X

ಜೇನು ತೋರುಗನ ಜೀವನವೇ ಸೋಜಿಗ!

ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಹಳೆಯದಾಯಿತು. ಹೂವು ಮೊದಲೋ ಹಕ್ಕಿ ಮೊದಲೋ ಎಂಬ ಪ್ರಶ್ನೆ ಕೇಳಿ ತಲೆಯೊಳಗೆ ಹುಳ ಬಿಡುತ್ತಿದ್ದರು ನಮ್ಮ ಮೇಷ್ಟ್ರು. ಹೂವಿಗೆ ವರ್ಣ,ಸುವಾಸನೆ, ಆಕಾರ, ಸೌಂದರ್ಯ ಇತ್ಯಾದಿಗಳೆಲ್ಲ ಪ್ರಾಪ್ತಿಯಾಗುವುದು ಗಿಡವು ತನ್ನನ್ನು ತಾನು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಖುಷಿ ಪಡಲಿ ಎಂಬ ಕಾರಣಕ್ಕಲ್ಲ. ಅಥವಾ ಆ ಹೂವನ್ನು ಕಂಡು ಮೂಸಿ ಆನಂದಿಸಿ ಕವಿಗಳು ಥಾನುಗಟ್ಟಲೆ ಪದ್ಯ ಬರೆದು ಹಾಡಿಕೊಳ್ಳಲಿ ಎಂದೂ ಅಲ್ಲ. ಹೂವುಗಳನ್ನು ಕಂಡು ಆಕರ್ಷಿತವಾಗಿ ಬಳಿ ಸಾರಿದ ಜೀವಿಗಳು ಮಕರಂದ ಹೀರಿ, ಅಲ್ಲಿನ ಪರಾಗರೇಣುವನ್ನು ಇನ್ನೊಂದು ಹೂವಿನ ಹೊಟ್ಟೆಗೆ ಹಾಕಲಿ ಎಂಬುದಷ್ಟೇ ಅಲ್ಲಿನ ಉದ್ದೇಶ. ಹಣ್ಣಿಗೆ ಬಣ್ಣ-ರುಚಿ ಬರುವುದು ಕೂಡ ಇದೇ ಕಾರಣಕ್ಕೆ. ಗಾಢ ಬಣ್ಣ ಕಣ್ಣು ಕುಕ್ಕುವುದರಿಂದ ಪ್ರಾಣಿ ವರ್ಗ ಹತ್ತಿರ ಬಂದು ಕಳಿತ ಹಣ್ಣನ್ನು ಕೊಯ್ದು ದೂರ ದೂರಕ್ಕೆ ಬೀಜ ಪ್ರಸಾರ ಮಾಡಲಿ ಎಂಬುದು ವೃಕ್ಷದ ಹಿಡನ್ ಅಜೆಂಡಾ. ಹಾಗಾದರೆ ಹೂವು, ಕಾಯಿ,ಹಣ್ಣುಗಳನ್ನು ಉತ್ಪಾದಿಸುವಂತೆ ಮರಕ್ಕೆ ಪ್ರೇರಣೆ ಕೊಟ್ಟವರು ಯಾರು? ನಿನ್ನ ಹೂವು ಹಣ್ಣುಗಳನ್ನು ಅರಸಿ ಬರುವವರಿರುತ್ತಾರೆಂದು ಅದಕ್ಕೆ ಹೇಳಿದವರ್ಯಾರು? ಯಾರ ಉಪದೇಶ-ಪ್ರವಚನಗಳೂ ಇಲ್ಲವೆಂದ ಮೇಲೆ, ಮರಕ್ಕೆ, ತನ್ನನ್ನು ತಾನು ಹೇಗೆ ಸಿಂಗರಿಸಿಕೊಳ್ಳಬೇಕೆಂಬ ಪ್ರಜ್ಞೆಯೂ ಜೀವವಿಕಾಸದ ದಾರಿಯಲ್ಲಿ ನಿಧಾನವಾಗಿ ಬೆಳೆಯುತ್ತ ಬಂದಿದೆ ಎಂದೇ ಆಯಿತಲ್ಲ? ಪ್ರಾಣಿ ಮತ್ತು ವೃಕ್ಷಗಳ ಅವಿನಾಭಾವ ಸಂಬಂಧವನ್ನು ಹೆಣೆದ ಆ ಅದೃಶ್ಯ ದಾರ ಎಲ್ಲಿದೆ? ತೇನ ವಿನಾ ತೃಣಮಪಿ ನ ಚಲತಿ ಎನ್ನುತ್ತೇವಲ್ಲ; ಇದೆಲ್ಲವೂ ಆ ಯಾವ ಕಾಣದ ಕೈಗಳ ಆಟ?

ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದಂತೆಲ್ಲ ಈ ಪ್ರಶ್ನೆ ಹೆಜ್ಜೆ ಹೆಜ್ಜೆಗೂ ಕಾಡಲು ಶುರುವಾಗಿ ಬಿಡುತ್ತದೆ. ಇಡೀ ಪ್ರಪಂಚವೇ ಒಂದಕ್ಕೊಂದು ಸೂಕ್ಷ್ಮವಾಗಿ ಹೆಣೆದುಕೊಂಡ ದೊಡ್ಡ ಜಾಲ. ಸಾವಿರಾರು ಇಸ್ಪೀಟಿನ ಎಲೆಗಳನ್ನು ನಾಜೂಕಾಗಿ ಇಟ್ಟು ಕಟ್ಟುತ್ತ ಹೋಗಿರುವ ಸೌಧ. ಎಲ್ಲೋ ಒಂದೆಡೆ ನಡೆಯುವ ಪುಟ್ಟದೊಂದು ಬದಲಾವಣೆ ಇನ್ನೊಂದೆಡೆಯ ಮಹಾ ವಿಪ್ಲವಕ್ಕೆ ಮುನ್ನುಡಿ ಬರೆಯುತ್ತಿರಬಹುದು. ಅದಕ್ಕೇ ಗಣಿತದಲ್ಲೊಂದು ಮಾತು ಇದೆ: “ಅಮೆಝಾನ್ ಕೊಳ್ಳದ ಪತಂಗವೊಂದು ರೆಕ್ಕೆ ಬಡಿದದ್ದೇ ಕಾರಣವಾಗಿ ಇನ್ನೂರು ವರ್ಷಗಳ ನಂತರ ಚೀನಾದಲ್ಲಿ ಚಂಡಮಾರುತ ಹುಟ್ಟಬಹುದು”,ಎಂದು. ಒಟ್ಟಲ್ಲಿ, “ಎಲ್ಲವ ಬೆಸೆದಿದೆ ಏನೋ ಒಂದು”ಎಂಬುದಂತೂ ಖರೆ. ಈ ಪೀಠಿಕೆಗೆ ಪೂರಕವೆನ್ನುವ ಕತೆಯೊಂದನ್ನು ಹೇಳುತ್ತೇನೆ ಕೇಳಿ.

ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಚಿಗುರಿ ನಿಂತಿರುವ ಕೆನ್ಯಾ ದೇಶದಲ್ಲಿ ಮಸಾಯಿ ಮಾರ ಜನಾಂಗವಿದೆ. ಕೆನ್ಯಾದ ಬಯಲುಗಳು ಸಪಾಟ. ದೂರದರ್ಶಕವಿದ್ದರೆ ಇಲ್ಲಿನ ಬಯಲುಗಳಲ್ಲಿ ಮಲಗಿಯೂ ಸುತ್ತಲ ಏಳೆಂಟು ಮೈಲಿ ದೂರದ ಜಗತ್ತನ್ನು ಕಾಣಬಹುದು. ಚಿರತೆಗಳಿಗೆ ಹೇಳಿ ಮಾಡಿಸಿದಂತಿರುವ ಈ ನೈಸರ್ಗಿಕ ರೇಸ್ ಟ್ರ್ಯಾಕ್‍ಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಜೀವನ್ಮರಣ ಹೋರಾಟ ನಡೆಯುತ್ತಲೇ ಇರುತ್ತದೆ. ಇಲ್ಲಿನ ಮೂಲ ನಿವಾಸಿಗಳಾದ ಮಸಾಯಿ ಜನ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಲು ಕಲಿತವರು. ಯಾವ ಪ್ರಾಣಿ ಪಕ್ಷಿಯನ್ನೂ ಅನವಶ್ಯಕವಾಗಿ ನೋಯಿಸಬಾರದು,ಕೊಲ್ಲಬಾರದು. ಮನುಷ್ಯ ಪ್ರಕೃತಿಯ ಶಿಶುವೆಂಬ ಎಚ್ಚರವನ್ನಿಟ್ಟುಕೊಂಡೇ ತನ್ನ ಪ್ರತಿ ಹೆಜ್ಜೆಯನ್ನೂ ಇಡಬೇಕೆಂದು ವಾದಿಸುವ ಜನ ಇವರು. ಮಸಾಯಿಗಳು ತಮ್ಮ ನಾಡೊಳಗೆ ಬಿಟ್ಟುಕೊಂಡ ಆಧುನಿಕ ಸಂಗತಿಗಳೆಂದರೆ ಸಫಾರಿಗೆ ಬಳಸುವ ವಾಹನ ಮತ್ತು ಛಾಯಾಗ್ರಹಿಸಲು ಉಪಯೋಗಿಸುವ ಕ್ಯಾಮರಗಳು ಮಾತ್ರ. ಹೊರಗಿಂದ ಪ್ರತಿದಿನ ಬರುವ ವಿದೇಶೀಯರೊಂದಿಗೆ ಸರಾಗವಾಗಿ ಇಂಗ್ಲೀಷಿನಲ್ಲಿ ವ್ಯವಹರಿಸಬಲ್ಲ ಮಸಾಯಿಗಳು ಬಿಳಿ ತೊಗಲಿಗೆ ಮರುಳಾಗಿ ತಮ್ಮತನವನ್ನು ಬಿಟ್ಟು ಕೊಟ್ಟಿಲ್ಲ. ಇಂದಿಗೂ ಅವರಿಗೆ ಅವರದ್ದೇ ರಾಜ್ಯ ವ್ಯವಸ್ಥೆ, ಭಾಷೆ, ವೈದ್ಯ, ಕಾನೂನು,ಸಂಸ್ಕತಿ ಇದೆ. ಕಾಡಿನ ಹಿಂಸ್ರ ಮೃಗಗಳ ಜೊತೆ ಮಸಾಯಿಗಳು ಅನ್ಯೋನ್ಯ ಜೀವನ ನಡೆಸುತ್ತಿರುವುದನ್ನು ಕಂಡಾಗ ಅಚ್ಚರಿಯಾಗುತ್ತದೆ.”ಹೆದರಬೇಡಿ. ಮನುಷ್ಯನಷ್ಟು ಕ್ರೂರಿಗಳೇನಲ್ಲ ಇವು”ಎಂದು ಮಸಾಯಿಯ ಯುವಕ ಬೆದರಿ ಬೆವರೊಡೆದ ಪ್ರವಾಸಿಗರಿಗೆ ಸಮಾಧಾನ ಹೇಳುತ್ತಾನೆ.

