“ರತ್ನ ಗರ್ಭ ಭಾರತಿ” ಎಂಬ ಮಾತಿದೆ. ಭಾರತದಲ್ಲಿ ಹುಟ್ಟುವುದೆಲ್ಲಾ ರತ್ನಗಳೇ. ಒಬ್ಬರೋ ಇಬ್ಬರೋ ರಾಮಕೃಷ್ಣ ಪರಮಹಂಸ,ವಿವೇಕಾನಂದ, ಶಂಕರ, ರಾಮಾನುಜ, ಮಧ್ವಾಚಾರ್ಯರು ,ಬುದ್ಧ, ಬಸವಣ್ಣ, ಮಹಾವೀರ, ಗಾಂಧಿಯಂತಹ ಅನೇಕಮಹಾಪುರುಷರು ಆಗಿಹೋಗಿದ್ದಾರೆ. ಪ್ರತಿಯೊಬ್ಬ ಮಹಾಪುರುಷರ ಕಾಲವಾದ ಮೇಲೆ ಅವರನ್ನು ಹೂಳುವ ಬದಲು ಬಿತ್ತಿ ಮತ್ತಷ್ಟು ಮಹಾಪುರುಷರು ಜನ್ಮವೆತ್ತುವಂತೆ ಮಾಡಿದ್ದು ಈ ಮಣ್ಣಿನ ಶ್ರೇಷ್ಟತೆ. ಭಾರತದ ಪೀಳಿಗೆಗಳು ಕಳೆದಂತೆಇಂತಹ ಮಹಾಪುರುಷರ ನೆನಪುಗಳು ಮರೆಯಾಗುತ್ತಿದ್ದುದು ವಿಪರ್ಯಾಸವೇ ಸರಿ. ಆದರೇ ಸರ್ಕಾರಗಳು ಮಾತ್ರ ಅವರದೊಂದು ಮೂರ್ತಿ ನಿಲ್ಲಿಸಿ ಅವರ ಜನ್ಮದಿನದಂದು ಅದಕ್ಕೊಂದು ಮಾಲೆ ಹಾಕಿ ಔಪಚಾರಿಕತೆಯನ್ನು ಮೆರೆಯುತ್ತವೆ. ಒಂದೇಮೂರ್ತಿಯನ್ನು ಹಲವು ಕೋನಗಳಿಂದ ನೋಡಿದಾಗ ಅದರಲ್ಲಿನ ಅಮೂರ್ತ ಸತ್ಯಗಳು ಬಯಲಿಗೆ ಬರುತ್ತಾ ಹೋಗುತ್ತವೆ. ಮಹಾಪುರುಷರ ಆದರ್ಶಗಳನ್ನು ಗಂಟು ಕಟ್ಟಿ ಎಸೆದು ಅವರ ಮೂರ್ತಿಗಳನ್ನು ಯಾವುದೋ ಸಮಾಜದ ಓಲೈಕೆಗೆಬಳಸುತ್ತಿರುವುದು ದುರಂತ. ಮುಂದೊಂದು ದಿನ ಮಹಾಪುರುಷರ ಹೆಸರುಗಳಿಗೆ ಅವರು ಇಂಥ ಧರ್ಮದ ನಾಯಕ ಎಂಬ ಅಡಿಬರಹಗಳು ಬೀಳುವುದು ಖಚಿತ. ಆಗ ಅವರ ಮೂರ್ತಿಗಳು ವಿವಾದದ ಬಿಂದುಗಳಾಗುತ್ತವೆ ಅವರ ಆದರ್ಶ ಮತ್ತು ದೇಶಕ್ಕೆಕೊಟ್ಟ ಕೊಡುಗೆಗಳು ತೆರೆಮರೆಗೆ ಸರಿದು ಅವರು ಇಂಥ ಧರ್ಮದ ಅಥವಾ ಜಾತಿ ಸಮುದಾಯದ ನಾಯಕನಾಗಿ ಅಷ್ಟೆ ಕಂಡುಬರುವ ದುರಂತದೆಡೆಗೆ ನಾವು ಚಲಿಸುತ್ತಿದ್ದೇವೆ. ಹಾಗಾದರೆ ಅವರ ಆದರ್ಶಗಳು ಅಮರವಾಗಿರಲು ಏನು
