Facebook ಕಾಮೆಂಟ್ಸ್
ಜಯ ಜಯ ಜಯಲಲಿತೆ
ಬದುಕಿನಲ್ಲಿ ಆಗುವ ಕೆಲವು ಘಟನೆಗಳು ಇಡೀ ಬದುಕನ್ನೇ ಬದಲಾಯಿಸಿಬಿಡುತ್ತವೆ ಎನ್ನುವುದಕ್ಕೆ ಜಯಲಲಿತಾ ಅವರ ಬದುಕಿನಿಗಿಂತ ಇನ್ನೊಂದು ಬೇರೆ ಸಾಕ್ಷಿ ಬೇಕಿಲ್ಲ. ಮನೆಯಲ್ಲಿ ಯಾರಿಗೂ ಚಲನಚಿತ್ರದ ಗಂಧಗಾಳಿಯಿಲ್ಲ, ರಾಜಕೀಯ ದೂರ ದೂರದಲ್ಲಿ ನೋಡಿಲ್ಲ. ಹೀಗಿರುವಾಗ ಭಾರತ ಕಂಡ ಒಂದು ಅತ್ಯುತ್ತಮ ನಟಿ, ಅಮೋಘ ರಾಜಕಾರಣಿ ಜಯಲಲಿತಾ ಅವರನ್ನು ಸನ್ನಿವೇಶಗಳು ಕೆತ್ತಿ ಅದ್ಭುತ ಶಿಲೆಯನ್ನಾಗಿ ಮಾಡಿದವು ಎಂತಲೇ ಹೇಳಬಹುದು. ಜಯಲಲಿತಾ ಅವರ ತಂದೆಯ ಕಡೆಯ ಅಜ್ಜ ನರಸಿಂಹ ರಂಗಾಚಾರಿ ಮೈಸೂರು ಒಡೆಯರ ಆಸ್ಥಾನದಲ್ಲಿದ್ದ ಸರ್ಜನ್, ತಾಯಿಯ ಕಡೆಯ ತಾತ ರಂಗಸ್ವಾಮಿ ಐಯ್ಯಂಗಾರ್ ಆಗಿನ ಹಿಂದೂಸ್ತಾನ್ ಎರೊನಾಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಶ್ರೀಮಂತರು ಹೀಗಾಗಿ ಜಯಲಲಿತಾ ತಂದೆ ವಕೀಲಿ ವೃತ್ತಿಯನ್ನು ಅಷ್ಟು ಗಂಭೀರವಾಗಿ ಸ್ವೀಕರಿಸಲಿಲ್ಲ. ಬದುಕಿನಲ್ಲಿ ಚಂಡ ಮಾರುತ ಯಾವತ್ತೂ ಹೇಳಿ ಬರುವುದಿಲ್ಲ. ಶಾಂತ, ಸುಖ ಸಂಸಾರವಾಗಿದ್ದ ಜಯಲಲಿತಾ ಕುಟುಂಬದಲ್ಲಿ ಚಂಡಮಾರುತ ಬೀಸಿದ್ದು ಅವರ ತಂದೆ ಜಯರಾಮ್ ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನರಾದಾಗ. ತಂದೆಯನ್ನು ಕಳೆದುಕೊಂಡಾಗ ಜಯಲಲಿತಾ ಅವರಿಗೆ ಕೇವಲ ಎರಡು ವರ್ಷ!