ಇಂಥ ನೆಲದಲ್ಲಿ ಇರುವ ಹಕ್ಕಿಯೇ ಜೇನುತೋರುಗ. ಇಂಗ್ಲೀಷಿನಲ್ಲಿ ಇದನ್ನು ಹನಿಗೈಡ್ ಎಂದು ಕರೆಯುತ್ತಾರೆ. ಒಟ್ಟು ಹದಿನೇಳು ಪ್ರಭೇದಗಳಿದ್ದರೂ ಅವುಗಳಲ್ಲೆಲ್ಲ ಹೆಚ್ಚು ಪ್ರಸಿದ್ಧವಾದದ್ದು, ಹೆಚ್ಚು ವ್ಯಾಪಕವಾಗಿ ಕಣ್ಣಿಗೆ ಬೀಳುವುದು ದ ಗ್ರೇಟರ್ ಹನಿಗೈಡ್ ಅಥವಾ ದೊಡ್ಡ ಜೇನುತೋರುಗನೆಂದು ಕರೆಯಲ್ಪಡುವ ಹಕ್ಕಿ. ಉಳಿದವೆಲ್ಲ ನಾಲ್ಕೂವರೆಯಿಂದ ಏಳೂವರೆ ಇಂಚಿನಷ್ಟು ಉದ್ದಕ್ಕೆ ಬೆಳೆದರೆ ದೊಡ್ಡ ಜೇನುತೋರುಗ, ಎಂಟು ಇಂಚು – ಅಂದರೆ ಅಜಮಾಸು ಇಪ್ಪತ್ತು ಸೆಂಟಿಮೀಟರ್‍ಗಳಷ್ಟು ಉದ್ದಕ್ಕೆ ತನ್ನ ಮೈ ಬೆಳೆಸಿಕೊಳ್ಳಬಲ್ಲುದು. ಗಂಡು ಜೇನುತೋರುಗನಿಗೆ ತಲೆ-ಕತ್ತುಗಳು ಕಪ್ಪು, ಹೊಟ್ಟೆಯಡಿ ಬಿಳಿ, ಗುಲಾಬಿ ಬಣ್ಣದ ಚುಂಚ, ಮುಖದ ಇಕ್ಕೆಲದಲ್ಲಿ ಕಿವಿಯಂತೆ ಕಾಣುವ ಆಕಾರದಲ್ಲಿ ಬೂದು ಬಣ್ಣದ ಪುಟಾಣಿ ವೃತ್ತಗಳು, ಬೆನ್ನ ಮೇಲೆ ಚಿನ್ನದ ಸರಿಗೆಯೇನೋ ಎಂಬಂತೆ ಮಿಂಚುವ ಹಳದಿ ರೇಖೆ, ರೆಕ್ಕೆ ಬಿಚ್ಚಿದರೆ ಗರಿಗರಿಯಾಗಿ ಹರಡಿಕೊಳ್ಳುವ ಕಪ್ಪು-ಬಿಳಿ ಗೆರೆಗಳ ಚಿತ್ತಾರ. ಹೆಣ್ಣು ಜಾತಿಗೆ ಇಷ್ಟೆಲ್ಲ ವರ್ಣ ವೈವಿಧ್ಯವಿಲ್ಲ. ಅದರ ತಲೆಯಿಂದ ಬಾಲದ ತುದಿಯವರೆಗೆ ಕಂದು-ಬೂದುಗಳ ನಡುವಿನ ಬಣ್ಣವೇ ಹರಡಿಕೊಂಡಿರುತ್ತದೆ. ಹೊಟ್ಟೆ ಮಾತ್ರ ಅವಕ್ಕೂ ಗಂಡಿನಂತೆಯೇ ಬಿಳಿಯೋ ಬಿಳಿ. ಹುಲ್ಲುಗಾವಲು,ಬಯಲು ಪ್ರದೇಶಗಳ ಹೆಚ್ಚಿನ ಹಕ್ಕಿಗಳಂತೆ ಇವೂ ಹುಲ್ಲಿನ ಮೆಳೆಯಲ್ಲಿ ಕಾಣ ಸಿಗುವ ಕೀಟಗಳು ಮತ್ತು ಹುಳ ಹುಪ್ಪಟೆಯನ್ನು ಹಿಡಿದು ತಿನ್ನುತ್ತವೆ. ಕಣಜದ ಹುಳುವಿನ ಮೊಟ್ಟೆ, ಲಾರ್ವಾ ಬಲು ಇಷ್ಟ ಇವಕ್ಕೆ.

