X

ಮಾಯಾಲೋಕದ ಮಾಂತ್ರಿಕ ಜೋಡಿಯ ಯಶೋಗಾಥೆ(ವ್ಯಥೆ)

ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆಂಬಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಬಾಲಿವುಡ್-ನ  ಮಾಯಾಲೋಕದ  ಥಳುಕು ಬಳುಕಿನ ಸೆಳೆತಕ್ಕೊಳಗಾಗದೆ ಇರುವವರು ತುಂಬಾ ಅಪರೂಪ. ಮೊದಲಿನಿಂದಲೂ ಹಿಂದಿ ಚಿತ್ರಗಳಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ, ಖಯ್ಯಾಮರ ಖಯಾಲಿಯಿಂದ, ಆರ್.ಡಿ.ಬರ್ಮನ್-ರ ಹಂಸಧ್ವನಿಯವರಿಗೂ, ಶಂಕರ ಜಯಕಿಶನರ ಶಂಖನಾದದಿಂದ  ಬಪ್ಪಿ ಲಹರಿಯ ಬೊಂಬಾಟದ ತನಕ ಬಾಲಿವುಡ್-ನ್ನು ಶ್ರೀಮಂತಗೊಳಿಸಿ ಮೆರಗು ತಂದುಕೊಟ್ಟ ಸಂಗೀತ ನಿರ್ದೇಶಕರು ಅನೇಕ. ಜೋಡಿ ಸಂಗೀತ ನಿರ್ದೇಶಕರ ಪರ್ವ ಪ್ರಾರಂಭವಾಗಿ ಶಂಕರಜಯಕಿಶನ, ಕಲ್ಯಾಣಜಿ-ಆನಂದಜಿ, ಲಕ್ಷ್ಮೀಕಾಂತ –ಪ್ಯಾರೆಲಾಲ್,ನದೀಮ್ –ಶ್ರವಣ್, ಆನಂದ –ಮಿಲಿಂದ ಅನೇಕ ಪ್ರಖ್ಯಾತಿ ಪಡೆದ ಸಂಗೀತ ನಿರ್ದೇಶಕ ಜೋಡಿಗಳು ಅಕ್ಷರಶಃ ಬಾಲಿವುಡ್-ನ್ನು ಆಳಿವೆ. ಇಂತಹ ಸಂಗೀತ ನಿರ್ದೇಶಕ ಜೋಡಿಗಳ ಸಾಲಿಗೆ ಸೇರುವ, 90ರ ದಶಕದಿಂದ 2006ರವರೆಗೂ ಸದಭಿರುಚಿಯ ಮನೋಲ್ಲಾಸಗೊಳಿಸುವ ಸುಮಧುರ ವರ್ಸಟೈಲ (ಬಹುಮುಖ)  ಸಂಗೀತ ಸ೦ಯೋಜನೆಯಿಂದ ನಿರಂತರವಾಗಿ  ಸಂಗೀತ ಸುಧೆಯನ್ನು ಹರಿಸಿ  ನಮ್ಮ ನೆನಪಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿರುವ ಮಾಧುರ್ಯಕ್ಕೆ ಇನ್ನೊಂದು ಹೆಸರೇ  ಜತಿನ್-ಲಲಿತ್ (ಜತಿನ್ ಪಂಡಿತ್ –ಲಲಿತ್ ಪಂಡಿತ್).  

