X

ವಿಟ್ಲಪಿಂಡಿ – ಪೊಡವಿಗೊಡೆಯನ ನಾಡಿಗೊಂದು ಹಗಲುವೇಷ

‘ವಿಟ್ಲಪಿಂಡಿ’, ಉಡುಪಿಯ ಹಾಗೂ ಅದರ ಆಸುಪಾಸಿನ ಜಿಲ್ಲೆಯ ಬಹುತೇಕ ಜನರಿಗೆ ಪರಿಚಿತ ಶಬ್ದ. ಶ್ರೀಕೃಷ್ಣ ಜನ್ಮಾಷ್ಠಮಿಯ ಮರುದಿನ ಉಡುಪಿಯ ಅಷ್ಠಮಠಗಳನ್ನೊಳಗೊಂಡ ರಥಬೀದಿಯಲ್ಲಿ ಆಚರಣೆಯಾಗುವ ಶ್ರೀಕೃಷ್ಣ ಲೀಲೋತ್ಸವ.

ಈ ವರ್ಷದ ವಿಟ್ಲಪಿಂಡಿಗೆ ಸಾಕ್ಷಿಯಾಗಲು ಮಧ್ಯಾಹ್ನದ ಸಮಯ ಉಡುಪಿಯ ಕಡೆ ಬಸ್ ಏರಿದೆ. ಸ್ವಲ್ಪ ಹೊತ್ತಿನಲ್ಲೇ ವಿಟ್ಲಪಿಂಡಿಯ ಮೊದಲನೇ ಲೀಲೆಯ ದರ್ಶನವಾಯಿತು. ಹೇಗೆ ಅಂತೀರಾ? ಸ್ವಲ್ಪ ಹೊತ್ತಿನಲ್ಲಿ ಬಸ್ಸಿಗೆ ಒಬ್ಬ ರಾಕ್ಷಸನ ಆಗಮನವಾಯಿತು. ಎಲ್ಲರ ಕೈಲೂ ಟಿಕೆಟ್-ಟಿಕೆಟ್ ಎಂದು ಹಣ ವಸೂಲಿ ಮಾಡುತ್ತಿದ್ದ ಬಸ್ ಕಂಡಕ್ಡರ್ ಬಳಿಯೇ ಹಣ ವಸೂಲಿಗೆ ತೊಡಗಿದ ಆ ರಾಕ್ಷಸ. ಗಾಬರಿಯಾಗಬೇಡಿ, ಆತ ವಿಟ್ಲಪಿಂಡಿಯ ಪ್ರಯುಕ್ತ ಹುಟ್ಟಿಕೊಂಡ ವೇಷಧಾರಿ ರಾಕ್ಷಸ ಅಷ್ಟೇ. ನಮ್ಮ ಕಂಡಕ್ಟರ್’ಗೆ ಇದೇನು ಹೊಸತೇ? ಎಷ್ಟೋ ವೇಷಗಳ ಆಟ ನೋಡಿದವ ಆತ. ಕೊನೆಗೂ ಹೇಗೋ ಆ ರಾಕ್ಷಸನ ವೇಷವನ್ನು ಬಗೆದು ಹಣ ವಸೂಲಿ ಮಾಡಿಯೇ ಬಿಟ್ಟ.

