X

ಇಂಥವರನ್ನು ನಂಬಿ ಮೋದಿ ಯುದ್ಧ ಮಾಡಬೇಕಿತ್ತೇ….?

ಹೌದು ನನ್ನ ನಿಮ್ಮಂತಹ ಎಲ್ಲರ ಮನಸಿನಲ್ಲಿದ್ದುದು ಒಂದೇ. ಒಮ್ಮೆ ಯುದ್ಧ ಮಾಡಿ ಪಾಕಿಸ್ತಾನವನ್ನು ಫಿನಿಶ್ ಮಾಡಿ ಬಿಡಬೇಕು ಕರೆಕ್ಟೇ. ಎಲ್ಲರಿಗಿಂತಲೂ ಖಡಕ್ಕಾಗಿರುವ, ಜಗತ್ತಿನ ಯಾವ ನಾಯಕನೂ ಗಳಿಸದ ವರ್ಚಸ್ಸು ಗಳಿಸಿರುವ ಮೋಡಿಯ ಮೋದಿ ಪಾಕಿಸ್ತಾನದ ಮೇಲೆ ಯಾಕೆ ಯುದ್ಧ ಮಾಡುತ್ತಿಲ್ಲ..? ಉರಿ ದಾಳಿಯಾದ ಕೂಡಲೇ ನಮ್ಮ ಕಡೆಯಿಂದಲೂ ಕಮ್ಯಾಂಡೊಗಳನ್ನು ಬಿಟ್ಟು ಯಾಕೆ ಬಾಂಬು ಹಾರಿಸಲಿಲ್ಲ. ಇಷ್ಟೆಲ್ಲಾ ಅಗಿ ಈಗ ಸಿಂಧೂ ನದಿ ನೀರನ್ನೂ ಕೂಡಾ ನಿಲ್ಲಿಸಿ ಪಾಕಿಗಳಿಗೆ ಬುದ್ಧಿ ಕಲಿಸುವುದನ್ನು ಬಿಟ್ಟು ಅದೇನೋ ಅಣೆಕಟ್ಟೆ ಕಟ್ಟಿ, ಇತ್ಲಾಗೆ ಗದ್ದೆ ತೋಟಕ್ಕೆ ನೀರು ಹರಿಸ್ತೀನಿ ಅಂತ ಕೂತಿದಾರೆ. ಇದ್ದುದರಲ್ಲಿ ಸರ್ಜಿಕಲ್ ಸ್ಟ್ರೈಕ್ ಅಂತಾ ಮಾಡಿ ಭಯೋತ್ಪಾದಕ ಜಗತ್ತಿಗೆ ಮುಟ್ಟಿ ನೋಡಿಕೊಳ್ಳುವಂತಹ ವಾರ್ನಿಂಗು ಕೊಟ್ಟಿದ್ದೂ ಆಯಿತು. ಆದರೂ ಪಾಕಿಸ್ತಾನ ಕ್ಯಾತೆ ತೆಗೆಯುವುದು, ನೂರಕ್ಕೂ ಹೆಚ್ಚು ಜನರನ್ನು ಬಾರ್ಡರಿನಲ್ಲಿ ನಿಲ್ಲಿಸಿಕೊಂಡು ಇತ್ತ ನುಗ್ಗಿಸಲು ಯತ್ನಿಸೋದು ಮುಗಿಯುತ್ತಲೇ ಇಲ್ಲ. `..ಒಂದು ಅಣುಬಾಂಬ್ ಹಾಕಿ ಎಲ್ಲಾ ಪಾಕಿಸ್ತಾನದವರನ್ನು ಡಮಾರ್ ಅನ್ನಿಸಿ ಬಿಡೊದು ಬಿಟ್ಟು..’ ಹೀಗೆ ದೇಶಾದ್ಯಂತ ನಾವು ನೀವೆಲ್ಲಾ ಅಪರಿಮಿತ ಯುದ್ಧ ಪರಿಣಿತರಂತೆಯೂ, ಖ್ಯಾತ ವಿಶ್ಲೇಷಣಾ ತಜ್ಞರಂತೆಯೂ ನಿಂತಲ್ಲಿ ಕುಂತಲ್ಲಿ ಮಾತಾಡಿ ಮೈ ಪರಚಿಕೊಂಡಿದ್ದೂ ಆಯಿತು. ಆದರೆ ಯಾವುದೂ ಆಗುತ್ತಲೇ ಇಲ್ಲ ಯಾಕೆ..? ಕಾರಣ ಇಲ್ಲೊಂದು ಡೈಲಾಗ್ ಹೇಳಬೇಕಿನ್ನಿಸುತ್ತದೆ ನನಗೆ.

`..ಅಪನಿ ಸೋಚ್, ಔರ್ ದುಸರೋಂಕಿ ನೌಕರಿ ಸಬ್ ಕೋ ಅಚ್ಚಿ ಲಗತಿ ಹೈ..’

