X

ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ…?

ಇಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ ಸಿಹಿ, ಮಾಂಸಾಹಾರಿಗಳಾಗಿದ್ದರೆ ಕೊನೆಯ ದಿನ ಬಾಡೂಟ ಹಾಕಿಸಿ ಹಿಂದಿನ ಇದ್ದಬದ್ದ ಕಹಿಯನ್ನೂ ಮರೆಯುವ ಸಂಪ್ರದಾಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಗಮನಿಸಿಯೇ ನಮ್ಮ ನಮ್ಮಲ್ಲಿ ಆಯಾ ಕಾಲವಾರು ಮತ್ತು ಸಾಮಾಜಿಕ ನಡವಳಿಕೆ ಜಾತಿ ಧರ್ಮಾಧಾರಿತ ಆಚರಣೆಗಳು ಬೆಳಕಿಗೆ ಬಂದವು.

ಎಂತೆಂತಹ ಮನಸ್ತಾಪಗಳೂ ಕುಟುಂಬದ ಇಂತಹ ಒಂದು ಕರೆಯಿಂದ, ಆ ಮನೆಯಲ್ಲಿ ಪಾಲ್ಗೊಳ್ಳುವಿಕೆಯ ಉತ್ಸವದ ಸಡಗರದಿಂದ ಶಾಶ್ವತವಾಗಿ ಮುಗಿದು ಹೋದ ಉದಾ. ಸಾವಿರಾರಿವೆ ನಮ್ಮೆದುರಿಗೆ. ಇದೆಲ್ಲಾ ಒಂದು ಸಮೃದ್ಧ ಮನಸ್ಥಿತಿಯ ಮತ್ತು ಸಾಮಾಜಿಕ ವ್ಯವಸ್ಥೆಯ ಮೂಲವಾದ ಕುಟುಂಬ ಮತ್ತು ಆಯಾ ಊರು ಪ್ರದೇಶಗಳ ಬೌದ್ಧಿಕ ಮತ್ತು ಸಾಂಪ್ರಾದಾಯಿಕ ಗಟ್ಟಿತನಕ್ಕೆ ಅವಶ್ಯವೂ ಆಗಿದ್ದು ಈಗಲೂ ಜಾರಿಯಲ್ಲಿದೆ. (ಹೆಚ್ಚಿನ ಊರುಗಳಲ್ಲಿ ಮೊಹರಮ್ಮಿಗೆ ಹಿಂದೂಗಳೂ, ಗಣೇಶ ಹಬ್ಬದ ಹೋಳಿಗೆ ಊಟಕ್ಕೆ ಮುಸ್ಲಿಂರೂ ಪಾಲ್ಗೊಳ್ಳುವುದು ಕಡೆಯ ದಶಕದ ಅಂತ್ಯದವರೆಗೂ ತುಂಬ ಚಾಲ್ತಿಯಲ್ಲಿತ್ತು. ಬರುಬರುತ್ತಾ ಸಮಾಜವನ್ನು ಒಡೆಯುವ ಬುದ್ಧಿಜೀವಿಗಳ ಕುತರ್ಕಕ್ಕೆ ಇವತ್ತು ನಮ್ಮ ಹಬ್ಬ, ನಿಮ್ಮ ಹಬ್ಬ ಎನ್ನುವ ತಾರತಮ್ಯ ಉಂಟಾಗಿದ್ದು ಸೂಕ್ಷ್ಮವಾಗಿ ಬದಲಾವಣೆಗಳನ್ನು ಗಮನಿಸುವವರಿಗೆ ಅರಿವಾಗುತ್ತಲೇ ಇದೆ)

ಹೀಗೆ ಕುಟುಂಬಾಧಾರಿತ ಮೂಲವಾಗಿ ಆರಂಭವಾದ ಕೆಲ ಉತ್ಸವಗಳು ಮಹನೀಯರಿಗೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರ ಹೆಸರಿನಲ್ಲೂ ಆಯಾ ಪ್ರದೇಶವಾರು ಉತ್ಸವಗಳು ಸಂಯೋಜನೆ ಗೊಳ್ಳತೊಡಗಿದ್ದು ಧನಾತ್ಮಕ ಪರಿಣಾಮವೇ. ಅದೊಂದು ಗೌರವ ಅವರ ಅಪರಿಮಿತ ತ್ಯಾಗಕ್ಕೆ. ಉದಾ. ಗಾಂಧೀಜಿಯವರ ಸತ್ಯ, ಅಹಿಂಸೆ ಕಾರಣವಾಗಿ ಅವರ ಜಯಂತಿಯನ್ನು ಪೂರಾ ಭಾರತೀಯರು ತುಟಿ ಪಿಟಕ್ಕೆನ್ನದೆ ಹಬ್ಬದ ರೀತಿಯಲ್ಲಿ ಅಚರಿಸುತ್ತಿದ್ದಾರೆ. ಉಳಿದೆರಡು ರಾಷ್ಟ್ರೀಯ ಹಬ್ಬದಷ್ಟೆ ಮಹತ್ವ ಪಡೆದಿವೆ. ಕೆಲವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರೆ ಕೆಲವನ್ನು ಆಯಾ ರಾಜ್ಯವಾರು ಪ್ರಾಮುಖ್ಯತೆಯ ಮೇರೆಗೆ ಸರಕಾರಗಳು ನಿಶ್ಚಯಿಸತೊಡಗಿದವು.

