X

ಜನಶ್ರೀ ಅನಂತ ಚಿನಿವಾರ್ ಅವರಿಗೆ ಶ್ರೀ ಸಾಮಾನ್ಯನ ಉತ್ತರ

ಸನ್ಮಾನ್ಯ ಶ್ರೀ ಶ್ರೀಯುತ ಅನಂತ್ ಚಿನಿವಾರ್ ಪ್ರಕಾಶ್ ರೈ ಅವರಿಗೆ ತಮ್ಮ ಸಂಪಾದಕೀಯದಲ್ಲಿ ಕೇಳೋ ಪ್ರಶ್ನೆಗಳಿಗೆ ಶ್ರೀ ಸಾಮಾನ್ಯ “(ಜನ ಶ್ರೀ ) ಅಲ್ಲಾ” ಕನ್ನಡಿಗನೊಬ್ಬನ ಉತ್ತರ

೧.  ಶ್ರೀ ಶ್ರೀಯುತ ಅನಂತ್ ಚಿನಿವಾರ್ ಸಾರ್ ಹೇಳ್ತಾರೆ  ಪ್ರಕಾಶ್ ರೈ ತಮ್ಮ ವೃತ್ತಿ ಬದುಕಿನ ಸಫಲತೆ ತಮಿಳುನಾಡಿನಲ್ಲಿ ಕಂಡುಕೊಂಡಿದ್ದಾರೆ . ಅದಿಕ್ಕೆ ಅವರು ತಮಿಳು ಹಿತಾಸಕ್ತಿ ಪರ ವಹಿಸಿ ,ಮಾತನಾಡುವ ಅವಶ್ಯಕತೆ ಇದೆ, ಈ ಅನಿವಾರ್ಯತೆ ಒಬ್ಬ ನಟನಿಗೆ ಇರೋದು ನಿಮಗೂ ಸಹಜವಾಗಿ ಅರ್ಥ ಆಗುತ್ತೆ.. ಅಂಥಾ ಇದೆ.

ಸಾರ್ ನಿಮ್ಮ ಊಹೆ , ಪ್ರಕಾಶ್ ರೈ  ಎಲ್ಲಾದ್ರೂ ಕರ್ನಾಟಕದ್ದು ತಪ್ಪು.. ತಮಿಳುನಾಡೇ ಸರಿ ಅವರೇ ಕಾವೇರಿಯ ನಿಜವಾದ ವಾರಸುದಾರರು ಅಂತ ಹೇಳಿದ್ದಾರಾ? ಅದೇ ನೀವು ಪದೇ ಪದೇ ಬಿತ್ತರಿಸುತ್ತಾ ಇರೋ ವಿಡಿಯೋ ದಲ್ಲಿ ಪ್ರಕಾಶ್ ರೈ ನಿಮ್ಮ ನಿರೂಪಕಿಯ ಪ್ರಶ್ನೆಗೆ ಸೌಜನ್ಯದಿಂದ ಹೇಳಿದರಲ್ಲಾ ಸಾರ್.. “ನೋಡಿ ಮೇಡಂ.. ,ಇಂದು ನಾನು ನೀವು ಬಗೆ ಹರಿಸೋ ಸಾಮಾನ್ಯ ಸಮಸ್ಯೆಯಲ್ಲ.., ಅದರ ಹಂದರ ಬೇರೇನೇ ಇದೆ.., ಏನು ಅಂಥಾ ನಿಮಗೂ ಗೊತ್ತಿದೆ. ಜನ ಈಗಾಗಲೇ ನೊಂದಿದ್ದಾರೆ. ಏನೋನೋ ಹೇಳಿಕೆ ಕೊಟ್ಟು ಉರಿಯೋ ಬೆಂಕಿಗೆ ತುಪ್ಪ ಹುಯ್ಯೋ ಬೇಜವಾಬ್ದಾರಿ ಸರಿಯಲ್ಲ” ಅಂತ ಸೌಜನ್ಯ ಪೂರಕವಾಗಿಯೇ ಹೇಳಿದ್ದು ತಪ್ಪಾ..?

ನನ್ನಂತಾ ಯಕಶ್ಚಿತ್ ಸಾಮಾನ್ಯನಿಗೆ ಸರಿ ಅನಿಸಿದ್ದು ಯಾಕ್ಸಾಮಿ ಅದು ನಿಮಗೆ  ಅರ್ಥ ಅಗ್ತಾ ಇಲ್ಲಾ ..

