X

ಸ್ವಲ್ಪ ಚೇಂಜ್

ಊರಿಗೆ ಹೋಗಲೇಬೇಕಾಗಿತ್ತು. ಪರ್ಸಿನಲ್ಲಿದ್ದದ್ದು ಎರಡು 100ರ ನೋಟುಗಳು, ಮತ್ತೆ 500ರ ಒಂದು ನೋಟು. ಹಾಗಾಗಿ ಏಟಿಎಂಗೆ ಹೋಗುವುದು ಅನಿವಾರ್ಯವಾಗಿತ್ತು. ಬೆಳಗ್ಗೆ ಆಫೀಸಿಗೆ ಹೋಗುವಾಗ ಬ್ಯಾಂಕ್ ಹಾಗೂ  ಏಟಿಎಂ ಮುಂದೆ ಇದ್ದ ಕ್ಯೂ ನೋಡಿ, ಊರಿಗೆ ಹೋಗುವುದು ಕನಸೇ ಅಂದುಕೊಂಡೆ. ಸಂಜೆ ಆಫೀಸ್ ಮುಗಿದ ಬಳಿಕ ಏಟಿಎಂ ಹುಡುಕುತ್ತಾ ಹೊರಟೆ. ಮೇನ್ ರೋಡಿನಲ್ಲಿ ಇರುವ ಏಟಿಎಂಗಳಲ್ಲಿ ಕ್ಯೂ ನಿಂತರೆ  ತಿಪ್ಪರಲಾಗ ಹಾಕಿದರೂ ದುಡ್ಡು ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು ಹಾಗಾಗಿ ಗಲ್ಲಿಗಳಲ್ಲಿ ಹುಡುಕುವುದೇ ವಾಸಿಯೆಂದು ಅಂತಹ ಕಡೆ ಕಣ್ಣು ಹಾಯಿಸುತ್ತಾ ಹೋದೆ. ಬಹುತೇಕ ಕಡೆ ಏಟಿಎಂ ಮುಚ್ಚಿದ್ದವು. ಹಾಗೇ ಹೋಗುವಾಗ ಒಂದು ರೋಡಿನಲ್ಲಿದ್ದ ಏಟಿಎಂನಲ್ಲಿ 4-5 ಜನ ಮಾತ್ರ ಕ್ಯೂ ನಿಂತಿದ್ದರು. ಅದೃಷ್ಟ ಚೆನ್ನಾಗಿತ್ತು, 2000 ತೆಗೆದುಕೊಂಡು ಮನೆ ಕಡೆ ಹೊರಟೆ.

ಮಾರನೇ ದಿನ ಬೆಳಗ್ಗೆ ಊರಿನ ಬಸ್ ಹಿಡಿದೆ. ಪೇಟೆ ತಲುಪಿ ನನ್ನೂರಿನ ಬಸ್ಸಿಗೆ ಕಾಯ್ದು ಬಂದ ಬಳಿಕ ಹತ್ತಿ ಕೂತೆ. ಬಸ್ ಹೊರಟಿತು. ಮುಂದಿನ ಸ್ಟಾಪಿನಲ್ಲಿ ಸುಮಾರು ೨೫-೩೦ ರ ವಯಸ್ಸಿನ ಒಂದು ಹೆಂಗಸು ಹಾಗೂ ಆಕೆಯ ಅಮ್ಮ ಮತ್ತೆ ಮಗಳ ಜತೆ ಬಸ್ ಹತ್ತಿದರು. ಅಜ್ಜಿ, ಮೊಮ್ಮಗಳು ನಾನಿದ್ದ ಸೀಟಿನಲ್ಲಿ ಕುಳಿತರು. ಆ ಹೆಂಗಸು ಪಕ್ಕದಲ್ಲಿದ್ದ ಖಾಲಿ ಸೀಟಿನಲ್ಲಿ ಕುಳಿತರು. ಮುಂದಿನ ಸ್ಟಾಪ್ ಬಂದಾಗ ಸುಮಾರು ೬೫-೭೦ ವಯಸ್ಸಿನ ಒಂದು ಅಜ್ಜಿ ಆಕೆಯ ಪಕ್ಕ ಬಂದು ಕುಳಿತರು.

ಕಂಡಕ್ಟರ್ ಟಿಕೆಟ್ ಟಿಕೆಟ್ ಎಂದು ಬಂದಾಗ ಅಜ್ಜಿ ತನ್ನ ಬಳಿಯಿದ್ದ 500ರೂ ನೋಟನ್ನ ಆತನಿಗೆ ಕೊಡಲು ಹೋದರು. ಕಂಡಕ್ಟರ್ ತೆಗೆದುಕೊಳ್ಳಲಿಲ್ಲ. ಅಜ್ಜಿ ತನ್ನ ಹತ್ತಿರ  500ರೂ ಬಿಟ್ಟರೆ ಬೇರೆ ದುಡ್ಡಿಲ್ಲವೆಂದೂ, ಆಸ್ಪತ್ರೆಗೆ ಹೋಗ್ಬೇಕು, ಬ್ಯಾಂಕಿಗೆ ಹೋದೆ ಅಲ್ಲಿದ್ದ ಕ್ಯೂನಲ್ಲಿ ನಿಲ್ಲಲಾಗಲಿಲ್ಲ, ಅಲ್ಲಿದ್ದವರು ಯಾರೋ ಹೇಳಿದರು ಬಸ್ಸಿನಲ್ಲಿ ತಗೋತಾರೆ ಅಂತ, ತಗೊಳ್ಳಪ್ಪಾ ಅಂತಂದ್ರು. ಕಂಡಕ್ಟರ್  ಜಗ್ಗಲಿಲ್ಲ, ಅವನು ಅವನ ಸಮಸ್ಯೆ ಹೇಳಿದ. ಹಾಗಿದ್ರೆ ಈಗೇನ್ಮಾಡೋದು ಅಂತ ಅಜ್ಜಿ ಕೇಳಿದ್ರು, ಮುಂದಿನ ಬಸ್ ಸ್ಟಾಪಿನಲ್ಲಿ ಇಳ್ಕೊಳ್ಳಿ ಅಂತಂದ. ಹಾಗೆ ಹೇಳ್ಬೇಡಪ್ಪಾ ಆಸ್ಪತ್ರೆಗೆ ಹೋಗ್ಬೇಕು ತಗೋ ಅಂತಂದ್ರು. ಕಂಡಕ್ಟರ್ ಆಗಲ್ಲ ಅಂತ ಗೊಣಗುತ್ತಾ ಮುಂದೆ ಹೋದ.

ನಾನು ಸ್ವಲ್ಪ ಕಾದು ನೋಡೋಣವೆಂದು ಸುಮ್ಮನೆ ಕುಳಿತೆ. ಬಸ್ಸಿನಲ್ಲಿದ್ದವರು ಯಾರೂ ಸ್ಪಂದಿಸುವಂತೆ ಕಾಣಿಸಲಿಲ್ಲ. ಅಷ್ಟೊತ್ತಿಗೆ ಅಜ್ಜಿಯ ಪಕ್ಕ ಇದ್ದ ಹೆಂಗಸು ತನ್ನ ಅಮ್ಮನಿಗೆ ಉರ್ದುವಿನಲ್ಲಿ 500ರ ಚೇಂಜ್ ಕೊಡುವಂತೆ ಕೇಳಿದರು, ಆಕೆಯ ಅಮ್ಮ ನನ್ಹತ್ರ ಇರುವುದೇ 400 ಅಂತ ಹೇಳಿದರು . ಕೊಡು ಅಂತ ಉರ್ದುವಿನಲ್ಲಿ ಮತ್ತೆ ಕೇಳಿದರೂ ಆಕೆಯ ಅಮ್ಮ ಇಲ್ಲ ಅಂದರು. ಕಂಡಕ್ಟರ್ ಬಂದು ಅಜ್ಜಿಯನ್ನ ಮತ್ತೆ ಕೇಳಿದ. 36ರೂ ಕೊಡಿ ಇಲ್ಲಾಂದ್ರೆ ನೆಕ್ಸ್ಟ್ ಸ್ಟಾಪ್ ಬರತ್ತೆ ಇಳ್ಕೊಳ್ಳಿ ಅಂದ. ಅಜ್ಜಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆ ಹೆಂಗಸು ಮತ್ತೆ ತನ್ನ ಅಮ್ಮನನ್ನ 40ರೂ ಕೊಡು ಎಂದಾಗ, ಆ ಅಮ್ಮ ಸನ್ನೆ ಮಾಡಿ ಕೊಡುವುದು ಬೇಡ ಅಂತಂದರು. ಅದಾದ ಮೇಲೆ ನಾನು ಕಂಡಕ್ಟರ್ಗೆ 40ರೂ ಕೊಟ್ಟು ಟಿಕೆಟ್ ತೆಗೆದುಕೊಂಡು, 4ರೂ ಚೇಂಜ್ ತೆಗೆದುಕೊಂಡು ಅಜ್ಜಿಯ ಕೈನಲ್ಲಿ ಟಿಕೆಟ್ ಕೊಟ್ಟೆ.

ಸಹಾಯ ಮಾಡಲಿ ಮಾಡದಿರಲಿ ಒಟ್ಟಿನಲ್ಲಿ ಆ ಮುಸ್ಲಿಂ ಮಹಿಳೆ ಸಮಸ್ಯೆಗೆ ಸ್ಪಂದಿಸಿದ ರೀತಿ  ಮೆಚ್ಚಲೇಬೇಕು.

ಚಿತ್ರ ಕೃಪೆ: www.alamy.com

– ಚೇತನ್ ಕೋಡುವಳ್ಳಿ

mail2chikku@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post