ಸಾಮಾನ್ಯವಾಗಿ ನಮ್ಮೆಲ್ಲರಿಗೂ ಹ್ಯಾಪಿ ಎಂಡಿಂಗ್ ಇಷ್ಟವಾಗುತ್ತದೆ. ಸಣ್ಣ ಕಥೆ ಇರಲಿ; ಕಾದಂಬರಿ ಇರಲಿ ಅಥವಾ ಸಿನಿಮಾ ಇರಲಿ ಹ್ಯಾಪಿ ಎಂಡಿಂಗ್ ಆದಲ್ಲಿ ಏನೋ ಒಂದು ಸಮಾಧಾನ. ಒಂದು ವೇಳೆ ದುರಂತದಲ್ಲಿ ಕೊನೆಗೊಂಡರೆ ಎಷ್ಟೋ ಸಮಯದವರೆಗೆ ‘ಆದರೂ ಹೀಗಾಗಬಾರದಿತ್ತು’ ಎನ್ನುವ ಭಾವ ಮನಸನ್ನ ಕೊರೆಯುತ್ತಿರುತ್ತದೆ. ಆದರೆ ಇದೆಲ್ಲ ಕೇವಲ ಒಂದು ಕಥೆಯ ಅಥವಾ ಸನ್ನಿವೇಶದ ಕೊನೆಯಾಗಿರುತ್ತದೆ. ಇಡೀ ಬದುಕಿನದಲ್ಲ. ಹಾಗಿದ್ದಲ್ಲಿ ಬದುಕಿನ ಹ್ಯಾಪಿ ಎಂಡಿಂಗ್ ಹೇಗಿರುತ್ತದೆ? ಬದುಕು ಕೊನೆಗೊಳ್ಳುವುದು ಸಾವಿನಲ್ಲಿ. ಸಾವು ಎಂದೂ ಸಂತಸಪಡುವಂತದ್ದಲ್ಲ. ಸಾವು ಬಂದಲ್ಲೆಲ್ಲಾ ದುಃಖವನ್ನೇ ತರುತ್ತದೆ. ಹಾಗಾದರೆ ಬದುಕಿಗೆ ಹ್ಯಾಪಿ ಎಂಡಿಂಗ್ ಎನ್ನುವುದು ಇರುವುದೇ ಇಲ್ಲವಾ?
ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಿದೆ. ಪ್ರಶ್ನೆಗಳು ಸುಮ್ಮನೆ ಅಂತೂ ಹುಟ್ಟಿಕೊಳ್ಳುವುದಿಲ್ಲ ಅದಕ್ಕೆ ಪೂರಕವಾಗುವಂತಹ ವಿಚಾರ ಅಥವಾ ಸನ್ನಿವೇಶ ಇರಲೇಬೇಕು. ಈ ಪ್ರಶ್ನೆಗೆ ಪೂರಕವಾಗಿದ್ದು ನಮ್ಮೆಲ್ಲರಂತೆ ಹ್ಯಾಪಿ ಎಂಡಿಂಗ್’ನ್ನು ಇಷ್ಟಪಡುವ ಒಬ್ಬ ನ್ಯೂರೋಸರ್ಜನ್’ನ ಬದುಕು…!! ಆತನ ಹೆಸರು ಪಾಲ್ ಕಲಾನಿಧಿ.
