ವಾಸ್ತವ

ಕಾರುಣ್ಯವನ್ನೇ ಕೊಲ್ಲೋ ತಾರುಣ್ಯ

ಅವನೆಂದರೆ ಎಲ್ಲರಿಗೂ ಭಯ!

ಅವನನ್ನು ಕೊಂದೇ ಬಿಡಬೇಕು ಎಂಬಷ್ಟು ಭಯ. ಆದರೆ ಯಾರಿಗೂ ಅವನನ್ನು ಮುಟ್ಟುವ ಧೈರ್ಯ ಇರುವುದಿಲ್ಲ. ಅವನು ಮಾಡೋ ಆಟಾಟೋಪಗಳಿಗೆ ಲೆಕ್ಕವೇ ಇಲ್ಲ. ಎಲ್ಲರೂ ಅವನಿಗೆ ಹೆದರುವವರೇ..

ಅಷ್ಟಕ್ಕೂ ಅವನು ಯಾರು?

ಶಾಲೆಯೊಂದರ ಪಿಯುಸಿ ವಿದ್ಯಾರ್ಥಿ ಆತ. ಹೆಸರಿಗಷ್ಟೇ ವಿದ್ಯಾರ್ಥಿ. ಯಾರನ್ನೂ ಕೇರ್ ಮಾಡದಷ್ಟು ಅಹಂಕಾರಿ. ಅವನಂಥವನೇ ಶಾಲೆಯ ಮಾಲೀಕ. ಮಾಲೀಕ ಹೇಳಿದಂತೆ ತಲೆಯಾಡಿಸೋ ಪ್ರಿನ್ಸಿಪಾಲ್. ಜೊತೆಗೊಂದಿಷ್ಟು ಪ್ರಾಮಾಣಿಕ, ಅಪ್ರಾಮಾಣಿಕ ಲೆಕ್ಚರರುಗಳು. ಹೀಗಾಗಿ ಅವನು ಮಾಡಿದ್ದೇ ಆಟ. ಅವನ ಕಂಡರೆ ಎದುರಿಗಷ್ಟೇ ಸಲಾಂ. ಸರಿದು ಹೋದರೆ ಕ್ಯಾಕರಿಸಿ ಥೂ ಎಂದು ಉಗಿಯುವಷ್ಟು ರೋಷ.

ಬರೋದೆಲ್ಲ ಅತ್ಯಾಧುನಿಕ ಕಾರಿನಲ್ಲಿ. ಎರಡೂ ಕೈಗಳ ಪಕ್ಕ ಚೆಲ್ಲು ಚೆಲ್ಲಾಗಿ ವರ್ತಿಸುವ ಹುಡುಗಿಯರು. ಮಾದಕ ದ್ರವ್ಯಗಳೆಲ್ಲ ಅವನ ಕೈಸೇರೋಕೆ ಹೆಚ್ಚು ಹೊತ್ತು ಬೇಡ. ಹೀಗಾಗಿ ಅವನದ್ದು ಬಿಂದಾಸ್ ವ್ಯಕ್ತಿತ್ವ. ಹೀಗಿರುವಾಗಲೇ ಅವನನ್ನು ಪೆನ್ಸಿಲ್ ನಿಂದ ತಿವಿದು, ತಿವಿದು ಕೊಲ್ಲಲಾಗುತ್ತದೆ. ಹಾಗಾದರೆ ಕೊಂದವರಾದರೂ ಯಾರು?

……………………………………

ಇದು ತಮಿಳು ಚಿತ್ರಪೆನ್ಸಿಲ್ ಕಥಾಹಂದರ. ಇಲ್ಲಿ ಕೊಲೆಯಾಗುವ ಹುಡುಗನ ಪಾತ್ರ, ಹಾಗೂ ಕೊಲೆಯಾಗುವ ಸನ್ನಿವೇಶ, ಇದಕ್ಕೆ ಯಾರು ಕಾರಣರಿರಬಹುದು ಎಂದು ನೋಡುವವರ ಉಸಿರು ಬಿಗಿಹಿಡಿಯುವಂತೆ ಪಾತ್ರಗಳು ಸೃಷ್ಟಿಯಾಗುತ್ತಾ ಹೋಗುತ್ತದೆ. ಕೊಲೆಯಾಗುವ ಹುಡುಗ ಸಣ್ಣಪುಟ್ಟ ಆಸಾಮಿಯೇನಲ್ಲ. ದೊಡ್ಡ ಸ್ಟಾರ್ ಓರ್ವನ ಮುದ್ದಿನ ಮಗ. ಶಾಲೆಯವರಿಗೆಲ್ಲಾ ಸ್ಟಾರ್ ಒಬ್ಬನ ಮಗ ತಮ್ಮ ಶಾಲೆಗೆ ಬರುತ್ತಾನೆ ಎಂಬುದೇ ಹೆಮ್ಮೆಯ ವಿಷಯ. ಹೀಗಾಗಿ ಆತ ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುತ್ತಾರೆ.