ಮಾಡಬೇಕು ? ಎಂಬುದನ್ನು ನಾವು ಚಿಂತಿಸಬೇಕಿದೆ. “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬಂತೆ ಅವರ ಮೂರ್ತಿ ನಿರ್ಮಾಣದ ಜೊತೆಗೆ ಅವರು ದೇಶದ ಬಗ್ಗೆ ಕಟ್ಟಿದ ಕನಸುಗಳಿಗೆ ಸರಕಾರದ ಸಾರಥ್ಯದಲ್ಲಿ ಚಾಲನೆ ಸಿಕ್ಕು ಅವುಗಳಪಾಲನೆಯಾಗುವಂತೆ ಮಾಡಿ ಅವರ ಪ್ರತಿಯೊಂದು ಹುಟ್ಟುಹಬ್ಬಗಳಲ್ಲೂ ಆ ಯೋಜನೆಯ ಪ್ರಗತಿಯ ಬಗ್ಗೆ ಅವಲೋಕಿಸುತ್ತಾ ಹೋದರೆ ಆಯಿತು. ಇಂಥ ಒಂದು ಮಹತ್ಕಾರ್ಯದ ಮೂಲಕ ಅವರ ಆದರ್ಶಗಳಿಗೊಂದು ಮರುಜನ್ಮ ಮತ್ತುಅವರಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಯೂ ಆಗುತ್ತದೆ.
ಗಾಂಧೀಜಿ ಹುಟ್ಟಿದ ಹಬ್ಬದಂದು ಅವರ ಕನಸಿಗೆ ಚಾಲನೆ ಸಿಕ್ಕಿತು. ೨೦೧೪ ಅಕ್ಟೋಬರ್ ೨ ರಂದು “ಸ್ವಚ್ಛ ಭಾರತ್ ಯೋಜನೆ ” ಅನುಷ್ಠಾನಕ್ಕೆ ಬಂತು . ಇದು ಒಬ್ಬರಿಬ್ಬರಿಂದ ಯಶಸ್ವಿಯಾಗುವ ಯೋಜನೆ ಅಲ್ಲ. ಇದರಲ್ಲಿ ದೇಶದ ಕೊನೆಯ ಪ್ರಜೆಯೂತನ್ನ ಕರ್ತವ್ಯವನ್ನು ಅರಿತಾಗಲೇ ಸಾಧ್ಯ. ಆದರೆ ಮೋದಿಯವರ ಈ ಯೋಜನೆಯ ಬಗ್ಗೆ ಮೂಗು ಮುರಿದವರಿಗೆ ಈ ಯೋಜನೆಯ ಅವಶ್ಯಕತೆ ಏನು ಎಂಬುದನ್ನು ತಿಳಿಸಬೇಕಿದೆ. ನೀವೊಮ್ಮೆ ಉತ್ತರ ಕರ್ನಾಟಕದ ಕಡೆಗೆ ಹೋಗಿ ನೋಡಿ ಹೆಣ್ಣುಮಕ್ಕಳುಸಂಜೆಯಾದ ಮೇಲೆ ಅಥವಾ ಬೆಳಕು ಹರಿಯುವ ಮುಂಚೆ ಬಯಲು ಕಡೆಗೆ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಬರೀ ಉತ್ತರ ಕರ್ನಾಟಕ ಅಷ್ಟೇ ಅಲ್ಲ. ದೇಶದ ಹಲವು ಕುಗ್ರಾಮಗಳ ಕಥೆಯೂ ಅದೆ. ಅದಲ್ಲದೆ ಬಯಲು ಶೌಚದಿಂದ ರೋಗರುಜಿನಗಳು ಹರಡಿ ದೇಶದ ಜನರ ಸ್ವಾಸ್ಥ್ಯ ಕೂಡಾ ಹದಗೆಡುವ ಅಪಾಯವಿದೆ.