೨. ಈ ನೆಲದ ಬಗ್ಗೆ ನಿಮ್ಮ ಅಭಿಮಾನ ಯಾವಾಗ ತೋರ್ಸೋದು, ಅದಿಕ್ಕೂ ಸಮಯ ಮತ್ತು ಸಂದರ್ಭ ಬೇಕಾ ನಿಮಗೆ?

ಪ್ರಕಾಶ್ ರೈಗೆ ನೀವೂ ನಿಮ್ಮ ಆಂಕರ್ ಕೇಳಿರೋದು ನಿಜವಾಗಿಯೂ  ಅಭಿಮಾನದ ಪ್ರಶ್ನೆನಾ ಅಂತ ಒಂದ್ಸಾರಿ ಎದೆ ಮುಟ್ಟ್ಕೊಂಡು ಹೇಳಿಬಿಡಿ ಸಾರ್….

ಸರಿ ಸಾರ್ ನಿಮ್ಮ ವಾದದ ಹಾದಿಗೆ  ಬರೋಣ ಬಿಡಿ ಅಭಿಮಾನದ ಪ್ರದರ್ಶನಕ್ಕೆ ಸಮಯ ಸಂದರ್ಭದ ಅವಶ್ಯಕತೆ ಖಂಡಿತಾ ಇಲ್ಲ.. ಕೈಗೆ ಮೈಕು ಸಿಕ್ಕಾಗ.. ನಾವು ಅಭಿಮಾನ ಪಡೋ ವ್ಯಕ್ತಿ ಎದುರು ಸಿಕ್ಕಾಗ ಅವರ ಅಭಿಪ್ರಾಯ.. , ಅನುಭವ ಕೇಳೋದು ಸರಿನೇ  ಅಂತಾ ಆದ್ರೆ..

ಶ್ರೀ. ಗಾಲಿ ಜನಾರ್ಧನ ರೆಡ್ಡಿಯವರ ಮಗಳ ಮದುವೆ  ಇದ್ಯಂತಲ್ಲ ಸಾರ್.. ನಿಮಗೆ ಆಮಂತ್ರಣ ಬಂದಿರಲೇ ಬೇಕಲ್ಲಾ ..

ಹೋಗಿ  ಸಾಹೇಬ್ರಿಗೆ ಎದುರು ಸಿಕ್ಕಾಗ ಕೇಳಿ ನೋಡೋಣಾ… ಈ ನಾಡಿನ ನೆಲ ಜಲದ, ಕಾವೇರಿ ಸಮಸ್ಯೆಯ ಕುರಿತು “ಬಗೆ ಬಗೆಯಲಿ ನೆಲ ಅಗೆದ” ನಿಮ್ಮ ಚಾನೆಲ್ ಸಂಸ್ಥಾಪಕರ ನಿಲುವೇನು ಅಂಥಾ ಕೇಳಿ ಅವರ ಪ್ರತಿಕ್ರಿಯೆಯ (ಲೈವ್ ಬೇಡಾ,  ರೆಕಾರ್ಡಿಂಗ್ ಸಾಕು) ಒಂದ್ಸಾರಿ ನಿಮ್ಮ ಚಾನೆಲ್ ನಲ್ಲಿ ಹಾಕಿ ಸಾರ್ .. ನೋಡಿ ಕಣ್ಣು ತುಂಬಿಸಿಕೋತೀವಿ ಪ್ಲೀಸ್ …

ಸಂದರ್ಭ, ಅಭಿಮಾನ ಮತ್ತು ನಿಮ್ಮ ಜವಾಬ್ದಾರಿ ಎಲ್ಲಾ ಒಟ್ಟೊಟ್ಟಿಗೆ ಪರೀಕ್ಷೆ ಯಾಗೆ ಬಿಡಲಿ ನೋಡೋಣಾ..