ಗಾಂಧೀಜಿಗೆ ಸಲ್ಲುವಷ್ಟು ಪ್ರಾಮುಖ್ಯತೆ ಪಡೆದ ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಜಯಂತಿ ಬಂತು. ಅವರು ಯಾವ ಜಾತಿ ಧರ್ಮ ಎನ್ನುವುದನ್ನೂ ಗಮನಿಸಿದೆ ಪ್ರತಿ ಭಾರತೀಯ ಅದನ್ನು ಒಪ್ಪಿಕೊಂಡ. ಅದರೊಂದಿಗೆ ವಾಲ್ಮಿಕಿ, ಕನದಾಸ, ಬುದ್ಧ, ವಿವೇಕಾನಂದ, ರಾಮಕೃಷ್ಣರು ಹೀಗೆ ಪ್ರಮುಖರೆಲ್ಲಾ ಜಾಗ ಪಡೆದರು. ಅದರಿಗೆ ಸಲ್ಲಬೇಕಿದ್ದ ಗೌರವ. ಹಾಗೇಯೇ ಮಹಾರಾಷ್ಟ್ರದಲ್ಲಿ ಶಿವಾಜಿ, ಕರ್ನಾಟಕದಲ್ಲಿ ಕೆಂಪೇಗೌಡರು, ಗುಜರಾತಿನಲ್ಲಿ ಪಟೇಲರರು ವಿಮಾನ ನಿಲ್ದಾಣದ ಐಕಾನ್‍ಗಳಾದರೂ ಯಾರಿಗೂ ಯಾವ ಹೆಸರಿಗೂ ತಕರಾರು ಬರಲಿಲ್ಲ. ಕಾರಣ ಆಯ್ದ ವ್ಯಕ್ತಿತ್ವದ ಹೆಸರುಗಳೆಲ್ಲಾ ಭಾರತೀಯ ಸಮಾಜದಲ್ಲಿ ಯಾರಿಗೂ ಯಾವ ರೀತಿಯಲ್ಲೂ ಯಾವ ಅನ್ಯಾಯವನ್ನೂ ಮಾಡದ ಮತ್ತು ಯಾವ ರೀತಿಯಲ್ಲೂ ಮಾನಸಿಕವಾಗಿ, ದೈಹಿಕವಾಗಿ ಯಾರಿಗೂ ವಜ್ರ್ಯ ಎನ್ನಿಸುವ ವ್ಯಕ್ತಿಗಳಾಗಿರಲೇ ಇಲ್ಲ.

ಇದಕ್ಕೂ ಮೊದಲಿನ ರಾಮ, ಲಕ್ಷ್ಮಣ, ಕೃಷ್ಣ, ಹನುಮಂತ ಹೀಗೆ ಪೌರಾಣಿಕ ನಾಯಕರುಗಳೊಂದಿಗೆ, ಸಾಯಿಬಾಬನಂತಹ ಸಂತರು ಸೇರಿದಂತೆ ಹಲವು ದರ್ಗಾಗಳಲ್ಲಿ ಪವಡಿಸಿರುವ ಮಹಾನ್ ಮುಸ್ಲಿಂ ಸಾಧುಗಳು ಇವತ್ತು ಕೋಟ್ಯಾಂತರ ಭಾರತೀಯರ ಆರಾಧನಾ ಶಕ್ತಿಗಳಾಗಿ ಹೊಮ್ಮಿದ್ದಿದೆ. ಹಾಗಾಗಿಯೇ ಮಂದಿರ, ಮಸೀದಿ, ಚರ್ಚು ಅಥವಾ ಯಾವುದೇ ಸಿಖ್‍ರ ಪ್ರಾರ್ಥನಾ ಮಂದಿರಗಳಿರಲಿ, ಯಾರಿಗೂ ಯಾವ ರೀತಿಯ ಜಯಂತಿಗೂ, ಹಬ್ಬಕ್ಕೂ ಯಾವ ಅಬ್ಜಕ್ಷನ್ನೇ ಇರಲಿಲ್ಲ. ಕಾರಣ ಇಲ್ಲೆಲ್ಲಾ ಕಾಲೂರಿ ನಿಂತವರು ಸಮಾಜದ ಸಾಮಾನ್ಯರ, ನನ್ನ ನಿಮ್ಮಂತವರಿಗಿಂತ ಅವರ ಸ್ವಭಾವ, ನಡವಳಿಕೆ ಮತ್ತು ನಾಗರಿಕ ಜನ್ಯ ಅಭಿವ್ಯಕ್ತಿಗಳಿಂದ ಸುತ್ಯಾರ್ಹರೂ, ವಂದಿತರೂ ಆಗಿದ್ದರು.

