X
    Categories: ಕಥೆ

ಹೀಗೊಂದು ಪ್ರೀತಿಯ ಕಥೆ-2

Happy couple outdoor, summertime

ಓದಿ: ಹೀಗೊಂದು ಪ್ರೀತಿಯ ಕಥೆ-1

ಮೋಹನನಿಗೆ ಮದುವೆಯಂತೆ..ಹುಡುಗಿ ನೋಡಲು ಚೆನ್ನಾಗಿದ್ದಾಳಂತೆ..ಅವರ ಮನೆಯವರೂ ಒಳ್ಳೆಯ ಸ್ಥಿತಿವಂತರಂತೆ.. ಪಕ್ಕದ ಮನೆಯ ಸರೋಜ ಬಂದಿದ್ದವಳು ತಿಳಿಸಿದ್ದಳು.. ಪಲ್ಲವಿಗೆ ದಿಕ್ಕೇ ತೋಚದಾಯಿತು.. ನನ್ನನ್ನು ಪ್ರೀತಿಸಿ ಇನ್ನೊಬ್ಬಳನ್ನು ಮದುವೆಯಾಗುವುದೆಂದರೆ..ಹೇಗೆ ಸಾಧ್ಯ..?! ಹಾಗಾದರೆ ಅವನು ನನ್ನ ಲವ್ ಮಾಡ್ತಿಲ್ವಾ ?! ಎಂಬ ಸಂಶಯನೂ ಕಾಡಿತು..ಅವನು ನನ್ನ ಪ್ರೀತಿಸುತ್ತಿಲ್ಲ ಅಂದ ಮೇಲೆ ಅಣ್ಣನ ಮೂಲಕ ಯಾಕೆ ಮದುವೆ ಪ್ರಪೋಸಲ್ ಮಾಡಿದ..ಇಲ್ಲೇನು ನಡೆದಿದೆ..?!ಅದಂತೂ ಸತ್ಯ..?! ಅದೇನೂಂತ ಹೇಗೆ ತಿಳಿಯುವುದು..?! ಆಲೋಚಿಸಿ ಅವಳ ತಲೆ ಗೊಂದಲದ ಗೂಡಾಯಿತು..ಅವನಿಲ್ಲದ ತನ್ನ ಬಾಳನ್ನು ಕಲ್ಪಿಸಲು ಅವಳಿಂದ ಅಸಾಧ್ಯವಾಯಿತು..ಜೀವನವೇ ಬೇಡವೆನಿಸಿ ಸಾಯೋಣವೆನಿಸಿದರೂ ಮನೆಯವರಿಗೋಸ್ಕರ ಆ ಯೋಚನೆಯನ್ನು ಕೈ ಬಿಟ್ಟಳು..ಮನೆಯವರ ವಿರುದ್ಧ ಹೋಗಲು,ಅವರ ಮಾನ ಮರ್ಯಾದೆ ಕಳೆಯಲು ಪಲ್ಲವಿಗೆ ಇಷ್ಟವಿರಲಿಲ್ಲ..ಇದಾಗಿ ಸ್ವಲ್ಪ ದಿವಸಗಳಲ್ಲಿ ಮೋಹನನ ಮದುವೆ ನಡೆದು ಹೋಗಿತ್ತು..ಆ ದಿನವಂತೂ ಅವಳು ಮಂಕು ಬಡಿದವಳಂತೆ ಇದ್ದಳು..ಸರಿಯಾಗಿ ಊಟ ತಿಂಡಿನೂ ಮಾಡಿರಲಿಲ್ಲ..