ಜೇನುತೋರುಗ ಒಂದು ಪರಾವಲಂಬಿ ಹಕ್ಕಿ. ಕೋಗಿಲೆಯಂತೆ ಇದೂ ಪರಪುಟ್ಟ. ಅಂದರೆ ತಾನಾಗಿ ಗೂಡು ಹೆಣೆಯುವ ಕಷ್ಟ ತೆಗೆದುಕೊಳ್ಳದೆ ಈಗಾಗಲೇ ಗೂಡು ನಿರ್ಮಿಸಿ ಸಂತತಿ ಬೆಳೆಸುವ ಕೆಲಸಕ್ಕೆ ಅಣಿಯಾಗುತ್ತಿರುವ ಹಕ್ಕಿಗಳನ್ನು ಇದು ಆರಿಸಿಕೊಳ್ಳುತ್ತದೆ. ಆಫ್ರಿಕದ ಬಯಲುಗಾಡುಗಳಲ್ಲಿ ಕಂಡುಬರುವ ಕಳ್ಳಿಪೀರನ (ಬೀ ಈಟರ್ ಎಂಬ ಹಕ್ಕಿ) ಗೂಡೆಂದರೆ ಜೇನುತೋರುಗನಿಗೆ ಅಚ್ಚುಮೆಚ್ಚು. ಮೊಟ್ಟೆಯಿಟ್ಟು ಮುಂದಿನ ತಲೆಮಾರಿಗೆ ಶ್ರೀಕಾರ ಹಾಕಬೇಕೆನಿಸಿದಾಗ ಜೇನುತೋರುಗ, ಈಗಾಗಲೇ ಗೂಡು ಕಟ್ಟಿ ತಯಾರಾಗಿರುವ ಕಳ್ಳಿಪೀರ ಹಕ್ಕಿಗಳ ಮನೆಯೊಳಗೆ ಉಪಾಯವಾಗಿ ನುಗ್ಗಿ ತನ್ನ ತತ್ತಿಗಳನ್ನಿಡುತ್ತದೆ. ಅದೂ ಹೇಗೆನ್ನುತ್ತೀರಿ? ಆ ಹಕ್ಕಿಯ ಮೊಟ್ಟೆ ಯಾವ ಗಾತ್ರ, ಆಕಾರ, ಬಣ್ಣದಲ್ಲಿದೆಯೋ ಅಂಥಾದ್ದೇ ಗಾತ್ರ-ಆಕಾರ-ಬಣ್ಣದ ಮೊಟ್ಟೆ ಇದರದ್ದು! ಅಮಾಯಕ ಕಳ್ಳಿಪೀರನ ಮೊಟ್ಟೆ ನಸುನೀಲಿ ಇದ್ದರೆ ಜೇನುತೋರುಗನದ್ದೂ ಅದೇ ಬಣ್ಣ. ಅಲ್ಲಿ ಅಚ್ಚ ಬಿಳುಪಿನದ್ದಿದ್ದರೆ ಇದರದ್ದೂ ಸೇಮ್ ಸೇಮ್! ಮೊಟ್ಟೆ ಚಿಕ್ಕದಾದರೆ ಇದರದ್ದೂ ವಾಮನಾಕಾರ. ಒಟ್ಟಾರೆಯಾಗಿ, ಎಲ್ಲೋ ಹೊಟ್ಟೆ ಹೊರೆಯಲು ಹೋಗಿದ್ದ ತಾಯಿ ಹಕ್ಕಿಗೆ, ತನ್ನ ಗೂಡಿಗೆ ಮರಳಿ ಬಂದಾಗ, ಏನಾಗಿ ಬಿಟ್ಟಿತೆಂಬ ಗೊಂದಲ ಹುಟ್ಟುವಂತಹ ಪರಿಸ್ಥಿತಿ. ಯಾವುದು ತನ್ನದು ಯಾವುದು ಪರರದ್ದೆಂಬ ವ್ಯತ್ಯಾಸವೇ ತಿಳಿಯದ್ದರಿಂದ ಅದು ತನ್ನ ದುರ್ದೈವ ಹಳಿಯುತ್ತ ಎಲ್ಲ ಮೊಟ್ಟೆಗಳಿಗೂ ಒಂದೇ ಬಗೆಯಲ್ಲಿ ಕಾವು ಕೊಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ.

ಇಷ್ಟೇ ಆಗಿದ್ದರೆ ಪರವಾಯಿಲ್ಲ ಎನ್ನಿ. ಆದರೆ ಇಲ್ಲಿ ಎರಡು ಘೋರ ದುರಂತಗಳು ಸಂಭವಿಸುತ್ತವೆ. ಮೊದಲನೆಯದಾಗಿ ಪರಕೀಯರ ಗೂಡಲ್ಲಿ ಹೊಟ್ಟೆಯ ಭಾರ ಕಳೆದುಕೊಳ್ಳಲು ಬಂದ ಜೇನುತೋರುಗ ತನ್ನ ಮೊಟ್ಟೆ ಇಡುವ ಜೊತೆಗೇ ಈಗಾಗಲೇ ಗೂಡಲ್ಲಿದ್ದ ಮೊಟ್ಟೆಗಳನ್ನು ಕುಟ್ಟಿ ಪರಚಿ ಕುಕ್ಕಿ ಅವೆಂದೂ ಮರಿಗಳಾಗದಂತೆ ನಾಶಪಡಿಸುತ್ತದೆ. ಮೊಟ್ಟೆಯ ಭಿತ್ತಿಯಲ್ಲಿ ಸಣ್ಣದೊಂದು ಬಿರುಕು ಮೂಡಿದರೂ ಭ್ರೂಣ ಮರಿಯಾಗಿ ರೂಪುಗೊಳ್ಳುವುದು ಸಾಧ್ಯವಿಲ್ಲ. ಆದರೆ ಎಲ್ಲ ಸಮಯದಲ್ಲೂ ಜೇನುತೋರುಗ ಗೂಡಿನ ಇತರ ಮೊಟ್ಟೆಗಳನ್ನು ಹಾಳುಗೆಡವುತ್ತದೆಂದೇನೂ ಇಲ್ಲ. ಕೆಲವು ಸಲ ಅದು ವಿಶಾಲ ಹೃದಯಿಯಾಗುವುದೂ ಉಂಟು! ಎರಡನೆಯದಾಗಿ, ಈ ಎಲ್ಲ ಮೊಟ್ಟೆಗಳು ಒಂದೆರಡು ವಾರಗಳ ಕಾವಿನ ಶಾಖ ಪಡೆದು ಒಂದು ದಿವ್ಯ ಗಳಿಗೆಯಲ್ಲಿ ಭಿತ್ತಿಯೊಡೆದು ಮರಿಗಳಾಗಿ ಹೊರ ಬರುತ್ತವೆ ತಾನೇ? ಹಾಗೆ ಬಂದಾಗ ಕಳ್ಳಪೀರನ ಮರಿಗಳಿಗಿಂತ ಈ ಜೇನುತೋರುಗನ ಮರಿಗಳು ಸ್ವಲ್ಪ ದೊಡ್ಡ ಗಾತ್ರದವಾಗಿರುತ್ತವೆ. ಅದೂ ಓಕೆ ಅನ್ನಿ. ಆದರೆ ಆ ಹಕ್ಕಿಗಳ ಕೊಕ್ಕುಗಳ ತುತ್ತತುದಿಯಲ್ಲಿ ಎರಡು ಮುಳ್ಳಿನಂತಹ ರಚನೆಯೂ ಇರುತ್ತದೆ. ಹುಟ್ಟಿದ ಒಂದೆರಡು ವಾರ ಅಂಡಜಗಳಿಗೆ ದೃಷ್ಟಿ ಕಾಣದು. ಬೆಕ್ಕಿನ ಮರಿಗಳಂತೆ ಅವುಗಳದ್ದೂ ಅಂಧಕಾರದ ಜೀವನ. ಆದರೆ ತನ್ನ ಸುತ್ತಮುತ್ತಲಿನ ಮೊಟ್ಟೆಗಳಿಂದ ಹೊರ ಬಂದ ಮರಿಗಳು ತನ್ನ ಜಾತಿಯವವಲ್ಲವೆಂಬುದನ್ನು ಅದ್ಯಾವುದೋ ಅಂತರ್ಬೋಧೆಯಿಂದ ತಿಳಿಯುವ ಜೇನುತೋರುಗದ ಮರಿ, ಗೂಡಿನಲ್ಲಿ ಹಿರಿಯರಿಲ್ಲದಾಗ ತನ್ನ ಅಕ್ಕಪಕ್ಕದ ನವಜಾತ ಪಕ್ಷಿಗಳನ್ನು ಕೊಕ್ಕಿನ ತುದಿಯ ಮುಳ್ಳಿನಂಥ ಆಯುಧದಿಂದ ಕುಕ್ಕಿ, ಕತ್ತನ್ನು ಕಚ್ಚಿ ಭೀಕರವಾಗಿ ಸಾಯಿಸಿ ಬಿಡುತ್ತದೆ! ಅಂದರೆ ಮೊಟ್ಟೆಯಿಂದ ಹೊರ ಬಂದ ಕೆಲವೇ ಗಂಟೆಗಳಲ್ಲಿ ಆ ಹಕ್ಕಿಗಳು ಇಹಲೋಕದ ಯಾತ್ರೆ ಮುಗಿಸಿ ಸ್ವರ್ಗ ಸೇರಿ ಬಿಡುತ್ತವೆ! ಅವನ್ನು ಗೂಡಿನಿಂದ ಹೊರ ಹಾಕಿ ವಿರಾಜಮಾನವಾಗುವ ಈ ಮರಿ ಈಗ ಅಳಿದ ಊರಿನ ಉಳಿದ ಗೌಡ! ಹುಟ್ಟಿದ ಒಂದು ವಾರದಲ್ಲಿ ಅದರ ಅಕ್ಕಪಕ್ಕದ ಮರಿಗಳೆಲ್ಲ ಹೀಗೆ ಯಮಪುರಿಗೆ ಹೋದ ಮೇಲೆ ಕೊಕ್ಕಿನ ತುದಿಯ ಚಾಕುವಿಂದೇನು ಪ್ರಯೋಜನ? ಅದು ನೈಸರ್ಗಿಕವಾಗಿ ಬಿದ್ದು ಹೋಗಿ ಸಹಜ ಕೊಕ್ಕೊಂದೇ ಉಳಿದುಕೊಳ್ಳುತ್ತದೆ!