ಚಿಕ್ಕಂದಿನಿಂದಲೇ ಮನೆಯಲ್ಲಿ ಸಂಗೀತದ ವಾತಾವರಣವಿದ್ದ   ರಾಜಸ್ಥಾನದ ಜೋಧಪುರದ ಮೇವಾಟಿ ಘರಾನಾದಲ್ಲಿ ಜನಿಸಿದ ಹಿರಿಯ ಜತಿನ್ ಹಾಗೂ ಕಿರಿಯ ಲಲಿತ್ ಸುರುವಾತಿನ ದಿನಗಳಲ್ಲಿ ಸಂಗೀತ ಶಿಕ್ಷಣ ಪಡೆದದ್ದು ತಂದೆಯವರಾದ  ಪಂಡಿತ್ ಪ್ರತಾಪ್ ನಾರಾಯಣ್ರ ಮಾರ್ಗದರ್ಶನದಲ್ಲಿ. ಶಾಸ್ಟ್ರೀಯ ಸಂಗೀತದ ದಿಗ್ಗಜರಾದ ಪಂಡಿತ ಜಸ್ರಾಜ್ ಇವರ ಚಿಕ್ಕಪ್ಪರಾಗಿದ್ದು ಈ ಜೋಡಿಯ ಅದೃಷ್ಟ. ಲಕ್ಷ್ಮೀಕಾಂತ್ –ಪ್ಯಾರೆಲಾಲ್  ಸಂಗೀತ ಸ೦ಯೋಜಕ ಜೋಡಿಯ ಪ್ಯಾರೆಲಾಲ್  ರಾಮಪ್ರಸಾದ್ ಶರ್ಮಾರಿಂದ ಗಿಟಾರ್ ಮತ್ತು ಪಿಯಾನೊ ಕಲಿತ ಈ ಜೋಡಿಗೆ ಸಂಗೀತ ಕಲೆಯನ್ನು ಕರಗತ ಮಾಡಿಕೊಳ್ಳುವದು ಅಷ್ಟೇನೂ ಕಷ್ಟವಾಗಲಿಲ್ಲ.

 ಜತಿನ್ – ಲಲಿತ್ ಜೋಡಿಯ ವೃತ್ತಿಜೀವನದ ಪಯಣ ಪ್ರಾರಂಭವಾದದ್ದು 1991ರ ಯಾರಾ ದಿಲ್ದಾರಾ” ಚಿತ್ರದಿಂದ. ಈ ಚಲನಚಿತ್ರ ನೆಲಕಚ್ಚಿದರೂ ಸಂಗೀತ ದೊಡ್ಡ ಹಿಟ್ ಆಯಿತು. ಅದರಲ್ಲಿಯ ಬಿನ್ ತೇರೆ ಸನಮ್ ಮರ ಮಿಟೆಂಗೆ ಹಮ್ ಆ ಮೇರಿ ಜಿಂದಗಿ… ಗೀತೆ ಆ ಕಾಲದ ಟಿ.ವಿ. ಹಾಗೂ   ರೇಡಿಯೋ  ಚಲನಚಿತ್ರ ಸಂಗೀತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಇದರ ನಂತರ ಜತಿನ್ – ಲಲಿತ್ ಜೋಡಿಗೆ ಬಾಲಿವುಡ್-ನಲ್ಲಿ ಪ್ರಶಂಸಕರ  ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರ ರಾಜೀವ ಭಾಟಿಯಾ ’ಅಕ್ಷಯಕುಮಾರ’  ಆಗಿ ಕಿಲಾಡಿ ಖಿಲಾಡಿಕುಮಾರಗೆ ಜನ್ಮ ಕೊಟ್ಟ 1992 ರಲ್ಲಿ ತೆರೆಕಂಡ  ಸಸ್ಪೆನ್ಸ್ ಥ್ರಿಲ್ಲರ್  ಖಿಲಾಡಿ’. ಈ ಚಿತ್ರದ ಎಲ್ಲಾ ಹಾಡುಗಳು ಸಿನೀ ರಸಿಕರ ಮನಗೆದ್ದವು. ಅದರಲ್ಲೂ ವಾದಾ ರಹಾ ಸನಮ್ ಹೊಂಗೇ ನ ಹಮ್ ಜುದಾ… ರೊಮ್ಯಾಂಟಿಕ್ ಗೀತೆ ಸಿನೀಪ್ರಿಯರ ತುಟಿಗಳಲ್ಲಿ ಸದಾಕಾಲ ನಲಿದಾಡುತ್ತಿತ್ತು.  