ಮೊನ್ನೆ ಸುಮನಾ ಅವರು ಒಂದು ವೀಡಿಯೋ ಕಳುಹಿಸಿ ಕೊಟ್ಟಿದ್ದರು. ಗ್ಯಾಬಿ ಶುಲ್ ಎಂಬ ೧೪-೧೫ ವರ್ಷದ ಹುಡುಗಿಯೊಬ್ಬಳು ಬ್ಯಾಲೆ ನೃತ್ಯ ಅಭ್ಯಾಸ ಮಾಡುತ್ತಿರುವ ವೀಡಿಯೋ ಅದು. ಆಕೆ ಪ್ರೊಸ್ತೆಟಿಕ್ ಲೆಗ್ (ಕೃತಕ ಕಾಲು)ನ್ನು ಬಳಸಿ ಇತರರಂತೆಯೇ ಆರಾಮಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ತನ್ನ ಒಂಭತ್ತನೇ ವಯಸ್ಸಿನಲ್ಲಿ ಬೋನ್ ಕ್ಯಾನ್ಸರಿಗೆ ತುತ್ತಾಗಿ ಕಾಲು ಕಳೆದುಕೊಂಡರೂ, ಈಗ ತನ್ನ ಕೃತಕ ಕಾಲನ್ನೇ ಬಳಸಿ ನೃತ್ಯವನ್ನು ಮುಂದುವರಿಸಿದ್ದಾಳೆ. ತನ್ನ ಮನೋಸ್ಥೈರ್ಯದಿಂದ ಪ್ರತಿಯೊಬ್ಬ ವ್ಯಕ್ತಿಗೂ ಆಕೆ ಸ್ಪೂರ್ತಿಯಾಗಬಲ್ಲಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇನ್ನೊಂದು ಕಾರಣಕ್ಕೆ ಕೂಡ ವಿಶೇಷ ಎನಿಸಿಕೊಳ್ಳುತ್ತಾಳೆ. ಆಕೆ ತೆಗೆದುಕೊಂಡ ದಿಟ್ಟ ನಿರ್ಧಾರಕ್ಕೆ! ರೊಟೇಷನ್ ಪ್ಲಾಸ್ಟಿ ಎಂಬ ಸರ್ಜರಿಯನ್ನ ಆಯ್ಕೆ ಮಾಡಿಕೊಂಡ ಆಕೆಯ ನಿರ್ಧಾರ ಯಾರನ್ನಾದರೂ ಅಚ್ಚರಿಗೊಳಿಸಬಲ್ಲದು..!
ರೊಟೇಷನ್ ಪ್ಲಾಸ್ಟಿ ಎಂದಾಕ್ಷಣ ಒಮ್ಮೆ ನನ್ನ ಕಿವಿ ನೆಟ್ಟಗಾಗುವುದು. ಆಕೆಯ ವೀಡಿಯೋ ನೋಡುತ್ತಿದ್ದಂತೆ ‘ಅರೆ.. ಇದು ರೊಟೇಷನ್ ಪ್ಲಾಸ್ಟಿ ಅಲ್ವಾ..?’ ಎಂದಿದ್ದೆ. ಯಾಕೆಂದರೆ ಮೊದಲು ನನಗೂ ಕೂಡ ರೊಟೇಷನ್ ಪ್ಲಾಸ್ಟಿ ಮಾಡುವುದು ಎಂದಾಗಿತ್ತು. ಆದರೆ ನಿಧಾನವಾಗಿ ಅದು ಬದಲಾಯಿತು.
