X

ಮರುಹುಟ್ಟು ಪಡೆದ ಚಿತ್ರರಂಗ, ಅಷ್ಟಕ್ಕೆ ನಿಲ್ಲದಿರಲಿ

`ತಿಥಿ’ ಸಿನಿಮಾದಲ್ಲಿ ಎಲ್ಲರ ಮನಸೂರೆಗೊಳ್ಳುವ ಗಡ್ಡಪ್ಪನು, ಆತನ ಮಗ ತಮ್ಮಣ್ಣ `ಬಾ ಮನೆಗೋಗದ’ ಅಂದರೆ `ಇನ್ನು ಟೈಮ್ ಅದೆ’ ಎನ್ನುತ್ತಾನೆ. ಈ ಮಾತನ್ನು ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನಂಬಿಕೊಂಡು ಅಂತಹ ಚಿತ್ರಗಳನ್ನೇ ನಿರ್ಮಿಸುತ್ತಿದ್ದ ಮಂದಿಗೆ ಅನ್ವಯಿಸಿ ನೋಡಬಹುದು. ನಮಗೂ ಒಂದು ಟೈಮ್ ಬರುತ್ತೆ ಎಂದು ಎಂದು ನಂಬಿದ್ದವರು ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಇಂತಹ ಸಿನಿಮಾಗಳನ್ನು ಮಾಡುವುದು ಜೇಬಿಗೆ ಕತ್ತರಿ ಹಾಕಿಕೊಳ್ಳುವ ಕೆಲಸ ಎಂದುಕೊಂಡಿದ್ದ ಕಾಲ ಹೋಗಿ ಒಳ್ಳೆಯ ಕಾಲ ಬಂದಿದೆ. ರಾಜಕೀಯ ವಲಯದಲ್ಲಿ ಒಳ್ಳೆಯ ದಿನಗಳು ಬಂದಿದೆಯೋ, ಇಲ್ಲವೋ ಕನ್ನಡ ಚಿತ್ರರಂಗಕ್ಕೀಗ ಮಾತ್ರ ಒಳ್ಳೆಯ ಕಾಲ. ಸಾಲು ಸಾಲು ಹೊಸ ಮಾದರಿಯ ಸಿನಿಮಾಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಹೊಸತನದ ನಿರೂಪಣೆ, ಕಥೆ, ಚಿತ್ರಕತೆ, ಸಂಕಲನ, ಸಂಭಾಷಣೆ, ತಾಂತ್ರಕತೆ, ನಿರ್ದೇಶನದಿಂದ ಚಿತ್ರಮಂದಿರದ ಕಡೆಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆದಿವೆ.

ಕನ್ನಡದಲ್ಲಿ ಈ ಬೆಳವಣಿಗೆ ಕಳೆದೆರಡು ವರ್ಷಗಳ ಹಿಂದೆಯೇ ಕಾಣಿಸಿಕೊಂಡರೂ, ಅಬ್ಬರದ ಸಿನಿಮಾಗಳ ನಡುವೆ ನೇಪಥ್ಯಕ್ಕೆ ಸರಿದವು. ನಿರೀಕ್ಷಿತ ಯಶಸ್ಸು ದೊರಕಲಿಲ್ಲ. ಲೂಸಿಯಾ, ಜಟ್ಟ, ಉಳಿದವರು ಕಂಡಂತೆ ಸಿನಿಮಾಗಳು ಹೊಸ ಪರಿಭಾಷೆಯನ್ನು ಹುಟ್ಟು ಹಾಕುವಲ್ಲಿ, ಸದಭಿರುಚಿಯ ಸಿನಿಮಾಗಳು ಮರುಹುಟ್ಟು ಪಡೆಯುವಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟರೂ, ತೆರೆಮರೆಯಲ್ಲಿ ಹೊಸ ಪರಿಭಾಷೆಯನ್ನು ಕಟ್ಟುವ ಕೆಲಸ ನಡೆಯುತ್ತಿತ್ತು. ಈಗ, `ನಾನು ಅವನಲ್ಲ ಅವಳು’, `ರಂಗಿತರಂಗ’, `ಫಸ್ಟ್ ರ್ಯಾಂಕ್ ರಾಜು’, `ಲಾಸ್ಟ್ ಬಸ್’, `ಕಿರಗೂರಿನ ಗಯ್ಯಾಳಿಗಳು’, `ಕೆಂಡಸಂಪಿಗೆ’ `ತಿಥಿ’, `ಕರ್ವ’, `ಯೂ ಟರ್ನ್’, `ಗೋಧಿಬಣ್ಣ ಸಾಧಾರಣ ಮೈಕಟ್ಟು’, `ಇಷ್ಟಕಾಮ್ಯ’ದವರೆಗೂ ಯಶಸ್ವಿ ಸಿನಿಮಾಗಳು ಮೂಡಿ ಬರುತ್ತಿರುವುದನ್ನು ಕಂಡಿದ್ದೇವೆ.