ನಮ್ಮ ಯೋಚನೆಯಲ್ಲಿ ಕೇವಲ ಪಾಕಿಸ್ತಾನ ಬಗ್ಗು ಬಡಿಯಬೇಕು ಎನ್ನುವುದಷ್ಟೆ ಗಮ್ಯ. ಇದೇ ನಮಗೂ ಈ ದೇಶವನ್ನಾಳುತ್ತಿರುವ ಮುತ್ಸದ್ದಿ ಪ್ರಧಾನಿಯವರಿಗೂ ಇರುವ ವ್ಯತ್ಯಾಸ. ನೆನಪಿರಲಿ ಇವತ್ತು ಅವರ ಸರ್ಜಿಕಲ್ ಸ್ಟ್ರೈಕ್‍ನ ಬಗ್ಗೆ ಸಾಕ್ಷಿ ಕೇಳುತ್ತಾ, ಈ ದೇಶದ ಆತ್ಮದಂತಿರುವ ಸೈನಿಕರು, ಪೋಲಿಸರ ನೈತಿಕ ಸ್ಥೈರ್ಯವನ್ನು ಹಾಳು ಮಾಡುತ್ತಿರುವವರಿಗೆ ಹಾಗೊಂದು  ಸ್ವಾತಂತ್ರ್ಯ ಮತ್ತು ಬಾಯಿಗೆ ಬಂದಂತೆ ಮಾತಾಡುವ ಅನಾಹುತಕಾರಿ ಸ್ವೇಚ್ಚೆಯನ್ನು ಒದಗಿಸಿದ್ದು, ಮೋದಿ ಸೇರಿದಂತೆ ಹಿಂದಿನ ಯಾವ ನಾಯಕರೂ ಯುದ್ಧದ ನಿರ್ಣಯ ಕೈಗೊಳ್ಳದಿರುವ ಜಾಣತನವೇ ಆಗಿದೆ ಎನ್ನುವುದನ್ನು ಇನ್ನಾದರೂ ಈ ದೇಶದ ಆತ್ಮಕ್ಕೆ ಕೊಳ್ಳಿ ಇಡೆಲೆತ್ನಿಸುವ ಬುದ್ಧಿ ಜೀವಿಗಳು ಅರಿಯುವುದು ಒಳ್ಳೆಯದು.

ಇವತ್ತು ನಿಮ್ಮ ಫೇಸ್‍ಬುಕ್ಕಿನಲ್ಲಿ ಯಾವನಾದರೂ ಉತ್ತರ ಕೋರಿಯಾದ ಸ್ನೇಹಿತರಿದ್ದಾರೆಯೆ..? ಅಲ್ಲಿನ ವೆಬ್ ಸೈಟು, ಮಾಹಿತಿ ಜತೆಗೆ ಅವರ ವಾಲ್ ಮೇಲೆ ಇಲ್ಲಿನ ಪತ್ರಕರ್ತೆಯರ ಸೋಗಿನ ಹರಕು ಬಾಯಿಯ ಎಬಡೆಶಿ ಹೇಳಿಕೆಯಂತಹದ್ದೇನಾದರೂ ಕಾಣಿಸುತ್ತದಾ..?ಯಾವುದೇ ದೇಶದ ಯಾವುದೇ ವ್ಯಕ್ತಿ ಇವತ್ತು ನಮ್ಮಲ್ಲಿ ಮಾಡಿದಂತೆ ಕಟುವಾಗಿ ಪ್ರಧಾನಿಗಳನ್ನು, ಇನ್ನಿತರ ಅಧಿಕಾರಿ ವರ್ಗ ಅಥವಾ ತನಗಿಷ್ಟವಿಲ್ಲದ ಕೋಮು ವರ್ಗವನ್ನು ನಿಂದಿಸಿದ್ದು, ಅವರನ್ನು ಅನಾವಶ್ಯಕವಾಗಿ ಎಳೆದು ಫೇಸ್ಬುಕಿನ ಪುಟದ ಮೇಲೆ ರಾಡಿ ಮಾಡಿದ್ದಿದೆಯಾ..? ನೋ ಚಾನ್ಸ್. ಹಾಗೊಂದು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದಾದ ಸ್ವಾತಂತ್ರ್ಯ ಮತ್ತು ಆರ್ಥಿಕ ತಾಕತ್ತು ಇವೆರಡನ್ನೂ ನಮ್ಮ ನಾಗರಿಕ ಗಳಿಸಿಕೊಳ್ಳುತ್ತಿದ್ದಾನಾದರೆ ಅದಕ್ಕೆ ಕಾರಣ ಯುದ್ಧದ ಉನ್ಮಾದಿಗೆ ಬೀಳದೆ, ಆಗೀಗ ಇಷ್ಟಿಷ್ಟೆ ಸೈನಿಕರನ್ನು ನಮ್ಮ ದೇಶದ ನಾಯಕ ಮುಂದೆ ಬಿಡುತ್ತಾ, ನಮ್ಮನ್ನು ರಕ್ಷಿಸುತ್ತಿರುವ ಏಕೈಕ ಕಾರಣದಿಂದ ನೆನಪಿರಲಿ. ಇವತ್ತು ಹಣ, ಹೆಸರಿಗಾಗಿ ಒಮ್ಮೆ ಬಲಪಕ್ಕೆ ಇನ್ನೊಮ್ಮೆ ಎಡತೆಕ್ಕೆ ಎಂದು ಎಲ್ಲಾ ಬಿಟ್ಟು ನಿಂತಿರುವ `ಅಷ್ಟಪದಿ’ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ. ಅವರದ್ದೇನಿದ್ದರೂ ಫಂಡು, ತುಂಡು, ಪ್ರಶಸ್ತಿ ಮತ್ತು ಟಿ.ಆರ್.ಪಿಗಳ ತೆವಲಿಗೆ ತೆರೆದುಕೊಂಡ ಬದುಕು. ನನ್ನ ಗಮನ ಇದ್ದುದು ಜನ ಸಾಮಾನ್ಯರ ಚಿಂತನೆಯ ಮೇಲೆ.