ಇನ್ನು ನಿಮ್ಮ ಜವಾಬ್ದಾರಿ ಪ್ರಶ್ನೆ ಕರೆಕ್ಟ್.. ನಿಮಗೂ ಚಾನೆಲ್ ಜವಾಬ್ದಾರಿ ಇದೆ.  ಟಿ.ಆರ್. ಪಿ ನೇ ಪ್ರಾಮುಖ್ಯ  ಅಂಥಾ ನನ್ನಂಥಾ ನಿರಭಿಮಾನಿಗೂ ಅರ್ಥ ಆಗೊತ್ತೆ ಸಾರ್

೩. ಮತ್ತೆ ಮತ್ತೆ ನೀವು ಹೇಳ್ತಾ ಇರೋದು “ಮಾತಾಡಿ , ಇನ್ನಾದ್ರೂ ಮಾತಾಡಿ, ರಾಜ್ಯದಲ್ಲಿ ಬೆಂಕಿ ಹತ್ತಿಕೊಂಡು ಉರಿತಾ ಇದೆ.. ಈಗಲ್ಲದಿದ್ರೆ ಇನ್ಯಾವಾಗ ನೀವು ಮಾತಾಡೋದು?”

ಸಾರ್ .. ಬಿಡಿ ಸಾರ್ ಪ್ರಕಾಶ್ ರೈ  ನಿರಭಿಮಾನಿ. ಒಂದ್ನಿಮಿಷ ಅವ್ರನ್ನ ಮರೆತೇ ಬಿಡಿ . ನೀವು ಬೆಂಕಿ ಹತ್ತೋ ಮುಂಚಿಂದ… ಇವತ್ತಿನ ತನಕ ಮಾತಾಡ್ತಾಇದ್ರಲ್ಲಾ .. ಹಲವರನ್ನು ಕರೆ ಕರೆಸಿ ಮಾತಾಡ್ಸಿದ್ರಲ್ಲ.. ಏನಾಯಿತು ಸಾರ್ ಅದ್ರಿಂದ.. ನೀವೇನಾದರೂ ಎರಡು ರಾಜ್ಯದ ಜನರ  ಮನಸ್ಸನ್ನು ಬೆಸೆದ್ರಾ .. ಅಥವಾ ಬೆಂಗಳೂರಿನ ತಮಿಳಿಗರ ಮೇಲೆ ನಿಮ್ಮ ಅಭಿಮಾನದ ಎರಡು ಕಲ್ಲು ಜಾಸ್ತಿ ಬಿಳೋ ಹಾಂಗೆ ನೋಡ್ಕೊಂಡಿರಲ್ಲಾ.. ಅದೇನೇ ಸಾರ್ ನಿಮ್ಮ ನೆಲ ಜಲ ಅಭಿಮಾನದ ಪರಿಹಾರ?

೪. ಇನ್ನೊಮ್ಮೆ ಹೇಳ್ತೀರಾ.. ಪ್ರಕಾಶ್ ರೈ ಹೇಳ್ಬೇಕಿತ್ತು ಮೇಡಂ, ಕಾವೇರಿ ವಿಷಯ ಇವತ್ತು ಬೇಡ ಪ್ಲೀಸ್, ನಾವಿವತ್ತು ಬರಿ ಮೂವೀ ವಿಷಯ ಮಾತ್ರ ಮಾತಾಡೋಣ.. ನಾಳೆನೋ ಇನ್ನೋಮ್ಮೆನೋ ಕಾವೇರಿ ವಿಷಯ ಸೆಪೆರೇಟ್ ಆಗಿ ಮಾತಾಡೋಣ ಅಂಥಾ ..ಅಲ್ಲಿಗೆ ವಿವಾದ ಹುಟ್ಟುತಾನೆ ಇರಲಿಲ್ಲ ಅಂತಾ ಅಲ್ಲವಾ ಸಾರ್ ?

ಚೆನ್ನಾಗಿ ಅಂದ್ರಿ.. ಎಲ್ಲಾದ್ರೂ ರೈ  ಹಂಗೇ ಅಂದಿದ್ರೆ ನೀವು ನಿಮ್ಮ ಚಾನೆಲ್ನವರು ಸುಮ್ಮನೆ ಇರ್ತಿದ್ದಾರಾ..? ಒಮ್ಮೆ ನಿಮ್ಮ ಎದೆ ಮುಟ್ಟ್ಕೊಂಡ್  ಸತ್ಯ ಹೇಳಿ ಸಾರ್ ..