ಜಯಲಲಿತಾ ಅವರ ತಾಯಿ ಸಂಸಾರವನ್ನು ಸಾಗಿಸಲು ಒಂದು ದಾರಿಯನ್ನು ಹುಡುಕಿ ಮೈಸೂರಿನಿಂದ ತಾಯಿಮನೆ ಬೆಂಗಳೂರಿಗೆ ಹೊರಟರು. ಅಲ್ಲಿ ಟೈಪಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಕಲಿತು ಕ್ಲರಿಕಲ್ ಹುದ್ದೆಯಲ್ಲಿ ಕೆಲಸಕ್ಕೆ ಶುರುಮಾಡಿದರು. ಆದರೆ ಜೀವನ ಅಷ್ಟು ಸುಗಮವಾಗಿ ಸಾಗುತ್ತಿರಲಿಲ್ಲ. ಅಕ್ಕ ಮದ್ರಾಸಿನಲ್ಲಿ ನಾಟಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ತಂಗಿಗೆ ಬಾ ಎಂದಳು. ಹೀಗಾಗಿ ತಾಯಿ ವೆಡದವಲ್ಲಿ ಮಗಳು ಜಯಲಲಿತಾಳನ್ನು ಬಿಟ್ಟು ಮದ್ರಾಸಿಗೆ ತೆರಳಿದರು. ಅಲ್ಲಿ ವೇದವಲ್ಲಿ ತನ್ನ ಹೆಸರನ್ನು ಸಂಧ್ಯಾ ಎಂದು ಬದಲಾಯಿಸಿ ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದರು. ಒಂದು ಸಂದರ್ಶನದಲ್ಲಿ ತಾಯಿಯನ್ನು ಮಿಸ್ ಮಾಡಿಕೊಂಡ ಬಗ್ಗೆ ಜಯಲಲಿತಾ ಬಹಳ ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ. ಬೇಸಿಗೆ ರಜೆಯಲ್ಲಿ ಮಾತ್ರ ಅವರು ತಾಯಿಯನ್ನು ನೋಡಲು ಹೋಗುತ್ತಿದ್ದರಂತೆ. ತಾಯಿ ದುಡಿತದಲ್ಲಿ ಮಗಳ ವಿದ್ಯಾಭ್ಯಾಸ ನಡೆಯಬೇಕಿತ್ತು. ಅವರ ಚಿಕ್ಕಮ್ಮ ಮದುವೆಯಾಗಿ ಹೋಗುವ ತನಕ ಜಯಲಲಿತಾ ಬೆಂಗಳೂರಿನ ಬಿಷಪ್ ಕಾಟನ್ ಕಾನ್ವೆಂಟ್ ನಲ್ಲಿಯೇ ಕಲಿತಿದ್ದು. ನಂತರದಲ್ಲಿ ಅವರು ಚೆನೈಗೆ ಹೋಗಿ, ಅಲ್ಲಿ ಚರ್ಚ್ ಪಾರ್ಕ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಓದುವುದರಲ್ಲಿ ಅವರು ಎಷ್ಟು ಮುಂದಿದ್ದರು ಅಂದರೆ ಹತ್ತನೇ ತರಗತಿಯಲ್ಲಿ ಇಡೀ ತಮಿಳುನಾಡಿಗೆ ಮೊದಲನೇಯ ನಂಬರ್! ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆಯುವುದು ಸಣ್ಣಪುಟ್ಟ ವಿಷಯವಲ್ಲ. ಜಯಲಲಿತಾ ಅವರ ಆ ಸಾಧನೆಗೆ ಸರ್ಕಾರ ಗೊಲ್ಡ್ ಸ್ಟೇಟ್ ಅವಾರ್ಡ್ ಕೊಟ್ಟು ಗೌರವಿಸಿತು. ಶಿಕ್ಷಣದಲ್ಲಿ ಇಷ್ಟು ಆಸಕ್ತಿ ಇದ್ದ ಜಯಲಲಿತಾ ಸಿನೇಮಾಕ್ಕೆ ಹೇಗೆ ಬಂದರು?
