X

ಹಿಂಗುಲಾಂಬೆಯ ರಕ್ಷಣೆ ಭಾರತಾಂಬೆಯ ಕರ್ತವ್ಯವಲ್ಲವೇ?

ಸ್ವಾತಂತ್ರ್ಯದ ಇಚ್ಛೆ ಯಾರಿಗಿಲ್ಲ. ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಇನ್ನು ಭೂಮಂಡಲವನ್ನೇ ಭೇದಿಸಿ ಅನ್ಯಗ್ರಹಗಳತ್ತ ಪಾದ ಬೆಳೆಸಿರುವ ಮನುಷ್ಯ ಬಿಟ್ಟಾನೆಯೇ? ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ ಉಳಿಕೆಗೆ-ಗಳಿಕೆಗೆ ಮಹಾಯುದ್ಧಗಳೇ ನಡೆದವು. ಈಗಲೂ ನಡೆಯುತ್ತಲೇ ಇವೆ. ತನ್ನ ಲಾಭಕ್ಕಾಗಿ ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ವೀರರ ಲಕ್ಷಣವಂತೂ ಅಲ್ಲ. ವಿಪರ್ಯಾಸವೆಂದರೆ ಬಹುಜನರ ಸ್ವಾತಂತ್ರ್ಯದ ಬೇಡಿಕೆಯನ್ನು ಬಂದೂಕಿನ ನಳಿಕೆಯಲ್ಲಿ ಮುಚ್ಚಿಡಲಾಗುತ್ತದೆ. ಅದೇ ಕೆಲವೇ ಜನರ ಸ್ವಾರ್ಥದ ಪ್ರತ್ಯೇಕತೆಯ ಹೋರಾಟವು ನಕಲಿ ಮಾನವೀಯತೆಯೆಂಬ ಮುಖ ಹೊಂದಿ ಲೇಖನಿಯ ತುದಿಯಲ್ಲಿ ನಲಿದು ಬಹುಜನರ ಒಂದಾಗುವ ಬೇಡಿಕೆ ಕಾಲಗರ್ಭದಲ್ಲಿ ಮುಚ್ಚಿ ಹೋಗುತ್ತದೆ. ಎರಡರಲ್ಲೂ ಸ್ವಾತಂತ್ರ್ಯದ ಹಸಿವು. ಮೊದಲನೆಯದ್ದರಲ್ಲಿ ನೈಜತೆಯದ್ದು, ಇನ್ನೊಂದರಲ್ಲಿ ಕೊಳ್ಳೆ ಹೊಡೆಯುವಂತಹದ್ದು. ಕೊಳ್ಳೆ ಹೊಡೆಯುವವ ಬಹು ಜನರ ಸ್ವಾತಂತ್ರ್ಯವನ್ನು ಕಿತ್ತು ಹಾಕುವುದೇ ತನಗೆ ಸ್ವಾತಂತ್ರ್ಯ ಎಂದು ಭಾವಿಸಿ ಕಾರ್ಯವೆಸಗುತ್ತಾನೆ. ಹಾಗಾಗಿ ಎರಡರಲ್ಲೂ ಬಲಿಯಾಗುವುದು ನೈಜ ಸ್ವಾತಂತ್ರ್ಯವನ್ನು ಅಪೇಕ್ಷಿಸಿದವರೇ! ಆದರೂ ಈ ಬಂಧನಗಳ ನಡುವೆ ಸ್ವಾತಂತ್ರ್ಯಗಳಿಕೆಯ ಸಣ್ಣದೊಂದು ಮಿಂಚು ಗೋಚರಿಸುತ್ತಲೇ ಇರುತ್ತದೆ. ಈ ಎರಡಕ್ಕೂ ಪಕ್ಕಾ ಉದಾಹರಣೆ ಬಲೂಚಿಸ್ತಾನ್ ಹಾಗೂ ಕಾಶ್ಮೀರ!

