ಇದು ಅಚ್ಚರಿಯೇನಲ್ಲ. ಎಲ್ಲರಿಗೂ ಗೊತ್ತಿರುವ ಸತ್ಯ. ವಿಶ್ವದ ವಾಯುಮಾಲಿನ್ಯಕ್ಕೆ ಭಾರತದ ಕೊಡುಗೆಯೂ ಗಣನೀಯ. ಇದಕ್ಕೆ ರಾಷ್ಟ್ರ ರಾಜಧಾನಿಯೂ “ಅತ್ಯುತ್ತಮ’’ ಕೊಡುಗೆ ನೀಡಿದೆ. ಮೊನ್ನೆ ಎಲ್ಲ ಪತ್ರಿಕೆ, ಟಿ.ವಿ.ಗಳಲ್ಲೂ ರಾಜಧಾನಿ ನವದೆಹಲಿಯಲ್ಲಿ ಹೊಗೆಯಂಥ ಧೂಳು ಎದ್ದದ್ದೇ ಸುದ್ದಿ. ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಮಾತು ಹಳತಾಯಿತು. ಈಗ ಬೆಂಕಿ ಇಲ್ಲದಿದ್ದರೂ ಹೊಗೆ ಕಾಣಿಸುತ್ತದೆ ಎಂದಾಯಿತು. ದೆಹಲಿಯಲ್ಲಿ ಕಂಡ ದಟ್ಟ ಧೂಳು ಹಲವು ಜೋಕ್ ಸೃಷ್ಟಿಗೂ ಕಾರಣವಾಯಿತು. ಮೋದಿ, ಕೇಜ್ರಿವಾಲ್ ಸಹಿತ ರಾಜಕಾರಣಿಗಳು ಜೋಕುಗಳಿಗಷ್ಟೇ ತುತ್ತಾದರು. ಅನುಭವಿಸಿದವರು ಮನೆಯಲ್ಲಿ ಎ.ಸಿ. ಹೊಂದಿರದ ಜನಸಾಮಾನ್ಯರು.
ದೆಹಲಿಯಲ್ಲಿ ಹೇಗಿತ್ತು ಎಂಬುದು ಅನುಭವಿಸಿದವರಿಗೆ ಗೊತ್ತು. ಯಾವಾಗಲೋ ಒಮ್ಮೆ ಅಲ್ಲಿಗೆ ಹೋಗುವ ನನ್ನಂಥ ಜನಸಾಮಾನ್ಯರಿಗೇ ಉಸಿರುಗಟ್ಟಿಸುವ ಸ್ಥಿತಿ ಇದೆ ಎಂದಾದರೆ ಅಲ್ಲಿಯೇ ವಾಸಿಸುವವರ ಸ್ಥಿತಿ ಹೇಗಿರಬೇಡ?
ಇನ್ನು ಊಹೆಯೇ ಬೇಡ.ಏಕೆಂದರೆ ದೆಹಲಿಯ ಸ್ಥಿತಿಯಂತೆಯೇ ನಮ್ಮ ಮಹಾನಗರಗಳೂ ಇವೆ. ದೆಹಲಿಯಲ್ಲಿ ಕಂಡುಬರುವಂಥ ದಟ್ಟ ಹೊಗೆ ನಮ್ಮ ಬೆಂಗಳೂರಲ್ಲೂ ಇದೆ. ಮಂಗಳೂರಲ್ಲೂ ಕಡಿಮೆ ಏನಿಲ್ಲ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ದೆಹಲಿಯ ಧೂಳಿನಹೊಗೆ ಹಳ್ಳಿಯ ಬೀದಿಗಳಲ್ಲೂ ಕಾಣಿಸುವ ದಿನ ದೂರವಿಲ್ಲ.
ಹಾಗೆಯೇ ಈ ಲೆಕ್ಕಾಚಾರಗಳ ಕುರಿತು ಕಣ್ಣು ಹಾಯಿಸಿ.
ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ ಮೊದಲ ಐದು ನಗರಗಳ ಪಟ್ಟಿಯಲ್ಲಿ ಭಾರತದ ನಾಲ್ಕು ನಗರಗಳಿಗೂ ಜಾಗವಿದೆ. ವಾಯುಮಾಲಿನ್ಯ ಪ್ರಮಾಣದಲ್ಲಿ ಇರಾನ್‌ನ ಝಬೋಲ್ ಮೊದಲ ಸ್ಥಾನದಲ್ಲಿದ್ದರೆ, ನಂತರ ನಾಲ್ಕು ಸ್ಥಾನಗಳಲ್ಲಿ ಭಾರತದ ಗ್ವಾಲಿಯರ್, ಅಲಹಾಬಾದ್, ಪಟ್ನಾ ಮತ್ತು ರಾಯಪುರಗಳಿವೆ. ಏಳನೇ ಸ್ಥಾನ ದೆಹಲಿಗೆ. ಬೆಂಗಳೂರಿಗೆ 118ನೇ ಸ್ಥಾನ.ಹೊಸ ವರ್ಷಾಚರಣೆ, ದೀಪಾವಳಿಯಂಥ ಸಂದರ್ಭ ಸಾರ್ವತ್ರಿಕವಾಗಿ ಪಟಾಕಿ ಸುಟ್ಟರೆ ಮತ್ತಷ್ಟು ಹೊಗೆ.ಇದರ ನೇರ ಪರಿಣಾಮ ಅನುಭವಿಸುವವರು ಸಂಚಾರಿ ಪೊಲೀಸರು. ಅಸ್ತಮಾದಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಅಧ್ಯಯನಗಳೂ ಇವೆ.
