X

ಶಿಕ್ಷಕ ಹೇಗಿದ್ದಾನೆ..!!?

ಆಗಸ್ಟ್ ಕಳೆಯಿತು ಇನ್ನೇನು ಸೆಪ್ಟಂಬರ್ ಬಂದೇ ಬಿಡ್ತು. ಸೆಪ್ಟೆಂಬರ್ ೫  ‘ಶಿಕ್ಷಕರ ದಿನಾಚರಣೆ’ ಎಲ್ಲರೂ ತಮ್ಮ ಶಿಕ್ಷಕರು ಹಾಗೆ ಹೀಗೆ ಎಂದೆಲ್ಲ ತಮ್ನ  FB ಗೋಡೆಯ ಮೇಲೆ ಬರೆದು,WhatsApp’ನಲ್ಲಿ DP ಹಾಕಿ ಶಿಕ್ಷಕರಿಗೆ ತಮ್ಮದೊಂದಿಷ್ಟು ಗೌರವ ಕೊಟ್ಟಿದ್ದೇವೆ ಎಂಬ ನಾಟಕವಾಡಿ, ಮುಂದೆ ಬರುವ ಇನ್ಯಾವುದೊ ದಿನಕ್ಕಾಗಿ status ಬರೆದು DP ಬದಲಿಸಲು ಕಾಯುತ್ತಿರುತ್ತಾರೆ..

ಅದೂ ಈ ಬಾರಿ ಗಣೇಶ ಚತುರ್ಥಿ ಇರುವುದರಿಂದ ಶಿಕ್ಷಕರ ದಿನಾಚರಣೆ ನೆನಪಾಗುವುದು ಸಂಶಯ.

ಹಾಗೆ ಕಾಲೇಜಿನಲ್ಲಿ ಕಲಿಯುತ್ತಿರುವವರಿಗೆ  ನಮಗೀಗ ಉಪನ್ಯಾಸಕರು ನಾವೇಕೆ ಶಿಕ್ಷಕರ ದಿನಾಚರಣೆ ಆಚರಿಸಬೇಕು ಎಂದು ಮೊಂಡುವಾದ ಮಂಡಿಸುತ್ತಾ ಇರುತ್ತಾರೆ. ಎಲ್ಲೋ ಅಪರೂಪಕ್ಕೆ ತಾವು ಹೋಗುವ ಬಸ್ಸಿನಲ್ಲಿ ತಮಗೆ ಕಲಿಸಿದ ಶಿಕ್ಷಕ ನಿಂತಿದ್ದರೆ ಎದ್ದು ಸೀಟು ಬಿಟ್ಟುಕೊಡುವ ಸೌಜನ್ಯವನ್ನು ಗೌರವ ಎಂದುಕೊಂಡು ಎದ್ದು ನಿಲ್ಲುತ್ತಾರೆ. ಅದೇ ಕುಳಿತ ಶಿಕ್ಷಕ ‘ಏನೋ ಹೇಗಿದ್ದಿಯೊ?’ ಎಂದು ಕೇಳಿದರೆ ಆತರ ಕಿವಿಯಲ್ಲಿರುವ ear phone’ನ ಸಂಗೀತದ ಘೋರತೆಯಲ್ಲಿ ಅದು ಅವನಿಗೆ ಕೇಳುವುದೇ ಇಲ್ಲ..

ಹೀಗೆ ಕಾಲ ಸಾಗುತ್ತಿದೆ. ಹಾಗೆ ನಮಗೆಲ್ಲ ಕಲಿಸಿದ ಶಿಕ್ಷಕರಿಗೂ ವಯಸ್ಸಾಗುತ್ತಿದೆ.

ಇವೆಲ್ಲದುರ ನಡುವೆ..’ಶಿಕ್ಷಕ’ ಎಲ್ಲಿದ್ದಾನೆ, ನಾವು ಈ ಕಾಡುವ ಪ್ರಶ್ನೆಗೆ ಹುಡುಕ ಬೇಕಾದ ಉತ್ತರ ಎಲ್ಲಿದೆ…ಹೆಚ್ಚಿನವರ ಪ್ರಕಾರ, ‘ಶಿಕ್ಷಕರೆಂದರೆ’…

=> ದಿನದಲ್ಲಿ ೪-೫ ತರಗತಿ ತೆಗೆದುಕೊಂಡು ಖುಷಿಯಲ್ಲಿರುವವರು.