ಹೀಗೆ ಉಡುಪಿಯಲ್ಲಿ ಕಾಲಿಡುವ ಮುನ್ನವೇ ಬಣ್ಣದ ವೇಷಗಳು ಕಣ್ತುಂಬಲಾರಂಭಿಸಿದ್ದವು. ವಿಟ್ಲಪಿಂಡಿ ಅಂದರೆ ಹಾಗೆಯೇ. ಅದೊಂದು ಬಣ್ಣ ಬಳಿದುಕೊಂಡ ಹಗಲುವೇಷಗಳ ಜಾತ್ರೆ. ಇಡೀ ಊರಿಗೆ ಊರೇ ವೇಷ ಹಾಕಿಕೊಂಡಂತೆ ಅನಿಸುತ್ತದೆ‌. ಅಲ್ಲೊಂದಿಷ್ಟು ಮಕ್ಕಳು ಮುಖಕ್ಕೊಂದಿಷ್ಟು ಬಣ್ಣ ಬಳಿದುಕೊಂಡು ಕೈಯಲ್ಲೊಂದು ಕೊಳಲು ಹಿಡಿದು ಓಡಾಡುತ್ತಿದ್ದರೆ,ಇನ್ನೊಂದು ಕಡೆ ಒಂದು ಹತ್ತು ಕೈಗಳ ದುರ್ಗಾಮಾತೆ ಕ್ಯಾಮರಾ ಕಣ್ಣುಗಳ ಸೆರೆಯಲ್ಲಿ ವಿಧವಿಧವಾಗಿ ಅರಳುತ್ತಿರುತ್ತಾಳೆ‌. ಮತ್ತೊಂದು ಕಡೆ ಜನಸಾಗರದ ನಡುವೆ ತಲೆಗೆರಡು ಕೊಂಬಿರುವ ಮಹಿಷಾಸುರ ತನ್ನೆಡೆಗೆ ಜನರನ್ನಾಕರ್ಷಿಸುತ್ತಾನೆ. ಮಹಿಷಾಸುರ ಪೌರಾಣಿಕ ಹಿನ್ನೆಲೆಯ ಅಸುರ, ಆ ಹೆಸರೇ ಭೀತಿ ಹುಟ್ಟಿಸುವಂಥದ್ದು. ಆದರೆ ವಿಟ್ಲಪಿಂಡಿಯಂದು ಉಡುಪಿಯ ರಥಬೀದಿಯಲ್ಲಿ ಕಾಣಿಸುವ ಈ ಮಹಿಷಾಸುರ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಾನೆ‌. ಮಹಿಷನ ತಲೆಯ ಮೇಲಿನ ಆ ಕೊಂಬುಗಳನ್ನು ಸೆರೆ ಹಿಡಿಯಲು ಕ್ಯಾಮರಾ ಕಣ್ಣುಗಳು ಕಾತರಿಸುತ್ತವೆ. ಅದೇ ವಿಟ್ಲಪಿಂಡಿಯ ವೈಶಿಷ್ಟ್ಯ. ಇನ್ನೆಲ್ಲೊ ಒಂದು ಮೂಲೆಯಲ್ಲಿ ಶಿವಾಜಿ ವೇಷಧಾರಿ ಕಾಣಿಸಿ ಅಚ್ಚರಿ ಮೂಡಿಸುತ್ತಾನೆ. ಒಂದೆರಡು ಆಧುನಿಕ ಶೈಲಿಯ ಭಯಾನಕ ವೇಷಗಳೂ ಈ ವರ್ಷ ಗೋಚರವಾದವು.

ವಿಟ್ಲಪಿಂಡಿ ಮೆರವಣಿಗೆಯ ಇನ್ನೊಂದು ಪ್ರಮುಖ ಆಕರ್ಷಣೆ ಚಿಲಿಪಿಲಿ ಗೊಂಬೆಗಳು. ಜನಸಾಗರದ ನಡುವೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಕುಣಿಯುವ ದೈತ್ಯದೇಹಿ ಬಣ್ಣದ ಗೊಂಬೆಗಳಿಗೆ ಪ್ರತಿಬಾರಿಯೂ ನಾನು ಮನ ಸೋಲುತ್ತೇನೆ. ಮೆರವಣಿಗೆಗೆ ರಂಗು ತರುವುದೇ ಈ ಬೊಂಬೆಗಳ‌ ಸಾಲು. ಆ ಪೊಡವಿಗೊಡೆಯನೇ ಈ ಬೊಂಬೆಗಳ ಕುಣಿತ ಆನಂದಿಸುತ್ತಾ ಅವುಗಳ ಹಿಂದೆ ಬರುತ್ತಿಹನೇನೋ ಅನಿಸುತ್ತದೆ. ಪುಟ್ಟ ಮಕ್ಕಳಿಗಂತೂ ಎಲ್ಲಿಲ್ಲದ ಸಂತೋಷ ಆ ಬೊಂಬೆಗಳ ನೋಡಲು. ಆ ಸಾಲಿನ ಎದುರಲ್ಲೊಬ್ಬ ಹಾಸ್ಯಗಾರ; ಅವನು ಆಸುಪಾಸಿನ ಮಕ್ಕಳತ್ತ ನೋಡಿ ತನ್ನದೇ ಆದ ವಿಚಿತ್ರ ನಗುವನ್ನೊಮ್ಮೆ ಹೊರಸೂಸಿದರೆ ಮಕ್ಕಳಿಗೆ ಪ್ರಪಂಚವೇ ಮರೆತು ಹೋಗುತ್ತದೆ. ಆ ಜಗದ ಸೂತ್ರಧಾರನ ಕೈಯಲ್ಲಿ ಗೊಂಬೆಗಳು ನಾವು,ನಮ್ಮನ್ನು ಖುಷಿಪಡಿಸಲು ಬರುವ ಗೊಂಬೆಗಳು ಇವು.