ಎಲ್ಲಾದ್ರೂ ರೈ  ಹಂಗ್ ಅಂದಿದ್ರೆ.. ನೋಡ್ರಪ್ಪಾ ನೋಡ್ರಿ.. ಈ ರೈ ನಿರಭಿಮಾನಿ. ಕನ್ನಡಿಗ ವ್ಯಾಪಾರೀ .. ಸಣ್ಣ ಧ್ವನಿಯಲ್ಲಿ ನಮ್ಮ ನಿರೂಪಕಿ ಹತ್ತಿರ ಈ ವಿಷಯ ಈಗ ಬೇಡಾ ಅಂತಾ ಅಂಗಲಾಚಿ ತನ್ನ ಪಿಕ್ಚರ್ ಪ್ರೊಮೋಷನ್ ಮುಗ್ಸಿ ಓಡ್ ಹೋದ ನಾಲಾಯಕ್ ಅಂತಿರಲಿಲ್ಲವಾ? ಅದನ್ನೇ ಇದು “ಜನಶ್ರೀ ಎಕ್ಸ್ಕ್ಲೂಸಿವ್ ವಿಡಿಯೋ” ಅಂತಾ ಪದೇ ಪದೇ ಹಾಕ್ತಾ ಇದ್ರಿ ಅಷ್ಟೇ

ನಂಗನ್ನಿಸೋದು  ಪ್ರಕಾಶ್ ರೈ ತನಗನ್ನಿಸೋದು ನೇರವಾಗಿ ಹೇಳಿ ನಿಮ್ಮ ನಿಜ ಬಣ್ಣ ಮತ್ತು ನಿಮ್ಮ ನೆಲ ಜಲದ ಅಭಿಮಾನದ ಹಿಂದಿನ ಝಳಕ್ ಸಮಸ್ತ ವೀಕ್ಷಕರೆದುರು (ನಾನು ನಿಮ್ಮಂತೆ.. ಸಮಸ್ತ ಕನ್ನಡಿಗರು, ಕರ್ನಾಟಕದ ಎಲ್ಲ ಜನರೂ ಅಂತಾ ಬಳಸೋಲ್ಲಾ.. ಸಾರ್ ಯಾಕಂದ್ರೆ ನನಗೆ ನಾನು ನಿಮ್ಮಂತೆ ಅವರೆಲ್ಲರ ಪ್ರತಿನಿಧಿ, ವಾರೀಸುದಾರ ಅನಿಸುತ್ತಾ ಇಲ್ಲಾ) ಬಿಚ್ಚಿಟ್ಟಿದ್ದಾರೆ,  ಪ್ರಕಾಶ್ ರೈ ಗಂಡೆದೆ ಮೆಚ್ಚಲೇ ಬೇಕು ಅಲ್ಲವಾ ಸಾರ್

೫. ಇನ್ನೊಂದು ಸನ್ನಿವೇಶದಲ್ಲಿ ಹೇಳ್ತಿರಿ .. ನಿಮಗೆ ಕನ್ನಡ ಸಿನಿಮಾ ಬೇಕು, ಇಲ್ಲಿನ ಮಾರ್ಕೆಟ್ ಬೇಕು.. ಸಿನಿಮಾ ಮಾಡ್ದಾಗ ಮಾತ್ರ ಪುರುಸೊತ್ತು ಮಾಡ್ಕೊಂಡು ಬರ್ತೀರಾ.. ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ, ಪ್ರತಿ  ಚಾನೆಲ್ನಲ್ಲಿ ಕೂತು ಗಂಟೆಗಟ್ಟಲೆ ಪ್ರಮೋಷನ್ ಅಂತ ಮಾತು ಆಡ್ತೀರಾ, ಆದ್ರೆ  ಕಾವೇರಿ ಕುರಿತು ನಾವು ಪ್ರಶ್ನೆ ಕೇಳಿದರೆ ನಿಮಗೆ ಸಿಟ್ಟು ಬರುತ್ತೆ ಅಲ್ಲವಾ .. ನಮ್ಮ ಜನಕ್ಕೂ ಸಿಟ್ಟು ಬರೊಲ್ಲವೇನು .. “ಬರಬೇಕು ಕೂಡಾ” ಅಂಥಾ ಒತ್ತಿ ಒತ್ತಿ  ಹೇಳ್ತಾ ಇದಿರಲ್ಲಾ ಸಾರ್ …

