X

ನೀಲಿ ’ಮಳೆ ಕವಿ’ – ಜಯಂತ್ ಕಾಯ್ಕಿಣಿ

ಆಗೊಂದಷ್ಟು ದಿನ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು ಏಕೋ ಅಷ್ಟಾಗಿ ಮನಸ್ಸು ತಟ್ಟುತ್ತಿರಲಿಲ್ಲ. ಹಾಡುಗಳನ್ನು ಎಲ್ಲೊ ಒಮ್ಮೊಮ್ಮೆ ಗುನುಗುನಿಸಬೇಕೆನಿಸಿದರೂ ಅದರ ಸಾಹಿತ್ಯ ನೆನಪಿರುತ್ತಿರಲಿಲ್ಲ. ಅವುಗಳಲ್ಲೊಂದಿಷ್ಟು ಬೇರೆ ಬೇರೆ ಭಾಷೆಯ ಪದಗಳು. ಕನ್ನಡದ ಶಬ್ಧಕೋಶದಲ್ಲಿ ಕೋಟಿಗಟ್ಟಲೆ ಪದಗಳಿದ್ದರೂ ಯಾವುದೋ ಭಾಷೆಯ ಪದಗಳ ಬಳಕೆಯೇ ಹೆಚ್ಚಿರುತ್ತದೆಯಲ್ಲ ಎಂಬ ಸಣ್ಣ ನೋವು ಕೂಡ ಇರುತ್ತಿತ್ತು. ಕನ್ನಡ ಭಾಷೆಯನ್ನು ಜನರ ಮನೆ-ಮನಗಳಿಗೆ ಮುಟ್ಟಿಸಬಲ್ಲ ಆತ್ಯಂತ ಪ್ರಭಾವಿ ಮಾಧ್ಯಮವಾದ ಚಲನಚಿತ್ರಗಳ ಹಾಡುಗಳು ಏಕೆ ಪರಭಾಷಾ ಪದಗಳಿಂದ ತುಂಬಿ ಹೋಗುತ್ತಿದೆ ಎಂದು ಪದೇ ಪದೇ ಅನಿಸುತ್ತಿತ್ತು.

ಹೀಗೆ ಪದೇ ಪದೇ ಅನಿಸುತ್ತಿದ್ದ ಆ ಸಂದರ್ಭದಲ್ಲಿ “ಅನಿಸುತಿದೆ ಏಕೋ ಇಂದು… ನೀನೇನೆ ನನ್ನವಳೆಂದು” ಎನ್ನುತ್ತಾ ಕನ್ನಡದ ಹೊಸ ಹೊಸ ಪದಗಳ ಮಳೆ ಸುರಿಸಿದ್ದು ನನ್ನ ನೆಚ್ಚಿನ ಸಾಹಿತಿ ಜಯಂತ್ ಕಾಯ್ಕಿಣಿಯವರು. ನಾನು ಒಂಭತ್ತನೆಯ ತರಗತಿಯಲ್ಲಿರುವ ಸಂದರ್ಭ. ಆಗಿನ್ನೂ ಈಗಿನಷ್ಟು ಬರೆಯುವ/ಓದುವ ಹುಚ್ಚು ಕೂಡ ಇರಲಿಲ್ಲ ನನಗೆ. ಅಲ್ಲದೇ ನಾನೂ ಕೂಡ ಬರೆಯಬಲ್ಲೆನೆ ಎಂಬ ಅಳುಕು ಇನ್ನೂ ತಾಂಡವವಾಡುತ್ತಿದ್ದ ಸಂದರ್ಭ. ಅದೇಕೋ ಅರಿಯೆ ನನ್ನಲ್ಲಿ ಈ ಹಾಡು, ನಾನೂ ಪ್ರಯತ್ನಿಸಿದರೆ ಒಂದಿಷ್ಟು ಬರೆಯಬಹುದೇನೋ ಎಂಬ ನಂಬಿಕೆ ಹುಟ್ಟಿಸಿತ್ತು. ಬಹುಷಃ ಆ ಸಾಲುಗಳ ಸರಳತೆ‌ ನನ್ನ ಈ ನಂಬಿಕೆಗೆ ಇಂಬು ನೀಡಿರಬಹುದು ಅಂದುಕೊಳ್ಳುತ್ತೇನೆ. ಅದೇ ನಂಬಿಕೆಯಿಂದ ಅವರದೇ ಹಾಡುಗಳ ಸಂಗೀತಕ್ಕೆ ನನ್ನದೇ ಶಬ್ಧಗಳ ಜೋಡಣೆ ಮಾಡುವ ಹುಚ್ಚು ಪ್ರಯತ್ನ ಅಂದಿನಿಂದ ಶುರುವಾಗಿತ್ತು. ನನ್ನ ಬರೆಯುವ ಆಸೆಯ ನವಿಲಿಗೆ ಹೊಸ ಗರಿ ನೀಡಿತ್ತು ಅಂದು ಮುಂಗಾರುಮಳೆಯ ಹಾಡುಗಳ‌ ಗರಿ ಗರಿ ಸಾಲುಗಳು‌. ಅಂದಿನಿಂದ ಅವರ ಹಾಡುಗಳಿಗೆ ಹಾತೊರೆಯುವ ಮನಸ್ಸು ನನ್ನದಾಗಿತ್ತು. ಹಾಗೆಯೇ ನಿರೀಕ್ಷೆಗಳ ಹುಸಿ ಮಾಡದೆ ಒಂದರ ಮೇಲೊಂದರಂತೆ ಭಾವತರಂಗಗಳ ಮೆರವಣಿಗೆ ಮಾಡಿಸಿದ ಜಯಂತ್ ಅವರು ಕನ್ನಡದ ಪದಗಳ ಹಬ್ಬದೂಟ ಮಾಡಿಸಿದರು. ಅವರ ಪ್ರತಿ ಹಾಡು ಕೂಡ ಹೊಸತನವನ್ನು ಹೊಂದಿರುತ್ತವೆ. ಎಲ್ಲೋ ಪರಭಾಷೆಗಳ ಹಾವಳಿಯಲ್ಲಿ ಕಳೆದು ಹೋದ ಒಂದು ಸುಂದರ ಕನ್ನಡ ಪದ‌ ಮತ್ತೆ ನಮ್ಮ ಮನದ ಮನೆಗಳಲ್ಲಿ ಬೆರೆಯುತ್ತದೆ.

ಇನ್ನು ಅವರ ಸಾಲುಗಳನ್ನು ನೆನಪಿಸುಕೊಳ್ಳುವ ಪ್ರಯತ್ನ ಮಾಡಿದರೆ ಬಹುಷಃ ಅದು ಮುಗಿಯದಷ್ಟಿದೆ. ಆದರೂ ನನ್ನ ನೆಚ್ಚಿನ ಕೆಲವು ಸಾಲುಗಳನ್ನು ಹಂಚಿಕೊಳ್ಳುವ ಹಂಬಲ.
ಮೊದಲನೆಯದಾಗಿ ಬಹುಷಃ ಎಲ್ಲರ ನೆಚ್ಚಿನ ಹಾಡು. ಎಲ್ಲರಿಗೂ ಅವರವರ ಹುಡುಗಿಗೆ “ನೀನೇನೆ ನನ್ನವಳು” ಎಂದು ಹೇಳಲು ಪ್ರೇರೆಪಿಸಿದ ಹಾಡು, ಪ್ರತಿಯೊಬ್ಬರಿಗೂ ತಮ್ಮ ಹುಡುಗಿ ಮಾಯದಾ‌ ಲೋಕದಿಂದ ತಮಗಾಗೆ ಬಂದವಳೆಂದು ಭಾಸವಾಗುವಂತೆ ಮಾಡಿದ ಹಾಡು.
“ಅನಿಸುತಿದೆ ಏಕೋ ಇಂದು ನೀನೇನೆ ನನ್ನ ವಳೆಂದು…ಮಾಯದಾ ಲೋಕದಿಂದ ನನಗಾಗೆ ಬಂದವಳೆಂದು…ಆಹಾ ಎಂಥ ಮಧುರ ಯಾತನೆ…ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ…”

ಇನ್ನು ಹಾಗೆ ನೆನಪಿಸಿಕೊಳ್ಳುತ್ತಾ ಮುಂದುವರಿದರೆ ಸಿಗುವ ನನ್ನಿಷ್ಟದ ಸಾಲುಗಳೆಂದರೆ..

