ಈ ಸಿನಿಮಾಗಳಲ್ಲಿ ಹೀರೋ ಹೀರೋಯಿನ್’ಗಳ ಬದುಕಲ್ಲಿ ಮೂರು ಮ್ಯಾಜಿಕಲ್ ವರ್ಡ್ಸ್ ಬರುವಂತೆ ನಾವು ಸರ್ವೈವರ್’ಗಳ ಬದುಕಲ್ಲೂ ಮೂರು ಮ್ಯಾಜಿಕಲ್ ವರ್ಡ್ಸ್ ಇದೆ. ಆ ಮೂರು ಮ್ಯಾಜಿಕಲ್ ವರ್ಡ್ಸ್’ನ ಕೇಳಿದಾಗ ಸಿಗುವ ಸಂತಸ, ಶಾಂತಿ, ನೆಮ್ಮದಿ ಬೇರೆ ಯಾವುದರಲ್ಲಿಯೂ ಇರುವುದಿಲ್ಲ. ಆದರೆ ಸಿನಿಮಾ ಹೀರೊ ಹೀರೋಯಿನ್’ಗಳ ಮ್ಯಾಜಿಕಲ್ ವರ್ಡ್ಸ್’ಗೂ ನಾವು ಕೇಳ ಬಯಸುವ ಮ್ಯಾಜಿಕಲ್ ವರ್ಡ್ಸ್’ಗೂ ಬಹಳ ವ್ಯತ್ಯಾಸವಿದೆ. ಯಾಕೆಂದರೆ ನಮಗೆ ಆ ಮೂರು ಮ್ಯಾಜಿಕಲ್ ವರ್ಡ್ಸ್ ಹೇಳುವವರು ನಮ್ಮ ಡಾಕ್ಟರ್ ಆಗಿರುತ್ತಾರೆ. ಇನ್ನು ಆ ಮೂರು ಮ್ಯಾಜಿಕಲ್ ವರ್ಡ್ಸ್ ’ಎಲ್ಲಾ ನಾರ್ಮಲ್ ಇದೆ’ ಎನ್ನುವುದಾಗಿರುತ್ತದೆ.
ಕ್ಯಾನ್ಸರ್ ಸರ್ವೈವರ್’ಗಳು ಆರು ತಿಂಗಳಿಗೂ ಅಥವಾ ವರ್ಷಕ್ಕೋ ತಮ್ಮ ಚೆಕ್’ಅಪ್ ಮಾಡಿಸಿಕೊಳ್ಳಲು ಹೋದಾಗ ಕೇಳ ಬಯಸುವುದು ಈ ಮೂರು ಪದಗಳನ್ನೇ..! ಆ ಮೂರು ಪದಗಳನ್ನ ಕೇಳುವುದಕ್ಕೂ ಮುನ್ನ ಅವರೆಷ್ಟು ಭಯ ಪಟ್ಟಿರುತ್ತಾರೆ, ನರ್ವಸ್ ಆಗಿರುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಬದುಕಿನಲ್ಲಿ ಎಷ್ಟೇ ಸಂತಸದಿಂದಿದ್ದರೂ, ಬದುಕು ಕಲಿಸಿದ ಎಷ್ಟೋ ಪಾಠಗಳನ್ನ ಕಲಿತಿದ್ದರೂ, ಭಯ ಎನ್ನುವುದು ವ್ಯರ್ಥ ಎನ್ನುವುದು ಗೊತ್ತಿದ್ದರೂ ಚೆಕ್’ಅಪ್ ಮಾಡಿಸಿಕೊಳ್ಳುವ ಆ ಒಂದು ದಿನದ ಪ್ರತಿ ನಿಮಿಷಗಳು ಯುಗಗಳಂತೆ ಕಳೆಯುತ್ತಿರುತ್ತದೆ.