ಯಾಕೆ ನೇರ ಯುದ್ಧ ಘೋಷಿಸುವುದೇ ಇಲ್ಲ…

ನೇರ ಯುದ್ಧ ಘೋಷಣೆಯಿಂದ ಒಮ್ಮೆಲೇ ಪಾಕಿಗಳ ಕಡೆಗೆ ಸಹಾನುಭೂತಿ ಹರಿಯುತ್ತದೆ. ಜಗತ್ತಿನ ಎಲ್ಲಾ ಅರಬ್ಬ ಸಮೂಹ ಅಬ್ಬರಿಸಿಕೊಂಡು ಅತ್ತ ನಿಂತು ಬಿಡುತ್ತದೆ. ಕಾರಣ ಪಾಕ್ ಮುಸ್ಲಿಂ ರಾಷ್ಟ್ರ ಎಂದು ಮುಲಾಜಿಲ್ಲದೆ ಘೋಷಿಸಿಕೊಂಡಿದೆ. ಅಷ್ಟಾಗುತ್ತಿದ್ದಂತೆ ಐಸಿಸ್‍ನಂತಹ ಸಂಘಟನೆ ಕೂಡಾ ನೇರ ಸಂಘರ್ಷಕ್ಕೆ ಇಳಿಯುತ್ತವೆ ಮತ್ತದಕ್ಕೆ ಇತರ ದೇಶಗಳು ಬಹಿರಂಗ ಬೆಂಬಲಕ್ಕೆ ನಿಲ್ಲುತ್ತವೆ. ಅವರವರ ಗಲಾಟೆಲಿ ನಮ್ಮವರು ಯಾಕೆ ಸಾಯಬೇಕು ಎನ್ನುವ ತಾಟಸ್ಥ್ಯ ನೀತಿಯನ್ನು ಬಲಾಢ್ಯ ರಾಷ್ಟ್ರಗಳು ಒಳಗೊಳಗೆ ಅನುಸರಿಸಿ ಬಿಟ್ಟರೆ ಭಾರತ ತೀರ ಏಕಾಂಗಿಯಾಗುತ್ತದೆ. ಇದೆಲ್ಲದರ ಹೊರತಾಗಿ ತುರ್ತು ಮತ್ತು ನಿರಂತರ ಯುದ್ಧ ಜಾರಿ ಇಡಲು, ನಾವು ಊಹಿಸದಷ್ಟು ಮೊತ್ತದ ಆರ್ಥಿಕ ಹೊರೆ ತಡೆದುಕೊಳ್ಳಬೇಕಾಗುತ್ತದೆ. ಯುದ್ಧದ ನಂತರವೂ ನಮ್ಮ ಶಸ್ತ್ರಾಗಾರ ಭರ್ತಿ ಇರಲು ಬೇಕಾಗುವ ಖರ್ಚು ನಮ್ಮ ನಿಮ್ಮ ನಿಲುವಿಗೆ ನಿಲುಕದ್ದು. ಇದೆಲ್ಲದ್ದಕ್ಕಿಂತ ಮಿಗಿಲು ಜಾಗತಿಕವಾಗಿ ಒಮ್ಮೆ ಯುದ್ಧ ಪೀಡಿತ ರಾಷ್ಟ್ರವೆನಿಸಿ ಬಿಟ್ಟರೆ ಹೂಡಿಕೆ ಹಿಂದೆ ಸರಿಯುತ್ತದೆ.( ಕೇವಲ ಸರ್ಜಿಕಲ್ ಸ್ಟ್ರೈಕ್ ಸುದ್ದಿಗೇನೆ ಸೆನ್ಸೆಕ್ಸು ಬಿದ್ದು ಹೋದದ್ದು ನೆನಪಿರಲಿ)ಮಾರುಕಟ್ಟೆ ಕುಸಿಯುತ್ತದೆ. ಅದರ ಹಿಂದೆ ರೂಪಾಯಿ ಅಪಮೌಲ್ಯ. ಅದಾಗಿ ಬಿಟ್ಟರೆ ದೇಶದ ಪಿ.ಸಿ.ಐ. ಎಕ್ಕುಟ್ಟುತ್ತದೆ. ನಿಧಾನವಾಗಿಯಾದರೂ ಭಾರತ ಇವತ್ತು ತಂತ್ರಾಂಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏರುತ್ತಿರುವ ಎತ್ತರದಿಂದ ತತಕ್ಷಣಕ್ಕೆ ಹಿನ್ನಡೆಯೊಂದಿಗೆ ಪಾತಾಳಕ್ಕೆ ಕುಸಿಯುತ್ತದೆ. ಸುಮ್ಮನೆ ಗೆಲುವು ಎನ್ನುವುದೇನೋ ದಕ್ಕಬಹುದು ಆದರೆ ಕೋಟ್ಯಾಂತರ ಭಾರತೀಯರ ಮಟ್ಟ ಕೆಳಮುಖವಾಗುತ್ತದೆ. ಹೊಸದಾಗಿ ಕಟ್ಟುವ ಹೊತ್ತಿಗೆ ದೇಶ ಈಗಾಗಲೇ ಬೀಡು ಬಿಟ್ಟಿರುವ ಹೆಗ್ಗಣಗಳ ಪಾಲಿಗೆ ಸಮೃದ್ಧ ಹೊಲವಾಗುತ್ತದೆ. ಸಾಮಾಜಿಕ ಅಂತರ ಒಮ್ಮೆಲೆ ಹೆಚ್ಚುತ್ತದೆ. ಹೀಗೆ ಯುದ್ಢ ಗೆದ್ದ ನಂತರವೂ ಒಂದು ರೀತಿಯ ಸೋಲು ಅನುಭವಿಸುವ ಪರಿಸ್ಥಿತಿ ನಮ್ಮಂತಹ ಮಧ್ಯಮ ದೇಶಗಳ ಪಾಲಿನ ಸಾಮಾನ್ಯ ಹಣೆಬರಹ. ಜಾಗತಿಕವಾಗಿ ರಾಜತಾಂತ್ರಿಕವಾಗಿ ಪಾಕ್‍ನ್ನು ಮೂಲೆ ಗುಂಪು ಮಾಡಿದರೆ ಯಾವ ಹೊರ ವ್ಯಕ್ತಿಯೂ ಕೀಟಲೆ ಮಾಡಲು ಅವಕಾಶವಿರುವುದಿಲ್ಲ ಹೊರತಾಗಿ ಭಾರತದ ಬೆಂಬಲಕ್ಕೆ ನಿಲುತ್ತವೆ. ಇದಕ್ಕೆ ಈಗಾಗಲೇ ಆಗಿರುವ ಬೆಳವಣಿಗೆಗಳು ಸಾಕ್ಷಿ. ಕೇವಲ ಮೂರೇ ದಿನದಲ್ಲಿ ಅಮೇರಿಕನ್ನರ ಪಿಟಿಷನ್ ಬೆಂಬಲ ಹತ್ತು ಲಕ್ಷ ದಾಟಿದೆ. ನೆರೆಯ ರಾಷ್ಟ್ರಗಳು ಸಾರ್ಕ್ ಬಹಿಷ್ಕರಿಸಿವೆ. ಈಗಾಗಲೇ ಚೀನಾವನ್ನು ಭಾರತ ಇಕ್ಕಟ್ಟಿಗೆ ಸಿಕ್ಕಿಸಿದೆ. ಇಂಡಸ್ ನದಿ ವಿರುದ್ಧ ಪಾಕ್ ನ್ಯಾಯಾಲಯಕ್ಕೆ ಹೋದರೂ ಅಲ್ಲಿ ಜಯ ಸಿಕ್ಕದಂತೇಯೆ ನಮ್ಮ ಪಾಲು ಬಳಸುವ ಯೋಜನೆ ಮಾಡಲಾಗಿದೆ. ಇದೆಲ್ಲದರ ಮೇಲೆ ಎನೇ ಆದರೂ ಸರಿ `..ಮೋದಿ ಒಮ್ಮೆ ಪಾಕಿ ಮೇಲೆ ಯುದ್ಧ ಹೂಡಿ ಗೆದ್ದು ಬಿಡು..’ ಎಂದು ಬೆನ್ನಿಗೆ ನಿಲ್ಲುವ, ಮೀಟರು ಇರುವ ಒಂದೇ ಒಂದು ರಾಜಕೀಯ ಶಕ್ತಿ ನಮ್ಮ ನಕಾಶೆಯ ಮೇಲೆ ಕಂಡು ಬರುತ್ತಿಲ್ಲ. ಅದರೊಂದಿಗೆ ಮರ್ಯಾದೆಗೆಟ್ಟಂತೆ ಮಾಧ್ಯಮದ ಜನ ಬಹಿರಂಗವಾಗಿ ಪಾಕ್ ಕ್ಷಮೆ ಕೇಳಿ ಪ್ರಧಾನಿಯ ನಡೆಯನ್ನೇ ಖಂಡಿಸುತ್ತಿದ್ದಾರೆ. ತೀರ ತಂತಮ್ಮ ಅಧಿಕಾರ ಸಂಭಾಳಿಸಲು ಆಗದಿರುವವರೂ ಕೂಡಾ ಸಾಕ್ಷಿ ಕೇಳುತ್ತಿದ್ದಾರೆ. ಇಷ್ಟೆಲ್ಲ ಇಟ್ಕೊಂಡು ಯಾವ ಭರವಸೆಯ ಮೇಲೆ ಮೋದಿ ಯುದ್ಧ ಹೂಡ್ಬೇಕು..?