ಆದರೂ ಅವನನ್ನು ಎದುರಿಸಲು ಹುಡುಗನೊಬ್ಬ ಇರುತ್ತಾನೆ. ಇಬ್ಬರಿಗೂ ಜಗಳ ಆಗುತ್ತಲೇ ಇರುತ್ತದೆ. ಕೊನೆಗೆ ಕೊಲೆಯಾಗುವ ಹುಡುಗನ ಪರವಾಗಿಯೇ ಎಲ್ಲರೂ ನಿಲ್ಲುತ್ತಾರೆ. ಅವನ ಬಗ್ಗೆ ಇನ್ನೋರ್ವ ಹುಡುಗನಷ್ಟೇ ಅಲ್ಲ, ಟೀಚರ್ ಓರ್ವಳಿಗೂ ಕೊಂದು ಬಿಡುವಂಥ ದ್ವೇಷವಿರುತ್ತದೆ. ಅದು ಯಾಕೆ?

ಕಥೆ ಇಂಟ್ರಸ್ಟಿಂಗ್ ಆಗಿರೋದೇ ಅಲ್ಲಿ.

ಸ್ಟಾರ್ ಪುತ್ರ ಸಾಮಾನ್ಯನೇನಲ್ಲ. ಬೇಕು ಬೇಕಾದದ್ದನ್ನೆಲ್ಲ ಪಡೆಯುವ ಸಾಮರ್ಥ್ಯ ಇದ್ದರೂ ಕೈಗೆ ಸಿಗದೇ ಇದ್ದುದನ್ನೂ ಪಡೆಯುವ ಹಠ. ಹೀಗಿರುವಾಗಲೇ ಕ್ರಿಮಿನಲ್ ಐಡಿಯಾವೊಂದು ತಲೆಗೆ ಹೋಗುತ್ತದೆ. ಲೇಡಿಸ್ ಟಾಯ್ಲೆಟ್ ಒಳಗೆ ಕ್ಯಾಮರಾ ಫಿಕ್ಸ್ ಮಾಡುತ್ತಾನೆ ಮಾನಗೇಡಿ. ಅಲ್ಲಿಂದ ಶುರು ಬ್ಲಾಕ್ ಮೇಲ್. ಟೀಚರ್ ಹಾಗೂ ಆಕೆಯ ಸ್ನೇಹಿತನಿಗಿರುವ ಸಂಪರ್ಕ ಈತನಿಗೆ ಗೊತ್ತಾಗುತ್ತದೆ. ಹಾಗೆಯೇ ಈತನಿಗೆ ಬೇಕು ಬೇಕಾದ ಹುಡುಗಿಯರನ್ನು ಮೊಬೈಲ್ ನಲ್ಲಿ ಸಂಗ್ರಹವಾದ ಅವರ ಚಿತ್ರಗಳನ್ನು ತೋರಿಸಿ ದುರುಪಯೋಗಪಡಿಸುತ್ತಾನೆ. ಇದಕ್ಕೆಲ್ಲ ಕಾರಣ ಲೇಡಿಸ್ ಟಾಯ್ಲೆಟ್ನಲ್ಲಿ ಈತನಿಟ್ಟ ಕ್ಯಾಮೆರಾದಲ್ಲಿ ಸಂಗ್ರಹವಾದ ದೃಶ್ಯಗಳು. ಹೀಗೆ ಆತ ಹಲವರನ್ನು ಬ್ಲಾಕ್ಮೇಲ್ ಮಾಡಿರುತ್ತಾನೆ. ಕೊಲ್ಲುವವರು ಯಾರು ಎಂಬುದು ಚಿತ್ರದ ತಿರುಳು. ಸಿನಿಮಾದ ಕೊನೆಗೆ ಆತನನ್ನು ಕೊಂದವರ ಪತ್ತೆ ಹಚ್ಚಲಾಗಿ, ಶಿಕ್ಷೆ ಕೊಡಲಾಗುತ್ತದೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಕಥೆಯಂತೆ ಇರೋ ಇನ್ನೊಂದು ಕಥೆ     ದೃಶ್ಯಂ ಚಿತ್ರದ್ದು. ಅಲ್ಲೂ ಕೊಲೆಯಾದ ಹುಡುಗ ಮಾಡಿದ ಕೆಟ್ಟ ಕೆಲಸವೇನೆಂದರೆ, ಹುಡುಗಿಯೊಬ್ಬಳು ಬಾತ್ ರೂಂನಲ್ಲಿದ್ದಾಗ ಮೊಬೈಲ್ ಕ್ಯಾಮರಾ ಮೂಲಕ ದೃಶ್ಯ ಸೆರೆಹಿಡಿದು ಆಕೆಯನ್ನು ಬ್ಲಾಕ್ಮೇಲ್ ಮಾಡುವ ಪರಿಣಾಮ ಸಾವಿಗೀಡಾಗುವುದು. ತುಂಬಾ ಸೂಕ್ಷ್ಮ ವಿಚಾರವನ್ನು ಅಷ್ಟೇ ಗಂಭೀರವಾಗಿ ಚಿತ್ರ ಹಿಡಿದಿದಿರುವುದು ಈಗ ಲೋಕಪ್ರಸಿದ್ಧ.