ಒಮ್ಮೆ ಶಿವಾಜಿ ಗಣೇಶನ್ ಅವರು ಭರತನಾಟ್ಯ ಸ್ಪರ್ಧೆಗೆ ನಿರ್ಣಾಯಕರಾಗಿ ಬಂದಿದ್ದರಂತೆ. ಜಯಲಲಿತಾ ಅಭ್ಯಾಸದ ಜೊತೆಗೆ ನೃತ್ಯದಲ್ಲೂ ಎತ್ತಿದ ಕೈ. ಮೂರನೇ ವಯಸ್ಸಿನಲ್ಲೇ ಭರತನಾಟ್ಯ ಕಲಿತಿದ್ದರಂತೆ ಅಂದರೆ ಆಶ್ಚರ್ಯಕರವಾಗದೇ ಇರದೆ? ಅವರು ಭರತನಾಟ್ಯದ ಜೊತೆ ಕತಕ್, ಮಣಿಪುರಿ ಹೀಗೆ ಹಲವಾರು ನೃತ್ಯದ ವಿಧವನ್ನು ಕಲಿಯುತ್ತಿದ್ದರಂತೆ. ಶಿವಾಜಿ ಗಣೇಶನ್ ಜಯಲಲಿತಾ ಅವರ ಭರತನಾಟ್ಯಂ ನೋಡಿ ಅವರ ತಾಯಿಯನ್ನು ಕರೆದು ಭವಿಷ್ಯವನ್ನೇ ನುಡಿದುಬಿಟ್ಟರಂತೆ, “ನೋಡು ನಿನ್ನ ಮಗಳು ಮುಂದೊಂದು ದಿನ ದೊಡ್ಡ ನಾಯಕಿ ಆಗುತ್ತಾಳೆ” ಎಂದು. ನಾಟ್ಯಶಾಸ್ತ್ರ ಪ್ರವಿಣೆ ಮುಂದೆ ಭವಿಷ್ಯದಲ್ಲಿ ಜನರ ಮನಸ್ಸಿನಲ್ಲಿ ಮಿನುಗಿದ ಸತ್ಯ ನಮಗೆಲ್ಲ ಗೊತ್ತೇ ಇದೆ. ತಾಯಿಯ ಮಾರ್ಗದರ್ಶನ, ಹೀಗಾಗಿ ಜಯಲಲಿತಾ ನಾಟಕದಲ್ಲಿ ನಟಿಸತೊಡಗಿದಳು. ಜಯಲಲಿತಾ ಇಂಗ್ಲಿಷ್ ಭಾಷೆಯ ಮೇಲೆ ಕಮಾಂಡ್ ಅತ್ಯದ್ಭುತವಾಗಿತ್ತಂತೆ. ಅವರು ನಟಿಸಿದ ‘ಟೀ ಹೌಸಸ್ ಆಫ್ ದಿ ಅಗಸ್ಟ್ ಮೂನ್’ ಎಷ್ಟು ಹೆಸರುವಾಸಿ ಆಗಿತ್ತಂತೆ ಅಂದರೆ ಆಗಿನ ರಾಷ್ಟ್ರಪತಿಯಾಗಿದ್ದ ವಿವಿ ಗಿರಿ ಜಯಲಲಿತಾ ಅವರಿಗೆ ಇಂಗ್ಲಿಷ್ ಸಿನೆಮಾದಲ್ಲಿ ಅಭಿನಯ ಮಾಡಲು ಮನವೊಲಿಸಿದರಂತೆ. ನೋಡಿ ಎಲ್ಲಿಂದ ಎಲ್ಲಿಗೆ ಪ್ರತಿಭೆಯ ಬೆಳಕು ಹರಿಯುತ್ತದೆ ಎಂದು. ವಿವಿ ಗಿರಿಯವರ ಮಗ ಶಂಕರ್ ಗಿರಿಯವರ ನಿರ್ದೇಶನದ The Epistle ಜಯಲಲಿತಾ ನಟಿಸಿದ ಒನ್ ಅ್ಯಂಡ್ ಓನ್ಲಿ ಇಂಗ್ಲಿಷ್ ಚಲನಚಿತ್ರ.