ಇದರ ಹೊರತಾಗಿ ಎಲ್ಲಿಯಾದರೂ ದುಶ್ಯಾಸನನಿಗೋ, ಕಂಸನಿಗೋ, ನರಕಾಸುರನಿಗೋ ಸೇರಿದಂತೆ ಉಮೇಶ ರೆಡ್ಡಿಗೋ ಇವತ್ತು ಜಯಂತಿ ಆಚರಿಸುತ್ತೇನೆಂದು ಹೊರಟು ನಿಲ್ಲಿ ಅಥವಾ ಅವರ ಹೆಸರಿನಲ್ಲೊಂದು ಸ್ಮಾರಕ ಇನ್ನೇನೋ ಮಾಡುತ್ತೇನೆಂದು ಪರಪರಿ, ಲೌಡ್‍ಸ್ಪೀಕರು ಕಟ್ಟಲು ಕಂಭ ಊರಿ ನೋಡೋಣ..? ಸಹೃದಯರೆನ್ನಿಸಿಕೊಂಡ ಸಂಭಾವಿತ ಸಮಾಜದ ಮುಖಂಡರು ಸರಸರನೇ `..ಇದೆನಯ್ಯಾ ಉಪದ್ಯಾಪಿತನ ಮಾಡುತ್ತಿದ್ದಿ..?’ ಎಂದು ಕೇಳದಿದ್ದರೆ ಕೇಳಿ. ಆದರೆ ತೀರ ಅಪಾಯಕಾರಿ ಬೆಳವಣಿಗೆಯೆಂದರೆ, ಯಾವ ಮುಸ್ಲಿಂ ಈ ದೇಶಕ್ಕಾಗಿ ಬಡಿದಾಡುತ್ತಿದ್ದನೋ ಅಂಥವನ ಮಾನಸಿಕ ಸ್ಥಿತಿಗತಿಯನ್ನೇ ಇವತ್ತಿನ ಆಳರಸರು ಹಾಳು ಮಾಡಿಬಿಡುತ್ತಿದ್ದಾರೆ. ಹಾಗಾಗಲು ಕಾರಣ ಅವರಿಗೆ ತಪ್ಪು ಮಾರ್ಗದರ್ಶನ ಮಾಡುತ್ತಿರುವ ಬುದ್ಧಿಜೀವಿಗಳೆನ್ನುವುದು ಕನ್ನಡ ಸಾರಸ್ವತ ಲೋಕಕ್ಕೆ ಅಂಟಿರುವ ಕಳಂಕ ಮತ್ತು ಇಂಥವರೇ ಸಮಾಜಕ್ಕೂ ಪಿಡುಗಾಗಿ ಕಾಡತೊಡಗಿರುವುದು ನಮ್ಮ ಸಮಕಾಲೀನ ದುರಂತ ಕೂಡಾ. ತಮ್ಮ ಟಿ.ಆರ್.ಪಿ. ಕಾಯ್ದುಕೊಳ್ಳುವ ಈ ಬುದ್ದಿಜೀವಿಗಳು ಎಲ್ಲಾ ಜಾತಿಯಲ್ಲೂ ಇದ್ದಾರೆ ಮತ್ತು ಸರಕಾರ, ಸಮಾಜ ಎರಡರದ್ದೂ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದೇ ಅಘಾತಕಾರಿ. ಈಗಲೂ ಕೊಂಚವಾದರೂ ತಿಳುವಳಿಕೆ, ಪ್ರಬುದ್ಧತೆ ಇರುವ ರಾಜಕಾರಣಿಗಳಿದ್ದರೆ ಇವರನ್ನು ಈಗಿನಿಂದಲೇ ದೂರ ಇಟ್ಟು ಸರಿ ಪಡಿಸದಿದ್ದರೆ ಭವಿಷ್ಯ ಬರಬಾದ್ ಆಗುವದರಲ್ಲಿ ಸಂಶಯವೇ ಇಲ್ಲ.

ಇದ್ಯಾಕೆ ಹೀಗಾಗುತ್ತಿದೆ ಎಂದರೆ ತುಷ್ಠೀಕರಣದ ವ್ಯವಹಾರ ಮತ್ತು ಒಲೈಕೆಯ ವ್ಯವಹಾರಗಳಿಗಿಳಿದಾಗ ಸಭ್ಯ ಸಮಾಜದ ನಾಗರೀಕ ಕೆರಳುತ್ತಾನೆ. ಅವನ ನಂಬಿಕೆಗಳಿಗೆ ಘಾಸಿಯಾದಾಗ ಎದ್ದು ನಿಲ್ಲುತ್ತಾನೆ. ಕಾರಣ ಇವತ್ತಿಗೂ ಭಾರತದ ಯಾವುದೇ ಮೂಲೆಯ ಯಾವುದೇ ಜಾತಿ, ಧರ್ಮದ ಜನಗಳಿಗೆ ಸೋಮನಾಥ್, ಕಾಶಿ ವಿಶ್ವನಾಥ್, ಹಜ್ರತ್‍ಬಾಲ್ ದರ್ಗಾ, ವಿಠ್ಠಲ ರುಕುಮಾಯಿ, ಬಸವಣ್ಣ, ಅಜ್ಮೇರ್‍ನ ಚಿಸ್ತಿ ನವಾಬ್ ದರ್ಗಾ, ಅಮೃತಸರ, ಗೋವೆಯ ಮೂಲ ಚರ್ಚುಗಳೆಂದರೆ ಜಾತಿ ಧರ್ಮದ ಹೊರತಾಗಿ ಇನ್ನಿಲ್ಲದ ಅಕ್ಕರೆಯಿದೆ, ನಂಬುಗೆಗಳಿವೆ. ಅದಕ್ಕೂ ಮಿಗಿಲಾಗಿ ಸಾಮಾಜಿಕ ಸಾಂತ್ವನವನ್ನು ಒದಗಿಸುವ ಆಪ್ತ ಸಂಗತಿಗಳಾಗಿವೆ. ನಾನು ನೀವೆಲ್ಲರೂ ಅಲ್ಲಿಗೆ ಕಾಲಿಡುತ್ತಿದ್ದರೆ ನಮಗರಿವಿಲ್ಲದೆ ತಲೆಗೆ ಕರ್ಚೀಪು ಕಟ್ಟಿಕೊಂಡು ಮಂಡಿಯೂರಿ ಕೂರುತ್ತೇವೆ. ಅದೇ ಅಂತಹ ತುಂಬ ಸಾಫ್ಟ್ ಎನ್ನಿಸುವ ಭಾವನೆಗಳನ್ನು ಕದಡಿ ಬಿಟ್ಟರೆ ಜೀವವನ್ನೂ ಕೈಯಿಂದಾಚೆಗಿಟ್ಟು ರಸ್ತೆಗಿಳಿಯುತ್ತಾನೆ. ಸಭ್ಯ ಸಮಾಜವೊಂದರ ಮರ್ಯಾದೆ ಅಂತರಾಷ್ಟ್ರೀಯವಾಗಿ ಹರಾಜಾಗುವುದೇ ಆವಾಗ. (ಇತ್ತಿಚಿನ ದಿನದಲ್ಲಿ ಚಿತ್ರನಟರಿಗೂ ಸ್ಮಾರಕ ಬರುತ್ತಿವೆ ಅದನ್ನೂ ಯಾವ ಪೂರ್ವಾಗ್ರಹವಿಲ್ಲದೆ ನಮ್ಮ ಸಮಾಜ ಒಪ್ಪಿದೆ ಕಾರಣ ಅದೆಲ್ಲಾ ಅಭಿಮಾನದ ಫಲ. ಹಾಗಂತ ಅತ್ಯುತ್ತಮ ನಾಗರಿಕ, ಸಹೃದಯಿಯಾಗಿದ್ದರೂ ಅಮರೀಶ್‍ಪುರಿಗೆ ದೇವಸ್ಥಾನ ಕಟ್ಟಿದ, ಕಟ್ಟುವ ಮಾತುಗಳಿಲ್ಲ. ಕಾರಣ ಅವನ ವೈಯಕ್ತಿಕ ಬದುಕು ಸಹೃದಯತೇ ಎನೇ ಇದ್ದರೂ ಅವನು ಒತ್ತಿದ್ದು ಖಳನ ಛಾಪೇ..)

ಇದೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ಟಿಪ್ಪು ಸುಲ್ತಾನ್‍ಗೆ ಜಯಂತಿ, ಅಮೇಲೆ ಮೀರ್‍ಸಾಧಕನಿಗೂ ಒಂದು ಹುತಾತ್ಮ ಪಟ್ಟ, ಮೊನೆ ಮೊನ್ನೆ ನೆಗೆದು ಬಿದ್ದ ಉರಿಯ ಬುರ್ಹಾನ್‍ವಾನಿಗೊಂದು ಸ್ಮಾರಕ, ವರ್ಷಗಳೆರಡರ ಹಿಂದೆ ಸಮುದ್ರದಲ್ಲಿ ಮುಗಿದು ಹೋದ ಲಾಡೆನ್‍ಗೊಂದು ಹಬ್ಬದ ದಿನ, ಅತ್ತ ಹಿಟ್ಲರ್‍ಗೊಂದು ಸಾಯಂಕಾಲದ ಸಮಾರಂಭ, ಸಂಪೂರ್ಣ ಮೊಘಲ ಸಾಮಾಜ್ಯವನ್ನೇ ಹಳ್ಳ ಹಿಡಿಸಿದ ತುಘಲಕ್‍ನ ಹೆಸರಿನಲ್ಲೊಂದು ಪಾರ್ಟಿ, ಸಂಗೊಳ್ಳಿರಾಯಣ್ಣನಿಗೆ ದ್ರೋಹ ಬಗೆದ ವೆಂಕಣ್ಣಗೌಡ ಮತ್ತು ಕುಲ್ಕರಣಿಗಳಿಗೊಂದು ಸ್ಮಾರಕ ಹೀಗೆ ಆಯೋಜಿಸಲು ಹೋದರೆ ಮೂಮೂಲಿನ ಜನರೂ, ಜಾತಿ ಧರ್ಮದಾಚೆಗೆ ನಿಂತು `..ಎನಯ್ಯಾ ತಲೆಗಿಲೆ ಕೆಟ್ಟಿದೆಯಾ..’ ಎಂದು ಮೊದಲ ಸೆಕೆಂಡಿನಲ್ಲೇ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಇಂತಹ ವಿಕೃತ ಸಂತಾನಗಳೆಲ್ಲಾ ಯಾವ ರೀತಿಯಲ್ಲೂ ಬದುಕಿಗೂ, ಸಮಾಜಕ್ಕೂ, ಸಮಾಜದ ಸಭ್ಯತೆಗೆ ಕೊಡುಗೆಯಾಗಬಲ್ಲ ಯಾವ ರೀತಿಯ ಮೇಲ್ಪಂಕ್ತಿಯನ್ನೂ ಹಾಕಿ ಕೊಟ್ಟವರಲ್ಲ. ಎಲ್ಲೋ ಏನಾದರೂ ಕೊಡುಗೆ ನೀಡಿದ್ದರೂ ಸಾಮೂಹಿಕವಾಗಿ, ಸಮಾಜದ ಬಹ್ವುಂಶದ ಬದುಕಿನಲ್ಲಿ ಧನಾತ್ಮಕ ಅಂಶಗಳ ಕೊಡುಗೆ ಇದ್ದಿದ್ದು ಕಡಿಮೆ. ಇದ್ದರೂ ಅದು ಅವರ ಋಣಾತ್ಮಕ ಧೋರಣೆ ಮತ್ತು ಆಚರಣೆಯಿಂದಾಗಿ ಗಣನೀಯವಾಗಿ ಆನಾದರಣೆಗೊಳಗಾಗಿರುತ್ತದೆ.