ತದನಂತರ ಜತಿನ್- ಲಲಿತ್ ಸಂಗೀತ ನೀಡಿದ್ದು ಮನ್ಸೂರ್ ಖಾನ್ ನಿರ್ದೇಶಿಸಿ, ಅಮೀರ್ ಖಾನ್ ಅಭಿನಯಿಸಿದ ಜೋ ಜೀತಾ ವಹಿ ಸಿಕಂದರ್’. ಫರ್ಹಾ ಖಾನ್ ನೃತ್ಯ ಸಂಯೋಜನೆಯಲ್ಲಿ ವಿಶಿಷ್ಟ ರೀತಿಯಲ್ಲಿ (ಸ್ಲೊ ಮೋಷನ್) ಚಿತ್ರಿಸಲ್ಪಟ್ಟ  ಈ ಚಿತ್ರದ ಪಹಲಾ ನಶಾ… ಹಾಡು ಪ್ರೇಕ್ಷಕರ ಮನದಲ್ಲಿ ಇಂದಿಗೂ ಹಚ್ಚು ಹಸಿರಾಗಿ ಉಳಿದಿದೆ. ಜೋ ಜೀತಾ ವಹಿ ಸಿಕಂದರ್ ಗಾಗಿ ಪ್ರಥಮಬಾರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಫಿಲ್ಮ್ ಫೇರ್  ಪ್ರಶಸ್ತಿಗೆ ಜತಿನ್- ಲಲಿತ್ ಜೋಡಿ ನಾಮ ನಿರ್ದೇಶನಗೊಂಡಿತು.  ಜೋ ಜೀತಾ ವಹಿ ಸಿಕಂದರ್ ದ ಯಶಸ್ಸಿನ ತರುವಾಯ ಜತಿನ್ – ಲಲಿತ್ ಬಾಲಿವುಡ್ ನಲ್ಲಿ ಗಟ್ಟಿಯಾಗಿ ತಳವುರಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. 1993ರಲ್ಲಿ ಶಾರುಖ್ ಖಾನ್ ಅಭಿನಯದ ಕುಂದನ್ ಷಾಹ್ ನಿರ್ದೇಶನದ ಕಭಿ ಹಾ೦ ಕಭಿ ನಾ ಮತ್ತು ಅಜೀಜ್ ಮಿರ್ಜಾ ನಿರ್ದೇಶನದ ರಾಜು ಬನ್ ಗಯಾ ಜೆಂಟಲ್ ಮ್ಯಾನ್ ದ ಸಂಗೀತ ಜತಿನ್ –ಲಲಿತ್ ಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು.

ಜತಿನ್ –ಲಲಿತ್ ರ ಸಂಗೀತವನ್ನು ಒರೆಗೆ ಹಚ್ಚಿ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿದ್ದು 1995ರಲ್ಲಿ ಬಂದ  ಯಶರಾಜ್ ಬ್ಯಾನರನ ಆದಿತ್ಯ ಚೋಪ್ರಾ ನಿರ್ದೇಶನದ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರ.  