ನಾನು ೨ನೇ ಕೀಮೋಗಾಗಿ ಆಸ್ಪತ್ರೆಯಲ್ಲಿದ್ದಾಗ ಆರ್ಥೋಪೆಡಿಕ್’ನಿಂದ ಡಾಕ್ಟರ್ ರಿತೇಶ್ ನನ್ನನ್ನ ಭೇಟಿ ಮಾಡಲು ಬಂದಿದ್ದರು. ಸುಮ್ಮನೆ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದವರು, ಧೈರ್ಯದ ಮಾತುಗಳನ್ನ ಹೇಳುತ್ತಾ, ಕೀಮೋ ಬಗ್ಗೆ ಕೂಡ ಎಲ್ಲವನ್ನೂ ವಿವರಿಸುತ್ತಿದ್ದರು. ಅದರ ಜೊತೆಗೇ ಮುಂದೆ ಯಾವ ರೀತಿಯ ಸರ್ಜರಿ ಮಾಡಬಹುದು ಎಂಬುದರ ಬಗ್ಗೆಯೂ ಹೇಳಿದರು. ಎಲ್ಲಾ ಬೋನ್ ಕ್ಯಾನ್ಸರ್’ಗೂ ಒಂದೇ ರೀತಿಯ ಸರ್ಜರಿ ಮಾಡುವುದಿಲ್ಲ. ದೇಹದ ಯಾವ ಭಾಗದಲ್ಲಿ ಟ್ಯೂಮರ್ ಇದೆ? ಎಷ್ಟು ದೊಡ್ಡದಿದೆ ಎಂದು ಎಲ್ಲವನ್ನೂ ನೋಡಬೇಕಾಗುತ್ತದೆ. ಅದರ ಜೊತೆಗೆ ಯಾವ ರೀತಿಯ ಸರ್ಜರಿಯನ್ನು ಆಯ್ಕೆ ಮಾಡಿಕೊಂಡರೆ ಮುಂದೆ ರೋಗಿಗೆ ಸಹಾಯಕವಾಗಬಹುದು, ಆ ಸರ್ಜರಿಯ ಸಾಧಕ ಬಾಧಕಗಳೇನು ಎಂಬ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ.ಕೊನೆಯ ನಿರ್ಧಾರ ಹೇಗಿದ್ದರೂ ರೋಗಿಯದೇ ಆಗಿರುತ್ತದೆ. ಅಂದು ರಿತೇಶ್ ಅವರು ಗ್ರಾಫ್ಟಿಂಗ್ ಬಗ್ಗೆ ವಿವರಿಸಿದ್ದರು. ಗ್ರಾಫ್ಟಿಂಗ್’ನಲ್ಲಿ ಕೆಲವೊಮ್ಮೆ ದೇಹದ ಇತರ ಭಾಗದ ಮೂಳೆಯ ಸ್ವಲ್ಪ ಭಾಗವನ್ನು ತೆಗೆದು ಬಳಸಲಾಗುತ್ತದೆ, ಕೆಲವೊಮ್ಮೆ ಡೋನರ್ ಕೂಡ ಬೇಕಾಗಬಹುದು. ಮೊದಲೇ ಹೇಳಿದಂತೆ ಇದನ್ನೆಲ್ಲಾ ನಿರ್ಧರಿಸುವುದು ಟ್ಯೂಮರ್! ಆದರೆ ಆ ಸಮಯದಲ್ಲಿ ನನಗೆ ಗ್ರಾಫ್ಟಿಂಗ್ ಮಾಡಲಾಗುವುದು ಎಂದೇ ನಂಬಿಕೊಂಡಿದ್ದೆ! ಆದರೆ ನಿಧಾನವಾಗಿ ಕೆಲಸಮಯದ ನಂತರ ರೊಟೇಷನ್ ಪ್ಲಾಸ್ಟಿಯ ಹೆಸರು ಕೇಳಿ ಬಂದಿತು…!