ದಿನಗಳು ಕಳೆದವು..ದಿನೇ ದಿನೇ ಮೋಹನನ್ನು ಮರೆಯತೊಡಗಿದ್ದಳು..ಈ ನಡುವೆ ಅವಳಿಗೆ ಹಲವು ಮದುವೆ ಪ್ರಪೋಸಲ್ ಬಂದಿತ್ತು..ಅದು ಯಾವುದೂ ಸರಿಯಾಗಿ ಸೆಟ್ಟಾಗಿರಲಿಲ್ಲ..ಆ ದಿನ ಭಾನುವಾರ..!! ಬೆಳಗಿನ ಹೊತ್ತು..ಅಂಗಳ ಗುಡಿಸಲು ಕೈಯಲ್ಲಿ ಪೊರಕೆ ಹಿಡಿದುಕೊಂಡು ಹೊರ ಬಂದಳು ಪಲ್ಲವಿ..!! ಅದಾಗಲೇ ಸೂರ್ಯನ ಆಗಮನವಾಗಿತ್ತು..ಅವನ ಕಿರಣಗಳ ಸ್ಪರ್ಶಕ್ಕೆ ಮನೆಯ ಮುಂದಿನ ಗಿಡಗಳಲ್ಲಿ ಹೂಗಳು ನಾಚುತ್ತಾ ಅರಳಿ ನಿಂತುಕೊಂಡಿದ್ದುವು..ಹಿತವಾಗಿ ಬೀಸುವ ತಂಗಾಳಿ ಮೈಗೆ ಮುದ ನೀಡುತ್ತಿತ್ತು..ಹಕ್ಕಿಗಳ ಕಲರವಕ್ಕೆ ಇಡೀ ವಾತಾವರಣವೇ ಸಂಭ್ರಮದಿಂದ ಕೂಡಿತ್ತು.. ತಿಳಿ ಹಸಿರು ಬಣ್ಣದ ಚೂಡಿದಾರ ಧರಿಸಿದ್ದ ಪಲ್ಲವಿ ಪ್ರಕೃತಿ ದೇವತೆಯಂತೆ ಕಾಣಿಸಿದ್ದಳು..ಅಂಗಳ ಗುಡಿಸುತ್ತಾ ಇರಬೇಕಾದರೆ “ಹಲೋ..” ಎಂದ ಗಂಡಸು ಧ್ವನಿಯೊಂದು ಕೇಳಿಸಿ ಕೆಳಗೆ ಜಾರಿ ನಿಂತಿದ್ದ ನೀಳ ಜಡೆಯನ್ನು ದೂಡುತ್ತಾ ತಲೆ ಎತ್ತಿ ನೋಡಿದಳು..ಒಬ್ಬ ಸುಂದರ ಯುವಕನೊಬ್ಬ ನಿಂತಿದ್ದ.. ಸುಮಾರು ಐದೂವರೆ ಆರಡಿ ಎತ್ತರ,ವಯಸ್ಸು ಸುಮಾರು ಇಪ್ಪತ್ತೈದೋ ಇಪ್ಪತ್ತಾರೋ ?! ಆಗಿರಬಹುದು.. ಮುಖದಲ್ಲಿನ ಚಿಗುರು ಮೀಸೆ ಅವನ ಅಂದವನ್ನು ಇನ್ನೂ ಹೆಚ್ಚಿಸಿದಂತಿತ್ತು..”ಹೇಳಣ್ಣ ಏನಾಗಬೇಕಿತ್ತು..?!” ಅಪರಿಚಿತನ ಬಳಿ ಕೇಳಿದಳು..ಪಲ್ಲವಿಯ ಸೌಂದರ್ಯವನ್ನೇ ಬೆರಗುಕಣ್ಣುಗಳಿಂದ ನೋಡುತ್ತಿದ್ದವನು, “ಏನು ಅಣ್ಣನಾ..?!” ಎಂದು ಅಚ್ಚರಿ ವ್ಯಕ್ತಪಡಿಸಿದ..ಆಗ ಮನೆಯೊಳಗಿನಿಂದ ಬಂದ ಪ್ರದೀಪ, “ಹಲೋ ಗೌತಮ್..ಇದೇನು ಸರ್ಪ್ರೈಸ್..ಬನ್ನಿ ಬನ್ನಿ..ಹೇಗಿದ್ದೀರಾ..?!” ಬಂದವನ್ನು ಸ್ವಾಗತಿಸಿದ..ಪಲ್ಲವಿ ಅಚ್ಚರಿಯಿಂದ ಅಣ್ಣನ ಕಡೆ ನೋಡಿದಳು..”ಪಲ್ಲವಿ..ಇವ್ರು..” “ಬೇಡ ಬಿಡು.. ಆಮೇಲೆ ಎಲ್ಲ ನಿನಗೆ ಗೊತ್ತಾಗುತ್ತೆ..ಈಗ ನೀನು ಒಳಗೆ ಹೋಗು..” ಪ್ರದೀಪನ ಮಾತಿಗೆ ತಲೆಯಾಡಿಸಿ ಕೈಯಲ್ಲಿದ್ದ ಪೊರಕೆಯನ್ನು ಅಲ್ಲೇ ಬಿಟ್ಟು ಒಳ ಹೋದಳು..ಪ್ರದೀಪ ಗೌತಮ್ನ ಕರೆದುಕೊಂಡು ಮನೆಯೊಳಗೆ ಬಂದ..ಎಲ್ಲರಿಗೂ ಅವನನ್ನು

ಪರಿಚಯಿಸಿದ..ಬಂದವನು ಯಾರೆಂದು ತಿಳಿದಾಗ ಅವಳಿಗೆ ನಾಚಿಕೆಯ ಜೊತೆಗೆ ಮುಜುಗರವನ್ನುಂಟು ಮಾಡಿತ್ತು..

