X

ನಿಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರವನ್ನು ಮಣ್ಣು ಮಾಡಬೇಡಿ

“ಭಾರತ ಎಂಬ ಶಾಂತ ಸಾಗರದಲ್ಲಿ ಭೀಕರ ಅಲೆಯ ಸದ್ದು. ಎತ್ತ ನೋಡಿದರೂ ಏನೂ ಕಾಣಿಸುತ್ತಿಲ್ಲ ! ರಣಹದ್ದುಗಳಿಗೆ ಆಹಾರದ ಸಮಸ್ಯೆ, ಆದರೂ ಸಂತೋಷದಿಂದ ಇದ್ದಾರೆ ಭಾರತಾಂಬೆಯ ಮಕ್ಕಳು.” ಯಾಕೆ ನಾವು ದುಃಖಿಸಬೇಕು? ಈ ದೇಶದ ಅನ್ನ ನೀರು ತಿಂದ ಈ ದೇಶದ ಒಳಿತಿಗಾಗಿ ಪ್ರತಿಯೊಬ್ಬ ಭಾರತೀಯನೂ ಚಿಂತಿಸುವ ಅಗತ್ಯ ಬಂದೊದಗಿತ್ತು. ಆದರೆ ಇದೀಗ ಉಂಡ ಮನೆಗೆ ದ್ರೋಹ ಬಗೆದು ದುಡ್ಡಿನ ಹಾಸಿಗೆ ಮೇಲೆ ಮಲಗಿ ಕನಸು ಕಾಣುತ್ತ, ನಿದ್ರೆ ಮಾಡುತ್ತಿದ್ದವರು ಕಣ್ಣಿಗೆ ಎಣ್ಣೆ ಬಿಟ್ಟು ಕುಳಿತಿಕೊಳ್ಳುವಂತಹ ಸ್ಥಿತಿಗೆ ಬಂದಿದ್ದಾರೆ. ಹಾಗಾದರೆ ಅಂತವರ ತಿರುಕನ ಕನಸಿಗೆ ಭಂಗ ಬಂದಿದೆ ಎಂದರ್ಥವಲ್ಲವೇ ? ಹೌದು ಅಂದು ಇಡಿ ದೇಶವೇ ಶಾಂತವಾಗಿತ್ತು. ಇತ್ತ ಕಾಶ್ಮೀರದ ಗಲಾಟೆಯು ಒಂದು ಹಂತಕ್ಕೆ ಬಂದಿತ್ತು. ಪಾಕಿಸ್ತಾನ ಅಲ್ಲಿ ಇಲ್ಲಿ ಸ್ವಲ್ಪ ತನ್ನ ನರಿಬುದ್ಧಿಯನ್ನು ತೋರಿಸುತ್ತಿದ್ದರೂ ಕೂಡಾ ಸೈನಿಕರು ಸಮರ್ಥವಾಗಿ ಎದುರಿಸುತ್ತಿದ್ದರು. ಮಾದ್ಯಮಗಳು ಯಾವುದೇ ಸುದ್ದಿಯಿಲ್ಲದೇ ಟಿಪ್ಪು ಜಯಂತಿಯ ವಿಷಯವನ್ನು ಇಟ್ಟುಕೊಂಡು ಚರ್ಚೆಮಾಡುತ್ತಿದ್ದುವು. ಇದೆ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲು ನಿಂತಾಗ ಸಾಮಾನ್ಯವಾಗಿ ಎಲ್ಲಾ ಚಾನಲ್‍ಗಳು ಕವರ್ ಮಾಡಿದವು. ಕೆಲವೇ ಕ್ಷಣಗಳಲ್ಲಿ ದೇಶವನ್ನು ಬೆಚ್ಚಿ  ಬೀಳಿಸಿ ಬಿಟ್ಟಿದ್ದರು. ಯಾವುದೋ ಒಂದು ಬಾಂಬ್ ಹಾಕಿ ದಾಳಿ ಮಾಡಿದ್ದಾರೆ ಅಂತ ಭಾವಿಸಬೇಡಿ. ದ್ರೋಹ ಬಗೆದವರ ಪಾಲಿಗೆ ಇದು ಒಂದು ತರದ ಬಾಂಬ್ ಆಗಿತ್ತು. ಕೇಂದ್ರ ಸರ್ಕಾರ ಇನ್ನು ಮುಂದೆ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಸುದ್ದಿಯನ್ನು ಹೇಳಿ ಭ್ರಷ್ಟಾಚಾರ ಮತ್ತು ಕಾಳಧನಿಕರಿಗೆ ಸಿಂಹ ಸ್ವಪ್ನವಾದರು.