=>ದಿನಾ ಶಾಲೆಯಲ್ಲಿ ಸಿಗುವ ಊಟ,ಹಾಲು ತಿಂದು ಕುಡಿದು ಬೆಳೆಯುತ್ತಿರುವವನು.

=>ಎಲ್ಲಾ ರಜೆಯನ್ನು ಅನುಭವಿಸುವವನು.

=>ಶಿಕ್ಷಕ ಬೆಳಿಗ್ಗೆ ೯ ಕ್ಕೆ ಹೋಗಿ ಸಂಜೆ ೫ ಕ್ಕೆ ಮನೆ ಸೇರುವವನು.

=>ಶಿಕ್ಷಕ ಕನಿಷ್ಠ ಕೆಲಸ ಮಾಡಿ ಗರಿಷ್ಟ ವೇತನ ಪಡೆಯುವವನು.

=>ಶಿಕ್ಷಕ ವರ್ಷಕ್ಕೆ ಎರಡು ಬಾರಿ ತಿಂಗಳುಗಳ ಕಾಲ ರಜೆ ಪಡೆದು ರಜೆಯಲ್ಲು ಸಂಬಳ ಪಡೆಯುವವನು.

ನಿಜಕ್ಕೂ ವಾಸ್ತವ ಹೀಗೆ ಇದೆಯಾ? ಎಂಬುದೆ ಪ್ರಶ್ನೆ…

ನೀವೆಲ್ಲ ೧೦-೧೫ ವರ್ಷಗಳ ಹಿಂದೆ ಅಥವಾ ಅದಕ್ಕೂಅದಕ್ಕೂ ಹಿಂದೆ SSLC ಮುಗಿಸಿದವರಾದರೆ, ನಿಮ್ಮ ಚಿಕ್ಕಮ್ಮ ಚಿಕ್ಕಪ್ಪ ಅಥವಾ ಮಾವನ ಮಕ್ಕಳೊ ಇಲ್ಲ ನಿಮ್ಮ ಪಕ್ಕದ ಮನೆಯವರ ಮಗ/ಮಗಳು High schoolನಲ್ಲಿ ಕಲಿಯುತ್ತಿದ್ದರೆ ಈಗಿನ ಅವರ ಮಾತಿನ ವೈಖರಿ,ಚರ್ಚೆಯ ವಿಷಯ,ಹಾಗೆ ನಡವಳಿಕೆ ಜೊತೆಗೆ ಶಿಕ್ಷಕರ ಬಗ್ಗೆ ಅವರ ಅಭಿಪ್ರಾಯ ನಿಮ್ಮ ಕಾಲದಂತೆ ಇದೆಯಾ ಚಿಂತಿಸಿ ನೋಡಿ.ಹಾಗೆ ಸ್ವಲ್ಪ ನಿಮ್ಮ ಅಂದಿನ ನಡವಳಿಕೆಯಲ್ಲು ಈಗಿನ ವಿದ್ಯಾರ್ಥಿಗಳೊಂದಿಗೆ ಸಮೀಕರಿಸಿ ನೋಡಿ.ನಿಮಗೆ ತಿಳಿಯುತ್ತದೆ.ಇಂತಹ ವಾತಾವರಣದಲ್ಲಿ ಕಲಿಸುತ್ತಿರುವ ಶಿಕ್ಷಕರನ್ನು ಉಹಿಸಿ ನೀವೆ ಕಲ್ಪಿಸಿ