ಇದು ಯೋಜನೆಯ ಒಂದು ಮುಖವಾದರೆ ಇನ್ನೊಂದು ಮುಖದ ಬಗ್ಗೆ ನಾವು ಅರಿಯಬೇಕು. ಅದೇನೆಂದರೆ ತ್ಯಾಜ್ಯ ಸಂಗ್ರಹಣೆ ಮತ್ತು ಅದರಿಂದ ಶಕ್ತಿ ಉತ್ಪಾದನೆ. ಜನಸಂಖ್ಯೆ ಜಾಸ್ತಿಯಾದಂತೆ ಶಕ್ತಿಯ ಅವಶ್ಯಕತೆಯೂ ಜಾಸ್ತಿಯಾಗುತ್ತದೆಸಮಾಂತರವಾಗಿ ಹೆಚ್ಚು ತ್ಯಾಜ್ಯಗಳು ಬಿಡುಗಡೆಗೊಂಡು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅದೇ ತ್ಯಾಜ್ಯವನ್ನು ಶಕ್ತಿಯ ಉತ್ಪಾದನೆಗೆ ಬಳಸಿದರೆ ಅದಕ್ಕಿಂತಲೂ ಸೃಜನಶೀಲ ನಡೆ ಮತ್ತೊಂದಿಲ್ಲ. ತ್ಯಾಜ್ಯದಿಂದ ಬರೀ ಶಕ್ತಿ ಉತ್ಪಾದನೆ ಅಷ್ಟೇ ಅಲ್ಲ.ಅದರ ಜೊತೆಜೊತೆಗೆ ಮಿಶ್ರಗೊಬ್ಬರ ತಯಾರಿಕೆಯನ್ನು ಮಾಡುವುದೂ ಕೂಡಾ ಈ ಯೋಜನೆಯ ಹೆಚ್ಚುಗಾರಿಕೆ. ವಿಷಕಾರಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಷ್ಟೇ ಅಲ್ಲದೇ ಮಣ್ಣಿನ ಸಾರವು ಕಡಿಮೆಯಾಗುತ್ತಾಹೋಗುತ್ತದೆ. ಅದಲ್ಲದೆ ನಮ್ಮ ಸಮಾಜದಲ್ಲಿ ದಾರಿದ್ರ್ಯದಂತೆ ಬೆಳೆದು ಬಂದ ಮಲ ಹೊರುವ ಪದ್ಧತಿ ನಿರ್ಮೂಲನೆಯೂ ಕೂಡಾ ಯೋಜನೆಯ ಒಂದು ಭಾಗ. ಗಾಂಧೀಜಿ ಹಲವು ಕನಸುಗಳಲ್ಲಿ ದೀನದಲಿತರನ್ನು ಸಮಾಜದ ಮುಖ್ಯವಾಹಿನಿಗೆತರುವುದೂ ಕೂಡಾ ಒಂದಾಗಿತ್ತು. ಆ ಕನಸಿನ ಸಾರ್ಥಕ ರೂಪವಾಗಿ ನಾವ್ಯಾಕೆ ಈ ಯೋಜನೆಯನ್ನು ಕಾಣಬಾರದು?