“ಪೂರ್ಣ‌ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ”
ಆಹ್, ಅದೆಂತ ಅದ್ಭುತ ‌ಕಲ್ಪನೆ ಇದು ಅಲ್ಲವೇ?
ಮತ್ತೂ ಮುಂದುವರಿದರೆ ಕಾಡುವ ಸಾಲುಗಳೆಂದರೆ…

“ತಪ್ಪಿ ನನ್ನ ಅಪ್ಪಿಕೊ ಒಮ್ಮೆ, ಹಾಗೆ ಸುಮ್ಮನೆ…”

“ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ, ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ”

“ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ,
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದಾ‌ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ”

“ನಿನ್ನ ಮನದ ಕವಿತೆ ಸಾಲ ಪಡೆದ ನಾನು ಸಾಲಗಾರ,
ಕನ್ನ ಕೊರೆದು ದೋಚಿಕೊಂಡಾ ನೆನಪುಗಳಿಗೆ ಪಾಲುದಾರ”

“ಪ್ರಾಣ ಉಳಿಸೋ ಖಾಯಿಲೆಗೆ ಪ್ರೀತಿ ಎಂದೆನ್ನಬಹುದೇ”

“ಹೊಂಗನಸ ಚಾದರದಲ್ಲಿ, ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು, ಕಣ್ಣ ಹನಿ‌ಸುಮ್ಮನೆ ಒಳಗೆ
ಅವಳನ್ನೆ ಜಪಿಸುವುದೇ‌ ‌ಒಲವೇ?”

“ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ”

“ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ”

“ನೀ ಸನಿಹಕೆ ಬಂದರೆ ಹೃದಯದ ಗತಿಯೇನು…?”

“ಎಲ್ಲೊ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ.
ಇಲ್ಲೆ ಒಲವಾಗಿದೆ ಎಂದು ಕನಸೊಂದು ಬೀಳುತಿದೆ”

“ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ…”

“ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?”

“ನನ್ನ ತುಂಬಾ ನೀನೇ ತಾಜಾ ಸುದ್ದಿಯಾದಂತೆ
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೆ”

“ನೀನು ಕೇಳಲೆಂದೆ ಕಾದ ಒಂದು ಪದವಾಗಿ
ನಿನ್ನ ಖಾಸಾ ಕೋಣೆಯಲ್ಲಿ ಸಣ್ಣ ಕದವಾಗಿ
ಇರಬೇಕು‌ ನಾನು ನಿನ್ನ ಜೊತೆಯಾಗಿ
ಓದಲೆಂದೆ ನೀನು ಮಡಿಸಿ ಇಟ್ಟ ಪುಟವಾಗಿ
ಇನ್ನು ಚಂದಗೊಳಿಸುವಂಥ ನಿನ್ನ ಹಟವಾಗಿ”

“ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನ್ನೇ,
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ”

“ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ”

“ಎಲ್ಲಾರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ ಅವನು ನನ್ನೇ ನೋಡಬೇಕು”

“ಮನಸಿನ ಹಸಿ ಬಣ್ಣಗಳಲ್ಲಿ, ನೀನೆಳೆವ ರೇಖೆಗಳಲ್ಲಿ ನಾ ಮೂಡಬೇಕು ಆದರೆ…”

“ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದೇ…”

“ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ”

“ನೀ ಭೆಟಿಯಾದಂಥ ಯಾವುದೇ ಜಾಗ, ಜೀವದಾ ಭಾಗ‌ ಎಂದೆಂದಿಗೂ
ನೀನಿಲ್ಲದಾ ಯಾವ ಸ್ವಪ್ನವೂ ಕೂಡ ಬೇಡವೇ ಬೇಡ ‌ಈ ಕಣ್ಣಿಗೂ”

“ಕನಸನು ಗುಣಿಸುವಂಥ, ನೆನಪನು ಎಣಿಡುವಂಥ ಹೃದಯದ ಗಣಿತ ನೀನು”

“ಗಾಳಿಯೇ ನೋಡು ಬಾ, ದೀಪದಾ‌ ನರ್ತನ”

“ಕನಸಿನಾ ಕುಲುಮೆಗೆ ಉಸಿರನು ಊದುತಾ, ಕಿಡಿ ಹಾರುವುದು ಇನ್ನು ಖಚಿತ..”

“ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದಾ ರಂಗಸಜ್ಜಿಕೆ”

“ಸೆರೆ ಸಿಕ್ಕಾಗ ಬೇಕಿಲ್ಲ ‌ಜಾಮೀನು, ಸರಸಕ್ಕೀಗ ನಿಂದೇನೆ ಕಾನೂನು”

“ಬಿಸಿಯೇ ಇರದ ಉಸಿರು ನಾನು ನೀನು ಇರದೆ”

ಹೀಗೆ ಗೆಳೆಯರೆ, ಅವರು ಕನ್ನಡ ಚಲನಚಿತ್ರರಂಗದಲ್ಲಿ, ಚಿತ್ರ ಪ್ರೇಕ್ಷಕರ ಎದೆಯಲ್ಲಿ ಎಬ್ಬಿಸಿದ ನೂತನ ಭಾವತರಂಗಗಳಿಗೆ ಲೆಕ್ಕವಿಲ್ಲ. ಜಯಂತ್ ಕಾಯ್ಕಿಣಿಯವರ ಸಾಹಿತ್ಯದಲ್ಲಿ ಪ್ರಿಯತಮೆಯ ಕೈಯಲ್ಲಿ ಒಮ್ಮೆ “ಹಾಗೆ ಸುಮ್ಮನೆ…” ಸಾಯಲು ಸಿದ್ಧನಿರುವ ಪ್ರೇಮಿ ಇರುತ್ತಾನೆ. ಅವನ ತುಂಬೆಲ್ಲಾ ಅವನ ಜೀವದ ಗೆಳತಿಯೇ ತಾಜಾ ಸುದ್ದಿಯಂತೆ ಆವರಿಸಿರುತ್ತಾಳೆ. ಅವಳ ಸೌಂದರ್ಯದ ಎದುರು ಚಂದ್ರ ಕೂಡ ರದ್ದಿಯಾಗುತ್ತಾನೆ. ಅವಳನ್ನು ಚಂದಗಾಣಿಸುವ ಹಟವಾಗಿ ತಾನಿರುವ ಹಂಬಲ ಪ್ರೇಮಿಯದ್ದಾಗಿರುತ್ತದೆ. ಒಂಟಿ ಇರುವಾಗ ಕುಂಟು ನೆಪ ಹೇಳಿ ಕನಸುಗಳು ಬರುತ್ತವೆ. ಪ್ರೀತಿ, ಪ್ರಾಣ ಉಳಿಸುವ ಒಂದು ಖಾಯಿಲೆ ಅನ್ನುತ್ತಾರೆ. ಗಾಳಿ, ದೀಪದ ನರ್ತನ ನೋಡಲು ಬರುತ್ತದೆ. ಪೇಯಸಿಯ ನೃತ್ಯಕ್ಕೆ ಅಂತರಂಗದಲ್ಲೊಂದು ರಂಗಸಜ್ಜಿಕೆ ನಿರ್ಮಿಸುವ ಪ್ರೇಮಿ ಅಲ್ಲಿದ್ದಾನೆ.

ಪ್ರತಿಯೊಂದರಲ್ಲೂ ಹೊಸತನ ತರುವ,‌ ಅಪ್ಪಟ ಕನ್ನಡದ ಪದಗಳಲ್ಲಿ ಹಾಡಿನ ಸುಂದರ ಮಾಲೆ ಮಾಡುವ ಸಾಹಿತಿ ಜಯಂತ್. ಹಾಗೆಯೇ ಅವರು ಬರೆಯುವ ಸಾಹಿತ್ಯ ಸಕ್ಕರೆ ಪಾಕದಂತೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುವ ಮನಸಿಗೆ ಅತ್ಯಂತ ಸಿಹಿ ಎನಿಸುವಂಥದ್ದು. ಅಷ್ಟೇ ಆತ್ಮೀಯ ಎನಿಸುತ್ತದೆ ಕೂಡ. ಹಾಗಾಗಿ ಅವರ ರಚನೆಯ ಹಾಡುಗಳ ಸಂಗೀತದ‌ ಜೊತೆ ಜೊತೆಗೆ ಸಾಹಿತ್ಯ ಕೂಡ‌‌ ನೆನಪಿನಲ್ಲುಳಿಯುತ್ತದೆ.