ಜಗತ್ತಿನ ಪ್ರಖ್ಯಾತ ಯುದ್ಧ ವಿಶ್ಲೇಷಕರ ಪ್ರಕಾರ ಜಗತ್ತಿನ ಯಾವ ಪಡೆಯೂ ಸಾಂಪ್ರಾದಾಯಿಕ ಯುದ್ಧದಲ್ಲಿ ಭಾರತದ ಪಡೆಯನ್ನು ಗೆಲ್ಲಲಾರರು. ನಮ್ಮ ಸೈನಿಕರ ಸೆಕ್ರಿಫೈಸಿಗೆ ಇತರರ ಕಂಪೇರಿಂಗು ಸಾಧ್ಯವೇ ಇಲ್ಲ ಎನ್ನುತ್ತದೆ ಅಂತರಾಷ್ಟ್ರೀಯ ಸೈನ್ಯಾಧಿಕಾರಿಗಳ ಸಮೂಹ. ಇವತ್ತು ನಾವು ಘೋಷಿಸಿದ್ದೇ ಆಗಲಿ, ಪಾಕಿಸ್ಥಾನ ತಾನೇ ಕಾಲು ಕೆದರಿಕೊಂಡು ಬಂದುದ್ದೇ ಆದರೂ ಅದನ್ನು ಗೆಲ್ಲಲು ತೀರ ಹೆಚ್ಚೆಂದರೆ ಎಂಟು ವಾರವೂ ಬೇಡ ಎನ್ನುವುದು ಒಂದು ಅಭಿಪ್ರಾಯ. ಅದೇನೆ ಇರಲಿ ಯುದ್ಧ ಗೆಲ್ಲಲು ಖಂಡಿತ ಭಾರತವೇ ಫೇವರಿಟ್. ಆಯಿತಲ್ಲ ಹಂಗಾದರೆ ಮೋದಿ ಯಾಕೆ ಸುಮ್ನಿದಾರೆ…? ತಂಬು ಎತ್ತಿಕೊಂಡು ಹೊರಡಲಿ. ಮುಂದಿನ ತಿಂಗಳಷ್ಟೊತ್ತಿಗೆ ಭಾರತ ಗೆದ್ದಾಗಿರುತ್ತದಲ್ಲ ಎಂದು ಪೆಕಳೆ ಹಾರಿಸುವ ಪಾಪದ ಜನಸಾಮಾನ್ಯರೆ ನಿಮ್ಮ ಕಿವಿಗಿರುವ ಕಾಬಾಳೆ ಹೂ ತೆಗೆದು ಬಿಡಿ.