ಹಾಗಾಗೇ ಯಾವುದೇ ವ್ಯಕ್ತಿಯ ಪ್ರಭಾವ ಸಾಮಾಜಿಕವಾಗಿ ಇತಿಹಾಸ ಮತ್ತು ವರ್ತಮಾನದ ಕಾಲಾವಧಿಯನ್ನೂ ಮೀರಿ ಭವಿಷ್ಯದಲ್ಲೂ ಅಚ್ಚಳಿಯದಂತಿರಬೇಕಾದರೆ ಆ ಮಟ್ಟದ ಕೊಡುಗೆ ಅಂತಹ ವ್ಯಕ್ತಿಯಿಂದ ಸಮಾಜಕ್ಕೆ ಎಲ್ಲಾ ಕಾಲಕ್ಕೂ ಸಲ್ಲುವಂತೆ ಅದರಲ್ಲೂ ಸಮಾಜದ ನಡಾವಳಿ ಮತ್ತು ನಡವಳಿಕೆಗಳಿಗೆ ಮೇಲ್ಪಂಕ್ತಿಯಾಗುವಂತಹ ಅಭಿವ್ಯಕ್ತಿಯ ಅಂಶ ಮಾನ್ಯವಾಗುತ್ತದೆ ಹೊರತಾಗಿ ಅವನ ದುಷ್ಕೃತ್ಯಗಳಲ್ಲ. ಅವನ ನಡವಳಿಕೆಗಳಿಂದ ಮುಂದಿನ ತಲೆಮಾರುಗಳೂ ಕೂಡಾ ಶಪಿಸುವಂತಹ, ಬೇಯುವಂತಹ, ಅಸಹಾಯಕತೆಯಿಂದ ನರಳುವಂತಹ ಹೀನ ಕೃತ್ಯಗಳನ್ನ ಜಗತ್ತಿನ ಯಾವ ಧರ್ಮವೂ ಮಾನ್ಯ ಮಾಡಿದ ಉದಾಹರಣೆಗಳಿಲ್ಲ.

ಹಾಗೆ ಲೆಕ್ಕಿಸಿದರೆ ಇವತ್ತು ಕರ್ನಾಟಕದಲ್ಲಿ ಮೈಸೂರು ಒಡೆಯರ್ ಸಂಸ್ಥಾನಾಧಿಪತಿಗಳಿಗೂ, ಕನ್ನಡದ ಅಧಿಕೃತ ರಾಜವಂಶ ಕದಂಬರ ಮಯೂರವರ್ಮನ (ಆದರೆ ಯಾವತ್ತೂ ಮಯೂರವರ್ಮನಿಗೆ ಆ ಮರ್ಯಾದೆ ಸಲ್ಲಲು ಬಿಡುವುದಿಲ್ಲ ನೆನಪಿರಲಿ. ಕಾರಣ ಮೂಲತ: ಮಯೂರ ಶರ್ಮನಾಗಿದ್ದ ಎಂದು ಇತಿಹಾಸ ಹೇಳುತ್ತದಲ್ಲ. ಇನ್ನು ಬ್ರಾಹ್ಮಣನಾದವನಿಗೆ ಹೇಗೆ ಆದರ, ಮನ್ನಣೆ ನೀಡುವುದು..?) ಹೆಸರಿನಲ್ಲೂ, ಎನೇ ಬೇರೆ ಭಾಷಿಕ ರಾಜನಾದರೂ ವಿಜಯನಗರ ಸಾಮ್ರಾಜ್ಯವನ್ನಾಳಿ ಕನ್ನಡದ ನೆಲದಲ್ಲಿ ಮುತ್ತು ರತ್ನ ಮಾರಿದ ಕೃಷ್ಣ ದೇವರಾಯನಿಗೂ, ಅರ್ಧದಷ್ಟು ಕನ್ನಡದ ನೆಲದಲ್ಲಿ ತನ್ನ ಛಾಪು ಮೂಡಿಸಿದ್ದ ಶಿವಾಜಿಗೂ, ಇತ್ತ ಕನ್ನಡ ರಾಜ ವಂಶಸ್ಥರ ನಂತರದಲ್ಲೂ ಅದರ ಸೊಗಡು ಉಳಿಸಿದ್ದ ಸೋಂದಾ ರಾಜರು, ಚಾಲುಕ್ಯರು ಸೇರಿದಂತೆ ಕನ್ನಡದ ನೆಲಕ್ಕಾಗಿ ಜೀವವನ್ನೇ ನೀಡಿದ ವೀರಮಹಿಳೆ ಚೆನ್ನಮ್ಮನಂತವರ ಹೆಸರು ಕೇವಲ ಪ್ರಶಸ್ತಿಗೂ, ಉತ್ಸವಕ್ಕೂ ಮುಗಿದು ಹೋಗುತ್ತದೆ. ಇವರೆಲ್ಲಾ ಕರ್ನಾಟಕದ ಪ್ರಾತ:ಸ್ಮರಣೀಯರು. ಆದರೆ ಇವರೆಲ್ಲರ ಹೆಸರಲ್ಲಿ ಆಯ್ದ, ಕಿತ್ತು ಹೋದ ಕವಿ ಪುಂಗವರಿಂದ ಆಗೀಗೊಂದು ಕವನಗಳನ್ನು ಹಾಡಿಸುವ ಉತ್ಸವ ಆಯೋಜಿಸಿ ಆವತ್ತಿಗೆ ಮರೆತು ಹೋಗುತ್ತಿದ್ದೇವೆಯೇ ವಿನ: ಯಾವುದೇ ಶಾಶ್ವತ ಜಯಂತಿ ಇತ್ಯಾದಿಗಳು ನಡೆಯುವ ಸಾಧ್ಯತೆಗಳು, ಅದಕ್ಕಾಗಿ ಸರಕಾರಿ ಪ್ರಾಯೋಜನೆಗಳೂ ಅಷ್ಟಕ್ಕಷ್ಠೆ. ಅನಾವಶ್ಯಕವಾಗಿ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯಲ್ಲಿ ನಿಧಾನವಾಗಿಯಾದರೂ ಬಿರುಕು ಬಿಡುತ್ತಿರುವ ಮುಸ್ಲಿಂ ಮತ್ತು ಹಿಂದೂ ಸಾಮಾರಸ್ಯದಲ್ಲಿ ಇಲ್ಲಿವರೆಗೂ ಯಾರೂ ಅಂತಹ `ದರಾರು’ ತಂದು ಹಾಕಿದ್ದಿಲ್ಲ. ಆದರೆ ಅದೀಗ ಸ್ಪಷ್ಟವಾಗಿ ನಡೆಯುತ್ತಿದೆ.

