X

ಕರಾಳಗರ್ಭ- ೪

ಮುಂದಿನ ದಿನ ಬೆಳಿಗ್ಗೆ ೧೦ರ ಒಳಗೆ ರೂಮ್ ಸರ್ವೀಸ್’ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿಬಣ್ಣದ ಹೊಂಡಾಸಿಟಿ ಕಾರ್ ಬಾಡಿಗೆಗೆ ಆರಿಸಿದೆ..ಬೆಂಗಳೂರಿಗಿಂತಾ ದಿನಕ್ಕೆ ಒಂದೂವರೆಪಟ್ಟು ಹೆಚ್ಚು ಬೆಲೆ ಹೇಳಿದ …” ಇದು ಟೂರಿಸ್ಟ್ ಸ್ಪಾಟ್ ಅಲ್ಲಾವಾ ಸರ್?” ಎಂದು ಹಲ್ಕಿರಿದ ಅದರ ಮಾಲಿಕ. ನನ್ನ ದುಡ್ಡೇನಲ್ಲವಲ್ಲ, ಮೃದುಲಾ, ವಿಶ್ವಾಸ್’ರಂತವರಿಗೆ ಈ ವೆಚ್ಚ ಧೂಳಿನಂತೆ.

ನನ್ನ ಪತ್ರಗಳ ಫೈಲ್’ ತೆಗೆದುಕೊಂಡು ರಿಜಿಸ್ಟ್ರಾರ್ ಆಫೀಸ್’ ಕಡೆಗೆ ನನ್ನ ಬಾಡಿಗೆ ಹೊಂಡಾಕಾರಿನಲ್ಲಿ ಹೊರಟೆ, ನನ್ನ ಮೊದಲ ದಿನದ ದಾಖಲೆ ವಿಚಾರಣೆಗೆ ರೆಡಿಯಾಗಿ….ಮತ್ತೆ ಹಿಂತಿರುಗಿ ಟಾಟಾನ್ಯಾನೋಕಾರಿನತ್ತ ನೊಡುವ ಅಗತ್ಯವಿರಲಿಲ್ಲ, ಅವನು ಹಿಂದೆಯೇ ಇರುವನು ಎಂದು ನನಗೆ ಚೆನ್ನಾಗಿ ಗೊತ್ತಿತ್ತು.  ’ಸ್ವಲ್ಪ ವಿಷಯ ಗೊತ್ತಾಗಲಿ, ಅವನಿಗೆ ಮಾಡುತ್ತೇನೆ ಶಾಸ್ತಿ ’ ಎಂದುಕೊಂಡೆ. ನನ್ನ ಕಂಕುಳ ಕೆಳಗಿನ ರಿವಾಲ್ವರ್ ಕೇಸಿನಲ್ಲಿ ಕೋಲ್ಟ್೦.೪೫ ನನಗೆ ಆತ್ಮವಿಶ್ವಾಸ ನೀಡಿತ್ತು.

ನಾನು ಆಫೀಸಿನ ಕಾರ್ ಪಾರ್ಕ್ನಲ್ಲಿ ನಿಲ್ಲಿಸಿ ಇಳಿಯುವಾಗ ಮತ್ತೆ ನನ್ನ ಮುಂದೆಯೇ ಭರ್ ಎಂದು ಟಾಟಾನ್ಯಾನೋ ಹೋಯಿತು, ನಿಲ್ಲಿಸದೇ.

ಅತ್ಯಂತ ಧೂಳು ಹಿಡಿದ ಮಳೆನೀರು ಸೋರುವ ಕೋಣೆಯೊಂದರಲ್ಲಿ ಓರ್ವ ಗುಳ್ಳೆಮುಖದ ಗುಮಾಸ್ತನಿಗೆ ನನ್ನ ಅಪ್ಲಿಕೇಶನ್ ಕೊಟ್ಟೆ. “ಸೆಕೆಯಾಗುತ್ತಿದೆ ಫ್ಯಾನ್ ಹಾಕು” ಎಂದೆ..ಹಳೆಪೇಪರ್ ಕಡತದ ವಾಸನೆ ಬೇರೆ.

” ಫ್ಯಾನ್ ಹಾಕಿದರೆ ಪೇಪರ್ ಹಾರುತ್ತದೆ, ಅದಕ್ಕೆ ಸ್ಪೀಡ್ ಕಂಟ್ರೋಲ್ ಇಲ್ಲಾ” ಎಂದು ನನ್ನ ಅಪ್ಲಿಕೇಶನ್ ಅನ್ನು ಕಷ್ಟಪಟ್ಟು ಓದಿದ. ಇವತ್ತೋ ನಾಳೆಯೋ ರಿಟೈರ್ ಆಗುವ ವಯಸ್ಸಿರಬಹುದು ಇವನಿಗೆ…

” ೧೯೮೦ನೇ ವರ್ಷದ್ದಾ?… ಅಷ್ಟು ಹಳೇ ಪೇಪರ್ಸ್? ..ಏನು ಮಾಡ್ತೀರಿ ಅದನ್ನು ನೋಡಿ?” ಅಂದ.

” ನಾನು ಮ್ಯೂಸಿಯಮ್ ಕಟ್ಟುತ್ತಿದ್ದೇನೆ, ಅಲ್ಲಿ ಚಿನ್ನದ ಫ್ರೇಮ್ ಹಾಕಿ ಅದನ್ನು ಇಡುತ್ತೇನೆ, ನಿನ್ನನ್ನೂ ಕರೆಯುತ್ತೇನೆ, ತೋರಿಸಕ್ಕೆ” ಎಂದೆ. ಕಾನ್ಫಿಡೆನ್ಶಿಯಲ್ ಆಗಿರಲಿ ಎಂದು ಎಷ್ಟೆಲ್ಲಾ ಸುಳ್ಳುಹೇಳಬೇಕಲ್ಲ!