ಬಹುಷಃ ಚಲನಚಿತ್ರ ಪ್ರಭಾವಿ ಮಾಧ್ಯಮವಾದ್ದರಿಂದಲೋ ಏನೋ ನನಗೆ ಅವರ ಸಾಹಿತ್ಯದ ಪರಿಚಯ ಆದದ್ದು ಹಾಗೂ ಅವರ ಸಾಹಿತ್ಯದ ಅಭಿಮಾನಿಯಾದದ್ದು ಎರಡೂ ಈ ಚಿತ್ರಗಳ ಗೀತರಚನೆಯಿಂದಲೇ.‌ ಆದರೆ ಒಬ್ಬ ಸಾಹಿತಿಯಾಗಿ ಇವೆಲ್ಲಕ್ಕೂ ಮೊದಲೇ ಅದೆಷ್ಟೋ ಕೃತಿಗಳ ಕರ್ತೃ ಅವರು. ಅವುಗಳಲ್ಲಿ ಕೆಲವೆ ಕೆಲವನ್ನು ಓದುವ ಅವಕಾಶ ನನಗೆ ದೊರೆಯಿತು. ಆ ಕೃತಿಗಳನ್ನು ಓದಿದ ನಂತರ ಅವರ ಸಾಹಿತ್ಯಕ್ಕೆ ಅದರಲ್ಲೂ ಬರವಣಿಗೆಯ ಸರಳತೆಗೆ ಮತ್ತೆ ಮರುಳಾದೆ. ಮುಂಬೈನಲ್ಲಿ ವಾಸವಾಗಿದ್ದ ಅವರು ಅಲ್ಲಿನ ಜೀವನಶೈಲಿಯನ್ನ ತಮ್ಮದೇ ರೀತಿಯಲ್ಲಿ ಅವರು ವರ್ಣಿಸುವ ಪರಿಯೇ ಸುಂದರ ಹಾಗೂ ಮನೋಜ್ಞ. ಅವರು ಯಾವುದೇ ಬರವಣಿಗೆಯಲ್ಲಿ ಕೊಡುವ ಚಿತ್ರಣ ಮನೋಹರವಾದದ್ದು. ಕಲ್ಪನೆಗಳನ್ನು ಪದಗಳಲ್ಲೆ ಅರಳಿಸಬಲ್ಲಂತಹ ಉಪಮೆಗಳ ಬಳಕೆ‌ ಅವರ ಬರಹದಲ್ಲಿ ಕಾಣಬಹುದು. ಅವರ ‘ಬೊಗಸೆಯಲ್ಲಿ ಮಳೆ’ ಎಂಬ ಲೇಖನಗಳ ಸಂಕಲನ ನನಗೆ ಅತ್ಯಂತ ಪ್ರಿಯವಾದದ್ದು. ಅವುಗಳಲ್ಲಿ ದಿನನಿತ್ಯದ ಸುತ್ತಮುತ್ತಲಿನ ಆಗು ಹೋಗುಗಳನ್ನು ಅವರು ಎಳೆಎಳೆಯಾಗಿ ತೆರೆದಿಟ್ಟಿರುವ ಬಗೆಯೇ ಅತ್ಯಪೂರ್ವ. ಅದರ ಕೆಲವು ತುಣುಕುಗಳು ಹೀಗಿವೆ:

“ಧಾಬಾದ ಗಡ್ಡದ ಕಾಕಾನ ಸ್ಟೋವಿನ ಜ್ವಾಲೆಯ ನೀಲಿ ಹೂವು ಭಗ್ಗನೆ ಹೊತ್ತಿಕೊಂಡಿದೆ”

“ಏಕಾಂತಕ್ಕೆ ಹುಚ್ಚನ್ನೇ ಹಿಡಿಸುವ ಧಾರಾಕಾರ ಮಳೆಗೆ ನೆನಪುಗಳ ಭಂಡಾರದ ಬೀಗಗಳು ತಂತಾನೇ ಕಳಚಿ ಬೀಳುತ್ತಿರುವಾಗ, ಶಹರದ ಬೂಟ್ ಪಾಲೀಶ್ ಮಕ್ಕಳ ಪುಟ್ಟ ಪೆಟ್ಟಿಗೆಗಳಿಗೆ ಹೊಸ ಬೀಗಗಳು ಮೂಡುತ್ತಿವೆ”