ಇತ್ತೀಚೆಗೆ ಸ್ಕ್ಯಾನ್’ಕ್ಸೈಟಿ ಎಂಬ ಹೊಸ ಪದವೊಂದು ಹುಟ್ಟಿಕೊಂಡಿದೆ. ಕ್ಯಾನ್ಸರ್ ಸರ್ವೈವರ್’ಗಳಿಗೆ ಸ್ಕ್ಯಾನ್ ಬಗ್ಗೆ ಇರುವ ಚಿಂತೆಗೆ ಸ್ಕ್ಯಾನ್’ಕ್ಸೈಟಿ ಎನ್ನುತ್ತಾರೆ. ಸ್ಕ್ಯಾನ್+ಆಂಕ್ಸೈಟಿ ಒಟ್ಟಾಗಿ ಸೇರಿ ಸ್ಕ್ಯಾನ್’ಕ್ಸೈಟಿಯಾಗಿದೆ. ಸಾಮಾನ್ಯವಾಗಿ ಸಣ್ಣ ಪುಟ್ಟ ಖಾಯಿಲೆಗಳಿಗೆ ಡಾಕ್ಟರ್ ಬಳಿ ಹೋದಾಗ, “ಯಾವುದಕ್ಕೂ ಒಮ್ಮೆ ಸ್ಕ್ಯಾನ್ ಮಾಡಿ ನೋಡೋಣವಾ?” ಎಂದರೆ ಸಾಕು ಸಣ್ಣ ನಡುಕ ಶುರುವಾಗಿರುತ್ತದೆ. ಇನ್ನು ಒಬ್ಬ ಸರ್ವೈವರ್ ಪ್ರತಿ ಬಾರಿ ಕ್ಯಾನ್ಸರ್’ಗಾಗಿಯೇ ಸ್ಕ್ಯಾನ್ ಮಾಡಿಸಿಕೊಳ್ಳಲು ಹೋದವನ ಮನಸ್ಥಿತಿಯನ್ನ ಯೋಚಿಸಿ. ’ಎಲ್ಲಾ ನಾರ್ಮಲ್ ಇದೆ’ ಎನ್ನುವ ಸರಳವಾದ ಮೂರು ಪದಗಳು ಮ್ಯಾಜಿಕಲ್ ವರ್ಡ್ಸ್ ಆಗದೇ ಇರುತ್ತದೆಯೇ?!
ಕ್ಯಾನ್ಸರ್’ನ ನಂತರ ಹುಟ್ಟಿಕೊಳ್ಳುವ ಭಯವಲ್ಲ ಇದು. ಕ್ಯಾನ್ಸರಿನೊಂದಿಗೇ ಹುಟ್ಟಿಕೊಳ್ಳುತ್ತದೆ ಈ ಸ್ಕ್ಯಾನ್’ಕ್ಸೈಟಿ. ಯಾಕೆಂದರೆ ಯಾವುದೋ ಸ್ಕ್ಯಾನ್’ನ ನಂತರವೇ ಕ್ಯಾನ್ಸರ್ ಇರುವುದು ಪತ್ತೆಯಾಗಿರುತ್ತದೆ. ಅದರ ನಂತರ ಬೇರೆ ಕಡೆ ಹರಡಿದೆಯೇ ಎಂದು ಪದೇ ಪದೇ ಬೇರೆ ಬೇರೆ ರೀತಿಯ ಸ್ಕ್ಯಾನ್ ಮಾಡಿಸಿಕೊಳ್ಳುವಾಗ ಸ್ಕ್ಯಾನ್ ಎನ್ನುವುದೇ ಒಂದು ದೊಡ್ಡ ತಲೆ ನೋವಾಗಿರುತ್ತದೆ. ಪ್ರತಿ ಬಾರಿ ಸ್ಕ್ಯಾನ್ ಮುಗಿದಾಗಲೂ ರಿಪೋರ್ಟ್’ಗಾಗಿ ಕಾಯುತ್ತಾ ’ಎಲ್ಲಾ ಸರಿ ಇದ್ದರೆ ಸಾಕು’ ಎಂದು ಮನದಲ್ಲೇ ಅಂದುಕೊಳ್ಳುತ್ತಾ ಕೂರುವುದು ಇನ್ನೊಂದು ತಲೆಬಿಸಿ. ಇನ್ನು ಚಿಕಿತ್ಸೆ ಆರಂಭವಾದ ಕೆಲ ದಿನವೋ ಅಥವಾ ತಿಂಗಳ ನಂತರ ಚಿಕಿತ್ಸೆಯ ಪರಿಣಾಮ ಹೇಗಿದೆ ಅಂತ ನೋಡಲು ಮತ್ತೆ ಸ್ಕ್ಯಾನ್! ಆ ಸ್ಕ್ಯಾನ್ ಮೇಲೆ ನಮ್ಮ ಇಡೀ ಭವಿಷ್ಯ ನಿರ್ಧರಿತವಾಗಿರುತ್ತದೆ. ಭವಿಷ್ಯ ಇದೆಯೋ? ಇಲ್ಲವೋ? ಅನ್ನುವುದು ಕೂಡ ಆ ಸ್ಕ್ಯಾನ್ ನಿರ್ಧರಿಸುತ್ತದೆ. ಇದೆಲ್ಲದರ ನಂತರವೂ ಸ್ಕ್ಯಾನ್ ಅಂದರೆ ಚಿಂತೆ ಆಗದಿರಲು ಹೇಗೆ ಸಾಧ್ಯ?