ಅವನಿಗೂ ನನ್ನ ಜೋಕ್ ಅರ್ಥವಾಗಲಿಲ್ಲ. ಮುಖಸಪ್ಪಗೆ ಮಾಡಿಕೊಂಡು ಒಳಗೆಹೋದ..ಒಂದು ಹತ್ತು ಹಳೆ ನುಸಿಬಿದ್ದ ಕಂದುಬಣ್ಣಕ್ಕೆ ತಿರುಗಿದ್ದ ಫೈಲ್ಸ್ ಎತ್ತಲಾರದೇ ಎತ್ತಿಕೊಂಡು ಬಂದು ಒಂದು ಚಿಕ್ಕ ಟೇಬಲ್ ಮೇಲಿಟ್ಟ. ಮೂವತ್ತು ವರ್ಷದ ಧೂಳು ಎದ್ದಿತು..

” ನೋಡಿಕೊಳ್ಳಿ… ಕಾಪಿ ಬೇಕಾದ್ರೆ ಇಲ್ಲಿರೋ ಜೆರಾಕ್ಸ್ ಮಶೀನ್ ಕೆಟ್ಟಿದೆ, ಹೊರಗೋಗ್ಬೇಕು ” ಅಂದ…. ಸರ್ಕಾರಿ ಆಫೀಸ್!

” ಬೇಡಾ, ನನ್ನ ತಲೆಯಲ್ಲೇ ಎಲ್ಲಾ ಪ್ರಿಂಟ್ ಆಗತ್ತೆ” ಎಂದೆ.

ಸುಮ್ಮನೆಹೋದ, ನನ್ನ ತಲೆಕೆಟ್ಟಿದೆ ಎಂದು ಅವನಿಗೆ ಗ್ಯಾರೆಂಟಿಯಾದಂತಿತ್ತು.

ಸುಮಾರು ಮೂವತ್ತೈದು ವರ್ಷದ ಹಿಂದೆ ಮಾಂಡಿಚೆರ್ರಿಯ ಆಸುಪಾಸಿನಲ್ಲಿ ಮಗುವೊಂದು ಹುಟ್ಟಿತ್ತು, ಬಡವರ ಮಗಳಾಗಿರುವ ಸಾಧ್ಯತೆ ಹೆಚ್ಚು. ಆಗ ಹುಟ್ಟಿದ ಸಮಯ ಅಂದರೆ ಫೆಬ್ರವರಿ- ಮೇ ಅಂತರದಲ್ಲಿ ಎಷ್ಟು ಮಕ್ಕಳು ಹುಟ್ಟಿದವು, ಅದರಲ್ಲಿ ಹೆಣ್ಣು ಮಕ್ಕಳೆಷ್ಟು?..ಅದರಲ್ಲಿ ಹುಡುಕುತ್ತಾ ಹೋದರೆ ಹೊಸಮನಿ ಎಂಬವರಿಗೆ ದತ್ತು ಕೊಟ್ಟ ಮಗು ಯಾವುದು? ..ಹೀಗೆ ಆ ಧೂಳುಬಿದ್ದು, ಮುಟ್ಟಿರೆ ಹರಿಯುವ ಸ್ಥಿತಿಯಲ್ಲಿದ್ದ ಕಡತಗಳನ್ನು ಒಂದೊಂದಾಗಿ ಪರಿಶೀಲಿಸಲು ನನಗೆ ಅರ್ಧದಿನವೇ ಬೇಕಾದೀತು ಎನಿಸಿತು.

ಇವರು ಮೃದುಲಾಗೆ ಮಾತ್ರ ಸಂಬಂಧಿಸಿದ ಪತ್ರಗಳನ್ನು ಆಗಿನಕಾಲದವರು ಬೇರೆಯಾಗಿ ಫೈಲ್ ಮಾಡೇ ಇಲ್ಲಾ!!..ನಾನು ಪ್ರತ್ಯೇಕ ಅಪ್ಲಿಕೇಶನ್ ಹಾಕಿದ್ದು ಹುಟ್ಟಿದ್ದ ಎಲ್ಲಾ ಮಕ್ಕಳ ದಾಖಲೆ ನೋಡಲೆಂದೆ? ಛೆ! ಎನಿಸಿ ಕೆಟ್ಟ ಕೋಪ ಬಂದಿತು, ನಿರಾಸೆಯೂ ಆಯಿತು.. ಏನು ಮಾಡುವುದು, ಎಂದು ಎಲ್ಲ ಕಡತಗಳಲ್ಲಿ ತಾಳ್ಮೆಯಿಂದ ಹುಡುಕಾಡತೊಡಗಿದೆ

ಆ ಸಮಯದಲ್ಲಿ ಹುಟ್ಟಿದ ಮಕ್ಕಳು= ೧೫೦

ಅವುಗಳಲ್ಲಿ ಹೆಣ್ಣು ಮಾತ್ರ = ೫೮

ಅದರಲ್ಲಿ ದತ್ತು ಪಡೆದ ಮಕ್ಕಳು =ಒಟ್ಟು ೧೫ ಎಂದು ಸಿಕ್ಕಿತು…

ಅದರಲ್ಲಿ ಹೆಣ್ಣು ಮಕ್ಕಳು= ಆರು, ಗಂಡು =ಒಂಬತ್ತು

ಈ ಆರರಲ್ಲಿ ಯಾರು ಎಂದು ಮತ್ತೆ ಇಂಡೆಕ್ಸ್ ನೋಡಿ ತಿಂಗಳುವಾರಿಯಾಗಿ ಹುಡುಕುತ್ತಾಹೋದೆ..