…………………………….

ನಾನೀಗ ಮಾಡಿದ್ದು ಚಿತ್ರವಿಮರ್ಶೆ. ಈಗ ಹೇಳಿ ಇಂಥದ್ದು ನಿಮ್ಮ ಜೀವನದಲ್ಲಿ ಬಂದಿರುತ್ತದೆಯೇ? ಮೇಲೆ ಹೇಳಿದ ಸಿನಿಮಾಗಳಷ್ಟೇ ಅಲ್ಲ, ಹಲವು ಚಲನಚಿತ್ರಗಳೂ ಇಂಥ ಸನ್ನಿವೇಶದ ಸಂದಿಗ್ಧ ಪರಿಸ್ಥಿತಿಯನ್ನು ಬಯಲು ಮಾಡಿವೆ. ಆದರೆ ಮತ್ತೆ ಮತ್ತೆ ಇಂಥ ಅಪರಾಧ ಘಟಿಸುತ್ತಲೇ ಇವೆ. ಹಾಗಾದರೆ ಪೆನ್ಸಿಲ್ ಅಥವಾ ದೃಶ್ಯಂ ಚಿತ್ರಗಳ ಖಳಪಾತ್ರಗಳು ಇರುವುದು ನಿಜ ಎಂದೇ ಆಯಿತು.

ಹೌದು. ಇಂಥ ಪಾತ್ರಗಳು ನಮ್ಮ ಕಣ್ಣ ಮುಂದೆಯೇ ಓಡಾಡಿಕೊಂಡಿರುತ್ತವೆ. ನಮಗೆ ಗೊತ್ತೇ ಆಗೋದಿಲ್ಲ. ಗೊತ್ತಾದರೂ ಏನೂ ಮಾಡುವಂತಿರುವುದಿಲ್ಲ ಎಂಬುದು ಸತ್ಯ. ಕೆಲವೊಮ್ಮೆ ಕೆಲ ದುಷ್ಟ ಶಕ್ತಿಗಳ ವಿರುದ್ಧ ಇಡೀ ಸಮಾಜವೇ ಅಸಹಾಯಕವಾಗಿ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗುವುದು ವಿಡಂಬನೆಯೇನಲ್ಲ. ಅಂಥ ಸನ್ನಿವೇಶಕ್ಕೆ ನಾವೂ ಕಾರಣಕರ್ತರಾಗುತ್ತೇವೆ.