ಗೌತಮ್ ಪ್ರದೀಪನ ಬೆಂಗಳೂರಿನ ಗೆಳೆಯ ರವೀಶನ  ಗೆಳೆಯ..!! ಬೆಂಗಳೂರಿಗೆ ಹೋಗಿದ್ದ ಸಮಯದಲ್ಲಿ ರವೀಶನೇ ಗೌತಮನನ್ನು ಪ್ರದೀಪನಿಗೆ ಪರಿಚಯಿಸಿದ್ದ..ತಂದೆ ಚಿಕ್ಕವನಿರಬೇಕದರೆ ತೀರಿಕೊಂಡಿದ್ದು ತಾಯಿಯೇ ಗೌತಮ್ನನ್ನು ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಿದ್ದು ಎಲ್ಲ..ಎರಡು ವರ್ಷದ ಹಿಂದೆ ಅವರೂ ಹೃದಯಪಘಾದಿಂದ ತೀರಿಕೊಂಡಿದ್ದರು.. ಒಡ ಹುಟ್ಟಿದವರ್ಯಾರೂ ಇಲ್ಲದ್ದರಿಂದ ಗೌತಮ್ ಒಬ್ಬಂಟಿಗನಾಗಿ ಬಿಟ್ಟಿದ್ದ..ಪ್ರತಿಷ್ಠಿತ ಸಾಫ್ಟ್’ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವನದ್ದು ಯಾಂತ್ರಿಕ ಬದುಕು..!! ಆಫೀಸ್,ಫ್ರೆಂಡ್ಸ್ಮನೆ..!! ಜೀವನ ಬೇಸರ ತರಿಸಿತ್ತು..!! ಮನಸ್ಸಿಗೆ ಒಪ್ಪುವ ಸಂಗಾತಿ ಬೇಕೆನಿಸಿತ್ತು..ಮದುವೆ ಬಗ್ಗೆ ಮಾತನಾಡಿದಾಗ ರವೀಶ್ ಪ್ರದೀಪನ ತಂಗಿ ಪಲ್ಲವಿಯ ಬಗ್ಗೆ ಹೇಳಿದ್ದ.. ಸೋ ಮದುವೆ ಪ್ರಪೋಸಲ್ ಇಟ್ಟುಕೊಂಡು ಬಂದಿದ್ದ ಗೌತಮ್..!! ಸಿಟಿಯ ಹೈಫೈ ಹುಡುಗಿಯರನ್ನು ಇಷ್ಟ ಪಡದ ಅವನು ಸಿಂಪಲ್ಲಾಗಿರುವ ಸುಂದರಿ ಪಲ್ಲವಿಗೆ ಕ್ಲೀನ್ ಬೋಲ್ಡ್ ಆಗಿದ್ದ..!! ಜಾತಿ ಒಂದೇ ಆಗಿದ್ದರಿಂದ ಸಮಸ್ಯೆಯಾಗಲಿಲ್ಲ..ರಾಜಶೇಖರಯ್ಯ, ಮಂಗಳಮ್ಮ ಎಲ್ಲರಿಗೂ ಗೌತಮ್ ಇಷ್ಟವಾಗಿ ಬಿಟ್ಟಿದ್ದ..ಮನೆಯವರೆಲ್ಲರೂ ಒಪ್ಪಿಂದರಿಂದ ಪಲ್ಲವಿ ತಾನೂ ಮದುವೆಗೆ ಒಪ್ಪಿದಳು..ತಾನು ಒಬ್ಬನನ್ನು ಇಷ್ಟಪಟ್ಟಿದ್ದು ಎಲ್ಲವನ್ನು ತಿಳಿಸಿದಳು ಪಲ್ಲವಿ..”ನೋ ಪ್ರಾಬ್ಲಂ..ಸ್ಕೂಲ್,ಕಾಲೇಜು ಜೀವನದಲ್ಲಿ ಈ ರೀತಿ ಆಗುವುದು ಸಹಜ..!!..ಯಾರು ಏನು ಅಂತ ನಾನು ಏನೂ ಕೇಳಲ್ಲ..ಬಿಟ್ಬಿಡು..ಅದನ್ನೇ ಆಲೋಚಿಸುತ್ತಾ ಜೀವನ ಹಾಳು ಮಾಡಿಕೊಳ್ಳುವುದು ಮೂರ್ಖತನ..ನನ್ನ ಜೀವನದಲ್ಲೂ ನಿನ್ನ ತರಾನೇ ಆಗಿತ್ತು..ಏನೋ ಕಾರಣ ಹೇಳಿ ಅವಳು ನನ್ನಿಂದ ದೂರವಾದಳು.. ಆದರೆ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ..ಅದನ್ನೇ ಪೋಸೆಟಿವ್ ಆಗಿ ತೆಗೆದುಕೊಂಡು ಮುಂದೆ ಬಂದೆ..ಈವತ್ತು ಈ ಮಟ್ಟಕ್ಕೆ ನಿಂತಿದ್ದೇನೆ..” ಎಂದ ಗೌತಮ್..ಪಲ್ಲವಿಗೆ ಅವನ ಬಗ್ಗೆ ವಿಶೇಷ ಗೌರವ,ಪ್ರೀತಿ ಮೂಡಿದ್ದು ಆವಾಗಿನಿಂದಲೇ..!!  ಗೌತಮ್ ಪಲ್ಲವಿಯ ಮದುವೆ ವಿಜ್ರಂಭಣೆಯಿಂದ ನಡೆದು ಹೋಗಿತ್ತು..ಇಲ್ಲಿನ ಸಹವಾಸವೇ

ಬೇಡವೆಂಬಂತೆ ಪಲ್ಲವಿ ಗೌತಮ್ನ ಮುದ್ದು ಮಡದಿಯಾಗಿ ಬೆಂಗಳೂರು ಸೇರಿದ್ದಳು ಆಮೇಲೆ..!!