ಅಂದು ಪಾಲ್ ಸರ್ಜರಿಯಲ್ಲಿ ತೊಡಗಿಕೊಂಡಿದ್ದ. ಸಾಕಷ್ಟು ಆಯಾಸಗೊಂಡಿದ್ದಲ್ಲದೇ ಬೆನ್ನು ಹಾಗೂ ಭುಜದಲ್ಲಿ ಅತೀವ ನೋವಿದ್ದರೂ ಕೂಡ ಆ ಸರ್ಜರಿಯನ್ನ ಯಾವುದೇ ತೊಂದರೆಯಾಗದಂತೆ ಪೂರ್ಣಗೊಳಿಸುವಲ್ಲಿ ನಿರತನಾಗಿದ್ದ. ನರಗಳಿಗೆ ಸಂಬಂಧಪಟ್ಟಿದ್ದರಿಂದ ತುಂಬಾ ಸೂಕ್ಷ್ಮವಾಗಿ ತನ್ನ ಕೆಲಸವನ್ನ ಮಾಡಿ ಮುಗಿಸಿ ರಿಪೋರ್ಟ್ ಬರೆಯುವ ಕೆಲಸದಲ್ಲಿ ಮಗ್ನನಾದ. ಪಕ್ಕದಲ್ಲಿದ್ದ ನರ್ಸ್ ಈತನ ಜೊತೆ ಮೊದಲ ಬಾರಿ ಕೆಲಸ ಮಾಡಿದ್ದಳು. ‘ಡಾಕ್ಟರ್ ನಿಮಗೆ ಈ ವೀಕೆಂಡ್ ಡ್ಯೂಟಿ ಇದೆಯ?” ಎಂದಳು. ‘ಇಲ್ಲ..” ಎಂದ ಪಾಲ್ ‘ಬಹುಶಃ ಇನ್ನೆಂದಿಗೂ ಇಲ್ಲ’ ಎಂದು ಮನದಲ್ಲೇ ಅಂದುಕೊಳ್ಳುತ್ತ. ‘ಇವತ್ತು ಬೇರೆ ಯಾವುದಾದರೂ ಸರ್ಜರಿ ಇದೆಯಾ?” ಎಂದಳು. “ಇಲ್ಲ..” ಮತ್ತೆ ಅದೇ ಭಾವ..! “ಓಹ್… ಈ ವಾರಾಂತ್ಯ ಹಾಗಿದ್ದರೆ ಹ್ಯಾಪಿ ಎಂಡಿಂಗ್. ಐ ಲೈಕ್ ಹ್ಯಾಪಿ ಎಂಡಿಂಗ್.. ನೀವು?” ಎಂದಳು. ಒಂದು ಕ್ಷಣ ಸುಮ್ಮನಿದ್ದು “ನನಗೂ ಹ್ಯಾಪಿ ಎಂಡಿಂಗ್ ಇಷ್ಟ” ಎಂದು ಹೇಳಿ ಅಲ್ಲಿಂದ ಹೊರಟಿದ್ದ.
ಪಾಲ್ ಹಿಂದಿನ ದಿನವಷ್ಟೇ ಸಿ.ಟಿ. ಸ್ಕ್ಯಾನ್ ಮಾಡಿಸಿಕೊಂಡಿದ್ದ. ಆತ ಸ್ವತಃ ಒಬ್ಬ ಡಾಕ್ಟರ್ ತನ್ನ ರಿಪೋರ್ಟ್’ನ್ನು ತಾನೆ ನೋಡಿ; ಸ್ವಲ್ಪ ಸಣ್ಣ ಪ್ರಮಾಣದಲ್ಲಿದ್ದ ಟ್ಯೂಮರ್ ಇದೀಗ ಪೂರ್ಣಚಂದ್ರನಂತೆ ದೊಡ್ದದಾಗಿ ಬೆಳೆದಿರುವುದನ್ನ ಗಮನಿಸಿದ್ದ. ಆತನಿಗೆ ಗೊತ್ತಿತ್ತು ಈ ಬಾರಿ ಚಿಕಿತ್ಸೆ ಇನ್ನೂ ಕ್ಲಿಷ್ಟವಾಗಲಿದೆ ಎಂದು. ಆತನಿಗೆ ಇನ್ನು ಹೆಚ್ಚು ದಿನಗಳು ತನಗೆ ಉಳಿದಿಲ್ಲವೆನ್ನುವುದು ಕೂಡ ಗೊತ್ತಿತ್ತು..!! ತನ್ನ ಕ್ಯಾಬಿನ್’ಗೆ ಬಂದು ತನ್ನ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡತೊಡಗಿದ್ದ. ಇದೊಂದು ರೀತಿ ಆತನ ಎರಡನೇ ಮನೆಯಾಗಿತ್ತು. ಎಷ್ಟೋ ದಿನ ಸರ್ಜರಿಗಳಿದ್ದಾಗ ರಾತ್ರಿಯೆಲ್ಲ ಅಲ್ಲೇ ಇರಬೇಕಾಗುತ್ತಿತ್ತು. ಬೆಳಿಗ್ಗೆ ಮತ್ತೆ ಇನ್ನಷ್ಟು ಕೇಸ್’ಗಳು. ಹಾಗಾಗಿ ಆತನ ಕ್ಯಾಬಿನ್’ನಲ್ಲಿ ಟೂತ್’ಬ್ರಶ್ ಹಾಗೂ ಸಾಬೂನಿನಿಂದ ಹಿಡಿದು ಎಲ್ಲ ವಸ್ತುಗಳಿದ್ದವು. ಈಗದೆಲ್ಲವನ್ನೂ ಸೇರಿಸಿ ತನ್ನ ಕ್ಯಾಬಿನ್ ಖಾಲಿ ಮಾಡಿ ಹೊರಟಿದ್ದ. ಹೊರ ಬಂದು ಕಾರಿನಲ್ಲಿ ಕುಳಿತವನ ಕಣ್ಣಂಚು ಒದ್ದೆಯಾಗಿತ್ತು. ಆ ದಿನ ಒಬ್ಬ ಡಾಕ್ಟರ್ ಆಗಿ ಆತನ ಕೊನೆಯದಿನವಾಗಿತ್ತು.