ಜನವರಿ- ಯಾರೂ ಇಲ್ಲ.

ಫೆಬ್ರವರಿಯಲ್ಲಿ ಯಾರೂ ಇಲ್ಲಾ.

ಮಾರ್ಚ್’ನಲ್ಲಿ ಎರಡು, ಇಬ್ಬರ ಮಕ್ಕಳ ಹೆಸರು ಯಾವರೂ ಮೃದುಲಾ ಅಲ್ಲ, ದತ್ತು ತಗೊಂಡವರು ಹೊಸಮನಿಯೂ ಅಲ್ಲ. ಇದಲ್ಲಾ, ಆದರೂ ನನ್ನ ನೋಟ್ಬುಕ್’ನಲ್ಲಿ ವಿವರಗಳನ್ನು ಬರೆದುಕೊಂಡೆ, ಯಾತಕ್ಕೂ ಇರಲಿ ಎಂದು.

ಏಪ್ರಿಲ್’ನಲ್ಲಿ ಯಾರೂ ಹೆಣ್ಣುಮಕ್ಕಳು ದತ್ತು ಪಡೆದಿಲ್ಲಾ..

ಹಾಗಾದರೆ ಮೇತಿಂಗಳಲ್ಲಿ ಮಿಕ್ಕ ನಾಲ್ಕು ಹೆಣ್ಣುಮಕ್ಕಳ ದತ್ತು ಆಗಿರಬೇಕು!! ಎಂದು ಖುಶಿಯಿಂದ ಕೊನೆಗೂ ಯಶಸ್ಸು ದೊರಕಿತೆಂದು ಮೇ ತಿಂಗಳ ಫೈಲ್’ ತೆರೆದೆ..

ನನ್ನ ಎದೆ ಧಸಕ್ಕೆಂದಿತು…

ಅದು ಖಾಲಿ ಫೈಲ್, ಒಳಗೆ ಯಾವ ಪತ್ರವೂ ಇಲ್ಲಾ!..ಆ ಫೈಲಿನ ಪಿನ್ ಹಾಗೆಯೇ ಇದೆ, ಆದರೆ ಪತ್ರಗಳೆಲ್ಲಾ ಕಾಣೆ!

ಯಾರೋ ಬಲವಂತವಾಗಿ ಎಲ್ಲಾ ಮೇ ತಿಂಗಳ ಮಕ್ಕಳ ದತ್ತುಪತ್ರಗಳನ್ನು ಹರಿದು ಕದ್ದುಒಯ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ!

ಕೆಲವೊಮ್ಮೆ ಕೇಸ್ಗಳಲ್ಲಿ ನನಗೆ ಹೀಗೆಯೇ..ಎಲ್ಲಾ ಸುಲಭವಾದದ್ದು, ಮೋಸವಿಲ್ಲದ ಸಾಮಾನ್ಯ ಕೇಸ್ ಎಂದುಕೊಳ್ಳುತ್ತೇನೆ, ಆದರೆ ಹೋಗುತ್ತಾ-ಹೋಗುತ್ತಾ ಇಂತಾ ಗಾಬರಿಯಾಗುವ ಘಟನೆಗಳು ಬಿಚ್ಚಿಕೊಳ್ಳುತ್ತವೆ.

ಮೂವತ್ತೈದು ವರ್ಷ ಹಿಂದಿನ ಮಕ್ಕಳ ದತ್ತುಪತ್ರಗಳು ಯಾರಿಗೆ ತಾನೆ ಇಂದು ಕದ್ದಾದರೂ ಬೇಕಾಗುವುದು..?

ಹಾಗೆ ಬೇಕಾಗುವುದು ಎಂದೇ ಇಟ್ಟುಕೊಳ್ಳೋಣಾ..ಅವರು ಅಪ್ಲಿಕೇಶನ್ ಹಾಕಿ ಎಲ್ಲಾ ಮಕ್ಕಳ ಪರವಾಗಿ ಕೇಳಲೂ ಸಾಧ್ಯವಿಲ್ಲಾ..ಒಬ್ಬರು ಒಂದು ಮಗುವಿನ ರೆಕಾರ್ಡ್ ಮಾತ್ರ ಕೇಳಿರಬೇಕು, ರೂಲ್ಸ್ ಪ್ರಕಾರ..!..

ಪೂರ್ತಿ ಕದ್ದಿದ್ದಾರೆ ಅಂದರೆ ಕಳ್ಳನಿಗೂ ಯಾವ ಮಗುವಿನ ರೆಕಾರ್ಡ್ ತನಗೆ ಬೇಕೆಂದೇ ಸರಿಯಾಗಿ ತಿಳಿದಿಲ್ಲಾ..

ನಾನು ಎದ್ದು ಆ ಗುಳ್ಳೆಮುಖದ ಗುಮಾಸ್ತನನ್ನು ಕೂಗಿದೆ.

