X

ಭಾರತವನ್ನು ಬದಲಿಸುವತ್ತ, ಹರಡಲಿ ಯುವಕರ ಚಿತ್ತ

ಭಾರತವು ವಿಶಿಷ್ಟವಾದಂತಹ ಪರಂಪರೆಯನ್ನು ಒಳಗೊಂಡಿದೆ. ವಿಶ್ವವೇ ಮೆಚ್ಚುವಂತಹ ಆಚಾರ, ವಿಚಾರ, ಸಂಸ್ಕತಿ ಮತ್ತು ಸಂಪ್ರದಾಯವು ನಮ್ಮಲ್ಲಿದೆ. ಭಾರತ ಎಂಬ ಮೂರಕ್ಷರದ ಪದ ಇಡೀ ಜಗತ್ತನ್ನೇ ಸೆಳೆಯುವಂತಹ ಅದ್ಭುತ ಶಕ್ತಿಯನ್ನು ಹೊಂದಿದೆ. ನಮ್ಮಲ್ಲಿ ಇರುವಂತಹ ಸಂಪ್ರದಾಯ, ಆಚಾರ, ವಿಚಾರ ಹಾಗೂ ಪುರಾತನ ಸಂಪ್ರದಾಯವನ್ನು ಪ್ರಪಂಚದ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಭಾರತದ ಸಂಸ್ಕತಿಗೂ ಹಾಗೂ ವಿದೇಶಿ ಸಂಸ್ಕತಿಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತದಲ್ಲಿ ಹಲವಾರು ದೇವಸ್ಥಾನಗಳಿವೆ. ಪ್ರತೀ ದಿನವೂ ಕೂಡಾ ಭಾರತದ ವಿವಿದ ಸ್ಥಳಗಳ ದೇವಾಲಯಗಳಿಗೆ ಪ್ರತೀ ದಿನವೂ ಹಲವಾರು ವಿದೇಶಿಯರು ಭೇಟಿ ನೀಡಿ ಇಲ್ಲಿನ ಪ್ರಾಚೀನ ಪರಂಪರೆಯನ್ನು ತಿಳಿದುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮ ದೇಶದ ಸಂಸ್ಕತಿ ಎಷ್ಟು ಶ್ರೀಮಂತವೆಂಬುದು ತಿಳಿಯುತ್ತದೆ.