‘ಡಾಕ್ಟರ್ಸ್ ಆರ್ ದ ವರ್ಸ್ಟ್ ಪೇಷಂಟ್ಸ್’ ಎನ್ನುತ್ತಾರೆ. ನಿಜ.. ಡಾಕ್ಟರ್ ಅಲ್ಲದ ನಮ್ಮಂತವರಿಗೆ ಖಾಯಿಲೆ ಬಂದಾಗ ಡಾಕ್ಟರ್ ಹೇಳುವುದಷ್ಟೇ ಅರ್ಥವಾಗುವುದು. ಬಾಕಿ ಇನ್ನೇನೂ ಅರ್ಥವಾಗುವುದಿಲ್ಲ. ಹಾಗಾಗಿ ಎಲ್ಲೋ ಒಂದು ಕಡೆ ಒಂದಿಷ್ಟು ಭರವಸೆಯನ್ನು; ಒಂದಿಷ್ಟು ಆಸೆಗಳನ್ನು ಇಟ್ಟುಕೊಳ್ಳುತ್ತೇವೆ. ಯಾಕೆಂದರೆ ನಮಗದರ ತೀವ್ರತೆಯಾಗಲಿ ಅಥವಾ ಮುಂದಾಗುವ ಪರಿಣಾಮಗಳ ಬಗ್ಗೆಯಾಗಲಿ ಅರಿವಿರುವುದಿಲ್ಲ. ಆ ಭರವಸೆಗಳು ಒಂದಷ್ಟು ಕೆಲಸ ಕೂಡ ಮಾಡಿ ಬಿಡುತ್ತದೆ. ಆದರೆ ಡಾಕ್ಟರ್’ಗಳಿಗೆ ಎಲ್ಲವೂ ತಿಳಿದಿರುತ್ತದೆ. ಖಾಯಿಲೆ ಉಂಟಾಗಿದೆ ಎಂದಾಗ ತಮ್ಮ ದೇಹದಲ್ಲಾಗುವ ಪ್ರತಿಯೊಂದು ಪ್ರಕ್ರಿಯೆ ಗೊತ್ತಿರುತ್ತದೆ. ಅದರಿಂದಾಗುವ ಪರಿಣಾಮಗಳು ಕೂಡ ತಿಳಿದಿರುತ್ತದೆ. ಆ ಸ್ಪಷ್ಟತೆ; ನಿಷ್ಠುರತೆ ಅವರಿಗೆ ಭರವಸೆಗಳನ್ನ ಇಟ್ಟುಕೊಳ್ಳುವ ಅವಕಾಶವನ್ನೇ ನೀಡುವುದಿಲ್ಲವೇನೋ ಬಹುಶಃ…?!!
