕೊಂಚ ಬೇಸರದ ಸಂಗತಿ. ಮನೆಯಿಂದಲೇ ಎರಡು ದಿನಕ್ಕಾಗುವಷ್ಟು ಊಟ ತಂದಿದ್ದರಿಂದ ನಮಗೆ ಏನೂ ತೊಂದರೆಯಗಲಿಲ್ಲ. ಮೊಸರನ್ನವನ್ನು ಅಡಕೆ ಪಟ್ಟೆಗಳಲ್ಲಿ ಕಟ್ಟಿದ್ದರಿಂದ ಒಂಚೂರು ಹುಳಿ ಬಂದಿರಲಿಲ್ಲ. ಅಂತೂ ಇಂತೂ ವಾರಣಾಸಿ ತಲುಪಿದಾಗ ಮಧ್ಯಾಹ್ನ 3 ಘಂಟೆ.
ವಾರಣಾಸಿಯಲ್ಲಿ ತಂಗಲು ‘ಶ್ರೀ ಜಂಗಮವಾಡಿ ಮಠ’ದಲ್ಲಿ ಮೊದಲೇ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಒಳಗೆ ಕಾಲಿಟ್ಟಾಗ ಕರ್ನಾಟಕಕ್ಕೆ ಬಂದ ಅನುಭವ. ಇಲ್ಲಿಂದ ಹೋದವರೆಲ್ಲರೂ ಉಳಿಯಲು ಆರಿಸುವುದು ಇದೇ ಮಠವನ್ನು ಏಕೆಂದರೆ ಸ್ವಾಮೀಜಿಯಿಂದ ಹಿಡಿದು ಅಲ್ಲಿರುವ ಎಲ್ಲರೂ ಕನ್ನಡಿಗರೇ ! ವಿಶ್ವವಿಖ್ಯಾತಿಯ ಗಂಗಾ ಆರತಿ ನೋಡಲು ನಾವೆಲ್ಲ ಉತ್ಸುಕರಾಗಿ ನದಿಯೆಡೆಗೆ ಹೆಜ್ಜೆ ಹಾಕಿದೆವು. ಕಣ್ಣು ಆಯಿಸಿದಷ್ಟೂ ದೂರಕ್ಕೂ ಮಾತೆ ಗಂಗೆ ಹರಿಯುತ್ತಿದ್ದಾಳೆ, ನದಿ ತಟದ ತುಂಬಾ ಮಂದಿರಗಳು, ಎಲ್ಲಿ ನೋಡಿದರು ಕೇಸರಿ ಧರಿಸಿರುವ ಸನ್ಯಾಸಿಗಳು, ಅಲ್ಲಲ್ಲಿ ಭಂಗಿ ಎಳೆಯುತ್ತಿರುವ ವಿದೇಶಿಗರು, ದಡದಲ್ಲಿ ಪೂಜೆ ಮಾಡುತ್ತಿರುವ ಪೂಜಾರಿಗಳು, ಅಲ್ಲೆಲ್ಲೋ ಹೆಣಗಳನ್ನು ಸುಡುತ್ತಿರುವ ಹರಿಶ್ಚಂದ್ರ ಘಾಟ್, ಹೀಗೆ ಒಂದು ಹೊಸ ಅಧ್ಬುತ ಲೋಕವೇ ತೆರೆದುಕೊಳ್ಳುತ್ತದೆ. ಗಂಗಾ ಆರತಿಯ ಜೊತೆ ಅಲ್ಲಿನ ಘಾಟ್‍ಗಳನ್ನು ತೋರಿಸಲು ಸಾವಿರಾರು ಬೋಟ್‍ಗಳ ವ್ಯವಸ್ಥೆಯಿದೆ. ಸೂರ್ಯಾಸ್ತದ ವೇಳೆ ದೋಣಿಯಲ್ಲಿ ಗಂಗಾ ನದಿ ದಡದ ಘಾಟ್‍ಗಳನ್ನು ನೋಡುತ್ತಿದ್ದರೆ ಆಗುವ ಪರಮಾನಂದವನ್ನು ಬಣ್ಣಿಸಲು ಅಸಾಧ್ಯ. ಏನೋ ಒಂದು ಪ್ರಶಾಂತತೆ, ಗಂಗಾ ನದಿಯ ಶಕ್ತಿ ಪ್ರತಿಯೊಬ್ಬರನ್ನು ಆವರಿಸಿಕೊಳ್ಳುತ್ತದೆ. ಸಂಜೆ ಸರಿಯಾಗಿ 7 ಗಂಟೆಗೆ ದಶಾಶ್ವಮೇಧ ಘಾಟ್‍ನಲ್ಲಿ ಮಂತ್ರ ಘೋಷದ ಜೊತೆಗೆ ಗಂಗಾ ಆರತಿಯನ್ನು ಏಳು ಜನ ಪುರೋಹಿತರು ಒಟ್ಟಿಗೆ ಮಾಡುವಾಗ ಪುಣ್ಯದಲ್ಲಿ ಮಿಂದೆದ್ದ ಅನುಭವ.