ಎಂಥಾ ವಿಪರ್ಯಾಸ ನೋಡಿ! ಪರರ ಮನೆಯಲ್ಲಿ ಹುಟ್ಟಿ ಬೆಳೆದು ಅದೇ ಮನೆಯ ಉಳಿದೆಲ್ಲ ಸದಸ್ಯರನ್ನು ಬರ್ಬರವಾಗಿ ಹುಗಿದು ಹಾಕಿ ಅಲ್ಲಿನ ಎಲ್ಲ ಸುಖ ಸೌಕರ್ಯಗಳನ್ನೂ ತಾನೊಂದೇ ಅನುಭವಿಸಿ, ಮಲತಾಯಿಯಿಂದ ಹುಳು ಹುಪ್ಪಟೆ ದಕ್ಕಿಸಿಕೊಂಡು ಸುಪುಷ್ಟವಾಗಿ ಬೆಳೆದು ಪೂರ್ಣಾವತಾರಿಯಾಗಿ ಒಂದು ದಿನ ಗೂಡಿಂದ ಹೊರ ಬಂದು ಪ್ರಪಂಚಕ್ಕೆ ಸಲ್ಲುವ ಜೇನುತೋರುಗನ ಬದುಕಿನ ಒಂದು ಅಧ್ಯಾಯವಷ್ಟೇ ಇದು! ಇದಕ್ಕೆ ಜೇನುತೋರುಗನೆಂಬ ಹೆಸರು ಬಂದದ್ದೇಕೆಂಬ ತನಿಖೆಗೆ ಇಳಿದರೆ ಅದಿನ್ನೊಂದು ವಿಸ್ಮಯದ ಪ್ರಪಂಚ. ಜೇನುತೋರುಗ ಬಯಲುಗಾಡಿನಲ್ಲಿ ಸಿಕ್ಕುವ ಹುಳುಹುಪ್ಪಟೆ, ಕಾಳುಕಡಿ,ಕ್ರಿಮಿಕೀಟಗಳನ್ನೇನೋ ತಿನ್ನಬಲ್ಲುದು. ಜೊತೆಗೆ ಮರಗಳಲ್ಲಿ ಮಾರಿನಷ್ಟು ಉದ್ದಕ್ಕೆ ತೊನೆದಾಡುವ ಜೇನುಗೂಡಿನ ಮೇಣವನ್ನೂ ತಿಂದು ಕರಗಿಸಿಕೊಳ್ಳಬಲ್ಲುದು. ಮೇಣವನ್ನು ಕರಗಿಸಿ ಪಚಯಿಸುವ ಒಂದು ವಿಶಿಷ್ಟವಾದ ಬ್ಯಾಕ್ಟೀರಿಯಾ ಜೇನುತೋರುಗನ ಹೊಟ್ಟೆಯಲ್ಲಿದೆ. ಅದೇನೋ ಸರಿ,ಆದರೆ ಜೇನಿನ ಮೇಣ ತೆಗೆಯುವುದಾದರೂ ಹೇಗೆ?ಈ ಹಕ್ಕಿಯ ಮೈತೊಗಲು ದಪ್ಪವೇ ಆದರೂ ಗೂಡಿನ ಬಳಿ ಬಂದ ಶತ್ರುವನ್ನು ಸಹಸ್ರ ಮೊಳೆ ಹೊಡೆದಂತೆ ಮುತ್ತಿಕೊಂಡು ಕಚ್ಚೀಪಚ್ಚಿ ಹೊಡೆದೋಡಿಸುವುದರಲ್ಲಿ ಜೇನ್ನೊಣಗಳೇನೂ ಹಿಂದೆ ಬಿದ್ದಿಲ್ಲವಲ್ಲ? ಹಾಗಾಗಿ ಜೇನುತೋರುಗ ಬಯಲ ಮರದ ರೆಂಬೆಯಲ್ಲಿ ಕೂತು ಕಾಯುತ್ತದೆ. ಕಾಯುವುದು ಯಾರಿಗಾಗಿ ಎಂದರೆ ಮನುಷ್ಯರಿಗಾಗಿ!

ಕಾಡಿನಲ್ಲಿ ಏನಾದರೂ ಹೊಟ್ಟೆ ಪಾಡಿಗೆ ಆಹಾರ ಗಿಟ್ಟುತ್ತದೋ ಎಂದು ಹುಡುಕುತ್ತ ಬರುವ ಹುಡುಗರಿಗೂ ಈ ಹಕ್ಕಿಯ ಗುಟ್ಟು ಗೊತ್ತು! ಅವರು ಅದಕ್ಕೆಂದೇ ಒಂದು ವಿಚಿತ್ರ ಬಗೆಯ ಸಿಳ್ಳು ಹಾಕುತ್ತ ಆ ದಾರಿಯಲ್ಲಿ ಎಚ್ಚರದಿಂದ ಹೆಜ್ಜೆ ಇಡುತ್ತ ಸುತ್ತಮುತ್ತ ನಿರುಕಿಸುತ್ತಾರೆ. ಮನುಷ್ಯರ ಇಂಥ ಸಿಳ್ಳೆಯನ್ನು ಕೇಳಿದೊಡನೆ ಚುರುಕಾಗುವ ಜೇನುತೋರುಗ, ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ದೇವತೆಯಂತೆ, ಮನುಷ್ಯರೆದುರು ತನ್ನನ್ನು ಪ್ರಕಟಪಡಿಸುತ್ತದೆ. ಸಿಳ್ಳೆಗೆ ಪ್ರತಿಸಿಳ್ಳೆ ಹೊಡೆದು ತನ್ನ ಹಾಜರಿ ಹಾಕುತ್ತದೆ. ಬನ್ನಿ ಬನ್ನಿ ತೋರಿಸುತ್ತೇನೆ ಎಂದು ತನ್ನದೇ ಭಾಷೆಯಲ್ಲಿ ಹೇಳುತ್ತದೆ! ಹೀಗೊಂದು ಹಕ್ಕಿ-ಮನುಷ್ಯನ ಮಾತುಕತೆ ನಡೆದ ಮೇಲೆ ಮುಂದಿನದ್ದೆಲ್ಲ ಕಟ್ಟುಕತೆಯೆಂಬಷ್ಟು ವಿಚಿತ್ರ ವಿದ್ಯಮಾನಗಳೇ. ಜೇನುತೋರುಗ ಮನುಷ್ಯರನ್ನು ಕರೆಯುತ್ತ ಮರದಿಂದ ಮರಕ್ಕೆ ಹಾರುತ್ತದೆ. ಕೇವಲ ಐವತ್ತರವತ್ತು ಅಡಿಗಳಷ್ಟು