ಕಂಗ್ರಾಜುಲೇಷನ್ಸ್ ಸಾರ್;  ನಿಮ್ಮ ವ್ಯಾಪಾರದ ಒಳ ಮರ್ಮ ನೀವೇ ನಿಮ್ಮ ಸಿಟ್ಟಿನಲ್ಲಿ ಬಿಚ್ಚಿಟ್ಟಿದ್ದಕ್ಕೆ .. ಇದೆ ಸಾರ್ ನಿಮ್ಮಂಥ ದೃಶ್ಯ ಮಾಧ್ಯಮದವರ ಟಿ. ಆರ್. ಪಿ ಮರ್ಮ…

“ನಿಮ್ಮ ಬಗ್ಗೆ ಅವರು ಹಿಂಗಂದ್ರು  ನಿಮಗೇನ್ ಅನಿಸುತ್ತೆ..? , ಯಾಕೆ ಹಿಂಗಂದ್ರಲ್ಲಾ ಸಾರ್ ಏನೂ  ಅನಿಸಲ್ವಾ.. ? ಅಯ್ಯೋ.. ಪ್ರತಿಕ್ರಿಯೆ ಕೊಡೊಲ್ಲವ್ವಾ.. ಅಂತಾ ಪದೇ ಪದೇ ಕೇಳಿ …

ಯಾಕೆ ಅವರು ಹಂಗಂದ್ರು ? ಯಾವ ಪ್ರಶ್ನೆಗೆ ಕೊಟ್ಟ ಉತ್ತರ ಅದಾಗಿತ್ತು ಅನ್ನುವುದನ್ನೂ  ಮರೆಮಾಚಿ , ಸಿಟ್ಟು ಬಾರದ ಪುಟ್ಟನಿಗೂ ಸಿಟ್ಟು ಬರಿಸಿ ಮುಂದಿನ ಕೆಲದಿನಗಳ ಬ್ರೇಕಿಂಗ್ ನ್ಯೂಸ್ ಬೆಳೆ ತೆಗೆದು ನಿರಂತರ ಸುದ್ದಿಗೆ ಹಪ ಹಪಿಸುವ ನಿಮ್ಮ ನೆಲ ಜಲದ ಅಭಿಮಾನ ನೀವೇ ಪ್ರಸ್ತುತ ಪಡಿಸಿದ್ದೀರಿ..

ನಿಮ್ಮ ನಿರೂಪಕಿ ತೋರಿದ ಜವಾಬ್ದಾರಿಯ ಸೌಜನ್ಯದ ಪ್ರಶ್ನೆಯ ಉದ್ದೇಶ ಇದೆ ಅಲ್ಲವಾ? ಇದನ್ನೇ ಹೇಳಿದ್ದು ಸಾರ್ ಪ್ರಕಾಶ್ ರೈ .. ಏನಿದರ ಉದ್ದೇಶ? ಇದು ಈಗ ಬೇಕಿತ್ತಾ ಅಂಥಾ ಕೇಳಿದ್ದು

೬. ನೀವು ಫಿಲಂ ಮಾಡಿದಾಗೆಲ್ಲಾ ಪ್ರಚಾರಕ್ಕೆ ಬರ್ತೀರಿ.. ನೀವೂ (ಪ್ರಕಾಶ್ ರೈ)ಸೇರಿದಂತೆ.. ನಾರಾಯಣ ಮೂರ್ತಿ, ಅಜಿಮ್ ಪ್ರೇಮ್ ಜಿ ಅವರಾಗಲಿ ಸೊಲ್ಲೆ  ಎತ್ತಿಲ್ಲಾ, ಯಾಕಂದ್ರೆ ಇವರಿಗೆಲ್ಲಾ ಇರೋದು ಬರೀ ವ್ಯಾಪಾರಿ ಆಸಕ್ತಿ ….

ನೀರು ಯಾರಿಗೆ ಹರಿದರೂ ಅವರಿಗೇನು .. ಬೇಕಾದಷ್ಟು ಕಾಸು ಇದೆ.., ಹಣ ಕೊಟ್ಟು ಕೊಂಡ್ಕೋತಾರೆ… ನಿಮ್ಮಂತಾ ವ್ಯಾಪಾರಿಗಳಿಗೂ ನಾವು ವೇದಿಕೆ ಒದಗಿಸುತ್ತೀವಿ.. ಅಂದ್ರಲ್ಲಾ ..