ಈಗ ನೀವೇ ಹೇಳಿ ಸ್ವಚ್ಛ ಭಾರತ್ ಎಂಬ ಗಾಂಧೀಜಿಯ ಕನ್ನಡಕದ ಲೋಗೊ ಹೊತ್ತ ಯೋಜನೆ ಅದೆಷ್ಟೊಂದು ವಿಷಯಗಳತ್ತ ತನ್ನ ‘ನೋಟ’ಬೀರಿದೆ? ಸ್ವಚ್ಛ ಭಾರತ ಎಂದರೆ ಬರೀ ಪೊರಕೆ ಹಿಡಿದು ಗುಡಿಸುವುದಕ್ಕಷ್ಟೇ ಸೀಮಿತ ಎಂದು ತಿಳಿದ ಸಂಕುಚಿತವಕ್ರಾಕ್ಷಿಗಳಿಗೆ ಹಲವು ಬಣ್ಣಗಳ ರೇಖೆಗಳ ಈ ಯೋಜನೆ ಕಾಮಾಲೆಯ ಹಳದಿಯಾಗಿ ಕಂಡಿದ್ದು ದುರಾದೃಷ್ಟಕರ . ೨೦೧೯ ನೇಯ ಇಸವಿಯ ವೇಳೆಗೆ ಸರಿಯಾಗಿ ಗಾಂಧೀಜಿಯವರ ೧೫೦ ನೆಯ ಹುಟ್ಟುಹಬ್ಬದ ತರುವಾಯ ಭಾರತವನ್ನುಬಯಲು ಶೌಚಮುಕ್ತ ರಾಷ್ಟ್ರವನ್ನಾಗಿ ಮಾಡಹೊರಟ ಯೋಜನೆ ಇದು. ಸುಮಾರು ೪೦೪೧ ಊರುಗಳನ್ನು ಪರಿಗಣನೆಗೆ ತೆಗೆದುಕೊಂಡು ಅಲ್ಲಿ ಶೌಚಾಲಯ ನಿರ್ಮಾಣ ಮತ್ತು ಸಂಪೂರ್ಣ ನಿರ್ಮಲೀಕರಣದ ಹೊಣೆ ಹೊತ್ತಿದೆ. ಈಗಿನ ಪ್ರಜೆಗಳುಮೊದಲಿನಂತೆ ಮೂರ್ಖರಲ್ಲ ಸರ್ಕಾರದ ಯೋಜನೆಯ ಪ್ರತಿಯೊಂದು ಸೂಕ್ಷ್ಮವನ್ನು ಅರಿತು ಅದು ಸಕಾರಾತ್ಮಕವಾಗಿದ್ದರೆ ಮಾತ್ರ ಅದರೊಂದಿಗೆ ಕೈಜೋಡಿಸುವ ಪ್ರಜ್ಞಾವಂತರು.ಗಾಂಧೀಜಿ ಸ್ಮಾರಕವಾದ ದೆಹಲಿಯ ರಾಜ್-ಘಾಟ್’ನಲ್ಲಿ ನಡೆದ ಸಭೆಯಲ್ಲಿಈ ಯೋಜನೆಗೆ ಚಾಲನೆ ಸಿಕ್ಕಿತು. ಈ ಯೋಜನೆಯ ಇನ್ನೊಂದು ಗಮನಾರ್ಹ ಅಂಶವೆಂದರೆ ಗ್ರಾಮೀಣ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಲ್ಲಿ ಶೌಚಾಲಯ ನಿರ್ಮಿಸುತ್ತಿರುವುದು. ಈ ಯೋಜನೆಗೆ ತಗಲುವ ೬೨೦೦೯ ಕೋಟಿಯಲ್ಲಿ ಕೇಂದ್ರಸರ್ಕಾರ ೧೪೬೨೩ ಕೋಟಿ ನೀಡಲು ಮುಂದಾಗಿದೆ. ಇಂಥ ಒಂದು ನಡೆಗೆ ಪ್ರೋತ್ಸಾಹಿಸಲೆಂದೆ ಮೇ ೨೦೧೫ ರ ವೇಳೆಗೆ ೧೪ ಕಂಪನಿಗಳು ೩೧೯೫ ಮತ್ತು ೭೧ ಪಬ್ಲಿಕ್ ಸೆಕ್ಟರ್ ಕಂಪನಿಗಳು ೮೬೭೮೧ ಶೌಚಾಲಯ ಕಟ್ಟಿಸುವ ಆಶ್ವಾಸನೆ ನೀಡಿದವು.ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ ಶೌಚಾಲಯ ಕಟ್ಟಲು ಸರ್ಕಾರ ೧೨೦೦೦ ರೂಪಾಯಿಯನ್ನು ಕೊಡುತ್ತದೆ ಇದರಲ್ಲಿ ೯೦೦೦ ಕೇಂದ್ರ ಸರ್ಕಾರದ ಪಾಲು ಮಿಕ್ಕಿದ್ದು ರಾಜ್ಯ ಸರ್ಕಾರದ ಕೊಡುಗೆ. ೩೦ ಮಾರ್ಚ ೨೦೧೬ ರಂದು ವರ್ಲ್ಡ್ಬ್ಯಾಂಕ್ ೧.೫ ಬಿಲಿಯನ್ ಡಾಲರ್ ಲೋನ್ ಈ ಯೋಜನೆಗಾಗಿ ಕೊಟ್ಟಿದೆ.