“ಎಲ್ಲ ಬಗೆಯ ಕಳ್ಳರು, ಲೂಟಿಕೋರರು ಈ ದಾರಿಯಲ್ಲೇ ಇದ್ದಾರೆ ಆದರೆ ಯಾರಿಗೂ ಗಾಲಿಗಳ ಮೇಲೆ ನಿಂತ ಗೂಡಂಗಡಿಯ ಪುಟ್ಟ ಬೀಗ ಮುರಿಯುವ ಧೈರ್ಯವಿಲ್ಲ”

ರಾತ್ರಿಯಾಕಾಶವನ್ನು ವರ್ಣಿಸುತ್ತಾ ಒಂದು ಕಡೆ ಜಯಂತ್ ಕಾಯ್ಕಿಣಿ ಬರೆಯುತ್ತಾರೆ:
“ತಲೆಯೆತ್ತಿದರೆ ವಿಶ್ವಕ್ಕೇ ಕಟ್ಟಿರುವ ಮಾಯಾ ಮಚ್ಚರದಾನಿ”

ಗೋಕರ್ಣದ ರಥಬೀದಿಯಲ್ಲಿನ ಹಳೆಯ ಬಸ್ ತಂಗುದಾಣದ ಕುರಿತು
“ರಥಬೀದಿಯ ಪೇಟೆಯಲ್ಲಿ ಬಗೆಬಗೆ ಕೆಂಪಿನ ಬಸ್ಸುಗಳು ಬಂದು ಗುರುಗುಟ್ಟಿ ಹೋದರೇ ಊರಿಗೊಂದು ಕೀಲಿ ಕೊಟ್ಟಂತೆ” ಎನ್ನುತ್ತಾರೆ

“ಬಸ್ಸಿಗೆ ಕಾಯುತ್ತ ಇಕ್ಕೆಲದ ಮನೆ ಜಗುಲಿಗಳಲ್ಲಿ ನೋಟ್ ಪುಸ್ತಕ ಹಿಡಿದು ಕೂತ ಕನಸು ಮುಡಿದ ತರುಣ ತರುಣಿಯರು”

“ಚಂದಪ್ಪ(ಚಂದ್ರ) ನ ಮುಖಕ್ಕೆ ಹೊಳಪು ಬಂದಿದ್ದೇ, ಕೂತು ಕೂತು ಸವೆದ ಹಿಂಬಾಗಿಲ ಮೆಟ್ಟಿಲ ನುಣುಪಿಂದ”

ದೇಶಕ್ಕಾಗಿ ಪ್ರಾಣ ತೆರುವ ಸೈನಿಕರ ವರ್ತಮಾನದಲ್ಲಿ ನಾವು ಹೇಗೆ ಭಾಗಿಯಾಗಬಹುದು ಎಂಬುದಕ್ಕೆ ಜಯಂತ್ ಹೀಗೆ ಬರೆಯುತ್ತಾರೆ: “ನಾವು ಕುಡಿಯುವ ಪ್ರತಿಯೊಂದು ಪೆಗ್ಗು ಗಡಿಯಲ್ಲಿ ಹಸಿದ ಹೊಟ್ಟೆಯಲ್ಲಿ ಕಾದಾಡುತ್ತಿರುವ ಯೋಧನಿಗೆ ನಾ ಗೈದ ಅವಮಾನ. ನಾನಾಡುವ ಸುಳ್ಳು, ನಾನು ತೆಗೆದುಕೊಳ್ಳುವ ಲಂಚ ನನ್ನ ನೆಮ್ಮದಿಗಾಗೇ ಅಲ್ಲಿ ಹೆಣವಾಗುತ್ತಿರುವ ತರುಣನಿಗೆ ನಾನು ಮಾಡುತ್ತಿರುವ ವಿಶ್ವಸಾಘಾತ. ನಾನು ನನ್ನ ಕೆಲಸದಲ್ಲಿ ತೋರಿಸುವ ಅಪ್ರಾಮಾಣಿಕತೆ ಆ ಅಮಾಯಕ ಶವಪೆಟ್ಟಿಗೆಗಳಿಗೆ ನಾನು ತೋರುವ ಕೃತಘ್ಞತೆ” ಎಂದು ನಾವು ಭಾವಿಸಿ ನಮ್ಮ ದಿನಚರಿಯಲ್ಲಿ ನಮಗೆ ನಾವು ಪ್ರಾಮಾಣಿಕರಾಗಿ ಬದುಕಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಿವರಾಮ ಕಾರಂತರ ಅಗಲಿಕೆಯನ್ನ ಕುರಿತು ಕಾಯ್ಕಿಣಿಯವರು ಬರೆಯುತ್ತಾರೆ “ಅಶಾಂತ ನೀಲಿ ಸಮುದ್ರ ತುಯ್ಯುತ್ತಿದೆ. ಅದರ ಮೇಲೊಂದು ಬೆಳಕಿನ ಮೋಡ ಸ್ತಬ್ಧವಾಗಿ ಮಲಗಿದೆ. ಸಹಸ್ರ ರಾಗಗಳನ್ನು ಮೀಟಿ ಆಗಷ್ಟೇ ಮೌನ ತಳೆದ ವೀಣೆ. ಗಾಳಿಯೊಡನೆ ಮಾತು ಬಿಟ್ಟ ಚಿಗುರು ತುಂಬಿದ ಹೆಮ್ಮರ. ಈಗಷ್ಟೇ ಈಸಾಡಿ ಬಂದ ಹೊಂಬಣ್ಣದ ಸಿಂಹ. ನೀರಿನಲ್ಲಿ ಕರಗುತ್ತಿರುವ ಜಲವರ್ಣ ಚಿತ್ರ. ಬಾಲವನದ ಕೊಂಬೆಯಲ್ಲಿ ಮಳೆಗಾಳಿಗೆ ಸುಯ್ಯುತ್ತಿರುವ ಒಂಟಿ ಜೋಕಾಲಿ”