ಹೀಗೆ ಶುರುವಾದ ಅಭಿನಯದ ಪಯಣ ಮುಂದುವರಿದು ಚಲನಚಿತ್ರದ ಕಡೆಗೆ ಹರಿಯಿತು. ತಮ್ಮ ಹದಿಮೂರನೇ ವಯಸ್ಸಿನಲ್ಲಿ ಅವರು ಕನ್ನಡ ಚಲನಚಿತ್ರವಾದ ಶ್ರೀಶೈಲ ಮಹಾತ್ಮೆಯಲ್ಲಿ ಅಭಿನಯ ಮಾಡಿದ್ದರು. ಆ ಸಿನೆಮಾದಲ್ಲಿ ಡಾ|| ರಾಜಕುಮಾರ ಅವರು ನಾಯಕ ನಟ. ಅಂತಹ ಮಹಾನ್ ನಟರೊಡನೆ ಅಷ್ಟು ಚಿಕ್ಕ ವಯಸ್ಸಿನಲ್ಲೇ ಅನುಭವ ಪಡೆದುಕೊಂಡಿದ್ದೂ ದೇವರ ವರದಾನವೇ. ಆಗ ಬರೀ ಹದಿನೈದು ವರ್ಷ, ನಾಯಕಿ ಆಗುವ ಸೌಭಾಗ್ಯ. ಅವರು ಮೊದಲು ನಾಯಕಿ ಆಗಿ ಅಭಿನಯಿಸಿದ ಚಿತ್ರ ಅಂದರೆ ಕನ್ನಡದ ‘ಚಿನ್ನದ ಗೊಂಬೆ’. ಮೊದಲನೆಯ ಚಿತ್ರವೇ ಬೊಂಬಾಟ್ ಹಿಟ್! ಆಗ ಅವರಿಗೆ ಸಿಗುವ ಸಂಭಾವನೆಯಾದರೂ ಎಷ್ಟು? ಬರೀ ಮೂರು ಸಾವಿರ ರೂಪಾಯಿ. ಅದರಲ್ಲಿ ಜೀವನ ಆಗಬೇಕು, ವಿದ್ಯಾಭ್ಯಾಸ ಕೂಡ ನಡೆಯಬೇಕು. ತಮ್ಮನ ವಿದ್ಯಾಭ್ಯಾಸ ಇನ್ನೊಂದು ವಿಷಯ. ಇಷ್ಟು ಸಣ್ಣ ವಯಸ್ಸಿನಲ್ಲಿ ಸಿಕ್ಕ ಯಶಸ್ಸಿಗೆ ಅವರು ಮಾರಿಹೋಗಲಿಲ್ಲ ಜಯಲಲಿತಾ. ಆಗಲೇ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡಾ ಅವರಿಗೆ ಅಭಿನಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಅವರಿಗೆ ತಾನೊಬ್ಬ ದೊಡ್ಡ ವಕೀಲೆ ಆಗಬೇಕು ಎನ್ನುವ ಆಸೆಯಿತ್ತು. ಆದರೆ ಏನು ಮಾಡುವುದು ಎಲ್ಲವೂ ಬರೆದ ಹಾಗೆ ಪಡೆಯಬೇಕು. ತಾಯಿಯ ಹಣಕಾಸಿನ ಪರಿಸ್ಥಿತಿ ಸರಿ ಇರಲಿಲ್ಲವಾದ ಕಾರಣ ಜಯಲಲಿತಾ ತನ್ನ ಕನಸಿಗೆ ನೀರೆರಚಬೇಕಾಗಿ ಬಂತು. ತಾವು ಗಳಿಸಿದ ಅಂಕದ ಮೇರೆಗೆ ಸ್ಟೆಲ್ಲಾ ಮ್ಯಾರಿಸ್ ಲಾ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿದ್ದರೂ ಕೂಡ ಶಿಕ್ಷಣವನ್ನು ಮುಂದುವರಿಸಿದೆ ಅಭಿನಯ ಮುಂದುವರಿಸಿದರು. ಪರಿಸ್ಥಿತಿ ತನಗೆ ಹೇಗೆ ಬೇಕೋ ಹಾಗೆ ಜನರನ್ನು ಬದಲಾಯಿಸುತ್ತದೆ.