ದೂರಕ್ಕೆ, ಕೊಂಬೆಯಿಂದ ಕೊಂಬೆಗೆ ಹಾರುತ್ತ, ತನ್ನ ಮನುಷ್ಯ ಸಂಗಾತಿಗಳನ್ನು ಕರೆಯುತ್ತ, ದಾರಿ ತೋರುತ್ತ ಅದು ಬಯಲಿನ ನಡುವಲ್ಲಿ ಅವರನ್ನು ಅಕ್ಷರಶಃ ಕರೆದುಕೊಂಡು ಹೋಗುತ್ತದೆ. ಹೀಗೆ ಸುಮಾರು ಅರ್ಧ-ಒಂದು ಮೈಲಿ ನಡೆಸಿದ ಮೇಲೆ ಕೊನೆಗೊಂದು ಮರದ ಮೇಲೆ ಕೂತು ತನ್ನ ಕೂಗಿನ ಧ್ವನಿಯನ್ನು ಬದಲಿಸಿ, ಇದೇ ನೋಡಪ್ಪ! ನನ್ನ ಕೆಲಸ ಪೂರೈಸಿದ್ದೇನೆ ಎಂಬ ಸೂಚನೆ ಕೊಡುತ್ತದೆ. ಸಿಳ್ಳೆಯಲ್ಲಾದ ಬದಲಾವಣೆಯನ್ನು ತಕ್ಷಣ ಗುರುತಿಸುವ ಮಸಾಯಿ ಹುಡುಗರು ಹಕ್ಕಿ ಹೇಳಿದ ಮರವನ್ನು ಹತ್ತಿ ಗೆಲ್ಲು-ಬಲ್ಲೆಗಳನ್ನು ಸರಿಸಿದರೆ ನೋಡುವುದೇನು,ನಾಟ್ಯರಂಗದ ಪಡದೆಯಂತೆ ಇಳಿ ಬಿದ್ದು ತೊನೆದಾಡುವ ಜೇನುಗೂಡು! ಇನ್ನು ಕೆಲವೊಮ್ಮೆ ಆಫ್ರಿಕದ ಜೇನುಗಳು ರೆಂಬೆಗೆ ಜೋತು ಬೀಳದೆ ಮರದ ಟೊಳ್ಳು ಪೊಟರೆಯೊಳಗೆ ಜೇನುಗೂಡು ನೆಡುವುದೂ ಉಂಟು. ಮೇಲ್ನೋಟಕ್ಕೆ ತುಸುವೂ ಕಾಣಿಸದ ಇಂಥ ಗೂಡುಗಳನ್ನೂ ಜೇನುತೋರುಗ ಪತ್ತೆಹಚ್ಚಿ ತೋರಿಸುತ್ತದೆ. ಅದೇನಾದರೂ ಮಸಾಯಿಗಳನ್ನು ಕೈ ಹಿಡಿದು ಕರೆದೊಯ್ದು ಕೊನೆಗೊಂದು ಮರದಲ್ಲಿ ಕೂತು ಸಿಳ್ಳೆ ಹೊಡೆದರೆ,ಮತ್ತು ಆ ಮರದ ಹೊರಗೆಲ್ಲೂ ಗೂಡು ಕಾಣಿಸದಿದ್ದರೆ, ಅದರ ಟೊಳ್ಳು ಕಾಂಡದೊಳಗೆ ಜೇನಿನ ಭಂಡಾರವೇ ಇದೆ ಎಂದರ್ಥ. ಕಾಂಡಕ್ಕೆ ಕೊಡಲಿ ಏಟು ಕೊಟ್ಟು ತೂತು ಕೊರೆದು ಕೈ ಇಳಿಸಿದರೆ ಜೇನು ಮೆತ್ತಿಕೊಳ್ಳುವುದು ಬಹುತೇಕ ಖಚಿತ!

ಮಸಾಯಿಯ ಮಂದಿ ಹೀಗೆ ಅನಾಯಾಸವಾಗಿ ಸಿಕ್ಕಿದ ಜೇನಿನ ನಿಧಿಯ ಬುಡಕ್ಕೆ ಮೊದಲು ಹೊಗೆ ಹಾಕುತ್ತಾರೆ. ಜೇನುಗಳು ಅಮಲೇರಿ ತೇಲಾಡುವ ಆ ಸುಮುಹೂರ್ತದಲ್ಲಿ ಬೇಗಬೇಗ ಜೇನಿನ ಗಟ್ಟಿಗಳನ್ನು ಹೊರಗೆಳೆದು ಜೋಳಿಗೆ ತುಂಬಿಸಿಕೊಳ್ಳುತ್ತಾರೆ. ಅಷ್ಟೋ ಇಷ್ಟೋ ಜೇನನ್ನು ಅಲ್ಲೇ ಕೂತು ಕಚಕಚನೆ ತಿಂದು ಹೊಟ್ಟೆ ತಂಪು ಮಾಡಿಕೊಳ್ಳುತ್ತಾರೆ. ಎಲ್ಲ ಕೆಲಸ ಮುಗಿದು ಹೊರಡುವ ಹೊತ್ತಲ್ಲಿ ತಮ್ಮ ಬೇಟೆಯ ದೊಡ್ಡ ತುಂಡೊಂದನ್ನು ತೆಗೆದು ಅಲ್ಲೇ ಮರದ ಪಕ್ಕದಲ್ಲಿ ಕಲ್ಲೊಂದರ ಮೇಲಿಟ್ಟು ಜೇನುತೋರುಗನಿಗೆ ಸಮರ್ಪಿಸುತ್ತಾರೆ. ಮನುಷ್ಯರು ಅತ್ತ ಹೋಗುತ್ತಲೇ ಈ ಹಕ್ಕಿ ಹಾರಿ ನೆಗೆದು ತನ್ನ ಪಾಲಿನ ಜೇನನ್ನು ಚಪ್ಪರಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಜೇನುಗೂಡು ತೋರಿಸಿದ ಹಕ್ಕಿಗೆ ಪಾಲಿಡದಿದ್ದರೆ ಮುಂದಿನ ಸಲ ಅದು ನಿಮ್ಮನ್ನು ಹಾವಿನ ಹುತ್ತಕ್ಕೋ ಸಿಂಹದ ಗುಹೆಗೋ ಕರೆದುಕೊಂಡು ಹೋಗಬಹುದು ಎಂಬ ನಂಬಿಕೆ ಅಲ್ಲಿನ ಜನರಲ್ಲಿದೆ. ಇದನ್ನು ಮೂಢನಂಬಿಕೆ ಎನ್ನಲು ನನಗೇಕೋ ಮನಸ್ಸು ಬಾರದು.