ಮರುದಿನ ಬೆಳಿಗ್ಗೆ 5 ಗಂಟೆಗೆ ಪವಿತ್ರ ಗಂಗಾ ಸ್ನಾನ ಮಾಡಿ ಶ್ರೀ ವಿಶ್ವನಾಥ, ಶ್ರೀ ವಿಶಾಲಾಕ್ಷಿ, ಶ್ರೀ ಕಾಲಭೈರವನ ದರ್ಶನ ಮಾಡಿ ಮುಗಿಸಿದಾಗ ಸಮಯ 8 ಗಂಟೆ. ನಂತರ ಕಾಶಿಯ ಪ್ರಸಿದ್ದ ಮಣ್ಣಿನ ಲೋಟದ ಖಟ್ಟಂ ಚಾಯ್, ಜಿಲೇಬಿ, ಸಮೋಸ ಸವಿದೆವು. ಕೇವಲ ನೂರು ರೂಪಾಯಿದ್ದರೂ ಒಂದು ದಿನ ಆರಾಮಾಗಿ ಕಾಶಿ ಸುತ್ತಾಡಬಹುದು, ಅಲ್ಲಿ ಎಲ್ಲವೂ ಕಡಿಮೆ ಬೆಲೆಗೆ ದೊರಕುತ್ತದೆ. ನಂತರದಲ್ಲಿ ಪ್ರಸಿದ್ಧ “ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿ.ಎಚ್.ಯು)”, ಬಿರ್ಲಾ ಮಂದಿರ, ದುರ್ಗಾ ಮಂದಿರಗಳ ದರ್ಶನ ಮುಗಿಸಿ ಮಂದಿನ ಪಯಣಕ್ಕೆ ಅಣಿಯಾದೆವು. ಸಂಜೆ 7 ಕ್ಕೆ ರೈಲಿನಲ್ಲಿ ಹೊರಟು ಬೆಳಿಗ್ಗೆ ದೇವ ಭೂಮಿ ಉತ್ತರಖಾಂಡ ತಲುಪಿದೆವು. ಮಾವನ ಮಗನಿದ್ದ ಪಂತ್‍ನಗರದಲ್ಲಿ ಸ್ವಲ್ಪ ವಿಶ್ರಮಿಸಿ ಅಲ್ಲಿಂದ ಒಂದು ಟೆಂಪೋ ಟ್ರಾವಲರ್ ಬಾಡಿಗೆ ತೆಗೆದುಕೊಂಡು “ಹರಿದ್ವಾರ”ಕ್ಕೆ ಹೊರಟೆವು. ಕಾಶಿಯಿಂದ ಹರಿದ್ವಾರಕ್ಕೆ ಹಲವು ನೇರ ಟ್ರೈನ್‍ಗಳ ಸೌಲಭ್ಯವಿದೆ ಆದರೇ ಹೆಚ್ಚು ಸಮಯ ಬೇಕಾಗುತ್ತದೆ. ಉತ್ತರಖಾಂಡದ ಉದ್ದಗಲಕ್ಕೂ ಪ್ರಸಿದ್ಧ ದೇವಾಲಯಗಳಿವೆ ಅದಕ್ಕೆ ಅದನ್ನು ದೇವಭೂಮಿ ಎನ್ನುವುದು. ಇತ್ತೀಚೀನ ದಿನಗಳಲ್ಲಿ ಕಾರ್ಖಾನೆಗಳ ರಾಜಧಾನಿಯಾಗಿ ಹೆಸುರುವಾಸಿಯಾಗಿದೆ.
ಹರಿದ್ವಾರ
ಸಂಜೆ 6 ಕ್ಕೆ ಹರಿದ್ವಾರ ತಲುಪಿ ಅಲ್ಲಿನ ಗಂಗಾ ಆರತಿ ನೋಡುವುದು ನಮ್ಮ ಯೋಜನೆಯಾಗಿತ್ತು. ಆದರೇ ಅಲ್ಲಿನ ಜನಸಂದಣಿಯಿಂದ ಕೂಡಿರುವ ರಸ್ತೆಗಳು, ಇನ್ನೂ ಹೆದ್ದಾರಿಯಾಗಿ ಮಾರ್ಪಾಡಾಗದ ರಸ್ತೆಗಳಿಂದ ತಡವಾಗಿ ಹರಿದ್ವಾರ ತಲುಪಿದೆವು. ಪ್ರಸಿದ್ಧ ಯಾತ್ರಾ ಸ್ಥಳ ಬದ್ರೀನಾಥಕ್ಕೆ ಇಲ್ಲಿಂದಲೇ ಹೊರಡಬೇಕಾಗಿರುವುದರಿಂದ ಇದಕ್ಕೆ ಹರಿದ್ವಾರವೆಂದು ಹೆಸರು ಬಂದಿದೆ. ಹರಿದ್ವಾರದಲ್ಲಿ ಮುಖ್ಯವಾಗಿ ನೋಡುವುದಕ್ಕೆ ಯಾವುದೇ ಮಂದಿರ ಇಲ್ಲವಾದರೂ, ಅಲ್ಲಿ “ಗಂಗಾ ಸ್ನಾನ ಮತ್ತು ದಾನ” ಪ್ರಾಮುಖ್ಯತೆ ಪಡೆದುಕೊಂಡಿದೆ. ಅಲ್ಲಿಗೆ ಬರುವ ಪ್ರತಿಯೊಬ್ಬರೂ ಏನಾದರೂ ದಾನ ಮಾಡುವುದು ಅಲ್ಲಿನ ವಾಡಿಕೆ. ಕೆಲವರು ಬಟ್ಟೆ ದಾನ ಮಾಡಿದರೇ, ಕೆಲವರು ಹಣ ನೀಡುತ್ತಾರೆ, ಇನ್ನೂ ಕೆಲವರು ಭಿಕ್ಷುಕರಿಗೆ ತಿಂಡಿ ಮತ್ತು ಊಟ ಕೊಡಿಸುತ್ತಾರೆ. ಆದ್ದರಿಂದ ಅತೀ ಹೆಚ್ಚಿನ ಭಿಕ್ಷಕರು ಹರಿದ್ವಾರದಲ್ಲಿ ಕಂಡು ಬರುತ್ತಾರೆ. ಗಂಗಾ ನದಿಯ ಸೆಳೆತ ಹೆಚ್ಚು ಮತ್ತು ಅತಿ ವಿಸ್ತಾರವಾದ ನದಿ ಆದ್ದರಿಂದ ಭಕ್ತರಿಗೆ ಸ್ನಾನ ಮಾಡಲು ಅನುಕೂಲವಾಗುವಂತೆ ಸಣ್ಣ ನಾಲೆಯ ಮೂಲಕ ನೀರು ಹರಿಯುವಂತೆ ಮಾಡಿದ್ದಾರೆ. ನದಿ ತೀರದಲ್ಲಿ ಚೈನ್‍ಗಳಿವೆ, ಅವುಗಳ ಸಹಾಯದ ಮೂಲಕ ಭಯ ಬಿಟ್ಟು ನದಿಗೆ ಇಳಿಯಬಹುದು. ಅಂದು ರಾತ್ರಿ ಅಲ್ಲೇ ತಂಗಿ ಮರುದಿನ ಮುಂಜಾನೆ ಗಂಗಾ ಆರತಿ ಕಣ್ತುಂಬಿಕೊಂಡೆವು.
ಋಷಿಕೇಶ
ಆಮೇಲೆ ನಾವು ಹೊರಟಿದ್ದು ಸಮುದ್ರ ಮಟ್ಟದಿಂದ 1220 ಅಡಿ ಎತ್ತರದಲ್ಲಿರುವ ಪ್ರಪಂಚದ ಯೋಗದ ರಾಜಧಾನಿ, ಹಿಮಾಲಯದ ತಪ್ಪಲು “ಋಷಿಕೇಶ”ಕ್ಕೆ. ಹರಿದ್ವಾರದಿಂದ ಕೇವಲ 20 ಕಿಮೀ ದೂರದಲ್ಲಿದೆ ಈ ಋಷಿಕೇಶ. ಗಂಗೆ ಮಲಿನವಾಗಿದ್ದರೂ ಋಷಿಕೇಶದಲ್ಲಿ ಪರಿಶುದ್ಧವಾಗಿದ್ದಾಳೆ. ಋಷಿಕೇಶದಲ್ಲಿ ಗಂಗೆಯ ರುಚಿ ಮತ್ತು ಶುದ್ಧತೆ ಯಾವ ಬಾಟಲ್ ನೀರಿಗಿಂತಲೂ ಕಮ್ಮಿಯಿಲ್ಲ. ಮನೆಗಳಿಗೆ ತರಬೇಕಾದರೇ ಪ್ರತಿಯೊಬ್ಬರು ಕ್ಯಾನ್‍ಗಳಲ್ಲಿ ತುಂಬಿಕೊಳ್ಳಬಹುದು. ನಾವೆಲ್ಲರೂ ಸೇರಿ 50 ಕ್ಕೂ ಹೆಚ್ಚು ಲೀಟರ್ ನೀರನ್ನು ತುಂಬಿಕೊಂಡೆವು! ಅಲ್ಲಿ ರಾಮ ಝೂಲ ಮತ್ತು ಲಕ್ಷ್ಮಣ ಝೂಲ ಎಂದು ಎರಡು ಸ್ಥಳಗಳಿವೆ. ರಾಮ ಮತ್ತು ಲಕ್ಷ್ಮಣರು ಲಂಕಾಧಿಪತಿ ರಾವಣನನ್ನು ಸಂಹರಿಸಿದ ಮೇಲೆ ಪಾಪ ಪರಿಹಾರಕ್ಕಾಗಿ ಗಂಗೆಯ ತಟದಲ್ಲಿ ಸ್ನಾನ ಮಾಡಿದ ಸ್ಥಳಗಳೇ ಈ ಝೂಲ. ಇಲ್ಲಿ ಹತ್ತಾರು ಯೋಗ ಕೇಂದ್ರಗಳಿವೆ, ಅಲ್ಲಿ ಸಾವಿರಾರು ವಿದೇಶಿಗರು ಯೋಗ, ಧ್ಯಾನ, ಆರ್ಯುವೇದ ಕಲಿಯಲು ಆಗಮಿಸುತ್ತಾರೆ. ಹೀಗೆ ಅಲ್ಲಿಗೆ ಬಂದಿದ್ದ ವಿದೇಶಿ ಮಹಿಳೆಯ ಜೊತೆ ಮಾತನಾಡಿದಾಗ ಭಾರತೀಯ ಸಂಸ್ಕೃತಿ, ಭಾರತೀಯ ಆರ್ಯುವೇದ ಪದ್ದತಿ, ಯೋಗಾಭ್ಯಾಸವನ್ನು ನಮಗಿಂತ ಹೆಚ್ಚು ತಿಳಿದುಕೊಂಡಿದ್ದಾರೆ ಅನಿಸಿತು. ಆಕೆ ಸುಮಾರು 6 ತಿಂಗಳು ಯೋಗ ಕಲಿತ ಬಳಿಕ ತನ್ನ ತಾಯ್ನಾಡಾದ ಆಸ್ಟ್ರೇಲಿಯಾಕ್ಕೆ ಮರಳಿ ಅಲ್ಲಿ ಯೋಗ ಕೇಂದ್ರ ತೆರೆಯುವ ಬಗ್ಗೆ ತಿಳಿಸಿದಳು. ಇವುಗಳ ಜೊತೆಗೆ ಮೈ ಜುಮ್ಮೆನಿಸುವ ರಿವರ್ ರ್ಯಾಫ್ಟಿಂಗ್, ಟ್ರೆಕ್ಕಿಂಗ್‍ಗಳಿಗೆ ಹೇಳಿ ಮಾಡಿಸಿದ ಜಾಗ ಈ ಋಷಿಕೇಶ. ಪವಿತ್ರ ಸ್ನಾನ ಮಾಡಿದ ನಂತರ “ಡೆಹ್ರಾಡೂನ್”ಗೆ ಹೊರಟಾಗ ಮಧ್ಯಾಹ್ನ 12 ರ ಹೊತ್ತು.