ಕಾಲ ಎಲ್ಲವನ್ನೂ ಬದಲಾಯಿಸಿತು,ವಿದ್ಯಾರ್ಥಿಗಳ ಮನಸ್ಥಿತಿ ಜೊತೆಗೆ ಅವರ ಮನೆ ಸ್ಥಿತಿಯನ್ನು ಕೂಡ,ಬದಲಾಗಲೇ ಬೇಕು. ಈ ಬದಲಾವಣೆಗೆ ತಕ್ಕಂತೆ ಶಿಕ್ಷಕನ ಕಾರ್ಯದೊತ್ತಡ, ಕೆಲಸಗಳು ಹಾಗೆ ಬದಲಾದ ಪಠ್ಯಕ್ರಮದ ಒಟ್ಟೊಟ್ಟಿಗೆ ಬದಲಾದ ಮಕ್ಕಳು ಈ ಎಲ್ಲಾ ಸನ್ನಿವೇಶ,ಸಂದರ್ಭದ ನಡುವೆ ಶಿಕ್ಷಕನೊಳಗೆ ಸದಾ ಕಾಡುವ ಆತಂಕ,ಯಾರಿಗೂ ಹೇಳಲಾಗದ ವೇದನೆ. ತನ್ನ ತಲೆ ಮೇಲೆ ಯಾರಿಗೂ ಕಾಣದ ಭಾರ ಹೊತ್ತು ಸದಾ ನಡೆಯುತ್ತಲೇ ಇರುತ್ತಾನೆ.ಅದಕ್ಕೆ ಸಾಕ್ಷಿಯೆಂಬಂತೆ ಕೈಯ್ಯಲೊಂದು ಚೀಲ, ಅದರಲ್ಲಿಷ್ಟು ಪುಸ್ತಕ, answer sheets,Records, ಇತ್ಯಾದಿಗಳು ಆತನನ್ನು ಹೊರಗಡೆಯಿಂದ ಕಾಣುವವರಿಗೆ, ಆತನಿಗೆ ಭೂಷಣವೆಂಬಂತೆ ಕಂಡರು ಶಿಕ್ಷಕನಿಗೆ  ನುಂಗಲಾರದ ತುತ್ತಾಗಿದೆ. ಆತ ಕೆಲಸಕ್ಕೆ ಸೇರಿಯಾಗಿದೆ ಇಲ್ಲೆ ಇರಬೇಕು ಎಂದುಕೊಂಡು ದುಡಿಯುತ್ತಿದ್ದಾನೆ. ಅದೇ ಸೀಮೆ ಸುಣ್ಣದ ಧೂಳನ್ನು ನುಂಗುತ್ತಾ,ಕೆಮ್ಮವನ್ನು ಸಹಿಸುತ್ತಾ,ಶೀತವನ್ಮು ತಡೆಯುತ್ತಾ,ಅದೇ ಸೀಮೆ ಸುಣ್ಣದ ಪುಡಿಯನ್ನು ತಲೆಯಿಂದ ಒರೆಸುತ್ತಾ ಮಕ್ಕಳು ಕಲಿಯಲಿ ಎಂದು ಕಲಿಸುತ್ತಿರುತ್ತಾನೆ. ಆದರೆ ಅವನಿಗೆ ಸಿಕ್ಕ ಮತ್ತು ಸಿಗುತ್ತಿರುವ ಗೌರವ ಮಾತ್ರ ಪ್ರಶ್ನಾತೀತ.

ಆತನೀಗ ಕಾಮುಕನೆನಿಸಿಕೊಳ್ಳುತ್ತಿದ್ದಾನೆ. ಆತನೀಗ ಕಟುಕ  ಎನಿಸಿಕೊಳ್ಳುತ್ತಿದ್ದಾನೆ. ಮಕ್ಕಳ ಪಾಲಿಗೆ ಶತ್ರುವಾಗುತ್ತಿದ್ದಾನೆ. ಪೋಷಕರ ಪಾಲಿಗೆ ತಮ್ಮ ಮಕ್ಕಳು ಉತ್ತಮ ಫಲಿತಾಂಶ ತರಿಸಲಾಗದ ನಿಷ್ಪ್ರಯೋಜಕ ಒಬ್ಬ ಸಾಮಾನ್ಯ ಕೆಲಸಗಾರನಾಗಿದ್ದಾನೆ. ಇದೇ ವಿಪರ್ಯಾಸ ಇದೇ ದುರಂತ.