ಪಾಕಿಸ್ತಾನದ ಅರ್ಧಕ್ಕೂ ಹೆಚ್ಚು ಭೂಪ್ರದೇಶವನ್ನು ವ್ಯಾಪಿಸಿರುವ ಪ್ರಾಂತ್ಯ ಬಲೂಚಿಸ್ತಾನ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬಲೂಚಿಸ್ತಾನ ನಾಲ್ಕು ಹೋಳಾಗಿತ್ತು. ಒಂದು ಸಣ್ಣ ಪ್ರದೇಶ ಬ್ರಿಟಿಷರ ವಶದಲ್ಲಿದ್ದರೆ. ಉಳಿದ ಮೂರರಲ್ಲಿ ರಾಜರ ಆಳ್ವಿಕೆಯಿತ್ತು. ಆದಾಗ್ಯೂ ಕಲಾಟ್ ಪ್ರಾಂತ್ಯದ “ಖಾನ್”ನ ಮಾತೇ ಬಲೂಚಿಸ್ತಾನದಾದ್ಯಂತ ನಡೆಯುತ್ತಿದ್ದುದು. ಬ್ರಿಟಿಷರು ಈ ದೇಶ ಬಿಟ್ಟು ಹೋಗುವಾಗ ಕಲಾಟಿನ ಖಾನ್ ಭಾರತದೊಟ್ಟಿಗೆ ತನ್ನ ಸಂಸ್ಥಾನವನ್ನು ವಿಲೀನಗೊಳಿಸಬಯಸಿದ. ಆದರೆ ನೆಹರೂ ಬಲೂಚ್ ಭಾರತದೊಟ್ಟಿಗೆ ಭೂಸಂಪರ್ಕ ಹೊಂದಿಲ್ಲ ಎನ್ನುವ ಬಾಲಿಶ ಕಾರಣವೊಡ್ಡಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದರು. ಭಾರತೀಯರು ಇನ್ನೂ ಗುಲಾಮೀ ಮನಃಸ್ಥಿತಿಯಿಂದ ಹೊರ ಬಂದಿರಲಿಲ್ಲ ಎನ್ನುವುದಕ್ಕೆ ಸ್ವತಂತ್ರ ಭಾರತದಲ್ಲಿ ನೆಹರೂವಿಗೆ ಪರಮಾಧಿಕಾರ ಕೊಟ್ಟುದುದೇ ಸಾಕ್ಷಿ! ಇಲ್ಲದಿದ್ದರೆ ಕೇವಲ 300ಕಿಮೀ ಜಲ ಮಾರ್ಗವೊಂದು ಭಾರತ-ಬಲೂಚನನ್ನು ಜೋಡಿಸಿರುವಾಗ, ಮುಕ್ತ ವಾಯುಮಾರ್ಗ ಇರುವಾಗ ಭೂಸಂಪರ್ಕವಿಲ್ಲ ಎಂದು ವಿಲೀನದ ಪ್ರಸ್ತಾಪವನ್ನೇ ತಿರಸ್ಕರಿಸಿದ ಮೂರ್ಖನೊಬ್ಬ ಭಾರತೀಯರಿಗೆ ಯಾವ ಕೋನದಿಂದ ರಾಜಕೀಯ & ಅಂತರಾಷ್ಟ್ರೀಯ ಮುತ್ಸದ್ಧಿಯಾಗಿ ಕಂಡನೋ ದೇವರೇ ಬಲ್ಲ!

ಆದರೆ ಖಾನ್’ಗೆ ಪಾಕಿಸ್ತಾನಕ್ಕೆ ಸೇರುವುದು ಇಷ್ಟವಿರಲಿಲ್ಲ. ಅವನು ಸ್ವಾತಂತ್ರ್ಯ ಘೋಷಿಸಿಕೊಂಡ. ಪಾಕಿಸ್ತಾನ ಸೇನೆಯ ಸಹಾಯದಿಂದ ಎರಡು ವರ್ಷ ಗುದ್ದಾಡಿ ಬಲೂಚನ್ನು ತನ್ನದಾಗಿಸಿಕೊಂಡಿತು. ಹೇರಳವಾದ ಕಬ್ಬಿಣ, ಮ್ಯಾಂಗನೀಸ್, ಅಲ್ಯೂಮಿನಿಯಂ ಅದಿರುಗಳು, ತೈಲ ನಿಕ್ಷೇಪವನ್ನು ಹೊಂದಿದ್ದ ಈ ಪ್ರಾಂತ್ಯವನ್ನು ಪಾಕ್ ಬಿಟ್ಟೀತೆ? ಈ ಪ್ರಾಂತ್ಯವೇನಾದರೂ ಪಾಕಿಸ್ತಾನದ ಕೈ ತಪ್ಪಿ ಹೋಗುತ್ತಿದ್ದರೆ ಅದರ ಆರ್ಥಿಕತೆ-ಭೌಗೋಳಿಕತೆಗೆ ಇನ್ನಷ್ಟು ಹೊಡೆತ ಬೀಳುತ್ತಿತ್ತು. ಬಲೂಚಿಸ್ತಾನದ ಹಿಂಗಲ್ ಗಂಜ್’ನಲ್ಲಿ ಈಗಲೂ ದೇವಿಯ ಪುರಾತನ ಮಂದಿರವಿದೆ. ಅಸಂಖ್ಯಾತ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದ ತಾಣವದು. ಆದರೆ ಪಾಕ್, ಭಾರತೀಯರು ಬಲೂಚಿಗಳೊಂದಿಗೆ ಸ್ನೇಹ ಬೆಸೆದರೆ ತನಗೆ ಅಪಾಯವೆಂದರಿತು “ಭಾರತ ಬಲೂಚಿಗಳನ್ನು ಪ್ರೇರೇಪಿಸಲೆಂದೇ ತನ್ನ ಏಜೆಂಟರನ್ನು ಕಳುಹಿಸಿ ತನ್ನ ನೆಲದಲ್ಲಿ ಹಸ್ತಕ್ಷೇಪ ಮಾಡುತ್ತಿದೆ” ಎನ್ನುವ ನೆಪವೊಡ್ಡಿ ಈ ಯಾತ್ರೆಯನ್ನು ರದ್ದುಗೊಳಿಸಿತು. ಬಲೂಚಿನಲ್ಲಿದ್ದ “ಭಾವಸಾರ ಕ್ಷತ್ರಿಯ” ಜನಾಂಗ ಕಾಲಕಾಲಕ್ಕೆ ಮುಸಲರ ದಾಳಿಯಿಂದ ಬೇಸತ್ತು ಈಗ ಭಾರತಾದ್ಯಂತ ಹರಡಿಕೊಂಡಿದೆ.

ಬಲೂಚಿಗಳು ಇಂದಿಗೂ ಪಾಕಿಸ್ತಾನವನ್ನು ತಮ್ಮ ದೇಶವಾಗಿ ಸ್ವೀಕರಿಸಿಲ್ಲ. ಅವರು 1947ರಿಂದಲೂ ಪಾಕಿಸ್ತಾನಿ ಸೇನೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. 1948, 1958, 1962 ಹಾಗೂ 1973ರಲ್ಲಿ ಪಾಕಿಸ್ತಾನ ತನ್ನ ಸೈನ್ಯವನ್ನು ಬಳಸಿ ದೊಡ್ಡ ಸಂಖ್ಯೆಯಲ್ಲಿ ಬಲೂಚಿಗಳ ಮಾರಣಹೋಮವನ್ನೇ ನಡೆಸಿತು. ಪಾಕಿಸ್ತಾನ “ಬುಚರ್ ಆಫ್ ಬಲೂಚಿಸ್ತಾನ್” ಎಂದೇ ಕುಖ್ಯಾತನಾದ ಲೆಫ್ಟಿನೆಂಟ್ ಜನರಲ್ ಟಿಕ್ಕಾ ಖಾನ್’ನನ್ನು(1973-77) ಅಲ್ಲಿ ನೇಮಿಸಿ ಬಲೂಚರ ಮಾರಣ ಹೋಮ ನಡೆಸಿತ್ತು. ನಿರ್ದಯವಾಗಿ ಹಸುಳೆಗಳನ್ನೂ ಬಿಡದೆ ಜನರನ್ನು ಕೊಲ್ಲುವ, ಸ್ತ್ರೀಯರ ಮೇಲೆ ಅತ್ಯಾಚಾರ ಎಸಗುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನ ಅಡಿಯಾಳು ಪಡೆಗೆ ನೀಡಿದ್ದನಾತ. ಬಾಂಗ್ಲಾ ವಿಮೋಚನೆಗೆ ಮುನ್ನ ಪೂರ್ವ ಬಂಗಾಳದ ಜನರ ಮೇಲೆ ನಡೆದ ಅತ್ಯಾಚಾರ-ಅನ್ಯಾಯಗಳ ಸೂತ್ರಧಾರಿಯೂ ಈತನೇ! ಮಹಾಕ್ರೂರಿ ಟಿಕ್ಕಾಖಾನನ ರಕ್ತದಾಹಕ್ಕೆ ಬಹುತೇಕ ಸರ್ವನಾಶಗೊಂಡಿದ್ದ ಬಲೂಚರು 2003ಕ್ಕಾಗುವಾಗ ಮೈಕೊಡವಿಕೊಂಡು ಮತ್ತೆ ಮೇಲೆದ್ದರು. ಆಗ ಪಾಕಿಸ್ತಾನ ತನ್ನ ಸೈನ್ಯವನ್ನು ಕಳುಹಿಸಿ ಆರಂಭಿಸಿದ ದೌರ್ಜನ್ಯವಂತೂ ಇಂದಿಗೂ ಮುಗಿದಿಲ್ಲ. 2006ರಲ್ಲಿ ಬಲೂಚಿ ಸ್ವಾತಂತ್ರ್ಯ ಹೋರಾಟದ ನಾಯಕ ಅಕ್ಬರ್ ಬುಗ್ಟಿಯನ್ನು ಕೊಲ್ಲುವುದಕ್ಕಾಗಿ ಹೋದ ಪಾಕ್ ಸೇನೆ ಅವನ ಆಶ್ರಯದಲ್ಲಿದ್ದ 73 ಹಿಂದೂ ಮಹಿಳೆಯರು ಹಾಗೂ ಮಕ್ಕಳನ್ನೂ ಕೊಂದು ಹಾಕಿತು. ಬುಗ್ಟಿಯ ಹತ್ಯೆಯ ನಂತರ ಬಹುತೇಕ ಬಲೂಚರು ಸಿಂಧ್ ಪ್ರಾಂತಕ್ಕೆ ವಲಸೆ ಹೋದರಾದರೂ ಸೇನೆ ಅವರನ್ನು ಅಲ್ಲೂ  ನೆಮ್ಮದಿಯಿಂದಿರಲು ಬಿಡಲಿಲ್ಲ. ಕಳೆದ ವರ್ಷವೊಂದರಲ್ಲೇ 250ಕ್ಕೂ ಹೆಚ್ಚು ಬಲೂಚಿಗಳನ್ನು ಪಾಕಿಸ್ತಾನೀ ಸೇನೆ ಕೊಂದು ಹಾಕಿದೆ. ಬಲೂಚಿಸ್ತಾನವನ್ನು ಪ್ರವೇಶಿಸಲು ಯಾವುದೇ ಸುದ್ದಿ ಮಾಧ್ಯಮ, ಪತ್ರಕಾರ, ಮಾನವ ಹಕ್ಕು ಸಂಘಟನೆಗಳಿಗೆ ಪಾಕಿಸ್ತಾನ ಅನುಮತಿ ಕೊಡುವುದಿಲ್ಲ. ಹಾಗಾಗಿ ಈ ಅಂಕಿ-ಸಂಖ್ಯೆಗಳಿಗಿಂತಲೂ ಹೆಚ್ಚಿನ ಮಾರಣ ಹೋಮ ಅವ್ಯಾಹತವಾಗಿ ನಡೆದಿರುವುದಂತೂ ಸತ್ಯ. ಪ್ರತಿ ದಿನ ಒಬ್ಬ ವ್ಯಕ್ತಿಯಾದರೂ ಅಲ್ಲಿ ಕಾಣೆಯಾಗಿರುತ್ತಾನೆ. ಮತ್ತೆ ಸಿಕ್ಕಾಗ ಅವನ ದೇಹ ಪ್ರಾಣದ ಬದಲು ಗುಂಡುಗಳಿಂದ ತುಂಬಿರುತ್ತದೆ. ಅಲ್ಲಿನ ಮಕ್ಕಳು ಬಟಾಬಯಲಲ್ಲಿ ಸೇನೆಯ ಬಂದೂಕಿನ ನಳಿಗೆಯ ತುದಿಯಲ್ಲಿ ಪಾಕಿಸ್ತಾನ ಪ್ರೇರಿತ ಶಿಕ್ಷಣ ಪಡೆಯುವಂತಹ ದುಃಸ್ಥಿತಿ ಇದೆ. ಒಂದು ಕಾಲದಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿದ್ದ ಜಾಗದಲ್ಲಿಂದು ಗುಂಡು, ಬಾಂಬುಗಳ ಭೋರ್ಗರೆತ ಕೇಳುತ್ತಿದೆ. ಅಭಿವೃದ್ಧಿಯ ಲವಲೇಶವೂ ಅಲ್ಲಿಲ್ಲ. ಅದು ಪಾಕಿಸ್ತಾನದಲ್ಲೇ ಇಲ್ಲ ಬಿಡಿ. ಸಂಪೂರ್ಣ ಪಾಕಿಸ್ತಾನಕ್ಕೇ ಬಹುತೇಕ ತೈಲ ಪೂರೈಸುವ ನಿಕ್ಷೇಪ ಹೊಂದಿರುವ ಬಲೂಚಿಗರು ಆಹಾರ ಬೇಯಿಸಲು ಇಂದಿಗೂ ಉರುವಲನ್ನೇ ಅವಲಂಬಿಸಿದ್ದಾರೆ ಎನ್ನುವಾಗಲೇ ಪಾಕಿಸ್ತಾನದ ಮಲತಾಯಿ ಧೋರಣೆಯ ಅರಿವಾದೀತು.