ಸುತ್ತಲೂ ಬೆಟ್ಟ ಗುಡ್ಡ, ತಣ್ಣನೆಯ ವಾತಾವರಣದಿಂದ ಕೂಡಿರುವ ಉತ್ತರಖಾಂಡದ ರಾಜಧಾನಿ ಡೆಹ್ರಾಡೂನ್ ನಮ್ಮ ಮಡಿಕೇರಿಯನ್ನು ನೆನಪಿಸುತ್ತದೆ. ಋಷಿಕೇಶದಿಂದ ಕೇವಲ 50 ಕಿಮೀ ದೂರದಲ್ಲಿದೆ ಈ ರಾಜಧಾನಿ. ಅಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳೆಂದರೆ ಶ್ರೀ ತಪಕೇಶ್ವರ ಮಂದಿರ, ಫಾರೆಸ್ಟ್ ರಿರ್ಸಚ್ ಇನ್ಸ್ಟಿಟ್ಯೂಟ್(ಎಫ್.ಆರ್.ಐ), ಬುದ್ದ ಮಂದಿರ, ಡೆಹ್ರಾಡೂನ್ ಝೂ. ಮೊದಲು ನಾವು ಭೇಟಿ ಕೊಟ್ಟಿದ್ದು 1906 ರಲ್ಲಿ ಬ್ರಿಟೀಷರು ಕಟ್ಟಿದ ಎಫ್.ಆರ್.ಐ. ಈ ಸಂಸ್ಥೆ ತನ್ನ ಅದ್ಭುತ ಶಿಲ್ಪಕಲೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತದ ಕಾಡಿನ ಬಗ್ಗೆ, ಕಾಡಿನ ಸರ್ವ ಮರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಒಟ್ಟು 6 ಮ್ಯೂಸಿಯಂಗಳಲ್ಲಿ ಸಿಗುತ್ತದೆ. ಭೂಮಿ ಮೇಲೆ ಸ್ವರ್ಗದ ಅನುಭವವಾಗಬೇಕಾದರೆ ನೀವು ನೋಡಬೇಕಾದ ಸ್ಥಳ ತಪಕೇಶ್ವರ ಮಂದಿರ. ಈಶ್ವರನು ಇಲ್ಲಿನ ‘ಆಸನ’ ನದಿ ದಂಡೆಯ ಗುಹೆಗಳಲ್ಲಿ ತಪಸ್ಸು ಮಾಡಿದ ಪ್ರತೀತಿಯಿಂದ ತಪಕೇಶ್ವರನ ನಾಮದಲ್ಲಿ ಗುಹೆಯೊಳಗೆ ಶಿವಲಿಂಗವಿದೆ. ಗುಹೆ ಒಳಗೆ ಗುಡ್ಡದ ಬಸಿ ಹನಿ-ಹನಿಯಾಗಿ ಜಿನುಗುತ್ತದೆ, ಅಲ್ಲಿಯೇ ಕೆಲವು ಸನ್ಯಾಸಿಗಳು ವಾಸವಾಗಿದ್ದಾರೆ ! ಅಷ್ಟು ಸಣ್ಣ ಗುಹೆಯಲ್ಲಿಯೇ ಅವರ ಅಡುಗೆ, ವಾಸ, ಧ್ಯಾನ ಎಲ್ಲವೂ. ತಪಕೇಶ್ಚರನ ಜೊತೆ ಅದೇ ಗುಹೆಯಲ್ಲಿ ಶ್ರೀ ಅಮರನಾಥ, ಶ್ರೀ ಗಣೇಶ, ಶ್ರೀ ರಾಮ ಸೀತೆ ಸೇರಿದಂತೆ ಹಲವಾರು ದೇವರ ವಿಗ್ರಹಗಳಿವೆ. ಈ ಗುಹೆಯ ಎದುರುಗಿರುವ ಮತ್ತೊಂದರಲ್ಲಿ ಸಂತೋಷ ಮಾತೆ, ಮತ್ತೊಂದು ಗುಹೆಯಲ್ಲಿ ಶ್ರೀ ವೈಷ್ಣೋದೇವಿ, ಶ್ರೀ ರಾಧೆ-ಕೃಷ್ಣ, ಶ್ರೀ ವಿಷ್ಣು, ಶ್ರೀ ಕಾಳೀ ಮಾತೆ ಹೀಗೆ ಹತ್ತಾರು ವಿಗ್ರಹಗಳಿವೆ. ಪ್ರತಿ ಗುಹೆಯಲ್ಲೂ ಜಿನುಗುವ ನೀರಿನ ಹನಿ, ಗುಹೆಗಳಲ್ಲಿನ ಕತ್ತಲು, ಪಕ್ಕದಲ್ಲಿಯೇ ಹರಿಯುವ ನದಿಯ ಸಪ್ಪಳ, ಕೈಲಾಸದಲ್ಲಿದೇವೆ ಎನ್ನುವ ಆನಂದ ನೀಡುತ್ತದೆ. ತಪಕೇಶ್ವರ ಮಂದಿರದಲ್ಲೇ ಭಕ್ತಿಯಲ್ಲಿ ತಲ್ಲೀನರಾಗಿದ್ದ ನಮಗೆ ಸಮಯ ಕಳೆದದ್ದೇ ತಿಳಿಯಲಿಲ್ಲ, ಹಾಗಾಗಿ ಉಳಿದ ಸ್ಥಳಗಳನ್ನು ನಮಗೆ ನೋಡಲಾಗಲಿಲ್ಲ. ಅಂದು ರಾತ್ರಿ ಅಲ್ಲಿಂದ ಹೊರಟು ಬೆಳಿಗ್ಗೆ “ಮಥುರ” ತಲುಪಿದೆವು.
ಮಥುರಾದಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಮೊದಲು “ಆಗ್ರಾ” ನೋಡಲು ಹೊರಟೆವು. ಜೊತೆಯಲ್ಲಿಯೇ ತೆಗೆದುಕೊಂಡು ಹೊಗಿದ್ದ ‘ಎಲ್ಕೆಟ್ರಿಕ್ ಕುಕ್ಕರ್‍ನಲ್ಲಿ’ ಅದಾಗಲೆ ಬಿಸಿ ಬಿಸಿ ಉಪ್ಪಿಟ್ಟು ತಯಾರಾಗಿತ್ತು. ಆಗ್ರಾದ “ತಾಜ್ ಮಹಲ್” ಎಂದರೆ ಏನೋ ಮಹಾ ಎಂದುಕೊಂಡಿದ್ದ ನಮಗೆ ಅಲ್ಲಿ ಒಂದು ದೊಡ್ಡ ಕಟ್ಟಡ, ಅದರೊಳಗೆ ಎರಡು ಸಮಾಧಿ ಕಂಡು ನಿರಸೆಯಾಯಿತು. ಬೇಲೂರು-ಹಳೇಬೀಡಿನ ಶಿಲ್ಪಕಲೆ, ಹಂಪಿಯ ಶಿಲ್ಪಕಲೆಗಳ ಮುಂದೆ ಏನೂ ಅಲ್ಲದ ತಾಜ್ ಮಹಲ್ ಇಷ್ಟೊಂದು ಪ್ರಸಿದ್ಧಿ ಏಕೆ ಪಡಿಯಿತೆಂದು ತಿಳಿಯಲಿಲ್ಲ !? ನಮ್ಮಲ್ಲಿ ಸಾವಿರಾರು ದೇವಾಲಯಗಳು ಜೀರ್ಣೋದ್ದಾರವಾಗದೇ ಹಾಳು ಕೊಂಪೆಗಳಾಗಿವೆ, ಆದರೇ ಸರಕಾರ ಕೋಟಿಗಟ್ಟಲೆ ಖರ್ಚು ಮಾಡಿ ತಾಜ್ ಮಹಲ್‍ಗೆ ಪಾಲಿಷ್ ಮಾಡುತ್ತಿದ್ದನ್ನು ಕಂಡು ಮನಸಿಗೆ ಬೇಸರವಾಯಿತು. ಸಮಯ ಕಮ್ಮಿ ಇದ್ದುದ್ದರಿಂದ ಆಗ್ರಾ ಕೋಟೆ ನೋಡದೆ ಶ್ರೀ ಕೃಷ್ಣನ ಜನ್ಮಸ್ಥಾನ ನೋಡಲು ಮರಳಿ ಮಥುರಕ್ಕೆ ಆಗಮಿಸಿದೆವು.