ಪರಿಸ್ಥಿತಿ ಹೇಗೆ ಬದಲಾಗಿದೆ ಗೊತ್ತೆ ಶಿಕ್ಷಕ ಶಾಲೆಗೆ ಬಂದು ತನ್ನ ಕೊಠಡಿಯಲ್ಲಿ ಒಂದರೆಗಳಿಗೆ ಕೂರಲಾಗದಷ್ಟು, ಕಲಿತ ಹೊಸ ವಿಷಯ ಮಕ್ಕಳಿಗೆ  ತಿಳಿಸಲು ಸಮಯವಿಲ್ಲದಷ್ಟು, ತರಗತಿಯಲ್ಲಿ ಪಾಠ ಮಾಡುವಾಗ ಕೀಟಲೆ ಕೊಡುವ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗದಷ್ಟು ಅಸಹಾಯಕನಾಗಿದ್ದಾನೆ, ಅದೇ ಮಕ್ಕಳ ಕೀಟಲೆಯಿಂದ ಬಂದ ಸಿಟ್ಟನ್ನು ಗಂಟಲಲ್ಲಿ ನುಂಗಿಕೊಂಡು ಪಾಠ ಮಾಡುತ್ತಿದ್ದಾನೆ, ಅಷ್ಟೇ ಏಕೆ ತಲೆ ಮೇಲೆ ಇರುವ CCTV ನಡುವೆ, ಕೈಯಲ್ಲಿ ಬೆತ್ತ ಹಿಡಿಯದೆ, ಮಕ್ಕಳಿಗೆ ಬೈಯದೆ, ಹೊಡೆಯಲಾಗದೆ, ದಿಟ್ಟಿಸಲೂ ಆಗದೆ, ಅತ್ತ ಪೋಕಿರಿಗಳ ಅನುತ್ತಿರ್ಣಗೊಳಿಸಲಾಗದೆ. ಅದೇ ಮಕ್ಕಳ ಉಢಾಫೆ ಮಾತುಗಳ ಕೇಳುತ್ತಾ, ಅವರ ಕೀಟಲೆ ಸಹಿಸುತ್ತಾ ಬದುಕುತ್ತಿದ್ದಾನೆ. ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ರಕ್ಷಕ-ಶಿಕ್ಷಕ ಸಭೆಗೆ ಬರುವ ಪೋಷಕರು ತಮ್ಮ ಮಕ್ಕಳ ಪ್ರಗತಿಯನ್ನು ನೋಡದೆ, ಶಿಕ್ಷಕರನ್ನು ಏರು ದ್ವನಿಯಲ್ಲೇ ಮಾತಾಡಿಸಿ ‘ನೀವು ಹಾಗೆ ನೀವು ಹೀಗೆ ನಿಮ್ಮದೆ ತಪ್ಪು’ ಎಂದು ತಮ್ಮ ಉಡಾಳ ಮಗನನ್ನು ಸಮರ್ಥಿಸಿಕೊಳ್ಳುವ ಪೋಷಕರು ತಮ್ಮ ಮಗನ ಬೆನ್ನು ತಟ್ಟುತ್ತಲೆ ಇರುತ್ತಾರೆ.

ಇವೆಲ್ಲವನ್ನು ಸಹಿಸಿ, ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ಶಿಕ್ಷಕ ಎಂದೋ ಸಿಗುವ ಸಂಬಳದ ನಿರೀಕ್ಷೆಯಲ್ಲಿ ತನ್ನ ಎರಡು ಮಕ್ಕಳ ಸಂಸಾರವನ್ನು ದೂರದೂರಿನ ಬಾಡಿಗೆ ಮನೆಯಲ್ಲಿ ಸಾಗಿಸುತ್ತಿರುತ್ತಾನೆ. ಇತ್ತ ಮನೆಯಲ್ಲಿ ಅಪ್ಪ ಮಗನ ದುಡ್ಡು ಬರಲಿಲ್ಲವೆಂದು,’ಮಗ ಖರ್ಚಿಗೆ ಕೊಡುವುದಿಲ್ಲವೆಂದು ದೂರುತ್ತಿರುತ್ತಾರೆ’.ಇದು ವಾಸ್ತವ.

ಸುಮಾರು ೧೦-೧೫ ವರ್ಷದ ಹಿಂದೆ ಕಣ್ಣು ಹಾಯಿಸಿ, ನೀವು ೩-೪,ಇಲ್ಲ ೮-೯ ಕಲಿಯುತ್ತಿದ್ದ ದಿನಗಳ ನೆನೆದಾಗ,ಶಿಕ್ಷಕನೆಂದರೆ ಎಷ್ಟೊಂದು ಗೌರವ, ಆದರ,ಪ್ರೀತಿ, ಹಾಗೆ ಶಿಕ್ಷಕನಿಗೆ ತಾನು ಕಲಿಸುವುದು ಯಾರದ್ದೊ ಮಕ್ಕಳಲ್ಲ ನನ್ನ ಮನೆಯ ಮಕ್ಕಳೆಂಬ ಭಾವನೆ. ಇಲ್ಲೂ ಶಿಕ್ಷಕನಿಗೆ ಕೆಲಸವಿತ್ತು, ಪಾಠವಿತ್ತು, ಹಾಗೆ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟು,ತನ್ನ ಇಷ್ಟದಂತೆ ಪಾಠ ಕಲಿಸಿ,ಪಾಠಕ್ಕೆ ಸಂಬಂಧಿಸಿದ ಪರಿಸರವ ಸುತ್ತಿಸಿ ಹೇಳಿಕೊಡುವ ಸ್ವಾತಂತ್ರ್ಯವಿತ್ತು. ಆಗ ಕಲಿಯಲು ಆಸಕ್ತಿಯಿದ್ದವ ಗೆದ್ದ ಸೋಮಾರಿ ಸೋತ. ಇದು ಕಲಿಕೆಯ ಗುಣಮಟ್ಟದ ಜೊತೆಗೆ ಶಿಕ್ಷಕನಿಗೆ ಗೌರವವನ್ನು ಉಳಿಸಿತ್ತು.

ಶಿಕ್ಷಕನ ಮನೆಯ ಛಾವಣಿ ಹುಲ್ಲಿಂದಾದರೂ,ಓಡಾಡಲು ಸೈಕಲ್ ಇದ್ದರೂ ಎಲ್ಲಾ ತೋರುವ ಗೌರವ-ಆದರ ಆತನನ್ನು ಶ್ರೀಮಂತಗೊಳಿಸಿತ್ತು. ಆಗ ಯಾವುದೊ ಒಂದು ಸಮಾರಂಭದಲ್ಲಿ ಹೊದೆಸಿದ ಶಾಲು ಅವನಿಗೆ ಸಂಪತ್ತಾಗುತ್ತಿತ್ತು.

ಆದರೆ ಈಗ ಪರಿಸ್ಥಿತಿ ಹೇಗಾಗಿದೆ ನಿಮಗೆ ಗೊತ್ತಿಲ್ಲ ಅಕ್ಷರ ದಾಸೋಹ, ಕ್ಷೀರ ಭಾಗ್ಯ, ನಲಿ-ಕಲಿ,ಪುಸ್ತಕ ವಿತರಣೆ,ಸಮವಸ್ತ್ರ ವಿತರಣೆ,ಮಕ್ಕಳ ಗಣತಿ,ಮಕ್ಕಳ ಆರೋಗ್ಯ ಕಾರ್ಡು,CCE,Students data,ಆಧಾರ್ ಕಾರ್ಡ್ ನೊಂದಾವಣೆ,ಜಾತಿ ಪತ್ರದ ನೊಂದಾವಣೆ,ಇತ್ಯಾದಿಗಳು,

 ಸಾಲದಕ್ಕೆ ವರ್ಷಕ್ಕೊಮ್ಮೆ ಬರುವ ಚುನಾವಣೆಗಳು,ಜಾತಿ ಗಣತಿ, ಬಾಲಕಾರ್ಮಿಕರ ಗಣತಿ ಇತ್ಯಾದಿಗಳು ಶಿಕ್ಷಕನ ಕೊರಳಿಗೆ ಕಟ್ಟಿದ ಕೊರಡಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಕಚೇರಿಯನ್ನು ಬಿಟ್ಟು ಶಾಲೆಗಳನ್ನೆ ಬಳಸಿಕೊಳ್ಳುತ್ತದೆ. ಶಿಕ್ಕಕರ ಬೆವರ ಬೇಡುತ್ತದೆ.