“ಇದರಲ್ಲಿದ್ದ ಪೇಪರ್ಸ್ ಎಲ್ಲಾ ಯಾರೋ ಕದ್ದೊಯ್ದಿದ್ದಾರಲ್ಲ? ಎಲ್ಲಯ್ಯಾ ಹೋಯ್ತು?” ಎಂದರೆ

ಅವನು ಬೇಸರದಿಂದ, ” ನಾವೇನು ಮಾಡೋಣ ಸಾಮಿ ಇದಕ್ಕೆ?…ಇಲಿ ತಿಂದಿರಬಹುದು ಅಷ್ಟೆ” ಎಂದ ಅದು ಸರ್ವೇಸಾಮಾನ್ಯವೆಂಬಂತೆ…ಅವನ ಪೆನ್ಶನ್ ಏನೂ ಕಟ್ ಮಾಡುವುದಿಲ್ಲವಲ್ಲ?, ಅವನಿಗೇನು ತೊಂದರೆ?

“ಇಲಿ ತಿಂದಿಲ್ಲ, ಯಾರೋ ಹರಿದುಕೊಂಡು ಹೋಗಿದ್ದಾರೆ, ನೋಡಿಲ್ಲಿ ಸರಿಯಾಗಿ..ಯಾರು ಬಂದಿದ್ದರು ಈ ವರ್ಷದ ರೆಕಾರ್ಡ್ಸ್ ಕೇಳಲು ಇತ್ತೀಚೆಗೆ?…ಅಂದರೆ ನನಗಿಂತಾ ಮುಂಚೆ??..ಅವರೇ ಈ ಕೆಲಸ ಮಾಡಿರುತ್ತಾರೆ”  ಎಂದು ಉದ್ರಿಕ್ತನಾಗಿ ದಬಾಯಿಸಿದೆ

ಅವನು ನಾನು ಹುಚ್ಚನೆ ಎಂಬಂತೆ ಮತ್ತೆ ಮುಖನೋಡಿದ.

” ಇದು ಗವರ್ಮೆಂಟ್ ಆಫೀಸ್ ಸಾಮಿ, ಯಾರು ಬೇಕಾದರೂ ಬರಬಹುದು, ಓಗಬಹುದು…” ಎನ್ನುತ್ತಾನೆ ಭಡವಾ.

” ನೀನು ಇರಲಿಲ್ಲವೆ ಹೋದಸಲ?… ಯಾರಾದ್ರೂ ಈ ಫೈಲ್ ಕೇಳಿದಾಗ.?.” ಎಂದೆ

” ಇಲ್ಲಾ ಸಾಮೀ…ನಾನು ಒಂದು ತಿಂಗಳು ಎಲ್ಟಿಸಿ ಓಗಿದ್ದೆ…ಆಗ ಟೆಂಪೊರರಿ ಸ್ಟಾಫ್ ಇದ್ದರು..ಯಾರ್ಯಾಕೆ ಕದಿಯುತ್ತಾರೆ ಬಿಡಿ ಸಾಮಿ?.. ಅದೇ ಹರಿದು ಹಾಳಾಗಿ ಹೋಗಿರತ್ತೆ..ತುಂಬಾ ಅಳೇದಲ್ವಾ!” ಎಂದ ಅಲಕ್ಷ್ಯದಿಂದ, ದೊಡ್ದ ಜ್ಞಾನಿಯಂತೆ..

“ಹೌದು, ಈ ಆಫೀಸಿನಲ್ಲಿರುವ ಹಳೆಯದನ್ನೆಲ್ಲಾ ಹರಿದು ಹಾಳುಮಾಡಬೇಕು, ನಿನ್ನನ್ನು ಮೊದಲುಗೊಂಡು!” ಎಂದು ಕುಪಿತನಾಗಿ ಅಲ್ಲೆ ಕಡತ ಬಿಸಾಕಿ ಹೊರಬಿದ್ದೆ. ಬಿರ್ರನೆ ಬರುವಾಗ ಒಬ್ಬ ಕೆಲಸದವಳು ನನಗೆ ಏಕ್ದಂ ಡಿಕ್ಕಿ ಹೊಡೆದು ತನ್ನ ಕೈಲಿದ್ದ ಕಸಪೊರಕೆ ಕೆಳಗೆತ್ತಿ ಹಾಕಿದಳು, “ಸಾರಿ ಸರ್” ಎಂದು ಗಾಬರಿಯಾಗಿ ಒಳಗೋಡಿದಳು..ಪೊರಕೆ ಸೇವೆಯೂ ಆಯ್ತು ನನಗೆ!

ಎದುರಿನ ಮಲೆಯಾಳಿ ಡಬ್ಬಾ ಅಂಗಡಿಯಲ್ಲಿ ಕುಳಿತು ಒಂದು ಕಾಫಿ ಕೇಳಿದೆ..

” ಕಾಫಿ ಆಗೋಯ್ತು, ಟೀ ಕೊಡ್ಲಾ?”ಅಂದ..

ಇವತ್ತು ನನ್ನ ಒಳ್ಳೆ ದಿನವಲ್ಲ, ಕಾಫಿಗೂ ಗತಿಯಿಲ್ಲಾ!

“ಸರಿ ಕೊಡು..”ಎಂದೆ

ಮಲೆಯಾಳಿ ಚೆನ್ನಾಗಿಯೇ ಚಹಾ ಮಾಡಿದ್ದ.

“ಯಾಕೆ ನೀವು ಬಂದ ಕೆಲ್ಸ ಆಗಲಿಲ್ವಾ?, ಈ ಆಫೀಸೇ ಇಷ್ಟು..ಎಷ್ಟೋ ಜನಕ್ಕೆ ….”ಅವನು ಏನೋ ಹೇಳುತ್ತಲೆ ಇದ್ದ. ಆದರೆ ನನ್ನ ಗಮನ ಮಾತ್ರ ಮೂಲೆಯಲ್ಲಿ ಮರೆಯಾಗಿ ನನಗಾಗಿ ಕಾಯುತಿರುವ ಟಾಟಾನ್ಯಾನೋ ಕಾರಿನ ಮೇಲಿತ್ತು.

ಅದಕ್ಕೆ ತಕ್ಕಂತೆ ನನ್ನ ಮೊಬೈಲ್ ರಿಂಗಾಯಿತು..ಲೂಸಿಯಾ!

” ವಿಜಯ್, ಆ ನ್ಯಾನೋಕಾರ್ ನಂಬರ್ ಕೊಟ್ಟಿದ್ದರಲ್ಲಾ? ಅದರ ವಿಷಯಕ್ಕೆ ಅಂತಾ…” ಎಂದಳು. ಬರೇ ವಿಜಯ್ ಅಂದಿದ್ದಳು, ’ಮಿಸ್ಟರ್ ’ ಇಲ್ಲ..ಶುಭ ಲಕ್ಷಣ!

” ಅದ್ಯಾರು ಎಂದು ನಾನು ಹೇಳಿದರೆ ನೀವು ನಂಬುವುದೇ ಇಲ್ಲಾ..”ಎಂದು ರಾಗ ತೆಗೆದಳು

“ಲೂಸಿಯಾ, ನೀವೀಗ ನಾನೇ ಐಶ್ವರ್ಯಾರೈ ಅಂದರೂ ನಾನು ನಂಬುವ ಸ್ಥಿತಿಯಲ್ಲಿದ್ದೇನೆ..ಬಹಳ ದುರದೃಷ್ಟಕರ ದಿನಾ ಇವತ್ತು..ಪ್ಲೀಸ್ ಬೇಗ ಹೇಳಿ!” ಎಂದೆ ಅವಸರಪಡುತ್ತಾ.

” ಅವನ ಹೆಸರು ಜನಾರ್ಧನ್ ಎಂದು..ಕಾರ್ ಮೆಕ್ಯಾನಿಕ್ ಆಗಿದ್ದ, ’ಜಾನಿ’ ಅಂತಾರೆ ಇಲ್ಲಿ ಎಲ್ಲರೂ ಅವನ್ನ.., ಈಗಲೂ ಪಾರ್ಟ್’ಟೈಮ್  ಕಾರ್ ರಿಪೇರಿ ಮಾಡ್ತಿರ್ತಾನೆ ..ಆ ನ್ಯಾನೋ ಕಾರ್ ಅವನ ಹೆಸರಲ್ಲೇ ರಿಜಿಸ್ಟರ್ ಆಗಿದೆ..ಆದರೆ ಅವನು ಆಫೀಸ್ ಇಟ್ಟಿರುವುದು, ‘ಜಾನಿ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿ’ ಅನ್ನೋ ಹೆಸರಿನಲ್ಲಿ…ಆ ಅಡ್ರೆಸ್ ’ಯೆಲ್ಲೋ ಪೇಜಸ್’ನಲ್ಲಿದೆ ಕೂಡಾ” ಎಂದು ಉತ್ಸಾಹದಿಂದ ವಿವರಿಸಿದಳು ಲೂಸಿಯಾ.

ನನಗೆ ಅಂತಾ ಸಂದರ್ಭದಲ್ಲೂ ಜೋರಾಗಿ ನಗೆ ಬಂತು.

“ಏಕೆ, ಏನೂ.. ?” ಅಂದಳು ಲೂಸಿಯಾ ಅಸಮಾಧಾನದಿಂದ, ತನ್ನ ಬಗ್ಗೆ ನಗುತ್ತಿದ್ದೇನೆಂದು ತಿಳಿದು.

“ನೀವು ಹೇಳಿದ್ದು ನಿಜವಾದರೆ ಅವನಿಗೆ ಪ್ರಪಂಚದ ಅತಿ ಕೆಟ್ಟ ಪತ್ತೇದಾರ ಎನ್ನಬೇಕು.. ಅವನಿಗೆ ಗೂಢಚಾರಿಕೆ ಕೆಲಸದ ಎರಡಕ್ಷರವೂ ಗೊತ್ತಿಲ್ಲ, ದಡ್ಡಾ!” ಎಂದುತ್ತರಿಸಿದೆ. ಸರಿ, ಅವಳು ಜಾನಿಯ ಅಡ್ರೆಸ್ ಕೊಟ್ಟಳು, ಬರೆದುಕೊಂಡೆ.

“ಇನ್ನೂ ನಿಮ್ಮಿಷ್ಟ, ನನಗೆ ಕೋರ್ಟ್ ಇದೆ, ಟೈಮಾಯ್ತು…ಬರ್ತೀನಿ..” ಅಂದಳು

“ಸಾಯಂಕಾಲ ಅಥವಾ ರಾತ್ರಿ ಊಟಕ್ಕೆ ಸಿಗುತ್ತೀರಾ?” ಎಂದೆ..ಆಶಾಜೀವಿಗಳಲ್ಲಿ ನಾನು ಮೊದಲಿಗ

” ನೋಡೋಣಾ, ಫೋನ್ಮಾಡ್ತೀನಿ, ಬೈ..”ಎಂದಿಟ್ಟಳು

ನಾನೀಗ ನನ್ನ ಟಾಟಾನ್ಯಾನೋ ಮಿತ್ರನಿಗೆ ಆಟಆ ಡಿಸೋಣವೆಂದಿದ್ದೆ..ಅವನ ಅಡ್ರೆಸ್ ನನ್ನ ಕೈಯಲ್ಲಿತ್ತು..ಅವನ ಆಫೀಸ್ ಪೋಲಿಸ್ ಕಮೀಶನರ್ ಆಫೀಸಿನ ಎದುರಿನ ಬಿಲ್ಡಿಂಗ್ ಅಂತೆ..ಮೊದಲನೇ ಮಹಡಿ..