ಚಿತ್ರದ ಯಶಸ್ಸಿನಲ್ಲಿ ಸಿಂಹಪಾಲು ಸಂಗೀತದ್ದಾಗಿತ್ತು,ಈ ಚಿತ್ರದ ಸಂಗೀತ ಬಾಲಿವುಡ್-ನ ಸರ್ವಕಾಲಿಕ ಶ್ರೇಷ್ಟ ಚಿತ್ರಗಳಲ್ಲೊಂದೆದು ಗುರಿತಿಸಲ್ಪಡುತ್ತದೆ. ತದನಂತರ ಅಮೀರ್ ಖಾನ್ ಅಭಿನಯದ ಗುಲಾಮ್-ಆತಿ ಕ್ಯಾ ಖಂಡಾಲಾ ಪಡ್ಡೆ ಹುಡುಗರ ಸಂವಾದ ಗೀತೆ (ಅಂಥೆಮ್) ಆಗಿತ್ತು. ಖಾಮೋಷಿ, ಎಸ್ ಬಾಸ್ ನಂತರ ಬಾಲಿವುಡ್–ನ ಅತ್ಯಂತ ಪ್ರತಿಭಾನ್ವಿತ ಹಾಗೂ ಸ್ಥಿರ ಪ್ರದರ್ಶನ (ಕನ್ಸಿಸ್ಟಂಟ್) ನೀಡುವ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ ಜತಿನ್ – ಲಲಿತ್-ರ ಹಿರಿಮೆಯ ಕಿರೀಟಕ್ಕೆ ಇನ್ನೊಂದು  ಗರಿಯಾದದ್ದು  1998ರಲ್ಲಿ ತೆರೆಕಂಡ ಕರಣ್ ಜೋಹರ್ ನಿರ್ದೇಶನದ ಕುಛ್ ಕುಛ್ ಹೋತಾ ಹೈ. ಈ ಚಿತ್ರಸಂಗೀತದ  ಧ್ವನಿ ಮುದ್ರಿಕೆಯ  85ಲಕ್ಷ ಪ್ರತಿಗಳು ಮಾರಾಟವಾಗಿದ್ದು ಒಂದು ದಾಖಲೆ. ಬಹುಶಃ 90ರ ದಶಕದ ಅಂತ್ಯ ಭಾಗದಲ್ಲಿ ಜತಿನ್ –ಲಲಿತ್ ಜೋಡಿ ವೃತ್ತಿಜೀವನದ ಸಫಲತೆಯ ಉತ್ತುಂಗಕ್ಕೇರಿತ್ತು. ಪ್ಯಾರ್ ತೊ ಹೋನಾಹಿ ಥಾ ಮತ್ತು ದೇಶಭಕ್ತಿ ಜಾಗೃತಗೊಳಿಸುವ ‘’ಸರ್ಫರೋಶ್ ಸಂಗೀತದಿಂದ ಮುಂಬೈನ ಮಾಯಲೋಕದಲ್ಲಿ ಮಾಂತ್ರಿಕ ಜೋಡಿಯು ಅಳಿಸಲಾರದ ಛಾಪು ಮೂಡಿಸಿತ್ತು. 2000ದಲ್ಲಿ ತೆರೆಕಂಡ  ಆದಿತ್ಯ ಚೋಪ್ರಾರ  ಮೊಹಬತ್ತೇಯ ಸಂಗೀತವೂ ಸಿನೇಪ್ರೀಯರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ಹಮ್ಸೆ ಹಮೀ ಕೋ ಚುರಾಲೋ .. ಗೀತೆ ಪ್ರಣಯದ ಹಕ್ಕಿಗಳ೦ತೆ ಯವ್ವನದ ಉನ್ಮಾದದಲ್ಲಿ ಹಾರುಡುತ್ತಿರುವ ಯುವ ಪ್ರೇಮಿಗಳ ಯುಗಳ ಗೀತೆಯಾಯಿತು.  2001ರಲ್ಲಿ ತೆರೆಕಂಡ ಕರಣ್ ಜೋಹರ್-ರ ಕಭಿ ಖುಷಿ ಕಭಿ ಗಮ್ಬೋಲೆ ಚೂಡಿಯಾ ಬೋಲೆ ಕಂಗನಾ….” ಗೀತೆಯ ಮಧುರ   ಮಂಜುಳ ಗಾನ ಪ್ರೇಕ್ಷಕರ ಮನ ಗೆದ್ದಿತ್ತು.