ವಿದ್ಯಾಭ್ಯಾಸದಲ್ಲಿ ನಂಬರ್ ಒನ್. ಇನ್ನು ಚಿತ್ರರಂಗದಲ್ಲಿ ಕಾಲಿಟ್ಟರೆ ಅಲ್ಲೂ ಅತೀ ಕಡಿಮೆ ಸಮಯದಲ್ಲಿ ಹೆಸರನ್ನು ಗಳಿಸಿಬಿಟ್ಟರು. ಜಯಲಲಿತಾ ನಟಿಸಿದ ತೊಂಬತ್ತೆರಡು ಚಿತ್ರಗಳಲ್ಲಿ ಎಂಬತ್ತೈದು ಚಿತ್ರಗಳು ಸಿಲ್ವರ್ ಜ್ಯುಬಲಿ ಹಿಟ್ ಆಗಿವೆ. ತಮಿಳಿನಲ್ಲಿ ಅತೀ ಹೆಚ್ಚು ಸಿಲ್ವರ್ ಜ್ಯುಬಲಿ ಹಿಟ್ ನಟಿ ಅಂದರೆ ಜಯಲಲಿತಾ. ಅವರ ಕೆಲವು ಚಿತ್ರಗಳು ಆರು ತಿಂಗಳುಗಳ ಕಾಲ ಓಡಿವೆ. ಈ ಸಿಲ್ವರ್ ಜ್ಯಬಲಿ ಹಿಟ್ಸ್ ದಾಖಲೆಯನ್ನು ಮುರಿಯಲು ಅವರೇ ಮತ್ತೊಮ್ಮೆ ಹುಟ್ಟಿ ಬರಬೇಕು. ಬರೀ ತಮಿಳಲ್ಲ, ಕನ್ನಡವಲ್ಲ ಐದೂ ಭಾಷೆಗಳಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟ ಎಕೈಕ ನಾಯಕಿ ಅಂದರೆ ಜಯಲಲಿತಾನೇ ಇರಬೇಕು. ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ. ಪ್ರತಿ ಭಾಷೆಯಲ್ಲೂ ನಟಿಸಿದ ಅವರ ಮೊದಲ ಚಿತ್ರ ಸೂಪರ್ ಹಿಟ್. ಅವು ಯಾವುದು ಅಂದರೆ, ಕನ್ನಡದ ಚಿನ್ನದ ಗೊಂಬೆ, ತೆಲಗುವಿನ ಮನಷಲು ಮಮತಲು, ತಮಿಳಿನ ವೆನ್ನಿರಾ ಅಡೈ , ಜಿಸಸ್ ಮಲೆಯಾಳಂ ಚಿತ್ರ ಹಾಗೂ ಹಿಂದಿಯ ಇಜ್ಜತ್ ಇವರ ಸೂಪರ್ ಹಿಟ್ ಮೂವೀಸ್. ಜಯಲಲಿತಾ ನಟಿಸಿದ ಎಲ್ಲಾ ತೆಲಗು ಭಾಷಾ ಚಿತ್ರಗಳು ಸೂಪರ್ ಹಿಟ್ ಮೂವಿಸ್ ! ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟು. ಶಿವಾಜಿ ಗಣೇಶನ್ ಜೊತೆ ನಟಿಸಿದ ಸಿನೆಮಾವು ಆಸ್ಕರಿಗೆ ಹೋದ ಮೊದಲ ತಮಿಳು ಚಲನಚಿತ್ರ. ಹೀಗೆ ಜನಪ್ರಿಯತೆ ಅವರನ್ನು ನಟ, ನಿರ್ಮಾಪಕ, ನಿರ್ದೇಶಕ, ರಾಜಕಾರಣಿ ಎಂಜಿಆರ್ ಮನದಲ್ಲಿ ಒಂದು ಜಾಗಮಾಡಿಕೊಟ್ಟಿತು.