ಹಿಂದೆ ಭಾರತದ ಮೇಲೆ ಹಲವಾರು ಕ್ರೂರ ದೊರೆಗಳು ದಾಳಿ ಮಾಡಿ ಭಾರತದ ಸಂಪತ್ತನ್ನು ದೋಚಿದರು. ಬ್ರಿಟೀಷರು ಕೆಲ ಭಾರತೀಯರ ಸ್ವಾರ್ಥ ಮತ್ತು ಅಜ್ಞಾನವನ್ನು ಬಳಸಿಕೊಂಡು ಇಡೀ ಭಾರತವನ್ನು ದೋಚಿ ಇಂಗ್ಲೆಂಡಿಗೆ ಕೊಂಡೊಯ್ದರು. ಅಂದು ಬ್ರಿಟೀಷರು ಭಾರತೀಯರಿಗೆ ಕೊಡಬಾರದ ಕಷ್ಟವನ್ನು ಕೊಟ್ಟರು. ದೇಶದಿಂದ ಅವರನ್ನು ಹೊರದೂಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ವೀರ ಸಾವರ್ಕರ್, ಬಂಕಿಮ ಚಂದ್ರ ಚಟರ್ಜಿ, ಲಾಲ ಲಜಪತರಾಯ್, ಸುಭಾಷ್‍ಚಂದ್ರ ಬೋಸ್, ಮಹಾತ್ಮ ಗಾಂಧಿ ಸೇರಿದಂತೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸ್ವಾತಂತ್ರ್ಯವನ್ನು ತಂದುಕೊಟ್ಟರು.  ಅಂದು ಹಲವರ ಶ್ರಮದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಅಂದು ಬಹುತೇಕ ಭಾರತೀಯರಲ್ಲಿ ದೇಶಪ್ರೇಮದ ಭಾವ ಉಕ್ಕಿತ್ತು. ದೇಶವನ್ನು ರಕ್ಷಿಸಲು ತಮ್ಮ ನೆತ್ತರನ್ನು ಚೆಲ್ಲಿದರು. ಭಾರತಾಂಬೆಯನ್ನು ಕಾಪಾಡುವ ಸಲುವಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಅಂದು ಅವರ ಯೋಚನೆಯಲ್ಲಿದ್ದುದು ಕೇವಲ ಬ್ರಿಟೀಷರಿಂದ ಭಾರತಾಂಬೆಯನ್ನು ಬಿಡಿಸುವ ಏಕೈಕ ಗುರಿಯಾಗಿತ್ತು. ಇಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಅವಿರತ ಶ್ರಮದಿಂದ ಭಾರತ ಬ್ರಿಟೀಷರಿಂದ ಬಿಡುಗಡೆ ಪಡೆದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿತು.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಪ್ರಪಂಚದಲ್ಲಿ ಬಲಿಷ್ಟ ಎಂಬಂತೆ ಗುರುತಿಸಿಕೊಳ್ಳುವುದು ತೀರಾ ಅನಿವಾರ್ಯವಾಗಿದೆ. ಭಾರತವು ಬಲಿಷ್ಟ ಎಂದು ಗುರುತಿಸಿಕೊಳ್ಳಬೇಕೆಂದರೆ ಭಾರತದಲ್ಲಿನ ಯುವಜನಾಂಗ ರಾಷ್ಟ್ರದ ಅಭಿವೃದ್ಧಿಯಲ್ಲಿ ತಮ್ಮ ಕೈ ಜೋಡಿಸಬೇಕು. ಭಾರತದ ಯುವಜನತೆಯ ಶಕ್ತಿಯನ್ನು ಅರಿತುಕೊಂಡಾಗ ಮಾತ್ರ ರಾಷ್ಟ್ರವು ಯುವಕರನ್ನು ಸೂಕ್ತ ರೀತಿಯಲ್ಲಿ ಉತ್ಪಾದನೆಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಯುವಕರು ಕೇವಲ ಒಬ್ಬ ವ್ಯಕ್ತಿಗೆ ತಮ್ಮ ಬೆಂಬಲವನ್ನು ಸೂಚಿಸದೆ ಆತನಲ್ಲಿರುವಂತಹ ಚಿಂತನೆಗಳಿಗೆ ಮಾತ್ರ ಬೆಲೆ ಕೊಟ್ಟಾಗ ರಾಷ್ಟ್ರವು ಅಭಿವೃದ್ಧಿ ಸಾಧಿಸುವತ್ತ ಹೆಜ್ಜೆ ಇಡಲು ಸಾಧ್ಯ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತವು ಮುಂಚೂಣಿಯಲ್ಲಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ದೇಶದಲ್ಲಿ ಇನ್ನೂ ಹಲವಾರು ರೀತಿಯ ಬದಲಾವಣೆಗಳು ಆಗಲೇ ಬೇಕು. ಹೀಗಾದಲ್ಲಿ ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರುವುದು ಖಚಿತ.

ಹೌದು, ಈ ಮಾತು ಅಕ್ಷರಷಃ ಸತ್ಯ. ಏಕೆಂದರೆ ಈಗಿನ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಗಳನ್ನೆಲ್ಲಾ ಗಮನಿಸಿದರೆ ಚಿಂತನಾಶೀಲ ವ್ಯಕ್ತಿಗಳ ಮನಸ್ಸಿನಲ್ಲಿ ಇಂತಹದ್ದೊಂದು ಸಂದೇಹ ಮೂಡುವುದು ಸಹಜ. ಏಕೆಂದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ಕಣ್ಣಿಗೆ ಕಾಣುವುದು ಕೇವಲ ದ್ವೇಷ, ಅಸೂಯೆ, ಅಧಿಕಾರದಾಹಿ ಮನಸ್ಸುಗಳೇ. ಇಂತಹ ಮನಸ್ಥಿತಿಗಳ ಹೊರತಾಗಿ ರಾಜಕೀಯ ವ್ಯವಸ್ಥೆಯೇ ಇಲ್ಲ ಎಂಬಂತಾಗಿ ಬಿಟ್ಟಿದೆ.