ನನಗಂತೂ ಎಷ್ಟು ಸ್ಕ್ಯಾನ್’ಗಳು ಆಗಿ ಹೋಗಿದ್ದವೆಂದರೆ ಮಣಿಪಾಲ್’ನಲ್ಲಿದ್ದ ಇರುವ ಮುಕ್ಕಾಲು ಭಾಗ ಮಶೀನ್’ಗಳಿಗೆ ನನ್ನ ಪರಿಚಯ ಆಗಿ ಹೋಗಿತ್ತು. ಕೆಲವೊಂದು ಬಾರಿ ಒಂದೇ ರೀತಿಯ ಸ್ಕ್ಯಾನ್ ೨-೩ ಬಾರಿ ಆಗಿ ಬಿಟ್ಟಿತ್ತು. ಇನ್ನೊಂದೆರಡು ಸಲ ಹೀಗೆ ಆದರೆ ಆ ಮಶೀನ್’ಗಳೇ ’ಎಷ್ಟು ಸಲ ಸ್ಕ್ಯಾನ್ ಮಾಡೋದು ಮಾರಾಯ್ತಿ” ಅಂತ ಕೇಳಿ ಬಿಡುತ್ತವೇನೋ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು! ಸ್ಕ್ಯಾನ್ ಎಂದರೆ ಎಲ್ಲಿ ಏನೇನು ಸಮಸ್ಯೆ ಇದೆಯೋ ಅನ್ನುವಷ್ಟು ರೋಸಿ ಹೋಗಿದ್ದೆ. ಕೆಲ ಕೀಮೋ ನಂತರ ಅದರ ಪರಿಣಾಮ ನೋಡಲು ಸ್ಕ್ಯಾನ್ ಮಾಡಿದಾಗಲಂತೂ ಪೂರ್ತಿ ಒಂದು ದಿನ ರಿಪೋರ್ಟ್’ಗಾಗಿ ಕಾಯಬೇಕಿತ್ತು.!! ಆ ಒಂದು ದಿನ ಬೇಗ ಕಳೆಯುತ್ತಲೇ ಇರಲಿಲ್ಲ. ಆ ಸಮಯವೇ ಅಂಥದ್ದು! ಇರೋ ಬರೋ ದೇವರ ಹೆಸರುಗಳೆಲ್ಲ ನೆನಪಾಗಿ ಬಿಡುತ್ತದೆ. ಅಷ್ಟೊಂದು ನೆನೆಸಿಕೊಂಡಿದ್ದಕ್ಕೆ ದೇವರು ಪ್ರತ್ಯಕ್ಷ ಆದರೂ ಆಶ್ಚರ್ಯವಿಲ್ಲ!!! ಹೃದಯ ಬಡಿತ ಕೇಳೋದಿಕ್ಕೆ ಸ್ತೆಥಾಸ್ಕೋಪ್ ಕೂಡ ಬೇಕಾಗೋದಿಲ್ಲ. ಪ್ರತಿಬಾರಿ ಒಬ್ಬ ಸರ್ವೈವರ್ ಸ್ಕ್ಯಾನ್ ಹಾಗೂ ಟೆಸ್ಟ್’ಗಳಿಗೆ ಹೋದಾಗಲೂ ಇದೆ ಅನುಭವವಾಗುವುದು. ನಿಜವಾಗಿ ಆ ಭಯ ಯಾವುದರ ಬಗ್ಗೆ? ಸಾವಿನ ಕುರಿತಾ ಅಥವಾ ಕ್ಯಾನ್ಸರ್ ಕುರಿತಾ?! ಈ ಪ್ರಶ್ನೆ ಕೇಳಿಕೊಂಡಾಗಲೆಲ್ಲ ’ಬಹುಶಃ ಕ್ಯಾನ್ಸರ್ ಕುರಿತೇ ಇರಬೇಕು’ ಎನಿಸಿದ್ದುಂಟು.