ರೊಟೇಷನ್ ಪ್ಲಾಸ್ಟಿಯ ಬಗ್ಗೆ ಕೇಳ್ಪಟ್ಟಾಗ ಅದರ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ಕೀಮೋ ನಂತರ ಏನು ಎಂದವರಿಗೆ ‘ಅದೇನೋ.. ರೊಟೇಷನ್ ಪ್ಲಾಸ್ಟಿ ಮಾಡ್ತಾರಂತೆ’ ಎಂದಷ್ಟೇ ನನ್ನ ಉತ್ತರವಾಗಿತ್ತು. ಆದರೆ ಅದು ಯಾವ ರೀತಿ ಇರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
ಕೀಮೋ ಮುಗಿದ ನಂತರ ಸರ್ಜರಿಗೂ ಕೆಲ ದಿನಗಳ ಮೊದಲು ಡಾಕ್ಟರ್ ನನ್ನ ತಂದೆಯನ್ನು ಕರೆದು ಸರ್ಜರಿಯ ಬಗ್ಗೆ ವಿವರಿಸುತ್ತಿದ್ದರು. ಯಾವ ರೀತಿಯ ಸರ್ಜರಿ ಮಾಡಲಾಗುತ್ತದೆ ಅದರ ನಂತರದ ಪರಿಣಾಮಗಳೇನು ಎಂದೆಲ್ಲಾ ತಿಳಿಸಿದರು. ಅದನ್ನೇ ರೊಟೇಷನ್ ಪ್ಲಾಸ್ಟಿ ಎಂದುಕೊಂಡಿದ್ದ ತಂದೆಯವರಿಗೆ, “ಇದು ರೊಟೇಷನ್ ಪ್ಲಾಸ್ಟಿ ಅಲ್ಲ. ಇದು ಬೇರೆ. ಅವಳಿಗೆ ಇದನ್ನೇ ಮಾಡಬೇಕಾಗುತ್ತದೆ!” ಎಂದಿದ್ದರು. ಲಿಂಬ್ ಸಾಲ್ವೇಜ್ ಎಂಬ ಇನ್ನೊಂದು ರೀತಿಯ ಸರ್ಜರಿಯನ್ನು ಮಾಡಲಾಗಿತ್ತು..! ಆದರೆ ರೊಟೇಷನ್ ಪ್ಲಾಸ್ಟಿ ಎನ್ನುವುದು ಮನಸಿನಲ್ಲಿ ಹಾಗೆ ಉಳಿದಿತ್ತು. ಇಂಟರ್ನೆಟ್ ವ್ಯವಸ್ಥೆ ಸಿಕ್ಕ ನಂತರ ಮೊದಲು ಮಾಡಿದ ಕೆಲಸವೇ ರೊಟೇಷನ್ ಪ್ಲಾಸ್ಟಿಗೆ ಸಂಬಂಧಪಟ್ಟ ವೀಡಿಯೋ ನೋಡಿದ್ದು!. ಅದನ್ನ ನೋಡಿ ನನಗೆ ನಿಜಕ್ಕೂ ಶಾಕ್ ಆಗಿತ್ತು.
ರೊಟೇಷನ್ ಪ್ಲಾಸ್ಟಿಯಲ್ಲಿ ಮಂಡಿಯ ಭಾಗವನ್ನು ಕತ್ತರಿಸಲಾಗುತ್ತದೆ ಹಾಗೂ ಪಾದವನ್ನು(ankle) ಹಿಮ್ಮುಖವಾಗಿ ಆ ಜಾಗದಲ್ಲಿ ಜೋಡಿಸಲಾಗುತ್ತದೆ. ಇಲ್ಲಿ ಪಾದವು ಮಂಡಿಯಂತೆ ಕೆಲಸ ಮಾಡುತ್ತದೆ. ಅದರ ಕೆಳಗೆ ಕೃತಕ ಕಾಲನ್ನು ಜೋಡಿಸಲಾಗುತ್ತದೆ. ಇದನ್ನ ಪಾರ್ಷಿಯಲ್ ಆಂಪ್ಯೂಟೇಷನ್ ಎಂದು ಕೂಡ ಕರೆಯುತ್ತಾರೆ. ಕೇಳುವುದಕ್ಕೆ ವಿಚಿತ್ರ ಎನಿಸುತ್ತದೆ. ಆದರೆ ಇದರ ಒಂದು ಅನುಕೂಲವೆಂದರೆ ಇಲ್ಲಿ ಕಾಲು ಸಾಕಷ್ಟು ಮಟ್ಟಿಗೆ ಮೊದಲಿನಂತೆ ಕಾರ್ಯ ನಿರ್ವಹಿಸಬಲ್ಲದು (ಉಳಿದ ವಿಧಾನಗಳಿಗೆ ಹೋಲಿಸಿದರೆ). ಇದರ ದೊಡ್ಡ ಅನಾನುಕೂಲವೆಂದರೆ ಇದರ ರೂಪ.!