                                *************************

ಮನೆಯ ಹೊರಗಿನಿಂದ ಜೋರಾಗಿ ಮಾತುಕತೆ,ನಗು ಕೇಳಿಸಿ ಎಚ್ಚೆತ್ತಳು..ತಲೆ ನೋವು ಸ್ವಲ್ಪ ಕಡಿಮೆಯಾದಂತೆನಿಸಿತ್ತು.. ಮೆಲ್ಲನೆ ಎದ್ದು ಹೊರ ಬಂದಳು..ಗೌತಮ್ ಏನೋ ಹೇಳುತ್ತಿದ್ದ..ಅದಕ್ಕೆ ರಾಜಶೇಖರಯ್ಯ ಮತ್ತು ಮಂಗಳಮ್ಮ ಜೋರಾಗಿ ನಗುತ್ತಿದ್ದರು..ಮಗಳು ಬಂದದ್ದನ್ನು ನೋಡಿ ನಗು ನಿಲ್ಲಿಸಿದವರು ಕೇಳಿದರು..”ಈಗ ಹೇಗಿದ್ದೀಯಮ್ಮಾ..?!” “ಪರವಾಗಿಲ್ಲ..ಈಗ ಸ್ವಲ್ಪ ಕಡಿಮೆಯಾಯಿತಪ್ಪ..” ಎಂದವಳು ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತಳು..”ಅಣ್ಣ ಎಲ್ಲಮ್ಮ..?!” ಅಲ್ಲೇ ಇದ್ದ ಅಮ್ಮನ ಬಳಿ ಕೇಳಿದಳು..”ಅವನ ಬಗ್ಗೆ ನಿನಗೆ ಗೊತ್ತಲ್ಲ..ಯಾವಾಗಲೂ ತಿರುಗುತ್ತಾ ಇರ್ತಾನಲ್ಲ..ಬರ್ತಾನೆ..”ಎಂದರು ಮಂಗಳಮ್ಮ.. ಪ್ರದೀಪನ ಬಗ್ಗೆ ಗೊತ್ತಿದ್ದ ಕಾರಣ ಅವಳು ಹೆಚ್ಚೇನು ಹೇಳಲಿಲ್ಲ..ಸುಮ್ಮನೆ ಕುಳಿತಳು..ಮಾತುಕತೆ ಪುನಃ ಮುಂದುವರಿದಿತ್ತು.. ಆದರೆ ಅವರ ಜೊತೆ ಕುಳಿತಿದ್ದ ಪ್ರಕಾಶ ತನಗೂ ಸಂಬಂಧವಿಲ್ಲದಂತೆ ಕುಳಿತಿದ್ದು ಅದಾಗಲೇ ಮೊಬೈಲ್ ಗೇಮ್ನ ಲೋಕಕ್ಕೆ ಹೊರಟು ಹೋಗಿದ್ದ..ಸಂಜೆಗತ್ತಲು ಆವರಿಸತೊಡಗಿತ್ತು..ದೀಪಗಳ ಹಬ್ಬಕ್ಕೆ ಇನ್ನೂ ಎರಡು ದಿನವಿದ್ದರೂ ಆಗೊಮ್ಮೆ ಈಗೊಮ್ಮೆ ಕಿವಿಡಚುವಂತೆ ಪಟಾಕಿಗಳ ಸದ್ದು ಕೇಳಿಸುತ್ತಿದ್ದುವು..!! ಪಲ್ಲವಿ ಅದಾಗಲೇ ಒಂದು ತೀರ್ಮಾನಕ್ಕೆ ಬಂದಿದ್ದಳು.. ನಾಳೆ ಮೋಹನನ್ನು ಭೇಟಿ ಮಾಡಿ ಮನಸ್ಸಲ್ಲಿರುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು..ಹೌದು..ಅದೇ ಸರಿ..!! ಈಗ ಮನಸ್ಸು ಹಗುರವಾದಂತೆನಿಸಿತು..ಹಾಗೇ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡುತ್ತಾ ಕುಳಿತಳು ರಾತ್ರಿಯಾಗುವವರೆಗೆ..!!

ಮರುದಿನ ಬೆಳಗಿನ ಹೊತ್ತು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗಂಡ ಹೆಂಡತಿ ಹೊರಟರು..ಆಗ ಸಮಯ ಬೆಳಗ್ಗೆ 7 ಗಂಟೆ..!!..ದೇವಾಲಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಿದ್ದಿತ್ತು..ಗರ್ಭಗುಡಿಯ ಒಳಗೆ ಬೆಳಗಿದ್ದ ದೀಪಗಳ ಬೆಳಕಲ್ಲಿ ಪ್ರಕಾಶಮಾನವಾಗಿ ಪ್ರಶಾಂತವಾಗಿ ಕಾಣಿಸುತ್ತಿರುವ ದೇವರನ್ನು ಕಂಡು ಧನ್ಯರಾದರು.. ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿದರು ಇಬ್ಬರೂ..!! ಅರ್ಚಕರು ನೀಡಿದ ತೀರ್ಥ ಪ್ರಸಾದ ತೆಗೆದುಕೊಂಡು ಹೊರ ನಗುತ್ತಾ ಸೂರ್ಯ ಮೂಡಣದಲ್ಲಿ ಮೇಲೆ ಬಂದಿದ್ದ..ಅವನ ಕಿರಣಗಳು ದೇವಾಲಯದ ಎದುರಿನ ಮಹಾಲಿಂಗೇಶ್ವರನ ಮೂರ್ತಿಯ ಮೇಲೆ ಪ್ರಜ್ವಲಿಸುತ್ತಿದ್ದು ಸುಂದರವಾಗಿ ಕಾಣಿಸುತ್ತಿತ್ತು..!! ಗೌತಮ್ನ ಮೊಬೈಲ್ ಹಾಡತೊಡಗಿತ್ತು..”ಕೊಲೀಗ್ ಗಣೇಶ್..ಈಗ ಬಂದೆ..” ಎಂದು ಹೇಳಿದವ “ಹಲೋ” ಎಂದು ಫೋನ್ ರಿಸೀವ್ ಮಾಡಿ ಮಾತನಾಡುತ್ತಾ ಸ್ವಲ್ಪ ದೂರಕ್ಕೆ ಹೋದ..ಪಲ್ಲವಿ ಸುತ್ತಲೂ ಕಣ್ಣಾಡಿಸುತ್ತಿರಬೇಕಾದರೆ ಆಟೋ ಬಂದು ನಿಂತಿತು..!! ಮೋಹನ..!! ಅವಳ ಹೃದಯದಲ್ಲಿ ಸಣ್ಣ ಸಂಚಲನ..!! ಅವನು ಅವಳನ್ನು ನೋಡಿಯೂ ನೋಡದಂತೆ ದೇವಾಲಯದ ಒಳಗೆ ಹೋದಾಗ ಬೇಸರವಾಗಿತ್ತು..!!ಫೋನ್ನಲ್ಲಿ ಮಾತನಾಡುತ್ತಿದ್ದ ಗೌತಮ್ನಿಗೆ