ಮೊನ್ನೆ ಒಬ್ಬ ಕ್ಯಾನ್ಸರ್ ಸರ್ವೈವರ್’ನ ಬ್ಲಾಗ್ ಓದುತ್ತಿದ್ದೆ. ಆಕೆ ೫ ಬಾರಿ ಕ್ಯಾನ್ಸರ್’ಗೆ ಒಳಗಾಗಿದ್ದಳು. ಐದು ಬಾರಿ ಎಂದರೆ ಅದಕ್ಕೂ ಮುನ್ನ ಆಕೆ ಎಷ್ಟು ಬಾರಿ ಸ್ಕ್ಯಾನ್ ಮಾಡಿಸಿಕೊಂಡಿರಬಹುದು ಯೋಚಿಸಿ. ಅದರಲ್ಲಿ ಸಾಕಷ್ಟು ಬಾರಿ ಮೂರು ಮ್ಯಾಜಿಕಲ್ ವರ್ಡ್ಸ್ ಕೂಡ ಕೇಳ ಸಿಕ್ಕಿರಬಹುದು. ಇನ್ನುಳಿದ ಬಾರಿ ಅತಿ ಕಠಿಣ ಶಬ್ದಗಳೇ ಸಿಕ್ಕಿರುತ್ತವೆ.! ಆ ಅಷ್ಟೂ ಬಾರಿ ಆಕೆ ಸ್ಕ್ಯಾನ್ ಮಾಡಿಸಿಕೊಳ್ಳುವಾಗ ಆಕೆಯ ಸ್ಕ್ಯಾನ್’ಕ್ಸೈಟಿ ಎಷ್ಟಿರಬಹುದು!! ಆಕೆ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಳು, ೨ನೇ ಬಾರಿ ತನಗೆ ಕ್ಯಾನ್ಸರ್ ಎಂದು ತಿಳಿದಾಗ, ಆಕೆ ಮನೆಗೆ ಬಂದವಳೇ ಬಾತ್’ರೂಮಿಗೆ ಹೋಗಿ “ಇದಕ್ಕಿಂತ ಯಾವುದೋ ಅಪಘಾತದಲ್ಲಿ ಸಾವುಂಟಾಗಿದ್ದರೆ ಚೆನ್ನಾಗಿತ್ತು” ಎಂದು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದಳಂತೆ..! ಹೇಳಿದೆನಲ್ಲ ಕೆಲವೊಮ್ಮೆ ಸಾವಿಗಿಂತ ಕ್ಯಾನ್ಸರ್ ಎನ್ನುವುದೇ ಹೆಚ್ಚು ಭಯಾನಕವಾಗಿರುತ್ತದೆ. ಆದರೆ ಆಕೆ ಮತ್ತೆ ಮುಂದುವರೆದು, ’ಹಾಗಂತ ಅಪಘಾತವಾಗಿದ್ದರೆ ಸಮಾಧಾನವಾಗುತ್ತಿತ್ತಾ? ಖಂಡಿತಾ ಇಲ್ಲ” ಎನ್ನುತ್ತಾಳೆ. ಯಾಕೆಂದರೆ ನಮಗೆ ಬದುಕುವುದು ಎಷ್ಟು ಅಭ್ಯಾಸವಾಗಿ ಬಿಟ್ಟಿರುತ್ತದೆ ಎಂದರೆ ಆ ಅಭ್ಯಾಸವನ್ನ ಬಿಡುವುದಕ್ಕೇ ಆಗುವುದಿಲ್ಲ.!! ಅದೇನೆ ಇರಲಿ ಐದು ಬಾರಿ ಎಂದರೆ ಸುಮ್ಮನೇ ಅಲ್ಲ. ಆಕೆಗೆ ಈಗ ೩೪ ವರ್ಷ. ಹಿಂದಿನ ೩೦ ವರ್ಷಗಳಿಂದಲೂ ಆಕೆ ಇದನ್ನೆಲ್ಲಾ ಎದುರಿಸುತ್ತಲೇ ಬಂದಿದ್ದಾಳೆ. ನೆನೆಸಿಕೊಂಡರೆ ಬಹಳ ಹೆಮ್ಮೆ ಎನಿಸುತ್ತದೆ.
