X

ಕರ್ನಾಟಕದ ಪಕ್ಷ ರಾಜಕಾರಣಕ್ಕೆ ಕಾವೇರಿ ನಲುಗುತ್ತಿದ್ದಾಳೆ!

ಕಾವೇರಿ ನೀರಿಗಾಗಿ ಯುದ್ಧವೊಂದು ಬಾಕಿಯಿದೆ ನೋಡಿ, ಅದನ್ನು ಬಿಟ್ಟರೆ ಕಾವೇರಿಯನ್ನು ಹಿಡಿದೆಳೆದು ಎಷ್ಟೆಲ್ಲಾ ಬೇಳೆ ಬೇಯಿಸಿಕೊಳ್ಳಬಹುದೋ ಅದನ್ನೆಲ್ಲಾ ಎರಡೂ ರಾಜ್ಯಗಳೂ ಈಗಾಗಲೇ ಮಾಡಿಬಿಟ್ಟಿವೆ. ಅದರಲ್ಲೂ ನಮ್ಮ ಕರ್ನಾಟಕದ್ದು ಸಿಂಹಪಾಲು. ರೈತರ ಪರವಾಗಿ ನಿಲ್ಲಬೇಕಿದ್ದ ಸೋ ಕಾಲ್ಡ್ ಪ್ರಜಾಪ್ರತಿನಿಧಿಗಳು ಅದ್ಯಾವಾಗ ತಮ್ಮ ಪ್ರಾತಿನಿಧ್ಯವನ್ನು ಗಟ್ಟಿಮಾಡಿಕೊಳ್ಳ ಹೊರಟರೋ ಅಲ್ಲಿಗೆ ಮತ್ತೆ ನಿರಾಸೆಯ ಮಂಕು ಎಲ್ಲೆಡೆ ಹರಡಿದೆ. ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸುವಾಗ ಸಿದ್ದು ತೀರ್ಮಾನ ಸಂದರ್ಭೋಚಿತ ಎನ್ನಲೇಬೇಕು. ಆದರೆ ಇದರ ನಡುವೆ ನೀರಿನ ವಿಚಾರವನ್ನು ಪಕ್ಷ ದೃಷ್ಠಿಯಿಂದ ನೋಡಿದ ಎಲ್ಲಾ ಶಾಸಕರಿಗೂ,ಮುಖಂಡರಿಗೂ ನಾಚಿಕೆಯಾಗಬೇಕು. ಕಾವೇರಿ ವಿವಾದ ಬಗೆಹರಿಯುವುದೇ ನಮ್ಮ ರಾಜಕಾರಣಿಗಳಿಗೆ ಇಷ್ಟವಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

‘ಎತ್ತು ಎರಿಗೆ, ಕೋಣ ನೀರಿಗೆ’ ಎಂಬ ಮಾತನ್ನು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಚಾಚೂ ತಪ್ಪದೇ ಪಾಲಿಸುತ್ತಿದ್ದಾರಲ್ಲ ಅದಕ್ಕಾದರೂ ಅವರ ವೇತನವನ್ನು ಹೆಚ್ಚಿಸಲೇಬೇಕು..! ಬಹುಮಹಡಿ ಕಟ್ಟಡಗಳ ಎಸಿ ರೂಮ್‍ನಲ್ಲಿ ಕುಳಿತು ನಮ್ಮ ಬಗ್ಗೆ, ನಮಗೆ ಸಿಗಬೇಕಾದ ನೀರಿನ ಬಗ್ಗೆ ಅವರು ಬೇಕಾಬಿಟ್ಟಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ ನಾವು ಮಾತ್ರ ಹಾದಿ ಬೀದಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಲಾಟೆ ಮಾಡಿಕೊಂಡು ಸಾಯಬೇಕು. ಯಾವ ರೀತಿಯ ಪ್ರಜಾತಂತ್ರ ವ್ಯವಸ್ಥೆ ಸ್ವಾಮಿ ಇದು? ಯುವಕರು ರಾಜಕಾರಣಕ್ಕೆ ಬಂದು ಕೊಳಕು ತುಂಬಿರುವ ವ್ಯವಸ್ಥೆಯನ್ನು ಸರಿ ಮಾಡುತ್ತಾರೆ ಎಂಬ ಮಾತು ಸುಳ್ಳಾಯ್ತಲ್ಲ. ಮಾತಿನಿಂದಲೇ ಮರಳು ಮಾಡಿ ನಮ್ಮನ್ನು ಪದೇ ಪದೇ ಯಾಮಾರಿಸುತ್ತಿದ್ದಾರಲ್ಲ? ಇದನ್ನು ನಾವು ಯಾರಲ್ಲಿ ಕೇಳಬೇಕು? ನಮಗಾಗುತ್ತಿರುವ ಅನ್ಯಾಯವನ್ನು ಇನ್ನಾವ ಉಚ್ಛ ವ್ಯವಸ್ಥೆಯ ಮುಂದೆ ಹೇಳಿಕೊಳ್ಳೋಣ ಹೇಳಿ?ಪ್ರಶ್ನೆಗಳೂ ಪ್ರಶ್ನಾತೀತವಾಗುವ ಮಟ್ಟಿಗೆ ರಾಜಕೀಯ ಪ್ರೇರಿತ ಒಂದೊಂದೇ ದಾಳಗಳು ನಮಗೆ ಸಾವಿನ ಕುಣಿಕೆಯನ್ನು ತೊಡಿಸುವುದರಲ್ಲಿ ಸಂದೇಹವೇ ಇಲ್ಲ.

