ಮನುಷ್ಯ ಪಕ್ಷಿಯಂತೆ ಹಾರುವುದನ್ನು ಕಲಿತ. ಮೀನಿನಂತೆ ಈಜುವುದನ್ನು ಕಲಿತ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳ ಜೊತೆಗೆ ವಿಭಿನ್ನವಾಗಿ ಗುರುತಿಸಿಕೊಂಡ. ವಿಕಾಸದ ವಿವಿಧ ಹೆಜ್ಜೆಗಳನ್ನಿಟ್ಟು ಉಳಿದ ಜೀವಿಗಳಿಗಿಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡ. ಹೊಸ ಶತಮಾನದ ಹೊಸದೊಂದು ಕಾಲಘಟ್ಟದಲ್ಲಿರುವ ಮನುಷ್ಯನ ಸಾಧ್ಯತೆಗಳು ವಿವಿಧ ಬಗೆಗಳಲ್ಲಿ ವಿಸ್ತಾರಗೊಳ್ಳುತ್ತಲೇ ಇವೆ. ಇವೆಲ್ಲವುಗಳನ್ನೂ ದೃಷ್ಟಿಯಲ್ಲಿರಿಸಿಕೊಂಡು ವರ್ತಮಾನದ ಯುವಪೀಳಿಗೆ ಭವಿಷ್ಯವನ್ನು ಸ್ಪಷ್ಟಪಡಿಸಿಕೊಳ್ಳುವ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಅದರ ಬದಲು ನಕಾರಾತ್ಮಕ ಸಂಗತಿಗಳ ಜೊತೆಗೆ ಗುರುತಿಸಿಕೊಂಡರೆ ಭವಿಷ್ಯ ಉಜ್ವಲವಾಗುವುದರ ಬದಲು ಸಮಸ್ಯಾತ್ಮಕವಾಗುತ್ತದೆ. ಬದುಕಿಗೆ ಇರುವ ಅರ್ಥಪೂರ್ಣ ಸ್ವರೂಪ ಅರ್ಥೈಸಿಕೊಳ್ಳದೇ ನಿರಾಶಾಭಾವ ಜೊತೆಯಾಗುತ್ತದೆ. ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಕಾಲಹರಣಕ್ಕೆ ಆದ್ಯತೆ ನೀಡಿದ ನಂತರ ಕೊರಗುತ್ತ ಹೆಜ್ಜೆಗಳನ್ನಿಟ್ಟರೆ ಮುಂದೊಂದು ದಿನ ನಿರಾಶಾವಾದವೇ ಆವರಿಸಿಕೊಂಡು ಅಪಾಯಕಾರಿ ನಿರ್ಧಾರಗಳಿಗೆ ಮನಸ್ಸು ಪಕ್ಕಾಗುವ ಸಾಧ್ಯತೆಗಳಿರುತ್ತವೆ. ಅಂಥ ಮನಸ್ಸುಗಳೇ ಆತ್ಮಹತ್ಯೆಯ ಹಾದಿಯನ್ನೇ ಪರಮಮಾರ್ಗವಾಗಿಸಿಕೊಳ್ಳುತ್ತವೆ.