ಯಶರಾಜ್ ಪ್ರೊಡಕ್ಷನ್ ಮತ್ತು ಕರಣ್ ಜೋಹರ್-ರ ಧರ್ಮಾ ಪ್ರೊಡಕ್ಷನ್ನ  ಬಹುತೇಕ  ಚಿತ್ರಗಳಿಗೆ ಕಾಯಂ ಸಂಗೀತ ನಿರ್ದೇಶಕರಾದ ಜತಿನ್–ಲಲಿತ್ ಜೋಡಿಗೆ ಕಭಿ ಖುಷಿ ಕಭಿ ಗಮ್ನ ನಂತರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ  ದುಬಾರಿಯಾಗಿ ಪರಿಣಮಿಸಿತು.  ಕಭಿ ಖುಷಿ ಕಭಿ ಗಮ್ನ ಒಂದೆರಡು ಗೀತೆಗಳನ್ನು ಸಂದೇಶ್ ಶ್ಯಾಂಡಿಲ್ ಮತ್ತು ಬಬ್ಲೂ ಚಕ್ರವರ್ತಿ ಸ೦ಯೋಜಿಸಿದ್ದರು, ಈ ಕುರಿತು ಪತ್ರಿಕೆಯ ಸಂದರ್ಶನಕಾರನ ಪ್ರಶ್ನೆಯೋ೦ದಕ್ಕೆ ಉತ್ತರಿಸುವಾಗ ಜತಿನ್ “ಕರಣ್ ಜೋಹರ್-ಗೆ ಅಭದ್ರತೆ ಕಾಡಿದ್ದರಿಂದ ನಮ್ಮ ಸಂಗೀತದ ಹೊರತಾಗಿಯೂ ಕೆಲ ಗೀತೆಗಳನ್ನು ಬೇರೆ ಸಂಗೀತ ನಿರ್ದೇಶಕರಿಂದ ಸ೦ಯೋಜಿಸಿದ್ದರು” ಎಂದು ಹೇಳಿಕೆ ಕೊಟ್ಟರು. ಇದರಿಂದ ಕೆರಳಿದ  ಕರಣ್ ಜೋಹರ್ ಧರ್ಮಾ  ಪ್ರೊಡಕ್ಷನ್  ಇನ್ನೆಂದಿಗೂ ಜತಿನ್ – ಲಲಿತ್ ರೊಂದಿಗೆ ಕೆಲಸಮಾಡುವದಿಲ್ಲೆಂಬ ಫರ್ಮಾನು ಹೊರಡಿಸಿದರು. ಮುಂದೆ0ದೂ ಕರಣ್ ಜೋಹರ್ ಜತಿನ್ –ಲಲಿತ್ ಒಟ್ಟಾಗಿ ಕೆಲಸ ಮಾಡಲಿಲ್ಲ, ಹೀಗಾಗಿದ್ದು ಬಾಲಿವುಡ್-ನ ದುರಂತವೇ ಸರಿ.  ಜತಿನ್ – ಲಲಿತ್ ರ ಜಾಗವನ್ನು ತ್ರಿಮೂರ್ತಿಗಳಾದ ಶಂಕರ್ –ಐಸಾನ್-ಲಾಯ್ ಗಿಟ್ಟಿಸಿಕೊಂಡರು. ಆದರೆ ಯಶರಾಜ್ ಪ್ರೊಡಕ್ಷನ್-ನ ಅನೇಕ ಚಿತ್ರಗಳಿಗೆ ಜತಿನ್ – ಲಲಿತ್ ಜೋಡಿ ಮುಂದೆಯೂ ಸಂಗೀತ ನೀಡಿತ್ತು.    

2003ರಲ್ಲಿ ಬಂದ ಚಲ್ತೆ ಚಲ್ತೆ’, 2004ರಲ್ಲಿ ಹಮ್ ತುಮ್ ಸಂಗೀತ ಪ್ರಿಯರ ಮನಸೂರೆಗೊಂಡವು. 