ಅಲ್ಲಿ ಮೊದಲು ನಮಗೆ ಎದುರಾಗಿದ್ದೇ ಬ್ರೋಕರ್‍ಗಳು. ಯಾವುದೇ ಪ್ರವಾಸಿ ವಾಹನ ಕಂಡರೂ ಹೇಳದೆ ಕೇಳದೇ ಹತ್ತಿ ಕುಳಿತು ಬಿಡುತ್ತಾರೆ. ನಂತರ ಪ್ರತಿಯೊಂದು ಮಂದಿರಕ್ಕೂ ಒಂದೊಂದು ರೇಟ್ ಹೇಳುತ್ತಾರೆ. ಅವರೇಳಿದಷ್ಟು ನೀಡಿದರೆ ವಾಹನ ಪಾರ್ಕಿಂಗ್‍ನಿಂದ ಹಿಡಿದು ದೇವರ ದರ್ಶನದ ತನಕ ಎಲ್ಲವೂ ಅವರೇ ನೋಡಿಕೊಳ್ಳುತ್ತಾರೆ. ಅವರು ಸಾವಿರ ರೂಪಾಯಿ ಹೇಳಿದರೆ ನಾವು ನೂರು ರೂಪಾಯಿಯಿಂದ ಶುರು ಮಾಡಿದರೆ ಉತ್ತಮ ! ಮಥುರಾದಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳೆಂದರೆ ಶ್ರೀ “ಕೃಷ್ಣ ಜನ್ಮಭೂಮಿ”, ಕೃಷ್ಣ ಆಡಿ ಬೆಳೆದ “ಗೋಕುಲ”, ಕೃಷ್ಣ ತನ್ನ ಲೀಲೆಗಳನ್ನು ತೋರಿಸಿದ “ಬೃಂದಾವನ”, ಭೂಮಿ ಮೇಲಿನ ಸ್ವರ್ಗ “ಪ್ರೇಮ ಮಂದಿರ”, “ಇಸ್ಕಾನ್ ಮಂದಿರ”. ಹೀಗೆ ಒಬ್ಬ ಬ್ರೋಕರ್ ಮೂಲಕ ಶ್ರೀ ಕೃಷ್ಣ ಜನ್ಮಸ್ಥಾನ ನೋಡಲು ಅಣಿಯಾದೆವು. ಅಲ್ಲಿ ಈ ಬ್ರೋಕರ್‍ಗಳಿಗೆಂದೇ ವಿಶೇಷ ಕ್ಯೂ, ವಿಶೇಷ ದರ್ಶನದ ವ್ಯವಸ್ಥೆಯಿರುತ್ತದೆ. ಶ್ರೀ ಕೃಷ್ಣ ಜನ್ಮಭೂಮಿ ನೋಡಿದರೆ ಎಂತವರಿಗೂ ಹೊಟ್ಟೆ ಉರಿಯುತ್ತದೆ ಯಾಕೆಂದರೆ ನೆಲ ಮಹಡಿಯಲ್ಲಿ ಕೃಷ್ಣ ಜನಿಸಿದ ಸೆರೆಮನೆ, ಮೇಲೆ ಮಸೀದಿ !!! ಹಿಂದೂ ರಾಜರು ಕಟ್ಟಿದ ದೇವಸ್ಥಾನಗಳನ್ನು ದೇಶದ ಉದ್ದಗಲಕ್ಕೂ ಒಡೆದಿರುವ ಮತಾಂಧ ಮುಸಲ್ಮಾನರ ಕೌರ್ಯ ಮಥುರಾದಲ್ಲೂ ನಡೆದಿದೆ. ಹಲವಾರು ಬಾರಿ ಕಟ್ಟಿದ ಮಂದಿರವನ್ನು ಒಡೆದು ಅದರ ಮೇಲೆ ಮಸೀದಿ ಕಟ್ಟಿದ್ದಾರೆ. ಧರ್ಮ ಸಹಿಷ್ಣಗಳಾದ ಹಿಂದೂಗಳು, ಮತಾಂಧರು ನಿರ್ಮಿಸಿದ ಮಸೀದಿ ಒಡೆಯದೇ ಪಕ್ಕದಲ್ಲಿಯೇ ಅದಕ್ಕಿಂತಲೂ ಎತ್ತರವಾದ ಹೊಸ ರಾಧೆ-ಕೃಷ್ಣ ಮಂದಿರವನ್ನು ನಿರ್ಮಿಸಿ ಪ್ರಪಂಚಕ್ಕೆ ಹಿಂದೂಗಳೆಂದರೇನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ನಂತರ ನಾವು ನೋಡ ಹೊರಟಿದ್ದು ಇತ್ತೀಚಿಗೆ ನಿರ್ಮಾಣಗೊಂಡಿರುವ ‘ಪ್ರೇಮ ಮಂದಿರ’. ಜಗದ್ಗುರು ಶ್ರೀ ಕೃಪಾಳೂ ಜೀ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಅದ್ಭುತ ಮಾರ್ಬಲ್ ಶಿಲ್ಪಕಲೆಯಲ್ಲಿ ನೂರಾರು ಕೋಟಿ ವೆಚ್ಚದಲ್ಲಿ 54 ಎಕರೆ ವಿಶಾಲ ಜಾಗದಲ್ಲಿ ತಲೆ ಎತ್ತಿ ನಿಂತಿದೆ ರಾಧೆ-ಕೃಷ್ಣನ ಪ್ರೇಮ ಮಂದಿರ. ಪ್ರತಿಯೊಂದು ಕಂಬದಲ್ಲೂ ಕೆತ್ತನೆ, ಮಂದಿರದ ಒಳಗಿನ ಆ ಬೆಳಕಿನ ವ್ಯವಸ್ಥೆ, ರಾಧೇ-ಕೃಷ್ಣ, ರಾಮ-ಸೀತೆಯ ಬಂಗಾದಂತಹ ವಿಗ್ರಹಗಳು ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತವೆ. ಒಂದು ಸಮಾಧಿಯನ್ನು ಪ್ರೇಮದ ಸಂಕೇತವಾಗಿ ತೋರಿಸುವ ಬದಲು ಇದನ್ನು ಪ್ರಪಂಚಕ್ಕೆ ಪ್ರೇಮದ ಸಂಕೇತವಾಗಿ ತೊರಿಸಿದರೆ ಭಾರತದ ಮರ್ಯಾದೆ ನೂರು ಪಟ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ದೇವಸ್ಥಾನದ ಸುತ್ತಲು ಕೃಷ್ಣನ ಹಲವಾರು ಲೀಲೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರ್ಮಿಸಿದ್ದಾರೆ. ಅದರ ಪಕ್ಕದಲ್ಲೇ ಇರುವ ಇಸ್ಕಾನ್ ಮತ್ತು ಬಿರ್ಲಾ ಮಂದಿರಗಳು ಮಥುರಾದ ಸೊಬಗನ್ನು ಇಮ್ಮಡಿಗೊಳಿಸಿವೆ. ಅಂದು ಅಲ್ಲೆ ತಂಗಿ ಮರುದಿನ ಬೆಳಿಗ್ಗೆ ರಾಷ್ಟ್ರ ರಾಜಧಾನಿ “ದೆಹಲಿ” ನೋಡಲು ಹೊರಟೆವು.
ದೆಹಲಿಯಲ್ಲಿ ನಮಗೆ ಟ್ರಾಫಿಕ್ ಜಾಮ್‍ನ ಅದ್ಧೂರಿ ಸ್ವಾಗತ ದೊರೆಯಿತು. ನಮ್ಮ ವಾಹನದಲ್ಲಾದರೇ ಏನು ನೋಡಲಾಗದು ಎನ್ನವ ಅರಿವಾದ ಮೇಲೆ, ಮೆಟ್ರೋ ಮೂಲಕ ದೆಹಲಿ ನೋಡಲು ತೀರ್ಮಾನಿಸಿದೆವು. ಮೆಟ್ರೋ ದೆಹಲಿಯ ಜೀವನಾಡಿಯಾಗಿದೆ, ಎಲ್ಲಾ ಪ್ರಮುಖ ಸ್ಥಳಗಳಿಗೂ ಮೆಟ್ರೋ ಸಂಪರ್ಕವಿದೆ ಅದೂ ನಮ್ಮ ಬೆಂಗಳೂರು ಮೆಟ್ರೋಗಿಂತ ಕಡಿಮೆ ಬೆಲೆಯಲ್ಲಿ. ಪ್ರಧಾನಿ ತ್ರಿವರ್ಣ ಧ್ವಜ ಹಾರಿಸುವ “ಕೆಂಪುಕೋಟೆ” ಮೊದಲು ನೋಡಿ ನಂತರ “ಅಕ್ಷರಧಾಮ”, “ಇಂಡಿಯಾ ಗೇಟ್”, “ಕರೋಲ್ ಬಾಗ್” ನೋಡುವುದು ನಮ್ಮ ಆಲೋಚನೆ. ಮೊಘಲರು ಕಟ್ಟಿದ ಕೆಂಪುಕೋಟೆ, ಅಲ್ಲಿದ್ದ ಕೆಲವು ಮ್ಯೂಸಿಯಂಗಳನ್ನು ನೋಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅಲ್ಲೇ ಸಮೀಪದ “ಚಾಂದನಿ ಚೌಕ್”ನಲ್ಲಿ ದೆಹಲಿಯ ಕೆಲವು ಪ್ರಸಿದ್ಧ ತಿನಿಸು ಸವಿದೆವು. ನಂತರ ನಾವು ತಲುಪಿದ್ದು ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯವಾದ ಅಕ್ಷರಧಾಮಕ್ಕೆ. ಸ್ವಾಮಿ ನಾರಾಯಣರ ಸುಪ್ರಸಿದ್ಧ ದೇವಾಲಯ ನೋಡಲು ಎರಡು ಕಣ್ಣು ಸಾಲದು, ಮಾರ್ಬಲ್ ಶಿಲ್ಪಕಲೆ, ನೂರಾರು ಎಕರೆ ಹರಡಿರುವ ವಿಶಾಲ ಮಂದಿರಗಳು, ಮಂದಿರದ ಸುತ್ತಲೂ ಇರುವ ನೀರಿನ ಕಾರಂಜಿ, ಸಂಜೆ ನಡೆಯುವ ಸಂಗೀತ ಮತ್ತು ಬೆಳಕಿನ ಪ್ರದರ್ಶನ ಹೀಗೆ ಹತ್ತಾರು ವಿಶೇಷತೆಗಳಿಂದ ಕೂಡಿರುವ ಅಕ್ಷರಧಾಮ ಜಗತ್ತಿನ 8ನೇ ಅದ್ಭುತವಾಗುವ ಎಲ್ಲಾ ಅರ್ಹತೆ ಹೊಂದಿದೆ. ಅಲ್ಲಿನ ಉಪಹಾರ ಗೃಹವೇ ಒಂದು ಮಂದಿರದ ರೀತಿ ನಿಮಿಸಿರುವುದು ಆಕರ್ಷಣೀಯ.