ಕಾರಣ ಮೋದಿ ಇರಲಿ, ಅದಕ್ಕೂ ಮೊದಲಿನ ಮನ್ಮೋಹನ್ ಸಿಂಗೂ ಅಥ್ವಾ ಅಜ್ಜ ವಾಜಪೇಯಿ ಯಾರಿದ್ದರೂ ಇದಕ್ಕೆ ಒಪ್ಪಲಾರರು. ಕಾರಣ ಎದುರಿನವನ ಎರಡೂ ಕಣ್ಣು ಹೋಗಬಹುದು ನಮ್ಮದೂ ಒಂದು ಹೋಗುವುದು ಪಕ್ಕಾ. ಈಗಿನಂತೆ ಆರ್ಥಿಕ ಪ್ರಗತಿ, ವೇಗ ಕೈಗೂಡಲು ತಗಲುವ ಅವಧಿ ಕನಿಷ್ಟ ಒಂದೂವರೆ ದಶಕ. ಇಂಥಾ ಮನೆ ಮುರಕ ಐಡಿಯಾಲಜಿಯಿಂದಲೇ ಇವತ್ತು ಪಾಕಿಗಳ ಪರಿಸ್ಥಿತಿ ಮತ್ತು ಪಿ.ಸಿ.ಐ. ರೂ.18ಕ್ಕಿಳಿದಿದೆ. ನಮ್ಮ ಒಟ್ಟಾರೆ ಲುಕ್ಷಾನು ಶೇ.15 ಆಗಬಹುದು ಅಂತಾ ಅಂದಾಜಿಸಿದರೂ, ಆರ್ಥಿಕವಾಗಿ ಬೀಳುವ ಹೊಡೆತ ಮತ್ತು ಅನಾಮತ್ತಾಗಿ ತನ್ನ ದೇಶದ ಪ್ರಜೆಗಳನ್ನು ಒಂದೂವರೆ ದಶಕ ಹಿಂದಕ್ಕೆ ಸರಿಸುವುದನ್ನು ಭಾರತೀಯ ನಾಯಕನ ಮನಸ್ಸು ಒಪ್ಪಲಾರದು. ಕಟ್ಟಿದ ಕಾರ್ಗಿಲ ಸೆಸ್ ಲೆಕ್ಕ ಹಾಕಿ. ಆಗ ಖರ್ಚಿಗೆ ಒಂದು ದಿನದ ಸಂಬಳ ಕೇಳಿದರೆ `..ನಮ್ಮನ್ನು ಕೇಳಿ ಯುದ್ಧಕ್ಕೆ ಹೋದ್ರಾ..?’ಎಂದು ಗುರಾಯಿಸಿದ ನಾಗರಿಕರು ನಾವು.