ವಾರೆವ್ವಾ, ವಿಪರ್ಯಾಸವೇ!

ನಾನು ಹೊಂಡಾಕಾರ್ ಹತ್ತಿ ನೇರವಾಗಿ ಅವನ ಆಫೀಸಿಗೆ ಹೋಗಿ ಆ ಬಿಲ್ಡಿಂಗಿನ ಮುಂದೆನಿಂತೆ. ಇಳಿದು ಏನೂ ತಿಳಿಯದವನಂತೆ ಅವನ ಮೊದಲನೆ ಮಹಡಿಯ ಆಫೀಸಿಗೆ ನಡೆಯಹತ್ತಿದೆ..ಹಿಂದೆ ಗಾಬರಿಯಾಗಿ ಓಡೋಡಿಬರುತ್ತಿದ್ದ…ಕಂಗಾಲಾಗಿರಬೇಕು, ಖಂಡಿತಾ!  ಬೀದೀಲಿ ಹೋಗೋ ಮಾರಿ ಮನೆಗೆಬಂತಲ್ಲಾ? ಎಂದು.

” ಹೇ ಮಿಸ್ಟರ್ , ಏನು ಬೇಕಿತ್ತು?” ಎಂದು ಗಾಬರಿಯಾಗಿ ಕೇಳಿ, ಕೀಯಿಂದ ಡೋರ್ಲಾಕ್ ತೆಗೆದು ಸರ್ರನೆ ಒಳಹೋದ. ಅವನು ಬಾಗಿಲು ಮುಚ್ಚುವ ಮೊದಲು, ನನ್ನ ಕಾಲಿಟ್ಟು ನೂಕಿದೆ, ಥೊಪ್ಪನೆ ಟೇಬಲ್ ಹಿಂದಿನ ಚೇರಿನಲ್ಲಿ ಕುಳಿತ.

ನಾನೂ ಅವನ ಎದುರಿಹೋಗಿ ನಿಂತೆ..ಬರೇ ಟೆಲಿಫೋನ್ ಬೂತಿನಂತಾ ಆಫೀಸ್..ಒಂದೇ ವಿಸಿಟರ ಚೇರ್, ಗೋಡೆಯ ಮೇಲೆ ಫಾರಿನ್ ಮೇಕಿನ ಪೋರ್ಶೆ, ಲಾಮ್ಬೋರ್ಗಿನಿ ಕಾರ್’ಗಳ ಬಣ್ಣದ ವಾಲ್ಪೇಪರ್ಸ್ ಅಂಟಿದ್ದವು. ಯಾವುದೇ ಅಮೆಚೂರ್ ಮೆಕ್ಯಾನಿಕ್’ನ ಕನಸುಗಳಂತೆ…

” ನಿನ್ನ ಹೆಸರೇನು, ಯಾಕಿಲ್ಲಿಗೆ ಫಾಲೋ ಮಾಡ್ಕೊಂದು ಬಂದಿ?” ಅಂತಾ ಗದರಿದ.. ತಾನೇ ನನ್ನನ್ನು ಫಾಲೋ ಮಾಡಿಕೊಂಡು ಬಂದಿದ್ದನ್ನು ಕೂಡಾ ಮರೆತಿದ್ದ.

” ನಾನು ಕೇಳುವ ಪ್ರಶ್ನೆಗಳನ್ನೆಲ್ಲಾ ನೀನೇ ಉರುಹೊಡೆದಂತೆ ಕೇಳುತ್ತಿದ್ದೀಯಲ್ಲ ಜಾನಿ!” ಎಂದು ನನ್ನ ಕಂಕುಳ ಕೆಳಗಿನಿಂದ ಕೋಲ್ಟ್೦.೪೫ ರಿವಾಲ್ವರ್ ತೆಗೆದು ಅದನ್ನು ಕರ್ಛೀಫಿನಲ್ಲಿ ಒರೆಸತೊಡಗಿದೆ…

ಅದನ್ನು ಕಂಡು ಅವನ ಮುಖದಲ್ಲಿ ಭಯ, ಅಚ್ಚರಿ ಎರಡೂ ಒಟ್ಟಿಗೇ ಆಯಿತು.

” ನೋಡಿ, ಮಿಸ್ಟರ್ ವಿ..ವಿಜಯ್, ನೀವ್ಯಾರೋ ನನ..ನನಗೆ ಗೊತ್ತಿಲ್ಲ”ಎಂದು ತೊದಲಿಬಿಟ್ಟ.

ನಾನು ಪಿಸ್ತೂಲನ್ನು ಅವನತ್ತ ಲಘುವಾಗಿ ತಿರುಗಿಸಿದೆ.

“ಆದರೆ ವಿಜಯ್ ಎಂದು ನನ್ನ ಹೆಸರೇಗೆ ಗೊತ್ತು?..ಜಾನಿ, ನನಗೆ ಸಮಯ ಹಾಳುಮಾಡಲು ಮನಸ್ಸಿಲ್ಲಾ…ನಿನ್ನ ಜೀವವನ್ನು ಹಾಳು ಮಾಡಲೂ ಕೂಡಾ” ಎಂದು ಮೆತ್ತಗೆ ಅವನ ಹಣೆಗೆ ರಿವಾಲ್ವರ್ ನಳಿಕೆ ಹಿಡಿದೆ. ಅದರಲ್ಲಿ ಗುಂಡಿಲ್ಲ ಅನ್ನುವುದು ನನಗೆ ಮಾತ್ರ ಗೊತ್ತು.