ಒಂದು ಕಾಲಕ್ಕೆ ನೇಪಥ್ಯಕ್ಕೆ ಸರಿದು ಈಗ ಮರುಹುಟ್ಟು ಪಡೆದಿರುವ ಸಿನಿಮಾಗಳು, ಜಡ್ಡು ಹಿಡಿದಿದ್ದ ನಿರೂಪಣ ಶೈಲಿಯನ್ನು ಮರಿದು ಕಟ್ಟಿವೆ. ಹೊಸ ತಲೆಮಾರಿನ ನಿರ್ದೇಶಕರು ಸಿನಿಮಾವನ್ನು ಗಂಭೀರವಾಗಿ ಪರಿಗಣಿಸುತ್ತಾ ಇದ್ದಾರೆ. ಹಳೆಯ ತಲೆಮಾರಿನ ಹಲವರು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಈ ಬದಲಾವಣೆ ಕಾಣುತ್ತಿರುವುದಕ್ಕೆ ಕಾರಣಗಳೇನು? ಜನ ಯಾಕೆ ಸ್ಟಾರ್ ನಟರ ಸಿನಿಮಾಗಳಿಗಿಂತ ಕಡಿಮೆ ವೆಚ್ಚದ, ಅಬ್ಬರ ಆಡಂಬರವಿಲ್ಲದ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ? ಇವೆಲ್ಲಕ್ಕೂ ಉತ್ತರವನ್ನು ಇಡೀ ಕನ್ನಡ ಚಲನಚಿತ್ರರಂಗ ಕಂಡುಕೊಳ್ಳಬೇಕಾಗಿದೆ.

ಸಿನಿಮಾ ಒಂದು ಮನರಂಜನಾ ಮಾಧ್ಯಮ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ ಕೇವಲ ಮನರಂಜನೆಯೇ ಸಿನಿಮಾದ ಸರಕಾಗುವುದನ್ನು ಇಂದಿನ ಪ್ರೇಕ್ಷಕವರ್ಗ ಬಯಸುತ್ತಿಲ್ಲ. ಮನರಂಜನೆಯ ಜತೆಗೆ ಒಂದು ಸಿನಿಮಾದಿಂದ ಏನಾದರೂ ಕಲಿಯಬಹುದೇ ಎಂದು ನಿರೀಕ್ಷಿತ್ತಾ ಇದೆ. ಸಿನಿಮಾ ಧ್ವನಿಸುವ ವಿವಿಧ ಆಯಾಮಗಳನ್ನು, ಹಿಡಿಯಲಾಗದ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಜನ ಬಯಸುತ್ತಿದ್ದಾರೆ. ಈ ನಾಡಿಮಿಡಿತವನ್ನು ಗ್ರಹಿಸುವಲ್ಲಿ ಸ್ಟಾರ್ ನಟರು ಅಭಿನಯಿಸುತ್ತಿರುವ ಸಿನಿಮಾಗಳು ಸೋತಿವೆ. ರಿಯಲ್‍ ಎಸ್ಟೇಟ್ ಕುಳಗಳು ಸಿನಿಮಾರಂಗದಲ್ಲಿ ಕಾಲಿಟ್ಟು, ಸ್ಟಾರ್ ನಟರಿಂದ ಕಳಪೆ ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿದ್ದು ಜನರಿಗೆ ಬೇಸರ ತರಿಸಿದೆ. ಕೆಲವು ಸಿನಿಮಾ ನಟರು ಕಿರುತೆರೆಯಲ್ಲಿ ಪ್ರೈಮ್ ಟೈಮ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಬಹುತೇಕ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಫಸ್ಟ್ ಷೋ ಮತ್ತು ಸೆಕೆಂಡ್ ಷೋ ನೋಡುವುದನ್ನು ನಿಲ್ಲಿಸಿ, ತಮ್ಮ ನಟರನ್ನು ಯಾವುದಾದರೂ ಷೋನಲ್ಲಿ ಕಿರುತೆರೆಯಲ್ಲಿ ವೀಕ್ಷಿಸುತ್ತಾರೆ ಎಂಬುದು ಹಲವು ಸಿನಿಮಾ ತಜ್ಞರ ಮಾತು.