ಯಾರು ನಮ್ಮನ್ನು ಈ ದೇಶದಲ್ಲಿ ಹೇಳುವವರು, ಕೇಳುವವರು ಇಲ್ಲ ನಾವೇ ಸಾಮ್ರಾಜ್ಯದ ಅಧಿಪತಿಗಳು ನಾವು ಆಡಿದ್ದೇ ಆಟ ಮಾಡಿದ್ದೆ ಪಾಠ ಎಂದವರು ಇಂದು ನೀರಿನಲ್ಲಿ ಕುಳಿತರೂ ಬೆವರದೇ ಇರಲು ಸಾಧ್ಯವಾಗದಂತಹ ಸ್ಥಿತಿಗೆ ಬಂದಿದ್ದಾರೆ. ಸಾವಿರಾರು ಕೋಟಿ ಹಣವನ್ನು ಗಳಿಸಿ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟದೇ, ತಮ್ಮ ಸಂಪತ್ತನ್ನು ಘೋಷಣೆ ಮಾಡಿಕೊಳ್ಳಿ ಅಂದರೂ ಘೋಷಣೆ ಮಾಡದೆ ನಿಶ್ಚಿಂತೆಯಿಂದ ರಾಜರಾಗಿ ತಿರುಗಾಡುತ್ತಿರುವವರು ಇಷ್ಟು ಬೇಗ ಜವಾನನಾಗುತ್ತೇನೆ ಎಂದು ಅಂದುಕೊಂಡಿರಲಿಕ್ಕಿಲ್ಲ. ಯಾಕೆ ಅಂದುಕೊಳ್ಳಬೇಕು? ಈ ದೇಶವನ್ನು ಆಳಿದವರೆ ಇಂದು ರಾಶಿ ರಾಶಿ ಹಣವನ್ನು ಗಳಿಸಿ, ಭ್ರಷ್ಟಾಚಾರ ಮಾಡಿ ದೇಶದ ಮಾನ ಮರ್ಯಾದೆಯನ್ನು ಮೂರುಕಾಸಿಗೆ ಮಾರಿದ್ದು ಅಲ್ಲದೇ ತಮ್ಮ ಸಂಬಧಿಕರಿಗೂ ಮಕ್ಕಳಿಗೂ ಜೀವನ ಪೂರ್ತಿ ಕುಳಿತು ತಿಂದರೂ ಖಾಲಿ ಮಾಡಲು ಸಾಧ್ಯವಿಲ. ಅಷ್ಟು ಹಣವನ್ನು ಗಳಿಸಿಕೊಂಡವರಿಗೆ  ಯಾರು ಏನು ಮಾಡಿದರೆ ಇವರಿಗೇನು? ‘ಹೊಟ್ಟೆಗೆ ಹಿಟ್ಟು ಇದ್ದರೆ ಸಾಕು ಜುಟ್ಟಿಗೆ ಯಾಕೆ ಮಲ್ಲಿಗೆ ಹೂವು ಅಲ್ವಾ’. ಹೌದು ಸ್ವಾಮಿ ಸುಮಾರು 70 ವರ್ಷ ದೇಶವಾಳಿದ ಯಾವ ಒಬ್ಬ ವ್ಯಕ್ತಿಯೂ ದೇಶದ ಒಳಿತಿಗೆ ಶ್ರಮಿಸಿದ ಉದಾಹರಣೆಗಳೆ ಇಲ್ಲಾ, ಕೆಲವರು ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯ ಗಾಳಿಯನ್ನು ಬೀಸಿದರು ಅವರಿಗೆ ಯಾರು ಸಹಕರಿಸಲೇ ಇಲ್ಲ. ಇದು ಭಾರತದ ವಾಸ್ತವ, ಅವರು ಮುಂದೆ ಅಧಿಕಾರಕ್ಕೂ ಬರಲೇ ಇಲ್ಲ ಇದು ದೊಡ್ಡ ದುರಂತದ ಸಂಗತಿ.

ಆದರೆ ಮೋದಿ ಈ ದೇಶದಲ್ಲಿ ಬದಲಾವಣೆ ತಂದೇ ತರುತ್ತೇನೆ ವಿಶ್ವದ ಮುಂದೆ ನಮ್ಮ ಶಕ್ತಿ ಏನ್ನು ಎನ್ನುವುದು ಮನವರಿಕೆ ಮಾಡುತ್ತೇನೆ, ಎಂದಾಗ ಚುನಾವಣೆಯ ರ್ಯಾಲಿಯಲ್ಲಿ ಬಾಯಿಗೆ ಬಂದಹಾಗೆ ಮಾತನಾಡಿದ್ದೀರಿ. ಹಾಗಾದರೆ ನನ್ನದು ಒಂದು ಪ್ರಶ್ನೆ ತುರ್ತು ಪರಿಸ್ಥಿತಿ ಅಂತಹ ಕರಾಳ ದಿನವನ್ನೇ ಈ ದೇಶಕ್ಕೆ ನೀಡಿದ್ದೀರಿ ಸ್ವಾಮಿ? ಹಾಗಾದರೆ ಯಾಕೆ ನಿಮ್ಮಿಂದ ಇಂತಹ ಒಂದು ನಿರ್ಧಾರವನ್ನು ತೇಗೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ? ನಿಮಗೆ ಲಾಭವಿದೆ ಎಂದರೆ ನೀವು ಎಂತಹ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳುವುದಕ್ಕೆ ಸಿದ್ದ! ಆದರೆ ದೇಶದ ಒಳಿತಿಗಾಗಿ ಇಂತಹ ಒಂದು ನಿರ್ಧಾರವನ್ನು ತೇಗೆದುಕೊಂಡರೆ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಿರಲ್ಲ ಯಾಕೆ? ನಿಮಗೆ ಈ ದೇಶದ ಬಗ್ಗೆ ಕಾಳಜಿ ಇಲ್ಲವ ಈ ದೇಶ ಅಭಿವೃದ್ದಿ ಹೊಂದುವುದು ನಿಮಗೆ ಇಷ್ಷವಿಲ್ಲವೇ. ನೀವು ಅಡುತ್ತಿರುವ ಮಾತುಗಳು, ನಾಟಕಗಳು ನಿಮ್ಮ ಮನಸ್ಥಿತಿಯನ್ನು ತಿಳಿಸುತ್ತದೆ. ನಿಮ್ಮನು ನೋಡುವ ಕಣ್ಣುಗಳು, ಜನಸಮಾನ್ಯರು ನಿಮ್ಮ ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದಾರೆ ಎನ್ನುವುದನ್ನು ಮರೆತು ಬಿಡಿ. ಇಂತಹ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಾಗ ಪ್ರೋತ್ಸಾಹಿಸಿ. ಅದು ನಿಮ್ಮಿಂದ ಸಾಧ್ಯವಿಲ್ಲ ಎಂದಾಗ ಸುಮ್ಮನೇ ಇರಿ. ನಿಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಇಂತಹ ಕ್ರಮ ಅಥವಾ ನಿರ್ಧಾರವನ್ನು ಮಣ್ಣು ಮಾಡಬೇಡಿ.