ಮೊದಲನೇ ಮಹಾ ಯುದ್ಧದಲ್ಲಿ ಮಡಿದ 84,000 ಭಾರತೀಯ ಸೈನಿಕರ ನೆನಪಿಗಾಗಿ ಬ್ರಿಟೀಷರು ನಿರ್ಮಿಸಿದ “ಇಂಡಿಯಾ ಗೇಟ್”, ಅದರಲ್ಲಿ 13,300 ಮಡಿದ ಸೈನಿಕರ ಹೆಸರು, ಬಾಂಗ್ಲಾ ವಿಮೋಚನಾ ಯುದ್ಧದ ನೆನಪಿಗೆ ಕೆಳಗೆ ಸದಾ ಉರಿಯುತ್ತಿರುವ ‘ಅಮರ ಜವಾನ್ ಜ್ಯೋತಿ’ ಅದರ ಬಳಿ ಸದಾ ಕಾವಲಿರುವ ಸೈನಿಕರು ನಮ್ಮಲ್ಲಿರುವ ದೇಶ ಭಕ್ತಿಯನ್ನು ಜಾಗೃತಗೊಳಿಸುತ್ತದೆ. ಅಲ್ಲಿಂದ ನಾವು ನೇರ ಹೊರಟಿದ್ದು ಕರೊಲ್ ಭಾಗ್ ಎನ್ನುವ ಮಾರ್ಕೆಟ್ ಕಡೆಗೆ. ದೆಹಲಿಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ಜಾಗ ಈ ಕರೊಲ್ ಭಾಗ್. ಇಷ್ಟೊಂದು ಪ್ರವಾಸ ಮಾಡಿದ ಮೇಲೆ ಸ್ನೇಹಿತರಿಗೆ, ಬಂಧುಗಳಿಗೆ ಏನಾದರೂ ಕೊಡಬೇಕೆಂದು ಹಲವಾರು ಬಗೆಯ ವಸ್ತುಗಳನ್ನು ಖರೀದಿಸಿದೆವು. ಅಂದು ರಾತ್ರಿ ದೆಹಲಿಯಲ್ಲಿ ತಂಗಿ ಮರುದಿನ ಕರ್ನಾಟಕ ಸಂಪರ್ಕಕ್ರಾಂತಿ ರೈಲು ಹತ್ತಿ ನಮ್ಮೂರು ದಾವಣಗೆರೆಗೆ ಬಂದಿಳಿದಾಗ ಹತ್ತು ದಿನಗಳ ನಮ್ಮ ಉತ್ತರ ಭಾರತ ಪ್ರವಾಸ ಮುಗಿದಿತ್ತು.
ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಉಳಿದುಕೊಳ್ಳುವುದಕ್ಕೆ ಶ್ರೀ ಜಂಗಮವಾಡಿ ಮಠ, ಶ್ರೀ ಶೃಂಗೇರಿ ಮಠ ಸೇರಿದಂತೆ ಅನೇಕ ಮಠಗಳು ಮತ್ತು ಆಶ್ರಮಗಳಿವೆ. ಕಾಶೀ ತಲುಪಲು ನೇರ ರೈಲಿನ ವ್ಯವಸ್ಥೆಯಿದೆ, ಅಲ್ಲಿಂದ ಹರಿದ್ವಾರ ತಲುಪಲು ಸಾಕಷ್ಟು ರೈಲುಗಳಿವೆ. ರೈಲಿನ ಬದಲು ಕಾಶಿಯಿಂದ ವಾಹನ ಬಾಡಿಗೆ ಪಡೆದು ಸುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಉತ್ತರಪ್ರದೇಶ ಮತ್ತು ಉತ್ತರಖಾಂಡದಲ್ಲಿ ನೋಡಬಹುದಾದ ಇನ್ನೂ ಅನೇಕ ಸ್ಥಳಗಿವೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯ, ಅಲಹಾಬಾದ್‍ನ ತ್ರಿವೇಣಿ ಸಂಗಮ, ಫತೇಪುರ್ ಸಿಖ್ರೀ, ಸಾರಾನಾಥ್, ನೈನಿತಾಲ್, ಮಸೂರಿ, ಚೋಟಾ ಚಾರ್‍ಧಾಮ್(ಗಂಗೋತ್ರಿ, ಯಮುನೋತ್ರಿ, ಕೇದಾರ್‍ನಾಥ್, ಬದ್ರಿನಾಥ್). ನಮ್ಮ ಮುಂದಿನ ಯೋಜನೆ ಈ ಸ್ಥಳಗಳಿಗೆ ತೆರಳುವುದು. ಈ ಎಲ್ಲಾ ಪವಿತ್ರ ಹಿಂದೂಗಳ ಧಾರ್ಮಿಕ ಸ್ಥಳಗಳ ದರ್ಶನ ಪಡೆದವರ ಜೀವನ ಧನ್ಯೋಸ್ಮಿ.
–
ಸಿದ್ದಲಿಂಗ ಸ್ವಾಮಿ, M.Tech
swamyjrs@gmail.com
Facebook ಕಾಮೆಂಟ್ಸ್