ಇದಾವುದನ್ನೂ ಗಮನಿಸಲಿಲ್ಲ..!! ಸಮಯ ಓಡುತ್ತಿತ್ತು..ಸ್ವಲ್ಪ ಹೊತ್ತಲ್ಲಿ ಮೋಹನ ದೇವಾಲಯದಿಂದ ಬಂದವನು ಸೀದಾ ಆಟೋ ಬಳಿ ನಡೆದ..ಅವಳು ಬಿರುಗಾಳಿಯಂತೆ ಅವನ ಬಳಿ ನಡೆದಳು..”ಹಾಯ್..ಪಲ್ಲವಿ..ಹೇಗಿದ್ದೀಯಾ..?!” ನಗುವ ನಟನೆ ಮಾಡುತ್ತಾ ಕೇಳಿದ..”ನಿಮ್ಮ ಹತ್ರ ಮಾತನಾಡ್ಬೇಕು..ಇಲ್ಲಿ ಬೇಡ..ಬೇರೆ ಕಡೆ ಹೋಗೋಣ..” ಎಂದು ಸೀರಿಯಸ್ಸಾಗಿ ನುಡಿದಳು..”ನಿನ್ನ ಗಂಡ..?!” ಎಂದು ಗೌತಮ್ನ ಕಡೆ ನೋಡಿದವ ಅವಳ ಮುಖ ನೋಡಿದ..”ಪರವಾಗಿಲ್ಲ..” ಎಂದು ಪಲ್ಲವಿ ಅಲ್ಲೇ ಸಮೀಪದಲ್ಲಿದ್ದ ಮಂಟಪದತ್ತ ನಡೆದಳು..ಮೋಹನ ನಿರ್ವಾಹವಿಲ್ಲದೆ ಅವಳನ್ನು ಹಿಂಬಾಲಿಸಿದ..”ಯಾಕೆ ನನ್ನ ಪ್ರೀತಿಗೆ ಮೋಸ ಮಾಡಿದೆ..?!” ನೇರ ಮಾತು..!! “ಅದು..ಅದು..ನಾನು ನಿನ್ನ ಪ್ರೀತಿ ಮಾಡಿದ್ನಾ..ಚಾನ್ಸೇ ಇಲ್ಲ..!!” ನಿರಾಕರಿಸಿದ ಮೋಹನ..”ಏನು ಪ್ರೀತಿ ಮಾಡಿಲ್ವಾ..ಮತ್ತೆ ಅಣ್ಣನೊಡನೆ ನನ್ನ ಮದುವೆಯಗುತ್ತೇನೆಂದು ಹೇಳಿದ್ದು..?!”  “ಅದು ಹೀಗೆ ಕೇಳಿದೆ..ಅದನ್ನೇ ನೀನು ಪ್ರೀತಿ ಅಂದುಕೊಂಡಿದ್ದು ನಿನ್ನ ತಪ್ಪು..” ಎಂದವನ ಮಾತಲ್ಲಿ ಸುಳ್ಳು ಎದ್ದು ಕಾಣುತ್ತಿತ್ತು..”ಸುಳ್ಳು ಹೇಳ್ತ್ತಿದ್ದೀರಾ ಅಂತ ನಿಮ್ಮ ಮುಖ ನೋಡಿಯೇ ತಿಳಿಯತ್ತೆ..ಯಾಕೆ ಹೀಗೆ ಮಾಡಿದಿರಿ..?!” ಎಂದು ಕೇಳಿದಳು ಪಲ್ಲವಿ..!! ಅವನು ಸೋಲು ಒಪ್ಪಿಕೊಳ್ಳಲು ಸಿದ್ದನಿಲ್ಲ..”ಇಲ್ಲ..ಹಾಗೇನು ಇಲ್ಲ..ನಾನು ಹೇಳಿದ್ನಾ..ನಿನ್ನ ಲವ್ ಮಾಡ್ತಿದ್ದೀನಿ ಅಂತ..!!” “ಮತ್ತೆ ಮತ್ತೆ ಯಾಕೆ ಸುಳ್ಳು ಹೇಳ್ತಿದ್ದೀರಾ..?!” ಅವಳು ಸೋಲಲು ತಯಾರಿಲ್ಲ..!! ಕೊನೆಗೆ ಅವನಿಗೆ ಹೇಳದೆ ವಿಧಿಯಿರಲಿಲ್ಲ..!! “ಅದು ನಿನ್ನ ಚಿಕ್ಕಪ್ಪ ಹೇಳಿ ಹೀಗೆ ಮಾಡಿದೆ..” “ಏನು ಚಿಕ್ಕಪ್ಪ ಹೇಳಿನಾ..?!” ಅವಳಿಂದ ನಂಬಲು ಸಾಧ್ಯವಾಗಲಿಲ್ಲ..”ನನ್ನ ಅಣ್ಣ ನಿನಗೆ ಹೆಣ್ಣು ಕೊಡದಿದ್ದರೇನಂತೆ ಬಿಟ್ಟು ಬಿಡು..ಪಲ್ಲವಿ ಒಬ್ಬಳೇನಾ ಹುಡುಗಿ ಇರೋದು..ನೋಡು ನಾನು ಹೇಳಿದ ಹಾಗೆ ಕೇಳು ಅವಳನ್ನು ಬಿಟ್ಟು ಬಿಡು..ಅವಳಿಗಿಂತ ಸುಂದರಿ,ಶ್ರೀಮಂತೆ ಸಿಗುತ್ತಾಳೆ ನಿನಗೆ..ಎಂದು ಶಿವರಾಮಯ್ಯನವರು ಹೇಳಿದರು..” ಎಂದ ಮೋಹನ..ಪಲ್ಲವಿ,”ಅದಕ್ಕೆ ನೀವು ಬಿಟ್ಟು ಬಿಟ್ಟಿರಿ ಅಲ್ವಾ..” ಎಂದಳು ಬೇಸರದಿಂದ..”ಹೌದು..ಆ ಸಮಯದಲ್ಲಿ ಶಿವರಾಮಯ್ಯ ಹೇಳಿದ್ದು ಕರೆಕ್ಟ್ ಅನಿಸಿತ್ತು..ಮನೆಯವರ ವಿರೋಧ ಕಟ್ಟಿಕೊಂಡು ನಿನ್ನ ಕರೆದುಕೊಂಡು ಓಡಿಹೋಗುವುದು ಬೇಡವೆನಿಸಿತ್ತು..ಅಲ್ಲದೆ ನೀನು ನನ್ನ ಪ್ರೀತಿಸುತ್ತಿಯಾ ಇಲ್ವಾ ಎಂಬ ಗೊಂದಲವೂ ಇತ್ತು..ಸೋ ಹಾಗಾಗಿ..” ಹೇಳಿ ಮಾತು ನಿಲ್ಲಿಸಿ ಅವಳ ಕಡೆ ನೋಡಿದ ಮೋಹನ..”ನಾವಿಬ್ಬರೂ ಪ್ರೀತಿ ಹೇಳಿಕೊಳ್ಳದಿದ್ದರೂ ಒಬ್ಬರಿಗೊಬ್ಬರಿಗೆ ಗೊತ್ತಿತು ತಾನೆ..ಲವ್ ಮಾಡ್ತಿರುವ ವಿಷಯ..ಅದು ಗೊತ್ತಿದ್ದೂ ನೀವು ಹೀಗೆ ಮೋಸ ಮಾಡಿದ್ದು ತಪ್ಪು..ನಾನು ನಿಮಗೋಸ್ಕರ ಕಾಯದ