ಯುವಜನತೆಯ ಮನಸ್ಥಿತಿ ದ್ವಂದ್ವಾತ್ಮಕವಾಗಿರುವುದರಿಂದ ಅವರು ತಕ್ಷಣವೇ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಾರೆ. ಓದುವ ಕಾಲಕ್ಕೆ ಆದ್ಯತೆ ನೀಡಬೇಕಾದ ಸಂಗತಿಗಳನ್ನು ನಿರ್ಲಕ್ಷಿಸಿ ಆಮೇಲೆ ಕೊರಗುತ್ತಾರೆ. ಮೋಜಿಗಷ್ಟೇ ಆದ್ಯತೆ ನೀಡಿ ವಿವಿಧ ಬಗೆಯ ವಿಚಿತ್ರ ಪ್ರಭಾವಗಳಿಗೆ ಈಡಾಗಿ ವ್ಯಕ್ತಿತ್ವದ ಬೆಳವಣಿಗೆಯ ಅಂಶಗಳನ್ನು ನಿರ್ಲಕ್ಷಿಸುತ್ತಾರೆ. ಉದ್ಯೋಗಾವಕಾಶಗಳು ಲಭ್ಯವಾಗದಿದ್ದಾಗ ವಿಚಲಿತರಾಗುತ್ತಾರೆ. ಅನುತ್ತೀರ್ಣಗೊಂಡಾಗ ಬದುಕೇ ಕೊನೆಗೊಂಡಿತು ಎಂಬಂತೆ ನಿರಾಸೆಗೊಳ್ಳುತ್ತಾರೆ. ತದನಂತರ ನಿರಂತರವಾಗಿ ಎದುರಾಗುವ ಅವಮಾನದ ಸ್ಥಿತಿಗಳನ್ನು ನಿಭಾಯಿಸುವ ಆಶಾವಾದ ಕಳೆದುಕೊಂಡು ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಪ್ರೇಮ ವೈಫಲ್ಯದ ಒತ್ತಡವನ್ನು ನಿಭಾಯಿಸಲಾಗದೆಯೂ ಪ್ರಾಣ ಕಳೆದುಕೊಂಡವರೂ ಇದ್ದಾರೆ.
ಇಂಥವರೇ ಹಿರಿಯರ ಸಲಹೆಗಳ ಕುರಿತಾಗಿ ನಿರ್ಲಕ್ಷ್ಯ ಭಾವ ತಳೆಯುತ್ತಾರೆ. ಸ್ವಲ್ಪ ಬೈದರೆ ಸಾಕು ತಮ್ಮ ಜೀವನವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಜನ್ಮಕೊಟ್ಟ ತಂದೆ-ತಾಯಿಗಳಿಗೆ ಬೈಯುವ ಅಧಿಕಾರ ಇಲ್ಲವೇ? ವಿದ್ಯೆ ಕೊಟ್ಟ ಗುರುಗಳಿಗೆ ಬುದ್ದಿ ಹೇಳುವ ಅವಕಾಶ ಇಲ್ಲವೇ? ತಾವು ಪ್ರೀತಿಸಿದ ಹುಡುಗ, ಹುಡುಗಿಗೋಸ್ಕರ ಅಂತ್ಯ ಹಾಡಿಕೊಳ್ಳುವ ಮನಸ್ಥಿತಿ ಸಮಂಜಸವಲ್ಲ.
ದೈಹಿಕವಾಗಿ ಸಮರ್ಥರಿರುವವರೇ ಅನಗತ್ಯ ಕಾರಣಗಳಿಗಾಗಿ ಸಾಯುವ ನಿರ್ಧಾರ ಕೈಗೊಂಡರೆ ಪ್ರಯೋಜವಿಲ್ಲ. ದೈಹಿಕ ಊನಗಳೊಂದಿಗೆ ಬದುಕುತ್ತಿರುವವರು ಅಪೂರ್ವ ಸಾಧನೆಗಳೊಂದಿಗೆ ಬದುಕುತ್ತಾರೆ. ದೈಹಿಕ ನ್ಯೂನತೆಗಳಿರುವವರು ಹುಟ್ಟಿನಿಂದಲೇ ತಮ್ಮ ಜೀವನದಲ್ಲಿ ನೋವು ಅನುಭವಿಸುತ್ತಿದ್ದರೂ ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳುವುದಿಲ್ಲ. ಯಾಕೆಂದರೆ ಅವರ ಮನಸ್ಸಿನಲ್ಲಿ ಏನಾದರು ಸಾಧಿಸಬೇಕೆಂಬ ಛಲ ಇರುತ್ತದೆ. ಅವರು ಕತ್ತಲೆಯಿಂದ ಬೆಳಕಿಗೆ ಬರಲು ಪ್ರಯತ್ನಿಸುತ್ತಾರೆ. ಆದರೆ ದೈಹಿಕವಾಗಿ ಸಶಕ್ತವಿರುವ ಯುವಕರು ಮಾನಸಿಕ ತೊಳಲಾಟದ ಕಾರಣಕ್ಕಾಗಿಯೇ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಾರೆ.