ಇವೆಲ್ಲದುರಗಳ ನಡುವೆ ಪ್ರತಿಭಾಕಾರಂಜಿ, ಕಲಿಕೊತ್ಸವ, ಮಕ್ಕಳ ಹಬ್ಬ,ಮಾದರಿ ತಯಾರಿಕೆ,ವಿವಿಧ ಕ್ರೀಡಾಕೂಟಗಳಿಗೆ ತಯಾರಿ ಅದರಲ್ಲೂಅದರಲ್ಲೂ ಗೆಲ್ಲಲೇ ಬೇಕಾದ ಅನಿವಾರ್ಯತೆ, ಇಷ್ಟೇ ಅಲ್ಲದೆ ತರಗತಿ ಮೇಲ್ವಿಚಾರಣೆ, ಶಿಸ್ತು ಸಂಘಟನೆ,ನೈರ್ಮಲ್ಯ ಪಾಲನೆ,ಇತ್ಯಾದಿಗಳ ಹೊಣೆಗಾರಿಕೆ.

ಮೇಲೆ ಹೇಳಿದ ಎಲ್ಲಾ ಹೊಣೆಗಾರಿಕೆಯ ಜೊತೆಗೆ ವರ್ಷದ ಪಾಠ, ಘಟಕಕ್ಕೊಂದರಂತೆ ಪರೀಕ್ಷೆ, ಪೂರಕ ಪಾಠ,ಕಿರು ಪರೀಕ್ಷೆಗಳು, ಜೊತೆಗೆ ಮದ್ಯವಾರ್ಷಿಕ,ವಾರ್ಷಿಕ ಪರೀಕ್ಷೆಗಳಿಗೆ ತಯಾರಿ,ಪರಿಶೀಲನೆ ಫಲಿತಾಂಶ ಕ್ರೋಢೀಕರಣ ಇತ್ಯಾದಿಗಳು.

ಇದರೊಂದಿಗೆ ನಡೆಯುವ ವಾರದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ದಿನಗಳ ಕಾರ್ಯಕ್ರಮ ಕ್ಕೆ ತಯಾರಿ,ಶಾಲಾ ಕ್ರೀಡಾ ಕೂಟ,ವಾರ್ಷಿಕೊತ್ಸವ,ಇತ್ಯಾದಿ ದಿನಾಚರಣೆಗಳು..ಇವೆಲ್ಲವನ್ನು ಶಿಕ್ಷಕ ತನಗೆ ಇರುವ ೫-೬ ತರಗತಿ ಮಾಡಿ,ಪಾಠ ತಯಾರಿ ನಡೆಸಿ,ಎಲ್ಲಾ ರಜೆಯ ಕಳೆದು ಸಿಗುವ ಕೆಲವೇ ಕೆಲವು ದಿನಗಳಲ್ಲಿ ಪೂರ್ತಿಗೊಳಿಸಬೇಕು..

ಮೇಲೆ ತಿಳಿಸಿದ ಎಲ್ಲಾ ಹೊಣೆಗಾರಿಕೆ ಜೊತೆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡುತ್ತಿದ್ದಾನೆ. ಅದರಲ್ಲೂ ಮೊದಲೇ ಹೇಳಿದಂತೆ ಹೊಡೆಯಲು, ಬೈಯಲು, ಇಲ್ಲ ದಿಟ್ಟಿಸಲೂ ಆಗದೆ ಪಾಠ ಮಾಡುತ್ತಿದ್ದಾನೆ. ಏನೇ ಮಾಡಿದರೂ ಅಪರಾಧ, ಎಲ್ಲೋ ಆಕಸ್ಮಿಕ ನಡೆದರೆ ೧೫ ದಿನ ಮಾಧ್ಯಮಗಳಿಗೆ ಆಹಾರ ಆಗುವ ಭೀತಿ. ಕೆಲಸ ಸಿಗದ ಪರಿಸ್ಥಿತಿ.