ಕಳೆದ ಕೆಲ ವಾರಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಲೇಡಿಸ್ ಹಾಸ್ಟೆಲ್ ನೊಳಗೆಯೇ ಕ್ಯಾಮೆರಾ ಇಟ್ಟ ವಿಚಾರ ಬಯಲಾಗಿ, ಕೃತ್ಯ ಮಾಡಿದ ಆರೋಪಿ ಸೆರೆಯಾದ ವಿಚಾರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡದ್ದು ಗೊತ್ತೇ ಇದೆ. ಈಗ ಹೇಳಿ ಪೆನ್ಸಿಲ್ ಚಲನಚಿತ್ರದ ಹುಡುಗನಿಗೂ ಮಂಗಳೂರು ವಿವಿಯ ಲೇಡಿಸ್ ಹಾಸ್ಟೆಲ್ನಲ್ಲಿ ಕ್ಯಾಮರಾ ಇಟ್ಟ ಬಗ್ಗೆ ಪ್ರಕಟವಾದ ವರದಿಯ ವಿಚಾರಕ್ಕೂ ಸ್ವಲ್ಪವಾದರೂ ಸಾಮ್ಯತೆ ಇದೆಯೇ ಇಲ್ಲವೇ? ದೃಶ್ಯಂ ಚಿತ್ರದ ಸನ್ನಿವೇಶಕ್ಕೂ ವಿವಿ ಘಟನೆಗೂ ಸಾಮ್ಯತೆ ಇದೆಯೇ ಇಲ್ಲವೇ?

ಇದ್ದೇ ಇದೆ.

ಇದಕ್ಕೆಲ್ಲ ಕಾರಣ ಏನು ಎಂಬ ಹುಡುಕಾಟ ನಮ್ಮೊಳಗೆ ನಡೆಯಲೇಬೇಕು. ಇಂದು ಅಂತರ್ಜಾಲ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಇದೊಂದು ಮಾಹಿತಿಯ ಸುನಾಮಿಯಂತೆ ಕಂಡರೂ ಅಚ್ಚರಿಯಿಲ್ಲ. ಆದರೆ ಎಲ್ಲವೂ ನಮಗೆ ಬೇಕು. ಅದರಲ್ಲಿ ಯಾವುದು ಬೇಡ ಎಂಬುದನ್ನು ಕಂಡುಕೊಳ್ಳುವ, ವಿಮರ್ಶಿಸುವ ಬುದ್ಧಿಯೂ ನಮಗೆ ಬೇಕು. ಹೀಗಾಗಿಯೇ ಜ್ಞಾನಪ್ರಸಾರ ಮಾಡಬೇಕಾದ ಕ್ಯಾಂಪಸ್ಗಳಲ್ಲಿ ಇಂದು ಅಶ್ಲೀಲ ಚಿತ್ರ ಪ್ರಸಾರ ಮಾಡುವ ಕ್ರಿಮಿನಲ್ಗಳೂ ಕಾಣ ಸಿಗುತ್ತಾರೆ. ವಿವಿಯಲ್ಲಿ ಕ್ಯಾಮರಾ ಇಟ್ಟ ಹುಡುಗನ ವಿಚಾರಣೆ ನಡೆಯುತ್ತಿದೆ. ಅವನಿಗೆ ಶಿಕ್ಷೆ ಆಗಬಹುದು, ಆಗದೇ ಇರಲೂಬಹುದು. ಅದು ಕೋರ್ಟು ತೀರ್ಮಾನ ಮಾಡುತ್ತದೆ. ಆದರೆ ಕ್ಯಾಮರಾ ಇಟ್ಟದ್ದಂತೂ ನಿಜ ಎಂದಾದರೆ ಶಿಕ್ಷೆ ಯಾರಿಗೆ ಆಗಬೇಕು? ಪರಿವರ್ತನೆ ಯಾವ ವಿಭಾಗದಲ್ಲಿ ಆಗಬೇಕು ಎಂಬುದು ಯೋಚಿಸಬೇಕಾದ ವಿಚಾರ.

ಶಾಲಾ ಕಾಲೇಜುಗಳೆಲ್ಲ ಡಿಜಿಟಲೈಸೇಶನ್ ಆಗುವ ಸಂದರ್ಭ ಮಕ್ಕಳಿಗೆ ನೀತಿ ಪಾಠ ಹೇಳುವ ಕಾರ್ಯ ಆಗಬೇಕು ಎಂಬುದು ಹಳೇ ಮಾತು. ಮುಖ್ಯವಾಗಿ ಆಗಬೇಕಿರುವುದು ಹೆತ್ತವರಿಗೆ ನೈತಿಕತೆಯ ಪಾಠ.