ವಾಹನಗಳ ವಿಷಕಾರಿ ಹೊಗೆ ಹಾಗೂ ಧೂಳಿನಿಂದಾಗಿ ವಾಯುಮಾಲಿನ್ಯ ಅಧಿಕಗೊಂಡಿದೆ. ಸದಾ ರಸ್ತೆಯಲ್ಲಿ ಕರ್ತವ್ಯ ದಲ್ಲಿರುವ ಟ್ರಾಫಿಕ್ ಪೊಲೀಸರ ಆರೋಗ್ಯದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ. ವಾಹನಗಳು ಉಗುಳುವ ವಿಷಕಾರಿ ಅನಿಲಗಳ ಕೊಡುಗೆಯೂ ವಾಯುಮಾಲಿನ್ಯಕ್ಕೆ ಅಪಾರ.
ದಟ್ಟಹೊಗೆಯ ದುಷ್ಪರಿಣಾಮಗಳಿಗೆ ಮಕ್ಕಳು ಸುಲಭವಾಗಿ ತುತ್ತಾಗುವುದರಿಂದ ಮಕ್ಕಳು ಮನೆಯ ಒಳಗೇ ಇರುವಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂಬಂಥ ಹೇಳಿಕೆಯನ್ನು ಮುಖ್ಯಮಂತ್ರಿ ನೀಡುತ್ತಾರೆ ಎಂದಾದರೆ ಪರಿಸ್ಥಿತಿ ವಿಷಮಕ್ಕೆ ತಲುಪಿದೆ ಎಂದರ್ಥ.
ನಾನಿಷ್ಟು ಪ್ರಸ್ತಾಪಿಸಿದ್ದು ಹೊಸ ವಿಷಯವೇನಲ್ಲ. ಸಣ್ಣ ಮಕ್ಕಳಿಗೂ ಪರಿಸರ ಮಾಲಿನ್ಯ ಹೇಗೆ ಆಗುತ್ತದೆ ಎಂಬುದು ಗೊತ್ತು. ಅದನ್ನು ಅವರು ಬಾಯಿಪಾಠ ಮಾಡುತ್ತಾರೆ. ಶಾಲೆಯಲ್ಲಿ ಪ್ರಬಂಧ ಬರೆಯುತ್ತಾರೆ, ಭಾಷಣ ಮಾಡುತ್ತಾರೆ. ಅಪ್ಪ, ಅಮ್ಮ, ಚಪ್ಪಾಳೆ ತಟ್ಟುತ್ತಾರೆ. ಅಲ್ಲಿಗೆ ಪರಿಸರ ಮಾಲಿನ್ಯ ಎಂಬ ವಿಷಯ ಸ್ಪರ್ಧೆ, ಚರ್ಚಾಕೂಟಕ್ಕಷ್ಟೇ ಸೀಮಿತವಾಗುತ್ತದೆ.
ದೆಹಲಿಯಲ್ಲಿ ಧೂಳಿನಿಂದ ಕವಿದ ಹೊಗೆ ದೇಶವಾಸಿಗಳಿಗೆ ದೊಡ್ಡ ಪಾಠವಾಗಬೇಕು. ವಾಸ್ತವವಾಗಿ ಮನೆ ಮನೆಯಲ್ಲಿ ಚರ್ಚೆಯಾಗಬೇಕಾದ ವಿಷಯವದು. ಆದರೆ ನಾವು ಮಾತನಾಡುವುದೇ ಬೇರೆ.
ಈ ಬಾರಿ ಶಾಲಾ ಕಾಲೇಜುಗಳ ಮಕ್ಕಳನ್ನು ಯಾವುದೋ ಊರಿನ ದೊಡ್ಡ ಕಟ್ಟಡ ತೋರಿಸುವ ಬದಲು ಯಾವುದಾದರೂ ಪ್ರಗತಿಪರ ಕೃಷಿಕರ ಮನೆ, ತೋಟಕ್ಕೆ ಕರೆದೊಯ್ಯಿರಿ. ಪರಿಸರ ಉಳಿಸುವ ಸಸ್ಯಸಂಕುಲಗಳ ಅನುಭವ ನಮ್ಮ ಮಕ್ಕಳಿಗಾಗಲಿ.
ಏನಂತೀರಿ?
Facebook ಕಾಮೆಂಟ್ಸ್