ನಾವು ನಮ್ಮನ್ನ ಗುರುತಿಸಿಕೊಳ್ಳುವುದೇ ನಮ್ಮ ದೇಹದಿಂದ. ನಾನು ಎನ್ನುವುದೇ ಈ ದೇಹ ಎನ್ನುವಷ್ಟರ ಮಟ್ಟಿಗೆ ಇದಕ್ಕೆ ಅಂಟಿಕೊಂಡಿಕೊಂಡಿರುತ್ತೇವೆ. ಅಂಥದ್ದರಲ್ಲಿ ನಮ್ಮ ದೇಹದ ಒಂದು ಭಾಗವನ್ನೇ ಕಳೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಯಾರಿಗೇ ಆಗಲಿ ಅದನ್ನ ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಆದರೆ ಗ್ಯಾಬಿ ಈ ಸರ್ಜರಿಯನ್ನು ಒಪ್ಪಿಕೊಂಡಾಗ ಆಕೆಗೆ ಕೇವಲ ಒಂಭತ್ತು ವರ್ಷ. ಆಕೆಗೆ ಇದರ ಬಗ್ಗೆ ತಿಳಿದಿರಲಿಲ್ಲವೆಂದೇನಲ್ಲ. ರೊಟೇಷನ್’ಪ್ಲಾಸ್ಟಿಯ ಹಲವು ವೀಡಿಯೋಗಳನ್ನು ಆಕೆ ನೋಡಿದ್ದಳು. ಆಕೆಗೆ ಬೇರೆಯ ಆಯ್ಕೆಗಳು ಕೂಡ ಇದ್ದವು. ಆದರೆ ಈ ಸರ್ಜರಿಯ ನಂತರ ತಾನು ಮತ್ತೆ ನೃತ್ಯದಲ್ಲಿ ತೊಡಗಿಕೊಳ್ಳಬಹುದು ಎನ್ನುವ ವಿಷಯ ಆಕೆಯನ್ನು ಇಂತಹ ಕಠಿಣ ನಿರ್ಧಾರಕ್ಕೆ ತಲೆದೂಗುವಂತೆ ಪ್ರೇರೇಪಿಸಿತ್ತು.! ಗ್ಯಾಬಿಯ ಅಂತಹ ಗಟ್ಟಿ ಮನಸ್ಸಿಗೆ ನಾವೆಲ್ಲ ಒಮ್ಮೆ ತಲೆದೂಗಲೇಬೇಕು.
ಇಂತಹದೇ ಕಠಿಣ ನಿರ್ಧಾರಕ್ಕೆ ಯೆಸ್ ಎಂದವರಲ್ಲಿ ಶಾನ್ ಡೆವೆರ್ ಎಂಬಾತ ಕೂಡ ಒಬ್ಬ. ಆತನ ತಾಯಿ “ರೊಟೇಷನ್ ಪ್ಲಾಸ್ಟಿಯ ಈ ನಿರ್ಧಾರ ಬಗ್ಗೆ ನಿನಗೆ ಖುಷಿಯಿದೆ ತಾನೆ?” ಎಂದು ಕೇಳಿದಾಗ, ಯಾವುದೇ ಅಳುಕಿಲ್ಲದೇ “ಯೆಸ್” ಎಂದಿದ್ದ. ಶಾನ್ ಆಸ್ಟಿಯೋಸರ್ಕೋಮಾಗೆ ಒಳಗಾದಾಗ ಡಾಕ್ಟರ್’ಗಳು ರೊಟೇಷನ್ ಪ್ಲಾಸ್ಟಿ ಅಥವಾ ಲಿಂಬ್ ಸಾಲ್ವೇಜ್ ಎಂಬ ಆಯ್ಕೆಯನ್ನು ನೀಡಿದ್ದರು. ಲಿಂಬ್ ಸಾಲ್ವೇಜ್ ಆಯ್ಕೆ ಮಾಡಿಕೊಂಡಲ್ಲಿ ಆತ ಹೊರಗೆ ಆಟ ಆಡುವುದನ್ನ ಮರೆಯಲೇಬೇಕು ಎಂದು ಬಿಟ್ಟಿದ್ದರು. ರೊಟೇಷನ್ ಪ್ಲಾಸ್ಟಿ ಕೇಳುವುದಕ್ಕೇ ವಿಚಿತ್ರವಾಗಿತ್ತು. ಆತನ ಕುಟುಂಬದವರಿಗೆ ಇದೊಂದು ಕಠಿಣ ನಿರ್ಧಾರವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಶಾನ್ ಏನನ್ನ ಬಯಸುತ್ತಾನೆ ಎನ್ನುವುದು ಮುಖ್ಯವಾಗಿತ್ತು. ಹಾಗಾಗಿ ಆಯ್ಕೆಗಳನ್ನ ಆತನ ಮುಂದೆ ಇಟ್ಟಿದ್ದರು. ಆತನ ಆಯ್ಕೆ ರೊಟೇಷನ್ ಪ್ಲಾಸ್ಟಿ ಆಗಿತ್ತು! ಕೇಳುವಷ್ಟು ಸುಲಭವಲ್ಲ ಎಂದು ಆತನಿಗೂ ಗೊತ್ತಿತ್ತು! ಯಾಕೆಂದರೆ ಹೊಸ ರೀತಿಯ ಕಾಲಿಗೆ ಹೊಂದಿಕೊಳ್ಳುವುದಕ್ಕೇ ತಿಂಗಳುಗಳು ಬೇಕಾಗುವುದು. ಅಲ್ಲಿಯ ತನಕ ನೋವು ಬೇರೆ! ಇಷ್ಟೆಲ್ಲ ತಿಳಿದಿದ್ದರೂ ಆತನ ಆಯ್ಕೆ ಬದಲಾಗಲಿಲ್ಲ. ಈಗ ಆತ ಬಾಸ್ಕೆಟ್’ಬಾಲ್, ಫೂಟ್’ಬಾಲ್ ಹಾಗೂ ರೆಸ್ಟ್ಲಿಂಗ್’ಗಳಲ್ಲಿ ಭಾಗವಹಿಸುತ್ತಾನೆ!!!
ನಾವು ಯಾವಾಗಲೂ ಸಾಮಾನ್ಯವಾಗಿ ಅನುಕೂಲಗಳನ್ನು ನೋಡುತ್ತೇವೆ. ಆದರೆ ಕ್ಯಾನ್ಸರ್ ಕಲಿಸುವುದು ಅನಾನುಕೂಲತೆಯಲ್ಲಿ ಇದ್ದಿದ್ದರಲ್ಲಿ ಉತ್ತಮ ಯಾವುದು ಎಂದು ನೋಡುವುದನ್ನ! ಅನಾನುಕೂಲತೆಗಳಿಗೆ ಹೊಂದಿಕೊಂಡು ಹೋಗುವುದನ್ನ ಕಲಿಸಿನ್ಕೊಡುತ್ತದೆ. ಅದನ್ನ ಅಪ್ಪಿಕೊಂಡು ಬದುಕಿನಲ್ಲಿ ಮುಂದೆ ಸಾಗುವುದನ್ನ ಹೇಳಿನ್ಕೊಡುತ್ತದೆ. ನಮ್ಮೆಲ್ಲ ಕೊರತೆಗಳಲ್ಲೂ ಖುಷಿಯಾಗಿರುವುದನ್ನ ಅಭ್ಯಾಸ ಮಾಡಿಸುತ್ತದೆ. ಹಾಂ.. ಸ್ವಲ್ಪ ಗಟ್ಟಿ ಮನಸ್ಸು ಬೇಕು. ಅದು ಎಲ್ಲರಲ್ಲೂ ಇರುವಂಥದ್ದೇ, ಸಮಯದೊಂದಿಗೆ ಅದರ ಅರಿವಾಗುತ್ತದೆ. ಅದೇನೆ ಇರಲಿ ಗ್ಯಾಬಿ ಹಾಗೂ ಶಾನ್ ಅವರು ತೋರಿದ ಮನೋಸ್ಥೈರ್ಯ, ಜೀವನ ಪ್ರೀತಿಗೆ ಹಾಗೂ ಬದುಕನ್ನ ಅಪ್ಪಿಕೊಂಡಿರುವ ರೀತಿಗೆ ಅಭಿನಂದಿಸಲೇಬೇಕು.!
Facebook ಕಾಮೆಂಟ್ಸ್