ನೀವು ಗಮನಿಸಿ. ಎಷ್ಟು ಮಂದಿ ಪೋಷಕರು/ಹೆತ್ತವರು ಶಾಲೆಗಳಲ್ಲಿ ನಡೆಯುವ ಶಿಕ್ಷಕರಕ್ಷಕ ಸಂಘದ ಸಭೆಗಳಲ್ಲಿ ಭಾಗವಹಿಸಿದ್ದೀರಿ? ಲಕ್ಷಗಟ್ಟಲೆ ಡೊನೇಶನ್ ಪಡೆಯೋ ಕೆಲ ಶಾಲೆಗಳು ಈಗ ಮೀಟಿಂಗ್ ಬರೋದು ಕಡ್ಡಾಯ ಎಂದು ಮಾಡಿವೆ. ಹೀಗಾಗಿ ಕಾಟಾಚಾರಕ್ಕಾಗಿಯಾದರೂ ಹೆತ್ತವರು ಮೀಟಿಂಗ್ಗೆ ಬಂದು ಹೋಗುತ್ತಾರೆ. ಆದರೆ ನಮ್ಮ ಮಕ್ಕಳು ಶಾಲೆಯಲ್ಲಿ ಏನು ಮಾಡುತ್ತಾರೆ ಎಂದು ನೋಡಲು ಹೋಗೋ ಹೆತ್ತವರು ಎಷ್ಟು ಮಂದಿ ಎಂಬುದರ ಮೇಲೆ ಸಮಾಜದ ಭವಿಷ್ಯದ ಪ್ರಜೆಗಳ ನಿರ್ಮಾಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಇವತ್ತು ಲೇಡಿಸ್ ಹಾಸ್ಟೆಲ್ಗಳಲ್ಲಿ ಕ್ಯಾಮೆರಾ ಇಟ್ಟವರು ನಾಳೆ ಹೋಟೆಲ್ ರೂಮುಗಳಲ್ಲೂ ಕ್ಯಾಮೆರಾ ಇಡಬಹುದು. ಈಗಾಗಲೇ ಡ್ರಗ್ಸ್ ಮಹಾನಗರವಷ್ಟೇ ಅಲ್ಲ, ಹಳ್ಳಿಗಳಿಗೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ ಎಂಬುದಕ್ಕೆ ಪ್ರತಿ ದಿನ ಪತ್ರಿಕೆಗಳ ಕ್ರೈಂ ಪುಟಗಳಲ್ಲಿ ಬರುವ ಸುದ್ದಿಗಳೇ ಸಾಕ್ಷಿ.

ಆರಂಭದಲ್ಲಿ ಉದಾಹರಿಸಿದ ಹುಡುಗನ ಪಾತ್ರದಲ್ಲಿ ಕರುಣೆ ಎಂಬ ಲವಲೇಶವೂ ಇಲ್ಲ. ಅಷ್ಟೊಂದು ಕಠಿಣ ಹೃದಯಿ ಮತ್ತು ಕ್ರೂರ ಮನೋಸ್ಥಿತಿಯ ಪಾತ್ರವದು. ಸಾಮಾನ್ಯವಾಗಿ ಅಪರಾಧ ಮಾಡುವ ವ್ಯಕ್ತಿಗೆ ತಾನು ಮಾಡುವುದು ತಪ್ಪು ಎಂಬ ಪಾಪಪ್ರಜ್ಞೆಯಾದರೂ ಮೂಡುತ್ತದೆ ಎಂಬ ಮಾತಿದೆ. ಆದರೆ ಇಂದು ಯುವಜನರೇ ಕ್ರಿಮಿನಲ್ಗಳಾಗುತ್ತಿದ್ದಾರೆ ಹಾಗೂ ಸಿಕ್ಕಿ ಹಾಕಿಕೊಂಡಾಗಲೂ ತಾನು ಮಾಡಿದ್ದೇ ಸರಿ ಎಂಬ ಧೋರಣೆಯಲ್ಲಿ ವರ್ತಿಸುತ್ತಾರೆ ಎಂದಾದರೆ ಎಲ್ಲೋ ತಪ್ಪಾಗಿದೆ ಎಂಬುದು ಯೋಚಿಸಬೇಕಾದ ವಿಚಾರ.

ಬೇಸರದ ಸಂಗತಿ ಎಂದರೆ ಇವತ್ತು ಕ್ರೈಂ ಸಿನಿಮಾಗಳ ಕಥೆಗಾರರಿಗೆ, ಸಂಭಾಷಣೆಗಾರರಿಗೆ ನಾವಿಂದು ವಸ್ತುವಾಗುತ್ತಿದ್ದೇವೆ. ಇದು ಕಥೆಯಲ್ಲ, ವಾಸ್ತವ.

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!