ಪವಿತ್ರ ವ್ಯವಸ್ಥೆಯೆಂದು ನಂಬಿಕೆಯಿಟ್ಟದ್ದ ನ್ಯಾಯಾಂಗವೂ ಏಕಮುಖ ಹಾದಿಯನ್ನು ಅನುಸರಿಸುತ್ತಿರುವುದು ನಮ್ಮ ರಾಜ್ಯಕ್ಕಾದ ಬಹುದೊಡ್ಡ ಹೊಡೆತ. ಕೋರ್ಟ್ ಹೇಳಿದಂತೆ ನಿರ್ವಹಣಾ ಮಂಡಳಿಯೇನಾದರೂ ರಚನೆಯಾದರೆ ನಾವು ಇದ್ದು ಸತ್ತಂತೆ ಎಂಬುದು ರಾಜ್ಯ ಸರ್ಕಾರಕ್ಕೆ ಈಗಾದರೂ ಮನವರಿಕೆಯಾಗಿದೆ ಎಂದೆನಿಸುತ್ತಿದೆ. ಇದುವರೆಗೂ ರಾಜಕೀಯ ಕೆಸರೆರೆಚಾಟಕ್ಕೆ ಸೀಮಿತವಾಗಿದ್ದ ಕರ್ನಾಟಕದ ಮೂರು ಪಕ್ಷಗಳು ಇದಕ್ಕಾಗಿ ಆದರೂ ಒಂದಾಗಲೇಬೇಕು. ಇದು ಜನರು ನಿಮಗೆ ನೀಡುತ್ತಿರುವ ಕೊನೆಯ ಅವಕಾಶ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಪದೇ ಪದೇ ನಿಮ್ಮನ್ನೇ ನಂಬಿ ಕೂರಲು ನಾವು ನೀವು ತಿಳಿದಂತೆ ಬುದ್ಧುಗಳಲ್ಲ. ತಪ್ಪು ನಿಮ್ಮಿಂದಲೇ ಆಗುತ್ತಿದೆ ಎಂಬುದು ರಾಜ್ಯದ ಜನತೆಗೆ ತಡವಾಗಿಯಾದರೂ ಅರಿವಿಗೆ ಬಂದಿದೆ. ನಿಮ್ಮ ಮೇಲಿದ್ದ ಅಲ್ಪ ಸ್ವಲ್ಪ ವಿಶ್ವಾಸವನ್ನೂ ಕಾವೇರುವಂತೆ ಮಾಡಿ ನೀವೇ ಕಳೆದುಕೊಂಡಿದ್ದೀರಿ. ಅದನ್ನು ಪುನಃ ಗಳಿಸಿಕೊಳ್ಳಲು ನಿಮಗಿರುವ ಏಕೈಕ ಮಾರ್ಗ ಕಾವೇರಿ ನೀರು ಹಂಚಿಕೆಯ ವಿವಾದಕ್ಕೊಂದು ಶಾಶ್ವತ ಪರಿಹಾರ ಕಂಡು ಹುಡುಕುವುದು. ಅದು ನಿಮ್ಮಿಂದ ಸಾಧ್ಯವಾಗದ ಹೊರತು ಮುಂದೆ ಬರುವ ಚುನಾವಣೆಗಳಲ್ಲಿ ದಯಮಾಡಿ ನಮ್ಮ ಮನೆ ಬಾಗಿಲಿಗೆ ನಿಮ್ಮ ಲಜ್ಜೆಗೆಟ್ಟ ಮುಖ ಹೊತ್ತು ಯಾವ ಕಾರಣಕ್ಕೂ ಬರಬೇಡಿ.