ಪಾಲ್’ನ ಮಾತುಗಳನ್ನ ಕೇಳಿ “ನಾನು ಅಳೆದು ತೂಗಿ ಯೋಜಿಸಿದ ಭವಿಷ್ಯ ಇನ್ನಿಲ್ಲವಾಗಿದೆ. ನನ್ನ ವೃತ್ತಿಯಲ್ಲಿ ಸಾವು ಎನ್ನುವುದು ಅಪರಿಚಿತವೇನಲ್ಲ. ಪ್ರತಿ ದಿನ ನೋಡುತ್ತಿರುತ್ತೇನೆ. ಆದರೆ ಈಗ ಸಾವು ವೈಯಕ್ತಿಕ ಭೇಟಿ ನೀಡುತ್ತಿದೆ. ನನ್ನೆದುರು ಬಂದು ನಿಂತಿದೆ. ಆದರೆ ಸ್ವಲ್ಪವೂ ಪರಿಚಿತ ಎನಿಸುತ್ತಿಲ್ಲ. ನಾನು ನೋಡಿದ ಎಷ್ಟೋ ರೋಗಿಗಳ ಹೆಜ್ಜೆ ಗುರುತು ಈ ದಾರಿಯಲ್ಲಿರುತ್ತದೆ ಎಂದು ಭಾವಿಸಿದ್ದೆ ಆದರಿದು ಸಂಪೂರ್ಣವಾಗಿ ಖಾಲಿ..” ಎಷ್ಟೋ ಸಾವುಗಳನ್ನ ನಾವು ನೋಡಿದ್ದರೂ ವೈಯಕ್ತಿಕವಾಗಿ ನಮ್ಮ ಮುಂದೆಯೇ ಬಂದಾಗ ಸಾವು ಅಪರಿಚಿತವೆನಿಸದೇ ಇರದು. ಪಾಲ್ ಕೂಡ ಅಂತಹದೇ ಮಜಲಿನಲ್ಲಿದ್ದ. ಕಷ್ಟ ಪಟ್ಟು ಡಾಕ್ಟರ್ ಆಗಿದ್ದ ಇದೀಗ ಅನಿರೀಕ್ಷಿತವಾಗಿ ರೋಗಿಯಾಗಿದ್ದ. ಆತನ ಪಾಲಿಗೆ ಭವಿಷ್ಯ ಮರೀಚಿಕೆಯಾಗಿತ್ತು. ಆತನ ಯೋಜನೆಗಳೆಲ್ಲ ತಲೆಕೆಳಗಾಗಿದ್ದವು. ಆದರೇನು ಆತನಿಗೆ ಹ್ಯಾಪಿ ಎಂಡಿಂಗ್ ಇಷ್ಟವಾಗಿತ್ತು…!!!
ಕ್ಯಾನ್ಸರ್ ಎಂದು ತಿಳಿದ ತಕ್ಷಣವೇ ತನ್ನ ಪಾಲಿಗೆ ಉಳಿದಿರುವ ದಿನಗಳನ್ನ ತನ್ನ ಹೆಂಡತಿಗಾಗಿ ಮೀಸಲಿಡಲು ನಿರ್ಧರಿಸಿದ್ದ. ಆತ ತನ್ನ ವೃತ್ತಿಯಲ್ಲಿ ಎಷ್ಟು ಮುಳುಗಿ ಹೋಗಿದ್ದನೆಂದರೆ ತನ್ನ ಪತ್ನಿ ಲೂಸಿಗೆ ಸಮಯವೇ ಕೊಡಲಾಗುತ್ತಿರಲಿಲ್ಲ. ಎಲ್ಲೋ ಒಂದು ಕಡೆ ಅದು ಆತನ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಈಗ ಆತ ಅದನ್ನೆಲ್ಲ ಸರಿಪಡಿಸಬಯಸಿದ್ದ. ತನ್ನ ಗೆಳೆಯರೊಂದಿಗೆ ಬದುಕಿನ ಬಗ್ಗೆ ಅರ್ಥಪೂರ್ಣವಾಗಿ ಬದುಕುವ ಬಗ್ಗೆ ಚರ್ಚಿಸಲಾರಂಭಿಸಿದ್ದ. ಅದರ ಜೊತೆ ಜೊತೆಗೆ ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದ. ಪಾಲ್ ತಂದೆಯಾಗಬಯಸಿದ್ದ. ಈ ನಿರ್ಧಾರ ಆತನ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಲಿದೆ ಎಂದು ಪತ್ನಿ ಲೂಸಿಗೂ ತಿಳಿದಿತ್ತು. ಪತ್ನಿಯೊಂದಿಗೆ ಮಗುವನ್ನು ಕೂಡ ಬಿಟ್ಟು ಹೋಗುವ ದುಃಖ ಭರಿಸುವುದು ಆತನಿಗೆ ಕಷ್ಟವಾಗಬಹುದು ಎಂಬ ಅಳುಕಿತ್ತು. ಆದರೆ ಆಕೆಯೂ ಆತನ ಆ ದೃಢ ನಿರ್ಧಾರದೊಂದಿಗೆ ಜೊತೆಯಾಗಿ ನಿಂತಳು…!!!