ಇಷ್ಟಲ್ಲದೆ ಇನ್ನು ನಾನಾ ರೀತಿಯ ಕಷ್ಟಗಳಿಂದ ಜೀವನ ನಡೆಸುತ್ತಿರುವವರು, ತಾವೇ ದುಡಿದು ಓದುವವರು ಇದ್ದಾರೆ. ಅವರು ಸಾಯುವ ಯೋಚನೆ ಮಾಡಿದ್ದರೆ ಇಂದು ಸಂಪೂರ್ಣವಾಗಿ ನಮ್ಮ ಯುವಪೀಳಿಗೆ ನಶಿಸಿ ಹೋಗುತ್ತಿತು. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೆ? ಖಂಡಿತ ಇದೆ. ಅದರಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿರುವುದು ಪೋಷಕರು, ಗುರುಗಳು, ಇಂದಿನ ಸಮಾಜ ಅಂತೆಯೇ ಯುವಜನತೆಯ ಆತ್ಮವಿಶ್ವಾಸ.
ಆತ್ಮಸ್ಥೈರ್ಯ,ಮನೋಬಲ, ಆತ್ಮವಿಶ್ವಾಸವನ್ನು ಕಳೆದುಕೊಂಡು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ಇಂದಿನ ನಮ್ಮ ಯುವಜನತೆಯನ್ನು ರಕ್ಷಿಸಬೇಕಾಗಿದೆ. ತಂದೆ-ತಾಯಿಯ ಪ್ರೀತಿಯ ಕೊರತೆಯಿಂದ ಬಳಲುತ್ತಿರುವ ಯುವಜನತೆಗೆ ಪೋಷಕರು ಪ್ರೀತಿಯನ್ನು ತೋರಬೇಕಾಗಿದೆ. ಹಾಗೆಯೇ ಮಾನಸಿಕ ಹಾಗು ದೈಹಿಕವಾಗಿ ಬಳಲುತ್ತಿರುವ ಯುವಪೀಳಿಗೆಗೆ ಸಂತೈಸುವವರು, ಮಾರ್ಗದರ್ಶಕರು ಬೇಕಾಗಿದ್ದಾರೆ, ಸೋತೆನೆಂಬ ಭಾವನೆಯಿಂದ ತಮ್ಮ ಜೀವನವನ್ನು ಅರಳುವ ಮುನ್ನವೇ ಕೊನೆಗೊಳಿಸುತ್ತಿರುವ ಹಲವು ಯುವಕರಿಗೆ ಸೋಲೇ ಗೆಲುವಿನ ಮೆಟ್ಟಿಲೆಂಬುದು ಮನದಟ್ಟಾಗಬೇಕಾಗಿದೆ.
ಜೀವನ ಒಂದು ಸಮುದ್ರದಂತೆ. ಮನಸ್ಸು ಎಂಬುದು ಅದರ ಅಲೆಗಳಂತೆ. ಅದರಲ್ಲಿ ಈಜಿ ದಡ ಸೇರುವುದೇ ಗುರಿಯಾಗಲಿ. ಜೀವನವನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಚಿರನಿದ್ರೆಗೆ ಜಾರುವ ಆತುರದ ನಿರ್ಧಾರವನ್ನು ಕೈಬಿಟ್ಟು, ಚಿರಸ್ಥಾಯಿಯಾಗಿ ಉಳಿಯುವಂಥ ಸಾಧನೆಯ ಕಡೆಗೆ ಯುವಕರು ಗಮನಹರಿಸಬೇಕು. ಆ ಕಾರಣಕ್ಕಾಗಿಯೇ ಬದುಕಬೇಕು. ಬದುಕಿನ ಎಲ್ಲ ಸವಾಲುಗಳನ್ನೂ ಎದುರಿಸಬೇಕು. ಆತ್ಮವಿಶ್ವಾಸದ ಹೆಜ್ಜೆಗಳನ್ನಿರಿಸುವ ಸ್ಪಷ್ಟತೆ ರೂಢಿಸಿಕೊಳ್ಳಬೇಕು.
-ಸುಶ್ಮಿತಾ ಜೈನ್ ಹೆಚ್.ಜಿ
ಪ್ರಥಮ ಎಂ.ಸಿ.ಜೆ
ಎಸ್.ಡಿ.ಎಂ. ಕಾಲೇಜು, ಉಜಿರೆ
Facebook ಕಾಮೆಂಟ್ಸ್