ಈ ಭಯ ಅನ್ನುವುದು ’ಮುಂದೇನಾದರು ಕೆಟ್ಟದ್ದು ಆಗಿ ಬಿಡುವುದೇನೋ ಎಂಬ ಕಲ್ಪನೆ’ ಅಷ್ಟೇ! ನಾವು ಭಯ ಪಡುವುದರಿಂದ ರಿಪೋರ್ಟ್ ಮೇಲೆ ಪರಿಣಾಮ ಬೀರಿ ಅದು ಸರಿಯಾಗುವುದಿಲ್ಲ, ರಿಪೋರ್ಟ್ ಬರುವ ಹಾಗೆಯೇ ಬರುವುದು ಅದರಲ್ಲೇನೂ ವ್ಯತ್ಯಾಸ ಆಗುವುದಿಲ್ಲ ಎಂಬುಂದಂತೂ ಸತ್ಯ. ಆದರೆ ಈ ವೇದಾಂತ ಎಲ್ಲ ಸ್ಕ್ಯಾನ್ ಮುಗಿಸಿ ರಿಪೋರ್ಟ್’ಗೆ ಕಾಯುವಾಗ ನೆನಪಾಗುವುದಿಲ್ಲ ಎನ್ನುವುದು ಅದಕ್ಕಿಂತಲೂ ದೊಡ್ದ ಸತ್ಯ. ಆದರೆ ಒಂದಂಶ ನೆನಪಿರಲಿ ಈ ಭಯ, ಚಿಂತೆ ಅಥವಾ ಸ್ಕ್ಯಾನ್’ಕ್ಸೈಟಿ ಎನ್ನುವುದು ತುಂಬಾ ಸಹಜ. ಪ್ರತಿ ಕ್ಯಾನ್ಸರ್ ಸರ್ವೈವರ್’ಗೂ ಆಗುವಂತದ್ದೆ.. ಆದರೆ ಆ ಸಮಯದಲ್ಲಿ ನಮ್ಮ ಸುತ್ತ ಒಂದಿಷ್ಟು ಪಾಸಿಟಿವ್ ವ್ಯಕ್ತಿಗಳನ್ನು ಇಟ್ಟುಕೊಳ್ಳುವುದರ ಮೂಲಕ, ಸ್ವಲ್ಪ ಕಷ್ಟವಾದರೂ ಒಳ್ಳೊಳ್ಳೆ ಯೋಚನೆ ಮಾಡುವುದರ ಮೂಲಕ, ಗೆಳೆಯರೊಂದಿಗೆ ಹರಟೆ-ನಗುವಿನೊಂದಿಗೆ ಈ ಸ್ಕ್ಯಾನ್’ಕ್ಸೈಟಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನವಂತೂ ಮಾಡಬಹುದು. ಯಾರಿಗೆ ಗೊತ್ತು.. ಧನಾತ್ಮಕವಾಗಿ ಯೋಚನೆ ಮಾಡುತ್ತಾ ಮಾಡುತ್ತಾ ನಿಮಗೆ ಪ್ರತಿ ಬಾರಿ ಮ್ಯಾಜಿಕಲ್ ವರ್ಡ್’ಗಳನ್ನೇ ಕೇಳುವ ಅವಕಾಶ ಸಿಗಬಹುದು!! ಪ್ರಯತ್ನ ಮಾಡಿ ನೋಡಿ.
Facebook ಕಾಮೆಂಟ್ಸ್