“ಹೇಳ್ತೀನಿ…ಸ್ವಲ್ಪ ನೀರು ಕುಡೀತೀನಿ..ಬಿಡಿ” ಎಂದ. ಬೆದರಿ ಮುಖಬಿಳಿಚಿಕೊಂಡು ಗೋಡೆಯ ಸುಣ್ಣವನ್ನು ಹೋಲುತಿತ್ತು…ಕೋಲ್ಟ್೦.೪೫ ರಿವಾಲ್ವರ್ ಬಹಳ ಜನಗಳ ಮೇಲೆ ಇಂತಾ ಪ್ರಭಾವವನ್ನು ಬೀರುತ್ತದೆ.

ಅರ್ಧ ಬಾಟಲ್ ಮಿನರಲ್ ನೀರನ್ನು ಗಟಗಟಕುಡಿದ, ತಕ್ಷಣ ನೆತ್ತಿಹತ್ತಿತು. ಕೆಮ್ಮಹತ್ತಿದ..

ಪಾಪ, ಇವನಿಗೆ ಇಪ್ಪತ್ತೆರಡು ವರ್ಷ ವಯಸ್ಸಿರಬಹುದು, ಅನುಭವವಿಲ್ಲದವರು ಕ್ರೈಮ್ ಲೋಕಕ್ಕೆ ಬರಬಾರದು ನೋಡಿ.

ನಾನು ಎದುರಿಗೆ ಕೂತೆ. ರಿವಾಲ್ವರ್ ಅವನಿಂದ ಎರಡೇ ಅಡಿ ದೂರದಲ್ಲಿತ್ತು..

” ನೀವು ಪ್ರೈವೇಟ್ ಡಿಟೆಕ್ಟಿವ್, ಬೆಂಗಳೂರಿನಿಂದ ಬರುತ್ತಿದ್ದೇರೆಂದು ನನ್ನ ಗರ್ಲ್ಫ್ರೆಂಡ್ ಹೇಳಿದಳು..ಏನೋ ಮುಖ್ಯ ವಿಷಯ ಇರಬೇಕೆಂದು ಫಾಲೋ ಮಾಡುತ್ತಿದ್ದೇನೆ, ನನಗೆ ಬಿಜಿನೆಸ್ ಕಮ್ಮಿ ನೋಡಿ!” ಎಂದ. ಅರ್ಧಸತ್ಯದಂತಿತ್ತು ಅವನ ಮಾತು.

“ಅವಳಿಗೆ ಹೇಗೆ ಗೊತ್ತು?”… ರಿವಾಲ್ವರ್ ಮೇಲೆ ಕೆಳಕ್ಕೆ ಆಡುತ್ತಿದೆ.

“ಲೂಸಿಯಾ ಲಾಯರ್ ಮೇಡಮ್ ಆಫೀಸಿನಲ್ಲಿ ಕಸಗುಡಿಸುತ್ತಾಳೆ ಅವಳು..ಮೇಡಮ್ ನಿಮ್ಮ ಬಗ್ಗೆ ಮಾತಾಡಿದ್ದು ಕೇಳಿಸಿಕೊಂಡಳು..ಹಿಂದೆ ಹೀಗೆಲ್ಲಾ ಹೇಳಿ ನನಗೆ ಸ್ವಲ್ಪ ಕೆಲಸ ತಂದುಕೊಟ್ಟಿದ್ದಾಳೆ… ಲಾಯರ್ ಕೆಲಸಕ್ಕೆ ಬಂದವರಿಗೆ ನನ್ನ ಬಳಿಯೂ ಕೆಲಸವಿರತ್ತೆ ಒಮ್ಮೊಮ್ಮೆ…..ನಿಮ್ಮ ಲಾಡ್ಜ್ ಪತ್ತೆ ಹಚ್ಚಿ ನಾನೇ ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ… ನನಗೆ ಗೊತ್ತಿಲ್ಲದು ಈ ಊರಿನಲ್ಲಿ ಏನಪ್ಪ ಕೇಸ್ ಇರಬಹುದು ಸಿಟಿ ಪತ್ತೇದಾರರಿಗೆ ಎಂದು ಕುತೂಹಲ…ಆದರೆ ನೀವು ನಾನು ಫಾಲೋ ಮಾಡುವುದನ್ನು ಹಿಡಿದುಬಿಟ್ರಲ್ಲಾ..ಬಹಳ ಜಾಣರಿರಬೇಕು!” ಎಂದು ಹುಬ್ಬೇರಿಸಿದ, ಇದೊಂದು ದೊಡ್ಡ ಸಾಧನೆಯೆಂಬಂತೆ.

ನಾನು ಗನ್ ಮುಚ್ಚಿಟ್ಟು ನಕ್ಕೆ. “ನಿನ್ನನ್ನೆ?..ಒಬ್ಬ ಎಸ್ಎಸ್ಎಲ್ಸಿ ಓದುವ ಹುಡುಗ ಕೂಡಾ ಕಂಡುಹಿಡಿಯಬಹುದು..”

ಅವನ ಮುಖ ಪೆಚ್ಚಾಯ್ತು..

“ಅಷ್ಟು ಪೆದ್ದನೇ ನಾನು?..ಏನೋ, ನಾನು ಚಿಕ್ಕ ಊರಿನವನು ಸಾರ್, ಎಲ್ಲಿಗೆ ಹೋಗಲಿ?” ಎಂದ ದಯಾ ಭಿಕ್ಷೆಬೇಡುವಂತೆ.