ಇನ್ನು ವಿಟ್ಲಪಿಂಡಿ ಎಂದಾಕ್ಷಣ ನೆನಪಾಗುವುದು’ಪಿಲಿವೇಷ’. ‘ಪಿಲಿವೇಷ’ಗಳಿಲ್ಲದ ವಿಟ್ಲಪಿಂಡಿ ಅಪೂರ್ಣ. ‘ಪಿಲಿವೇಷ’ ಎಂದರೆ ನೆನಪಾಗುವುದು ಆ ವಿಶಿಷ್ಟ ಕುಣಿತ, ಗತ್ತು. ಪಿಲಿವೇಷದ ಆ ಸದ್ದು ಪ್ರತಿಯೊಬ್ಬರೂ ಅದನ್ನರಸಿ ಹೋಗುವಂತೆ ಮಾಡುವಷ್ಟರ ಮಟ್ಟಿಗೆ ಚಿರಪರಿಚಿತ ಹಾಗೂ ವಿಭಿನ್ನ. ಕುಣಿತದ ಭಂಗಿಗಳನ್ನು ನೋಡುತ್ತಿದ್ದರಂತೂ ಎಲ್ಲರಲ್ಲೂ ‘ಹೇ ಒಂದ್ ಸ್ಟೆಪ್ ಹಾಕುವ ಮಾರ್ರೆ’ಅನ್ನಿಸದಿರದು. ಇದೇ ಕಾರಣದಿಂದಲೋ ಏನೋ ವೇಷ ಇಲ್ಲದೆಯೂ ಕುಣಿಯುತ್ತಿದ್ದ ಒಂದಷ್ಟು ಜನರ ಗುಂಪುಗಳೂ ಕಂಡು ಬಂದವು. ಈ ವೇಷಧಾರಿಗಳ ನಡುವೆ ಈ ಬಾರಿ ಅತಿಯಾಗಿ ನನ್ನನ್ನು ಆಕರ್ಷಿಸಿದ್ದು ಪುಟ್ಡ ಪುಟ್ಟ ಪಿಲಿಗಳು. ಪುಟಾಣಿ ಮಕ್ಕಳು ಹಾಕಿದ್ದ ಪಿಲಿವೇಷ ಜನರ ಮನಸೂರೆಗೊಂಡಿತ್ತು. ಅವರ ಕುಣಿತ ಹಾಗೂ ಹಾವಭಾವಗಳೂ ಕೂಡ “ವಾವ್…!!!” ಎಂದು ಉದ್ಗರಿಸುವಂತೆ ಮಾಡಿತ್ತು. ಆ ಮಕ್ಕಳಲ್ಲೂ ಪುಟಾಣಿಗಳ ಪುಟಾಣಿ ಪಿಲಿ ಒಂದಿತ್ತು‌. ನಾನು ಇದುವರೆಗೂ ಅಷ್ಟು ಮುದ್ದಾದ’ಪಿಲಿಮರಿ’ಯನ್ನ ನೋಡಿರಲಿಲ್ಲ. ಬಾಯಲ್ಲಿ ಬೆರಳಿಟ್ಟು ಗೊಂಬೆಯಂತೆ ಕೂತು ಮೆರವಣಿಗೆ ಹೊರಟಿದ್ದ ಆ ಪುಟಾಣಿಗೆ  ಉಡುಪಿಯ ರಥಬೀದಿಯ ಮೂಲೆಮೂಲೆಯಲ್ಲಿ ಜನ ತುದಿಗಾಲಲ್ಲಿ ನಿಂತು ತನ್ನನ್ನು ನೋಡುತ್ತಿದ್ದಾರೆ ಎಂಬ ಪರಿವೆಯೇ ಇರಲಿಲ್ಲ. ಒಂದು ಕ್ಷಣಕ್ಕೆ, ಪುಟ್ಟ ಮಕ್ಕಳು ಕೃಷ್ಣನ ವೇಷ ಹಾಕುವುದನ್ನು ನೋಡಿದ್ದೇವೆ. ಆದರೆ ಕೃಷ್ಣ ಒಂದು ವೇಳೆ ‘ಪಿಲಿವೇಷ’ ಹಾಕಿದ್ದರೆ ಆ ಪುಟಾಣಿಯಂತೆ ಇರುತ್ತಿದ್ದನೇನೋ ಅನ್ನಿಸಿತು ನನಗೆ. ಆ‌ ಪುಟಾಣಿ ಪಿಲಿಯ ಫೋಟೋ ಕ್ಲಿಕ್ಕಿಸಲು ಇಡೀ ಉಡುಪಿಯೇ ಕ್ಯಾಮರಾಗಳನ್ನೋ ಮೊಬೈಲ್ ಫೋನ್ಗಳನ್ನೋ ಹಿಡಿದು ನಿಂತಂತಿತ್ತು. ನಾನು ಕೂಡ ಅವರಲ್ಲೊಬ್ಬನಾಗಿದ್ದೆ‌. ಆ ಪುಟಾಣಿಯ ಮನೆಯವರು ಒಂದುವೇಳೆ ಈ ಲೇಖನ ಓದಿದರೆ ಅವರಿಗೆ ನಾನು ಹೇಳುವುದಿಷ್ಟೇ “ಒಂದು ದೃಷ್ಟಿ ತೆಗಿರಿ ಮಗುಗೆ, ನನ್ನ ದೃಷ್ಟಿಯೇ ಆಗಿದೆ”.