“ಹಿರಿಯ ತಲೆಮಾರಿನ ನಾಯಕ ನಟರು ಸಾಕಷ್ಟು ಓದುತ್ತಿದ್ದರು. ಸಮಾಜಮುಖಿಯಾಗಿ ಚಿಂತಿಸುತ್ತಿದ್ದರು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ನಟ, ನಿರ್ದೇಶಕ, ಸಾಹಿತಿ ಎಲ್ಲರೊಂದಿಗೂ ನಿಕಟ ಬಾಂಧವ್ಯವನ್ನು ಹೊಂದಿರುತ್ತಿದ್ದರು. ನಿರ್ದೇಶಕರ ಮಾತು ಅಂತಿಮವಾಗಿರುತ್ತಿತ್ತು. ಅಧ್ಯಯನಶೀಲರಾಗಿರುತ್ತಿದ್ದರು. ಈಗಿನ ಬಹುತೇಕ ಸ್ಟಾರ್ ನಟರಿಗೆ ಈ ಅರ್ಹತೆಗಳು ಇಲ್ಲ ಎನಿಸುತ್ತಿದೆ. ಸ್ಟಾರ್ ನಟರೇ ಎಲ್ಲದರಲ್ಲೂ ಮುಖ್ಯವಾಗುತ್ತಿದ್ದಾರೆ. ಓದುವುದನ್ನು ನಿಲ್ಲಿಸಿದ್ದಾರೆ. ಕಥೆಯ ಆಯ್ಕೆಯಲ್ಲಿಯೇ ಎಡವುತ್ತಿದ್ದಾರೆ. ಜನ ಸದಭಿರುಚಿಯ ಸಿನಿಮಾಗಳನ್ನು ನೋಡಲು ಮುಂದಾದರೆ ಸ್ಟಾರ್ ನಟರು ಕೂಡ ಎಚ್ಚರಗೊಳ್ಳಬಹುದು” ಎಂದು ಕಳೆದ ವರ್ಷ ಮಾನಸ ಗಂಗೋತ್ರಿಯಲ್ಲಿ ನಡೆದ ಸಿನಿಮಾ ಕುರಿತ ವಿಚಾರ ಸಂಕಿರಣ ಒಂದರಲ್ಲಿ ನಿರ್ದೇಶಕ ಪಿ.ಶೇಷಾದ್ರಿ, ಸಂಗೀತ ನಿರ್ದೇಶಕ ಹಂಸಲೇಖ, ಲೇಖಕ ಜೋಗಿ ಮೊದಲಾದವರು ಅಭಿಪ್ರಾಯಪಟ್ಟಿದ್ದರು.

ಮೈಸೂರಿನ ಶಾಂತಲಾ ಚಿತ್ರಮಂದಿರಕ್ಕೆ ಇಷ್ಟಕಾಮ್ಯ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರನ್ನು ಅಭಿನಂದಿಸಲು ಆಗಮಿಸಿದ್ದ ವೇಳೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಸುದ್ದಿಗಾರರು ಮಾತಾಡಿದರು. ಆ ಸಂದರ್ಭದಲ್ಲಿ, “ಸ್ಟಾರ್ ನಟರ ಸಿನಿಮಾಗಳ ಸೋಲಿಗೆ ಕಾರಣವೇನು?” ಎಂದು ಕೇಳಲಾಗಿತ್ತು. ಅದಕ್ಕೆ ನಾಗತಿಹಳ್ಳಿಯವರು, “ಸ್ಟಾರ್ ನಟರು ಭ್ರಮೆಗಳಲ್ಲಿ ಬದುಕುತ್ತಿರುತ್ತಾರೆ. ಅದಕ್ಕೆ ಅವರ ಸುತ್ತ ಇರುವ ಭಕ್ತಾದಿಗಳು ಕಾರಣರಾಗಿರುತ್ತಾರೆ. ಸ್ಟಾರ್ ವಾಸ್ತವದ ಬದುಕಿಗೆ ತೆರೆದುಕೊಳ್ಳಬೇಕು. ಸ್ಟಾರ್’ಗಳ ಮಾತನ್ನು ಕನ್ನಡ ಚಿತ್ರರಂಗ ಗಂಭೀರವಾಗಿ ಕೇಳುತ್ತದೆ. ಹೀಗಾಗಿ ಬದಲಾವಣೆಯನ್ನು ತರುವುದಕ್ಕೆ ಅವರು ಮುಂದಾಗಬೇಕು” ಹೇಳಿದ ಉತ್ತರಿಸಿದ್ದರು.

