ವಾಸ್ತವ

ಬೆಟ್ಟದಷ್ಟು ಕಿರಿಯ, ನೆಲದಷ್ಟು ಎತ್ತರ

ಸಮಾನತೆಯ ಈ ಯುಗದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸೌಜನ್ಯಪೂರ್ವಕ ನಡವಳಿಕೆ ರೂಢಿಸಿಕೊಳ್ಳುವುದು ಇಂದಿನ ಅಗತ್ಯ

ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೈಸ್ಕೂಲ್ ವಿದ್ಯಾರ್ಥಿಗಳು ಅದರಲ್ಲೂ ಪರಿಶಿಷ್ಟ ಜಾತಿ, ವರ್ಗದ ಹತ್ತನೇ ತರಗತಿಯ ಮಕ್ಕಳು ಜಾಸ್ತಿ ಇದ್ದ ಸಮಾರಂಭವದು.

ಹೈಸ್ಕೂಲಿನ ಮಕ್ಕಳು ತಾಂತ್ರಿಕ ಶಿಕ್ಷಣದ ರೀತಿ ನೀತಿಗಳನ್ನು ತಿಳಿಯುವ ವಿಚಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಅಲ್ಲಿತ್ತು. ಸಹಜವಾಗಿಯೇ ಮಕ್ಕಳಿಗೆ ಇಂಜಿನಿಯರಿಂಗ್ ಕಾಲೇಜು ಹೇಗಿರುತ್ತೆ ಎಂಬ ಕುತೂಹಲ. ಇದು ಕೇಂದ್ರ ಸರಕಾರದ ಕಾರ್ಯಕ್ರಮ. ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಲ್ಲಿ ಆಯೋಜಕರು ಹರಿಕೆ ಸಂದಾಯದಂತೆ ಸ್ಟೇಜ್ ಪ್ರೋಗ್ರಾಮ್ ಮಾಡಿ, ಒಂದಷ್ಟು ಮಾಹಿತಿ ಕೊಟ್ಟಂತೆ ಮಾಡಿ ಊಟ, ಚಹ ಕೊಟ್ಟು ಕಳಿಸುವುದುಂಟು. ಆದರೆ ಇಲ್ಲಿ ಹಾಗಾಗಲಿಲ್ಲ ಎಂಬುದಷ್ಟೇ ಸಮಾಧಾನ. ಇರಲಿ. ನಾನು ಈಗ ಹೇಳಹೊರಟಿದ್ದೇನು ಎಂದರೆ, ಆರಂಭದಲ್ಲಿ ಆ ಮಕ್ಕಳಿಗೆ ಪ್ರಾಜೆಕ್ಟರ್ ಮೂಲಕ ಕಾಲೇಜಿನ ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡಲಾಯಿತು. ಅವರಲ್ಲಿದ್ದಿರಬಹುದಾದ ಕೀಳರಿಮೆ ತೊಡೆದು ಹಾಕುವ ಕೆಲಸವನ್ನು ಮೊದಲು ಮಾಡಲಾಯಿತು.

ಹೌದು. ಇಂದು ಕನ್ನಡ ಮಾಧ್ಯಮ ಶಾಲಾ ಮಕ್ಕಳು, ಆಂಗ್ಲ ಮಾಧ್ಯಮ ಶಾಲಾ ಮಕ್ಕಳು, ಸಿಬಿಎಸ್ ಸಿ ಮಕ್ಕಳು, ಸ್ಟೇಟ್ ಸಿಲೆಬಸ್ ಮಕ್ಕಳು, ಅಂತಾರಾಷ್ಟ್ರೀಯ ಸಿಲೆಬಸ್ ಮಕ್ಕಳು, ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವ ಮಕ್ಕಳು, ಶೇ.97ಕ್ಕಿಂತ ಅಧಿಕ ಅಂಕ ಗಳಿಸುವ ಮಕ್ಕಳು…. ಹೀಗೆ ಮಕ್ಕಳಲ್ಲಿ ನಾವು ಭೇದ ಭಾವವನ್ನು ಸೃಷ್ಟಿಸುತ್ತೇವೆ. ನೀವು ಗಮನಿಸಿ. ಮೇಲೆ ಹೇಳಿದ ತರಗತಿಯೋ, ಶಿಕ್ಷಣವನ್ನೋ ಪಡೆಯುವ ಮಕ್ಕಳು ಇನ್ನೊಂದು ಗುಂಪಿಗೆ ಸೇರಲೇನಾದರೂ ಹೊರಟರೆ, ಅವರ ಹೆತ್ತವರೇ ಪ್ರತ್ಯೇಕಿಸಲು ಹೊರಡುವುದೂ ಉಂಟು. ಇಂಥ ಸನ್ನಿವೇಶದಲ್ಲಿ ಹತ್ತನೇ ತರಗತಿ ಮಕ್ಕಳಿಗೆ ಯಾರೂ ಕೆಳಮಟ್ಟದವರಲ್ಲ, ಇನ್ ಫ್ಯಾಕ್ಟ್ ಕೆಳಮಟ್ಟದಲ್ಲಿ ಇದ್ದವರೇ ಜಗತ್ತಿನ ಯಶಸ್ವೀ ಸಾಧಕರಾದರು ಎಂಬುದನ್ನು ಕಾಲೇಜಿನ ಬೋಧಕರು ಹೇಳಿಕೊಟ್ಟು ಮಕ್ಕಳಿಗೆ ಧೈರ್ಯ ತುಂಬಿದರು.