ದಿನಗಳಿಲ್ಲ ಗೊತ್ತಾ..ನೀವು ಎಲ್ಲಿಗೆ ಕರೆದಿದ್ದರೂ ಬರಲು ಸಿದ್ದವಿದ್ದೆ..!!” ಅವಳ ಕಂಗಳು ತುಂಬಿ ಬಂದಿದ್ದುವು..”ಸ್ಸಾರಿ ಪಲ್ಲವಿ..ನನ್ನದೇ ತಪ್ಪು..!! ನಿನ್ನ ತಂದೆ ಹೇಳಿದ ಆ ಮಾತು ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿತ್ತು..ಆ ಸಮಯದಲ್ಲೇ ಶಿವರಾಮಯ್ಯರು ಹೇಳಿದ್ದು ಎಲ್ಲವೂ ನನ್ನ ಮನಸ್ಸನ್ನು ಬದಲಿಸಿತು..ಪ್ರೀತಿಗೆ ಮೋಸ ಮಾಡುವ ಹಾಗೆ ಮಾಡ್ತು..ನೀನು ನನ್ನ ಇಷ್ಟೊಂದು ಪ್ರೀತಿಸುತ್ತಿ ಅಂತ ಗೊತ್ತಿರಲಿಲ್ಲ..ಗೊತ್ತಿದ್ದರೆ ನಾನು ಹೀಗೆ ಮಾಡುತ್ತಿರಲಿಲ್ಲ..ನನ್ನ ಕ್ಷಮಿಸಿ ಬಿಡು..” ಎಂದ ಮೋಹನ ಅಲ್ಲಿಂದ ಹೊರಟು ಹೋದ..ಅವಳು ಹಾಗೆ ಅವನು ಹೋದ ಕಡೆ ನೋಡುತ್ತಾ ನಿಂತಿದ್ದವಳು ಒಮ್ಮೆಲೆ ಹಿಂದಕ್ಕೆ ತಿರುಗಿ ಬೆಚ್ಚಿ ಬಿದ್ದಳು..ಗೌತಮ್ ನಿಂತಿದ್ದ..ಅವನ ಮುಖದ ಬದಲಾವಣೆ ಇವರ ಸಂಭಾಷಣೆಗಳನ್ನು ಕೇಳಿಸಿದೆ ಎಂದು ತೋರಿಸುತ್ತಿತ್ತು..ಪಲ್ಲವಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ..”ಅದು..ಅದು..” ಎಂದು ತೊದಲಿದಳು..ಗೌತಮ್ ನೇರವಾಗಿ ಕೇಳಿದ,”ನಿನ್ನ ಹಳೆ ಲವ್ವರ್ ಇವನು ತಾನೆ..!!” ತಲೆ ತಗ್ಗಿಸಿದವಳು ಮೆಲ್ಲಗೆ ಉಸಿರಿದಳು,”ಹೌದು..” “ಅದನ್ಯಾಕೆ ತಲೆ ತಗ್ಗಸಿಕೊಂಡು ಹೇಳ್ತ್ತಿದ್ದಿಯಾ..” ಎಂದವ ಅವಳ ತಲೆಯನ್ನು ಎತ್ತಿ ಮುಖದತ್ತ ನೋಡಿದ..ಕಣ್ಣೀರು ಸೇಬು ಕೆನ್ನೆಯನ್ನು