ವಿಟ್ಲಪಿಂಡಿ ಎಂದಮೇಲೆ ಮೊಸರು ಕುಡಿಕೆ ಒಡೆಯದಿದ್ದರೆ ಆದೀತೇ? ಖಂಡಿತ ಇಲ್ಲ. ರಥಬೀದಿಯ ಸುತ್ತ ಕಟ್ಟಿರುವ ಚಿಕ್ಕ ಚಿಕ್ಕ ಮಂಟಪಗಳಲ್ಲಿ ಮೊಸರು ಕುಡಿಕೆ ಕಟ್ಟಲಾಗುತ್ತದೆ. ಅದನ್ನು ನಂತರ ಕೋಲಿನ ಸಹಾಯದಿಂದ ಒಡೆದು ಮುಂದೆ ಸಾಗುವುದು ಪದ್ಧತಿ. ಒಡೆಯುವವರ ಕೋಲಿಗೆ ನಿಲುಕದಂತೆ ರಾಟೆಯ ಸಹಾಯದಿಂದ ಮಡಕೆಯನ್ನು ಮೇಲೆ ಕೆಳಗೆ ಆಡಿಸುವುದನ್ನ ನೋಡುವುದೇ ಚಂದ. ಕೊನೆಗೂ ಮಡಕೆಗೆ ಕೋಲು ತಾಗಿ ಮಡಕೆ ಒಡೆದು ಮೊಸರು ಹೊರಗೆ ಚಿಮ್ಮುವ ಆ ಕ್ಷಣ ರೋಮಾಂಚಕ. ಕೆಲವು ಮಡಕೆಗಳಿಂದ ಬಣ್ಣದ ಓಕುಳಿ ಚಿಮ್ಮುವುದೂ ಉಂಟು. ಆ ಕ್ಷಣವನ್ನು ಸೆರೆಹಿಡಿದ ಕ್ಯಾಮರಾ ಕಣ್ಣುಗಳಿಗೆ ಏನೋ ಒಂದು ಹೆಮ್ಮೆ. ಅದೇಕೋ, ಎಷ್ಟು ಬಾರಿ ನೋಡಿದರೂ ಆ ಕ್ಷಣದ ಆನಂದ ಮಾತ್ರ ಪ್ರತಿ ಬಾರಿಯೂ ನವೀನ ಅನುಭವದಂತೆ ಭಾಸವಾಗುತ್ತದೆ.