ನಮ್ಮ ದೇವೇಗೌಡರನ್ನೇ ಕೇಳಿ ನೋಡಿ. ಯುದ್ಧಕ್ಕೆ ಹೂಂ.. ಅಂತಾರಾ ಎಂದು.`..ನೋಡೀ… ಯುದ್ಧ ಅಂದರೆ…’ ಎಂದು ನಿಧಾನಕ್ಕೆ ರಾಗ ಎಳೆದು ಯುದ್ಧದ ಕಾಲಾವಧಿಯನ್ನೇ ದಾಟಿ ಬಿಡುತ್ತಾರೆ ಆದರೆ ಬಿಲ್‍ಕುಲ್ ಹೂಂ ಅನ್ನಲ್ಲ. ಕಾರಣ ಅಲ್ಲಿನ ಒತ್ತಡ ತಡೆದುಕೊಳ್ಳುವ, ನಿರ್ಣಯ ತೆಗೆದುಕೊಳ್ಳುವ ಛಾತಿ ಇದೆಯಲ್ಲ ಅದು `ನಮ್ಮಲ್ಲಿ ಬರೀ ದೀಡ್‍ನೂರು ಭಯೋತ್ಪಾದಕರಿದ್ದಾರೆ’ ಎಂದು ಕತ್ತು ಉದ್ದ ಮಾಡಿ ನುಲಿದಂತಲ್ಲ. ಮತ್ತೆ ಉಳಿದವರೇನು ಕೊಪ್ಪ, ಶೃಂಗೇರಿ ಕಡೆಯ ಕೊನೆಗೌಡರಾ..?

ಸ್ನೇಹಿತರೆ, ಪಾಕಿಗಳ ಬಳಿ ಕಳೆದುಕೊಳ್ಳಲು ಏನೂ ಇಲ್ಲ. ನಾಲ್ಕು ಬಾಂಬು ಬಿದ್ದರೂ, ಹತ್ತು ನಗರ ಎಕ್ಕುಟ್ಟಿದರೂ ಎಲ್ಲೋ ಒಂದೆರಡು ಬಿಟ್ಟರೆ ಉಳಿದೆಲ್ಲವೂ ಈಗಲೂ ಅದೇ ಪಾಳು ಬಿದ್ದ ಸಂಸ್ಥಾನದಂತಿರುವ ಕಿತ್ತು ಹೋದ ಮನೆಗಳ ಆಗರವೇ ಪಾಕಿಸ್ತಾನ. ಸೈನ್ಯಾಧಿಕಾರಿ, ಪ್ರಧಾನಿ, ಸಲಹೆಕಾರ ಹೀಗೆ ಅಲ್ಲಿ ತುಂಬಿರುವುದು ದರಬಾರು ಮಾಡಲು ಇಷ್ಟ ಪಡುವ ಅವಿವೇಕಿ ನಾಯಕರ ಪಡೆ ಅದು. ಸಾಯಲು ಸಿದ್ಧರಿರುವ ಹುಂಬ ಹುಡುಗರನ್ನು ಬಂದೂಕು ಕೊಟ್ಟು ಬಾರ್ಡರಿಗೆ ಬಿಟ್ಟು ಕಬಾಬು ಕಡಿಯುತ್ತಾ ಮಜವಾಗಿದ್ದಾರೆ. ನಿಜವಾಗಿ ಅವರಿಗೂ ಯುದ್ಧ ಮತ್ತು ತಾಕತ್ತು ಎರಡೂ ಇದ್ದರೆ ಸೈನಿಕರನ್ನೇ ಬಿಡಬಹುದಿತ್ತಲ್ಲ. ಅದವರಿಗೂ ಗೊತ್ತಿದೆ. ನೇರ ಹಣಾಹಣಿ ಅಣುಬಾಂಬು ಎಂದೆಲ್ಲಾ ತಿಪ್ಪರಲಾಗ ಹಾಕಿದರೂ ಭಾರತವನ್ನು ಮಣಿಸುವುದು ಇಷ್ಟು ದೊಡ್ಡ ದೇಶವನ್ನು ಆಳುವುದು ಸಾಧ್ಯವೇ ಇಲ್ಲ ಎಂದು.

ಇವತ್ತು ಬೆಂಗಳೂರಿನಲ್ಲಿರುವ ಸೈಟಿನ ಬೇಲಿ ಕಾಯ್ದುಕೊಳ್ಳುವ ತಾಕತ್ತಿಲ್ಲದ ಮನೆಯ ಯಜಮಾನ, ಸರಿಯಾಗಿರುವ ಆಸ್ತಿಗೂ ಹಪ್ತಾ ಕಟ್ಟಿ, ಒಳಗೊಳಗೇ ಉರಿದುಕೊಂಡೂ ಮೇಲೊಂದು ಪ್ಯಾಲಿ ನಗೆ ಬೀರುವಾಗ, ಅನಾಮತ್ತು ಹತ್ತಾರು ಸಾವಿರ ಕಿ.ಮೀ.ಸರಹದ್ದು ಇರುವ ಅದರಲ್ಲೂ ಪ್ರತಿ ತಿರುವು ಪ್ರತಿ ಹೆಜ್ಜೆಗೂ ಮರಳುಗಾಡು, ಪರ್ವತ ಪ್ರದೇಶ, ನದಿ ಕೊಳ್ಳಗಳು, ಅಗಾಧ ಅನಾಮಧೇಯ ಬೆಟ್ಟಗಳ ಜತೆಗೆ ಪ್ರಾಣಾಂತಿಕ ಹಿಮ ಪರ್ವತದ ತುದಿಗಳಿಂದ ಭಯಾನಕವಾಗಿ ಹರಿಯುವ ನದಿಯ ಆಳದವರೆಗೂ ಹಬ್ಬಿರುವ ಎಲ್ಲೆಯನ್ನು ಕಾಯುವುದು ಹೇಗೆ..? ಅದೂ ಕಾಶ್ಮೀರ ಒಂದರಲ್ಲೇ ಏಳ್ನೂರು ಚಿಲ್ರೆ ಉದ್ದ ಒಟ್ಟಾರೆ ಪಾಕಿಗಳ ಜತೆಯ ಬಾರ್ಡರು 3300 ಚಿಲ್ರೆ ಕಿ.ಮೀ. ಆದರೂ ನಮ್ಮ ಸೈನಿಕರು ಅದನ್ನು ಯಾವ ಡೌಟಿಗೂ ಅವಕಾಶವೇ ಇಲ್ಲದಂತೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಕೂತು ನಮ್ಮ ಮಾತು ನೋಡಿ. ಮಾತೆತ್ತಿದರೆ ಅಣುಬಾಂಬ್, ಸಾಕ್ಷಿ ಎನ್ನ ತೊಡಗಿದ್ದೇವೆ.