ಸ್ವರ್ಶಿಸುತ್ತಾ ಕೆಳಗೆ ಜಾರುತ್ತಿತ್ತು..ಅದನ್ನು ಕೈಗಳಿಂದ ಒರೆಸುತ್ತಾ ಹೇಳಿದ..”ಯಾಕೆ ಅಳ್ತಿದ್ದೀಯಾ..ಪಲ್ಲು..ಅಂತಹ ತಪ್ಪು ನೀನು ಏನು ಮಾಡಿಲ್ಲ..” “ಅದು ನಾನು ಮೋಹನನ ಜೊತೆ..” ಎಂದ ಅವಳ ಮಾತನ್ನು ಅರ್ಧದಲ್ಲೇ ತಡೆದು ಹೇಳಿದ..”ಆ ವಿಷಯ ಬಿಡು..ಮೋಹನ ಸಿಕ್ಕಿದ..ಮಾತನಾಡಿದ್ದೀಯಾ..ಅಷ್ಟೇ..ಅದರಲ್ಲಿ ತಪ್ಪೇನಿದೆ..?!” ಪಲ್ಲವಿಗೆ ಸಮಾಧಾನವಾಗಿತ್ತು..ಅವಳ ಎಡ ಭುಜವನ್ನು ಕೈಗಳಿಂದ ಬಳಸುತ್ತಾ ಹೇಳಿದ..

“ಇನ್ನೊಂದು ಇಷಯ ಗೊತ್ತಾ ನಿಂಗೆ..” “ಏನು..?!” ಎಂದು ಅವನ ಮುಖವನ್ನು ನೋಡಿದಳು..”ನಿನ್ನ ಚಿಕ್ಕಪ್ಪ ನನ್ನ ಬಳಿಗೆ ಬಂದಿದ್ದರು..” “ಹೌದಾ..ಏನು ಹೇಳಿದರು..?!” “ಆ ಪಲ್ಲವಿಯನ್ನು ಯಾಕೆ ಮದುವೆಯಾಗ್ತಿದ್ದಿಯಾ..?!

ಅವಳ ಕಾರೆಕ್ಟರ್ ಸರಿ ಇಲ್ಲ..!! ಸ್ಕೂಲ್,ಕಾಲೇಜು ಸಮಯದಲ್ಲಿ ಯಾರ್ಯಾರೊ ಜೊತೆ ತಿರುಗಾಡ್ತಿದ್ದಳು ಗೊತ್ತಾ ನಿಂಗೆ..ಅಂತವಳನ್ನು ಮದುವೆಗಾಗಿ ಸಂಕಟ ಪಡ್ಬೇಡ ಎಂದೆಲ್ಲ ಹೇಳಿದ್ದರು..” ಹೇಳಿದ ಗೌತಮ್..ಪಲ್ಲವಿಗೆ

ಶಾಕ್ ಆಗಿತ್ತು..ಏನು ತಂದೆಯ ಒಡಹುಟ್ಟಿದ ತಮ್ಮ..ಅಂದರೆ ನನಗೂ ತಂದೆಯ ಸಮಾನ ತಾನೆ..?! ಅವರು ಇಂತಹ ಚೀಪ್ ಮೆಂಟಾಲಿಟಿಗೆ ಇಳಿಯುತ್ತಾರಾ..?! ಅವಳಿಂದ ಈ ವಿಷಯವನ್ನು ಅರಗಿಸಿಕೊಳ್ಳಲಾಗಲಿಲ್ಲ..”ಪ್ರದೀಪ ಎಲ್ಲ ವಿಷಯವನ್ನು ಮೊದಲೇ ನನಗೆ ಹೇಳಿದ್ದ..ಅಲ್ಲದೆ ನೀನು ಕೂಡ ಲವ್ ವಿಷಯ ಹೇಳಿದ್ದೆ..ಸೋ ನಾನು ಶಿವರಾಮಯ್ಯ ಹೇಳಿದ ಮಾತುಗಳನ್ನು ತಲೆಗೆ ತೆಗೆದುಕೊಳ್ಳಲಿಲ್ಲ..” ಎಂದ..ಪಲ್ಲವಿ ಮಾತನಾಡಲಿಲ್ಲ..