ಇವತ್ತಿಗೂ ಅದೆಂಥದ್ದೇ ಕರ್ಮಠನಾಗಿದ್ದರೂ, ದಿನಕೈದು ಬಾರಿ ನಮಾಜು ಮಾಡುವ ಮುಸ್ಲಿಂನಿದ್ದರೂ ಜಗಳ, ಕಿರಿಕ್ಕು ಬೇಡವೇ ಬೇಡ ಎನ್ನುತ್ತದೆ ಅವನ ಮನಸ್ಸು. ಕಾರಣ ಅವನು ಮೊದಲು ಭಾರತೀಯ ಆಮೇಲೆ ಮುಸ್ಲಿಂ. ಭಾರತದಲ್ಲಿ ತನ್ನ ಮನೆ ಮಠ ಹೊಂದಿ ಸುಖವಾಗಿ ಸಂಸಾರ, ನೌಕರಿ, ಆಗೀಗ ಉಪವಾಸ, ಅವಕಾಶ ಸಿಕ್ಕಿದಾಗ ಹಜ್ ಯಾತ್ರೆಯ ಪುಣ್ಯ ಎಂದುಕೊಂಡಿರುವ ಯಾವ ಭಾರತೀಯ ಮುಸ್ಲಿಂಮರಿಗೂ ಇವತ್ತು ಇಂತಹ ಸಮಾಜ ಒಡೆಯುವ ಜಯಂತಿಗಳು ಬೇಕೇ ಆಗಿಲ್ಲ. ವೈಯಕ್ತಿಕವಾಗಿ ಕೇಳಿ ನೋಡಿ. `..ಎಲ್ಲಿ ಬಿಡೋ.. ಮಾರಾಯ ನಮದಾ ನೌಕರಿ ಮಾಡಿಕೊಂಡು ಹೋದರ ಸಾಕಾಗೇತಿ..ಇಸ್ಕಿ ಮಾಖು..’ ಎನ್ನುತ್ತಾನೆ.

ಇದು ಬದುಕು ಮತ್ತು ಭವಿಷ್ಯವನ್ನು ಚೆಂದಗೊಳಿಸಿಕೊಂಡು ತನ್ನ ಕುಟುಂಬ ತಾನು ನಿರುಮ್ಮಳವಾಗಿ ಬದುಕು ಕಟ್ಟಿಕೊಳ್ಳಲೆತ್ನಿಸುವ ಪ್ರತಿಯೊಬ್ಬ ಭಾರತೀಯನಂತೆ ಅರಾಮದ ಬದುಕು ಇಲ್ಲಿನ ಮುಸ್ಲಿಂಮರಿಗೂ ಇದೆ ಮತ್ತು ಅವರ ಆಶಯ ಕೂಡಾ. ಆದರೆ ಬಹಿರಂಗವಾಗಿ ಇದನ್ನೆ `..ನಿಮ್ಮವರಿಗೆ ಹೇಳಿ, ಯಾಕೆ ಎಲ್ಲೆಲ್ಲೂ ಕೋಮುವಾದ ಎರಡೂ ಕಡೆಯಲ್ಲೂ ಉರಿಯುತ್ತಿದೆ..’ ಎಂದು ನೋಡಿ. ಅವನ ಮುಖ ಚಹರೆಯೇ ಬದಲಾಗುತ್ತದೆ. ಕಾರಣ ಅನವಶ್ಯಕವಾಗಿ ಯಾರೋ ಒಬ್ಬರು ಎಬ್ಬಿಸುತ್ತಿರುವ ಅವರೆಲ್ಲರ ಮನಸ್ಸಿನ ಒಳಭಾಗದಲ್ಲಿ ಕೆರೆಯುತ್ತಿರುವ ಅಭದ್ರತೆಯ (ಸೋಷಿಯಲ್ ಇನ್ ಸೆಕ್ಯೂರಿಟಿ) ಭಾವವನ್ನು ತಣ್ಣಗೆ ಅವನು ಅನುಭವಿಸಿ ಬಿಡುತ್ತಾನೆ. ಇಂತಹ ಸಂದರ್ಭದಲ್ಲೇ ಅವನ ಮನಸ್ಸಿನ ಆ ಇನ್ಸೆಕ್ಯೂರಿಟಿಯ ಕಾರಣ ಸಾಮಾಜಿಕವಾಗಿ ತಾನೂ ಸಬಲ ಎನ್ನುವ ಅಂಶವನ್ನು ಪ್ರೂವ್ ಮಾಡಲು ಹೊರಟು ಬಿಡುತ್ತಾನೆ. ಆಗ ಸುಲಭಕ್ಕೆ ಇಂತಹದಕ್ಕೆ ಅವಕಾಶ ಮಾಡಿ ಕೊಡುವುದೇ ಟಿಪ್ಪು ಸುಲ್ತಾನ್‍ನಂತಹ ಜಯಂತಿಗಳು.