ನೆನಪಿರಲಿ ಏನು ಬೇಕಾದರೂ ಮಾಡಬಲ್ಲ ಅಮೇರಿಕಾ ಕೂಡಾ ಒಬ್ಬಂಟಿಯಾಗಿ ಇವತ್ತು ಪೂರ್ಣಾವಧಿ ಯುದ್ಧ ಘೋಷಿಸುವುದೇ ಇಲ್ಲ. ಅಣುಬಾಂಬಿನ ಮಾತನ್ನಂತೂ ಆಡುವುದೇ ಇಲ್ಲ. ತನ್ನ ಕೆಲವು ತುಕಡಿ ಸೈನಿಕರನ್ನು ಎದುರಿಗಿಟ್ಟು ಬಡಿದಾಡುವ ಸ್ಟ್ರಾಟಜಿಗಿಳಿಯುವಾಗ ಒಬ್ಬ ಮೋದಿ ಮಾತ್ರ ರಪಕ್ಕನೆ ಬೆಳಿಗೆದ್ದು ಅರ್ಜೆಂಟಾಗಿ ಸಂಡಾಸಿಗೆ ಹೋದಂತೆ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೊರಟು ಬಿಡಬೇಕಾ..?

`..ಸೈನಿಕರ ಕುಟುಂಬಕ್ಕೆ ತಲೆಗೆ ಒಂದ್ರೂಪಾಯಿ ಕೊಡ್ರೊ ನಿಮಗೆ ಪುಣ್ಯಾ ಬರುತ್ತೆ..’ ಅಂತ ಜಗಮಾನ್ಯ ಪ್ರಧಾನಿ ಕೈಒಡ್ಡುತ್ತಿದ್ದಂತೆ `ತಿರುಪೆ ಸರಕಾರ’ ಎಂದು ಹ್ಯಾಶ್‍ಟ್ಯಾಗ್ ಹಾಕಿಕೊಂಡು ಲೇವಡಿ ಮಾಡುವವರನ್ನು ನಂಬಿಕೊಂಡು ಮೋದಿ ಯುದ್ಧಕ್ಕೆ ಹೋಗಬೇಕಾ..? ಪ್ಯಾನಲ್ ಎದುರಿನ ತಿರುಪೆ ಭಾಷಣಕ್ಕೆ ಹೊರಡುವ ರಂಕುಗಳು, ಆ ಮುಖಕ್ಕೆ ಮೆತ್ತಿಕೊಳ್ಳುವ ಬಣ್ಣದ ಖರ್ಚು ಕೊಡುತ್ತೇನೆಂದರೂ ಸಾಕಿತ್ತು ಪ್ರಧಾನಿಯ ಹುಂಡಿ ತುಂಬಿ ಹೋಗುತ್ತಿತ್ತು. ಆಯ್ತು ನಮ್ಮ ಸೈನಿಕರು ಯುದ್ಧಕ್ಕೇ ಹೋದರು. ಗೆದ್ದೂ ಬಂದರೂ ಅಂತಿಟ್ಟುಕೊಳ್ಳಿ ಅದಕ್ಕೆ ಬೇಕಾದ ಕಂದಾಯ ಕಟ್ಟುವ ಬದಲಿಗೆ, ಗೆದ್ದವರ ಬೆನ್ತಟ್ಟಿ ಕೈಲಾದ ಮಟ್ಟಿಗೆ ಸಹಾಯ ಸಲ್ಲಿಸುವ ಬದಲಿಗೆ ಮತ್ತೆ ಹ್ಯಾಶು ಹಾಕಿಕೊಂಡು `ಪ್ರಧಾನಿಗೆ ಭಿಕ್ಷೆ ಬೇಕಂತೆ’ ಎನ್ನಲು, ನಮ್ಮನ್ನು ಕೇಳಿ ಯುದ್ಧಕ್ಕೆ ಹೋದ್ರಾ..? ಎನ್ನಲು ಇಲ್ಲಿನ ಅತೃಪ್ತ ಆತ್ಮಗಳಿಗೆ ಯಾವ ನಾಚಿಕೆಯೂ ಇರುವುದಿಲ್ಲ. ಬದುಕಿನ ಸನಾತನತೆಯ ಗಂಧಗಾಳಿಯಂತೂ ಮೊದಲೇ ಇಲ್ಲ. ಇಂಥ ಅಪಸವ್ಯಗಳನ್ನೆಲ್ಲಾ ನಂಬಿಕೊಂಡು ಅದ್ಯಾವ ಪ್ರಧಾನಿ ಯುದ್ಧಕ್ಕೆ ಹೋದಾರು…? ಅವರಿಗೇನು ನಾಯಿ ಕಡಿದಿದ್ಯಾ…?