ಮತ್ತದೆ ಪೊಲೀಸ್, ಪುಂಡ-ಪೋಕರಿ, ರಾರಾಜಿಸುವ ಡೈಲಾಗ್, ಮತ್ತದೆ ಹಳೇ ಕತೆ, ಹೊಸ ಮೇಕಿಂಗ್, ರಿಮೇಕ್ ಸಿನಿಮಾಗಳಲ್ಲಿಯೇ ಕಳೆದ ಹೋಗುವ ಸ್ಟಾರ್ ನಟರು, ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾಡಿಕೊಂಡ ಯಡವಟ್ಟುಗಳಿಂದಾಗಿಯೂ ಪ್ರೇಕ್ಷಕರು ಅವರ ಸಿನಿಮಾಗಳನ್ನು ತಿರಸ್ಕರಿಸಲು ಕಾರಣವಾಗಿರಬಹುದು ಎಂಬುದನ್ನು ಅಲ್ಲಗಳೆಯುವ ಆಗಿಲ್ಲ. ಅಬ್ಬರದ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಬಿಟ್ಟು ಹೊಸ ಅಲೆಗೆ ತೆರೆದುಕೊಂಡರೆ ಜನ ಸ್ವೀರಿಸುತ್ತಾರೋ ಇಲ್ಲವೋ ಎಂಬ ಆತಂಕ ಬೇಡ. ಯಾಕೆಂದರೆ ಮೈತ್ರಿಯಂತಹ ಸಿನಿಮಾದಲ್ಲಿ ಅಭಿನಯಿಸಿದ ಪುನೀತ್‍ರಾಜ್ ಕುಮಾರ್ ತಮ್ಮ ಘನತೆಯನ್ನು ಮತ್ತೊಷ್ಟು ಹೆಚ್ಚಿಸಿಕೊಂಡಿದ್ದು ಕಣ್ಣ ಮುಂದಿನ ದೃಷ್ಟಾಂತ. ಜನ ಹೊಸಬರಿಗೆ ತೆರೆದುಕೊಳ್ಳುತ್ತಿದ್ದಾರೆ. ಹೊಸತನಕ್ಕೆ ಎಲ್ಲರೂ ಕೈ ಜೋಡಿಸಿದರೆ ಕನ್ನಡ ಚಿತ್ರರಂಗ ಮತ್ತಷ್ಟು ಉಜ್ವಲವಾಗುತ್ತದೆ. ಈ ಸಕಾರಾತ್ಮಕ ಬೆಳವಣಿಗೆಗೆ ಮಾಧ್ಯಮವು ಕೂಡ ಪೂರಕವಾಗಿ ಸ್ಪಂದಿಸಿದೆ. ಕರಾರುವಕ್ಕಾದ ಟೀಕೆ-ಟಿಪ್ಪಣಿಗಳು, ಪ್ರಶಂಸೆಗಳು ಪತ್ರಿಕಾವಲಯದಲ್ಲಿ ಮೂಡಿಬಂದಿವೆ. ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಹಳಬರಿಗೆ ಜನಮನ್ನಣೆ ಲಭಿಸಿವೆ.

ಆದರೇ ಹೊಸ ಅಲೆ ಸಿನಿಮಾಗಳು ಒಮ್ಮೆ ಸದ್ದು ಮಾಡಿ, ನೇಪಥ್ಯಕ್ಕೆ ಸರಿಯುವುದು ಬೇಡ. ಕಬ್ಬಿಣ ಕಾದಾಗಲೇ ನಮಗೆ ಬೇಕಾದ ರೂಪವನ್ನು ಕೊಟ್ಟು ಬಿಡಬೇಕು. ನಿರಂತರ ಉತ್ತಮ ಸಿನಿಮಾಗಳು ಮೂಡಿ ಬರುತ್ತಿದ್ದರೆ, ಜನತೆಗೆ ಯಾವುದು ಸರಿಯಾದ ಮಾರ್ಗ ಎಂಬುದು ಸ್ಪಷ್ಟವಾಗುತ್ತದೆ; ಜತೆಗೆ ಅವುಗಳ ಬೆನ್ನು ಹತ್ತುತ್ತಾರೆ. ವ್ಯಾಪಾರಿ ಮನೋಭಾವದ ಸಿನಿಮಾಗಳು ಮತ್ತೊಮ್ಮೆ ರಾರಾಜಿಸುವ ಸೂಚನೆ ಕಂಡು ಬರುತ್ತಿದೆ. ಬದಲಾಗಬೇಕಾದ ಹೊತ್ತಿನಲ್ಲಿ ಬದಲಾವಣೆಗಷ್ಟೇ ಆದ್ಯತೆ ನೀಡಿದರೆ, ನಾವೂ ಬೆಳೆಯಬಹುದು ನಮ್ಮ ಚಿತ್ರರಂಗವನ್ನು ಬೆಳೆಸಬಹುದು.

-ಯತಿರಾಜ್ ಬ್ಯಾಲಹಳ್ಳಿ

ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ ಕಾಲೇಜು , ಉಜಿರೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post