ಕಾರಣ ಇಂತಹ ಜಯಂತಿ ಸಹಜವಾಗಿ ಬಹುಸಂಖ್ಯಾತರಾಗಿದ್ದೂ ಯಾವುದೇ ಸೌಲಭ್ಯ, ಸಹಕಾರ ಇಲ್ಲದೆ ವಂಚಿತರಾಗಿ ಸ್ವಂತದ ನೆಲದಲ್ಲಿ ಪರಕೀಯ ಭಾವನೆಯಲ್ಲಿರುವ ಹಿಂದೂ ಸಮುದಾಯಕ್ಕೆ ಇದ್ದಕ್ಕಿದ್ದಂತೆ ಹೃದಯಕ್ಕೆ ಬರೆ ಇಟ್ಟಂತಾಗುತ್ತದೆ. ಕಾರಣ ಅವನಿಗೆ ಇಂಥದ್ಯಾವುದೂ ಲಭ್ಯವಾಗದಿದ್ದರೂ ಸುಮ್ಮನಿರುತ್ತಾನೆ. ಆದರೆ ಮೊದಲೇ ಓಲೈಕೆಯ ವ್ಯವಹಾರ ನಡೆಯುವಾಗ ಆಗುವ ಲುಕ್ಷಾನಿನ ಜತೆಗೆ ಇದೇನಿದು ಹೊಸ ಜಯಂತಿ ಅದೂ ಕದಂಬರು, ಕೆಂಪೇಗೌಡರು ಕೊನೆಗೆ ನಮ್ಮ ಯಾರ ಪಾಳೆಪಟ್ಟಿನವರಿಗೂ ಇಲ್ಲದ ಜಯಂತಿ..? ನಮಗೇ ಇಲ್ಲದ್ದು ಇನ್ಯಾರಿಗೋ ದಕ್ಕುತ್ತಿದೆ..? ರೊಚ್ಚಿಗೇಳಲು ಇದಕ್ಕಿಂತ ಬೇರಿನ್ನೇನು ಬೇಕು..? ಅದಕ್ಕೆ ಸರಿಯಾಗಿ ಎದುರಿನಿಂದ ಇನ್ನೊಂದು ಬೆಂಕಿ ಭುಗಿಲೇಳುತ್ತದೆ.

ನಮ್ಮ ಮುಸ್ಲಿಂ ಟಿಪ್ಪು ಸುಲ್ತಾನ ಜಯಂತಿ ನಡೆಯಲು ಬಿಡದಿದ್ದರೇ ಹೆಂಗೇ..? ಈಗ ನಾವು ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶನವಾಗದಿದ್ದರೆ ನಾಳೇ ಏನಾಗುತ್ತದೋ ಯಾರಿಗೆ ಗೊತ್ತು..? ಅದಕ್ಕೆ ಟಿಪ್ಪು ಏನಾಗಿದ್ದನೋ, ಇತಿಹಾಸದಲ್ಲಿ ಒಳ್ಳೆಯವನೋ ಕೆಟ್ಟವನೋ ಅದೆಲ್ಲಾ ಅತ್ಲಾಗಿರಲಿ. ಟಿಪ್ಪು ಮುಸ್ಲಿಂ ಆಗಿದ್ದ ಅವನ ಹೆಸರಲ್ಲಿ ಜಯಂತಿ ನಡೆಯುತ್ತದೆ. ಅದನ್ನು ಹಿಂದೂಗಳು ವಿರೋಧಿಸುತ್ತಿದ್ದಾರೆ. ಹಾಗಾದರೆ ನಾವು ಬೆಂಬಲಿಸಬೇಕು. ಆ ಮೂಲಕ ನಮ್ಮ ಬಲ ಪ್ರದರ್ಶನ ಮಾಡಿ ಸಾಮಾಜಿಕವಾಗಿ ನಾವೂ ಸಬಲರು ಎನ್ನುವ ಪ್ರೂವ್ ಕೋಡಬೇಕು. ಆಯಿತಲ್ಲ. ಅಲ್ಲಿಗೆ ಸರಸರನೇ ವಾಟ್ಸಾಪು, ಮೊಬೈಲ್‍ಗಳು ಬಿಜಿಯಾಗುತ್ತವೆ. ಲೋಡಗಟ್ಟಲೇ ಕಲ್ಲು ಜಮೆಯಾಗುತ್ತದೆ. ಎಲ್ಲೆಲ್ಲಿಂದಲೂ ಜನ ಬರುತ್ತಾರೆ. ಕೊನೆಗೆ ಪೋಲಿಸರ ಗುಂಡಿಗೆ ಒಂದೆರಡು ಹೆಣ ಬೀಳುತ್ತವೆ. ಶಾಶ್ವತವಾಗಿ ಆಯಾ ಊರಿನ ಹಿಂದೂ ಮುಸ್ಲಿಂಗಳು ಇಲ್ಲಿವರೆಗೂ ಮೊಹರಮ್ಮು, ಗಣಪತಿ ಎನ್ನುತ್ತಿದ್ದವರು ಒಣಿ ಬದಲಾಯಿಸಿ ನಡೆಯತೊಡಗುತ್ತಾರೆ. ಏನ್ರಿ ಇದೆಲ್ಲಾ..?