ಸ್ವಚ್ಛ ಭಾರತ್ ಅಭಿಯಾನದ ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ಒಮ್ಮೆ ಕಣ್ಣಾಡಿಸಬೇಕಿದೆ. ಒಟ್ಟು ೬೬ ಲಕ್ಷ ಪ್ರತ್ಯೇಕ ಶೌಚಾಲಯಗಳು, ೨.೫೦ ಲಕ್ಷ ಸಮುದಾಯ ಶೌಚಾಲಯಗಳು ಮತ್ತು ೨.೫೦ ಲಕ್ಷ ಸಾರ್ವಜನಿಕ ಶೌಚಾಲಯಗಳ ಗುರಿ ಹೊಂದಿದ್ದಯೋಜನೆ ಯೋಜನೆಯ ೩೬% ಪ್ರತ್ಯೇಕ ಶೌಚಾಲಯಗಳನ್ನು, ೩೦% ಸಮುದಾಯ ಶೌಚಾಲಯಗಳನ್ನು ಕಟ್ಟಿದ್ದು ಯೋಜನೆ ದಾಖಲೆಯ ವೇಗದಲ್ಲಿ ಅನುಷ್ಠಾನಕ್ಕೆ ಬಂದಿರುವ ಸೂಚನೆಯಾದರೆ ಅದರ ಭಾಗವಾದ ಸಾರ್ವಜನಿಕ ಶೌಚಾಲಯಗಳಎರಡು ವರ್ಷದಲ್ಲಿ ಕೇವಲ ೯% ಮಾತ್ರ ನಿರ್ಮಾಣವಾಗಿದ್ದು ಅದರೆಡೆಗೆ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವುದು ಉತ್ತಮ. ಹಳ್ಳಿಗಳು ಬಯಲು ಶೌಚಮುಕ್ತವಾಗುವುದು ಕಷ್ಟಸಾಧ್ಯ ಕೆಲಸ. ಕಾರಣ ಈ ಅಭಿಯಾನ ಇನ್ನೂಪ್ರಚಾರವಾಗುವ ಅವಶ್ಯಕತೆ ಇದೆ. ಹೆಚ್ಚಾನು ಹೆಚ್ಚು ಶೌಚಕ್ಕಾಗಿ ಬಯಲಿಗೆ ತೆರಳುವ ಜನ ಒಂದೋ ಗ್ರಾಮೀಣ ಪ್ರದೇಶದವರಾಗಿರುತ್ತಾರೆ. ಇಲ್ಲವೇ ಇರಲು ಮನೆಯಿಲ್ಲದ ನಿರ್ಗತಿಕರಾಗಿರುತ್ತಾರೆ. ಅಂಥವರನ್ನು ಈ ಯೋಜನೆಯ ಪರಿಧಿಗೆ ತರುವುದುಕಷ್ಟಕರ. ಇದರ ಸೂಕ್ಷ್ಮವನ್ನು ಅರಿತ ಸರ್ಕಾರ ಈ ಯೋಜನೆಯ ಸ್ವಲ್ಪ ಭಾಗವನ್ನು ನಿರ್ಗತಿಕರಿಗರ ಮನೆ ನಿರ್ಮಾಣಕ್ಕೆ ಮೀಸಲಿಟ್ಟಿದೆ ೧.೦೪ ಲಕ್ಷ ಮನೆಗಳ ನಿರ್ಮಾಣಕ್ಕೆ ಸಿದ್ಧವಾಗಿದೆ. ಮನೆಮನೆಯಿಂದ ಶೇಕಡಾ ೪೮% ತ್ಯಾಜ್ಯ ಸಂಗ್ರಹವಾಗುತ್ತಿದೆ.ಈ ತ್ಯಾಜ್ಯದಿಂದ ಸುಮಾರು ೮೮ ಮೆಗಾವ್ಯಾಟ್ ಶಕ್ತಿ ಉತ್ಪಾದನೆಯಾಗಿದೆ. ಅದಲ್ಲದೆ ಇತ್ತೀಚೆಗೆ ಮೋದಿ ತಮ್ಮ ಮನ್ ಕೀ ಬಾತ್ ಎಂಬ ಭಾಷಣದಲ್ಲಿ ಕೊಪ್ಪಳದ ೧೦ ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಶೌಚಾಲಯ ನಿರ್ಮಾಣಕ್ಕಾಗಿಉಪವಾಸ ಕೂತಿರುವುದರ ಬಗ್ಗೆ ಶ್ಲಾಘಿಸಿದ್ದಾರೆ.