ಬದುಕಿನ ಪ್ರತಿ ಚಿಕ್ಕ ಚಿಕ್ಕ ವಿಷಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಹಾಗೂ ಅದನ್ನು ಪದಗಳಲ್ಲಿ ಮನೋಜ್ಞವಾಗಿ ಹಿಡಿದಿಡಬಲ್ಲ ಸಾಹಿತಿ ಜಯಂತ್ ಕಾಯ್ಕಿಣಿ. ಅವರ ಒಂದು ಕವನ ಸಂಕಲನಕ್ಕೆ ‘ನೀಲಿ ಮಳೆ’ ಎಂದು ಹೆಸರಿಸುತ್ತಾರೆ. ನಿಜಕ್ಕೂ ಅದು ಒಬ್ಬ ಬರಹಗಾರನಿಗೆ ಎಷ್ಟು ಆತ್ಮೀಯ ಪದವಲ್ಲವೇ? ನನಗಂತೂ ಬಹಳ ಇಷ್ಟ. ಹಾಳೆಗಳ ಮೇಲೆ ಭಾವಗಳ ರಾಯಭಾರಿಯಾಗಿ ಶಾಯಿಯ ರೂಪದಲ್ಲಿ ಮೂಡುವ ಆ‌ ನೀಲಿ ಹನಿಗಳು ಅದೆಷ್ಟೊ ಅಂತರಂಗದ ನೆನಪುಗಳನ್ನು ಹಸಿಯಾಗಿಸಬಹುದಲ್ಲವೇ? ಇನ್ನೆಷ್ಟೋ ಹೊಸ ಕನಸಿನ ಚಿಗುರನ್ನು ಹಸಿರಾಗಿಸಬಹುದಲ್ಲವೇ? ಅಂದ ಮೇಲೆ ಅದಕ್ಕೆ ‘ನೀಲಿ ಮಳೆ’ಯಲ್ಲದೇ ಬೇರೆ ಸೂಕ್ತ ಪದ ಸಿಗಲಾರದೇನೋ ಅನಿಸುತ್ತದೆ ನನಗೆ. ಅದೇ ಕವನ ಸಂಕಲನದಲ್ಲಿ ಒಂದು ಸಾಲು ಹೀಗಿದೆ “ಹರಕು ನೋಟಿನಂತೆ ಜೀವ ಕದ್ದು ದಾಟುತ್ತಿದೆ ಮತ್ತೊಂದು ದಿನದ ಕೈಗೆ”. ಅದೆಷ್ಟು ಸರಳವಾಗಿ ಇಡೀ ನಮ್ಮ ಬದುಕಿನ ಚಿತ್ರಣವನ್ನು ಈ ಸಾಲು ಕೊಡುತ್ತದೆ ಅಲ್ಲವೇ? ಇದೇ ಕಾರಣಕ್ಕೆ ಜಯಂತ್ ಕಾಯ್ಕಿಣಿ ಮತ್ತೆ ಮತ್ತೆ ಇಷ್ಟವಾಗುವುದು. ಇದೇ ಕಾರಣಕ್ಕೆ ಅವರ ಸಾಹಿತ್ಯ ಹೃದಯಕ್ಕೆ ಹತ್ತಿರವಾಗುವುದು ಹಾಗೂ ನೆನಪಲ್ಲುಳಿಯುವುದು.