ಒಂದು ರಾಷ್ಟ್ರವು ಅಭಿವೃದ್ಧಿಯನ್ನು ಸಾಧಿಸಬೇಕು ಎಂದರೆ ರಾಷ್ಟ್ರದ ಮಾನವಿಕ ಬಂಡವಾಳದ ಚಿಂತನೆಗಳು ಅಭಿವೃದ್ಧಿ ಪರವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಚಿಂತನೆಗಳಿಗೆ ಪೂರಕವಾದಂತಹ ಕೆಲಸಗಳನ್ನು ಯಾರೂ ಮಾಡುತ್ತಿಲ್ಲ. ಅದರ ಬದಲಾಗಿ ಚಿಂತನೆಗಳನ್ನು ಮಾಡಿದಂತಹ ವ್ಯಕ್ತಿಯು ಮುಖ್ಯವಾಗುತ್ತಾನೆ. ಇಂತಹ ಪ್ರಕ್ರಿಯೆಯು ರಾಷ್ಟ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ.

ವ್ಯಕ್ತಿಯನ್ನು ಮುಖ್ಯಭೂಮಿಕೆಯಲ್ಲಿ ಕೂರಿಸುವ ಬದಲು ವ್ಯಕ್ತಿಯ ಅಭಿವೃದ್ಧಿಪರವಾದಂತಹ ಚಿಂತನೆಗಳನ್ನು ಮಾತ್ರ ನಾವು ಮುಂದಿಟ್ಟುಕೊಂಡು ಸಾಗಿದರೆ ರಾಷ್ಟ್ರವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಮತ್ತು ಆತನ ಚಿಂತನೆಗಳೆರಡೂ ಕೂಡಾ ಮುಖ್ಯವಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಧಿಕಾರದಾಹಿ ರಾಜಕೀಯವ್ಯವಸ್ಥೆ. ಒಬ್ಬ ವ್ಯಕ್ತಿಗೆ ಅಧಿಕಾರವಿದ್ದರೆ ಮಾತ್ರ ಆತನ ಚಿಂತನೆಗಳಿಗೆ ಬೆಲೆ ನೀಡುವಂತಹ ಕಾಲಘಟ್ಟವಿದಾಗಿದೆ.

ಇತ್ತೀಚಿನ ದಿನಗಳ ಇಂತಹ ಕೆಟ್ಟ ವ್ಯವಸ್ಥೆ ಹಾಗೂ ನಮ್ಮ ಯುವಜನಾಂಗದ ವಿಲಾಸೀ ಜೀವನವನ್ನು ತ್ಯಜಿಸಿ ನಾವು ರಾಷ್ಟ್ರದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸುವುದು ಅನಿವಾರ್ಯವಾಗಿದೆ. ಯುವಜನಾಂಗ ಮನಸ್ಸು ಮಾಡಿದಲ್ಲಿ ನಮ್ಮ ರಾಷ್ಟ್ರದ ಅಭಿವೃದ್ಧಿ ಪಥ ಅತ್ಯಂತ ವೇಗವಾಗಿ ಸಾಗುವುದರಲ್ಲಿ ಸಂಶಯವೇ ಇಲ್ಲ.

ಭರತ್ ಭಾರದ್ವಾಜ್. ಹೆಚ್ ಎಸ್

ದ್ವಿತೀಯ ಎಂ ಸಿ ಜೆ

ಎಸ್ ಡಿ ಎಂ ಕಾಲೇಜು, ಉಜಿರೆ

bharath94smg@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post