ಇಂದು ನನಗೆ ಬೇಸರವಾಗುತ್ತಿದೆ. ದೇಶದ ಒಳಿತಿಗಾಗಿ ಶ್ರಮಿಸುತ್ತೇನೆ ಎಂದು ಪ್ರಮಾಣ ಮಾಡಿ ಸಂಸದರಾಗಿದ್ದೀರ, ಶಾಸಕರಾಗಿದ್ದೀರ ಅಥವಾ ಸಮಾಜದಲ್ಲಿ ಯಾವುದೋ ಒಂದು ಒಳ್ಳೆಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ನೀವುಗಳೆ ಇಂದು ವಿರೋಧಿಸಿ ಜನಸಮಾನ್ಯರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಿರಲ್ಲ ಒಮ್ಮೆಯಾದರು ನಾನು ಮಾಡುವುದು ಎಷ್ಟು ಸರಿ ಎಂದು ಯೋಚನೆ ಮಾಡಿದ್ದೀರಾ?. ಇನ್ನು ಮಾಧ್ಯಮಗಳಿಗೆ ಬಂದರೆ ಇವರ ಕಥೆನೆ ಬೇರೆ, ಯಾವುದನ್ನು ತೋರಿಸಿ ಜನರಿಗೆ ಮನವರಿಕೆ ಮಾಡಬೇಕಿತ್ತೊ ಆ ವಿಷಯವನ್ನು ಇಂದು ಮಾಧ್ಯಮಗಳು ತೊರಿಸುತ್ತಿಲ್ಲ. ಬದಲಾಗಿ ಅದರ ವಿರುದ್ಧ ಮಾತನಾಡುತ್ತಿದ್ದೀರ. ಯಾರು ಈ ವಿಷಯವನ್ನು ಕಂಡಿಸುತ್ತಾರೋ ಅವರನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದಿರ. ಒಮ್ಮೆಯಾದರು ಇದರ ಪರಿಣಾಮದ ಕುರಿತು ಮಾಹಿತಿ ನೀಡಿದ್ದಿರಾ? ಸ್ವಲ್ಪ ಹೊತ್ತು ಬ್ಯಾಂಕ್ ಮುಂದೆ ನಿಂತು ಕಾಯುತ್ತಿದ್ದರೆ ಅಂತವರನ್ನು ಹುಡುಕಿ ಬೈಟ್ ಪಡೆಯುತ್ತಿದ್ದಿರಲ್ಲ, ಯಾವುದೋ ವಿಡೀಯೋ ಹಾಕಿ ಈ ಕ್ರಮವನ್ನು ದೂರುತ್ತಿದ್ದಿರಲ್ಲ ನಿಮಗೆ ಏನು ಹೇಳಬೇಕು ನೀವೆ ಹೇಳಿ.