ಆದಾಗ್ಯೂ ಬಲೂಚರ ನಿರೀಕ್ಷೆ, ಹೋರಾಟ ನಿಂತಿರಲಿಲ್ಲ. ಹತ್ತು ಹಲವು ಸಂಘಟನೆಗಳನ್ನು ಕಟ್ಟಿ ಬಲೂಚಿಗರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವ ಪಾಪಿ ಪಾಕಿಸ್ತಾನ ಹಾಗೂ ಅದನ್ನು ಬೆಂಬಲಿಸಿ ಗಂಜಿ ಗಿಟ್ಟಿಸಿಕೊಳ್ಳುವ ದೇಶದ್ರೋಹಿಗಳು, ಅಂತರಾಷ್ತ್ರೀಯ ಮಟ್ಟದಲ್ಲಿ ಭಾರತವನ್ನು ಕುಗ್ಗಿಸಲು ಯತ್ನಿಸುವ ವಿದೇಶೀ ಸಂಸ್ಥೆಗಳ್ಯಾವುದಕ್ಕೂ ಬಲೂಚಿಗರ ಮೇಲೆ ಪಾಕಿಸ್ತಾನ ಮಾಡುತ್ತಿರುವ ದೌರ್ಜನ್ಯ ಕಾಣುತ್ತಲೇ ಇಲ್ಲ. ನಿರಂತರ ಅತ್ಯಾಚಾರಕ್ಕೊಳಗಾಗುತ್ತಿರುವ ಬಲೂಚಿಗರ ಅಳಲು ಇವರ ಕಿವಿಗಳಿಗೆ ಇಂಪಾದ ಸಂಗೀತದಂತೆ ಕೇಳುತ್ತದೆ! ಮುಸ್ಲಿಮರು ಬಿಡಿ. ಮಾನವ ಹಕ್ಕುಗಳ ಬಗ್ಗೆ ಮಾತನ್ನಾಡುವ ಯಾವ ನಾಯಕನೂ ಬಲೂಚಿಗಳ ಕಣ್ಣೀರು ಕಂಡು ಮರುಗಲಿಲ್ಲ. ಅವರ ಅಳಲನ್ನು ಜಗತ್ತಿಗೆ ತೆರೆದಿಡಲು ಒಬ್ಬ ಹಿಂದೂ ನಾಯಕನೇ ಬರಬೇಕಾಯಿತು.

ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕ್ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಪ್ರಸ್ತಾಪಿಸುತ್ತಿದ್ದಂತೆ ಇಡೀ ಜಗತ್ತು ಮತ್ತೊಮ್ಮೆ ಬಲೂಚಿನತ್ತ ಮುಖ ಮಾಡಿದೆ. ಇಷ್ಟರವರೆಗೆ ವಿಶ್ವಸಂಸ್ಥೆಯ ಅಂಗಳದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತವನ್ನು ದೂಷಿಸುತ್ತಾ ಕೂರುತ್ತಿದ್ದ ಪಾಕಿಸ್ತಾನ ಈಗ ಮುಖ ಉಳಿಸಿಕೊಳ್ಳಲು ಯಾವ ಮುಖವಾಡ ಧರಿಸುತ್ತದೋ ಕಾದು ನೋಡಬೇಕು. ಎಂದಿನಂತೆ ನಮ್ಮಲ್ಲಿನ ತಥಾಘೋಷಿತ ಬುದ್ಧಿಜೀವಿಗಳ ಆಚಾರವಿಲ್ಲದ ನಾಲಗೆ ತನ್ನ ನೀಚ ಬುದ್ಧಿಯನ್ನು ಬಿಟ್ಟಿಲ್ಲ. “ನಮ್ಮಲ್ಲಿರುವ ಕೆಲ ಪ್ರದೇಶಗಳನ್ನೇ ಸಂಭಾಳಿಸಲಾಗುತ್ತಿಲ್ಲ. ಅಂತಹುದರಲ್ಲಿ ಬಲೂಚಿಸ್ತಾನದ ವಿಷಯ ನಮಗೇಕೆ? ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಕೈಹಾಕಿ ನಮ್ಮ ನೈತಿಕ ಬಲವನ್ನು ನಾವೇ ಕುಗ್ಗಿಸಿಕೊಂಡಂತಾಗಿದೆ” ಎನ್ನುವ ಅಪಲಾಪ ಶುರುವಾಗಿದೆ. ಆದರೆ ಇವರ ಎಂದಿನ ಗೊಣಗಾಟಗಳಿಗೆ ಕಿವಿಕೊಡಬೇಕಾಗಿಲ್ಲ. ಇಂತಹವರಿಗೆ ರಕ್ಷಣಾ ನೀತಿಯ ಗಂಧಗಾಳಿಯೂ ಇರುವುದಿಲ್ಲ. ಇಷ್ಟರವರೆಗೆ ಕಾಶ್ಮೀರದ ಬಗೆಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದ ಭಾರತ ಈಗ ಪಾಕಿಸ್ತಾನದ ಬುಡಕ್ಕೇ ಕೈ ಹಾಕಿದೆ. ಈಗ ತಡಬಡಾಯಿಸುವ ಸ್ಥಿತಿ ಪಾಕಿಗಳದ್ದು. ಪಾಕಿಸ್ತಾನದ ಸೇನಾ ಮುಖ್ಯಸ್ಥರಂತೂ ಮೋದಿಯ ಹೇಳಿಕೆ ಯುದ್ಧದ ಬೆದರಿಕೆಯೆಂದೇ ಪರಿಗಣಿಸಿದ್ದಾರೆ. ಅಲ್ಲಿನ ಆಡಳಿತ-ಪ್ರತಿಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಮೋದಿಯ ಮೇಲೆ ಹರಿಹಾಯುತ್ತಿದ್ದಾರೆ. ಈಗ ತಲ್ಲಣಗೊಂಡಿರುವುದು ಕೇವಲ ಪಾಕ್ ಮಾತ್ರವಲ್ಲ. ಒಳಗಿಂದೊಳಗೆ ಪಾಕ್ ಪರವಾಗಿದ್ದ ಅಮೇರಿಕಾದ ಅಧಿಕಾರಿಗಳಿಗೂ ಬಿಸಿ ಮುಟ್ಟಿದೆ ಎನ್ನುವುದಕ್ಕೆ ಲೀಸಾ ಕರ್ಟಿಸ್, ವಿಕ್ರಮ್ ಸಿಂಗ್ ಮುಂತಾದ ಮಾಜಿ ಅಧಿಕಾರಿಗಳ, ಬುದ್ಧಿಜೀವಿಗಳ ಹೇಳಿಕೆಗಳೇ ಸಾಕ್ಷಿ. ಅಲ್ಲಿಗೆ ಭಾರತಕ್ಕೆ ಒಂದು ಹಂತದ ಗೆಲುವು ದಕ್ಕಿಬಿಟ್ಟಿದೆ. ಇದೊಂಥರ ಚಾಣಕ್ಯ ನೀತಿಯ ಹಾಗೆ. ಶತ್ರುವಿನ ದೌರ್ಬಲ್ಯವನ್ನು ತನಗೆ ಅನುಕೂಲವಾಗುವಂತೆ ಪರಿವರ್ತಿಸುವುದು. ದುರುಳ ನಂದರ ನಾಶಕ್ಕೆ ಚಾಣಕ್ಯ ಪರ್ವತರಾಜ ಹಾಗೂ ಇನ್ನಿತರ ಅರಸರನ್ನು ಉಪಯೋಗಿಸಿಕೊಳ್ಳಲಿಲ್ಲವೇ ಅದೇ ರೀತಿ. “ಮತ್ತೊಮ್ಮೆ ಮುಂಬೈ ಮೇಲೆ ದಾಳಿ ಮಾಡಿದರೆ ಬಲೂಚಿಸ್ತಾನವನ್ನೇ ಕಳೆದುಕೊಳ್ಳುತ್ತೀರಿ” ಎನ್ನುವ ಅಜಿತ್ ಧೋವಲ್ ಮಾತಿನಲ್ಲೇ ಸರಕಾರದ ಚಾಣಾಕ್ಷ ನೀತಿಯ ಎಳೆ ಗೋಚರಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತ ಬಲೂಚಿಸ್ತಾನವನ್ನು ಆಯುಧವನ್ನಾಗಿ ಪ್ರಯೋಗಿಸಿದರೆ ತಪ್ಪೇನು? ವಿಶ್ವವನ್ನೇ ತನ್ನ ಕುಟುಂಬವನ್ನಾಗಿ ಪರಿಗಣಿಸುವ ಭಾರತಕ್ಕೆ ತನ್ನ ನೆರೆಯ ರಾಷ್ಟ್ರದಲ್ಲಾಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವುದು ಜನ್ಮಜಾತ ಹಕ್ಕಲ್ಲವೇ? ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯ ಕಥೆಗಳನ್ನು ಸೃಷ್ಟಿಸಿ ಜಗದೆದುರು ದೇಶದ ಮಾನ ಹರಾಜು ಹಾಕುವ ದ್ರೋಹಿಗಳಿಗೆ ಈ ಬಗ್ಗೆ ಮಾತನಾಡಲು ಯಾವ ಹಕ್ಕಿದೆ?

ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಬ್ರಾಹುಮ್‌ದಾಘ್ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಅರ್ಪಿಸಿ ಪಾಕ್ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದಾಗಲೇ ಪಾಕಿನ ಬೆನ್ನು ಹುರಿಯಲ್ಲಿ ನಡುಕ ಶುರುವಾಗಿದೆ. ಬಲೂಚಿಗರು ಮೋದಿಯ ಮಾತಿನಿಂದ ಪುಳಕಿತರಾಗಿ ಮೋದಿಯೇ ತಮಗೆ ರಕ್ಷಕರಾಗಿ ಸ್ವಾತಂತ್ರ್ಯ ದೊರಕಿಸಿಕೊಡುತ್ತಾರೆ ಎನ್ನುವ ಆಶೆ ವ್ಯಕ್ತಪಡಿಸುತ್ತಿರುವುದಂತೂ ಸ್ವಾತಂತ್ರ್ಯದ ಅಪೇಕ್ಷೆ ಜೀವಿಯಲ್ಲಿ ಯಾವ ಮಟ್ಟದಲ್ಲಿರುತ್ತದೆ ಎನ್ನುವುದರ ಸಾದೃಶ್ಯ ರೂಪವೇ ಸರಿ. ಚಾಬಹಾರ್ ಬಂದರು ಗ್ವಾಡಾರ್ ಬಂದರಿಗೆ ಪ್ರತಿಯಾಗಿ ನೀಡಿದ ಪ್ರತ್ಯುತ್ತರವೇನೋ ಹೌದು. ಅದು ಚೀನಾದ ಪಾರುಪತ್ಯವನ್ನು ಹಣಿಯಲು ಉಪಯೋಗವಾದೀತು. ಆದರೆ ಪದೇ ಪದೇ ಕಾಲು ಕೆದರಿ ಜಗಳಕ್ಕೆ ಬರುತ್ತಿರುವ, ಗಡಿಗಳಲ್ಲಿ ಭಯೋತ್ಪಾದಕರನ್ನು ನುಗ್ಗಿಸುತ್ತಿರುವ, ದೇಶದೊಳಗೆ ಕ್ಷೋಭೆ ಸೃಷ್ಟಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಬಲೂಚಿಸ್ತಾನವನ್ನು ಅದರಿಂದ ಕಿತ್ತು ಕೊಳ್ಳುವುದೇ ಸೂಕ್ತ. ಭಾರತ ಅವರ ಹೋರಾಟಕ್ಕೆ ಸಹಾಯ ಮಾಡಿದರೆ 1947ರವರೆಗೆ “ಹಿಂದೂ ವಿವಾಹ ಕಾಯ್ದೆ”ಯನ್ನೇ ಅನುಸರಿಸಿದ್ದ, ಹಿಂದೂಗಳೊಂದಿಗೆ ತಕ್ಕ ಮಟ್ಟಿಗೆ ಸಹಿಷ್ಣುತೆಯಿಂದಿರುವ ಬಲೂಚಿಗಳು  ಋಣ – ಕೃತಜ್ಞತೆಯ ಭಾವದಿಂದ ಭಾರತದೊಂದಿಗೆ ಬಲೂಚ್ ಸೇರಲೂಬಹುದು. ಅಖಂಡ ಭಾರತದ ಮರು ನಿರ್ಮಾಣಕ್ಕೆ ಅದು ಮೊದಲ ಮೆಟ್ಟಿಲಾಗಬಹುದು. ಈ ದಿಶೆಯಲ್ಲಿ ಭಾರತ ಸಾಗಬೇಕಾದುದು ಅದರ ಕರ್ತವ್ಯವೂ ಹೌದಾದರೂ ಭಾರತ ಕೆಲವು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಸುಬ್ರಹ್ಮಣ್ಯನ್ ಸ್ವಾಮಿಯವರೆಂದಂತೆ ಭಾರತದಲ್ಲಿ ಬಲೂಚ್ ನಿರಾಶ್ರಿತ ಶಿಬಿರಗಳನ್ನು ಮಾಡಬಹುದಾದರೂ ಭವಿಷ್ಯವನ್ನೂ ಯೋಚಿಸಬೇಕಾಗುತ್ತದೆ. ಬಲೂಚ್ ಭಾರತದ ಭಾಗವಾದರೆ ಅಡ್ಡಿಯಿಲ್ಲ. ಒಂದು ವೇಳೆ ಸ್ವತಂತ್ರವಾದರೆ ಆಗ ಈ ನಿರಾಶ್ರಿತ ಶಿಬಿರಗಳಲ್ಲಿರುವವರನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಿಗೆ ರವಾನಿಸುವ ಕೆಲಸವನ್ನೂ ಮಾಡಬೇಕು. ಇಲ್ಲದಿದ್ದರೆ ಹಿಂದೆ ಎಸಗಿದ ತಪ್ಪುಗಳೇ ನಮ್ಮನ್ನು ಸುಡುತ್ತಿರುವಾಗ ಹೊಸದೊಂದು ಸಮಸ್ಯೆ ಸೃಷ್ಟಿಯಾಗಬಹುದು. ಬಾಂಗ್ಲಾ ನುಸುಳುಕೋರರನ್ನು “ಓಟ್ ಬ್ಯಾಂಕ್” ಮಾಡಿಕೊಳ್ಳಲೆಂದೇ ಒಳಗೆ ಬಿಟ್ಟುಕೊಂಡ ಕಪಟಿ ರಾಜಕಾರಣಿಗಳಿರುವ ದೇಶ ನಮ್ಮದು. ಪಾರ್ಸಿ, ಯಹೂದ್ಯರನ್ನು ಬಿಟ್ಟು ಉಳಿದವರೆಲ್ಲಾ ಇಲ್ಲಿ ಬಂದು ಒಂದಲ್ಲಾ ಒಂದು ರೀತಿಯ ದ್ರೋಹ ಬಗೆದವರೇ! ಅಂತಹ ಅಧ್ವಾನಗಳಾಗದಂತೆ ಮೊದಲೇ ಎಚ್ಚರವಹಿಸುವುದೂ ಅಗತ್ಯ. ಹಿಂಗುಲಾಂಬೆ ಭಾರತಾಂಬೆಯ ಬಳಿ ಅಂಗಲಾಚುತ್ತಿದ್ದಾಳೆ. ವಸುದೈವ ಕುಟುಂಬಕಮ್ ಎನ್ನುವ ಭಾರತಕ್ಕೆ ಈ ಕೂಗು ಕೇಳದೆ?

-ರಾಜೇಶ್ ರಾವ್

Facebook ಕಾಮೆಂಟ್ಸ್

Rajesh Rao: ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್ ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ
Related Post