ಸಾರ್ ನೀವೇ ಒಪ್ಪಿಕೊಂಡಿರಲ್ಲಾ ನಿಮ್ಮ ಅಭಿಮಾನನೂ ವ್ಯಾಪಾರಿ ಆಸಕ್ತಿ.. ಥಾಂಕ್ಸ್ ಸಾರ್.. ನೀವಲ್ಲ ಇದು ನಿಮ್ಮೊಳಗಿನ ಆತ್ಮ ಸಾಕ್ಷಿಯ ನುಡಿ ಇದು….

ನಂತರ ಹೇಳ್ತಿರಿ.. ಇವತ್ತಿನ ಸುಪ್ರೀಂ ಕೋರ್ಟ್ ತೀರ್ಪಿನ ಆಘಾತ ನಿಮಗೆ ಮುಂಚೆ ಗೊತ್ತಿತ್ತು ಅಂಥಾ.. ಪಾಪ ರಾಜ್ಯ ಸರ್ಕಾರ ನಿಮ್ಮ್ಹತ್ರ ಬರಬೇಕಿತ್ತು ಪಾಪ.. ಎಲ್ಲೊಲ್ಲೂ ಓಡಾಡ್ಕೊಂಡಿದ್ರು …

ನಿಮ್ಮ ಮೇಲಿನ ಹೇಳಿಕೆನೆ ತೋರ್ಸಿಕೊಡುತ್ತೆ .. ನಿಮ್ಮ ಅಭಿಮಾನ… ಈ ಬೆಂಕಿ ಆರಬಾರ್ದು .. ಪ್ರಕಾಶ್ ರೈ  ನಂತರ

ಪ್ರೇಂಜಿ .. ನಂತರ ನಾರಾಯಣ್ ಮೂರ್ತಿ ನಂತ್ರ  ಇನ್ನ್ಯಾರ ಹತ್ರಾನೂ ತಲುಪಿಸಿ ಬೆಂಕಿ ಆರದಂತೆ ನೋಡಿಕೊಳ್ಳುದೇ  ನಿಮ್ಮ ಜವಾಬ್ದಾರಿ, … ವ್ಯಾಪಾರ,…

ಇದೆ ನಿಮ್ಮ ನೆಲ ಜಲ ಅಭಿಮಾನದ ಝಳ ಅಂಥಾ ನೀವೇ ನಿರೂಪಿಸಿ  ಕೊಟ್ಟಿರಿ  ಅಷ್ಟೇ ..

೭.ಇವರೆಲ್ಲಾ ವ್ಯಾಪಾರಿಗಳೇ ಸಾರ್ .. ಇಲ್ಲಿ ಎಲ್ಲಾ ವ್ಯಾಪಾರನೇ … ಈ ನಡುವೆ ಮಠ ಮಾನ್ಯಗಳೇ ವ್ಯಾಪಾರಕ್ಕಿಳಿದಾಗ .. ವ್ಯಾಪಾರಿಯಿಂದ ವ್ಯಾಪಾರ ಅಲ್ಲದೇ ಬೇರೆ ಏನು ನಿರೀಕ್ಷಿಸುತ್ತೀರಿ.. ಆದ್ರೆ ಒಂದು ನೆನಪಿಡಿ.. ಇವರೆಲ್ಲಾ(ಪ್ರಕಾಶ್ ರೈ ಅನ್ನೂ ಸೇರಿಸಿ) .. ನೀವು ಹೆಸರಿಸಿದ ಎಲ್ಲರೂ, ಮತ್ತು ಹತ್ತು ಹಲವು ನಟರು ತಮ್ಮ ಸುತ್ತಲಿನ ಸಮಾಜಕ್ಕೆ..ಸಹಾಯದ ಆಸರೆ ಬಯಸಿದ ಹತ್ತು ಹಲವು ಜನರಿಗೆ, ಕುಟುಂಬಗಳಿಗೆ ನೆರೆವು ನೀಡಿದ್ದು ಮರೆಯಬೇಡಿ.. ನೆರವು ನೀಡಿದ್ದು ಪ್ರಚಾರ ಮಾಡಲೇ ಬೇಕೆಂಬ ಹಂಬಲ ಅವರಿಗಿಲ್ಲದಿರಬಹುದು ಬಿಡಿ ಸಾರ್ ಅವರಂತವರನ್ನೂ ಅವರ ಅಭಿಮಾನದ ಪ್ರಚಾರಕ್ಕೆ ತೊಡಗಿಕೊಳ್ಳಲು ಪ್ರೇರೇಪಿಸ ಬೇಡಿ ಪ್ಲೀಸ್..