ಕೇರಳದ ತ್ರಿಸುರ್ ಪುಜಾಕ್ಕಲ್ ಎಂಬಲ್ಲಿ ಕೈಗಾರಿಕೆಗಳಿಂದ ಬರುವ ತ್ಯಾಜ್ಯ ಅತ್ಯಧಿಕ. ಅದರಲ್ಲೂ ಘನತ್ಯಾಜ್ಯ ನಿರ್ವಹಣೆಯಂತೂ ಕಷ್ಟದ ಕೆಲಸ. ಅಂತದ್ದರಲ್ಲಿ ಆ ಊರಿನವರೇ ಇಂಥ ತ್ಯಾಜ್ಯಗಳನ್ನು ಸಂಗ್ರಹಿಸಿ ಅದರಿಂದ ಬಯೋಗ್ಯಾಸ್ ನಿರ್ಮಾಣದಲ್ಲಿಯಶಸ್ವಿಯಾಗಿದ್ದಾರೆ. ಹರ್ಯಾಣಾದ ಊಂಟಕರ್ ಎಂಬ ಗ್ರಾಮದಲ್ಲಿ “ಮೇರಾ ಘರ್ ಮೆ ಶೌಚಾಲಯ ಬನಾವೋ ಪಿಯಾಜಿ” ಎಂಬ ಹಾಡು ಕಟ್ಟಿ ದಿನವೂ ಸ್ವಚ್ಛತೆಯ ಬಗ್ಗೆ ಸ್ವಲ್ಪ ಹೊತ್ತು ಕೂತು ಹೆಂಗಳೆಯರು ಚರ್ಚಿಸುತ್ತಿದ್ದಾರೆ.ಮಧ್ಯ ಪ್ರದೇಶದ ಚೌರಾಸ್ಎಂಬ ಗ್ರಾಮ ನರ್ಮದಾ ನದಿಯ ದಡದ ಮೇಲಿದೆ. ಆ ಗ್ರಾಮದ ತ್ಯಾಜ್ಯವೆಲ್ಲ ನರ್ಮದೆಯ ಮಡಿಲನ್ನೇ ಸೇರುತ್ತಿತ್ತು. ಅದೇ ನೀರನ್ನು ಆ ಜನ ಕುಡಿಯಲು ಬಳಸುತ್ತಿದ್ದರು. ಆದರೆ ಸ್ವಚ್ಛ ಭಾರತ ಅಭಿಯಾನದಿಂದ ಜಾಗೃತರಾದ ಜನ “ಹಮಾರಿ ಮಾನರ್ಮದಾ” ಎಂಬ ನಾಮದಡಿ ನದಿ ಸ್ವಚ್ಛತೆಗೆ ಮುಂದಾಗಿದ್ದಲ್ಲದೇ ತಮ್ಮ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.ಅಂದರೆ ಈ ಯೋಜನೆಯ ಅರಿವು ಮೃಣ್ಮಯ ಜನರವರೆಗೂ ಮುಟ್ಟಿದ್ದು ದೇಶದಲ್ಲಿನಒಂದು ಸಕಾರಾತ್ಮಕ ಬೆಳವಣಿಗೆಯೇ ಸರಿ. ನಮಗೆ ಸರ್ಕಾರದ ದುಡ್ಡೆ ಬೇಡ ನಾವು ಸ್ವಂತ ಖರ್ಚಿನಲ್ಲಿ ಶೌಚಾಲಯ ಕಟ್ಟಿಸುತ್ತೇವೆ ಎನ್ನುವ ಜನ ಹಲವರಿದ್ದಾರೆ. ಹಲವಾರು ಸಮಾಜ ಸೇವಾ ಸಂಸ್ಥೆಗಳು ತಮ್ಮ ಖರ್ಚಿನಲ್ಲಿ ಶೌಚಾಲಯ ನಿರ್ಮಾಣಕ್ಕೆಮುಂದಾಗಿವೆ.