ಸಿಂಧೂ ನೀರು ತುರ್ತಾಗಿ ನಿಲ್ಲಿಸದೆ ತಾಂತ್ರಿಕವಾಗಿ ಅದನ್ನು ಜಾರಿಗೊಳಿಸಲು ನಿರ್ಧರಿಸಿದ್ದೂ ರಾಜ ತಾಂತ್ರಿಕ ಕಾರಣವೇ. ಒಮ್ಮೇಲೆ ನಿಲ್ಲಿಸುತ್ತೇನೆಂದು ಹೊರಟರೆ ಅದನ್ನೂ ಅಂತರಾಷ್ಟ್ರೀಯ ವಿಷಯವಾಗಿಸಿ ಹೊಸ ತಗಾದೆ ತೆಗೆಯಬಹುದು. ವಾಜ್ಯ, ಮಂಡಲಿ ಇತ್ಯಾದಿ ತಲೆ ಎತ್ತುತ್ತವೆ. ಅದರಲ್ಲೂ ಮೂರನೆಯವರ ಮಧ್ಯಸ್ಥಿಕೆ ಬಂದೇ ಬರುತ್ತದೆ. ಈಗಾಗ್ಲೇ ವಿಶ್ವಬ್ಯಾಂಕ್ ಬಾಯಿ ಹಾಕಿದೆ. ಪಾಕಿ ಜನಸ್ತೋಮವನ್ನು ನೀರಿನ ಭಾವೋನ್ಮಾದದಲೆಯಲ್ಲಿ ಇನ್ನಷ್ಟು ರೊಚ್ಚಿಗೆಬ್ಬಿಸಬಹುದು. ಹೀಗೆಲ್ಲಾ ಕಾರಣಗಳಿರುವುದರಿಂದಲೇ ಸಿಂಧೂ ನದಿಯ ತನ್ನ ನೀರನ್ನು ಉಪಯೋಗಿಸಲು ಮತ್ತು ಇತರ ನದಿಯ ಒಪ್ಪಂದ ಪಾಲಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಹೊರತಾಗಿ ನೇರಾನೇರ ನೀರು ತಡೆ ಯೋಜನೆ ಸಾಧ್ಯವೂ ಇಲ್ಲ. ಇದ್ದಕ್ಕಿದ್ದಂತೆ ನೀರು ತಡೆಯೋದಾದರೆ ಅದನ್ನು ತುಂಬಿಕೊಳ್ಳೊದಾದರೂ ಎಲ್ಲಿ…? ಯಾರ ಹತ್ತಿರ ಇದೆ ಆ ಸೈಜಿನ ಡ್ರಮ್ಮು..?

ಸರಿಯಾಗಿ ಯೋಚಿಸಿದರೆ ಇನ್ನು ಐದಾರು ವರ್ಷವಾದರೂ ನಮ್ಮ ಪಾಲಿನ ನೀರು ಉಪಯೋಗಿಸುವುದಿರಲಿ ಬರೀ ಅದನ್ನು ಕಟ್ಟೆ ಕಟ್ಟಿ ಕಾಯಲೂ ನಮ್ಮಿಂದ ಸಾಧ್ಯವಿಲ್ಲ. ಆ ಪಾಟಿ ಅಗಲ ಆಳದ ಹರಿವಿನ ವಿಸ್ತಾರದ ನದಿ. ಆದರೆ ನಮ್ಮ ಪಾಲನ್ನು ಉಪಯೋಗಿಸುವ ಮೂಲಕ ನೀರಿನ ಸುಲಭ ಹರಿವನ್ನು ನಿಯಂತ್ರಿಸುವುದರ ಮೂಲಕ ಪಾಕ್‍ನ್ನು ಸಂಧಿಗ್ಧತೆಗೂಳಪಡಿಸಿ, ಇಲ್ಲಿ ವಿವರಿಸಲಾಗದ ರಾಜ ತಾಂತ್ರಿಕ ತೊಂದರೆಗೂ ಜರೂರು ಈಡಾಗಿಸಬಹುದು. ಅದಕ್ಕೂ ಮೊದಲೂ ಆ ಸೈಜಿನ ಡ್ಯಾಮು, ಅದಕ್ಕೂ ರಕ್ಷಣೆಗೆ ಹಿನ್ನೀರ ತಡೆಗೋಡೆಗಳೂ ಇತ್ಯಾದಿ ಆಗಬೇಕು. ಇಷ್ಟಾದರೆ ಯಾರೇ ತಿಪ್ಪರಲಾಗ ಹಾಕಿದರೂ ಸಿಂಧೂವನ್ನು ನಮ್ಮ ನಿಯಂತ್ರಣದಿಂದ ಕಿತ್ತುಕೊಳ್ಳಲಾಗುವುದಿಲ್ಲ. ಆ ತಾಂತ್ರಿಕ ನ್ಯಾಯಯುಕ್ತ ಒಡಂಬಡಿಕೆ ಅದರಲ್ಲೇ ಇದೆ.

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post