೮. ಹಿಂದೆ ಸಿಂಗಂ, ಪಂಗಂ ಅಲ್ಲಿ ಕನ್ನಡದವರಿಗೆ ಅವಮಾನ ಮಾಡಿದ ಡೈಲಾಗ್ ಇದ್ದಾಗ… ಚಿನಿವಾರಾರು ಹೇಳ್ತಾರೆ ನಮ್ಮ ಹೋರಾಟಕ್ಕೆ ಬೆಲೆ ಕೊಟ್ಟು ಡೈಲಾಗ್ ಕಟ್ ಮಾಡಿದ್ರು.. ಅದ್ರಲ್ಲಿ ಪ್ರಕಾಶ್ ರೈ,  ಅವರದ್ದು ಕೊಡುಗೆ ಏನು ಇಲ್ಲಾ.. ಅಲ್ಲವೇ?

ಚಿನಿವಾರ್ ಸಾರ್ .. ಆ ಸಿನಿಮಾದ ಹೆಸರು ಸಿಂಗಂ.  ಪಂಗಂ  ಅಲ್ಲಾ. ಕನ್ನಡದವರಿಗೆ ಫಿಲಂ ಅಲ್ಲಿ ರೈ ಬೈದ್ರು ಅಂಥಾ ನೀವೂ ಹೋರಾಟ ಮಾಡಿದ್ದು ಗೊತ್ತಿರಲಿಲ್ಲ.. ಸಾರೀ ಸಾರ್ ಗೊತ್ತಾಯಿತು ನೀವೂ ಆಗಾಗ ಓರಾಟ ಮಾಡ್ತೀರಿ ಅಂಥಾ.

ರೈ ಹೇಳ್ದರಲ್ಲ ಸಾರ್  ಅವರೊಬ್ಬ ಬಣ್ಣ ಹಚ್ಚೊ ಕಲಾವಿದ, ಫಿಲಂ ಒಂದರಲ್ಲಿ ಆ ಸಂಧರ್ಭಕ್ಕೆ ಪಾತ್ರಕ್ಕೆ ಅವಶ್ಯವೆನಿಸಿದ ಮಾತು ಆ ಪಾತ್ರದಲ್ಲಿ ಅವರು ಅಂಥಾ ಸಂಭಾಷಣೆ ಮಾಡಿದರೆ ನನ್ನಂಥ ಸಾಮಾನ್ಯನಿಗೆ ತಪ್ಪು ಎನಿಸೋಲ್ಲ ಸಾರ್ (ಅದು ಅವರು ಬರೆದು ತುರುಕಿಸಿದ ಸಂಭಾಷಣೆ ಅಲ್ಲ ಅನಿಸುತ್ತೆ!)..  ಅವರೇನು ಔಟ್ ಆಫ್ ಕಾಂಟೆಕ್ಸ್ಟ್ ಆಗಿ ಕನ್ನಡದವರಿಗೆ ಬೈದು ಸ್ಟಾರ್ ಆಗ್ಬೇಕು  ಅಂಥಾ ಬೈದಿದ್ದಲ್ಲಾ ಸಾರ್. ..

ನಿಮ್ಮಂತ ಹತ್ತು ಹಲವು ಖ್ಯಾತ ನಿರೂಪಕರು ಅನೇಕ ಸಂದರ್ಭಗಳಲ್ಲಿ ಈ ಕನ್ನಡಿಗರೇ ಹೀಗೆ .. ಒಟ್ಟಾಗಿ ನಿಲೋಲ್ಲಾ.ಉದ್ದಾರ ಆಗೊಲ್ಲಾ ಎಂಬರ್ಥದಲ್ಲಿ ಹತ್ತು ಹಲವು ಸಂಧರ್ಭಗಳಲ್ಲಿ ನೊಂದು ನುಡಿದಿದ್ದನ್ನು.. ಕನ್ನಡಿಗರು ನೀವು ಕನ್ನಡಿಗರ ಉದ್ದಾರ ಬಯಸದ ನಿರೂಪಕ ಅಂಥಾ ಗೊಂದಲ ಗೊಂಡಿಲ್ಲಾ ಅಲ್ಲವಾ? ..