“ಇನ್ನು ಮೇಲೆ ನನ್ನ ಹಿಂದೆ ಬರಬೇಡಾ, ಅಷ್ಟೆ!… ಈ ಊರಲ್ಲ,ಈ ಲೋಕವನ್ನೇ ಬಿಡಬೇಕಾಗುತ್ತದೆ…”ಎಂದು ಎಚ್ಚರಿಸಿ ಅಲ್ಲಿಂದ ಹೊರಬಿದ್ದೆ.ಅವನಿಂದ ಇನ್ನು ಹೆಚ್ಚು ತೊಂದರೆಯಾಗದು ಎಂದು ವಿಶ್ವಾಸವಿತ್ತು.

ಹೊರಗೆ ಬಂದು ಇನ್ನೊಂದು ಡಬ್ಬಾ ಅಂಗಡಿಯಲ್ಲಿ ಬ್ರೆಡ್ ಸ್ಯಾಂಡ್ವಿಚ್ ತಿಂದು ಕಾಫಿ ಕುಡಿದೆ,…ಆದರೇಕೋ ಇನ್ನೂ ಮನಸ್ಸಿಗೆ ಈ ತನಿಖೆಯಿಂದ ಅಷ್ಟು ಸಮಾಧಾನವಾಗಲಿಲ್ಲಾ..ಇಲ್ಲೇನೋ ಮಿಸ್ ಹೊಡೆಯುತ್ತಿದೆ ಅನಿಸಿತು.

ಅಲ್ಲೇ ಹೊರಗಡೆ ಕಾಯೋಣವೆನಿಸಿತು..ಬಿಲ್ಡಿಂಗ್ ಬಾಗಿಲಿಗೆ ಬೆನ್ನುಮಾಡಿ ಪೇಪರ್ ಓದುತ್ತಾ ಕಾದೆ. ಸ್ವಲ್ಪ ಹೊತ್ತಿನ ನಂತರ ಒಬ್ಬ ಕಪ್ಪು ಯುವತಿ ಒಳಹೋದಳು, ಮತ್ತೈದು ನಿಮಿಶದಲ್ಲಿ ಜಾನಿ ಜತೆ ಮೆಟ್ಟಲಿಳಿದು ಹೊರಗೆ ಬರುತ್ತಿದ್ದಳು..ಅವನ ಗರ್ಲ್ಫ್ರೆಂಡ್!..ಇವಳನ್ನು ನಾನು ಲೂಸಿಯಾ ಆಫೀಸಿನಲ್ಲಿದ್ದಾಗ ಗಮನಿಸಬೇಕಾಗಿತ್ತು, ಆದರೆ ಅವಳು ಬೇಕಂತಲೇ ಕಾಣಿಸಿರಲಿಲ್ಲವೋ ಅಥವಾ ನಾನು ಬರೇ ಲೂಸಿಯಾಳನ್ನೇ ನೋಡುತ್ತಿದ್ದೆನೋ ಗೊತ್ತಿಲ್ಲ.., ಆದರೆ ಈ ಊರಿನಲ್ಲೂ ಕೆಲವರು ನನಗಿಂತಾ ಜಾಣರಿದ್ದಾರೆಯೆ? ಎಂದು ಹೊಟ್ಟೆ ಉರಿಯಿತು

” ನಿನಗೆ ಎಷ್ಟು ಹೇಳಿಕೊಟ್ರೂ ಬುದ್ದಿ ಬರಲ್ಲಾ ಜಾನಿ..ಅದೇನು ಉದ್ದಾರ ಆಗುತ್ತೀಯೋ?” ಎಂದು ಅವಳು ಅವನ ಮೇಲೆ ಕೋಪಿಸಿಕೊಂಡು ನುಡಿಯುತ್ತಿದ್ದಂತೆ, ಇಬ್ಬರೂ ನನ್ನ ಪಕ್ಕ ಹಾದುಹೋದರು.ನನ್ನ ಬಗ್ಗೆಯೇ ಮಾತಾಡಿಕೊಳ್ಳುತ್ತಿರಬೇಕು.

” ಸಾರಿ ಕಣೆ!..ನಿನ್ನನ್ನು ಇವಾಗ ಊರಾಚೆ ಇರುವ ಮೀನಿನ ಹೋಟೆಲ್’ಗೆ ಊಟಕ್ಕೆ ಕರೆದು ಕೊಂಡೋಗುತ್ತೀನಿ ಬಾ” ಎಂದು ಪುಸಲಾಯಿಸಿ ಕಾರ್ ಬಳಿ ನಡೆದ…ನನ್ನನ್ನು ಮತ್ತೆ ಗಮನಿಸಲೇ ಇಲ್ಲ!.ಈ ಜಾನಿಗೆ ಪತ್ತೇದಾರಿ ವಿದ್ಯೆ ಹೇಳಿಕೊಡಲು ಯಾರಿಗೂ ಸಾಧ್ಯವಿಲ್ಲ, ಎನಿಸಿತು.

” ಅದೊಂದೆ ನಿನಗೆ ಬಂದ ಒಳ್ಳೆ ಐಡಿಯಾ ಅಂದರೆ !” ಎಂದು ಉತ್ತರಿಸುತ್ತ ಆ ಯುವತಿ ಅವನ ಹಳದಿ ನ್ಯಾನೋ ಹತ್ತಿದಳು. ಅವನ ಕಾರ್ ಅಲ್ಲಿಂದ ಹೊರಟ ಮೇಲೆ ನಾನೂ ಹೊರಟೆ.

(ಮುಂದುವರೆಯುವುದು…)

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Related Post