ಮೊದಲು ಇವರ ಇಂಗ್ಲೀಷ್ ನೋಡಿ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎನ್ನುವುದರಿಂದ ಶುರುವಾಗಿದ್ದು ರಾಜಕೀಯ ಜೀವನ. ರಾಜಕೀಯಕ್ಕೆ ಬಂದಾಗಿನಿಂದ ಎಂಜಿಆರ್ ಅವರಿಗೆ ಹತ್ತಿರವಾಗುತ್ತಾ ಹೋದರು. ರಾಜಕೀಯಕ್ಕೆ ಬಂದಮೇಲೆ ಮಾಡಿದ ಮೊದಲ ಭಾಷಣ – Her maiden public speech, “Pennin Perumai” (“The Greatness of a Woman”). ಆ ಭಾಷಣಕ್ಕೆ ಹಾಗೂ ಅವರ ಜೀವನಕ್ಕೆ ಎಷ್ಟು ಹೋಲಿಕೆ ಇದೆ ಅಲ್ವಾ? ಮಾರ್ಚ್ 25, 1989 ರ ಘಟನೆಯನ್ನು ಯಾರೂ ಮರೆಯುವ ಹಾಗಿಲ್ಲ. ಒಂದು ಪತ್ರಿಕೆ ವರದಿ ಮಾಡಿರುವ ಹಾಗೆ ಅದು – ದ್ರೌಪದಿಯ ವಸ್ತ್ರಾಪಹರಣದ ದೃಶ್ಯ. ಆ ಮಾನಭಂಗವನ್ನು ಸಹಿಸಿ ಹೊರಗೆ ಬಂದ ಜಯಲಲಿತಾ ಎಂದೂ ಮತ್ತೆ ಹಿಂದೆ ನೋಡಲಿಲ್ಲ. ಅವರು ಅಂದೇ ಹೇಳಿದ್ದರಂತೆ, ನಾನು ಮುಖ್ಯಮಂತ್ರಿಯಾಗಿಯೇ ಒಳಗೆ ಬರುವೆ ಎಂದು. ಅದನ್ನು ಮಾಡಿ ತೋರಿಸಿದರು. ಒಂದಲ್ಲ, ಎರಡಲ್ಲ, ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ತಮಿಳುನಾಡಿನ ಇತಿಹಾಸದಲ್ಲಿ ಎಂಜಿಆರ್ ಅವರನ್ನು ಬಿಟ್ಟರೆ ಎರಡು ಬಾರಿ ಸತತವಾಗಿ ಮುಖ್ಯಮಂತ್ರಿಯ ಗದ್ದುಗೆ ಹತ್ತಿದ್ದು ಅಂದರೆ ಜಯಲಲಿತಾ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ಕಪ್ಪುಚುಕ್ಕೆ ಇದ್ದೇ ಇರುತ್ತದೆ. ಹಾಗೆಯೇ ಕಾವೇರಿ ವಿವಾದ, ಆಸ್ತಿ ವಿಷಯದಲ್ಲಿ ಜೈಲಿಗೆ ಹೋಗಿದ್ದು ಎಲ್ಲವೂ ಅವರ ಜೀವನದ ಆ ಕಪ್ಪು ಕಲೆಗಳು ಅದನ್ನು ಬಿಟ್ಟರೆ ಅವರ ಜೀವನ ಅತ್ಯಂತ ರೋಮಾಂಚಕಾರಿ ಪ್ರಯಾಣ. ಹತ್ತನೇಯ ಕ್ಲಾಸಿನಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವುದು, ನೂರಾ ನಲವತ್ತು ಚಲನಚಿತ್ರದಲ್ಲಿ ಅಭಿನಯ ಮಾಡುವುದು, ಆರು ಬಾರಿ ಮುಖ್ಯಮಂತ್ರಿ ಆಗುವುದು ಇದನ್ನೆಲ್ಲ ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬ ಮಹಿಳೆ ಮಾಡಿ ತೋರಿಸಿದ್ದಾಳಲ್ಲ ಅವಳಿಗೆ ಒಂದು ಸಲಾಮ್!