ರೈತ ಮಿತ್ರರೇ, ನಿಮಗಾಗಿ ಹರಿಯುತ್ತಿದ್ದ ಕಾವೇರಿ ಇದೀಗ ರಾಜಕಾರಣದ ಕಾರಣಕ್ಕಾಗಿ ನಿಮ್ಮಿಂದ ದೂರಾಗುತ್ತಿದ್ದಾಳೆ. ಇದರಲ್ಲಿ ನಿಮ್ಮದೂ ತಪ್ಪಿದೆ. ಬಾಯಾರಿಕೆಯಾದಾಗ ಬಾವಿ ತೋಡುವ ಬುದ್ಧಿಯನ್ನು ಇನ್ನಾದರೂ ಬಿಡಿ. ನೀರು ಇದ್ದಾಗ ಕಾವೇರಿಯ ಸೊಲ್ಲು ಎತ್ತದ ನಾವು,ಬೆಳೆಗಳಿಗೆ ನೀರು ಕಡಿಮೆಯಾಗುತ್ತಿದ್ದಂತೆ ನೀರಿಗಾಗಿ ಪರದಾಡುತ್ತೇವೆ,ಹೊಡೆದಾಡುತ್ತೇವೆ. ಅದರಲ್ಲೂ ಈ ವಿಷಯವನ್ನೂ ಸರ್ಕಾರದ ಮುಂದಿಡುತ್ತೇವೆ. ಅದರ ಬದಲು ಎರಡೂ ರಾಜ್ಯದ ರೈತರು ಕೂತು ಸಮಾಧಾನದಿಂದ ಮಾತನಾಡಿ ಸಮಸ್ಯೆ ಬಗೆಹರಿಸುವ ಬಗ್ಗೆ ನಾವ್ಯಾಕೆ ಯೋಚಿಸಬಾರದು. ಒಳ್ಳೆಯ ಕಾರಣಕ್ಕಾಗಿ ನಡೆಯುವ ಮಾತುಕತೆ ಯಾವತ್ತೂ ಫಲಪ್ರದವಾಗಿಯೇ ಇರುತ್ತದೆ ಎಂಬ ನಂಬಿಕೆ ಇನ್ನೂ ಹಸಿರಾಗಿಯೇ ಇದೆ. ರಾಜಕೀಯದಂಗಳಕ್ಕೆ ಬಿದ್ದ ಎಂತಾ ಸೂಕ್ಷ್ಮ ವಿಚಾರಗಳಾದರೂ ರಾಜಕೀಯ ದಾಳಕ್ಕೆ ಬಲಿಯಾಗದೇ ಹೊರ ಬಂದ ಉದಾಹರಣೆಗಳೇ ಇಲ್ಲ. ಸಂಕಟ ಬಂದಾಗ ವೆಂಕಟರಮಣ ಎಂಬ ಬುದ್ದಿಯನ್ನು ಇನ್ನಾದರೂ ಬಿಟ್ಟು, ನಮ್ಮ ಒಳಿತಿಗಾಗಿ ನಾವೇ ಪರಿಹಾರ ಕಂಡುಕೊಳ್ಳುವುದರಲ್ಲಿ ತಪ್ಪೇನು ಇಲ್ಲ, ಇದನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವುದೂ ಇಲ್ಲ. ಗಂಡ-ಹೆಂಡಿರ ಮಧ್ಯೆ ಕೂಸು ಬಡವಾಯ್ತು ಎಂಬಂತೆ ಕೇಂದ್ರ-ರಾಜ್ಯಗಳ ಕಚ್ಚಾಟದಲ್ಲಿ ಬಲಿಯಾಗುತ್ತಿರುವುದು ನಾವು ಎಂಬುದನ್ನು ಯಾವುದೇ ಕಾರಣಕ್ಕೂ  ಮರೆಯದಿರಿ. ಅಗತ್ಯ ಬಿದ್ದಾಗ ಕಾವೇರಿ ನೆನೆದರೆ, ಮುನಿದ ಕಾವೇರಿ ಕಾವೇರುತ್ತಾಳೆ ಎಚ್ಚರ !.

-ಪವಿತ್ರ ಬಿದ್ಕಲ್‍ಕಟ್ಟೆ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post