ಪಬ್ಲಿಕ್ ಟಿ.ವಿ ರಂಗಣ್ಣ ಅಂತೂ, ಪಾಪಿಗಳು ಇವು ಇನ್ನು ಉದ್ದಾರ ಆಗೊಲ್ಲಾ ಬಿಡಿ .. ಆಲ್ ರೈಟ್ ಅಂಥಾ ಬೆಳ್ಳಂಬೆಳ್ಳಿಗ್ಗೆ ಹೇಳ್ತಾ ಇರ್ತಾರೆ.. ಅವರನ್ನು ಕನ್ನಡಿಗರ ವಿರೋಧಿ ಅಂಥಾ ಯಾರು ಹೇಳಿಲ್ಲಾ ಸಾರ್.. ಅದನ್ನೇ ಸಂಭಾಷಣೆಯೊಂದಕ್ಕೆ ಸಂದರ್ಭ ಒದಗಿಸುವ ಅರ್ಥ .. ತಪ್ಪಾ ಸಾರ್?

೯.  ಪ್ರಕಾಶ್ ರೈ ಅವರೇ ನೀವ್ಯಾಕೆ ಕನ್ನಡದಲ್ಲಿ ಫಿಲಂ ಮಾಡ್ತೀರಿ?

ಬಿಡಿ ಸಾರ್ ಅವರೇನೋ ಕೆಲ್ಸ ಇಲ್ಲ ಮಾಡ್ತಾರೆ .. ನನ್ನಂಥವನು ನೋಡ್ತಾನೆ, ಖುಷಿ ಪಡ್ತಾನೆ ಬಿಡಿ ಸಾರ್, ನೀವು ನಿಮ್ಮ ಟೀಮ್ ನವರು ಪ್ಲೀಸ್ ನೋಡಬೇಡಿ …ನೋಡಲೇ ಬೇಡಿ, ಇವಯ್ಯ ರೈ  ನಿರಭಿಮಾನಿ, ದಯವಿಟ್ಟು ಅವರ ಹೊಸ ಚಿತ್ರ ನಿಜ ಕನ್ನಡಿಗರು ನೋಡಬೇಡಿ ಅಂಥಾ ಅವರ ಪ್ರತಿ ಚಿತ್ರ ರೀಲೀಸ್ಗೂ ಬಿಡದೆ ನಿಮ್ಮದೇ ಚಾನೆಲ್ನಲ್ಲಿ ಜನ ಜಾಗ್ರತಿ ಮೂಡಿಸಿ  ಆ ಮೂಲಕ ಆದ್ರೂ ನಿಮ್ಮ ನೆಲ, ಜಲದ ಅಭಿಮಾನ ತೋರಿಸ್ಕೊಳ್ಳಿ ಸಾರ್ .. ಪ್ಲೀಸ್ ..

ಲಾಸ್ಟಲ್ಲಿ ನೀವೇ ಹೇಳ್ತಿರಿ.. ಯಾರಿಗಾದ್ರೂ ಹೇಳಿ ದಯವಿಟ್ಟು ನಮಗೆ ನೀರು ಕೊಡ್ಸಿ ಅದೇ ಪರಿಹಾರ ಅಂತೀರಲ್ಲಾ… ಸಾರ್,  ನೀವೇ ಹೇಳುವಂತೆ ಪರಿಸ್ಥಿತಿ ಹೀಗಿರುವಾಗ ಪ್ರಕಾಶ್ ರೈ ಆಗ್ಲಿ ಯಾರೇ ಆಗ್ಲಿ ಮಾತಾಡಿ ಏನೂ ಪ್ರಯೋಜನ ಇಲ್ಲಾ ಅಂತಾ ಒಪ್ಪಕೊಂಡಿರಲ್ಲಾ ಸಾರ್ , ಸಾಕು ಅದೇ ನೀವು ಹೇಳಿದ ಬೌದ್ಧಿಕ ಹೋಲೊನೆಸ್ಸ್ (intellectual hollowness)

ಇಂತೀ ನಿಮ್ಮ ಪ್ರೀತಿಯ,

ಜನ  ಶ್ರೀ ಸಾಮಾನ್ಯ

ಜಿ. ಪ್ರತಾಪ್ ಕೊಡಂಚ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post