ಈ ಎಲ್ಲ ಲೀಲೆಗಳನ್ನು, ವೇಷಗಳನ್ನು ಕಾಣುತ್ತಾ ಸರ್ವಾಲಂಕೃತ ರಥದಲ್ಲಿ ಕುಳಿತು ರಥಬೀದಿಯ ಸುತ್ತ ಸುತ್ತಿ ಸಾವಿರಗಟ್ಟಲೆ ಭಕ್ತರಿಗೆ ದರ್ಷನ ಕೊಡುವ ಉಡುಪಿಯ ನಮ್ಮ ಕಡಗೋಲು ಕೃಷ್ಣ ಮತ್ತೆ ಮತ್ತೆ ಆಕರ್ಷಿಸುತ್ತಾನೆ. ಮತ್ತೊಮ್ಮೆ ವಿಟ್ಲಪಿಂಡಿಗೆ ಬರಬೇಕು ಎಂಬ ಸಣ್ಣದೊಂದು ಆಸೆ ಆಬಾಲವೃದ್ಧರಾದಿಯಾಗಿ ನೆರೆದ ಪ್ರತಿಯೊಬ್ಬರಲ್ಲೂ ಹುಟ್ಟದೇ ಇರದು. ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ವೀಕ್ಷಿಸಿದವರಿಗೆ, ಮುಂದಿನ ಬಾರಿಯಾದರೂ ಉಡುಪಿಗೆ ಬಂದು ವೀಕ್ಷಿಸಬೇಕು ಅನಿಸದಿರದು. ಪ್ರತಿಯೊಬ್ಬ ಛಾಯಾಗ್ರಾಹಕನಿಗೂ ಶ್ರೀಕೃಷ್ಣನ ಮಂಗಳ ರೂಪವನ್ನ, ಅಲ್ಲಿಯ ಹಗಲುವೇಷಗಳ ಬಣ್ಣವನ್ನ, ಆ ಪುಟಾಣಿ ಹುಲಿಯ ಕಣ್ಣುಗಳನ್ನ ಮತ್ತೊಮ್ಮೆ ಸೆರೆ ಹಿಡಿಯಬೇಕೆಂಬ ಆಸೆ ಮೂಡದಿರದು. ನನ್ನಂತಹ ಬರೆಯುವ ಹುಚ್ಚಿರುವವರಿಗೆ ಮತ್ತೊಮ್ಮೆ ಇನ್ನೊಂದೇ ರೀತಿಯಲ್ಲಿ ಇನ್ನಷ್ಟು ವೇಷಗಳ ಸಹಿತ ವಿಟ್ಲಪಿಂಡಿಯನ್ನು ಕಣ್ತುಂಬಿಕೊಂಡು ಅದನ್ನು ನೀಲಿಮಳೆಯಾಗಿ ಹಾಳೆಗಿಳಿಸುವ ಆಸೆ ಆಗದೇ ಇರದು.

ಪುನಃ ಪುನಃ ಕಾಡುವ ಕೃಷ್ಣನ ನಗು, ಅವನ ಲೀಲೆಗಳು, ವಿಟ್ಲಪಿಂಡಿ ಎಂಬ ಉಡುಪಿಯಲ್ಲಾಚರಿಸುವ ಪೊಡವಿಗೊಡೆಯನ ಜನ್ಮೋತ್ಸವದ ಸಂಭ್ರಮ ಎಲ್ಲವೂ ಈ ಸುಂದರ ಬದುಕಿನ ಒಂದು ಭಾಗ. ಇವೆಲ್ಲವನ್ನು ಮನಸಿನ ಪುಟಗಳಲ್ಲಿ ನೆನಪಿನ ಛಾಯಾಚಿತ್ರ ವಾಗಿ ಅಚ್ಚೊತ್ತಿ ಅವುಗಳ ಮೆಲುಕಿನಲ್ಲಿ ಕರ್ತವ್ಯಗಳ ನಿರ್ವಹಿಸುತ್ತಾ,ಮತ್ತೊಮ್ಮೆ ಮುಂದಿನ ವರ್ಷ ಈ ಪೊಡವಿಗೊಡೆಯನ ನಾಡು ತೊಡುವ ಹಗಲುವೇಷಕ್ಕಾಗಿ ಕಾತರಿಸೋಣ.

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post