ಈ ಜೇನುತೋರುಗ ಕಾಡಿನ ಜೇನುಗೂಡುಗಳನ್ನೆಲ್ಲ ಅಷ್ಟೊಂದು ಕರಾರುವಾಕ್ಕಾಗಿ ಪತ್ತೆ ಹಚ್ಚುವುದು ಹೇಗೆ? ಅರ್ಧ-ಒಂದು ಮೈಲಿ ದೂರದ ದಾರಿಯನ್ನೂ ಅದು ಅಷ್ಟೊಂದು ನಿಖರವಾಗಿ ಹೇಗೆ ನೆನಪಿಟ್ಟುಕೊಳ್ಳುತ್ತದೆ? ಮನುಷ್ಯರ ಸಿಳ್ಳೆಯ ಭಾಷೆಯನ್ನು ಅರ್ಥೈಸಿಕೊಂಡು ಹೇಗೆ ಕೆಲಸಕ್ಕಿಳಿಯುತ್ತದೆ? ಇವೆಲ್ಲ ನಿಜಕ್ಕೂ ನಿಗೂಢ. ಮನುಷ್ಯರು ಈ ಲೋಕದಲ್ಲಿ ಕಾಣಿಸಿಕೊಂಡ ಮೇಲೆ ಹಕ್ಕಿ ಈ ಭಾಷೆ ಕಲಿತಿತೋ, ಹಕ್ಕಿ ತೋರಿದಂತೆ ದಾರಿ ಕ್ರಮಿಸಿದ್ದರಿಂದ ಮನುಷ್ಯರು ಜೇನು ಇಳಿಸುವುದನ್ನು ಕಲಿತರೋ ಹೇಳುವವರು ಯಾರು? ಯಾವ ಜೇನುತೋರುಗವೂ ತನ್ನ ಸ್ವಂತ ತಂದೆ ತಾಯಿಯರ ಆರೈಕೆಯಲ್ಲಿ ಬೆಳೆಯುವುದಿಲ್ಲ. ಹಾಗಾಗಿ ಅವಕ್ಕೆ ಬಾಲಬೋಧೆಯಾಗಿರುತ್ತದೆ ಎನ್ನುವುದಕ್ಕೆ ಅವಕಾಶವೇ ಇಲ್ಲ. ಇನ್ನು ಅದನ್ನು ಬಾಲ್ಯದಲ್ಲಿ ಸಾಕಿ ಸಲಹಿದ ಕಳ್ಳಿಪೀರನಾಗಲೀ ಮರಕುಟಿಗನಾಗಲೀ ಹುಳು ಹುಪ್ಪಟೆ ತಿನ್ನಿಸಿರಬಹುದೇ ಹೊರತು ಜೇನನ್ನೂ ಜೇನುಗೂಡಿನ ಮೇಣವನ್ನೂ ತಿನ್ನಿಸಿರುವುದೇ ಇಲ್ಲ. ಹಾಗಿದ್ದರೂ ಅದು ಜೇನಿನ ಗುರುತು ಹಿಡಿದು ಅದರ ಮೇಣ ತಿನ್ನಲು ಹಪಹಪಿಸುವುದು ಹೇಗೆ? ಹೆಣ್ಣು ಹಕ್ಕಿ ಅಂಡಗಳನ್ನಿಡಲು ಪರಕೀಯರ ಗೂಡಿಗೆ ಹೋದಾಗ ಅಲ್ಲಿರುವ ಮೊಟ್ಟೆಗಳನ್ನೇ ಹೋಲುವ ಪ್ರತಿಕೃತಿಗಳನ್ನಿಡುವ ವಿದ್ಯೆಯನ್ನು ಕಲಿಯುವುದು ಹೇಗೆ? ಹುಟ್ಟಿ ಹೊರ ಬಂದ ಮರಿಗಳು ತಮ್ಮ ಒಡಹುಟ್ಟಿದವರನ್ನು ಒಂದೇ ಬಗೆಯಲ್ಲಿ ಕುಕ್ಕಿ ಸಾಯಿಸಿ ಆಹಾರವನ್ನೆಲ್ಲ ತಮಗಷ್ಟೇ ದಕ್ಕಿಸಿಕೊಳ್ಳುವ ದುಷ್ಟಬುದ್ಧಿ ತೋರಿಸುವುದು ಹೇಗೆ?ಅಂಗೈಯಗಲದ ಪುಟಾಣಿ ಹಕ್ಕಿಯ ಬದುಕಿನಲ್ಲೇ ಇಷ್ಟೊಂದು ಸ್ವಾರಸ್ಯಗಳಿರುವಾಗ ನಾವು ಈ ಅಗಾಧ ಪ್ರಕೃತಿಯ ಅನೂಹ್ಯ ವಿಸ್ಮಯಗಳನ್ನೆಲ್ಲ ಬಿಡಿಸಿ ಅರ್ಥೈಸಿಕೊಳ್ಳುವುದು ಹೇಗೆ, ಸಾಧ್ಯವಾ ಹೇಳಿ!

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post