ತಿಂಗಳುಗಳು ಉರುಳಿದಂತೆ ಆತನ ಸ್ಥಿತಿ ಕಷ್ಟದಾಯಕವಾಗತೊಡಗಿತ್ತು. ಆದರೆ ಈ ಮಧ್ಯೆ ಇನ್ನೊಂದು ಜೀವ ಕೂಡ ಅರಳುವುದಕ್ಕೆ ಆರಂಭಗೊಂಡಿತ್ತು. ಇದರ ನಡುವೆ ಪಾಲ್’ಗೆ ಕಿಡ್ನಿ ಫೇಲ್ಯೂರ್ ಉಂಟಾಗುತ್ತದೆ. ಆತನಿಗೆ ಗೊತ್ತಿತ್ತು ತನಗೆ ಏನೆಲ್ಲಾ ಸಮಸ್ಯೆಗಳುಂಟಾಗಬಹುದು ಎಂದು. ದಿನೇ ದಿನೇ ಆತನ ಆರೋಗ್ಯ ಕ್ಷೀಣಿಸುತ್ತಿತ್ತು. ಆತನ ಪತ್ನಿಯನ್ನು ಲೇಬರ್ ವಾರ್ಡ್’ಗೆ ಕರೆದುಕೊಂಡು ಹೋದಾಗ ಪಾಲ್ ಕೂಡ ಆಕೆಯ ಜೊತೆ ಇರಬಯಸಿದ್ದ. ಪಾಲ್’ನನ್ನು ವೀಲ್ಚೇರಿನಲ್ಲಿ ವಾರ್ಡ್ ಒಳಗೆ ಕರೆದೊಯ್ಯಲಾಗಿತ್ತು. ಅಲ್ಲೇ ಪಕ್ಕದ ಬೆಡ್’ನಲ್ಲಿ ಪಾಲ್ ಮಲಗಿದ್ದ. ನರ್ಸ್ ಮಗು ಹುಟ್ಟಿದ ತಕ್ಷಣ ಆತನ ಕೈಯ್ಯಲಿರಿಸಿದ್ದಳು. ಒಂದು ಕೈಯ್ಯಲ್ಲಿ ಆಗ ತಾನೆ ಹುಟ್ಟಿದ ತನ್ನ ಮಗಳು ಇನ್ನೊಂದು ಕೈಯ್ಯಲ್ಲಿ ಲೂಸಿಯ ಕೈಯ್ಯನ್ನ ಹಿಡಿದಿದ್ದ ಆ ಕ್ಷಣ ಆತನ ಬದುಕಿನ ಅತ್ಯದ್ಬುತ ಕ್ಷಣಗಳಲ್ಲಿ ಒಂದಾಗಿತ್ತು. ಹಿಂದೆಂದೂ ಅನುಭವಿಸದಂತಹ ಸಂತಸ ಅಂದು ಆತನ ಪಾಲಿಗೆ ದಕ್ಕಿತ್ತು. ಕ್ಯಾನ್ಸರ್ ಆತನನ್ನ ಸಾವಿನೆಡೆ ಕರೆದೊಯ್ಯುತ್ತಿತ್ತು ಆದರೆ ಒಂದು ಹೊಸ ಬದುಕು ಆತನ ಮಡಿಲಲ್ಲಿ ಮುಗುಳ್ನಗೆ ಬೀರುತ್ತಿತ್ತು…!!! ಕ್ಯಾನ್ಸರ್ ಆತನ ಸ್ಥಿತಿಯನ್ನು ದಿನೇ ದಿನೇ ಕಠಿಣಗೊಳಿಸುತ್ತಿತ್ತು. ಆದರೆ ತನ್ನ ಮಗಳ ಲಾಲನೆ ಪಾಲನೆಯ ಮುಂದೆ ಅವೆಲ್ಲ ಗೌಣವಾಗಿ ಬಿಟ್ಟಿತ್ತು. ತನ್ನ ಮಗು ಪುಟ್ಟ ಬೆರಳುಗಳಿಂದ ಈತನ ಬೆರಳನ್ನು ಗಟ್ಟಿಯಾಗಿ ಹಿಡಿದದ್ದು; ತನ್ನ ಮಗುವಿನ ಮೊದಲ ನಗು; ತನ್ನ ಮಗುವಿನ ಆಟ ಆತನಿಗೆ ಹಿಂದೆಂದೂ ಕಾಣದ ಅದಮ್ಯ ಸಂತೋಷವನ್ನುಂಟು ಮಾಡಿತ್ತು. ಆತನಿಗೆ ತನ್ನ ನಿರ್ಧಾರದ ಮೇಲೆ ತೃಪ್ತಿಯಿತ್ತು..!