ಅವಳು ಇನ್ನೂ ಶಾಕ್ನ ಮೂಡಿನಿಂದ ಹೊರ ಬಂದಿರಲಿಲ್ಲ..”ಪಲ್ಲು ಅದನ್ನೇ ಹೆಚ್ಚು ಯೋಚನೆ ಮಾಡ್ಬೇಡು..ಓಕೆ..ಅದೆಲ್ಲ ಮುಗಿದು ಹೋದ ಕಥೆ..ಬಾ ಹೋಗೋಣ ಆಗಲೇ ಹೊತ್ತಾಗಿದೆ..” ಎಂದ ಗೌತಮ್ ಅವಳನ್ನು ಬಳಸಿದ್ದ ಮುನ್ನಡೆಸಿದ..”ನೀವು ಹೇಗೆ ಇದನ್ನು ಇಷ್ಟು ಲೈಟಾಗಿ ತೆಗೆದುಕೊಂಡಿರಿ..?!” ಅವನ ಜೊತೆ ಹೆಜ್ಜೆಯಿಡುತ್ತಾ ಕೇಳಿದಳು..ಅದಕ್ಕವನು ನಗುತ್ತಾ ಹೇಳಿದ..”ನಂಬಿಕೆ..ವಿಶ್ವಾಸ..” “ಪ್ರೀತಿ ಅಂದರೆ ಏನು..?! ಪರಸ್ಪರ ಮಧುರ ಭಾವನೆ,ನಂಬಿಕೆ,ವಿಶ್ವಾಸ..ಇವುಗಳು ಜೀವನದಲ್ಲಿ ಯಾವತ್ತೂ ಇರ್ಬೇಕು..ಅದಿಲ್ಲ ಅಂದ್ರೆ ಜೀವನಾನೇ ಇಲ್ಲ..!! ಈಗ ಸಮಾಜದಲ್ಲಿ ನಡೆಯುತ್ತಿರುವುದು ಏನು?! ಕೇವಲ ಆಕರ್ಷಣೆಯನ್ನು ಪ್ರೀತಿ ಎಂದುಕೊಂಡು ಮದುವೆಯಾಗುತ್ತಾರೆ..?!..ಪರಸ್ಪರ ಒಬ್ಬರಿಗೊಬ್ಬರಿಗೆ ನಂಬಿಕೆ,ವಿಶ್ವಾಸ,ಪ್ರೀತಿ ಏನೂ ಇರಲ್ಲ..!! ಆಕರ್ಷಣೆ ಕಡಿಮೆಯಾದಂತೆ ಹೋದಾಗ ಸಂಶಯ,ಅವಿಶ್ವಾಸ..ಜಗಳ,ಹೊಡೆದಾಟ..ಎಲ್ಲವೂ ಶುರುವಾಗುತ್ತದೆ..ಕೊನೆಗೆ ಇದು ಹೋಗಿ ತಲಪುವುದು ಡೈವೋರ್ಸ್..!!” ಎಂದು ಸ್ವಲ್ಪ ಹೆಚ್ಚೇ ಹೇಳಿದ..ಪಲ್ಲವಿಯೂ ಅದನ್ನು ಒಪ್ಪಿದಳು..”ಮೋಹನನ ವಿಷಯದಲ್ಲೂ ಅದೇ ನಡೆದಿದ್ದು..ಅವನಿಗೆ ತನ್ನ ಪ್ರೀತಿಯಲ್ಲಿ ನಂಬಿಕೆ,ವಿಶ್ವಾಸ,ದೃಢತೆ ಎಲ್ಲವೂ

ಇರ್ತಿದ್ದರೆ ಇಷ್ಟೆಲ್ಲ ಆಗ್ತಿರಲಿಲ್ಲ..” ಎಂದ ಗೌತಮ್..”ಹೌದು ರೀ..ಕರೆಕ್ಟ್..” ತಲೆಯನ್ನು ಅವನ ಭುಜಕ್ಕೆ ಒರಗಿಸುತ್ತಾ ಎಂದಳು ಪಲ್ಲವಿ..!! “ನೋಡು..ಇನ್ನು ಯಾವತ್ತೂ ನೀನು ಈ ಹಳೆಯ ವಿಷಯವನನ್ನು ತಲೆಗೆ

ಹಚ್ಚಿಕೊಳ್ಳಬಾರ್ದು..ಮತ್ತೆ ಕಣ್ಣೀರು ಹಾಕಬಾರ್ದು..ನಗು ಒಂದೇ ಕಾಣಿಸ್ಬೇಕು..ನಂಗೆ” ಎಂದು ಎಚ್ಚರಿಸಿದ..”ಓಕೆ..ಪತಿ ದೇವ್ರೇ..ಪ್ರಾಮಿಸ್..ಇನ್ನು ಹೀಗಾಗಲ್ಲ..!!” ಎಂದು ನಾಟಕೀಯವಾಗಿ ನುಡಿದು ನಕ್ಕಳು..

“ದಾಟ್ಸ್..ಸ್ವೀಟ್..!!” ಎಂದ ಅವನು ಆ ಹೂ ನಗುವನ್ನು ಕಣ್ತುಂಬಿಕೊಳ್ಳುತ್ತಾ ಅವಳ ಮೃದು ಕೆನ್ನೆಯನ್ನು ಹಿಂಡಿದ..ಆಕಾಶದಲ್ಲಿ ಸೂರ್ಯ ಈ ಮುದ್ದು ಜೋಡಿಯನ್ನು ನೋಡುತ್ತಾ ಖುಷಿಯಿಂದಲೇ ತನ್ನ ಪ್ರಭಾವವನ್ನು ಹೆಚ್ಚಿಸತೊಡಗಿದ್ದ..

-ವಿನೋದ್ ಕೃಷ್ಣ

vinodkrishna210@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post