ಹೀಗೆ ಮಕ್ಕಳು ಬೆಳೆದು fail ಅನ್ನುವ ಪರಿಕಲ್ಪನೆ ಇಲ್ಲದೆ, ಈಗೆಲ್ಲ  ೧೦ರಲ್ಲಿ ಕುಳಿತ್ತಿದ್ದಾರೆ. ಈಗ ಪಬ್ಲಿಕ್ ಪರೀಕ್ಷೆ ಎಂಬ ಪೆಡಂಭೂತ ಇದೆ ಎಂಬ ಸತ್ಯ ತಿಳಿದಿದ್ದರು ತಮ್ಮ ಹಳೆಯ ಚಾಳಿ ಇಲ್ಲೂ ತೋರುವ ಮಕ್ಕಳಿಂದ ಹೇಗೆ ಫಲಿತಾಂಶ ನಿರೀಕ್ಷಿಸ ಬಲ್ಲ. ಪ್ರತಿ ತಿಂಗಳು ನಡೆಯುವ ಪರೀಕ್ಷೆಯ ಫಲಿತಾಂಶ ಹಿಡಿದು ಶಾಲಾ ಮುಖ್ಯಸ್ಥರಿಗೆ ಇಲ್ಲ ಶಾಲಾ ವ್ಯವಸ್ಥಾಪಕ ಮಂಡಳಿಗೆ ಕೊಡುವಾಗ ಶಿಕ್ಷಕ ಅವರು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದಕ್ಕೆ ವಿದ್ಯಾರ್ಥಿಗಳಿಗಿಂತ ಜಾಸ್ತಿ ತಯಾರಿ ನಡೆಸಬೇಕಾದ ಅನಿವಾರ್ಯತೆಗೆ ಸಿಕ್ಕಿಕ್ಕೊಳ್ಳುವ ಗೋಳು ದೇವರಿಗೆ ಪ್ರೀಯ..ಕೊನೆಗೆ ಒಳ್ಳೆಯ ಫಲಿತಾಂಶ ಬಂತೊ ಶಿಕ್ಷಕ ಉಳಿದ. ಅದೂ ೧೦೦% ದೊಂದಿಗೆ ಹೆಚ್ಚಿನವರು distinction ಬಂದರೆ ಮಾತ್ರ..

ಇಂತ ಫಲಿತಾಂಶಕ್ಕಾಗಿ ಶಿಕ್ಷಕ ಅದೆಷ್ಟು ರಜೆದಿನಗಳಲ್ಲಿ special class’ಗಳನ್ನು, ದಿನಾ ಸಂಜೆ,ಮಧ್ಯಾವಧಿ ರಜೆಯಲ್ಲಿ,ಕೆಲವೊಮ್ಮೆ ಸಂಜೆವರೆಗು ಮಕ್ಮಳ ತಿದ್ದಿ ತೀಡುವ ಶಿಕ್ಷಕ ತನ್ನ ಸಂಸಾರ ಜೊತೆಗಿರುವ ಸಮಯ, ತನ್ನ ಖುಷಿಯ ತ್ಯಾಗ ಮಾಡಿರುವುದು ಯಾರಿಗೂ ಕಾಣುವುದಿಲ್ಲ, ಕಾರಣ ಶಿಕ್ಷಕನೀಗ ಸಂಶಯದ ಕೇಂದ್ರವಾಗಿದ್ದಾನೆ. ಹಾಗಿದ್ದರೆ ಅವನು ರಾತ್ರಿ ಬರೆಯುವ Records,paper corrections ಯಾರಿಗೆ ತಿಳಿಯುತ್ತದೆ, ಇಲ್ಲಿ ಅವನು ರಜೆಯಲ್ಲೂ ಕೆಲಸದವನಾಗಿ ಶಾಲೆಗಾಗೆ ದುಡಿಯುತ್ತಿರುತ್ತಾನೆ.