ಹೀಗೆ ಒಂದು ಯೋಜನೆಯಿಂದ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರೆಲ್ಲಾ ಒಗ್ಗೂಡಿ ಸ್ವಚ್ಛತೆಯೆಡೆಗೆ ನಡೆಯುತ್ತಿರುವಾಗ ದೊಡ್ಡ ದೊಡ್ಡ ರಾಷ್ಟ್ರೀಯ ವಾರ್ತಾವಾಹಿನಿಗಳು ಸರ್ಕಾರದ ಅಂಕಿಅಂಶಗಳನ್ನಷ್ಟೆ ಕೈಯಲ್ಲಿ ಹಿಡಿದು ಈ ಯೋಜನೆಯನ್ನು ತರ್ಕಕ್ಕೆಹಚ್ಚುತ್ತಿದ್ದಾರೆ. ನಮ್ಮ ಶತ್ರುವೂ ಕೂಡಾ ಒಳ್ಳೆಯದನ್ನು ಮಾಡಿದಾಗ ಅದನ್ನು ಒಪ್ಪಿಕೊಂಡು ಬೆನ್ನುತಟ್ಟುವುದನ್ನು ಬಿಟ್ಟು ಮೋದಿಯವರ ರಾಜಕೀಯ ವಿರೋಧಿಗಳು ಈ ಯೋಜನೆಯನ್ನು ಅವೈಜ್ಞಾನಿ, ಅಪ್ರಸ್ತುತ ಎಂದು ಜರೆಯುತ್ತಿದ್ದಾರೆ. ಎಷ್ಟೇ ಆಗಲಿಮಿನರಲ್ ವಾಟರ್ ಕುಡಿದು ಬದುಕಿನಲ್ಲಿ ಬಯಲುಕಡೆಗೆ ಶೌಚಕ್ಕೆ ಒಂದು ಸಲವೂ ಹೋಗದೇ ಇದ್ದವರಿಗೆ ಈ ಯೋಜನೆಯ ಬೆಲೆ ತಿಳಿಯುವುದಾದರೂ ಹೇಗೆ? ಗಾಂಧಿ ತೀರಿಹೋದ ಮೇಲೆ ಇಷ್ಟು ವರ್ಷಗಳವರೆಗೆ ಬರೀ ಬ್ಯಾನರ್’ಗಳಿಗೆ, ನೋಟುಗಳಿಗೆ,ಮೂರ್ತಿಗಳಿಗೆ ಸೀಮಿತವಾಗಿಸಿದ್ದ ಸರಕಾರಗಳ ನಡುವೆ ಅವರ ಜನ್ಮದಿನವನ್ನು ಇಂಥವೊಂದು ಯೋಜನೆಯ ಮೂಲಕ ಆಚರಿಸುವುದು “ಆರೋಗ್ಯ”ಕರವೂ ಹೌದು “ಅರ್ಥ”ಪೂರ್ಣವೂ ಹೌದು ಅಲ್ಲವೇ?
Facebook ಕಾಮೆಂಟ್ಸ್