ಸುಖಾ ಸುಮ್ಮನೆ ಮನೆ ಮಠ ಎಂದಿದ್ದ ಭಾರತೀಯ ಹಿಂದೂ,ಮುಸ್ಲಿಂ ಇಬ್ಬರೂ ಈಗ ಕದನಕ್ಕಿಳಿಯುತ್ತಿರುವುದೇ ಇಂತಹ ಅನ್ ವಾಂಟೆಡ್ ಕಾರಣಗಳಿಗಾಗಿ. ಬೇಕೆ ಇಲ್ಲದ ಇಂತಹ ಅದರಲ್ಲೂ ಸಮಾಜದಲ್ಲಿನ ಪ್ರಬಲ ಸಮುದಾಯದ ಮನಸ್ಸಿಗೆ ಕಹಿ ನೀಡುವ ಉತ್ಸವಗಳನ್ನು ಆಯೋಜಿಸುವುದರಿಂದ ಆಗುವ ಪ್ರಯೋಜನಗಳಾದರೂ ಏನು..? ಅಷ್ಟಕ್ಕೂ ಕನ್ನಡದ ಮಟ್ಟಿಗೆ ಮತ್ತು ಕರ್ನಾಟಕದ ಮಟ್ಟಿಗೆ ಯಾವ ರಿಮಾರ್ಕೇಬಲ್ ಎನ್ನುವ ಕೊಡುಗೆ ಕೊಡದ ಟಿಪ್ಪುವಿನ ಬಗ್ಗೆ ಆಗೀಗ ಒಂದಿಬ್ಬರು ಬಕೇಟ್ ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ (ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ಬಲಿಕೊಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..’ ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ.)  ದೇವಸ್ಥಾನಕ್ಕೆ ಉಂಬಳಿ ಕೊಟ್ಟ (ಇದೆಲ್ಲಾ ಅವನ ಅವಸಾನದ ಸಂದರ್ಭದಲ್ಲಿ ಪ್ರಬಲ ಸಮುದಾಯಗಳ ಬೆಂಬಲ ಮತ್ತು ಸಹಾನುಭೂತಿಗಳಿಸಲು ಮಾಡಿರುವ ಕಾರ್ಯಗಳೆ- ಇತಿಹಾಸ ದಾಖಲಿಸಿದೆಯಲ್ಲ) ಅವನ ಅರಮನೆಯ ಬಾಗಿಲೆದುರಿಗೆ ದೇವಸ್ಥಾನಗಳಿದ್ದವು, ಅವನ ಆಸ್ಥಾನದಲ್ಲಿ ಇಂಥಿಂಥಾ ಕೆಲಸಗಾರರಿದ್ದರು ಎಂಬೆಲ್ಲ ಕತೆ ಹೊಡೆಯುವವರು ಇದೇ ಕೊಡಗರ ಸಾವಿರಾರು ವಂಶಗಳನ್ನೇ ನಿರ್ವಂಶ ಮಾಡಿದರು, ನಂಬೂದಿರಿ ಬ್ರಾಹ್ಮಣರನ್ನು ಇನ್ನಿಲ್ಲದಂತೆ ಓಡಾಡಿಸಿ ಬಡಿದು ಕೊಲ್ಲಲಾಯಿತು, ಸರಿ ಸುಮಾರು ಆರ್ನೂರಕ್ಕೂ ಮಿಗಿಲು ಹೆಂಗಸರನ್ನು ಅವನು ಜನಾನಾದಲ್ಲಿ ಸಾಕಿಕೊಂಡಿದ್ದ, ಸಾಲುಸಾಲು ಹಿಂದೂ ಜನರನ್ನು ಬೆತ್ತಲೆಯಾಗಿ ನಿಲ್ಲಿಸಿ ತುದಿ ಕತ್ತರಿಸಿ, ಸುನ್ನತಿ ಮಾಡಿಸುತ್ತಿದ್ದ ಎನ್ನುವಂತಹ ಅಂಶಗಳನ್ನೇ ಜಾಣತನದಿಂದ ಮರೆಮಚುತ್ತಾರೆ.

ಅಂತಹ ರಕ್ತಸಿಕ್ತ ಇತಿಹಾಸ ಇದ್ದುದರಿಂದಲೇ ಇವತ್ತು ಕೊಡಗು ಸೇರಿದಂತೆ ಹೆಚ್ಚಿನವರಿಗೆ ಟಿಪ್ಪು ಬೇಡವಾಗುತ್ತಾನೆ. ಒಂದಿಡಿ ಜನಾಂಗವೇ ಹಿಂದೂಗಳ ಹಬ್ಬ ದೀಪಾವಳಿವನ್ನೇ ಮೂಂದೂಡಿ ಶೋಕ ಅಚರಿಸುತ್ತಿದೆ. ಹೀಗಿದ್ದಾಗ ಅದ್ಯಾವ ಘನಂದಾರಿ ಯಶಸ್ಸು ಬರುತ್ತದೆ ಅಥವಾ ಹೆಸರು ಇತಿಹಾಸದಲ್ಲಿ ದಾಖಲಾಗುತ್ತದೆ, ಅಲ್ಪ ಸಂಖ್ಯಾತರ ಪಾಲಿಗೆ ಡಾರ್ಲಿಂಗ್ ಆಗುತ್ತೇನೆ ಎನ್ನುವ ಕಾರಣಕ್ಕೆ ಆಳರಸರು ಇಂತಹ ಜಯಂತಿ ಮಾಡುತ್ತಿದ್ದಾರೆ..? ಇವತ್ತು ಸರಿಯಾಗಿ ಗಾಂಧೀಜೀಯವರನ್ನೇ ಯಾರು..? ಎಂದು ಕೇಳುವ ಮಟ್ಟಕ್ಕಿಳಿದಿರುವ ಸಮಾಜದ ದರಖಾರಿನಲ್ಲಿ ಈ ಮಂತ್ರಿ ಮಾಗಧರೆಲ್ಲಾ ಯಾವ ಲೆಕ್ಕಾ..?

ಕಹಿಸತ್ಯದ ಅನಾವರಣದ ಚರಿತ್ರೆಯೊಂದಿಗೆ ಉಳಿದದ್ದೆಲ್ಲಾ ಮುಂದಿನ ಭಾಗಕ್ಕಿರಲಿ ( ಸಶೇಷ )

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post