ಈ ಎಲ್ಲಾ ಸತ್ಯ ಗೊತ್ತಿರುವುದು ಶಿಕ್ಷಕನ ಮನೆಯವರಿಗೆ ಮತ್ತೆ ಆತನ ಜೊತೆಗೆ ಇರುವವರಿಗೆ ಮಾತ್ರ. ಹತ್ತಿರದಲ್ಲಿ ಕಂಡಾಗಲೇ ಗೊತ್ತಾಗುವುದು ಶಿಕ್ಷಕ ವೃತ್ತಿಯ ಆಳ-ಅಗಲ.ಹಾಗಾಗಿಯೆ ಇಂದಿನ ಯುವಕರು ಶಿಕ್ಷಕ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರಿ ಕೆಲಸ ಕನಸಾದ ಮೇಲೆ ಖಾಸಗಿ ಸಂಸ್ಥೆಗಳ ಸಂಬಳ ಖರ್ಚಿಗೂ ಸಾಕಾಗದ ಪರಿಸ್ಥಿತಿ.

ಇತ್ತ ಸೆಪ್ಟಂಬರ್ ೫ ರಂದೊ ಇಲ್ಲ ಅದರ ನಂತರದ ದಿನ ಸರ್ಕಾರ ಅದಾವುದೊ ಕಾಲೇಜಿನಲ್ಲೊ ಇಲ್ಲ ಪುರಭವನದಲ್ಲೊ, ಜಿಲ್ಲೆಗೆ ಸಂಬಂಧ ಪಟ್ಟ ಎಲ್ಲಾ ಶಿಕ್ಷಕರನ್ನು   ಕರೆಸಿ ಸಮಾರಂಭ ನಡೆಸಲು ತಯಾರಿ ನಡೆಸುತ್ತದೆ. ಅಂದು ವೇದಿಕೆಯಲ್ಲಿ ರಾಜಕಾರಣಿಗಳು ಶಿಕ್ಷಕರಿಗಿಂತ ಕಡಿಮೆ ಕಲಿತವರು,ಶಿಕ್ಷಣದ ಕಾನೂನನ್ನು ರಚಿಸಿದವರು, ಶಿಕ್ಷಕರನ್ನು ಉದ್ದೇಶಿಸಿ ಶಿಕ್ಚಣ ಎಂದರೆ ಹಾಗೆ ಹೀಗೆ ನೀವು ಮಕ್ಕಳಿಗೆ ಹಾಗೆ ಕಲಿಸಿ, ಹೀಗೆ ಕಲಿಸಿ ಎಂದು ಉದ್ದುದ್ದ ಕೊಚ್ಚುತ್ತಿರುತ್ತಾನೆ…

ಇದನೆಲ್ಲ ಕೇಳಿ ಒಳಗೊಳಗೆ ತನ್ನ ಗ್ರಹಚಾರವ ಹಳಿಯುತ್ತಾ ನಾಳಿನ ಪಾಠ ಹೇಗೆ ಮಾಡಲಿ ಎಂದು ಚಿಂತಿಸುತ್ತಿರುತ್ತಾನೆ…ಜ್ಞಾನದ ದೀವಿಗೆ ಕೈಗೆ ಕೊಟ್ಟು ಅಂಧಕಾರವ ಓಡಿಸುವವ ಶಿಕ್ಷಕ. ಇದು ತುಂಬ ಹಳೆ ಮಾತು..ಈಗ ಶಿಕ್ಷಕ ತೆರೆದ ಬಾಗಿಲಿನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾನೆ.ಈಗ ಅವನ ಹಣೆಬರಹ ಅವನದೇ ವಿದ್ಯಾರ್ಥಿಗಳು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ…

ನನಗೆ ಬರೆಯಲು ಕಲಿಸಿ, ಓದಲು ತಿಳಿಸಿ, ನನ್ನ ವ್ಯಕ್ತಿತ್ವ ರೂಪಿದ ಸಮಸ್ತ ಗುರುಗಳಿಗೆ ‘ಶಿಕ್ಷಕರ ದಿನದ ಶುಭಾಶಯಗಳು’….

-Prakash Avarse

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post