2006ರಲ್ಲಿ ಬಿಡುಗಡೆಯಾದ ಅಮೀರ್ ಖಾನ್  ಕಾಜೋಲ್ ಅಭಿನಯದ  ಫನ್ಹಾ  ಚಿತ್ರ ಜತಿನ್ –ಲಲಿತ್  ಸ0ಯೋಜಕ ಜೋಡಿಯಾಗಿ ಕೆಲಸ ನಿರ್ವಹಿಸಿದ ಕಟ್ಟಕಡೆಯ ಚಿತ್ರವಾಗಿತ್ತು. ಫನ್ಹಾ’-ದ ಸಂಗಿತವೂ ಅಭೂತಪೂರ್ವ ಯಶಸ್ಸು ಕಂಡಿತ್ತು. ಆದರೆ ಯಾವ ಕಾರಣಕ್ಕಾಗಿ ಈ ಹೆಸರಾಂತ ಯಶಸ್ವೀ ಸಂಗೀತ ನಿರ್ದೇಶಕ ಜೋಡಿ ಬೇರೆಯಾಯಿತು ಎಂಬುದು ಇಂದಿಗೂ ನಿಗೂಢ! ಜತಿನ್-ಲಲಿತ್  ಹೇಳುವಂತೆ  ಫನ್ಹಾ’-ದ ಬಿಡುಗಡೆಯ 9 ತಿಂಗಳ ಮುನ್ನವೇ ಚರ್ಚಿಸಿ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರಂತೆ.  ಕಾರಣವನ್ನು ಕೇಳಿದಾಗ ಇಬ್ಬರೂ ಪರಸ್ಪರರ ಮನ ನೋಯಿಸದೇ ಇರಲು ಮೌನಕ್ಕೆ ಶರಣಾಗುತ್ತಿದ್ದರು. ಜತಿನ್ ವಯಸ್ಸಿನಲ್ಲಿ ಲಲಿತ್ ಗಿಂತ 9 ವರ್ಷ್ ದೊಡ್ಡವರು ತಮ್ಮ  ತಮ್ಮನ ಜೀವನ ಸುಖಮಯವಾಗಲೆಂದು ಹರಿಸಿದರು ಅದೇ ರೀತಿ ಲಲಿತ್ ಕೂಡ ಹಾರೈಸಿದರು.ತಮ್ಮ ಸಮಕಾಲೀನರಾದ ನದೀಮ್ –ಶ್ರವಣ್, ಆನಂದ–ಮಿಲಿ೦ದ , ಅನು ಮಲಿಕ್  ಬಹುತೇಕವಾಗಿ  ತೆರೆಯ ಮರೆಗೆ ಸರಿದ ಕಾಲ, 16 ವರುಷಗಳ ಅವಿರತ ಪರಿಶ್ರಮ, ನಿರಂತರ ಯಶಸ್ಸು, ಕೀರ್ತಿಯ ಶಿಖರಕ್ಕೇರಿದ ಹೊರತಾಗಿಯೂ ಜತಿನ್ –ಲಲಿತ್ ಜೋಡಿಯ ಬೇರ್ಪಡುವಿಕೆ ಬಾಲಿವುಡ್-ಗೆ ಅನಿವಾರ್ಯವಾಗಿತ್ತಾ? ಸುಮಧುರ ಸಂಗೀತದಿಂದ ಮನೆ ಮಾತಾಗಿದ್ದ ಜೋಡಿಯ ಪತನದಿಂದ ಶ್ರೋತ್ರುಗಳಿಗೆ ನಿರಾಸೆಯಾಗಿತ್ತು, ಬಾಲಿವುಡ್ ನಲ್ಲಿ ಇಂದಿಗೂ ಇವರ ಸ್ಥಾನ ತುಂಬುವ ಸಂಗೀತ ನಿರ್ದೇಶಕರ ಕೊರತೆ ಎದ್ದು ಕಾಣುತ್ತದೆ. “ಯಾವಾಗ ಕೆಲ ಕಥೆಗಳು ಪರಿಪೂರ್ಣ ತಾರ್ಕಿಕ ಅಂತ್ಯವನ್ನು ತಲುಪುವದಿಲ್ಲವೋ, ಅಂತಹ ಕಥೆಗಳನ್ನು ಹಗ್ಗ ಜಗ್ಗಾಟವಿಲ್ಲದೇ ಸುಂದರ ನೆನಪುಗಳೊಂದಿಗೆ ಮಧ್ಯದಲ್ಲಿಯೇ ಮೊಟುಕುಗೊಳಿಸುವದು ಸೂಕ್ತ”  ಎಂಬ ಆಂಗ್ಲ ಭಾಷೆಯ ಉಕ್ತಿಯಂತೆ ಬಹುಶಃ ಜತಿನ್ –ಲಲಿತ್ ಜೋಡಿ ಬೇರೆಯಾಯಿತಾ?  

 ಜತಿನ್ –ಲಲಿತ್-ರ ಅಚ್ಚು ಮೆಚ್ಚಿನ  ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ,  ಜತಿನ್ –ಲಲಿತ್  ಸ೦ಯೋಜನೆಯ  ಒಟ್ಟು 136 ಹಾಡುಗಳನ್ನು ಅಲ್ಕಾ ಯಾಗ್ನಿಕ ಹಾಡಿದ್ದು ಒಂದು ದಾಖಲೆ. ಅದೇ ರೀತಿ ಕುಮಾರ್ ಸಾನು ಮತ್ತು ಉದಿತ್ ನಾರಾಯಣ್ ಕೂಡ  ಜತಿನ್ –ಲಲಿತ್ ಸ೦ಯೋಜನೆಯ  100ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಹಿನ್ನೆಲೆ ಗಾಯಕ ಅಭಿಜೀತ್ ತಮ್ಮ ವೃತ್ತಿಜೀವನದ ಯಶಸ್ಸಿಗೆ ಜತಿನ್ –ಲಲಿತ್ ಕಾರಣ ಮತ್ತು ಅವರ ಸ೦ಯೋಜನೆಯ ಫರೇಬ್ ಚಿತ್ರದ ಏ ತೇರಿ ಆ೦ಖ್ಯೆ ಝುಕಿ ಝುಕಿ..’ ‘ಎಸ್ ಬಾಸ್ಮೈ ಕೋಯಿ ಐಸಾ ಗೀತ ಗಾಂವು…’ ‘ಚಾಂದ ತಾರೆ ತೋಡ ಲಾಂವು…’ ‘ತೌಬಾ ತುಮ್ಹಾರೇ ಯೇ ಇಷಾರೆ… ಹಾಡುಗಳಿಂದ ತಾವು ಬೆಳೆದು ನಿಲ್ಲುವಂತಾಯಿತು ಎಂದು ಹೇಳಿಕೊಳ್ಳುತ್ತಾರೆ.  ಸುಮಾರು 11 ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ  ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಜತಿನ್ – ಲಲಿತ್ ಜೋಡಿಗೆ ಪ್ರಶಸ್ತಿ ಮಾತ್ರ ಮರೀಚಿಕೆಯಾಯಿತು.   

ಬೇರ್ಪಟ್ಟ ನಂತರ ಜತಿನ ಪಂಡಿತ್ ಮತ್ತು ಲಲಿತ ಪಂಡಿತ್  ಬೇರೆ ಬೇರೆಯಾಗಿ ಕೆಲ ಚಿತ್ರಗಳಿಗೆ ಸಂಗೀತ  ನಿರ್ದೇಶನ ಮಾಡಿದರೂ, ಲಲಿತ ಪಂಡಿತ್-ಗೆ ದಬಂಗನ ಸಾಜೀದ-ವಾಜೀದ ಸ0ಯೋಜನೆಯ ಮುನ್ನಿ ಬದನಾಮ್ ಹುಯಿ ಡಾರ್ಲಿಂಗ್ ತೇರೇ ಲಿಯೇ.. ಹಾಡನ್ನು ಮರು ಮಿಶ್ರಣ (ರೀಮಿಕ್ಸ್) ಮಾಡಿದಕ್ಕೆ ಪ್ರಶಸ್ತಿಯೊಂದು ಬ೦ದದ್ದು ಬಿಟ್ಟರೆ ಹೇಳಿಕೊಳ್ಳುವಂಥ ಯಶಸ್ಸು ಗಳಿಸಲಿಲ್ಲ. ಇನ್ನಾದಾರೂ ಜತಿನ್ – ಲಲಿತ್ ಜೋಡಿಗೆ ಸದ್ಬುಧ್ಹಿ ಬಂದು ಒಂದಾಗಿ ಹಳೆಯ ದಿನಗಳ ಗತವೈಭವವನ್ನು ಮರುಸೃಷ್ಟಿಸಿ, ಸಿನೇಪ್ರೇಮಿಗಳಿಗೆ, ಸಂಗೀತಪ್ರೇಮಿಗಳಿಗೆ ಸಂಗೀತೋತ್ಸವದ ರಸದೌತಣ ನೀಡುವಂತಾಗಲಿ.

Facebook ಕಾಮೆಂಟ್ಸ್

Srinivas N Panchmukhi: ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.
Related Post