ಇಂದು ನಾನು ಒಂದಿಷ್ಟು ಬರೆಯುತ್ತೇನೆ ಎಂದಾದರೆ ಅದು ಕಾಯ್ಕಿಣಿಯವರ ಸರಳ, ಸುಂದರ ಸಾಹಿತ್ಯದ‌ ಪ್ರಭಾವ ಅಂತಲೇ ಹೇಳಬಹುದು. ಅವರು ಅಂದು “ಅನಿಸುತಿದೆ ಏಕೋ ಇಂದು…” ಎಂದು ಬರೆಯದಿದ್ದರೆ ನನಗೂ ನಾನು ಬರೆಯಬಲ್ಲೆ‌ ಏಂದು ಅನಿಸುತ್ತಲೇ‌ ಇರಲಿಲ್ಲವೇನೋ. ನನ್ನ ಬರೆಯುವ ಆಸೆಯ ಕುಲುಮೆಗೆ ತಮ್ಮ ಹಾಡುಗಳ ಉಸಿರನ್ನು ಊದುತ್ತಾ ನನ್ನೆದೆಯಲ್ಲಿ ಸಾಹಿತ್ಯಾಸಕ್ತಿಯ ಕಿಡಿ ಹೊತ್ತಿಸಿದ ಜಯಂತ್ ಕಾಯ್ಕಿಣಿಯವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕನ್ನಡ ಸಾಹಿತ್ಯ ನನ್ನ ಬದುಕಿಗೆ ಹೊಸ ರೂಪವನ್ನೆ ಕೊಟ್ಟಿದೆ. ಬದುಕನ್ನು ನೋಡುವ ಪರಿಯನ್ನೆ ಬದಲಿಸಿದೆ. ದಿನಚರಿಗೊಂದು ಸಕಾರಾತ್ಮಕ ಚಿಂತನೆಯ ಪ್ರೇರಣೆ ನೀಡಿದೆ. ಸುತ್ತಮುತ್ತಲಿನ ಆಗುಹೋಗುಗಳನ್ನು, ಪುಟ್ಟ ಪುಟ್ಟ ವಿಷಯಗಳನ್ನು ಅನುಭವಿಸುವ ಹಾಗೂ ಆನಂದಿಸುವ ಪರಿಯನ್ನು ಕಲಿಸಿದೆ. ಇವೆಲ್ಲದಕ್ಕೂ ನನ್ನಲ್ಲಿ ಆಸೆಯ ಮೊದಲ ಹೂ ಅರಳಿಸಿದ್ದು ಜಯಂತ್ ಅವರ ಸಾಹಿತ್ಯ. ಹಾಗಾಗಿ‌ ಅವರಿಗೆ ಮತ್ತೊಮ್ಮೆ‌ ನನ್ನ ಕೃತಜ್ಞತೆ ಸಲ್ಲಿಸುತ್ತಾ, ಅವರ ಇನ್ನೊಂದಷ್ಟು ಕೃತಿಗಳಿಗಾಗಿ ಅರಸುತ್ತಾ, ಮತ್ತೆ ಅವರ ರಚನೆಯ ಚಿತ್ರಗೀತೆಗಳಿಗಾಗಿ ಕಾತರಿಸುತ್ತಾ ಭಾವಗಳ ಹೊಸ್ತಿಲಲ್ಲಿ, ಅಪ್ಪ ತರುವ ಚಾಕ್ಲೇಟ್ ಗಾಗಿ ಕಾಯುವ ಪುಟ್ಟ ಮಗುವಿನಂತೆ ಕಾಯುತ್ತಿರುತ್ತೇನೆ.

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post