ಇಂಥ ಮೋಟಿವೇಶನ್ ಇಂದಿನ ಕಾಲಮಾನದಲ್ಲಿ ಜರೂರತ್ತಿದೆ. ಆದರೆ ಇದು ಕೇವಲ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ.ಬಹುಪರಾಕು ಹೇಳುವ ರಾಜಕೀಯ ಪಕ್ಷಗಳ ಹಿಂಬಾಲಕರಂತೆ, ಅಧಿಕಾರಿಗಳೂ, ಪ್ರಜೆಗಳೂ ಇಂದು ಮಂತ್ರಿಗಳು, ಸಂಸದರು, ಶಾಸಕರು ಹೇಳಿದಂತೆ ಮಾಡುವ ಪರಿಸ್ಥಿತಿಯನ್ನು ವ್ಯವಸ್ಥೆ ನಿರ್ಮಿಸಿದೆ.

ನೀವು ನಿಮ್ಮ ಸ್ನೇಹಿತರೊಂದಿಗೆ ಊರಿನ ಅಭಿವೃದ್ಧಿ ದೃಷ್ಟಿಯಿಂದ ಯಾವುದಾದರೂ ರಾಜಕಾರಣಿ ಬಳಿ ನಮ್ಮ ರಸ್ತೆಗೆ ಡಾಂಬರು ಹಾಕಿಕೊಡಿ, ಅದಕ್ಕೆ ಈ ಬಾರಿ ಅನುದಾನ ಮೀಸಲಿಡಿ ಎಂಬ ಮನವಿಪತ್ರವನ್ನು ಕೊಟ್ಟು ನೋಡಿ. ನೀವು, ನಿಮ್ಮವರನ್ನು ಯಾವ ಜಾತಿ, ಪಕ್ಷ, ಕುಲ, ಗೋತ್ರ ಎಂದು ಅಳೆಯುವ ಜನಪ್ರತಿನಿಧಿಗಳ ಹಿಂಬಾಲಕರು ಹಾಗೂ ಖುದ್ದು ಜನಪ್ರತಿನಿಧಿಗಳು ಬಳಿಕ ನಿಮ್ಮ ಬೇಡಿಕೆಯನ್ನು ಅಳೆದೂ ತೂಗಿ ಮನ್ನಿಸುತ್ತಾರೆ.

ವಾಸ್ತವವಾಗಿ ಅವರು ಅನುದಾನವನ್ನು ತಮ್ಮ ಕಿಸೆಯಿಂದ ಕೊಡುವುದೇನಲ್ಲ. ಪ್ರತಿಯೊಬ್ಬ ಶಾಸಕ, ಸಂಸದನಿಗೆ ತನ್ನ ಕ್ಷೇತ್ರದಲ್ಲಿ ಖರ್ಚು ಮಾಡಲೆಂದೇ ಇಂತಿಷ್ಟು ಹಣ ಮೀಸಲಿಡಲಾಗಿದೆ. ಅದನ್ನು ಆದ್ಯತೆ ಮೇಲೆ ಕೊಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ನಾನಿಷ್ಟು ಕೊಟ್ಟೆ ಎಂಬ ಹೆಚ್ಚುಗಾರಿಕೆ ಏನೂ ಅದರಲ್ಲಿಲ್ಲ. ಕೊಡದೇ ಇದ್ದರೆ, ಕರ್ತವ್ಯವಿಮುಖರಾದಂತೆ. ಅಂಥ ಸೌಜನ್ಯವಿರುವ ಜನಪ್ರತಿನಿಧಿಗಳು ಇಂದು ವಿರಳ. ಏನಿದ್ದರೂ ನಾನು ಹಣ ಕೊಟ್ಟೆ ಎಂಬ ದೊಡ್ಡಸ್ತಿಕೆ.

ಇದೇ ರೀತಿ ಖಾಸಗಿ ಕಚೇರಿ, ಸಾರ್ವಜನಿಕ ರಂಗದ ಕಚೇರಿಗಳಲ್ಲಿ ಕೆಲಸ ಮಾಡಿಸುವ ಸಂದರ್ಭ ಕಾಣಿಸುತ್ತದೆ. ನೀವು ಯಾವುದಾದರೂ ಅಧಿಕಾರಿಗಳ ಅಥವಾ ಗುಮಾಸ್ತನ (ಸರಕಾರಿ ಕಚೇರಿ) ಬಳಿ ಹೋದರೆ ಕೂಡಲೇ ನಿಮ್ಮ ಕೆಲಸ ಆದರೆ ಅದೊಂದು ಪವಾಡ ಆದಂತೆ.

ನಿಮ್ಮ ಕೆಲಸ ಮಾಡಿಕೊಡುವುದು ಎಂದರೆ ತುಂಬಾ ಕಿರಿಕಿರಿಯ ಸಂಗತಿ, ಕೆಲಸವಾದರೆ ಲಾಭ ಯಾರಿಗೆ ಮಾರಾಯ್ರೇ, ನಿಮಗಲ್ವಾ ಎಂಬ ಮಾತನ್ನು ಅನ್ನಿಸಿಕೊಂಡು ನೀವು ಕಚೇರಿ ತುಂಬ ಓಡಾಡಬೇಕು. ಯಾವುದಾದರೂ ಬ್ಯಾಂಕಿಗೆ ಹೋದರೂ ಅಷ್ಟೇ, ನಿಮ್ಮ ದುಡ್ಡು ತೆಗೆಯಲು ನೀವು ಹೋದಾಗ, ನೀವು ಎಂಥ ಕ್ಯಾಟಗರಿಯ ಕಸ್ಟಮರ್, ಬ್ಯಾಂಕಿಗೆ ನಿಮ್ಮಿಂದ ಏನು ಲಾಭ ಎಂಬುದನ್ನು ಅಳೆದು ತೂಗಿ ಬಳಿಕ ನಿಮ್ಮೊಂದಿಗೆ ನಗಬೇಕೋ, ಮುಖ ದಪ್ಪಗಾಗಿಯೇ ಇರಿಸಬೇಕಾ ಎಂಬುದನ್ನು ಅವರು ನಿರ್ಧರಿಸುತ್ತಾರೆ. ಇದು ಬ್ಯಾಂಕಿಗೆ ಮಾತ್ರವಲ್ಲ ಆಸ್ಪತ್ರೆಗಳಲ್ಲೂ ಅನ್ವಯಿಸುತ್ತದೆ.

ಇಂಥ ಸೂಕ್ಷ್ಮಗಳನ್ನು ಅನುಭವಿಸುವವರು ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ವರ್ಗದ ಜನರು ಮತ್ತು ಯಾವುದೇ ಇನ್ ಫ್ಲೂಯೆನ್ಸ್ ಇಲ್ಲದ ಜನರು. ಓದುಗರಾದ ನೀವು ಈ ಕ್ಯಾಟಗರಿಯಲ್ಲಿ ಇಲ್ಲದೇ ಇದ್ದರೆ ನಿಮಗೆ ಇಂಥ ಅನುಭವ ಆಗಲಿಕ್ಕಿಲ್ಲ .

ಇವೆಲ್ಲ ನಮ್ಮ ನಿಮ್ಮ ಕಣ್ಣ ಮುಂದೆ ನಡೆಯುವ ಸಣ್ಣ ಸಣ್ಣ ಸಂಗತಿಗಳು. ಆದರೆ ನನಗೆ ಸಮಾಧಾನ ಅನ್ನಿಸಿದ್ದು ಆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ-ಶಿಕ್ಷಕರು, ತಮ್ಮಲ್ಲಿಗೆ ಬಂದ ಕನ್ನಡ ಮಾಧ್ಯಮ ಶಾಲೆಯ ಹಿಂದುಳಿದ ವರ್ಗಕ್ಕೆ ಸೇರಿದ ಬಹುಪಾಲು ಮಕ್ಕಳಿದ್ದ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದ್ದು. ಅಬ್ದುಲ್ ಕಲಾಂ ಸಹಿತ ವಿವಿಧ ಗಣ್ಯರ ಪರಿಚಯ, ಅವರು ಬೆಳೆದು ಬಂದ ದಾರಿ, ಬಡತನವನ್ನು ಎದುರಿಸಿದ ಬಗೆಯನ್ನು ವಿವರಿಸಿದ ಇಂಜಿನಿಯರಿಂಗ್ ಕಾಲೇಜಿನ ಮಕ್ಕಳು, ಅಧ್ಯಾಪಕರು ನಿಜಕ್ಕೂ ಪ್ರಶಂಸನಾರ್ಹರು.

ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. ಎಲ್ಲರೂ ಸಮಾನರು ಎಂಬ ತತ್ವ ತಿಳಿಹೇಳಬೇಕಿದೆ. ಸೌಜನ್ಯಪೂರ್ವಕ ನಡವಳಿಕೆ ಕಾಣಬೇಕಿದೆ. ಅದಕ್ಕೂ ಮುನ್ನ ನಾವೆಲ್ಲರೂ ಮನುಷ್ಯರಾಗಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!