ಹ್ಯಾಪಿ ಎಂಡಿಂಗ್’ನ್ನು ಇಷ್ಟಪಡುತ್ತಿದ್ದ ಪಾಲ್ ಈಗಿಲ್ಲ…!! ಕ್ಯಾನ್ಸರ್’ನಿಂದ ಆತನ ಬದುಕು ಕೊನೆಗೊಂಡಿತ್ತು. ಆತನ ಬದುಕಿಗೆ ಹ್ಯಾಪಿ ಎಂಡಿಂಗ್ ಸಿಕ್ಕಿತ್ತಾ..?! ಸುಮ್ಮನೆ ಯೋಚಿಸಿ ನೋಡಿ ನಾವು ಯಾವಾಗಲೂ ನಮ್ಮ ಬದುಕನ್ನ ಹೊಸ ರೀತಿಯಲ್ಲಿ ಹೇಗೆ ಆರಂಭಿಸಬೇಕು ಎಂದು ಯೋಚಿಸುತ್ತಿರುತ್ತೇವೆ. ಒಂದೊಂದು ಹಂತ ದಾಟಿದಾಗಲೂ ಹೊಸ ಹಂತವನ್ನು ಹೇಗೆ ಆರಂಭಿಸಬೇಕೆಂದು ಯೋಜನೆ ಹಾಕಿಕೊಳ್ಳುತ್ತೇವೆ. ಆದರೆ ನಮ್ಮ ಬದುಕನ್ನ ಹೇಗೆ ಕೊನೆಗೊಳಿಸಬೇಕು ಅಂತ ಯಾರೂ ಯೋಚಿಸುವುದೇ ಇಲ್ಲ. ಬದುಕು ಒಂದು ದಿನ ಕೊನೆಗೊಳ್ಳುವುದು ಎಂಬುದನ್ನ ಒಪ್ಪಿಕೊಳ್ಳುವುದಕ್ಕೆ ತಯಾರಿರುವುದಿಲ್ಲ. ಅದರ ಮಧ್ಯೆ ಇದನ್ನೆಲ್ಲಾ ಯೋಚಿಸುವುದು ಹೇಗೆ? ಆದರೆ ಪಾಲ್ ಹಾಗಲ್ಲ. ತನ್ನ ಬದುಕು ಕೊನೆಗೊಳ್ಳುತ್ತಿದೆ ಎನ್ನುವಾಗ ಅದನ್ನು ಎಷ್ಟು ಅರ್ಥಪೂರ್ಣವಾಗಿ ಕೊನೆಗೊಳಿಸಬಹುದು ಎಂದು ಯೋಚಿಸುತ್ತಾನೆ. ಕ್ಯಾನ್ಸರ್ ತನ್ನ ಬದುಕನ್ನ ನೋವಿನಲ್ಲಿ ಕೊನೆಗೊಳಿಸಬಲ್ಲದು ಎಂದಾಗಲೇ ಆತ ತನ್ನ ಕೊನೆಯ ದಿನಗಳನ್ನ ಅತ್ಯಂತ ಸಂತಸದ ಕ್ಷಣಗಳಿಂದ ಭರಿಸಬೇಕು ಎಂದು ನಿರ್ಧರಿಸಿದ್ದು. ಯಾಕೆಂದರೆ ಆತನಿಗೆ ಹ್ಯಾಪಿ ಎಂಡಿಂಗ್ ತುಂಬಾ ಇಷ್ಟವಾಗಿತ್ತು..! ಅರ್ಥಪೂರ್ಣ ಬದುಕಿನ ಕೊನೆ ಕೂಡ ಅರ್ಥಪೂರ್ಣವೇ ಆಗಿರುತ್ತದೆ ಎಂದು ಪಾಲ್ ತೋರಿಸಿದ್ದಾನೆ. ನಮ್ಮ ಬದುಕಿನ ಕೊನೆಯನ್ನು ನಾವು ಹ್ಯಾಪಿ ಎಂಡಿಂಗ್ ಮಾಡಿಕೊಳ್ಳುತ್ತೇವಾ ಇಲ್ಲವಾ ಎನ್ನುವುದು ಈಗ ನಮಗೆ ಬಿಟ್ಟಿದ್ದು.
Facebook ಕಾಮೆಂಟ್ಸ್