ಇಂದು ದೇಶಕ್ಕೆ ದೇಶವೇ ಈ ಒಂದು ದಿಟ್ಟವಾದ ನಿರ್ಧಾರಕ್ಕೆ ಬೆಂಬಲ ಸೂಚಿಸದೆ ಸಂಸತ್ತಿನಲ್ಲಿ ಬಾವಿಗೆ ಇಳಿದು ಧರಣಿ ಮಾಡುತ್ತಿರ, ನಿಮ್ಮ ಸಂಸದರಿಗೆ ಹಾಗೂ ಪಕ್ಷದವರಿಗೆ ಹೋರಾಟ ಮಾಡಿ ಎನ್ನುಲು ನಾಚಿಕೆಯಾಗಲ್ವ ನಿಮಗೆ. ಯಾರು ಭ್ರಷ್ಟಾಚಾರವನ್ನು ಹೊಗಲಾಡಿಸಬೇಕು ಎಂದು ಅಧಿಕಾರಕ್ಕೆ ಬಂದರೋ ಅವರೆ ಇಂದು ಈ ನಿರ್ಧಾರದಿಂದ ಜನರಿಗೆ ತೊಂದರೆಯಾಗಿದೆ ಮೋದಿ ಇದನ್ನು ವಾಪಸ್ಸು ಪಡೆಯಿರಿ ಅಂತ ಹೇಳುತ್ತಿದ್ದಿರಲ್ಲ ನಿಮಗೆ ಅಧಿಕಾರ ಬಂದ ಮೇಲೆ ಏನಾಯಿತು ಯಾಕೆ ಹೀಗೆ? ಸರ್ಕಾರದ ವಿರುದ್ದ ಹೊರಾಟಕ್ಕೆ ಇಳಿದ ನಿಮಗೆ ಏನಾಗುತ್ತಿದೆ ಅಂತ ನಿಮಗೆ ಗೊತ್ತಾಗಿದೆ. ಆದರು ಅರ್ಥ ಮಾಡಿಕೊಳ್ಳುತ್ತಿಲ್ಲ ಯಾಕೆ? ನಿಮ್ಮ ಬುದ್ಧಿ ಶಕ್ತಿ ಎಲ್ಲಾ ಏನಾಯಿತು. ಕಾಳಧನಿಕರು, ಭ್ರಷ್ಟಾಚಾರಿಗಳು ದೇಶದಲ್ಲಿ ನೆಲೆಸಬೇಕೆ? ಭಯೋತ್ಪಾದಕರಿಗೆ ಇನ್ನು ಎಷ್ಟು ದಿನ ನೆರವಾಗಬೇಕು?! ದೇಶದ ಬಗ್ಗೆಯಾಗಲಿ ಜನರ ಮೇಲಾಗಲಿ ಒಂದು ಚೂರು ಕರುಣೆ ಪ್ರೀತಿ ಇದ್ದಿದ್ದರೆ ಇಂದು ನೀವು ಹೀಗೆ ಮಾಡುತ್ತಿರಲಿಲ್ಲ ಹಾಗೂ ಮಾತನಾಡುತ್ತಿರಲಿಲ್ಲ. ಈ ದೇಶದ ಜನರೂ, ಉದ್ಯಮಿಗಳು, ಅಧಿಕಾರಿಗಳು, ಬ್ಯಾಂಕ್‍ನಲ್ಲಿ ಕೆಲಸವನ್ನು ಮಾಡುತ್ತಿದ್ದವರಿಗೆ ಅವರಿಗೆ ಕಷ್ಟವಾಗುತ್ತಿಲ್ಲ ಬದಲಾಗಿ ಕಷ್ಟವಾಗುತ್ತಿರುವುದು ಕಾಳಧನಿಕರಿಗೆ, ಭ್ರಷ್ಟಚಾರಿಗಳಿಗೆ ಕಷ್ಟವಾಗುತ್ತಿದೆ. ಬ್ಯಾಂಕ್‍ಗೆ ಬರದವರು ಇಂದು ಬಂದು ಸಾಲಿನಲ್ಲಿ ನಿಂತು ಪ್ರಚಾರ ಪಡೆಯುತ್ತಿದ್ದಾರಲ್ಲ ಅವರಿಗೆ ಮಾತ್ರ ಕಷ್ಟವಾಗುತ್ತಿದೆ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅಂತಾರಲ್ಲ ಹಾಗೆ ಕಷ್ಟವಾಗಿರುವುದು ಇವರಿಗಾದರೆ ಹೆಸರು ಮಾತ್ರ ಜನಸಾಮಾನ್ಯರ ಮೇಲೆ. ಇಂತಹ ಕನಿಕರ ತೊರಿಸಿ ಮತಗಳನ್ನು ಸೆಳೆದುಕೊಳ್ಳುವ ತಂತ್ರವಿದ್ದರೆ ಅದನ್ನು ದಯವಿಟ್ಟು ಬಿಟ್ಟು ಬಿಡಿ. ನಿಮ್ಮ ಅಭಿವೃದ್ದಿ ಕಾರ್ಯಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿ. ಅದನ್ನು ಬಿಟ್ಟು ದೇಶದ ಅಭಿವೃದ್ದಿ ಕಾರ್ಯಕ್ಕೆ ದಕ್ಕೆ ತಂದು ಅದರ ವಿರುದ್ಧ ಹೊರಾಡಬೇಡಿ. ನೀವು ಬೆಂಬಲಿಸಲೆ ಬೇಕು ಎಂದು ಹೇಳುತ್ತಿಲ್ಲ. ಇಷ್ಟವಿಲ್ಲ ಅಂದರೆ ಸುಮ್ಮನಿದ್ದು ಈ ದೇಶದ ಅಭಿವೃದ್ದಿಗೆ ಸಹಕರಿಸಿ. ಇದೆ ದೇಶಕ್ಕೆ ನೀವು ನೀಡುವ ದೊಡ್ಡ ಕೊಡುಗೆ ಎಂದು ನಾವು ಭಾವಿಸುತ್ತೇವೆ. ಮೋದಿಯ ವಿರುದ್ಧ ದ್ವೇಷ ಮಾಡಲು ಹೋಗಿ ಅಭಿವೃದ್ದಿಗೆ ಅಡ್ಡಗಾಲು ಹಾಕಬೇಡಿ ನಿಮ್ಮ ಎಲ್ಲ ದ್ವೇಷವನ್ನು  ಚುನಾವಣೆಯಲ್ಲಿ ತೊರಿಸಿ ಅಲ್ಲಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಿ ಬದಲಾಗಿ ಉತ್ತಮ ಯೋಜನೆ, ನಿರ್ಧಾರಗಳ ವಿರುದ್ಧ ನಿಮ್ಮ ಸಮರವನ್ನು ಸಾರುವುದು ಸರಿಯಲ್ಲ ನೆನಪಿಡಿ.

-ಪವನ್.ಎಂ.ಸಿ

ದ್ವಿತೀಯ ಎಂ.ಸಿ.ಜೆ

ಎಸ್.ಡಿ.ಎಂ. ಕಾಲೇಜು ಉಜಿರೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post